ಸಮಸ್ಯೆಗಳು - ಸಲಹೆಗಳು - ಮನವಿ (ಭಾಗ 1)

ಶಿಕ್ಷಣ ಸಂಘಟನೆಗಳು - ಶಿಕ್ಷಕರು - ಪೋಷಕರು - ಸಾಮಾಜಿಕ ಕಾರ್ಯಕರ್ತರು - ಚಿಂತಕರು - ಶಿಕ್ಷಣ ತಜ್ಞರು - ಶಿಕ್ಷಣ ಇಲಾಖೆಯವರು ಕಡ್ಡಾಯವಾಗಿ ಓದಬೇಕು.
ಮಾನ್ಯ ಮುಖ್ಯಮಂತ್ರಿಗಳು,
ಮಾನ್ಯ ಶಿಕ್ಷಣ ಸಚಿವರು,
ಮಾನ್ಯ ಮುಖ್ಯ ಕಾರ್ಯದರ್ಶಿಗಳು,
ಮಾನ್ಯ ಶಿಕ್ಷಣ ಇಲಾಖೆ ಆಯುಕ್ತರು
ಮತ್ತು ಶಿಕ್ಷಣ ಕ್ಷೇತ್ರದ
ಸಂಬಂಧಪಟ್ಟವರು.
( ಇವರಿಗೆ ದಯವಿಟ್ಟು ತಲುಪಿಸಿ )
ಚುನಾವಣೆ ಮತ್ತು ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಕಡ್ಡಾಯವಾಗಿ ಉಪಯೋಗಿಸಿಕೊಳ್ಳಬೇಕು ಏಕೆಂದರೆ ಅವರಿದ್ದಲ್ಲಿ ಹೆಚ್ಚು ನಿಖರತೆ ಇರುತ್ತದೆ ಎನ್ನುವ ಕಾರಣದಿಂದ ಅವರಿಗೆ ಈ ವಿಷಯದಲ್ಲಿ ಯಾವುದೇ ವಿನಾಯಿತಿ ನೀಡಬಾರದು ಎಂದು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವಾಗ ಶಿಕ್ಷಕರ ಸಮಸ್ಯೆಗಳ ಕುರಿತು ಒಂದು ಟಿಪ್ಪಣಿ.
ರಾಜ್ಯದ ವಿವಿಧ ಭಾಗಗಳ ನನ್ನ ಕೆಲವು ಆತ್ಮೀಯ ಶಿಕ್ಷಕರುಗಳೊಂದಿಗೆ ಖಾಸಗಿಯಾಗಿ ಮಾತನಾಡಿದ ನಂತರ ಅವರುಗಳು ನೀಡಿದ ಕೆಲವು ಸಲಹೆಗಳನ್ನು ಕ್ರೋಢೀಕರಿಸಿ ಈ ಸಮಸ್ಯೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದು ಕೆಲವು ಸಲಹೆಗಳನ್ನು ಸಹ ಒಳಗೊಂಡಿದೆ. ದಯವಿಟ್ಟು ಈ ಬಗ್ಗೆ ಗಂಭೀರವಾಗಿ ಯೋಚಿಸಿ ಒಂದು ಅಧ್ಯಯನ ತಂಡ ರಚಿಸಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಸಮಾಜದ ಮತ್ತು ಆಧುನಿಕ ಮನುಷ್ಯನ ಅರಿವಿನ ಮೂಲವಾದ ಶಿಕ್ಷಣ ಹಳ್ಳ ಹಿಡಿಯುವುದು ಗ್ಯಾರಂಟಿ. ಆ ಮೂಲಕ ಇಡೀ ವ್ಯವಸ್ಥೆ ಕುಸಿಯುತ್ತದೆ. ಅರಾಜಕತೆ ಉಂಟಾಗುತ್ತದೆ. ದಯವಿಟ್ಟು ಆದಷ್ಟು ಬೇಗ ಈ ಬಗ್ಗೆ ಗಮನ ಹರಿಸಿ.
ಇಂದು ಶಿಕ್ಷಕರಿಗೆ ಪಾಠ ಮಾಡಲು ಸಮಯವೇ ಇಲ್ಲ. ಕಾರಣ ಹೊರಗಿನ ಮತ್ತು ಬಿಸಿಯೂಟದ ಹೊರೆಗಳು ಜಾಸ್ತಿಯಾಗಿವೆ. ಕೆಲಸ ಹೇಗಿದೆ ಎಂದು ಹೇಳಲು ಕೆಲವು ಉದಾಹರಣೆಗಳು ಹೀಗಿವೆ.
(ಕೆಲವು ಸಾಲುಗಳು ಶಿಕ್ಷಕರೇ ಬರೆದು ಕಳುಹಿಸಿದ್ದನ್ನು ಅವರ ನೋವು ಅರ್ಥವಾಗಲಿ ಎಂದು ಹಾಗೆಯೇ ಇಲ್ಲಿ ಬಳಸಿಕೊಂಡಿದ್ದೇನೇ. ಆಕ್ರೋಶದ ಭರದಲ್ಲಿ ಕೆಲವು ತಪ್ಪು ಅಭಿಪ್ರಾಯ ಇದ್ದರೆ ಸರಿಪಡಿಸಿಕೊಳ್ಳೋಣ...)
1) ಹಾಜರಿ - ಈಗ ಅದಕ್ಕೆ 5 ಪುಸ್ತಕಗಳು.
A) ಎಂದಿನಂತೆ ಮೊದಲಿನ ಹಾಗೆ ಸಾಮಾನ್ಯ ಹಾಜರಾತಿ.
B) ಪರಿಶಿಷ್ಟ ಜಾತಿ ಮತ್ತು ಪಂಗಡದ ಇತರ ಮಕ್ಕಳ ಲೆಕ್ಕ.
C) ಗಂಡು, ಹೆಣ್ಣು, ಒಟ್ಟು ಲೆಕ್ಕ.
D) ಬಿಸಿಯೂಟದ ನಂತರ ತಿಂದಿದ್ದೇವೆ ಎಂದು ಮಕ್ಕಳ ಸಹಿ ಇರುವ ಹಾಜರಿ
E) ಸರಕಾರದ ಮತ್ತು ಅಜೀಂ ಪ್ರೇಮ್ ಜಿ ಫೌಂಡೇಶನ್ ಅವರ 2 + 4 ದಿನದ ಮೊಟ್ಟೆ ಬಾಳೆಹಣ್ಣು ವಿತರಣಾ ವಹಿವಾಟು.
F) ಪ್ರತಿ ದಿನದ ಮೊಟ್ಟೆ, ಬಾಳೆಹಣ್ಣಿನ ಹಣದ ಲೆಕ್ಕಾಚಾರ. ಅದರಲ್ಲಿ ಸಿಪ್ಪೆ ಸುಲಿದ ಅಡುಗೆಯವರ ಹಣದ ಲೆಕ್ಕಾಚಾರ, ಸಾಗಾಣಿಕೆ ಲೆಕ್ಕಾಚಾರ, ಅಕ್ಕಿ, ಹಾಲಿನ ಪುಡಿ, ಸಾಯಿಶೂರ್ ಖರ್ಚಾದ ದಿನದ ಲೆಕ್ಕಗಳು ಜೊತೆಗೆ ಅಕ್ಕಿ, ಬೇಳೆ, ತರಕಾರಿ, ಸಾಮಾನು ಲೆಕ್ಕಗಳು, ಬಳಕೆ ಪೂರೈಕೆ ಲೆಕ್ಕ, ಗ್ಯಾಸ್ ಲೆಕ್ಕಾಚಾರ, ತಿಂಗಳಿಗೆ ಪೂರ್ತಿ ಒಂದು ದಿನ ತಿಂಗಳ ಮಾಹಿತಿ.
ಇದರ ಜೊತೆಗೆ ಮುಂದೆ ಬರಲಿರುವವರ ಮುಖ ಕೊಟ್ಟ ಹಾಜರಾತಿ ಪಟ್ಟಿ. ಇವುಗಳ ಜೊತೆ ಪಾಠ ಟಿಪ್ಪಣಿ, FLN ತರಗತಿ ಮತ್ತು ರೆಕಾರ್ಡ್ ಗಳು, ಪರಿಹಾರ ಬೋಧನೆ ಹಾಗೂ ಅದರ ರೆಕಾರ್ಡ್ ಗಳು, ಕಾರ್ಯಕ್ರಮಗಳು ಅವುಗಳ ದಾಖಲಾತಿ, ಟಿಸಿ, ಕನ್ನಡ ಮಾಧ್ಯಮ, ಅಂಕಪಟ್ಟಿ ಹಂಚುವಿಕೆ, NMMS, NTSE ಪರೀಕ್ಷೆ ಕಟ್ಟುವುದು, ಅದಕ್ಕೆ ಮಕ್ಕಳನ್ನು ತರಬೇತಿಗೊಳಿಸುವುದು, ಪ್ರತಿ ಮಕ್ಕಳ ಆಧಾರ್ ಕಾರ್ಡ್ ಮತ್ತು ಶಾಲೆಯ ದಾಖಲಾತಿಯ STS ನಲ್ಲಿ ಸರಿ ಮಾಡುವುದು. ಹೆಸರು, ತಂದೆಯ ಹೆಸರು, ಶಾಲಾ ದಾಖಲೆ, ಬ್ಯಾಂಕ್ ಅಕೌಂಟ್, ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಗಳಲ್ಲಿ ಒಂದೇ ಇರುವಂತೆ ಮಾಡಿ, ಅವರ ಪೋಷಕರೊಡನೆ ಮಾತನಾಡಿ ಯು ಡೈಸ್, ಯು ಡೈಸ್ ಪ್ಲಸ್ ಪೂರ್ಣಗೊಳಿಸುವುದು, ಅಕೌಂಟ್ ಇಲ್ಲದ ಮಕ್ಕಳಿಗೆ ಬ್ಯಾಂಕ್ ಅಕೌಂಟ್ ಮಾಡಿಸುವುದು. ಸಮಾಜ ಕಲ್ಯಾಣ ಇಲಾಖೆಯ ಸ್ಕಾಲರ್ಶಿಪ್, ಬಿ ಡಿ ಸ್ಕಾಲರ್ಶಿಪ್ ಗೆ ಮಕ್ಕಳ ಅರ್ಜಿ ಹಾಕಿಸುವುದು, ಶಾಲೆಗೆ ಬೇಕಾದ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ತರಕಾರಿ, ಸಾಂಬಾರ್ ಪೌಡರ್ ತರುವುದು,ಪಠ್ಯ ಪುಸ್ತಕ, ಸಮವಸ್ತ್ರ ಮೂಟೆ ಹೊತ್ತು ತರುವುದು, ಚಪ್ಪಲಿ ಅಂಗಡಿಯವರ ಬಳಿ ಮಾತನಾಡಿ ಮಕ್ಕಳಿಗೆ ಬೇಕಾದ ಅಳತೆಯ ಚಪ್ಪಲಿಗಳನ್ನು ಕೊಡಿಸುವುದು. ಹೆಣ್ಣು ಮಕ್ಕಳಿಗೆ ಬರುವ ಶುಚಿ ನ್ಯಾಪ್ಕಿನ್ ಅನ್ನು ಪ್ರತಿ ತಿಂಗಳು ಹಂಚುತ್ತಾ ಲೆಕ್ಕಾಚಾರ ಇಡುವುದು, ಶಾಲೆಯಲ್ಲಿನ ಲೈಬ್ರರಿ ಪುಸ್ತಕ ದಾಸ್ತಾನು, ಕ್ರೀಡಾ ಸಾಮಾಗ್ರಿಗಳ ದಾಸ್ತಾನು ನಿರ್ವಹಣೆ, ವಿಜ್ಞಾನ ಪ್ರಯೋಗಾಲಯದ ಸಾಮಾನುಗಳ ಖರೀದಿ, ಸಾಮಾನು ನಿರ್ವಹಣೆ, ಬಳಕೆ ವಹಿ, ಇದೀಗ ಬಂದ ಡೈರಿ, ಜೊತೆಗೆ ವಾರ್ಷಿಕ ಪಾಠ ಹಂಚಿಕೆ, 20 ಅಂಶಗಳ ಪಟ್ಟಿ ಅದನ್ನು ನಿರ್ವಹಿಸುವುದು ಇವಿಷ್ಟು ಪಾಠ ಅಲ್ಲದೆ ಇತರ ಕೆಲಸಗಳು . ಮೊದಲಿನಿಂದ ಇರುವ ಕೆಲಸಗಳ ಜೊತೆ ಒಂದಿಷ್ಟು ಹೊಸದಾಗಿ ಸೇರಿಕೊಂಡಿವೆ.
3 ಕ್ಕಿಂತ ಹೆಚ್ಚು ದಿನ ಶಾಲೆಗೆ ಬಾರದವರ ಮನೆಗೆ, ಹಾಜರಾದ ಮಕ್ಕಳನ್ನು ಶಾಲೆಯಲ್ಲೇ ಬಿಟ್ಟು, ಒಬ್ಬನನ್ನು ಕರೆದು ತರಲು ಸ್ವತಃ ಶಿಕ್ಷಕ ಅವನ ಮನೆಗೆ ಭೇಟಿ ನೀಡಬೇಕು. 6 ಕ್ಕಿಂತ ಹೆಚ್ಚು ದಿನ ಗೈರುಹಾಜರಿಯಾದರೆ ಅವನ ಹೆಸರಿನ ಫೈಲ್ ಓಪನ್ ಆಗಬೇಕು. ದೀರ್ಘ ಗೈರುಹಾಜರಾದ ಮಗುವಿನ ಮನೆಗೆ ಆಗಾಗ ಭೇಟಿ ಜೊತೆಗೆ ಗ್ರಾಮ ಪಂಚಾಯಿತಿಗೆ ವಿಷಯ ತಿಳಿಸಬೇಕು ಹಾಗು ಮೇಲಿನ ಅಧಿಕಾರಿಗಳಿಗೆ ತಿಳಿಸಿ, ಅವರೊಡನೆ ಮನೆ ಭೇಟಿ ಮಾಡಬೇಕು. ಅವರ ಮನವೊಲಿಸಬೇಕು.
ಒಂದು ವೇಳೆ 1 ರಿಂದ 7 ತರಗತಿಗಳಿದ್ದು, ಅಲ್ಲಿ 2 ಶಿಕ್ಷಕರಿದ್ದು, 2 ಮಕ್ಕಳು ದೀರ್ಘ ಗೈರುಹಾಜರಾದಲ್ಲಿ ಅವರ ಪರಿಸ್ಥಿತಿ ಏನು ? ಅಲ್ಲಿನ ಮಕ್ಕಳ ಕಲಿಕಾ ಮಟ್ಟ ಹೇಗಿರಬಹುದು? ಕಳೆದ ವರ್ಷದಂತೆ MDM upload ಮಾಡ್ಲಿಕ್ಕೆ ಇದ್ದಿದ್ರೆ ಒಳ್ಳೆಯದಿತ್ತು. ಈಗ SDS ನಲ್ಲಿ Attendance ಆಗುವರೆಗೆ MDM ನಲ್ಲಿ upload ಮಾಡಲಿಕ್ಕೆ ಆಗದೆ ಇರುವ ಕಾರಣ ಬೆಳಗ್ಗೆ 10 ಗಂಟೆಯಿಂದ 12.30 ವರೆಗೆ STS ನಲ್ಲಿ attendance ಹಾಕಲಿಕ್ಕೆ ಬೇಕಾಗುತ್ತದೆ. Server ಸಮಸ್ಯೆಯಿಂದ ಹೀಗಾದರೆ ಮಕ್ಕಳಿಗೆ ಸರಿಯಾಗಿ ಸಮಯ ಕೊಡುವುದಕ್ಕೆ ಆಗ್ತಾ ಇಲ್ಲ. MBL ಇಟ್ಕೊಂಡೆ ಸುತ್ತುವಾಗ, ಪಾಠ ಮಾಡುತ್ತಾ ಸಿಕ್ಕಾಗ Attendance ಹಾಕ್ತಾ ಒಟ್ಟಿನಲ್ಲಿ ಹೇಗೋ 3 ಗಂಟೆಯ ಹೊತ್ತಿಗೆ MDM ನಲ್ಲಿ upload ಮಾಡಬೇಕು. ಅದು ಆಗದಿದ್ರೆ ಬಸ್ ನಲ್ಲಿ ನೇತಾಡ್ತಾ ಹಾಕ್ಬೇಕು. ಇಲ್ಲ ಅಂದ್ರೆ ಮನೆಯಲ್ಲಿ ಮನೆಯವರಿಂದ ಬೈಸ್ಕೊಂಡು ಯಾವಾಗ್ಲೂ MBL ನಲ್ಲೆ ಇರ್ತೀರ ಅಂತ ಬೈಸ್ಕೊತ್ತಾ ಇರಬೇಕಾದ ಪರಿಸ್ಥಿತಿ ಇದೆ. ಇದು ಯಾವಾಗ ಪರಿಹಾರ ಆಗುತ್ತೋ ಗೊತ್ತಿಲ್ಲ.
ಮೊಟ್ಟೆಯ ದರ ಶಿಕ್ಷಕರನ್ನು ಒಂದು ಕಡೆ ಹೈರಾಣು ಮಾಡಿದರೆ, Attendance upload ಮಾಡುವುದು ಮಾನಸಿಕವಾಗಿ ಕಿರಿಕಿರಿ ಉಂಟುಮಾಡುತ್ತಿದೆ. ಶಾಲೆಯಲ್ಲಿ ಶಿಕ್ಷಕರೇ ಕಡಿಮೆ. ಈ ಎಲ್ಲಾ ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಶಿಕ್ಷಕರನ್ನು ಭಾದಿಸುತ್ತಿವೆ. ಒತ್ತಡ ತಾಳಲು ಆಗದೆ ಸೈಕಿಯಾಟ್ರಿಸ್ಟ್ ಹತ್ತಿರ ಹೋಗುತ್ತಿರುವ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ.
(ಇನ್ನೂ ಇದೆ)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ