ಸ(ರಸ)ವಿ(ರಸ) ದಾಂಪತ್ಯ

1.333335

ಬೆಳಗ್ಗೆಯಿಂದಲೇ ಜಗಳ ಆರಂಭವಾಗಿಬಿಟ್ಟಿತ್ತು. ಅವನೆಷ್ಟೇ ಸೈರಣೆ ತೋರಿಸುತ್ತಾ ಬಂದರೂ ಅವಳು ಜಗಳವನ್ನು ಮುಂದುವರೆಸುವದಕ್ಕೆ ಧೃಡನಿರ್ಣಯವನ್ನು ಕೈಗೊಂಡತ್ತಿದ್ದಳು. ಏನೇ ಹೇಳಿದರೂ ಅದಕ್ಕೊಂದು ತಿರುಗು ಬಾಣ ಅವಳಿಂದ ತಟ್ಟನೆ ಬರುತಿತ್ತು. ಸ್ವರದ ಸ್ಥಾಯಿ ಏರುತ್ತಲೇ ಇತ್ತು. ತಾಳ್ಮೆಯಿಂದ, ನಿಧಾನವಾಗಿ, ಅವಳನ್ನು ಸಮಾಧಾನಗೊಳಿಸಲು ಪಟ್ಟ ಪ್ರಯತ್ನವೆಲ್ಲಾ ನಿಷ್ಫಲವಾದಾಗ ತಾನೂ ಧ್ವನಿಯೇರಿಸಿದ. ಪ್ರಯೋಜನವಾಗಲಿಲ್ಲ; ಬದಲು ಅವಳ ದನಿ ಇನ್ನಷ್ಟು ಹೆಚ್ಚಿ ಕರ್ಕಶವಾಯಿತಷ್ಟೆ! ಅವನು ಹತಾಶನಾದ; ಮಾತಾಡುವದನ್ನೇ ನಿಲ್ಲಿಸಿ, ಯಾಂತ್ರಿಕವಾಗಿ ತನ್ನ ಕೆಲಸಗಳನ್ನು ಮಾಡುವದನ್ನು ಮುಂದುವರೆಸಿದ.


ಅವನು ಮಾತು ನಿಲ್ಲಿಸಿದ್ದನ್ನು ಗಮನಿಸಿದರೂ ಅವಳು ಅವನನ್ನು ಆಕ್ಷೇಪಿಸುವದನ್ನು ಮುಂದುವರೆಸಿದಳು. ಕೆಲವೊಮ್ಮೆ ದೊಡ್ಡ ಸ್ವರದಲ್ಲೇ ಗೊಣಗಿದಳು; ಇನ್ನು ಕೆಲವೊಮ್ಮೆ ಎದುರು ನಿಂತು ಜರೆದಳು. ಪಾತ್ರೆಗಳನ್ನು ಎತ್ತೆತ್ತಿಹಾಕಿದಳು. ಮನೆಯ ವಸ್ತುಗಳನ್ನು ಎತ್ತಿ ಬಿಸಾಕಿದಳು.


ಕಳೆದ ಸೋಮವಾರದಿಂದಲೇ ಎದುರು ನೋಡುತ್ತಿದ್ದ ಭಾನುವಾರ ಈ ರೀತಿ ಕೆಟ್ಟದಾಗಿ ಕಳೆದು ಹೋಗುತ್ತಲ್ಲಾ ಎಂದು ಅವನು ಮೌನವಾಗಿ ದುಃಖಿಸಿದ. ಈ ಜಗಳಕ್ಕಾಗಿಯೇ ಇವಳು ಈ ಭಾನುವಾರವನ್ನು ಕಾಯುತ್ತಿದ್ದಳಾ? ಅದಕ್ಕೇ ಪಟ್ಟು ಬಿಡದೆ ದಿನವಿಡೀ ಜಗಳ ಕಾದು ತೃಪ್ತಳಾಗುತ್ತಾಳಾ, ಎಂದಾತ ಮನದೊಳಗೇ ಹಲುಬಿದ. ಅವಳ ದೂಷಣೆಯ ಮುಸಲಧಾರೆ ಎಡೆಬಿಡೆದೆ ಸಾಗಿಯೇ ಇತ್ತು.


"ನಿನ್ಗಿಂತ ನಾನೇನು ಕಡಿಮೆಯಿಲ್ಲ; ತಿಳ್ಕೋ. ನೀನು ಬರೇ ಬಿ ಇ. ನಾನು ಎಮ್ಮೆಸ್ಸಿ ಮಾಡಿ ಎಮ್ಬೀಯೇ ಮಾಡಿದ್ದೀನಿ. ಅದೂ ಡಿಸ್ಟಿಂಕ್ಶನಲ್ಲಿ! ನಿನ್ಹಾಗೇ ನಾನೂ ಎಮ್ಮೆನ್ಸೀನಲ್ಲಿ ಆಫೀಸರ್ ಆಗಿದ್ದೀನಿ. ನಿನ್ನಂಥ ಎಷ್ಟೋ ಜನರನ್ನ ರಿಕ್ರೂಟ್ ಮಾಡಿ ಅಪಾಯಿಂಟ್ ಮಾಡ್ತೀನಿ... ನಿನ್ನಷ್ಟೇ ಸಂಬಳ ತರ್ತೀನಿ... ಒಂದೆರಡ್ ಸಾವಿರ ಕಡಿಮೆ ಇರಬಹುದಷ್ಟೇ...ನಾನೂ ಕಾರೂ ಬೈಕೂ ಓಡಿಸ್ ಬಲ್ಲೆ; ಬೇಕಾದ್ರೆ ನಾಳೇನೇ ಒಂದು ಕಾರ್ ಕೊಂಡ್ ತಂದು ನಿನ್ ಮುಖಕ್ಕ್ ನಿವಾಳ್ಸಿ ಎಸೀತೀನಿ... "


ಕಾರನ್ನು ಎತ್ತಿ ನಿವಾಳಿಸುವ ತನ್ನ ಹೆಂಡತಿಯನ್ನು ಊಹಿಸಿಕೊಂಡು ಮನಸಲ್ಲೇ ನಕ್ಕ.


"ಏನ್ ನಗ್ತಿದ್ದೀಯಾ? ನೀನ್ ಮಾಡೋದ್ದನ್ನೆಲ್ಲಾ ನಾನೂ ಮಾಡ್ ಬಲ್ಲೆ; ತಿಳ್ಕೋ. ಮೊನ್ನೆ ಸಿಗ್ನಲ್ ಜಂಪ್ ಮಾಡಿ ಸಿಕ್‌ಹಾಕ್ಕೊಂಡಾಗ ಆ ಪೊಲೀಸ್‌ನವನ್ ಮುಖಕ್ಕೆ ಐವತ್ತ್ ರುಪಾಯಿ ಬಿಸಾಕಿ ಸ್ಕೂಟಿ ಎತ್ಕೊಂಡ್ ಬರ್ಲಿಲ್ವಾ? ನೀನಾಗಿದ್ರೆ ಪೆದ್ ಥರಾ ರಿಸೀಟ್ ಕೊಡೂಂತ ಕಾಯ್ಕೊಂಡ್ ನಿಂತು ಮುನ್ನೂರ್ ರುಪಾಯಿ ಕಳ್ಕೊಂಡ್ ಬರ್ತಿದ್ದೆ...ಅಷ್ಟೆ! ...ನೀನ್ ಮಾಡೋದನ್ನೇ ಏನು, ನಿನ್ ಕೈಲಿ ಮಾಡೋಕ್ಕಾಗದ್ದನ್ನೂ ನಾನ್ ಮಾಡ್ತೀನೀಂತ..."


"ಹೌದಮ್ಮಾ, ನೀನ್ ಮಾಡ್ ಬಲ್ಲೆ..."


ಅವನ ಮಾತನ್ನು ಅಷ್ಟಕ್ಕೇ ಕತ್ತರಿಸಿ, "ಹೌದೂಂತ್ಲೇ ನಾನು ಹೇಳ್ತಿರೋದು...ನೀವು ಗಂಡಸರ್ಗೆ ಹೆಂಗಸ್ರನ್ನ ಕಂಡೆಮ್ ಮಾಡ್ತಾ ಕಮ್ಮಿ ಥರದಲ್ಲಿ ನೋಡೋಕ್ಕಷ್ಟೇ ಬರೋದು... ನಿಮ್ಮಷ್ಟೇ ನಾವೂ ಕೇಪಬ್‌ಲ್ ಅನ್ನೋದನ್ನ ಒಪ್ಕೊಳ್ಳೋ ಕ್ವಾಲಿಟಿ ನಿಮ್ಮಲ್ಲಿಲ್ಲ! ಈಗಾಗ್ಲೇ ಪ್ರಪಂಚದಲ್ಲೆಲ್ಲಾ ಗಂಡಸ್ರು ಮಾಡೋದ್ನೆಲ್ಲಾ ಹೆಂಗಸ್ರೂ ಎಫಿಶಂಟಾಗಿ ಮಾಡಿ ತೋರ್ಸಿದ್ದಾರೆ...ಅದನ್ನ ಒಪ್ಕೊಳ್ಳೋಕ್ಕೆ ನಿಮ್ಮ ಫಾಲ್ಸ್ ಈಗೋ ಬಿಡ್ತಿಲ್ಲ! ನಿಮ್ಮ male chauvinismಗೆ ದಾಸರಾಗ್ಬಿಟ್ಟಿದ್ದೀರಿ ನೀವೆಲ್ಲಾ..."


ಅವಳು ಸ್ವಲ್ಪ ದಣಿದಿರಬಹುದು. ಅಥವಾ ಉಸಿರನ್ನು ಸ್ವಲ್ಪ ನಿಯಂತ್ರಣಕ್ಕೆ ತಂದುಕೊಂಡು ಮತ್ತೆ ವಾಗ್ದಾಳಿಯನ್ನು ಮುಂದುವರೆಸಲು ಇರಬಹುದು. ಇಲ್ಲಾ ಪಾಯಿಂಟಿಲ್ಲದ ಹೊಸ ಪಾಯಿಂಟ್ ತೆಗೆದುಕೊಂಡು ವಾದಿಸುವದಕ್ಕೆ ಸಿದ್ಧಳಾಗುತ್ತಿರಬಹುದು. ಅಂತೂ ಯಾಕೋ ಕ್ಷಣ ಕಾಲ ಸುಮ್ಮನಾದಳು. ಆ ಅಲ್ಪವಿರಾಮದಲ್ಲಿ ಆತ ಕೇಳಿದ:


"ನಾವು ಗಂಡಸರು ಮಾಡೋದ್ದನ್ನೆಲ್ಲಾ ನೀವು ಹೆಂಗಸ್ರು ಮಾಡ್‌ಬಲ್ರಿ ತಾನೇ?"


"ಯಾಕಿಲ್ಲ? ಇಷ್ಟ್‌ಹೊತ್ತು ಇನ್ನೇನ್ ನಾ ನಿಮ್ಗೆ ಹೇಳ್ತಿದ್ದಿದ್ದೂ? ನಾವ್ ನಿಮ್ ಥರಾ ಶರ್ಟೂಪ್ಯಾಂಟೂ ಸ್ಯೂಟೂ ಹಾಕ್ಕೊಂಡ್ ಆಫೀಸ್ಗೇ ಹೋಗ್ತೀವಿ; ಬೋರ್ಡ್ ಮೀಟಿಂಗ್ ಅಟೆಂಡ್ ಆಗ್ತೀವಿ...ನಿಮಗ್ ಮಾತ್ರ ಸಾಧಿಸೋಕ್ಕಾಗೋದು ಅಂತ ಬೊಗಳೇ ಹೊಡ್ಯೋದನ್ನೆಲ್ಲಾ ನಾವೂ ಮಾಡಿ ಸಾಧಿಸ್ತೀವಿ...ನೀವು ರೇಷ್ಮೆ ಸೀರೆ ಉಟ್ಕೊಂಡ್ ಆಫೀಸ್‌ಗೆ ಹೋಗಿ, ನೋಡೋಣಾ..." ಮೂತಿಗೆ ತಿವಿಯುವ ದನಿಯಲ್ಲಿ ನುಡಿದರೂ, ತನ್ನ ಗಂಡ ರೇಷ್ಮೆ ಸೀರೆಯಲ್ಲಿರುವದನ್ನು ಊಹಿಸಿಕೊಂಡು ಮನಸ್ಸಲ್ಲೇ ನಕ್ಕಿದ್ದು ಅವಳ ತುಟಿಗಳು ತುಸುವೇ ತುಸು ತೋರಿಸಿದವು.


ಮಾತಾಡದೆ ಅವನು ಬಾತ್‌ರೂಮಿನಿಂದ ಬ್ರಶ್, ರೇಜರ್, ಶೇವಿಂಗ್ ಕ್ರೀಮ್, ಆಫ್ಟರ್ ಶೇವ್ ಲೋಶನ್, ಇತ್ಯಾದಿ ಇರುವ ಶೇವಿಂಗ್ ಕಿಟ್ಟನ್ನು ತಂದು ಅವಳ ಮುಂದೆ ಹಿಡಿದು, "ನಾವು ಶೊವಿನಿಸ್ಟಿಕ್ ಮೇಲ್ಸ್ ಮಾಡೋದನ್ನ ನೀವು ಶಿವಲ್ರಸ್ ಲೇಡೀಸ್ ಮಾಡಿ ತೋರ್ಸಿ!" ಎಂದ.


ಸ್ವಲ್ಪ ಹೊತ್ತು ಮಾತು ನಿಲ್ಲಿಸಿ ಬಿಟ್ಟ ಬಾಯಿಂದ ಅವಳು ತನ್ನ ಮುಂದೆ ಅವನು ಹಿಡಿದಿದ್ದ ಕಿಟ್ಟನ್ನು ನೋಡುತ್ತಿದ್ದು, ನಂತರ ಎಚ್ಚೆತ್ತವಳಂತೆ ಅದನ್ನು ಅವನ ಕೈಯಿಂದ ತೆಗೆದುಕೊಂಡು ಪಕ್ಕದಲ್ಲಿದ್ದ ಮೇಜಿನ ಮೇಲಿಟ್ಟಳು. ಆಮೇಲೆ ಮೋಹಕ ನಗುವನ್ನು ಬೀರುತ್ತಾ ಅವನ ಬಳಿ ಸಾರಿ, ತನ್ನ ಪಾದಗಳನ್ನು ಅವನ ಪಾದಗಳ ಮೇಲಿಟ್ಟು ನಿಂತು, ಕೈಗಳನ್ನು ಅವನ ಕತ್ತಿಗೆ ಹಾರದಂತೆ ಹಾಕಿ, ಅವನ ಕಣ್ಣುಗಳೊಳಗೆ ನೋಡುತ್ತಾ, "ನನ್ನ ಜೀವನ ಸಂಗಾತಿ ನಿನ್ನ ಸಂಗಾತಿಗಿಂತ wise and witty; ಗೊತ್ತಿರ್ಲಿ!" ಎಂದಳು.


"ಯೂ ಫೀಮೇಲ್ ಶೊವಿನಿಸ್ಟ್!" ಹೆಂಡತಿಯ ಸಣ್ಣ ನಡುವಿನ ಸುತ್ತ ಕೈಗಳನ್ನು ಬಳಸುತ್ತಾ ಹೇಳಿದ. "ಜಟ್ಟಿ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ..."


ಅವನ ಮಾತನ್ನು ಅಲ್ಲೇ ಕತ್ತರಿಸಿ, "ಯಾಕೇಂದ್ರೆ ಜಟ್ಟಿಗೆ ಮೀಸೇನೇ ಇಲ್ಲ" ಎಂದು ಅವನ ಹಿಂದಲೆಯ ಮೇಲೆ ಕೈಯಿಟ್ಟು ಮುಖವನ್ನು ತನ್ನೆಡೆಗೆಳೆದುಕೊಂಡಳು. 


 


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಗ೦ಡ ಹೆ೦ಡಿರ ಜಗಳ ಶೇವಿ೦ಗ್ ಕಿಟ್ ಕೆಳಗಿಳಿಸುವ ತನಕ...:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು. ಹೊಸ ಕಾಲಕ್ಕೆ ಹೊಸ ಗಾದೆ ಎಂದೆನ್ನುವಿರಾ, ಕುಲಕರ್ಣಿಯವರೇ? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತುಂಬಾ ಸ್ವಾರಸ್ಯವಾಗಿದೆ. ಪ್ರತಿಯೊಂದು ವಿರಸವೂ ಇಂತಹುದೇ ಸರಸದಲ್ಲಿ ಅಂತ್ಯ ಕಂಡರೆ ಜೀವನವದೆಷ್ಟು ಸುಖಮಯ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು. ನಿಜ; ವಿರಸವಾಗಬಾರದು, ಎಂದೆನ್ನಲಾಗದು. ಆಗಿಬಿಟ್ಟರೆ ಸರಸದಲ್ಲಿ ಅಂತ್ಯ ಕಾಣಲು ಇಬ್ಬರೂ ಪ್ರಯತ್ನ ಪಟ್ಟರೆ ಜೀವನ ಸುಖಮಯವೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜಗಳಗಂಟಿ, ಸ್ವಾರ್ಥಿ ಎನ್ನುವಂತೆ ಹೊರನೋಟಕ್ಕೆ ತೋರಿದರೂ, ತನ್ನ ನಿಲುವನ್ನು, ಗಂಡು-ಹೆಣ್ಣಿನ ನಡುವೆ ಹಿಂದಿನಿಂದಲೂ ಇರುವ ಗಂಡಿನ ಹೆಚ್ಚುಗಾರಿಕೆಯನ್ನು ವಿರೋಧಿಸುವಲ್ಲಿ ತನ್ನ ಬಿಡದ ಹಠವನ್ನು ಸಾಧಿಸುವವಳಾಗಿ ಪತ್ನಿಯ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ. ಇಬ್ಬರೂ ಜಗಳವಾಡುತ್ತಿದ್ದರೆ ಗಂಡ-ಹೆಂಡಿರು ಉಂಡು ಮಲಗುವರೆಗೂ ಕಾಯುವುದು ವಿದ್ಯಾವಂತ ಹಾಗೂ ಬುದ್ಧಿವಂತರಾದ ಈಗಿನ ಅತ್ಯವಸರದ ಕಾಲದವರಲ್ಲಿ ನಡೆಯದು. ಇಬ್ಬರಲ್ಲಿ ಒಬ್ಬರು ಸುಮ್ಮನಿದ್ದರೆ ಜಗಳವನ್ನು ಬಗೆ ಹರಿಸುವ ಉಪಾಯವನ್ನು ಯೋಚಿಸಬಹುದು. ಅದನ್ನೇ ಇಲ್ಲಿ ಗಂಡ ಮಾಡಿರುವುದು ಅನುಕರಣೀಯ. ಮೇಲ್ ಶೊವಿನಿಸಮ್ಮಿನ (ಪುರುಷ ಪ್ರಾಧಾನ್ಯದ) ವಿರುದ್ಧ ಜಗಳ ಮಾಡುತ್ತಿದ್ದವಳಿಗೆ ಇಷ್ಟೊಂದು ಸರಳ ವಿಷಯದಲ್ಲಿ ತಾನು ಸೋತೇನೆಂಬ ಅಂದಾಜೂ ಅವಳಿಗಿದ್ದಿರಲಿಲ್ಲ. ಆದರೂ ಸೋಲನ್ನು ಗೆಲುವನ್ನಾಗಿ ಪರಿವರ್ತಿಸಿದ ಅವಳ ಚಿತ್ರಣ ಸುಂದರವಾಗಿದೆ. ಪಾದಗಳನ್ನು ಮೆಟ್ಟಿ ಅವನ ಏರಾಟವನ್ನು ನಿಯಂತ್ರಿಸುವಂತಿದ್ದರೂ ಅವನನ್ನು ಆಧರಿಸಿಯೇ ಅವಳು ನಿಂತಿರುವುದು; ನಿಂತಂತೆಯೇ ಅವನ ಹಿಂತಲೆಯನ್ನು ತನ್ನೆಡೆಗೆ ಎಳೆದುಕೊಂಡು ಸೋಲಲ್ಲೂ ಗೆಲ್ಲುವ ಅವಳ ಗುಣವನ್ನು ಸಾಂಕೇತಿಕವಾಗಿ ಸೂಚಿಸಿರುವುದು ಮನೋಜ್ಞವಾಗಿದೆ. ತಾನು ಜಗಳದ ಜಟ್ಟಿಯಾದರೂ ಅಹಂಕಾರದಲ್ಲಿ ತಿರುವಲು ಮೀಸೆಯಿಲ್ಲದಿರುವುದನ್ನು ಒಪ್ಪಿಕೊಳ್ಳುವ ಅವಳ ನೇರ ಸ್ವಭಾವದಿಂದ ಪ್ರಿಯಳಾಗುತ್ತಾಳೆ. ರಸವನ್ನು ಬ್ರ್ಯಾಕೆಟಿನಲ್ಲಿ ರಕ್ಷಿಸಿಟ್ಟರೆ ಸರಸ-ವಿರಸಗಳು ಮಿಳಿತವಾಗಿರುವ ದಾಂಪತ್ಯ ಕಂಡಿತಾ ಸವಿಯಾಗಿರುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಷ್ಟೊಂದು ವಿವರವಾದ ಪ್ರತಿಕ್ರಿಯೆ, ಅದೂ ವಿಮರ್ಶಾತ್ಮಕವಾಗಿ, ಬರುವದೆಂದು ನಾನೆಣಿಸಿರಲಿಲ್ಲ. ಧನ್ಯವಾದಗಳು. ಪತ್ನಿಯ ಪ್ರತಿ ಮಾತು, ಭಾವ, ಭಂಗಿಗಳನ್ನೂ ಅಭ್ಯಸಿಸಿ ಅರ್ಥ ಕಲ್ಪಿಸಿಕೊಂಡಿದ್ದೀರಿ. ನಾನೂ ಹೀಗೆ ಊಹಿಸಿರಲಿಲ್ಲ! ಕವಿ ಕಾಣದ್ದನ್ನು ಸಹೃದಯರು ಕಾಣುತ್ತಾರೆನ್ನುವದು ನಿಜವಾಗಿರಿಸಿದಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತುಂಬಾ ಚೆನ್ನಾಗಿದೆ. ನಾನೇನೋ ಟ್ರ್ಯಾಜಿಡಿಯಲ್ಲಿ ಮುಗಿಯುತ್ತೆ ಅಂದ್ಕೊಂಡಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು, ಚೇತನ್. ನಾವು ಪುರುಷರಿಗೆ ಮದುವೆಯೇ ಟ್ರ್ಯಾಜಿಡಿಯಲ್ಲವೇ? ಅದರ ಬಳಿಕ ಎಲ್ಲವೂ ಕಾಮಿಡಿಯೇ! ಏನಂತೀರಿ? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯಗೆ, ರಸಭರಿತವಾಗಿದೆ ದಾಂಪತ್ಯ. ಚೆನ್ನಾಗಿ ಪೋಣಿಸಿದ್ದೀರಿ ಕೋಪ ಮಿಶ್ರಿತ ರಸ ನಿಮಿಷಗಳನ್ನು. ಖುಷಿಯಾಯಿತು ವಂದನೆಗಳು/ಮಧ್ವೇಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು, ಮಧ್ವೇಶ್‌ರವರಿಗೆ. ಕೋಪದಲ್ಲೂ ರಸ ತೆಗೆಯೋದನ್ನ ಸಾಧಿಸಿದರೆ ಅದೇ ಸುಖಾಂತ ನನಗನ್ನಿಸುತ್ತೆ; ಏನಂತೀರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಏನೋಪ್ಪಾ.. ಒಬ್ರು ಜಗಳ ಮಾಡಿದಾಗ ಒನ್ನೊಬ್ರು ಸಮಾಧಾನವಾಗಿದ್ರೆ ನಡಿಯತ್ತೆ.. ಇಬ್ರೂ ಜಗಳ ಮಾಡ್ಕೊಂಡು ಮನೆ ರಣರಂಗವಾದ್ರೆ... ಆದ್ರೂ ಇದು ಸಾಮಾನ್ಯ ಅನ್ಸತ್ತೆ!!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಿಯ ಸಂತೋಷ್, ಒಬ್ರಾಗಿ ಜಗಳ ಮಾಡಲಾಗುವದಿಲ್ಲ. ಕನಿಷ್ಠ ಇಬ್ಬರಿರ್ಲೇಬೇಕು ;-) ನಿಜ; ಇನ್ನೊಬ್ರು ಸಮಾಧಾನವಾಗಿದ್ರೆ ಈ ಬರೆಹದಲ್ಲಿರೋ ಹಾಗೆ ಜಗಳಾನ ನಿಲ್ಲಿಸೋಕ್ಕೊಂದು ಉಪಾಯ ಹುಡುಕ್ ಬಹುದು. ಆದ್ರೆ ಹೀಗಿರೋಕೆ ತುಂಬಾ, ತುಂಬಾ ಸಹನೆ ಬೇಕು. ಈಗೋ ಬಿಡೋದಿಲ್ಲ. ಪತಿ-ಪತ್ನಿಯರು ‘ಏನೇ ಜಗಳ್ವಾದ್ರೂ level headed grown ups ನಾವೂ ಅನ್ನೋದನ್ನ ನೆನ್‌ಪಿಸ್ಕೊಂಡು ಬೇಗ್ನೇ ರಾಜೀ ಮಾಡ್ಕೊಳ್ಬೇಕೂ; ಹಗೆ ಸಾಧಿಸ್ಬಾರ್ದೂಂತ ಫ್ರೇಮ್ ಆಫ್ ಮೈಂಡ್ ಇಟ್ಕೊಂಡ್ರೆ ಜೀವನ ಚಿತ್ರಕ್ಕೆ ಪ್ರೇಮದ ಚೌಕಟ್ಟಿರುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.