ಸಾಮಾನ್ಯ ಕಾನೂನು ಜ್ಞಾನದ ಅವಶ್ಯಕತೆ.

4

ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದಾಗ ಒಮ್ಮೆ ನನ್ನ ಕಿರಿಯ ಅಧಿಕಾರಿಯೊಬ್ಬನನ್ನು ಕೇಳಿದೆ: "ನೀನೊಬ್ಬ ಕಾರ್ಮಿಕನೊಂದಿಗೆ ಏನೋ ಮಾತಾಡುತ್ತಿರುತ್ತೀ ಅಂತ ಇಟ್ಟುಕೋ. ಮಾತು ವಿರಸಕ್ಕೆ ತಿರುಗಿ, ಶೀಘ್ರ ಕೋಪದಲ್ಲಿ ಅವನು ನಿನ್ನ ಕೆನ್ನೆಗೆ ಹೊಡೆದು ಬಿಡುತ್ತಾನೆ. ಆಗ ನೀನೇನು ಮಾಡುತ್ತೀ?"

"ನಾನೂ ತಿರುಗಿ ಅವನ ಕೆನ್ನೆಗೆ ಬಾರಿಸುತ್ತೇನೆ" ಎಂಬ ಉತ್ತರ ಬಂತು.

"ಆದರೆ ಅವನು ಕಾರ್ಮಿಕ. ಕಾರ್ಮಿಕ ಯೂನಿಯನ್ನಿನ ಸಾಮಾನ್ಯ ಸದಸ್ಯ. ಅವನನ್ನು ಅಧಿಕಾರಿಯಾದ ನೀನು ಹೊಡೆದರೆ ಅವರೆಲ್ಲಾ ಒಂದಾಗಿ ಗಲಾಟೆ, ಘೋಷಣೆ, ಟೂಲ್ ಡೌನ್, ಇತ್ಯಾದಿಯೆಲ್ಲಾ ಮಾಡ್ತಾರಲ್ಲಾ?"

"ಆದರೆ ಅವನೇ ಮೊದಲು ಹೊಡೆದ ಮೇಲೆ ತಪ್ಪು ಅವನದ್ದು ತಾನೇ? ಅವನ ಕೈಲಿ ಹೊಡೆಸಿಕೊಂಡು ನಾನು ಸುಮ್ಮನಿರಲೇ?"

"ಸುಮ್ಮನಿರು, ಅಂತ ನಾನು ಹೇಳುತ್ತಿಲ್ಲ. ಕಾನೂನಿನಂತೆ ನೀನೇನು ಮಾಡಬೇಕು, ಅಂತ ನಾನು ಕೇಳುತ್ತಿದ್ದೇನೆ; ಅಷ್ಟೇ"

"ಕಾನೂನು ಅಂತಂದ್ರೆ ನಾನು ಪೊಲೀಸ್ ಕಂಪ್ಲೆಂಟ್ ಕೊಡಬೇಕಾ?"

"ಅದೇ ನಾನು ಕೇಳ್ತಿರೋದು: ಏನು ಮಾಡಬೇಕೂಂತ"

"ನನಗ್ಗೊತ್ತಿಲ್ಲ. ಏನು ಮಾಡಬೇಕು?"

ಈ ಪ್ರಶ್ನೆಯನ್ನು ಮೊದಲು ಕೆಲವು ಕಿರಿಯ ಅಧಿಕಾರಿಗಳನ್ನು ಕೇಳಿದೆ. ಆಮೇಲೆ ಕೆಲವು ಹಿರಿಯ ಮತ್ತು ಕೆಲವು ನನ್ನಷ್ಟೇ ಅನುಭವವಿದ್ದ ಅಧಿಕಾರಿಗಳನ್ನು ಕೇಳಿದೆ. (ಇವರು ಯಾರೂ ಮಾನವ ಸಂಪನ್ಮೂಲ ಇಲಾಖೆ (ಎಚ್ ಆರ್ ಡಿ)ಯವರಿರಲಿಲ್ಲ.) ಇಂಥ ಸಂದರ್ಭದಲ್ಲಿತಮ್ಮ ಮೇಲಧಿಕಾರಿಯಲ್ಲಿ ದೂರು ಸಲ್ಲಿಸಿ, ಬಳಿಕ ಅವರ ಮುಖಾಂತರ ಮಾನವ ಸಂಪನ್ಮೂಲ ಇಲಾಖೆಯಲ್ಲಿ ದೂರನ್ನು ದಾಖಲಿಸಬೇಕು ಎಂಬ ಸಾಮಾನ್ಯ ನಿಯಮವೂ ಅವರಿಗೆ ಗೊತ್ತಿರಲಿಲ್ಲ!

ಕಾರ್ಖಾನೆಗೆ ಹೊಸದಾಗಿ ಸೇರುವಾಗ ಹಲವಾರು ಕಾನೂನು-ಕಾಯ್ದೆಗಳ ಕೈಪಿಡಿಯನ್ನು ಕೊಟ್ಟಿರುತ್ತಾರೆ. ಆದರೆ ಅದನ್ನು ಸಾಮಾನ್ಯವಾಗಿ ಯಾರೂ ಓದಿರುವದಿಲ್ಲ. ಅದರಲ್ಲಿ ಇಂಥ ಸಂದರ್ಭಗಳ ಬಗ್ಗೆ ಬರೆದಿರುವದೂ ಇಲ್ಲ. ಸೇರಿದ ಹೊಸದರಲ್ಲಿ ಇಂಥ ವಿಷಯಗಳ ಬಗ್ಗೆ ಇರುವ ಮಾನ್ಯುಲ್ಸ್ ಇವರಿಗೆಲ್ಲಾ ಸಿಗುವದಿಲ್ಲ. ಕಾರ್ಖಾನೆಗಳಲ್ಲಿ ನಿಯತಕಾಲಗಳಲ್ಲಿ ಕೊಡುವ ತರಬೇತಿಗಳಲ್ಲೂ ಇವನ್ನು ತಿಳಿಸುವದು ಬಹಳ ಕಡಿಮೆ.

ಜ್ಞಾನಕ್ಕೆ ಸಮಾನವಾದುದು ಯಾವದೂ ಇಲ್ಲ ಎಂಬ ನಲ್ನುಡಿಯಿದೆ. ಆದರೆ ನಾವು ಜ್ಞಾನವನ್ನು ಇನ್ನೊಬ್ಬರಿಗೆ ತಿಳಿಸುವದರಲ್ಲಿ ಬಹಳ ಜಿಪುಣರು. ದಿನಗೂಲಿಯಲ್ಲಿ ದುಡಿಯುವವನೂ ತಿಂಗಳಿಗೆ ಲಕ್ಷಾಂತರ ಸಂಪಾದಿಸುವವನೂ ತಮ್ಮನ್ನು ಕೆರಳಿಸಿದವರಿಗೆ ‘ಪಾಠ ಕಲಿಸುವ’ ಭರವಸೆಯನ್ನೀಯುತ್ತಾರೆ. ಇನ್ನೊಬ್ಬರಿಗೆ ಬುದ್ಧಿ ಹೇಳುವವರು ಪ್ರತಿಯೊಬ್ಬರೂ ಆಗಿರುತ್ತಾರೆ. ಇದು ಅವರ ಮೇಲ್ಮೆಯನ್ನು ಪ್ರದರ್ಶಿಸಲು ಮಾತ್ರವಿರುತ್ತದೆ.

Knowledge is power ಎಂಬ ಮಾತೂ ಇದೆ. ತನ್ನ ಕೆಳಗಿನ ಕಾರ್ಮಿಕನಿಗೆ ಅಥವಾ ಅಧಿಕಾರಿಗೆ knowledgeನ್ನು  ಮುಕ್ತವಾಗಿ ಕೊಟ್ಟರೆ ತನ್ನ power ಎಲ್ಲಿ ಕಡಿಮೆಯಾದೀತೋ ಎಂಬ ಭಯ! "ಅವರಿಗೆಲ್ಲ ಏನೂ ಹೇಳಿಕೊಡಬಾರದು. ಹೇಳಿಕೊಟ್ಟರೆ ನಾಳೆ ನಮ್ಮ ತಲೆ ಮೇಲೇ ಹತ್ತಿ ಕೂತ್ಕೊಂಡ್ ಬಿಡ್ತಾರೆ" ಎಂಬ ಹೆದರಿಕೆ.
"ನಾನು ಹೇಳಿದಷ್ಟು ಮಾಡು; ನನ್ನನ್ನು ಪ್ರಶ್ನಿಸಬೇಡ!" ಎಂಬ ಆದೇಶ. ಈಗಿನ ಯುವಕರು ಹಾಗೇನಾದರೂ ಪ್ರಶ್ನಿಸಿದರೆ ಅವನಿಗೆ ಬತ್ತಿ ಇಡಲು ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಳ್ಳುತ್ತಾರೆ.

ಸರಕಾರೀ ಉದ್ಯಮಗಳು, ಪಬ್ಲಿಕ್ ಸೆಕ್ಟರ್ ಉದ್ಯಮಗಳು, ದೊಡ್ಡ ಖಾಸಗೀ ಉದ್ಯಮಗಳು, ಮೊದಲಾದೆಡೆಗಳಲ್ಲಿ ಸಾಮಾನ್ಯ ಕಾನೂನುಗಳನ್ನು ಅರಿತವರು ಬಹಳ ಕಡಿಮೆ. ದಿನ ನಿತ್ಯದ ಉತ್ಪಾದನೆಯ ಚಟುವಟಿಕೆಗಳಿಗೆ ಈ ಅಜ್ಞಾನದಿಂದ ತೊಂದರೆಯಿರಲಾರದು. ಆದರೆ ಕೆಲವೊಮ್ಮೆ ಇದೇ ಆಪತ್ಕಾರಕವಾಗುವ ಸಂದರ್ಭಗಳೂ ಗಣನೀಯವಾಗಿರುತ್ತವೆ. ಸಾಮಾನ್ಯ ಕಾನೂನುಗಳನ್ನು ಎಲ್ಲರೂ ತಿಳಿದುಕೊಳ್ಳುವದೂ, ತಿಳಿಸಿಕೊಡುವದೂ ನಮ್ಮೆಲ್ಲರ ಹಾಗೂ ದೇಶದ ಪ್ರಗತಿಗೆ ಅತ್ಯವಶ್ಯ.
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):