ಸ್ಟೇಟಸ್ ಕತೆಗಳು (ಭಾಗ ೧೩೮೫) - ಬೇಲಿ

ದಣಿಗಳೇ, ನೀವೇನೂ ಯೋಚನೆ ಮಾಡ್ಕೋಬೇಡಿ. ನಮ್ಮ ಗದ್ದೆಗೆ ಈ ಸಲ ಯಾವ ತೊಂದರೆ ಆಗುವುದಿಲ್ಲ. ನಾನು ಗಟ್ಟಿಯಾದ ಬೇಲಿಯನ್ನು ಇಡೀ ಗದ್ದೆಯ ಸುತ್ತ ಹಾಕಿದ್ದೇನೆ. ಅದನ್ನ ದಾಟಿ ಬರುವ ಧೈರ್ಯ ಯಾರಿಗೂ ಇಲ್ಲ, ಅಂತಂದ ಸೀನಪ್ಪ ಯಜಮಾನರಿಗೆ ಧೈರ್ಯ ತುಂಬಿ ತನ್ನ ಮನೆಯ ಕಡೆಗೆ ನಡೆದ. ಯಜಮಾನರಿಗೂ ಪೂರ್ತಿ ನಂಬಿಕೆ ಏನಲ್ಲ ಆದ್ರೆ ಸೀನಪ್ಪ ಹೇಳಿದ ಮೇಲೆ ತೊಂದರೆ ಇಲ್ಲ ಅಂದುಕೊಂಡು ಸುಮ್ಮನಾಗಿ ಬಿಟ್ಟರು. ಒಂದು ವಾರ ದಾಟಿದೆ ಅಷ್ಟೇ, ಗದ್ದೆಯ ಕಡೆಗೆ ತಿರುಗಿ ಬರುವಾಗ ಎಲ್ಲಾ ಬೆಳೆಗಳು ಹಾಳಾಗಿಬಿಟ್ಟಿದ್ದಾವೆ, ಯಾವುದೂ ಉಪಯೋಗಕ್ಕೆ ಇಲ್ಲವಾಯಿತು. ಸೀನಪ್ಪನಿಗೂ ಒಂದು ನೋಡುವಾಗ ತಲೆ ಬಿಸಿಯಾಯಿತು. ನಾವು ಇಷ್ಟರವರೆಗೆ ಬೇಲಿಯನ್ನು ತುಂಡರಿಸಿ ಬರುವವರನ್ನು ಕೇಳಿದ್ದೇವೆ, ಆದರೆ ಹಾರಿ ಬರುವವರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಬೇಲಿ ಹಾಕಿದರೆ ಸಾಲದು ಆಗಾಗ ಬಂದು ನೋಡುವರು ಇರಬೇಕು. ಅರ್ಥ ಆಯ್ತಾ ಮಗಾ... ಶಿನಪ್ಪ ತನ್ನ ಮೊಮ್ಮಗನಿಗೆ ಈ ಕಥೆಯನ್ನ ಹೇಳುವುದಕ್ಕೆ ಆರಂಭಿಸಿದ್ದ. ಹೇಳೋದಕ್ಕೆ ಕಾರಣವಿಷ್ಟೇ ನಾನು ಸಭ್ಯ ಸುಸಂಸ್ಕೃತನಾಗಿದ್ದೇನೆ ಸುತ್ತಮುತ್ತ ಇರುವವರೆಲ್ಲರೂ ಒಳ್ಳೆಯವರೇ ನನ್ನ ತಲೆ ಒಳಗೆ ಯಾವ ಕೆಟ್ಟ ಆಲೋಚನೆಯೂ ಬರುವುದಿಲ್ಲ ಅನ್ನುವ ನಂಬಿಕೆಯಿಂದ ಬದುಕುತ್ತಿದ್ದವ ಮೊಮ್ಮಗ, ಆದರೆ ಅವನ ಪರಿಧಿಯನ್ನು ಮೀರಿದ ಕೆಟ್ಟ ಆಲೋಚನೆಗಳು ಒಂದಷ್ಟು ಉದಾಸಿನದ ಸಣ್ಣ ಸಣ್ಣ ಬೀಜಗಳು ತಲೆಯೊಳಗೆ ಮೊಳಕೆಯೊಡೆದು ಬಿಟ್ಟರೆ ಆ ಇಡಿ ಗದ್ದೆ ಹಾಳಾದ ಹಾಗೆ ಮನಸ್ಸು ಹಾಳಾಗಿಬಿಡುತ್ತದೆ. ಮೊಮ್ಮಗನಿಗೆ ಅರ್ಥ ಮಾಡಿಸಲು ಹೇಳಿದ್ದು ತನ್ನದೇ ಕತೆ, ಇನ್ನು ಮೊಮ್ಮಗ ಅದನ್ನ ಅರ್ಥ ಮಾಡಿಕೊಳ್ಳುವುದು ಒಂದೇ ಉಳಿದಿರುವುದು. ಶೀನಪ್ಪನ ಮನೆಯ ಹೊರಗಿನ ಹಂಚಿನ ಬದಿಯಲ್ಲಿ ದಪ್ಪವಾದ ನಾಗರ ಬೆತ್ತವೂ ಇದೆ .ಮಾತು ಕೇಳದಿದ್ದರೆ ಬೆತ್ತ ಕೈಯಲ್ಲಿ ಬರುವುದು ಗ್ಯಾರಂಟಿ.
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ