ಹಂಸ ಹಾಡುವ ಹೊತ್ತು – ೮ (ಅಂತಿಮ ಭಾಗ)

0

ಎಂದರೋ ಮಹಾನುಭಾವುಲು......
(ಅಜ್ಞಾತ ಮಹಾನುಭಾವರು ಅದೆಷ್ಟೋ....)

ಮಿಲಿಂದನಿಗೆ ಸತ್ಕಾರ ನಡೆದು ಹಲವಾರು ತಿಂಗಳುಗಳ ಬಳಿಕ, ಅದೊಂದು ರಾತ್ರಿ ಮಿಲಿಂದ್ ತನ್ನ ಲ್ಯಾಪ್ ಟಾಪ್ ತೆರೆದುಕೊಂಡು ಏನನ್ನೋ ಬಹಳ ಗಂಭೀರವಾಗಿ ಪರಿಶೀಲಿಸುತ್ತಿರುವಂತೆ ಕಂಡಿತು ಆಭಾಗೆ. ಅವನನ್ನೇ ದಿಟ್ಟಿಸಿದಾಗ ಅದೇಕೋ ಅವನು ಬಹಳ ಕ್ಷೋಭೆಗೊಂಡಂತೆ ಕಾಣಿಸಿದ.
"ಏನು ವಿಷಯ ಮಿಲಿಂದ್, ಏನಾಯ್ತು ?" ಎಂದು ಕೇಳಿದಳು, ಅವನ ಹಿಂದೆ ನಿಂತು ಅವನ ಭುಜಗಳ ಮೇಲೆ ತನ್ನ ಕೈಗಳನ್ನು ಊರಿ.

ಮಿಲಿಂದ್ ನಿಧಾನವಾಗಿ ಹೇಳಿದ. " ಆಭಾ, ಕೆಲವು ದಿನಗಳ ಹಿಂದೆ ನನಗೊಂದು ಇಮೇಲ್ ಬಂದಿತ್ತು. ಇಮೇಲ್ ಕಳಿಸಿದವರು ನನಗೆ ಸಂಪೂರ್ಣ ಅಪರಿಚಿತರು. ಜರ್ಮನಿಯ ಬಯೋ ಟೆಕ್ನಾಲಜಿ ಸಂಸ್ಥೆಯಲ್ಲಿ ಅವರು ಸಂಶೋಧಕರಾಗಿ ಕೆಲಸ ಮಾಡುತ್ತಿದ್ದಾರಂತೆ. ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಈಗಾಗಲೇ ದಾಖಲಾಗಿರುವ ಇತರರ ಸಂಶೋಧನೆಗಳ ವಿವರಗಳನ್ನು ಪರಿಶೀಲಿಸುತ್ತಿರುವಾಗ ನನ್ನ ಸಂಶೋಧನೆಯೂ ಕಣ್ಣಿಗೆ ಬಿತ್ತಂತೆ. ಅದರಲ್ಲಿ ತಮಗೆ ಅರ್ಥವಾಗದ ಕೆಲವು ಅಂಶಗಳ ಬಗ್ಗೆ ವಿವರಣೆ ಕೋರಿ ನನಗೆ ಪತ್ರ ಬರೆದಿದ್ದರು.ಅವರಿಗೆ ವಿವರಗಳನ್ನು ತಿಳಿಸುವ ಮೊದಲು, ಅವರ ಬಗ್ಗೆ ವಿವರಗಳನ್ನು ತಿಳಿಯಲು ಇಂಟರ್ ನೆಟ್ ನಲ್ಲಿ ಹುಡುಕಿದಾಗ, ಅವರೀಗಾಗಲೇ ಪ್ರಕಟಿಸಿರುವ ಕೆಲವು ಸಂಶೋಧನಾ ಪ್ರಬಂಧಗಳು ನನಗೆ ದೊರೆತವು. ಅದರಲ್ಲಿ ಒಂದು ಪ್ರಬಂಧದ ಶೀರ್ಷಿಕೆ ನನ್ನ ಗಮನ ಸೆಳೆಯಿತು. ಆ ಪ್ರಬಂಧದ ವಿಷಯ ನಾನು ಸಂಶೋಧನೆ ನಡೆಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಇತ್ತು. ಆ ಪ್ರಬಂಧವನ್ನು ವಿವರವಾಗಿ ಪರಿಶೀಲಿಸಿದಾಗ ಒಂದು ಅಂಶ ನನ್ನನ್ನು ಅಪ್ರತಿಭನನ್ನಾಗಿ ಮಾಡಿತು. ನನ್ನ ಸಂಶೋಧನೆಗೆ ಆಧಾರವಾದ ಡಾಕ್ಟರ್ ಮೂರ್ತಿಯವರ ಸಂಶೋಧನಾ ವಿವರಗಳಿರುವ ಸಿ.ಡಿ ಗಳ ಬಗ್ಗೆ ನಿನಗೆ ತಿಳಿಸಿದ್ದೆನಲ್ಲ. ಆ ಪ್ರಬಂಧದಲ್ಲಿರುವ ಅಂಕಿಅಂಶಗಳು, ಡಾಕ್ಟರ್ ಮೂರ್ತಿಯವರ ಸಿ.ಡಿ ಯಲ್ಲಿರುವ ಕೆಲವು ಅಂಕಿಅಂಶಗಳೊಡನೆ ಯಥಾವತ್ತಾಗಿ ಹೊಂದುತ್ತಿದ್ದುವು............ನನಗೆ ಪತ್ರ ಬರೆದವರ ಸಂಶೋಧನೆ ಮೂರ್ತಿಯವರ ಸಂಶೋಧನೆಯ ಒಂದು ಚಿಕ್ಕ ತುಣುಕಾದರೂ, ಆ ಅಂಕಿಅಂಶಗಳು ಹೋಲುವ ಪರಿ ಮಾತ್ರ ನಂಬಲಸಾಧ್ಯವಾಗಿದೆ............ " ಎಂದು ತನ್ನ ವಿವರಣೆ ನಿಲ್ಲಿಸಿ ಅವಳ ಮುಖ ನೋಡಿದ.

"ಅಂದರೆ, ಡಾಕ್ಟರ್ ಮೂರ್ತಿಯವರ ಸಂಶೋಧನೆಯ ಕೃತಿಚೌರ್ಯವಾಗಿದೆಯೇ ?" ಎಂದಳು ಆಶ್ಚರ್ಯದಿಂದ ಉದ್ಗರಿಸುತ್ತಾ.
"ಅಷ್ಟಾಗಿದ್ದರೆ ಇದು ನನಗೆ ಒಂದು ಚೋದ್ಯವಾಗಿ ಕಾಣುತ್ತಿತ್ತೇ ಹೊರತು ನನ್ನನ್ನು ಇಷ್ಟು ಚಿಂತೆಗೀಡುಮಾಡುತ್ತಿರಲಿಲ್ಲ ......" ಎಂದ ಬಹಳ ಸಂಕಟದಿಂದ.
"ಅಂದರೆ......?"
"ಮೊದಲಿಗೆ ನನಗೆ ಅದು ಒಂದು ಚೋದ್ಯವಾಗಿಯೇ ಕಂಡಿತು. ಆದರೆ, ಅವರ ಸಂಶೋಧನೆ ನಡೆದ ಸಮಯ ಮತ್ತು ಡಾಕ್ಟರ್ ಮೂರ್ತಿಯವರು ತಮ್ಮ ಸಂಶೋಧನೆಯನ್ನು ಕ್ರೋಢೀಕರಿಸಿದ ಸಮಯಗಳನ್ನು ತಾಳೆ ಹಾಕಿ ನೋಡಿದಾಗಲೇ ನನಗೆ ದಿಗ್ಭ್ರಮೆಯಾಯಿತು.........."
"ಅಂದರೆ........ ಡಾಕ್ಟರ್ ಮೂರ್ತಿಯವರೇ ..............ಕೃತಿಚೌರ್ಯ ಮಾಡಿದ್ದಾರೆಯೇ ............?" ಹೀಗೆ ನೇರವಾಗಿ ಹೇಳುವುದಕ್ಕೂ ಬಾಯಿ ಬಾರದೇ, ಎಳೆದೆಳೆದು ಹೇಳಿದಳು ಆಭಾ.

"ದುರದೃಷ್ಟವಶಾತ್ ಹೌದು. ಕೇವಲ ಇದೊಂದು ಪ್ರಸಂಗದಿಂದ ನಾನು ಹೇಳುತ್ತಿಲ್ಲ. ಮೂರ್ತಿಯವರು ತಮ್ಮ ಸಂಶೋಧನೆಯಲ್ಲಿ ಕ್ರೋಢೀಕರಿಸಿದ ಎಲ್ಲಾ ತುಣುಕು ಸಂಶೋಧನೆಗಳ ಕೀ ವರ್ಡ್ಸ್ (key words) ಬಳಸಿ, ಇಂಟರ್ ನೆಟ್ ನಲ್ಲಿ ಹುಡುಕಿದಾಗ ನನಗೆ ಮಂಕು ಕವಿದಂತಾಯ್ತು. ಆ ಎಲ್ಲಾ ತುಣುಕು ಸಂಶೋಧನೆಗಳು ಮತ್ತು ಮೂರ್ತಿಯವರು ಕ್ರೋಢೀಕರಿಸಿದ ಸಂಶೋಧನೆಯನ್ನು ಒಟ್ಟಾಗಿ ನೋಡಿದಾಗ, ಮೂರ್ತಿಯವರು ಈ ಎಲ್ಲಾ ತುಣುಕು ಸಂಶೋಧನೆಗಳನ್ನು ಆಯ್ದುಕೊಂಡು, ಒಬ್ಬ ಸಂಪಾದಕ ಮಾಡಬಹುದಾದಂತಹ ಕೆಲಸವನ್ನು ಮಾತ್ರ ಮಾಡಿರುವುದು ಸ್ಪಷ್ಟವಾಗುತ್ತದೆ. ನಿನಗೆ ಅರ್ಥವಾಗುವ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಕಂಪ್ಯೂಟರ್ ನ ವಿವಿಧ ಭಾಗಗಳನ್ನು ಬೇರೆ ಬೇರೆಯವರಿಂದ ಕದ್ದು ತನ್ನದೇ ಒಂದು ಸುಸಜ್ಜಿತ ಅತ್ಯಾಧುನಿಕ ಕಂಪ್ಯೂಟರ್ ರಚಿಸಿಕೊಂಡಂತೆ. ನಾನು ಈ ತೀರ್ಮಾನಕ್ಕೆ ಬಂದಾಗ ನನಗದೆಷ್ಟು ವೇದನೆಯಾಯ್ತು ಗೊತ್ತಾ .........?"

ಬಹಳ ಕಷ್ಟಪಟ್ಟು ಉಬ್ಬಿದ ಗಂಟಲಿನಿಂದ ಸ್ವರ ಹೊರಡಿಸುತ್ತಿದ್ದ ಮಿಲಿಂದ್.
"ಇಷ್ಟಾದರೂ, ಮೂರ್ತಿಯವರ ಕೃತಿಚೌರ್ಯವನ್ನು ಯಾರೂ ಗಮನಿಸಿಲ್ಲವೇ ?"
"ಅವರು ತಮ್ಮ ಸಂಶೋಧನೆಯನ್ನು ಪ್ರಕಟಿಸಿದ್ದರೆ ತಾನೇ ಆ ಪ್ರಶ್ನೆ ? ಒಂದು ವೇಳೆ ಪ್ರಕಟಿಸಿದ್ದರೂ ಇವು ಬಹಳಷ್ಟು ತುಣುಕು ಸಂಶೋಧನೆಗಳ ಸಂಯೋಜನೆಯಾದ್ದರಿಂದ ಇದರ ಸಮಗ್ರ ರೂಪವನ್ನು ಕಂಡ ಈ ತುಣುಕು ಸಂಶೋಧನಾಕಾರರು ಈ ಸಮಗ್ರತೆಯಲ್ಲಿ ತಮ್ಮ ಸ್ವಂತಿಕೆಯನ್ನು ಗುರುತಿಸಲಾರರು. ಈ ಕಾರಣದಿಂದಲೇ ಏನೋ ಅವರು ತಮ್ಮ ಅಷ್ಟು ಮಹತ್ವದ ಸಂಶೋಧನೆಯನ್ನು ಪ್ರಕಟಿಸಲು ಹಿಂಜರಿದದ್ದು......"
"ಅಂದಹಾಗೆ ಮಿಲಿಂದ್, ನಿಮ್ಮ ಸಂಶೋಧನೆಗೆ ಮೂರ್ತಿಯವರ ಸಿ.ಡಿ ಗಳಲ್ಲಿದ್ದ ವಿವರಗಳನ್ನು ಬಳಸಿಕೊಂಡಿರಿ ತಾನೇ ? ಆದರೆ , ಅವರು ಕಂಡುಹಿಡಿದದ್ದೇ ಬೇರೆ ಮತ್ತು
ನೀವು ಕಂಡುಹಿಡಿದದ್ದೇ ಬೇರೆಯಾಗಿದೆಯಲ್ಲ ? "
"ನಿಜ. ಆದರೆ ಒಂದೇ ದತ್ತಾಂಶಗಳಿಂದ ಒಂದಕ್ಕಿಂತಲೂ ಹೆಚ್ಚಿನ ತೀರ್ಮಾನಗಳಿಗೆ ಬರಲು ಸಾಧ್ಯವಿರುವುದು ಸ್ಟ್ಯಾಟಿಸ್ಟಿಕ್ಸ್ ಬಲ್ಲ ನಿನಗೆ ತಿಳಿದೇ ಇದೆ. ಮೂರ್ತಿಯವರ ಬಳಿ ಇದ್ದ ಅಂಕಿ ಅಂಶಗಳಿಂದ ಮಾನವನ ಅಂತಿಮ ದಿನವನ್ನು ನಿರ್ಣಯಿಸುವುದಷ್ಟೇ ಅಲ್ಲ, ನಾನು ಗಮನಿಸಿದ ಇನ್ನೂ ಒಂದು ತೀರ್ಮಾನವೂ ಸಾಧ್ಯವಿದೆಯೆಂದು ನನಗೆ ಹೊಳೆದಾಗ,
ನನ್ನ ಅನಿಸಿಕೆಯನ್ನು ತಾಳೆ ಹಾಕಿ ನೋಡಲು ನಮ್ಮ ಸಿಬ್ಬಂದಿಯವರ ರಕ್ತ ಪರೀಕ್ಷೆ ಮಾಡಿಸಬೇಕಾಯ್ತು"
ಆಭಾಗೆ ಏನು ಹೇಳಲೂ ತೋರಲಿಲ್ಲ. ಮಿಲಿಂದನೇ ಮುಂದುವರೆಸಿದ
" ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಯೆಂದರೆ, ಮೂರ್ತಿಯವರ ಕೃತಿಚೌರ್ಯವನ್ನು ನಾನು ಬಹಿರಂಗಪಡಿಸಬೇಕೇ ಅಥವಾ ಮೌನವಹಿಸಬೇಕೇ ಎಂಬುದು......" ಅವನ ಸಂಕಟವನ್ನು ಅರ್ಥಮಾಡಿಕೊಂಡ ಆಭಾ ತುಸು ಸಮಯದ ನಂತರ,

"ಮಿಲಿಂದ್ ನೀನು ಮುರಳೀಧರರಾವ್ ಅವರ ಸಲಹೆ ಕೇಳಿದರೆ ಹೇಗೆ ....." ಎಂದಳು.
"ನಾನೂ ಅದನ್ನೇ ಯೋಚಿಸಿದೆ. ಆದರೆ, ಮೂರ್ತಿಯವರೊಡನೆ ಅವರಿಗಿದ್ದ ಆತ್ಮೀಯತೆಯನ್ನು ನೆನೆದಾಗ, ಅವರು ನನಗೆ ಸೂಕ್ತ ಸಲಹೆ ಕೊಡುವುದಿರಲಿ, ಈ ಆಘಾತಕಾರಿ ಸುದ್ದಿಯನ್ನು ಹೇಗೆ ಸಹಿಸಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ...."
"ಈ ಸಂದರ್ಭದಲ್ಲಿ ಅವರಲ್ಲದೆ ಇನ್ನಾರ ಸಲಹೆಪಡೆಯವುದೂ ಉಚಿತವಲ್ಲ ಎನಿಸುತ್ತದೆ" ಎಂದಳು ಸೋತ ದನಿಯಲ್ಲಿ. ಬಹಳಷ್ಟು ಚರ್ಚೆ ಮಾಡಿದ ಬಳಿಕ, ಅವರ ಸಲಹೆ ಪಡೆಯುವುದೇ ಒಳ್ಳೆಯದೆಂಬ ನಿರ್ಧಾರಕ್ಕೆ ಬಂದರು.
ಮರುದಿನವೇ ಮುರಳೀಧರ ರಾವ್ ರವರಿಗೆ ತಾನು ಬರುತ್ತಿರುವ ವಿಷಯ ತಿಳಿಸಿ, ಆಫೀಸ್ ಗೆ ಒಂದು ದಿನದ ರಜೆ ಹಾಕಿ, ಬೆಂಗಳೂರಿಗೆ ಹೊರಟ. ಮುರಳೀಧರ ರಾವ್ ಅವರ ಮನೆಯನ್ನು ತಲುಪಿದಾಗ ಅವರು ತಮ್ಮ ಆಫೀಸ್ ನಲ್ಲಿ ಯಾವುದೋ ಕಡತಗಳನ್ನು ನೋಡುತ್ತಿದ್ದರು. ಮಿಲಿಂದನನ್ನು ಕಂಡಕೂಡಲೇ,

"ಏನು ಮಿಲಿಂದ್, ಏನಂಥಾ ಅರ್ಜೆಂಟ್ ವಿಷಯ ? ನೀನು ಫೋನಿನಲ್ಲಿ ಮಾತನಾಡುವಾಗಲೇ ನೀನು ತುಂಬಾ ಆತಂಕಗೊಂಡಿರುವುದು ಸ್ಪಷ್ಟವಾಗಿತ್ತು. ಏನಾಯ್ತು ?" ಎಂದು ಬಹಳ ಕಕ್ಕುಲತೆಯಿಂದ ವಿಚಾರಿಸಿದರು.
"ಅಂಕಲ್, ನಿಮಗೆ ವಿಷಯ ಹೇಗೆ ತಿಳಿಸುವುದೋ ಗೊತ್ತಾಗುತ್ತಿಲ್ಲ. ನಾನು ಹೇಳಲಿರುವ ವಿಷಯ ನಿಮಗೂ ಆಘಾತ ನೀಡಬಹುದು" ಎಂದು ಪೀಠಿಕೆ ಹಾಕಿದ.
"ಏನು, ನನಗೂ ಆಘಾತವಾಗುವಂತಹ ವಿಷಯವೇ ?" ಎಂದು ಆತಂಕದಿಂದ ಕೇಳಿದರು.
ಸಾವಧಾನವಾಗಿ ಮಿಲಿಂದ್ ಎಲ್ಲಾ ವಿಷಯವನ್ನು ಅವರಿಗೆ ತಿಳಿಸಿದಾಗ, ಅವರ ಬಾಯಿಂದ ಸೊಲ್ಲೇ ಹೊರಡದೇ,
"ಮಿಲಿಂದ್, ನೀನು ಸರಿಯಾಗಿ ಪರಿಶೀಲಿಸಿದ್ದೀಯಾ ತಾನೇ ? ಮೂರ್ತಿ ಹೀಗೆ ಮಾಡಿರಬಹುದೆಂದು ನನಗೆ ಊಹಿಸಲೂ ಸಾಧ್ಯವಾಗುತ್ತಿಲ್ಲ. ಅವನನ್ನು ಅಷ್ಟು ಚೆನ್ನಾಗಿ ಬಲ್ಲೆ" ಎಂದರು ಕ್ಷೀಣ ಧ್ವನಿಯಲ್ಲಿ.
"ನನಗೆ ಗೊತ್ತಿತ್ತು ಅಂಕಲ್ ಈ ವಿಷಯ ನಿಮ್ಮ ನಂಬಿಕೆಯನ್ನೇ ಅಲುಗಾಡಿಸುವುದೆಂದು....."
" ಮಿಲಿಂದ್, ಆ ಸಿ.ಡಿ ಯಲ್ಲಿ ಮೂರ್ತಿ ನಿನಗೆ ಬರೆದಿರುವ ಪತ್ರದಲ್ಲಿ ಇದರ ಕುರಿತಾಗಿ ಏನೂ ಹೇಳಿಲ್ಲವೇ ?"
"ಆ ಪತ್ರವನ್ನು ನೀವೂ ನೋಡಿದ್ದೀರಲ್ಲಾ ಅಂಕಲ್, ಅದರಲ್ಲಿ ಇದರ ಬಗ್ಗೆ ಏನೂ ಬರೆದಿಲ್ಲ...."
" ಆ ಪತ್ರದಲ್ಲಿ ಏನೂ ಬರೆದಿಲ್ಲ ನಿಜ. ಆದರೆ, ಎರಡನೇ ಪತ್ರದಲ್ಲಿ ಏನಾದರೂ ಬರೆದಿದ್ದಾನೆಯೇ ....."
"ಯಾವ ಎರಡನೇ ಪತ್ರ ಅಂಕಲ್......." ಎಂದು ಹೇಳ ಹೊರಟವನು,
"ಓ, ಆ ಪತ್ರವೇ, ಆ ಪತ್ರವನ್ನು ನಾನಿನ್ನೂ ಓದಿಲ್ಲ. ಅದನ್ನು ಓದುವ ಸಂದರ್ಭವೇ ಬಂದಿಲ್ಲವಲ್ಲ........ಅಕಸ್ಮಾತ್ ಓದಿದರೂ ಕೂಡ, ತಾವು ಮಾಡಿದ ತಪ್ಪನ್ನು ಅವರು ಅದರಲ್ಲಿ
ತಿಳಿಸಿರುವ ಸಂಭವವಿದೆಯೇ ? ಹಿಂದೊಮ್ಮೆ ನಾನು ಆ ಪತ್ರವನ್ನು ಓದಲು ಯತ್ನಿಸಿದಾಗ, " ನಿಜಕ್ಕೂ ಈ ಪತ್ರ ಓದುವ ಸಂದರ್ಭ ಬಂದಿದೆಯೇ " ಎಂಬ ಸಂದೇಶ ಮೂಡಿತು. ಹಾಗಾಗಿ ನಾನು ಓದಲಿಲ್ಲ ಅದನ್ನು "

"ಅವನ ಸಂಶೋಧನೆಯನ್ನು ಪ್ರಕಟಿಸಲು ಅವನು ನಿಬಂಧನೆಗಳನ್ನು ಹಾಕಿದ್ದಾನೆಯೇ ಹೊರತು, ಅವನ ಪತ್ರವನ್ನು ಓದುವುದಕ್ಕೆ ಈ ನಿಬಂಧನೆಗಳು ಅನ್ವಯವಾಗುವುದಿಲ್ಲ ಎನಿಸುತ್ತದೆ.ಆ ಪತ್ರ ಓದುವುದರಲ್ಲಿ ಉಪಯೋಗವೇನೂ ಇರಲಾರದು ಎನಿಸುತ್ತದೆ. ಮೊದಲನೆಯದಾಗಿ ತನ್ನ ಕೃತ್ಯವನ್ನು ಅದರಲ್ಲಿ ಒಪ್ಪಿಕೊಂಡಿರುವ ಸಾಧ್ಯತೆ ಬಹಳ ಕಡಿಮೆ. ಒಂದೊಮ್ಮೆ ಒಪ್ಪಿಕೊಂಡಿದ್ದರೂ ಅದು ನಮಗಾಗಿರುವ ಅಘಾತವನ್ನು ಹೆಚ್ಚಿಸುತ್ತದೆಯೇ ಹೊರತು ನಿವಾರಿಸುವುದಿಲ್ಲ"
"ಹಾಗಾದರೆ ಈಗ ನಾನೇನು ಮಾಡಬೇಕು ಹೇಳಿ ಅಂಕಲ್ ?" ಎಂದು ಯಾಚಿಸುವ ದನಿಯಲ್ಲಿ ಕೇಳಿದ ಮಿಲಿಂದ್.
"ಮೊದಲನೆಯದಾಗಿ ಅವನು ತನ್ನ ಸಂಶೋಧನೆಯನ್ನು ಪ್ರಕಟಪಡಿಸಿಲ್ಲ. ಎರಡನೆಯದಾಗಿ ನಮ್ಮಿಬ್ಬರು ಮತ್ತು ಆಭಾಳ ಹೊರತು ಇನ್ನಾರಿಗೂ ಈ ವಿಷಯ ತಿಳಿದಿಲ್ಲ. ಐ ಥಿಂಕ್ ವುಯ್ ಕೆನ್ ಕನ್ವೀನಿಯಂಟ್ಲಿ ಫರ್ಗೆಟ್ ಇಟ್ ( I think we can conveniently forget it ) " ಎಂದರು, ಧೀರ್ಘವಾಗಿ ಆಲೋಚಿಸಿದ ನಂತರ.

+++++ +++++++++
ಮುರಳೀಧರ ರಾವ್ ಅವರಿಂದ ಬೀಳ್ಕೊಂಡ ಮಿಲಿಂದ್ ಅದೇ ರಾತ್ರಿಯ ವೇಳೆಗೆ ಮೈಸೂರು ತಲುಪಿದ. ಅವನು ಬರುವುದನ್ನೇ ಆಭಾ ಕಾಯುತ್ತಿದ್ದಳು. ಅವನಾಗಲೇ ಫೋನ್ ಮೂಲಕ ಬೆಂಗಳೂರಿನಲ್ಲಿ ಮುರಳೀಧರರಾವ್ ಅವರೊಡನೆ ನಡೆಸಿದ ಚರ್ಚೆಯ ಬಗ್ಗೆ ತಿಳಿಸಿದ್ದನಾದ್ದರಿಂದ, ಅವನು ಹಿಂತಿರುಗಿದಾಗ ಅವನ ಸಪ್ಪೆ ಮುಖವನ್ನು ನೀರೀಕ್ಷಿಸಿಯೇ ಇದ್ದಳು. ಹೆಚ್ಚಿನ ವಿವರಗಳನ್ನು ಕೇಳಿ ಅವನಿಗೆ ಹಿಂಸೆ ಮಾಡಬಾರದೆಂದು ಮೌನವಾಗಿಯೇ ಅವನ ಜೊತೆ ಊಟ ಮುಗಿಸಿದಳು.
ಕೆಲವು ತಿಂಗಳುಗಳು ಕಳೆದಿರಬಹುದು.ಮುರಳೀಧರರಾವ್ ಅವರ ಸಲಹೆಯಂತೆ ಕಹಿಯೆಲ್ಲವನ್ನೂ ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡು ಅದನ್ನು ಮರೆಯುವುದರಲ್ಲಿ ಸ್ವಲ್ಪ ಮಟ್ಟಿಗೆ ಸಫಲನಾಗಿದ್ದ, ವೈಯುಕ್ತಿಕವಾಗಿ ಮೂರ್ತಿಯವರಲ್ಲಿಟ್ಟಿದ್ದ ಅವನ ವಿಶ್ವಾಸ ಒಂದೆಡೆ ಮತ್ತು ಇನ್ನೊಂದೆಡೆ ತಾನೇ ಸಂಗ್ರಹಿಸಿದ ಅವರ ವಿರುದ್ಧದ ಸಾಕ್ಷ್ಯಗಳು ಅವನನ್ನು ಆಗೊಮ್ಮೆ ಈಗೊಮ್ಮೆ ತೂಗಾಡಿಸುತ್ತಿದ್ದುವು.

ಆ ರಾತ್ರಿ ಮಿಲಿಂದನ ಜೀವನದಲ್ಲಿ ಮರೆಯಲಾಗದ ರಾತ್ರಿಯಾಗಿತ್ತು. ಬೆಳಗಿನ ನಾಲ್ಕೂವರೆ ಗಂಟೆಗೆ, ಗೊಗ್ಗರು ದನಿಯಲ್ಲಿ ಚೀರುತ್ತಾ ಎದ್ದು ಕುಳಿತ ಮಿಲಿಂದನ ಮೈ ಬೆವರಿನಿಂದ ತೊಯ್ದು ಹೋಗಿತ್ತು. ಅವನ ಚೀರುವಿಕೆಗೆ ಎಚ್ಚರಗೊಂಡ ಆಭಾ, ಅವನ ಭುಜವನ್ನು ಅಲುಗಾಡಿಸುತ್ತಾ,
"ಏನಾಯ್ತು ಮಿಲಿಂದ್, ಏಕೆ ಹಾಗೆ ಚೀರಿದಿರಿ" ಎಂದಳು ಗಾಬರಿಯಿಂದ. ಮಾತೇ ಹೊರಡಿಸದೇ, ತನ್ನ ಕುತ್ತಿಗೆಯನ್ನು ಮತ್ತೆ ಮತ್ತೆ ಮುಟ್ಟಿ ನೋಡಿಕೊಳ್ಳುತ್ತಿದ್ದ ಅವನಿಗೆ ಕುಡಿಯಲು ನೀರು ಕೊಡುತ್ತಾ ಅವನ ಕೆನ್ನೆ ತಟ್ಟಿ ಸಮಾಧಾನ ಪಡಿಸಲೆತ್ನಿಸಿದಳು.

ಉದ್ವೇಗದಿಂದ ಅವನ ಎದೆ ವೇಗವಾಗಿ ಏರಿಳಿಯುತ್ತಿತ್ತು. ಹಲವಾರು ನಿಮಿಷಗಳ ಬಳಿಕ ಸಮಾಧಾನಗೊಂಡ ಅವನು ಸಾವಕಾಶವಾಗಿ ತನಗೆ ಬಿದ್ದ ಕನಸಿನ ವಿವರಗಳನ್ನು ತಿಳಿಸಿದ.
"ನಾನು ವಿದೇಶದಲ್ಲಿ ನಡೆಯುತ್ತಿರುವ ಅದಾವುದೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದೇನೆ. ನನ್ನ ಪ್ರಬಂಧವನ್ನು ಮಂಡಿಸಲು ಆ ಸೆಷನ್ ನ ಅಧ್ಯಕ್ಷರು ನನ್ನನ್ನು ಕರೆದಿದ್ದಾರೆ. ಆದರೆ ನಾನು ನನ್ನ ಪ್ರಬಂಧವನ್ನು ಪ್ರಸ್ತುತ ಪಡಿಸಲು ಆರಂಭಿಸಿದಾಗಿನಿಂದ ಹಿಡಿದು ಮುಗಿಸುವವರೆಗೂ, ವಿದೇಶೀ ಡೆಲಿಗೇಟ್ ಒಬ್ಬ ನನಗೆ ಅಡ್ಡಿ ಪಡಿಸುತ್ತಲೇ ಇದ್ದಾನೆ.
"ಅದು ನನ್ನ ಸಂಶೋಧನೆಯಿಂದ ಕದ್ದದ್ದು" ಎಂದು ಕೂಗಿ ಕೂಗಿ ಹೇಳುತ್ತಿದ್ದಾನೆ. ನಾನು ಅಧ್ಯಕ್ಷರಿಗೆ ದೂರಿದಾಗ ಅವರೂ ಕೂಡ ಅವನನ್ನೇ ಸಮರ್ಥಿಸುತ್ತಾ , "ಅವರು ಹೇಳುತ್ತಿರುವುದು ಸರಿಯಾಗಿದೆ ಎನಿಸುತ್ತದೆ. ನೀವು ನಿರಾಕರಿಸುವುದಾದರೆ ಅದಕ್ಕೆ ಸಮರ್ಥನೆ ನೀಡಿ" ಎನ್ನುತ್ತಿದ್ದಾರೆ.
"ಆಗಲಿ, ಸಮರ್ಥನೆ ಕೊಡುತ್ತೇನೆ. ಈ ಸಿ.ಡಿಯನ್ನು ತೋರಿಸುವುದಕ್ಕೆ ನನಗೆ ಅವಕಾಶ ಕೊಡಿ ಎಂದು ಕೇಳಿಕೊಂಡು, ಮೂರ್ತಿಯವರ ಆರನೇ ಸಿ.ಡಿ ಯನ್ನು ಹಾಕುತ್ತೇನೆ. ಪರದೆಯ ಮೇಲೆ ಒಂದು ಸಂದೇಶ ಮೂಡುತ್ತದೆ.
"ಈ ಪ್ರಬಂಧದ ಕರ್ತೃ ಇಬ್ಬರೂ ಅಲ್ಲ. ನಾನು ......" ಪರದೆಯ ಮೇಲೆ ಅಕ್ಷರಗಳು ಮೂಡುವುದಲ್ಲದೇ ಯಾರೋ ದೊಡ್ಡದಾಗಿ ಗರ್ಜಿಸಿದಂತಾಗುತ್ತದೆ ಮತ್ತು ಸಂದೇಶದ ಪಕ್ಕದಲ್ಲಿಯೇ ಮೂರ್ತಿಯವರ ಭಾವಚಿತ್ರ ಮೂಡುತ್ತದೆ.
"ಇಲ್ಲ, ಇಲ್ಲ, ಇದು ನನ್ನದೇ ಸಂಶೋಧನೆ. ನಾನು ಇವನನ್ನು ಸುಮ್ಮನೇ ಬಿಡುವುದಿಲ್ಲ" ಎಂದು ಜೋರಾಗಿ ಕೂಗುತ್ತಾ, ಆ ವಿದೇಶೀ ಡೆಲಿಗೇಟ್ ನನ್ನ ಮೇಲೆ ಆಕ್ರಮಣ ಮಾಡಿ ನನ್ನ ಕತ್ತನ್ನು ಹಿಸುಕಲಾರಂಭಿಸುತ್ತಾನೆ. ಆ ಹೊತ್ತಿಗೆ ನನಗೆ ಎಚ್ಚರವಾಯಿತು.

"ಕನಸು ತಾನೇ, ನಿಮಗೇನಾಯಿತೋ ಎಂದು ಬಹಳ ಹೆದರಿದ್ದೆ. ಮಗ್ಗುಲು ಬದಲಿಸಿ ಮಲಗಿ...." ಎಂದು ಅವನನ್ನು ಹೊರಳಿಸಿ ಮಲಗಿಸಿದಳು.
ಬೆಳಗಿನವರೆಗೂ ಹಾಸಿಗೆಯಲ್ಲಿ ಹೊರಳಾಡುತ್ತಲೇ ಕಳೆದು ಏಳು ಗಂಟೆಗೆ ಹಾಸಿಗೆಯಿಂದೆದ್ದಾಗ ಅವನ ತಲೆ ಸಿಡಿಯುತ್ತಿತ್ತು. ಒಂದು ತಲೆನೋವಿನ ಮಾತ್ರೆ ನುಂಗಿ ಲಗುಬಗೆಯಿಂದ ಆಫೀಸ್ ಗೆ ಹೋಗಲು ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ. ದಿನವೂ ಇಬ್ಬರೂ ಆಫೀಸ್ ಗೆ ಒಟ್ಟಿಗೇ ಹೊರಡುತ್ತಿದ್ದರು. ಇಬ್ಬರೂ ಕಾರಿನಲ್ಲಿ ಕುಳಿತು , ಇನ್ನೇನು ಕಾರು ಸ್ಟಾರ್ಟ್ ಮಾಡಬೇಕೆನ್ನುವಷ್ಟರಲ್ಲಿ, ಆಭಾ ಅವನನ್ನು ತಡೆದು,
"ಮಿಲಿಂದ್, ನಿನ್ನ ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಇಂದೇ ಕೊನೆಯ ದಿನ, ಹಾಗಂತ ನಿನಗೆ ಜ್ಞಾಪಿಸಲು
ಹೇಳಿದ್ದೆಯಲ್ಲಾ ?" ಎಂದು ಕೇಳಿದಳು.

"ಬಹಳ ಒಳ್ಳೇ ಕೆಲಸ ಮಾಡಿದೆ. ಇರು. ಬೇಗ ನನ್ನ ಡ್ರೈವಿಂಗ್ ಲೈಸನ್ಸ್ ತರುತ್ತೇನೆ" ಎಂದು ಧಡಬಡನೆ ಮನೆಯೊಳಕ್ಕೆ ಹೋಗಿ, ಗೋದ್ರೆಜ್ ಅಲಮಾರಿಯ ಒಳಗಿನ ಖಾನೆಯಲ್ಲಿಟ್ಟಿದ್ದ ಡ್ರೈವಿಂಗ್ ಲೈಸೆನ್ಸ್ ನ್ನು ತೆಗೆದುಕೊಳ್ಳುವಾಗ, ಆ ಖಾನೆಯಿಂದ ಮತ್ತೇನೋ ಕೆಳಗೆ ಬಿದ್ದದ್ದನ್ನು ಗಮನಿಸಿದಾಗ, ಅದು ಮೂರ್ತಿಯವರ ಆರನೇ ಸಿ.ಡಿ ಯಾಗಿದ್ದುದನ್ನು ಕಂಡು, ಬೆಳಗಿನ ಕನಸು ಮತ್ತೊಮ್ಮೆ ಕಣ್ಣ ಮುಂದೆ ಬಂದು ಒಂದು ಕ್ಷಣ ಸ್ತಂಭಿಸಿದ ಅವನು ಮರುಕ್ಷಣವೇ ಸುಧಾರಿಸಿಕೊಂಡು, ಅನುದ್ದೇಶಿತವಾಗಿ ಲೈಸೆನ್ಸ್ ಜೊತೆಗೆ ಆ ಸಿ.ಡಿ ಯನ್ನೂ ತೆಗೆದುಕೊಂಡು, ಕಾರಿನಲ್ಲಿ ಕುಳಿತು, ಗ್ಲೋವ್ ಬಾಕ್ಸಿನಲ್ಲಿ ಅವುಗಳನ್ನು ತುರುಕಿ, ಕಾರನ್ನು ಚಲಿಸಲಾರಂಭಿಸಿದ. ಆಫೀಸ್ ತಲುಪಿ, ಲೈಸೆನ್ಸ್ ಮತ್ತು ಸಿ.ಡಿ ಗಳನ್ನು ತನ್ನ ಟೇಬಲ್ ಮೇಲೆಯೇ ಇಟ್ಟುಕೊಂಡ. ಹತ್ತು ಗಂಟೆಗೆ ಸಿ.ಇ.ಒ ಅವರೊಡನೆ ಮೀಟಿಂಗ್ ಇತ್ತು. ಒಂಭತ್ತು ಗಂಟೆ ಐವತ್ತೈದು ನಿಮಿಷಕ್ಕೆ ಸಿ.ಇ.ಒ ಅವರನ್ನು ಕಾಣಲು ಹೊರಡಬೇಕೆನ್ನುವಷ್ಟರಲ್ಲಿ, ಸಿ.ಇ.ಒ ಆಫೀಸ್ ನಿಂದ ಕರೆ ಬಂದು ಮೀಟಿಂಗ್ ರದ್ದಾಗಿದೆ ಎಂದು ತಿಳಿಯಿತು. ಮೀಟಿಂಗ್ ಗಾಗಿ ಮೀಸಲಿಟ್ಟಿದ್ದ ಅರ್ಧಗಂಟೆ ಸಮಯ ಹೇಗೆ ಕಳೆಯಬೇಕೆಂದು ಯೋಚಿಸುತ್ತಿರುವಾಗ, ಮತ್ತೊಮ್ಮೆ ಆ ಆರನೇ ಸಿ.ಡಿ ಅವನ ಗಮನ ಸೆಳೆಯಿತು. ಆಯಿತು, ನೋಡಿಯೇ ಬಿಡೋಣ, ಮೂರ್ತಿಯವರ ಪತ್ರವನ್ನು ಎಂದು ಆ ಸಿ.ಡಿ. ಯನ್ನು ಕಂಪ್ಯೂಟರ್ ನಲ್ಲಿ ಹಾಕಿದ. ಪಾಸ್ ವರ್ಡ್ ಗೆ ಸೂಚನೆ ಬಂದಾಗ, ಮುರಳೀಧರರಾವ್ ಹೇಳಿದ ಸೂತ್ರವನ್ನನುಸರಿಸಿ, ಪಾಸ್ ವರ್ಡ್ ನೀಡಿದ.
ಮೂರ್ತಿಯವರ ಪತ್ರ ಕಾಣಿಸಿತು. ಅದರ ಮೇಲೆ ಕ್ಲಿಕ್ ಮಾಡಿದಾಗ, ಹಿಂದಿನಂತೆ,

"ನಿಜಕ್ಕೂ ಈ ಪತ್ರ ಓದುವ ಸಂದರ್ಭ ಬಂದಿದೆಯೇ ?" ಎಂಬ ಪ್ರಶ್ನೆ ಮೂಡಿತು.
ಅದರ ಕೆಳಗೆ ಇದ್ದ, ಹೌದು ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಮೂರ್ತಿಯವರ ಪತ್ರ ತೆರೆದುಕೊಂಡಿತು. ಆ ಪತ್ರವನ್ನು ಓದುತ್ತಾ ಹೋದಂತೆ, ಮಿಲಿಂದನಲ್ಲಿ ಹೇಳಲಾರದಷ್ಟು ಬಗೆಯ ಭಾವನೆಗಳು ಸ್ಫುರಿಸಿದುವು. ಪತ್ರ ಓದಿ ಮುಗಿಸುತ್ತಿದ್ದಂತೆಯೇ, ಪೋನನ್ನು ಕೈಗೆತ್ತಿಕೊಂಡು,
"ಆಭಾ, ತಕ್ಷಣವೇ ಅರ್ಧ ದಿನ ರಜೆ ಹಾಕಿ ಇಲ್ಲಿಗೆ ಬಾ. ತುಂಬಾ ಇಂಪಾರ್ಟೆಂಟ್ ವಿಷಯ ನಿನಗೆ ತೋರಿಸುವುದಿದೆ" ಎಂದು ಹೇಳಿದ.

ತನಗೂ ಅರ್ಧದಿನದ ರಜೆ ಬೇಕೆಂದು ಕೇಳಿಕೊಂಡು, ಆಭಾ ಬಂದೊಡನೆ, ಆತುರಾತುರವಾಗಿ ಅವಳ ಕೈ
ಹಿಡಿದು, ಅವನ ವರ್ತನೆಯಿಂದ ಚಕಿತಳಾಗಿದ್ದ ಅವಳನ್ನು ಹೆಚ್ಚೂ ಕಡಿಮೆ ಎಳೆದುಕೊಂಡೇ ಹೊರಟ. ದಾರಿಯಲ್ಲಿ ಅವಳು ಏನು ಕೇಳಿದರೂ, "ಮನೆಯಲ್ಲಿ ನೀನೇ ನೋಡುವಿಯಂತೆ" ಎಂದು ಮಾತ್ರ ಹೇಳುತ್ತಿದ್ದ ಅವನ ವರ್ತನೆ ಅವಳಿಗೆ ಆತಂಕ ಮೂಡಿಸಿದರೂ ಅವನ ಮುಖದ ಮೇಲೆ ಯಾವುದೇ ವ್ಯಗ್ರತೆಯಿರದೇ ಇದ್ದುದರಿಂದ, ಕೆಟ್ಟ ಸಮಾಚಾರವೇನೂ ಇರಲಾರದು ಎಂದು ಊಹಿಸಿ ಸಮಾಧಾನವಾಗಿದ್ದಳು.

ಮನೆಯ ಮುಂದೆ ರಸ್ತೆಯಲ್ಲಿಯೇ ಕಾರು ನಿಲ್ಲಿಸಿ, ಮತ್ತೊಮ್ಮೆ ಅವಳನ್ನು ಎಳೆದುಕೊಂಡು, ಮನೆಯೊಳಕ್ಕೆ ಹೋಗಿ, ತನ್ನ ಲ್ಯಾಪ್ ಟಾಪ್ ತೆಗೆದು ಮೂರ್ತಿಯವರ ಸಿ.ಡಿ ಯನ್ನು ಹಾಕಿದ. ಪರದೆಯ ಮೇಲೆ ಕಾಣಿಸಿದ ಮೂರ್ತಿಯವರ ಪತ್ರವನ್ನು ಅವಳಿಗೆ ಓದಲು ಹೇಳಿ, ಅವಳು ಓದಿ ಮುಗಿಸುವವರೆಗೂ ಶತಪಥ ಹಾಕಲಾರಂಭಿಸಿದ.

"ಪ್ರಿಯ ಮಿಲಿಂದ್, ಈ ಪತ್ರ ನೀನು ಓದಬೇಕಾಗಿ ಬಂದಿರುವ ಸಂದರ್ಭ ಯಾವುದೆಂದು ನನಗೆ ತಿಳಿಯದಿದ್ದರೂ, ಈ ಹಂತದಲ್ಲಿ ನಿನಗೆ ನಾನು ಕೆಲವು ಮಹತ್ವದ ವಿಚಾರಗಳನ್ನು ತಿಳಿಸಲೇ ಬೇಕು. ನನ್ನ ಸಂಶೋಧನೆ ವೈದ್ಯಕೀಯ ವಿಜ್ಞಾನದಲ್ಲಿ ಒಂದು ಮೈಲಿಗಲ್ಲೆಂದು ನಮಗಿಬ್ಬರಿಗೂ ತಿಳಿದಿದೆ. ಯಾವುದೇ ವಿಜ್ಞಾನದ ಮೈಲಿಗಲ್ಲಾಗಬಹುದಷ್ಟು ಮಹತ್ವದ ಸಂಶೋಧನೆಯನ್ನು ಸಂಪೂರ್ಣವಾಗಿ ಒಬ್ಬ ವ್ಯಕ್ತಿಯೇ ಮಾಡಲಾರನೆಂಬುದು ನಿನಗೂ ತಿಳಿದೇ ಇದೆ. (ಓಹ್, ಮಿಲಿಂದ್ ಎಣಿಸಿದಂತೆ ಈ ಸಿ.ಡಿ ಯಲ್ಲಿ ಮೂರ್ತಿಯವರು ತಮ್ಮ ತಪ್ಪೊಪ್ಪಿಕೊಂಡಿದ್ದಾರೆ !) ಇದಕ್ಕೆ ನಾನೂ ಹೊರತಲ್ಲ.
ಈ ಸಂಶೋಧನೆ ರೂಪ ತಳೆದ ಬಗ್ಗೆ ನಿನಗೆ ವಿಸ್ತಾರವಾಗಿ ನಾನು ತಿಳಿಸಬೇಕು. ಸುಮಾರು ಏಳು ವರ್ಷಗಳ ಹಿಂದೆ ನಾನು ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾಗ, ಪಿ. ಎಚ್.ಡಿ ಅಭ್ಯರ್ಥಿಯೊಬ್ಬನ ಥೀಸಿಸ್ ಒಂದನ್ನು ವಿಶ್ವವಿದ್ಯಾಲಯದವರು ನನಗೆ ಮೌಲ್ಯಮಾಪನಕ್ಕಾಗಿ ಕಳುಹಿಸಿದ್ದರು. ಆ ಪಿ.ಎಚ್.ಡಿ ಅಭ್ಯರ್ಥಿಯ ಗೈಡ್ ಒಬ್ಬ ಅಪ್ರಾಮಾಣಿಕನೆಂದು ನನಗೆ ತಿಳಿದಿತ್ತು. (ವಾಹ್,ಒಬ್ಬ ಅಪ್ರಾಮಾಣಿಕ ವ್ಯಕ್ತಿಯಿಂದ ಇನ್ನೊಬ್ಬನ ಅಪ್ರಾಮಾಣಿಕತೆಯ ಬಗ್ಗೆ ವ್ಯಾಖ್ಯಾನ !) ಸಾಮಾನ್ಯವಾಗಿ, ಪಿ.ಎಚ್.ಡಿ ಪ್ರಬಂಧವನ್ನು ಮೌಲ್ಯಮಾಪನ ಮಾಡುವಾಗ, ಆ ಅಭ್ಯರ್ಥಿಯ ಕಚ್ಚಾ ಟಿಪ್ಪಣಿಗಳನ್ನು ( rough notes) ಕೇಳುವುದಿಲ್ಲ. ಆದರೆ, ಈ ಪ್ರಬಂಧದ ಪ್ರಾಮಾಣಿಕತೆಯ ಬಗ್ಗೆ ನನಗೆ ಅನುಮಾನವಿದ್ದುದರಿಂದ, ಕಚ್ಚಾ ಟಿಪ್ಪಣಿಗಳನ್ನು ಸಲ್ಲಿಸುವಂತೆ ಆದೇಶಿಸಿದೆ. ಅಂತೆಯೇ ಆ ಅಭ್ಯರ್ಥಿ ಅವುಗಳನ್ನು ಸಲ್ಲಿಸಿದಾಗ ನನಗೊಂದು ಅಚ್ಚರಿ ಕಾದಿತ್ತು. ಅದೊಂದು ಪ್ರಾಮಾಣಿಕ ಅಧ್ಯಯನವೆಂದು ನನಗೆ ಮನವರಿಕೆಯಾಯಿತು. ಆ ಗೈಡ್ ಅಪ್ರಮಾಣಿಕನೆಂಬುದು ನಿಜವಾದರೂ, ಆ ಅಭ್ಯರ್ಥಿ ಮಾತ್ರ ಪ್ರಾಮಾಣಿಕ ಪ್ರಯತ್ನ ಮಾಡಿರಬಹುದೆಂದು ನಾನು ಯೋಚಿಸಿರಲೇ ಇಲ್ಲ , ನನ್ನ ಪೂರ್ವಾಗ್ರಹ ಪೀಡಿತ ಯೋಚನೆಯಿಂದ.

ಆ ಟಿಪ್ಪಣಿಗಳಲ್ಲಿ ಒಂದಲ್ಲ, ಎರಡು ಅಚ್ಚರಿಗಳಿದ್ದುವು. ಆ ಕಚ್ಚಾ ಟಿಪ್ಪಣಿಗಳನ್ನು ನಾನು ಸ್ವತಂತ್ರವಾಗಿ ವಿಶ್ಲೇಷಣೆ ಮಾಡಿದಾಗ, ನನ್ನ ಸಂಶೋಧನೆಯ ಬೀಜ ದೊರೆತಿತ್ತು. ಆ ಅಭ್ಯರ್ಥಿ ದೇಹದ ವಿವಿಧ ಜೀವಕೋಶಗಳಲ್ಲಿನ ಸೂಪರ್ ಆಕ್ಸೈಡ್ ಡಿಸ್ಮುಟೇಸ್ (ಎಸ್.ಡಿ) ಅಂಶವನ್ನು ಅಳೆದಿದ್ದ. ಜೀವಕೋಶಗಳ ವಯಸ್ಸಿಗೂ ಮತ್ತು ಅವುಗಳಲ್ಲಿನ ಎಸ್.ಡಿ ಯ ಮಟ್ಟಕ್ಕೆ ತಾಳೆ ಹಾಕುವ ಪ್ರಯತ್ನವನ್ನೂ ಅವನು ಮಾಡಿದ್ದರೂ, ಅವೆರಡರ ಮಧ್ಯೆ ನೇರ ಸಂಬಂಧವನ್ನು ಕಾಣದೇ ಆ ಅಂಶಕ್ಕೆ ಅವನು ಮಹತ್ವ ಕೊಟ್ಟಿರಲಿಲ್ಲ. ಅಷ್ಟಲ್ಲದೇ ಅವನ ಅಧ್ಯಯನದ ಉದ್ದೇಶಗಳಲ್ಲಿ ಈ ಅಂಶವಿರಲಿಲ್ಲವಾದ್ದರಿಂದ ಅದರ ಬಗ್ಗೆ ಅವನು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲಿಲ್ಲಾ ಎಂದು ಕಾಣುತ್ತದೆ. ಅವನು ನಿರ್ಲಕ್ಷಿಸಿದ್ದ ಒಂದೆರಡು ವೇರಿಯಬಲ್ಸ್ ಗಳನ್ನು ಗಮನಿಸಿದ ನಾನು ಅದಕ್ಕಾಗಿಯೇ ಸೂಕ್ತ ರಿಗ್ರಷನ್ ಫಾರ್ಮುಲಾ ವನ್ನು ಬಳಸಿ ವಿಶ್ಲೇಷಿಸಿದಾಗ, ವ್ಯಕ್ತಿಯ ವಯಸ್ಸಿಗೂ, ಜೀವಕೋಶಗಳಲ್ಲಿನ ಎಸ್.ಡಿ ಮಟ್ಟಕ್ಕೂ ಸಂಬಂಧವಿರುವುದು ಕಂಡುಬಂತು. ಪ್ರತಿ ವ್ಯಕ್ತಿಯ ಜೀವಕೋಶಗಳಲ್ಲಿನ ಎಸ್.ಡಿ ಚೈತನ್ಯವು (activity) ಆ ವ್ಯಕ್ತಿಗೆ ವಯಸ್ಸಾದಂತೆಲ್ಲಾ ಕ್ರಮೇಣ ಕಡಿಮೆಯಾಗಿ ಒಂದು ನಿರ್ದಿಷ್ಟ ಮಟ್ಟಕ್ಕೆ ಇಳಿದಾಗ ಇದ್ದಕ್ಕಿದ್ದಂತೇ, ಜೀವಕೋಶಗಳಲ್ಲಿನ ಹಾನಿಕಾರಕ ಕಿಣ್ವಗಳಲ್ಲಿ ಒಂದು ಬಗೆಯ ಕ್ಯಾಸ್ಕೇಡ್ (cascade) ಪರಿಣಾಮ ಉಂಟಾಗಿ ಆ ಜೀವಕೋಶದ ಸಾವುಂಟಾಗುತ್ತದೆ ಎಂಬ ನಿರ್ಧಾರಕ್ಕೆ ನಾನು ಬಂದೆ. ಒಂದು ವೇಳೆ, ಒಬ್ಬ ವ್ಯಕ್ತಿಯ ಜೀವಕೋಶಗಳಲ್ಲಿನ ಎಸ್.ಡಿ ಚೈತನ್ಯ ಆ ಕ್ರಿಟಿಕಲ್ ಮಟ್ಟಕ್ಕೆ ಯಾವಾಗ ಕುಸಿಯುತ್ತದೆ ಎಂಬುದನ್ನು ಕಂಡುಕೊಂಡರೆ, ಆ ವ್ಯಕ್ತಿಯ ಅಂತಿಮ ದಿನವನ್ನೂ ಲೆಕ್ಕಹಾಕಬಹುದೆಂಬ ಅಂಶ ನನಗೆ ಹೊಳೆಯಿತು. ಈ ಅಂಶವನ್ನು ಪ್ರಮಾಣಿಸಿ ತೋರಿಸಿ ಪರಿಪೂರ್ಣವಾಗಿ ಸಂಶೋಧಿಸಬೇಕಾದರೆ, ಬಹಳಷ್ಟು ಸಮಯ, ಬಹಳಷ್ಟು ಸಂಶೋಧಕ ಸಿಬ್ಬಂದಿ ಬೇಕಾಗುತ್ತದೆಯೆಂಬುದು ನನಗೆ ತಿಳಿದಿತ್ತು.

ಆಗ ನನಗೊಂದು ಯೋಚನೆ ಹೊಳೆಯಿತು.ನಾನು ಮಾಡಬೇಕಾದ ಸಂಶೋಧನೆಯನ್ನು ಕೆಲವು ಹಂತಗಳನ್ನಾಗಿ ವಿಂಗಡಿಸಿ, ಪ್ರತಿಯೊಂದು ಹಂತದ ತುಣುಕು ಸಂಶೋಧನೆಗಳ ನಕ್ಷೆಯನ್ನು ತಯಾರಿಸಿದೆ ನಮ್ಮ ದೇಶದಲ್ಲಲ್ಲದೆ, ವಿದೇಶಗಳಲ್ಲೂ ಪಿ.ಎಚ್.ಡಿಗೆ ಗೈಡ್ ಆಗಿರುವ ಅನೇಕ ಮಿತ್ರರಿದ್ದಾರೆ. ಅವರ ಬಳಿ ಅಭ್ಯಸಿಸುತ್ತಿರುವ ಅಭ್ಯರ್ಥಿಗಳಿಗೆ ನನಗೆ ಬೇಕಾದ ವಿಷಯಗಳ ತುಣುಕುಗಳನ್ನು ಅಧ್ಯಯನಕ್ಕೆ ಕೊಡುವಂತೆ ಸೂಚಿಸಿ ಅಧ್ಯಯನದ ನಂತರ ಫಲಿತಾಂಶಗಳನ್ನು ನನಗೆ ತಿಳಿಸುವಂತೆ ಕೇಳಿಕೊಂಡೆ. ನಾನು ನನ್ನ ಮಿತ್ರರಿಗೆ ಸೂಚಿಸಿದ ಅನೇಕ ತುಣುಕು ಸಂಶೋಧನೆಗಳು ಒಂದೇ ವಿಷಯಕ್ಕೆ ಸಂಬಂಧಿಸಿದುವು ಎಂಬುದು ಅವರಿಗೆ ತಿಳಿದಿರಲಿಲ್ಲ. ಅವರೆಲ್ಲರಿಂದ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿದಾಗ, ಒಬ್ಬ ವ್ಯಕ್ತಿಯ ಅಂತಿಮ ದಿನವನ್ನು ಸುಮಾರು ಹತ್ತು ದಿನಗಳ ಅಂತರದಲ್ಲಿ ನಿರ್ಧರಿಸಬಹುದು ಎಂದು ತಿಳಿದುಬಂತು. ಈ ಹಿನ್ನೆಲೆಯನ್ನು ನಿನಗೆ ತಿಳಿಸುವ ಉದ್ದೇಶವೆಂದರೆ, ಒಂದು ವೇಳೆ ನನ್ನ ಸಂಶೋಧನೆಯನ್ನು ಯಾವುದೇ ಕಾರಣಕ್ಕಾಗಿ ಪ್ರಕಟಿಸುವ ಸಂದರ್ಭ ಬಂದಲ್ಲಿ ಈ ಸಂಶೋಧನೆಗೆ ತಮಗರಿವಿಲ್ಲದೇ ತಮ್ಮ ಕಾಣಿಕೆಯಾಗಿ ನೀಡಿದ ಆ ಎಲ್ಲ ಅಭ್ಯರ್ಥಿಗಳಿಗೆ ದೊರೆಯಬೇಕಾದ ಮನ್ನಣೆಯಿಂದ ಅವರು ವಂಚಿತರಾಗದಿರಲಿ ಎಂಬ ಉದ್ದೇಶದಿಂದ..................." ತಮ್ಮ ಸಂಶೋಧನೆಯಲ್ಲಿ ಕೈಜೋಡಿಸಿದ ಇತರ ಸಂಶೋಧಕರು ಮಾತ್ರವಲ್ಲದೇ, ಕೇಶವ ಪೈಗಳ ಐ.ಸಿ.ಯು ನರ್ಸ್ ಶಾಂತಾಸುಕುಮಾರ ಳಂತೆ ಕಿಂಚಿತ್ ಸಹಾಯವನ್ನು ಮಾಡಿದ ಪ್ರತಿಯೊಬ್ಬರನ್ನೂ ಹೆಸರಿಸಿ ಅವರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದರು.

ಈ ಸಾಲು ಓದುವ ವೇಳೆಗೆ ಆಭಾಳ ಕಣ್ಣುಗಳು ತುಂಬಿ ಬಂದು ಪರದೆಯ ಮೇಲಿನ ಅಕ್ಷರಗಳು ಮಸುಕಾಗತೊಡಗಿದುವು. ಮಿಲಿಂದ್ ನನ್ನು ಅವಳ ಕಣ್ಣುಗಳು ಅರಸಿದಾಗ ಅವನು ಮುರಳೀಧರ ರಾವ್ ಜೊತೆ ಉದ್ವೇಗದಿಂದ ಬಿಕ್ಕಳಿಸಿಕೊಂಡು ಮಾತನಾಡುತ್ತಿರುವುದು ಕಾಣಿಸಿತು.
"ವಂದಿಸುವುದಾದಿಯಲಿ ಡಾಕ್ಟರ್ ಮೂರ್ತಿಯವರ" ಎಂದು ಆ ದಿನ ಮಿಲಿಂದ್ ಉಲಿದುದು ಅವಳ ಕಿವಿಗಳಲ್ಲಿ ಮತ್ತೊಮ್ಮೆ ಭೋರ್ಗರೆದು ಕೇಳಿಸಿತು.

*************************************** ***********************************

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಂಸ ಹಾಡುವ ಹಾಡು ನೀಳ್ಗತೆ ತುಂಬಾ ಚೆನ್ನಾಗಿ ಮೂಡಿ ಬಂದಿತು. ಕೊನೆಯಲ್ಲಿ ಮೂರ್ತಿಯವರ ಪತ್ರ ಹೃದಯ ಸ್ಪರ್ಶಿ ಯಾಗಿದೆ. ವಿಜ್ಞಾನದ ಯಾವುದೇ ಪ್ರಯೋಗ ಅಥವಾ ಸಂಶೋಧನೆ ಸಮಾಜ ಮುಖಿಯಾಗಿರ ಬೇಕಾದ ಅಗತ್ಯ , ಒಂದು ಸಂಶೋಧನೆ ಹೇಗೆ ಸಾಮಾಜಿಕವಾಗಿ ಪರಿಣಾಮ ಬೀರಬಹುದು ಮುಂತಾದ ಅನೇಕ ವಿಷಯಗಳು ಕತೆಯಲ್ಲಿ ನಿರೂಪಿತವಾಗಿದೆ.ವೈದ್ಯ ರೋಗಿ ಸಂಭಂಧ , ಗುರು ಶಿಷ್ಯ ರು , ಮುಂತಾದ ಅನೇಕ ವಿಷಯಗಳು ನಿಮ್ಮ ಅನುಭವದ ಹಿನ್ನಲೆಯಲ್ಲಿ ಹೃದಯ ಸ್ಪರ್ಶಿಯಾಗಿ ಹರಿದಿದೆ. ಮೊದಲಿಂದ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಬಂದ ಈ ನೀಳ್ಗತೆ ನಿಮ್ಮಿಂದ ನಾವು ಇನ್ನೂ ಹೆಚ್ಚಿನ ಬರವಣಿಗೆಗಳನ್ನು ನಿರೀಕ್ಷಿಸಿದರೆ ಅದು ನಮ್ಮ ತಪ್ಪಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಕಾಂತ್ ನಿಮ್ಮ ಅಭಿಮಾನದ ನುಡಿಗಳಿಗೆ ಕೃತಜ್ಞತೆಗಳು. ಕಳೆದೆರಡು ದಿನಗಳಿಂದ ಪ್ರವಾಸದಲ್ಲಿದ್ದುದರಿಂದ ತಕ್ಷಣವೇ ಉತ್ತರಿಸಲಾಗಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಾಬುರವರೆ ಹಂಸ ಹಾಡುವ... ಕಥೆ ಕಡೆಯವರೆಗು ತಮ್ಮ ಕುತೂಹಲ ಉಳಿಸಿಕೊಂಡಿತ್ತು, ಕಡೆಯಲ್ಲಿ ಕೃತಿಚೌರ್ಯವೆಂದಾಗ ಬೇಸರವೆನಿಸಿತ್ತು, ನಂತರ ಕೊಂಚ ಸಮಾದಾನ ಆದರೆ ಕಡೆಯಲ್ಲಿ ಸಂಶೋದನೆ ಪ್ರಕಟಗೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಯ್ತು ! ಉತ್ತಮ ನಿರೂಪಣೆ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ಪಾರ್ಥಸಾರಥಿಯವರಿಗೆ, ತಮ್ಮ ನಿರಂತರ ಪ್ರೋತ್ಸಾಹಕ್ಕೆ ಕೃತಜ್ಞತೆಗಳು. . ಕಳೆದೆರಡು ದಿನಗಳಿಂದ ಪ್ರವಾಸದಲ್ಲಿದ್ದುದರಿಂದ ತಕ್ಷಣವೇ ಉತ್ತರಿಸಲಾಗಲಿಲ್ಲ. ತಮ್ಮ ಸಂಶೋಧನೆಯ ಪ್ರಕಟಣೆಗೆ ಡಾ ಮೂರ್ತಿಯವರಿಗೆ ಯಾವ ಅಳುಕಿತ್ತೋ ನನಗೂ ಅದೇ ಅಳುಕಿದ್ದುದರಿಂದ ಕತೆಯನ್ನು ಹಾಗೆ ಮುಕ್ತಾಯ ಮಾಡಬೇಕಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಮೇಶ್ ಅವರೇ, ಉತ್ತಮ ಕಥೆ ಒದಗಿಸಿದ ನಿಮಗೆ ಧನ್ಯವಾದಗಳು. ಚೆನ್ನಾಗಿ ಕಥೆ ಹೆಣೆದಿದ್ದಿರಿ. ಕಥೆ ಇಷ್ಟವಾಯಿತು , ಬಹಳಷ್ಟು ಬಯೋಲೋಜಿಕಲ್ ಪದಗಳ ಪರಿಚಯ ಮತ್ತು ಅವುಗಳ ಕುರಿತು ಮಾಹಿತಿ ಸಿಕ್ಕಂತಾಯಿತು. ಇಂತಹ ಹಲವು ಕಥೆಗಳು ನಿಮ್ಮಿಂದ ಬರಲಿ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ಕಾಮತ್ ಕುಂಬ್ಳೆಯವರೆ, ತಮ್ಮ ನಿರಂತರ ಪ್ರೋತ್ಸಾಹಕರ ನುಡಿಗಳಿಗೆ ಕೃತಜ್ಞತೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕತೆಯ ಪ್ರತಿ ಎಳೆಯೂ ಹೊಸತನದಿಂದ ಕೂಡಿತ್ತು. ನಿರೂಪಣೆಯ ಶೈಲಿಯಂತೂ ತುಂಬಾನೇ ಹಿಡಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ಸಾದೇಶರವರಿಗೆ ತಮ್ಮ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ಕೃಷ್ಟ ಭಾಷೆಯಲ್ಲಿ ವೈದ್ಯಕೀಯ ಜ್ಞಾನವನ್ನು ತಿಳಿಸಿದ, ಕೂಟೂಹಲ ಕೆರಳಿಸಿದ ಉತ್ತಮ ಕಥೆಗೆ ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಮತಿ ನಾಗರತ್ನರವರೆ, ತಾವೂ ಕೂಡ ಮೊದಲಿನಿಂದಲೂ ಪ್ರೋತ್ಸಾಹಿಸುತ್ತಾ ಬಂದಿದ್ದೀರಿ. ಕೃತಜ್ಞತೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಕಥೆ. ಮುಖ್ಯವಾಗಿ ಬಳಸಿದ ಕಥೆಯ ವ್ಯಾಪ್ತಿ ಬಹಳ ಇಷ್ಟವಾಯಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ಸಂತೋಷ್ ರವರೆ, ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಮೇಶ್ ಬಾಬು ಅವರೇ ಮೊದಲ ಕಂತಿನಿಂದ ಕೊನೆಯ ಕಂತಿನವರೆಗೂ ಕುತೂಹಲಕಾರಿಯಾಗಿ ಮೂಡಿ ಬಂತು "ಹಂಸ ಹಾಡುವ...". ಉತ್ತಮ ಕಥೆಯೊಂದನ್ನು ಕೊಟ್ಟಿದ್ದಕ್ಕೆ ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ಜಯಂತ್ ರಾಮಾಚಾರ್ ಅವರಿಗೆ, ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಾರ್ ಬಹಳ ಉನ್ನತವಾದ ಬರವಣಿಗೆ .... ಒಂದೆ ಓದಿಗೆ ಎಲ್ಲ ಭಾಗಗಳನ್ನು ಓದಿ ಮುಗಿಸಿಬಿಟ್ಟೆ .. ... ಕಥೆ ಎಲ್ಲು ಓಟವನ್ನು ಕಳೆದುಕೊಳ್ಳದೆ ಕುತೂಹಲವನ್ನು ಹೆಚ್ಚಿಸುತ್ತಲೆ ಹೋಯಿತು ... ಬಹಳ ಬಹಳ ಇಷ್ಟವಾಯಿತು .. ತುಂಬಾ ದಿನಗಳ ನಂತರ ಒಂದು ಉತ್ತಮ ಅಂಕಣವನ್ನು ಓದಿದ ಖುಷಿಯಲ್ಲಿ ... pramod
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮ್ಮ ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸರ್ , ಅದ್ಭುತ ವೈಜ್ಞಾನಿಕ ಕಥೆ! ನಿಮ್ಮಿಂದ ಇನ್ನಷ್ಟು ಕತೆಗಳನ್ನು ಎದುರುನೋಡುತ್ತೇವೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಕಾಂತ್ ರವರೆ, ತಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.