ಹಾಸ್ಟೆಲಿನ ಆ ದಿನಗಳು

4.444445

                                                                                                                           ಹಾಸ್ಟೆಲಿನ ಆ ದಿನಗಳು
ಎಲ್ಲರಿಗೂ ನೆನಪುಗಳು ಏನೋ ಒಂಥರಾ ಹಿತ, ಅವು ಯಾವಾಗ್ಲೂ ಕಾಣ್ತಾ ಕಾಡ್ತಾ ಇರ್ಬಹುದು, ನನಗೂ ಅಷ್ಟೇ ನನ್ನ ಹಾಸ್ಟೆಲಿನ ನೆನಪುಗಳು ಯಾವಾಗಲೂ ಅತಿ ಮಧುರ, ಅವೆಲ್ಲವು ಪಂಚರಂಗಿ ನೆನಪುಗಳು, ಅವು ಈಗ ವಿವಿಧ ರಂಗಿನ ಅಮೂರ್ತ ನೆನಪುಗಳು,ಕೆಲವು ಲೇಖನಿಯಲ್ಲಿ ಮಾತಾಡಿದ್ರೆ, ಕೆಲವು ಎದೆಯಲ್ಲಿ ಇಂಗಿಹೋಗ್ತಾವೆ, ಹೆಂಗೆಂಗೋ ಜ್ಞಾಪಿಸಿಕೊಂಡು ಕೆಲವನು ಹಂಚಿಕೊಳ್ತಾ ಇದ್ದೀನಿ.
                ಅರೆಬರೆ ಒಗೆದ ಬಟ್ಟೆಗಳು/ಉಜ್ಜಿದರೂ ಪಾಚಿಗಟ್ಟಿದ ಹಲ್ಲುಗಳು/ಮಣ್ಣಿದ್ದರೂ ಮಲಗುವ ಮಂಚಗಳು/ಶೌಚಾಲಯವಿದ್ದರು ತೋಪಿಗೋಗುವ ಬಕೆಟ್ಟು, ಬಾಟಲು, ಚಂಬುಗಳು/ಭಾನುವಾರದ ಆ ಅಲೆದಾಟಗಳು, ಕ್ರಿಕೆಟ್ ಆಟಗಳು/ಪಕ್ಕದ ಮಾವಿನ ತೋಪಿನಲ್ಲಿ ಉದುರಿಸಿದ ಎಳಚಿ ಹಣ್ಣುಗಳು, ಎಗರಿಸಿದ ಮಾವಿನ ಕಾಯಿಗಳು/ತಿರುಗಾಡುವಾಗ ತಿಂದ ಬೋರೆಹಣ್ಣುಗಳು, ನೇರಳೆ ಹಣ್ಣುಗಳು, ಜೊತೆಯಲ್ಲಿ ಕಾಲಿಗಾದ ಹುಣ್ಣುಗಳು/ಮಾಸ್ತರ ಕೈಗೆ ಸಿಕ್ಕಿ ತಿಂದ ಅದೆಷ್ಟೋ ಒದೆಗಳು/ಟ್ರಂಕುಗಳಲ್ಲಿ ಅಡ್ಡಾದಿಡ್ಡಿ ಬಿದ್ದ ಬಟ್ಟೆಗಳು, ಜೊತೆಯಲ್ಲಿ ಮೀಸೆ ತೀಡುವ ಜಿರಳೆಗಳು, ಅಲ್ಲಲ್ಲಿ ಬಿದ್ದ ಹಲ್ಲಿ ಮೊಟ್ಟೆಗಳು/ ಮಾಕ್ರ್ಸುಗಳು ಎರಡಂಕಿ ದಾಟದಾದಾಗ ಇಂಗ್ಲೀಷ್ ಮಾಸ್ತರ ಕೈಯಲ್ಲಿ ಬಿದ್ದ ಹೊಡೆತಗಳು, ಜೊತೆಯಲ್ಲಿ ನೋವುಗಳು/ಕಾಂಪೌಂಡ್ ಗೋಡೆ ಧುಮುಕಿ ಮುನಿರೆಡ್ಡಿ ಅಂಗಡಿಯಲ್ಲಿ ಎಗರಿಸಿದ ಚಾಕೋಲೇಟ್‍ಗಳು, ಶೆಟ್ಟಿ ಅಂಗಡಿಯಲ್ಲಿ ತಿಂದ ಬೋಂಡಾ ವಡೆಗಳು/ಪಕ್ಕದವನ ಪೆಟ್ಟಿಗೆಯಲ್ಲಿ ಎಗರಿಸಿದ ನೋಟುಗಳು, ತಿಂಡಿಗಳು, ಸಿಕ್ಕಿ ಹೋದಾಗ ಮರೆತ ಆ ಅವಮಾನಗಳು.

              ಪಕ್ಕದಲ್ಲೇ ಹುಡುಗಿಯರಿದ್ದರೂ ಮಾತಾಡದ ಆ ನಸುನಗೆಯ ಮೌನಗಳು/ಕರೆಂಟು ಹೋದಾಗಿನ ಸಮಯದ ಕತ್ತೆರಾಗದ ಆ ಅಂತ್ಯಾಕ್ಷರಿ, ವಸಂತದೂತನ  ರಾಗಗಳು/ಜಗದೀಶನ ಪ್ರತಿದಿನದ ‘ಮೊಟ್ಟೆಯೊಳಗಿನ ಕೋಳಿಮರಿ’ ಹಾಡು/ಅವನ ನೋಡಿ ಮುಖ ಸಿಂಡರಿಸುವ ಅದೆಷ್ಟೋ ಮುಖಗಳು/ರಜೆಗೆ ಊರಿಗೋಗುವಾಗಿನ ಆ ಸಂಭ್ರಮಗಳು/ನಕ್ಕು ನಗಿಸುವ ಆ ಅಡ್ಡಹೆಸರುಗಳು, ಹೆಸರಿಗೆ ತಕ್ಕಂತಿರದ ಆ ಮುಖಗಳು/ನೀಲಗಿರಿ ತೋಪಿನಲ್ಲಿ ಮಾತಾಡಿದ ಆ ಹೊತ್ತುಗಳು, ಮಲಗಿ ನಿದ್ರೆಹೋದ ಅನೇಕ ದಿನಗಳು/ಅಡುಗೆ ಮನೆಯಲ್ಲಿ ಎಗರಿಸಿದ ಬೆಂದ ಬಟಾಣಿಗಳು, ಪುಳಿಯೋಗರೆ ಗೊಜ್ಜುಗಳು, ಹಂಚಿಕೊಂಡು ತಿಂದ ಊಟದ ಸಮಯಗಳು/ಪಕ್ಕದ ಶಾಲೆಯಲ್ಲಿ ಕದ್ದು ತಂದ ಹಲಸಿನ ಹಣ್ಣುಗಳು, ಸರಿಯಾಗಿ ಹಂಚಲಿಲ್ಲವೆಂದು ಮುನಿಸಿಕೊಂಡ ಆ ದಿನಗಳು/ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಕದ್ದು ನೋಡಿದ ಅರ್ಥವಾಗದ ಹಿಂದಿ ಸಿನಿಮಾಗಳು/ಕಂಪ್ಯೂಟರ್ ಕೊಠಡಿಯಲ್ಲಿ ಕದ್ದು ಆಡಿದ ಗೇಮ್‍ಗಳು, ಕೇಳಿದ ಹಾಡುಗಳು, ನೋಡಿದ ಸಿನಿಮಾಗಳು/ಕಾಲಿನಡಿಯ ಚರ್ಮವ ತಿಂದ ರ್ಯಾಟ್‍ಗಳು, ಮೂಲೆಯಲ್ಲಿ ಮುದುಡಿ ಬಿದ್ದ ಬ್ಯಾಟ್‍ಗಳು.
                      

             ಅಡುಗೆ ಮನೆಯ ಪಕ್ಕದ ಚರಂಡಿಗೆ ಎಸೆದ ರಾಗಿಬಾಲ್‍ಗಳು, ನೀರಿನಲ್ಲಿ ಹರಿದು ಹೋದ ರಸಂಗಳು/ಬೆಳಗಿನ ತಿಂಡಿಗೆÀ ಬೆರೆಸಿದ ರಾತ್ರಿಯ ಅನ್ನದ ಅಗಳುಗಳು/ಮಜ್ಜಿಗೆಯಲ್ಲಿ ಕಾಣಿಸಿದ ಹುಳುಗಳು, ಪಕ್ಕೆತ್ತಿ ತಿಂದ ಆ ದಿನಗಳು/ತಟ್ಟೆಯ ಪಕ್ಕದಲ್ಲೆ ಬೆಟ್ಟದಂತೆ ಬಿದ್ದ ಬಾಡಿ ಬೆಂದ ತರಕಾರಿಗಳು/ಕುಳಿತಿರಲು ಮನಸೇ ಬಾರದ ಮಜಾಕ್ ಟೈಲ್ಸ್‍ಗಳು/ಅಡುಗೆ ಮನೆಯ ಮುಂದಿನ ಹುಂಚೀ ಮರಕ್ಕೆ ಎಸೆದ ಕಲ್ಲುಗಳು, ಪುಡಿಯಾದ ಗಾಜುಗಳು/ಮುರಿದುಬಿದ್ದ ಕಸದ ಬುಟ್ಟಿಗಳು, ಅವೇ ಗೋಲು ಪೆಟ್ಟಿಗೆಗಳು/ಪುಟ್ಬಾಲ್ ಆಟಕೆ ಒಡೆದ ಗಾಜುಗಳು, ಇನ್ನು ಹಲವು ಮೋಜುಗಳು/ಪಾಚಿ, ಹುಳುಗಳು, ಆ ನೀರ ಸಂಪುಗಳು, ಟೈಮಿಲ್ಲವೆಂದು ಕುಡಿದ ಅದೇ ನೀರುಗಳು/ವಾರಕ್ಕಲ್ಲದಿದ್ದರು, ತಿಂಗಳಿಗೊಮ್ಮೆಯಾದರೂ ಸ್ನಾನ ಮಾಡುವ ಮೈಗಳು, ತೊಳೆಯದೇ ಉಳಿದ ಕೈ ಕಾಲುಗಳು/ರೂಮಿನಲಿ ಯಾಲಾಡುವ ಬಟ್ಟೆಗಳು/ಗಾಳಿಯೇ ಬೀಸದ ಪ್ಯಾನುಗಳು, ಸರಿಯಿರದ ಸ್ವಿಚ್ಚುಗಳು/ನಾಲ್ಕು ರೂಮಿಗಳಿಗೊಂದೆರಡು ಪೊರಕೆಗಳು, ತಳ್ಳಿದರೆ ಕಸ ತಪ್ಪುವುದಿಲ್ಲ ವಾಕರಿಕೆಗಳು/ಸದಾ ಮುಚ್ಚಿದ ಶೌಚಾಲಯಗಳು, ನೀರೇ ಕಾಣದವುಗಳು.

                 ಗ್ರಂಥಾಲಯದಲ್ಲಿ ಧೂಳಿಡಿದ ಪುಸ್ತಕಗಳು, ಭದ್ರವಾಗಿ ಇರುವಂತವುಗಳು/ಲ್ಯಾಬಿನಲಿ ಉಳಿದು ಕೊಳೆತ ರಾಸಾಯನಿಕಗಳು, ಎಂದೂ ಮಾಡದ ಪ್ರಯೋಗಗಳು/ಕ್ರೀಡಾ ರೂಮಿನಲಿ ಕುಟ್ಟಿಡಿದ ಆಟದ ಸಾಮಾನುಗಳು, ಮೈದಾನವ ನೋಡದವುಗಳು/ಧಿಮಾಕಿನಿಂದ ಗಸ್ತು ತಿರುಗುವ ಗಂಡು ಹೆಣ್ಣೆನ್ನದ ನಾಯಿಗಳು/ಎಂದೂ ಕಾಣದ ಸಿಗರೇಟ್, ಬೀಡಿ, ಗುಟ್ಕಾ ಪಾಕೆಟ್‍ಗಳು, ಆರೋಗ್ಯಕರವಾದವುಗಳು/ನಾವೆಂದೂ ಅಳಿಯುವೆವು ಎಂದು ತಲೆಯೆತ್ತಿ ನಿಂತಿರುವ ಕಾಂಗ್ರೆಸ್ ಗಿಡಗಳು/ಆಗಾಗ ಕಾಂಪೌಂಡ್ ಹಾರಿ ಕಳ್ಳಕಳ್ಳವಾಗಿ ತಿನ್ನುವ ಐಸ್‍ಕ್ರೀಂಗಳು. ಪೈಪು, ಪ್ಲಾಸ್ಟಿಕ್ಕುಗಳು ಚಾರ್ಜುಗಳು/ಕಾಣದೆ ಹೋಗುವ ಬರಿಗೈ ಪಿಕ್‍ನಿಕ್‍ಗಳು, ತೆಂಗಿನ ಮರಕ್ಕೆಸೆದ ಆ ಕಲ್ಲುಗಳು/ಆಗಾಗ ಹೊತ್ತುವ ಟ್ಯೂಬ್ ಲೈಟ್‍ಗಳಂತೆ ಮೂಗಿನಲ್ಲಿಯ ಸಿಂಬಳಗಳು, ಕಾಣದೇ ಪಕ್ಕದವನಿಗೆ ಅಂಟಿಸುವ ಆ ಟೈಮುಗಳು, ಬರದೆ ಹೋದರು ಗುಣುಗುವ ಆ ರೈಮುಗಳು/.
                 ಮೇಷ್ಟ್ರು ಪ್ರಶ್ನೆ ಕೇಳಿದಾಗಿನ ಆ ಹೃದಯಬಡಿತಗಳು/ಪಾಠ ಮಾಡುವಾಗ ನಿಶ್ಯಬ್ಧವಾಗಿ ಬಿಡುವ ಊಸುಗಳು, ಆ ಪ್ರಾಣಸಂಕಟಗಳು/ಸೂಟ್‍ಕೇಸ್‍ಗಳ ಒಡೆದು ಕೈ ಮೇಲೆ ಚಪಾತಿ ತೀಡುವ  ಆ ವಿಜ್ಞಾನದ ಮೇಷ್ಟ್ರು, ಕುತೂಹಲದ ಪಾಠಗಳು/ಇಂಗೀಷ್ ಮಾಸ್ತರ ಗ್ರ್ಯಾಮರ್ ಪಾಠಗಳು, ಮರೆತು ಹೋಗುವ ಪುಟಗಳು/ಶಾಂತಸ್ವಭಾವದ ಕನ್ನಡ ಮಾಸ್ತರು, ಆ ಪದ್ಯಗಳು, ನೆನಪಿನಲ್ಲಿ ಉಳಿದವಂತವುಗಳು/ಮಾಸ್ತರ ಕೊಠಡಿಯಲ್ಲಿ ಕದ್ದ ಪೂರಿ, ತಿಂಡಿಗಳು,ನೋಡಿದ ಗಣಿತ ಮಾಸ್ತರ ಪ್ರತಿಕಾರಗಳು/ಒಗೆದು ಆರಲು ಹಾಕಿದ ಬಟ್ಟೆಗಳು, ಗೆದ್ದಲಿಗೆ ಮೂರೊತ್ತು ಊಟಗಳು/ಬುಕ್ ಮುಂದೆ ಆಡಿದ ಆ ವಿಡಿಯೋ ಗೇಮ್‍ಗಳು/ಪದೇ ಪದೇ ಹಿಂದಿ, ಇಂಗ್ಲೀಷ್ ಪದ್ಯಗಳ ಬಾಯಿಪಾಠ ಮಾಡಲಾಗದ ಆ ತೊಳಲಾಟಗಳು, ಆ ಬಿಸಿಲುಗಳು, ಆ ಬೆವರುಗಳು/ಇಕ್ಸಾಮಿನಲಿ ಕಾಲಕಳೆಯಲು ಬರೆದ ಗೀಟುಗಳು, ಮೇಷ್ಟ್ರ ಮುಖಗಳು, ಉತ್ತರಕೆ ಸಿಕ್ಕ ಮೊಟ್ಟೆಗಳು/ಸೋಪು, ಪೇಸ್ಟು, ಎಣ್ಣೆಗಾಗಿ ನಿಂತ ಕ್ಯೂಗಳು, ಹಂಚುವವರ ಆ ಪರದಾಟಗಳು, ಅಡ್ಡಲಾಗಿ ನಿಂತ ನಮಗೆ ಆ ಬೈಗುಳಗಳು, ಮನದಲ್ಲೇ ಮಣ್ಣು ಮಾಡುವ ಸೇಡಿನ ಪ್ರತಿಜ್ಞೆಗಳು/ಸಾಲಕ್ಕೆಂದು ಪಡೆದ ಸೋಪು, ಪೇಸ್ಟುಗಳು, ವಾಪಸು ಕೊಡುವಾಗ ಆದ ನೋವುಗಳು/ಸಣ್ಣ ಪುಟ್ಟ ರೌಡಿಸಂಗಳು, ಹರಿದ ಜೇಬುಗಳು, ಆ ಕಣ್ಣೀರು ಸಿಂಬಳಗಳ ಸಂಗಮಗಳು.

               ಜೂನಿಯರ್‍ಗಳ ಮೇಲಿನ ರೋಫುಗಳು,ಮಾವು ಕೊಯ್ಯಲು ಇಟ್ಟಿದ್ದ ನೈಫುಗಳು/ಮುಳ್ಳಿನ ಬೇಲಿ ದಾಟಿ ಕದ್ದು ತರುತಿದ್ದ ಈರುಳ್ಳಿ,ಟಮೋಟೋ, ಮೆಣಸಿನಕಾಯಿಗಳು, ಆ ಬೇಲ್‍ಪೂರಿಗಳು/ಕತ್ತಾಳೆ ಗಿಡದಲ್ಲಿ ಬರೆದ ಭಾರತ ಮ್ಯಾಪುಗಳು, ಅಡ್ಡ ಹೆಸರುಗಳು, ಗುರ್ತಿಸಲಾಗದ ಚಿನ್ಹೆಗಳು/ಮಳೆ ಬಿದ್ದು ಹೊರಳಿದ ಮರಳಿನಲಿ ಮೂಡಿದ ಕಾಗಮ್ಮನ ಗೂಡುಗಳು/ಪಕ್ಕದವರು ನಿದ್ದೆ ಹೋದಾಗ ಅವರಿಗಿಟ್ಟ ಮೀಸೆಗಳು, ಚಿತ್ರ ವಿಚಿತ್ರ ಹೇರ್ ಸ್ಟೈಲುಗಳು/ನಿದ್ರೆಯಲ್ಲೇ ಉಚ್ಚೆ ಸ್ನಾನ ಮಾಡಿದ ಹಾಸಿಗೆಗಳು, ಆ ವಾಸನೆಗಳು/ಮಳೆಗಾಲದಲ್ಲಿ ಸೋರುವ ಗೋಡೆಗಳು, ಜಾರುಬಂಡೆಗಳು, ಮಂಚದ ಕೆಳಗಿನ ಕಸದ ಗುಡ್ಡೆಗಳು/ಗೋಡೆಗಳ ಮೇಲೆ ಅಚ್ಚಾದ ಅರ್ಥವಾಗದ ಬರಹಗಳು, ಅದೆಷ್ಟೋ ದಿನಗಳು ಹಾಸಿಗೆಗಳಾದ ಮಿದ್ದೆಗಳು, ಒಡೆದು ಹಾಕಿದ ಸೋಲಾರ್ ಪ್ಲೇಟುಗಳು/ಜಗಮರೆತು ಹೊಡೆಯುತ್ತಿದ್ದ ಹರಟೆಗಳು, ಆ ಮಾತಿನ ಭರಾಟೆಯ ಸವಾಲುಗಳು/ನೀಲಗಿರಿ ತೋಪಿನ ಆ ಗುಂಟೇರ್ ಆಟಗಳು, ಇದ್ದ ಒಂದೇ ಮರದಲ್ಲಿ ಉದುರಿಸಿದ ಮಾವಿನಕಾಯಿ ಪಿಂದೆಗಳು, ಬಿಳಿ ಹೂವಿನ ಹಾಸಿಗೆಯಂತಹ ಆಕಾಶ ಮಲ್ಲಿಗೆ ಗಿಡಗಳು/ಜೊಂಪಾಗಿ ಬೆಳೆದಿದ್ದ ನೇರಳೆ ಗಿಡಗಳು, ಪ್ರಾಂಶುಪಾಲರ ಕೊಠಡಿಯ ಬಳಿಯ ಗುಲಾಬಿ ಹೂಗಳು, ಉದುರಿ ಹೋದವುಗಳು/ಬಂದವರನ್ನು ಸ್ವಾಗತಿಸುತಿದ್ದ ಪೇಪರ್ ರೋಸ್ ಗಿಡಗಳು, ದಾರಿ ತೋರಿಸುತಿದ್ದ ‘ಶೋ’ ಗಿಡಗಳು/ಅಲ್ಲಲ್ಲಿ ಬೆಳೆದ ಸಂಪಿಗೆ ಗಿಡಗಳು, ಹುಡುಗಿಯರ ತರಲೆಗಳು, ಹುಲ್ಲಿಂದ ಮಾಡಿದ ಹಸಿರು ಹಾಸಿಗೆಗಳು.

               ಮುರಿದುಹೋದ ಕೊಳಾಯಿಗಳು, ವರ್ಷವಾದರೂ ತೊಳೆಯದ ಓವರ್ ಟ್ಯಾಂಕುಗಳು/ದೂರದಿಂದ ಕೇಳಿಬರುತ್ತಿದ್ದ ನರಿಯ ಭಯಂಕರ ಕೂಗುಗಳು, ತಬ್ಬಿ ಮಲಗಿ ಹೇಳಿದ ದೆವ್ವದ ಕಥೆಗಳು, ಪಕ್ಕದಲ್ಲೇ ಇದ್ದ ಸ್ಮಶಾನಗಳು/ಹುಡುಗಿಯರ ಬಗೆಗಿನ ಗಂಭೀರ ಚಿಂತನೆಗಳು, ಪುಸ್ತಕದ ಕೊನೆಯ ಪುಟಗಳು/ತಲೆದಿಂಬಿನ ಕೆಳಗಿನ ಕತೆ ಪುಸ್ತಕಗಳು, ಅನಾಥವಾಗಿ ಬಿದ್ದ ಪಠ್ಯಪುಸ್ತಕಗಳು/ನೀರೇ ಕಾಣದ ಆ ಜಮಖಾನೆಗಳು, ಬಿಸಿಲು ಕಾಣದ ಹಾಸಿಗೆಗಳು, ಆ ಧೂಳುಗಳು/ಸಿಕ್ಕಿದ್ದೆಲ್ಲಾ ತಿನ್ನುವ ಬುದ್ದಿವಂತಿಕೆಗಳು, ಕಾರಣವಿಲ್ಲದ ಜಗಳಗಳು, ಆ ಬೈಗುಳಗಳು, ಮಿತಿ ಮೀರಿದ ಕೈಗಳು, ಮಾಸ್ತರು ಹೊಡೆದಾಗ ಸುರಿದ ಉಪ್ಪಿನ ಸರೋವರಗಳು, ಸಹಾಯ ಮಾಡಿದ ತೋಳಿನ ಬಟ್ಟೆಗಳು/ವರ್ಷಕೊಮ್ಮೆ ಮಾಡುವ ಶಾರದಾ ಪೂಜೆಗಳು, ಹಾಗೇ ಅರ್ಧಂಬರ್ಧ ಉಳಿದ ಸಿಂಗಾರಗಳು/ಮೀಸೆ ಇರುವ ಜಿರಲೆಗಳು, ಮೀಸೆ ಬಾರದವನ ತರಲೆಗಳು.
                                                                                              ಮುಂದುವರಿಯುತ್ತವೆ...........      

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡಿರುವಿರಿ. ಸ್ವಾರಸ್ಯಕರವಾಗಿದೆ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಲಪತಿಯವರೆ, ಹಾಸ್ಟೇಲಿನ ದಿನಗಳನ್ನೆಲ್ಲಾ ಒಂದೂ ಬಿಡದೆ ಹೇಳಿದಿರಿ..
ಅಂತ ನೋಡಿದರೆ ಕೊನೆಯಲ್ಲಿ "ಮುಂದುವರಿಯುತ್ತವೆ.." ಇದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.