"ಹೊಳೆಯ ಹರೆಯ"

0

ಕೊಚ್ಚಿ ಹೋದವು ಹೊಳೆಯ ಇಕ್ಕೆಲಗಳ
ಮನೆ-ಮಠ, ಗಿಡ-ಮರ-ಬಳ್ಳಿ, ಪ್ರಾಣಿ-ಪಕ್ಷಿಗಳು
ಹಾಗಿಯೇ ಸಂಬಂಧಗಳು. ಮುಳುಗಡೆಯಾದವು
ಪೈರು ಪಚ್ಚೆಯ ಹೊಲ ಗದ್ದೆಗಳು.
 
ಕಾಣೆಯಾದವು, ಆಚೀಚೆ ಸಂಬಂಧ ಬೆಸೆಯುವ,
ರಸ್ತೆ-ಸೇತುವೆಗಳು. ಸತ್ತರು! ಅತ್ತರು! ನೆತ್ತರು
ಸುರಿದರು, ಮಳೆ ನಿಂತು ಹೊಳೆ ಇಳಿಯುವ ವರೆಗೂ
ಅವರಾಚೆ ಇವರೀಚೆ, ಮಾತಿಲ್ಲ ಕತೆಯಿಲ್ಲಾ.
 
ಅತ್ತ ಹರಿದುಕೊಂಡ ಬಳಲಿಕೆ, ಇತ್ತ ಕಳೆದುಕೊಂಡ
ಅಳಲಿಕೆ. ದಡ ಕೊರೆಯಿತು, ವಿಸ್ತಾರ ಹೊಳೆಯ ಆಳಗಲ.
ದೇವರ ದಯ! ಮೋಡಗಳ ಕರಗುವಿಕೆ, ನಿಧಾನ
ಹೊಳೆಯಿಳಿತು. ಬದುಕು ಭೀಕರ ಭಯಂಕರ.
 
ಹರಿದು ಹಂಚಿಹೋದವು ಪ್ರೀತಿಯ ಬಂಧು ಬಾಂಧವ್ಯಗಳು
ಭುವಿಯ ಬಸಿರೊಳಿರುವ ಹೊಸ ಚಿಗುರೊಂದು
ಎಲ್ಲ, ಎಲ್ಲವೂ ಇದ್ದು ಅನಾಥ....! ನೆರೆಯ ಹರೆಯ ಇಳಿದ ಮೇಲೆ,
ಆಚೀಚೆ ದಡದಲ್ಲಿ ಬರಿ ಮುರುಕಲು ಕುಪ್ಪೆಗಳು.
 
ಮುಳುಗಿ ಹಾಳಾದ ರಸ್ತೆ ಸೇತುವೆಗಳು ನಿಧಾನ
ಗೋಚರ, ಮತ್ತೆ ಮರು ಬೆಸೆಯುವ ಕನಸಿನ ಚಿಗುರು.
ಹೊಲ ಹಸನು ಮಾಡಿ ಹೊಸ ನಾಟಿ ಮಾಡುವ ತವಕ.
ನಡುವೆ ಕಾಲು ಹೂತುಕೊಳ್ಳುವ ಭಯ.
 
ಅದ್ಯಾರೋ ಹುರಿ-ಹಗ್ಗ ತಂದರು,ಇನ್ಯಾರೋ
ಹಾರೆ-ಗುದ್ಲಿ-ಪಿಕಾಸಿ ಕೊಟ್ಟರು. ಮತ್ತಿನ್ಯಾರೋ ಸೇರಿ 
ಮಣ್ಣು ತುಂಬಿದರು, ಕುಸಿದ ರಸ್ತೆ ದುರಸ್ತಿ. ಮುರಿದ ಸೇತುವೆಯ
ಮೇಲೆ ಮತ್ತೆ ಪಯಣ. ಒಳಗೊಳಗೆ ಕಾಡುವ ಆತಂಕ.
 
ಅಂಬರದಲಿ ಚೆದುರಿ ಚಿತ್ತಾರ ಬರೆದ ಮೋಡಗಳಿಗೆ
ಘರ್ಷಣೆಯ ಆಕರ್ಷಣೆ, ಮತ್ತೆ ಮೈದುಂಬಿ
ಹರಿಯುವಾಸೆ, ಹುಚ್ಚು ಮನಸ್ಸಿನ ಹರೆಯದ ಹೊಳೆಗೆ
ಮತ್ತೆ ಸುರಿವ ಇನ್ನೊಂದು ಮಳೆಗೆ.
**************************
 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.