“ರವಿ”ರಾಜನಿಗೆ ಯಾರು ಸರಿ..

4

                “ರವಿ”ರಾಜನಿಗೆ ಯಾರು ಸರಿ.. 
 
ಚುಮು ಚುಮು ಬೆಳಗಿನ ಹೊಂಗಿರಣಗಳ ಚಿಮ್ಮಿಸಿ ಜಗದ ಜೀವರಾಶಿಗೆ ಹರಸಿ ಜೀವಿತದ ತಾಜಾತನದ ಜೀವಸ್ಪರ್ಶ 
ಬೇಸಿಗೆಯ ದಿನದ ಹಗಲನು ಅಂಜಿಕೆ ಇಲ್ಲದೆ ಹಿಂಜಿ 
ಸಕಲ ಸಂಕುಲಕೆ ಸಿಂಪಡಿಸಿ ಹರ್ಷ ಸರಿದೂಗಿಸುವ ‘ಸೂರ್ಯ’...
 
ಧಗಧಗ ಉರಿಯ ಹರಿದಾಡುವ ಸುಡು ಬಿಸಿಲು 
ಸರಿದಾಡಲು ಬಿಡದ ‘ದಿನಕರ’ನ ಬಿಸಿಉಸಿರು 
ಬಿಸಿ ಹವೆಯ ದಗೆಗೆ ಬಸವಳಿದು 
ತುಸು ಬಿಡದೆ ಬಳಬಳ ಸುರಿವ ಬೆವರು ...
 
ಅಬ್ಬಾ!!! ರಜೆಯಿಲ್ಲದ ರಾಜ ಇರುವ ‘ಸೂರಜ’ ಒಬ್ಬ 
ಅಂಬರದಲಿ ಅದೆಷ್ಟು ಅವನ ಅಬ್ಬರ 
ನಿಗಿ ನಿಗಿ ಹೊಳೆದು ನಭದಲಿ ಸಭೆಯನು ಸೇರಿಸುವ ಆ ಪರಿ 
ಎಣಿಕೆಗೆ ನಿಲುಕದ ತಾರೆಗಳ ಸರಿಸಿ ರಾರಾಜಿಸಿ 
ರಂಜಿಸುವ ರಂಗಿನ ‘ರವಿ’ರಾಜನಿಗೆ ಯಾರು ಸರಿ...
 
ಸುದೂರ ಧರೆಗೆ ಬೀರಿ ಕಿರಣಗಳ ತಾಪ 
ತುಳುಕಾಡುವ ತೆರೆಯ ಕಡಲ ತೀರಕೆ ಹಚ್ಚಿ ಲೇಪ
ಸರಿದೂರ ನಡೆಗೆ ಉಸ್ಸೆನ್ನುವಂತೆ ಮಾಡಿದ ಭೂಪ
ಆದರೂ ಏಕೆ ಬರಲೊಲ್ಲದು ‘ದಿನಮಣಿ’ಯ ಮೇಲೆ ಕೋಪ...
 
 
ಕಾಮೋ೯ಡಗಳ  ಚೆಲ್ಲಾಡಿ ಮಳೆ ಹನಿಯೊಳಗೆ ತೂರಿ
 ಬಣ್ಣದ ಬಿಲ್ಲನು ನೀಲ ಗಗನದಿ ಬಾಗಿಸಿ ನಗೆ ಬೀರುವ ಪೋರ ಮುಂಜಾನೆಯಿಂದ ಮುಚ್ಚಂಗೆ ವರೆಗೂ ಭುವಿ ಬಾನುಗಳೊಡನೆ ಚೆಲ್ಲಾಟವಾಡುವ ಸರದಾರ ಚಿತ್ತ ಚೋರ ‘ಭಾನು’...
 
ನಿಶೆಯೊಳಗೆ ನಿದಿರೆಯಲಿ ನಲಿಯುತ್ತಾ ಜಾರಿ ನಿತ್ಯ
ನೀರವ ಜಗದಲಿ  ತೋರಿ ಚೆಂದದ ಚಂದಿರನ ಬಿಂಬಮಿತ್ಯ
ಆದಿ ಅಂತ್ಯವಿಲ್ಲದ ದಿಗಂತದ ಗಾಥೆಯಲಿ ತಾನಿರುವುದೇ ಸತ್ಯ  ಎಂಬುದನ್ನು ಜಗತ್ತಿಗೆ ಗೊತ್ತು ಮಾಡಿದ ಅನಂತ  ‘ಆದಿತ್ಯ’... 
 
——Rukku 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.