ಆ ಗಲ್ಲಿ...

To prevent automated spam submissions leave this field empty.
sketch

ಅದೊಂದು ಗಲ್ಲಿ. ಓಣಿಯೊಂದರಲ್ಲಿ ಹಾದಂತೆ. ಮುಖ್ಯದ್ವಾರಕ್ಕೆ ಗೇಟಿಲ್ಲ. ಹೆಚ್ಚಿನ ಸಮಯ ಗೇಟಿರಬೇಕಾದ ಜಾಗದಲ್ಲಿ ಎಮ್ಮೆಯೋ ಹಸುವೋ ಕುಳಿತು ದಾರಿ ಅಡ್ಡಗಟ್ಟಿರುವುದು ಕಾಣಬಹುದು.

ಕೆಲಸಮಯ ಆ ಗಲ್ಲಿಯ ರೌಡಿಗಿಂತ ಜೋರಿರುವ ಬೀದಿ ನಾಯಿ ಆ ಜಾಗವನ್ನಾಕ್ರಮಿಸಿರುತ್ತದೆ. ಆಕ್ರಮಿಸಿರುವ ಸಮಯ ಕಿವಿ ಚುಚ್ಚುವಂತೆ ಅದು ಬೊಗಳುತ್ತಿರುತ್ತದೆ. ಬೊಗಳದಿರುವಾಗ ಅಲ್ಲೇ ಗೇಟಿರಬೇಕಾದ ಜಾಗದಲ್ಲೋ ಇನ್ನೆಲ್ಲೋ ಹಾಯಾಗಿ ಮಲಗಿರುತ್ತದೆ. ಇಷ್ಟು ದಿನ ಓಣಿಗೆ ಬಂದ ಹೊಸಬರಲ್ಲಿ ತನಗೆ ಬೇಡದವರನ್ನು ಓಡಿಸಿ ಅಲ್ಲಿ ಕಾವಲು ಕಾದ ಅದಕ್ಕೆ ಇಲ್ಲಿ ಗೇಟು ಹಾಕೋರು ಯಾರಿಲ್ಲ ಎಂಬುದು ಮನದಟ್ಟಾದಂತಿದೆ.

ಗೇಟಿರಬೇಕಾದಲ್ಲಿ ನಿಂತು ನೋಡಿದರೆ ಓಣಿ ಅಷ್ಟು ದೂರ ಇರುವಂತೆ ಕಾಣದು. ಅತ್ತಿತ್ತ ಮನೆಗಳು, ಒಂದೊಂದು ಮನೆಗೂ ಒಂದೊಂದು ಹೆಸರು. ಅಲ್ಲಿಲ್ಲಿ ಚೆಂದದ ಬಣ್ಣ, ಹೆಸರು, ಹಸಿರು. ಹೆಸರು, ನೋಟದಲ್ಲಿ ಯಾವ ಮನೆ ಯಾವುದೆಂದು ಹೇಳಲು ಹೊರಟರೆ ಅಸಾಧ್ಯವಾಗಿಸುವ ಓಣಿ ಅದು. ಬಾಗಿಲು ತಟ್ಟಿ ನೋಡಿದರೇ ತಿಳಿದೀತು!

ಸುತ್ತಲೂ ಅಲ್ಲಲ್ಲಿ ಗಲೀಜು. ಅಲ್ಲಲ್ಲಿ ಅವರವರು ಮನೆಯೊಳಗಿಂದ ಹೊರಹಾಕಿದ ಗಲೀಜು. ಆ ಗಲೀಜಿನ ಸುತ್ತ ಹೆಕ್ಕುತ್ತ ಜಗಳವಾಡುವ ಕೋಳಿಗಳು. ಅಲ್ಲಲ್ಲಿ ಊದಿನಕಡ್ಡಿ, ಹೂವುಗಳ ಸುಗಂಧ, ಕೆಲವೆಡೆ ದುರ್ಗಂಧ. ಇವೆಲ್ಲದರ ನಡುವೆ ಆ ಓಣಿ ಒಳಹೊಕ್ಕು ಉದ್ದಗಲ ಸುತ್ತಿ ನೋಡಿದವರಿಗೇ ಗೊತ್ತು ಅದರ ಚೆಲುವು.

ಇವತ್ತು ಸುಮಾರು ಒಂದು ವಾರದ ನಂತರ ಈ ಹಾದಿ ಹಿಡಿದಿದ್ದ ನನಗೆ ಏನೋ ಗಮನ ಸೆಳೆದು ಓಣಿಯೊಳಕ್ಕೆ ಹೊತ್ತೊಯ್ಯಿತು. ಇವತ್ತು ಯಾಕೋ ಮುಂಚೆಗಿಂತ ಹೆಚ್ಚು ಗಲೀಜು. "ಓ, ಹೊರಗಡೆ ಬಣ್ಣ ಕೊನೆಗೂ ಬಳಿದಿದ್ದಾರೆ" "ಅಹಾ, ಇಲ್ಲೊಂದು ಬೋರ್ಡು ತಗಲು ಹಾಕಿದ್ದಾರೆ", "ಇಲ್ಯಾವುದು ಗೋಡೆಯ ಮೇಲೊಂದು ಪೋಸ್ಟರ್?" ಎಂದು ನೋಡುತ್ತ ಹೊರಟಾಗ ನನಗ್ಯಾಕೋ ಕಂಡದ್ದು ಬರೇ ಗಲೀಜು. ನಾ ಹೆಚ್ಚು ದೂರ ಹೋಗರಿಲಿಲ್ಲ, ಇನ್ನೂ. ಅಲ್ಲೆಲ್ಲ ಬರೀ ಕಸ, ಗಲೀಜು. ಅತ್ತ ದೂರದಲ್ಲಿ ಗಲೀಜಿನ ನಡುವೆಯೇ ಕುಳಿತು ಚಿತ್ರ ಬಿಡಿಸುತ್ತಿದ್ದ ಒಂದು ಮಗು. ಅದು ತಾ ಬಿಡಿಸುತ್ತಿದ್ದ ಚಿತ್ರದಲ್ಲೇ ಮುಳುಗಿಹೋಗಿತ್ತು. ಅಲ್ಲೇ ಎಲ್ಲೋ ಮಾತುಕತೆಯ ಸದ್ದು.

ಗಲೀಜು ನೋಡಲಾಗದೆ ನಾನು ಕಸ ಅಲ್ಲಿ ಹಾಕಿದವರಿಗೆ ಶಪಿಸಿದೆ. ಒಂದು ಘಳಿಗೆ ಈ ಓಣಿಯನ್ನೇ ಕಿತ್ತುಹಾಕಿಬಿಡಿ ಎನ್ನಬೇಕು, ಉಪಯೋಗವಿಲ್ಲ ಇದು ಎಂದನಿಸಿತು.

ಹೊರಹೋಗಲು ಒಂದೆರಡು ಹೆಜ್ಜೆ ಹಾಕಿದೆ. ಥಟ್ಟನೆ ಏನೋ ಮನಸ್ಸಿಗೆ ಬಡಿದ ಹಾಗಾಯ್ತು. ತಿರುಗಿ ಮತ್ತೊಮ್ಮೆ ಕಣ್ಣು ಹಾಯಿಸಿದೆ. ಚಿತ್ರ ಬಿಡಿಸುತ್ತ ಕುಳಿತಿದ್ದ ಮಗುವಿನ ಕೈಯಲ್ಲಿದ್ದ ಚಿತ್ರ ಕಣ್ಣಿಗೆ ಬಿತ್ತು. ಚಿತ್ರದ ಚೆಲುವು, ಚಿತ್ರದಲ್ಲಿದ್ದ ಹೊಸತನ ಮನ ಸೆಳೆಯಿತು. ಸುತ್ತಲಿನ ಗಲೀಜು ಅದ್ಯಾಕೋ ಈಗ 'ಥೂ' ಅನ್ನಿಸಲಿಲ್ಲ. ಅದೇನನ್ನಿಸಿತೋ ತಿರುಗಿ ಒಂದಷ್ಟು ಹೆಜ್ಜೆ ಇಟ್ಟು ಓಣಿಯೊಳಗೆ ನಡೆದು ಅತ್ತಿತ್ತ ನೋಡುತ್ತ ಕೆಲ ಕಾಲ ಕಳೆದು ಹೊರನಡೆದೆ.

ಆ ಗಲ್ಲಿ ನನಗಿಷ್ಟವೋ ಇಲ್ಲವೋ ನನಗಿಂದಿಗೂ ತಿಳಿದಿಲ್ಲ. ನಾನದನ್ನು ನೋಡುವ ರೀತಿ ಮಾತ್ರ ಬದಲಾಗಿದೆ ಎಂದು ಹೇಳಬಲ್ಲೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾವು ನೋಡಬೇಕೆನಿಸುವ ನೋಟ ನಮ್ಮ ದ್ರುಷ್ಟಿಗೆ ಬೀಳುತ್ತೆ... ಒಂಥರಾ ಮಗುವಿನ ನೋಟದ ಥರಾ.....

hpn ಅವರೇ,
ನಾನು ನಮ್ಮೂರಿಗೆ ಹೋದಾಗ ಎಷ್ಷೋ ಸಾರಿ ಅಂದು ಕೊಂಡಿದ್ದೇನೆ ಎಷ್ಷು ಬದಲಾವಣೆ ಆಗಿದೆ ನಮ್ಮೂರು. ನೀವು ಹೇಳಿದಂತೆ ನಾವು ನೋಡುವ ದೃಷ್ಷಿ ಬದಲಾಗಿದೆಯೋ ಅಥವಾ ನಮ್ಮೂರೆ ಬದಲಾಗಿದೆಯೋ ಅಂತ ಅನಿಸುತ್ತದೆ.

- ರೇಖಾ ಚಾಮರಾಜ

ಮೊನ್ನೆ ಜಿಡ್ಡು ಕೃಷ್ಣಮೂರ್ತಿಯವರ ಒಂದು ಬರಹ ಓದುತ್ತಿದ್ದೆ:
"ಕೆಂಪು ಷರ್ಟನ್ನು ಧರಿಸಿದ ಒಬ್ಬನನ್ನು ನಾನು ಕಂಡೆ ಎಂದಿಟ್ಟುಕೊಳ್ಳೋಣ, ತತ್ ಕ್ಷಣದ ಪ್ರತಿಕ್ರಿಯೆ ಏನು ಎಂದರೆ ಅದನ್ನು ಇಷ್ಟಪಡುತ್ತೇನೆ ಅಥವ ಇಲ್ಲ. ಈ ಇಷ್ಟ ಪಡುವುದು, ಪಡದಿರುವುದು - ಈ ಎರಡೂ ನನ್ನ ಸಂಸ್ಕೃತಿ, ನನ್ನ ಶಿಕ್ಷಣ, ನನ್ನ ಸಹವಾಸ, ನನ್ನ ಒಲವುಗಳು, ನಾನು ಗಳಿಸಿದ ಮತ್ತು ಅನುವಂಶಿಕವಾಗಿ ಪಡೆದ ಸ್ವಭಾವಗಳು - ಇವುಗಳೆಲ್ಲದರ ಪರಿಣಾಮ."
ಎಂದು ಇತ್ತು.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಪ್ರೀತಿಯ ಹರಿಪ್ರಸಾದ್‌,

ಚಿತ್ರ-ಬರಹ ಎರಡೂ ಸೊಗಸಾಗಿವೆ. ಹಳೆಯ ನೆನಪುಗಳನ್ನು ಹೆಕ್ಕಿ ಹೆಕ್ಕಿ ತೆಗೆದು ಮುಂದಿಟ್ಟಂತಾಯಿತು. ನೀವು ಬಿಡಿಸಿದ ಚಿತ್ರ ಹಾಗೂ ವರ್ಣಿಸಿದ ಚಿತ್ರಣಗಳೆರಡೂ ಕೊಪ್ಪಳದ ಕೆಲವು ಗಲ್ಲಿಗಳನ್ನು ಹಾಗೂ ಅಹಮದಾಬಾದ್‌ ಮತ್ತು ಭುಜ್‌ನಲ್ಲಿ ನಾನು ನೋಡಿದ ಹಲವಾರು ಗಲ್ಲಿಗಳನ್ನು ನೆನಪಿಸಿದವು.

ಕಳೆದ ಕಾಲದ ಗಲ್ಲಿಗಳಲ್ಲಿ ಅಲೆದರೆ ಸಾವಿರ ಸಾವಿರ ನೆನಪುಗಳು ಬಿಚ್ಚಿಕೊಳ್ಳುತ್ತವೆ. ವರ್ತಮಾನದೊಂದಿಗೆ ಅವನ್ನು ಹೋಲಿಸಿಕೊಂಡು ತಾಳೆ ಹಾಕುವುದು ವಿಚಿತ್ರ ಅನುಭವ. ಏಕೋ ಮನಸ್ಸು ನೆನಪುಗಳಲ್ಲಿ ಕಳೆದು ಹೋಗುತ್ತದೆ ಅನಿಸುತ್ತದೆ.

ಮನಸ್ಸಿನಲ್ಲಿ ಉಳಿದ ಬರಹ. ಥ್ಯಾಂಕ್ಸ್‌.

- ಚಾಮರಾಜ ಸವಡಿ

ಥ್ಯಾಂಕ್ಸ್, ಚಾಮರಾಜ್. ಚಿತ್ರಣ ನಿಮ್ಮ ನೆನಪಿನಲ್ಲಿರುವ ಗಲ್ಲಿಗಳನ್ನು ಹೊರತಂದಿತು ಅಂತ ಕೇಳಿ ಖುಷಿಯಾಯ್ತು.

ಮತ್ತೊಬ್ಬ ಸ್ನೇಹಿತರಿಗೆ ಇದು ಹೈದರಾಬಾದಿನ ಗಲ್ಲಿಗಳನ್ನು ನೆನಪಿಸಿತೆಂದು ತಿಳಿದುಬಂತು. ಎಷ್ಟೆಲ್ಲ ರೀತಿಯ ಗಲ್ಲಿಗಳಿವೆಯಲ್ಲ? ಅದನ್ನು ನಾವುಗಳು ನೋಡಿ ನೆನಪಿಟ್ಟುಕೊಂಡಿರುವಂತೆ ಬೆರೆಸಿ ನೋಡಿದರೆ ಎಷ್ಟು ವೈವಿಧ್ಯ ಗಲ್ಲಿಗಳು ಸಿಗುವುವು :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಮನದಲ್ಲಿರುವುದು ವಾಸ್ತವದೊಡನೆ ಡಿಕ್ಕಿ ಹೊಡೆದಾಗ ಆಗುವುದನ್ನು ತುಂಬಾ ಚೆನ್ನಾಗಿ ಬರಿದಿದ್ದೀರ.
ಚಿತ್ರ ಇನ್ನೊಂದಿಷ್ಟು ನಿಜಕ್ಕಿಂತ ನಿಮ್ಮ ಮನಸ್ಸಿನ ಗಲ್ಲಿಯನ್ನು ತೋರಿದ್ದರೆ ಚೆನ್ನಿತ್ತು ಅನಿಸಿತು... ಅದು ನನ್ನ ಅನಿಸಿಕೆ ಮಾತ್ರ! :)

ಮನಸ್ಸಿನ ಗಲ್ಲಿ ತೋರಿಸಿದರೆ ಅದು ನನ್ನ ಮನಸ್ಸಿನ ಗಲ್ಲಿಯಾಗಿಬಿಡಬಹುದು ಅನ್ನೊ ಭಯದಿಂದ ಚಿತ್ರದಲ್ಲಿ ಅದನ್ನು ತೋರಿಸಲಿಲ್ಲ. ಬರವಣಿಗೆಯಲ್ಲಿ ಅದು ಕಾಣುವುದಿಲ್ಲ. ಅದು ಅವರವರ ಗಲ್ಲಿಯೇ ಆಗಬಹುದು ಅಂತ. :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಪ್ರಿಯ ಹರಿಯವರೆ,
ನಿಮ್ಮ ಚಿತ್ರದ ಗಲ್ಲಿಯಂತೂ ತುಂಬಾ ಶುಬ್ರವಾಗಿದೆ. ಹೀಗಾಗಿ ಅದೇ ನಿಮ್ಮ ಮನಸಿನ ಗಲ್ಲಿ ಎಂದು ಹೇಳಬಹುದೇನೋ ಅಲ್ವಾ? ಚಿತ್ರ ತುಂಬಾ ಚೆನ್ನಾಗಿದೆ. ಲೇಖನನೂ ಕೂಡ ಏನೋ ಗೂಡಾರ್ಥ ತುಂಬಿ ನಮ್ಮ ತಲೆಗೆ ಕೆಲಸ ಕೊಡುತ್ತಿದೆ. ಅವರವರ ಭಾವಕ್ಕೆ ತಕ್ಕ ಹಾಗೆ ಲೇಖನವನ್ನು ಅರ್ಥೈಸಿಕೊಳ್ಳುವಂತೆ ಇದೆ. ಹೊರಗಿನ ಚೆಲುವು ನೋಡುವ ದೃಷ್ಟಿಯಲ್ಲಿದೆ ಎಂಬುದನ್ನು ಚೆನ್ನಾಗಿ ವಿವರಿಸಿದ್ದೀರಿ. ಅಷ್ಟು ಗಲೀಜಿನ ನಡುವೆಯೂ ಮಗುವಿನ ಗಮನ ತನ್ನ ಸುಂದರ ಚಿತ್ರದ ಕಡೆ ಇರುವುದು ಮನಸಿನ ಏಕಾಗ್ರತೆಯ ಬಗ್ಗೆ ಸೂಚಿಸುವುದು ಅಲ್ಲವೆ? ಚಿತ್ರ ಲೇಖನ ಎರಡೂ ಚೆನ್ನಾಗಿವೆ.
ಶೈಲಾಸ್ವಾಮಿ

ಯಾವ್ಯಾವುದೋ ನೆನಪಿನ ಗಲ್ಲಿಯಲ್ಲಿ ಕಳೆದುಹೋದಂತಾಯ್ತು. ಮನ ತಟ್ಟುವ ಬರಹ. ಇಂಥ ಚುಟುಕು ಚಿತ್ರಗಳಲ್ಲೇ ನಿಜವಾದ ಸತ್ವ ಅಡಗಿದೆ ಅನಿಸುತ್ತದೆ. ರೀಡರ್ಸ್‌ ಡೈಜೆಸ್ಟ್‌ ಖ್ಯಾತವಾಗಿದ್ದು ಇಂತಹ ಆಪ್ತ ನೆನಪುಗಳನ್ನು ಅನಾವರಣಗೊಳಿಸಿದ್ದರಿಂದ.

ಒಳ್ಳೆಯ ರೇಖಾಚಿತ್ರವೂ ಬಂದಿದೆ. ಇಂತಹ ಇನ್ನಷ್ಟು ಗಲ್ಲಿಗಳನ್ನು ಅನಾವರಣಗೊಳಿಸಿರಿ ಎಚ್‌ಪಿಎನ್‌ ಅವರೇ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...