ಒಂದು ಕೋಳಿಯ ಕಥೆ

To prevent automated spam submissions leave this field empty.

ಇದು ನನ್ನ ಚಿಕ್ಕಂದಿನಲ್ಲಿ ನಡೆದ ಘಟನೆ. ಈ ಘಟನೆ ಪದೇ ಪದೇ ನನ್ನ ಮನಸಿನ ಪುಟಗಳ ನಡುವೆ ಸುಳಿದಾಡುತ್ತಿರುತ್ತದೆ. ನನ್ನ ಜೀವನದಲ್ಲಿ ನಡೆದ ಅತ್ಯಂತ ಸ್ವಾರಸ್ಯಕರ ಘಟನೆ ಎಂದು ಹೇಳಬಹುದು.

ನನ್ನ ಹುಟ್ಟೂರು ಚಿತ್ರದುರ್ಗ. ನಾನು ಆಗ ಬಹುಶಃ ೩ನೇ ತರಗತಿಯಲ್ಲಿದ್ದೆ. ಬೇಸಿಗೆ ರಜೆ ಇತ್ತು. ಬೇಸಿಗೆ ಬಂತೆಂದರೆ ಸಾಕು,ನನ್ನ ಮಾವನ ಮಕ್ಕಳಾದ ವಿನಯ ಮತ್ತು ಉದಯ ರೊಂದಿಗೆ ಬೆಳಗಿನಿಂದ ಸಂಜೆಯವರೆಗೂ ಆಟವಾಡುವುದೇ ಪರಿಪಾಠವಾಗಿರುತ್ತಿತ್ತು.

ಒಂದು ದಿನ ಬೆಳಿಗ್ಗೆ ಅವರ ಮನೆಗೆ ಹೋದೆ. ಅಂದು ಏಕೋ ಇಬ್ಬರೂ ಮನೆಯಲ್ಲಿ ಇರಲಿಲ್ಲ (ಅವರೆಲ್ಲಿ ಹೋಗಿದ್ದರು ಎಂದು ಇಂದಿಗೂ ನನಗೆ ಜ್ಞಾಪಕವಿಲ್ಲ). ಸರಿ. ಕೂತೆ,ನಿಂತೆ,ಮನೆಯಲ್ಲಿದ್ದವರೆಲ್ಲರ ಜೊತೆಯಲ್ಲೂ ಮಾತನಾಡಿದೆ. ನನ್ನ ಅತ್ತೆ ಅಂದು ಬೆಳಗ್ಗೆ ಮಾಡಿದ ತಿಂಡಿ ಕೊಟ್ಟರು,ತಿಂದೆ. ಅವರಿಬ್ಬರು ಇದ್ದಿದ್ದರೆ ಮನೆಯಲ್ಲಿದ್ದವರೊಡನೆ ಅಷ್ಟು ಸಮಯ ಕಳೆಯುತ್ತಲೇ ಇರಲಿಲ್ಲ. ಟಿ.ವಿ.ನೋಡೋಣ ಎಂದು ಕುಳಿತರೆ ಆ ಸಮಯದಲ್ಲಿ ಆ ಟಿ.ವಿ ತುಂಬಾ ನನ್ನ ಬೇಜಾರು ಇಮ್ಮಡಿಗೊಳಿಸುವಂತಹ ಘನಕಾರಿ ಕಾರ್ಯಕ್ರಮಗಳೇ ತುಂಬಿಕೊಂಡಿದ್ದವು. ಅವರು ಏಷ್ಟು ಹೊತ್ತಾದರೂ ಹಿಂದಿರುಗಲಿಲ್ಲ. ಒಟ್ಟಿನಲ್ಲಿ ಅಂದು ನನಗೆ ರುಚಿಸುವಂತಹದ್ದು ಏನೂ ಇರಲಿಲ್ಲ ಅಲ್ಲಿ.

ಹಾಗೆ ಕೆಲ ಕಾಲ ಕಳೆಯಿತು. ಬೇಜಾರು ತಾಳಲಾರದೆ ಹೊರಗೆ ನಿಲ್ಲೋಣ ಎನಿಸಿತು. ಅವರು ಬರುವುದನ್ನೇ ಏದುರು ನೋಡುತ್ತಾ ನಿಂತೆ. ಇದ್ದಕ್ಕಿದ್ದಂತೆ ಒಂದು ಕೋಳಿ ಹಾಗೇ ನನ್ನ ಮುಂದೆ ವೇಗವಾಗಿ ಹಾದು ಹೋಯಿತು. ಅಷ್ಟು ಹೊತ್ತೂ "ಈ ಬಡ್ಡಿ ಮಕ್ಕಳು ಏಲ್ಲಿ ಹಾಳಾಗಿ ಹೋದರೋ! ಏಷ್ಟೊತ್ತಿಗೆ ಬರುತ್ತಾರೋ!" ಎಂದು ಚಡಪಡಿಸುತ್ತಿದ್ದ ನನ್ನ ಗಮನ ಥಟ್ಟನೆ ಆ ಕೋಳಿಯ ಮೇಲೆ ಹೋಯಿತು. ಆ ಕೋಳಿ ಓಡುತ್ತಾ ಮನೆಯ ಪಕ್ಕದಲ್ಲಿರುವ ಬಾವಿಯ ಹತ್ತಿರ ಹೋಯಿತು. ಆ ಬಾವಿಗೆ ಸುಮಾರು ೨ ರಿಂದ ೩ ಅಡಿ ಎತ್ತರದ ಕಟ್ಟೆ ಇದೆ. ಅದು ಅಲ್ಲೇ ಕಟ್ಟೆಯ ಪಕ್ಕ ಮಣ್ಣನ್ನು ಹೆಕ್ಕುತ್ತಾ,ಶಬ್ದ ಮಾಡುತ್ತಾ ನಿಂತಿತ್ತು. ಸರಿ ಸುಮಾರು ೨ ಘಂಟೆಗಳಿಂದ ಏನೂ ಮನರಂಜನೆಯಿಲ್ಲದೆ ಬೇಸತ್ತು ಹೋಗಿದ್ದ ನನಗೆ ಅದೇನನಿಸಿತೋ ಕಾಣೆ,ಆ ಕೋಳಿಯ ಬಳಿ ಹೋಗಿ ನಿಂತೆ. ಅದರ ಪಾಡಿಗೆ ಅದು ತನ್ನ ಕೆಲಸ ಮಾಡುತ್ತಿತ್ತು. ಜೋರಾಗಿ ಒಮ್ಮೆ "ಉಶ್!!!!" ಎಂದು ಆ ಕೋಳಿಯನ್ನು ಬೆದರಿಸಿದೆ. ಆ ಕೋಳಿಗೆ ಅದೆಷ್ಟು ಗಾಬರಿಯಾಯಿತೋ ಏನೊ,ಇದ್ದಕ್ಕಿದ್ದಂತೆ ಬಾವಿಯ ಕಟ್ಟೆಗಿಂತಲೂ ಮೇಲೆ ಹಾರಿ, ಬಾವಿಯೊಳಗೆ ಹಾಗೇ ಇಳಿದುಬಿಟ್ಟಿತು. ನೋಡು-ನೋಡುತ್ತಿದ್ದಂತೆಯೆ ಅದು ಬಾವಿಯಲ್ಲಿದ್ದ ನೀರಿನಲ್ಲಿ ಬಿತ್ತು.

ಬಾವಿಯ ಇನ್ನೊಂದು ಬದಿಯಲ್ಲಿ ಹಲವಾರು ಕೋಳಿಗಳು ಶಬ್ದ ಮಾಡುತ್ತಾ ಓಡಾಡುತ್ತಿರುವುದು ಆಗ ನನ್ನ ಗಮನಕ್ಕೆ ಬಂತು. ಆಗಲೇ ನನ್ನ ತಲೆಗೆ ಹೊಳೆದದ್ದು,ಅವು ಮುಸಲ್ಮಾನರ ಕೇರಿಯ ಸಾಕಿದ ಕೋಳಿಗಳು ಎಂದು. ಕೈ-ಕಾಲು ಗಳು ನನಗೇ ಗೊತ್ತಿಲ್ಲದೆ ನಡುಗಲಾರಂಭಿಸಿದವು. "ಅಯ್ಯೋ! ಎಂಥಾ ಕೆಲಸ ಮಾಡಿಬಿಟ್ಟೆ ನಾನು! ಈಗ ಆ ಕೋಳಿ ಸತ್ತು ಹೋದರೆ???!!! ಆ ಮುಸಲ್ಮಾನರ ಮನೆಯವರಿಗೆ ಕೋಳಿ ಸಾಯಿಸಿದ್ದು ನಾನೆ ಎಂದು ಗೊತ್ತಾದರೆ??!!! ನನ್ನನ್ನು ಅವರು ಸುಮ್ಮನೆ ಬಿಡುವುದಿಲ್ಲ... ಕಂಬಕ್ಕೆ ಕಟ್ಟಿ ಹಾಕಿ ಹೊಡೆಯುತ್ತಾರೆ..." ಹೀಗೆ ದಿಗಿಲು ಹುಟ್ಟಿಸುವ ಯೋಚನೆಗಳು ನನ್ನ ತಲೆಯಲ್ಲಿ ಓಡಲಾರಂಭಿಸಿದವು. ಹಿಂದೆ ಮುಂದೆ ನೋಡದೇ, ತಕ್ಷಣ ಕಾಲಿಗೆ ಬುದ್ಧಿ ಹೇಳಿದೆ. ಸರಕ್ಕನೆ ಮನೆಯೊಳಗೆ ನುಗ್ಗಿ, ಒಂದು ಲೋಟ ನೀರು ಗಟ ಗಟನೆ ಕುಡಿದು, ಏನೂ ಗೊತ್ತಿಲ್ಲದವನಂತೆ ಟಿ.ವಿ ನೋಡುತ್ತಾ ಕುಳಿತೆ.

ಟಿ.ವಿ ನೋಡುತ್ತಿದ್ದರೂ ನನ್ನ ದೇಹ ಮಾತ್ರ ಅಲ್ಲಿತ್ತು, ಮನಸ್ಸು ಇನ್ನೂ ಬಾವಿಯ ಬಳಿಯೇ ಇತ್ತು. ಆ ಕೋಳಿಗೆ ಏನೂ ಆಗದಿದ್ದರೆ ಸಾಕು ಎಂದು ಒಳಗೊಳಗೇ ನನ್ನಷ್ಟಕ್ಕೆ ನಾನೇ ಅಂದುಕೊಳ್ಳುತ್ತಿದ್ದೆ. ಯಾರೊಂದಿಗೂ ಮಾತನಾಡಲಿಲ್ಲ.

ಸರಿ,ಹಾಗೇ ಒಂದು ಘಂಟೆ ಕಳೆದುಹೋಯಿತು. ಅದೆಲ್ಲಿಂದ ಬಂತೊ ಧೈರ್ಯ,ಹೋಗಿ ಏನಾಗಿದೆ ಎಂದು ನೋಡೇಬಿಡೋಣವೆಂದುಕೊಂಡು ಮತ್ತೆ ಬಾವಿಯ ಬಳಿ ಹೋದೆ. ಅಲ್ಲಿನ ದೃಶ್ಯ ಕಂಡು ನನ್ನ ಏದೆ ಒಮ್ಮೆಲೆ ಜೋರಾಗಿ ಬಡಿದುಕೊಳ್ಳಲಾರಂಭಿಸಿತು. ಆ ಬಾವಿಯ ಸುತ್ತಲೂ ಜನ ಜಂಗುಳಿ. ನನ್ನ ಕಥೆ ಇವತ್ತಿಗೆ ಮುಗಿಯಿತು ಎಂದುಕೊಂಡೆ. ಅಷ್ಟು ಭಯ ಇದ್ದರೂ ಆ ಜನರ ಮಧ್ಯ ತೂರಿಕೊಂಡು ಬಾವಿಯ ಕಟ್ಟೆಯ ಹತ್ತಿರ ಬಂದು ನಿಂತೆ.ನನ್ನ ಎದುರಿಗೆ ಬಾವಿಯ ಇನ್ನೊಂದು ಬದಿಯಲ್ಲಿ ಮುಸಲ್ಮಾನರ ಹೆಂಗಸೊಬ್ಬಳು "ಅದ್ಯಾವನೋ ನೋಡ್ರಪ್ಪ, ಕೋಳಿಗೆ ತಗೊಂಡ್ಬಿಟ್ಟಿ ಬಾವಿ ಒಳಗೆ ಹಾಕ್ಬಿಟ್ಟಿದ್ದಾನೆ. ಏನು ಜನಾನೋ ಏನೊ!!!" ಎಂದು ಏರುದನಿಯಲ್ಲಿ ಕೂಗಾಡುತ್ತಿದ್ದಳು. ವಾಪಸ್ಸು ಓಡಿ ಹೋಗೋಣವೆನಿಸಿತು. ಬಾವಿಯ ಒಳಗೆ ಒಮ್ಮೆ ಇಣುಕಿ ನೋಡಿದೆ. ಯಾರೊ ಇಳಿದಿರುವುದು ಕಂಡಿತು. ಕೋಳಿಯನ್ನು ಮೇಲೆತ್ತಿಕೊಂಡು ಬರುತ್ತಿದ್ದರು. ಆ ಕೋಳಿ ಬದುಕಿದ್ದನ್ನು ಕಂಡು ನನಗೆ ಕೊಂಚ ಸಮಾಧಾನವಾಯಿತು. ನಿಜಕ್ಕೂ ಅಲ್ಲಿದ್ದವರಿಗೆ ಕೋಳಿಯನ್ನು ಒಳಗೆ ಹಾಕಿದವರು ಯಾರು ಎಂದು ತಿಳಿದಿರಲಿಲ್ಲ. ಈ ವಿಷಯ ನನಗೆ ನಿಧಾನವಾಗಿ ಅರ್ಥವಾಯಿತು. ನನ್ನಲ್ಲಿದ್ದ ಭಯವೆಲ್ಲ ಕ್ಷಣಾರ್ಧದಲ್ಲಿ ಮಾಯವಾಯಿತು. ಈ ಕುಚೇಷ್ಟೆ ಮಾಡಿದ್ದು ನಾನೆ ಎಂದು ಯಾರಿಗೂ ಗೊತ್ತಿಲ್ಲ ಎಂದುಕೊಂಡು ಒಳಗೇ ತುಂಟ ನಗೆ ನಕ್ಕೆ. ನನ್ನ ತುಂಟತನದ ಬಗ್ಗೆ ನಾನೇ ಹೆಮ್ಮೆ ಪಟ್ಟೆ. ಏನೂ ಗೊತ್ತಿಲ್ಲದವನಂತೆ ಸುಮ್ಮನೆ ನಿಂತೆ. ಕೋಳಿಯನ್ನು ಹೊರತರುವವರೆಗೂ ಅಲ್ಲೇ ನಿಂತು ತಮಾಷೆ ನೋಡಿದೆ. ಎಲ್ಲಾ ಮುಗಿದ ನಂತರ ಮನೆ ಕಡೆಗೆ ನಡೆದೆ.

ಇಂದಿಗೂ ಈ ವಿಷಯವನ್ನು ನಾನು ಮನೆಯಲ್ಲಿ ದೊಡ್ಡವರ ಮುಂದೆ ಹೇಳಿಲ್ಲ. ಆ ಬಾವಿಯ ಬಳಿ ಹೋದಾಗಲೆಲ್ಲ ಆ ಘಟನೆ ನೆನಪಾಗಿ ನಗು ಬರುತ್ತದೆ.

ಬಾಲ್ಯದ ನೆನಪು ಎಷ್ಟು ಮಧುರ!!! ಅಲ್ಲವೆ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿ ಬರೆದಿದ್ದೀರ ಕಿರಣ್.
ನಿಮ್ಮ ಕೋಳಿಯ ಕಥೆ ನನ್ನ ಬಾಲ್ಯದ ಎಷ್ಟೊಂದು ಘಟನೆಗಳನ್ನ ನೆನಪಿಸಿತು.
ಸವಿತ