ಮತ್ತದೇ ಖಾಲಿತನ, ಬೇಸರ

To prevent automated spam submissions leave this field empty.

ಹಾಡುಗಳ ಸಿಡಿ ಇಟ್ಟಲ್ಲೇ ಇದೆ. ಒಂದೇ ಕ್ಲಿಕ್ಕಿಗೆ ಕಿಶೋರ್‌ ಹಾಡತೊಡಗುತ್ತಾನೆ. ಆದರೆ ಬೆರಳುಗಳು ಚಲಿಸುವುದಿಲ್ಲ.

ಕೈ ಚಾಚಿದರೆ ಕಗ್ಗ ಸಿಗುತ್ತದೆ. ಡಿವಿಜಿ ವೇದಾಂತ ಹೇಳುತ್ತಾರೆ. ಡಾಮ್ನಿಕ್‌ ಲ್ಯಾಪಿಯರ್‌ ಚೆಂದಗೆ ಕತೆ ಹೇಳುತ್ತಾನೆ. ತರುಣ್‌ ತೇಜ್‌ಪಾಲ್‌ ಇದ್ದಕ್ಕಿದ್ದಂತೆ ಖಾಲಿಯಾದ ಸ್ಥಿತಿ ವರ್ಣಿಸುತ್ತಾನೆ. ಭೈರಪ್ಪನವರು ಸಾರ್ಥ ಹೊರಡುತ್ತಾರೆ. ತಾವು ಖಾಲಿಯಾಗಿದ್ದೇವೆ ಎಂಬುದನ್ನು ಅನಂತಮೂರ್ತಿ ಋಜುವಾತು ಮಾಡುತ್ತಾರೆ. ಆದರೂ ಕೈ ಚಾಚುವುದಿಲ್ಲ.

ಜೇಬಲ್ಲೇ ಇದೆ ಕೀಲಿ. ಬೆರಳೊತ್ತಿದರೆ ಸ್ಕೂಟಿ ಶುರುವಾಗುತ್ತದೆ. ಎಂಟೂ ದಿಕ್ಕುಗಳಿಗೆ ಯಾತ್ರೆ ಹೊರಡಬಲ್ಲುದು. ಆದರೂ ಕೈ ಸುಮ್ಮನಿದೆ.

ಎರಡೇ ಬಟನ್ನಿಗೆ ಮೆಚ್ಚಿನ ಚಾನೆಲ್‌ ಪ್ರತ್ಯಕ್ಷವಾಗುತ್ತದೆ. ಗಂಟೆ ಒಂಬತ್ತಾಯಿತೆ? ಪ್ರೈಮ್‌ ನ್ಯೂಸ್‌ ಬರುತ್ತಿರುತ್ತವೆ. ಏಕೋ ಸುದ್ದಿಗಳು ಬೇಸರ ಹುಟ್ಟಿಸುತ್ತವೆ. ರಿಮೋಟ್‌ ಅಲ್ಲೇ ಕೂತಿದೆ. ಆಜ್ಞೆಗಾಗಿ ಕಾಯುವ ಸಾಕುನಾಯಿಯಂತೆ.

ಯಾವಾಗ ಬೇಕಾದರೂ ಮೊಳಗಬಲ್ಲ ಮೊಬೈಲ್‌ ಪಕ್ಕಕ್ಕಿದೆ, ಥೇಟ್‌ ಸಿಡಿಯಲು ಸಿದ್ಧವಾದ ಬಾಂಬ್‌ನಂತೆ. ಬೆರಳೊತ್ತಿದರೆ ಇಷ್ಟಪಡುವ ಹಲವಾರು ಮಿತ್ರರು ಅಂಕೆಗಳಾಗಿ ಕಾಯುತ್ತಿದ್ದಾರೆ. ಆದರೂ ಕೈ ಅತ್ತ ಸರಿಯುತ್ತಿಲ್ಲ.

ಹಳೆಯ ಫೊಟೊಗಳ ಆಲ್ಬಮ್ಮುಗಳಿವೆ. ಅಚ್ಚಾದ ರಾಶಿರಾಶಿ ಪತ್ರಿಕೆಗಳಿವೆ. ಅಚ್ಚಿಗೆ ಕೊಡದೇ ಹಾಗೇ ಇಟ್ಟುಕೊಂಡ ನೂರಾರು ಬರಹಗಳಿವೆ. ಕಣ್ಣು ಮುಚ್ಚಿದರೆ ಮನಸ್ಸು ಮೂವತ್ತು ವರ್ಷ ಹಿಂದಕ್ಕೂ ಹೋಗಬಲ್ಲುದು. ಎಳೆಎಳೆಯನ್ನೂ ಹೆಕ್ಕಿ ನೆನಪಿನ ಚಾದರ ನೇಯಬಲ್ಲುದು. ಯಾವುದೋ ಎಳೆ ಹಿಡಿದೆಳೆದರೆ ಹಾಡಾಗುತ್ತದೆ, ಪ್ರಬಂಧವಾಗುತ್ತದೆ, ಕತೆಯಾಗುತ್ತದೆ, ಕೊಂಚ ಶ್ರದ್ಧೆಯಿಂದ ಕೂತರೆ ಕವಿತೆಯೂ ಆಗುತ್ತದೆ. ಆದರೂ ಮನಸ್ಸು ಸುಮ್ಮನಿದೆ.

ಕಿಟಕಿಯಾಚೆಯ ಬಾಳೆ ಗಿಡವೂ ಸುಮ್ಮನಿದೆ. ಜೊತೆಗಿದ್ದು ನೆಮ್ಮದಿ ನೀಡುತ್ತಿದ್ದ ಪೆನ್ನೂ ಸುಮ್ಮನಿದೆ. ರಿಮೋಟ್‌ ಸುಮ್ಮನಿದೆ. ಗಾಡಿಯ ಇಗ್ನಿಷನ್‌ ಕೀ ಸುಮ್ಮನಿದೆ. ಮೊಬೈಲ್‌ ಅನ್ನು ನಾನೇ ಸುಮ್ಮನಾಗಿಸಿದ್ದೇನೆ. ಏಕೋ ಗದ್ದಲ ಮಾಡುವ ಮಕ್ಕಳೂ ಮಲಗಿದ್ದಾರೆ. ಮತ್ತೇನು ವಿಶೇಷ ಎನ್ನುವ ಮಡದಿಯೂ ಮಲಗಿದ್ದಾಳೆ. ಏನೂ ವಿಶೇಷ ಇಲ್ಲವೆನ್ನುವಂತೆ ಬೆಂಗಳೂರಿನ ಗದ್ದಲದ ಟ್ರಾಫಿಕ್ಕೂ ಮೌನವಾಗಿದೆ.

ಬೀಟ್‌ ಪೋಲೀಸನ ಸಿಳ್ಳೆಯೂ ಕೇಳುತ್ತಿಲ್ಲ. ಸಂಗಾತಿಗಾಗಿ ಬೊಗಳುವ ನಾಯಿಯೂ ಸುಮ್ಮನಿದೆ. ಇಷ್ಟೊತ್ತಿಗೆ ಹೋಗಬೇಕಿದ್ದ ಕರೆಂಟ್‌ ಕೂಡ ಏತಕ್ಕೋ ಕಾಯುವಂತೆ ಬೆಳಗುತ್ತಲೇ ಇದೆ. ಮೋಡ ಚೆದುರಿ ಅಚ್ಚರಿಯಿಂದ ಚಂದ್ರ ಕೂಡ ಹೊರಬಂದಿದ್ದಾನೆ.

ಮರೆಯದೇ ಗೇಟ್‌ ಬೀಗ ಹಾಕಿದ್ದೇನೆ. ಗಾಡಿ ಲಾಕ್‌ ಮಾಡಿದ್ದೇನೆ. ಚಾರ್ಜಿಂಗ್‌ ದೀಪಗಳನ್ನು ಪ್ಲಗ್ಗಿಗೆ ಸಿಕ್ಕಿಸಿದ್ದೇನೆ. ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದೇನೆ. ನಿನ್ನೆಯ ಕೆಲಸಗಳು ಕರಾರುವಾಕ್ಕಾಗಿ ಮುಗಿದಿವೆ. ನಾಳೆ ಏನು ಮಾಡಬೇಕೆಂಬುದು ಇಂದೇ ಸ್ಪಷ್ಟವಾಗಿದೆ.

ಇವತ್ತು ಮಾಡುವುದು ಏನು?

ಮತ್ತದೇ ಬೇಸರ, ಖಾಲಿತನ, ಏಕಾಂತ !

- ಚಾಮರಾಜ ಸವಡಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮೆಲ್ಲಗೆ ಸೂರು ನೋಡುತ್ತಾ ಕಿಶೊರನದೇ ಒ೦ದು ಹಾಡು ಗುನುಗಿಕೊಳ್ಳಿ..ಹಾಗೇ ನಿದ್ದೆ ಹೋಗಿ..ಚೆನ್ನಾಗಿದೆ ಸುಮ್ಮನೆ ಗೀಚಿರುವ ಗೀಚು...

ಸುಮ್ಮನೇ ಗೀಚಿದ್ದಲ್ಲ ದೀಪಾ ಅವರೇ, ಅನುಭವಿಸಿ ಬರೆದಿದ್ದು. ಅದರ ಪಾಡಿಗೆ ಅದು ಯಾವಾಗಲೋ ಒಮ್ಮೆ ಬರುತ್ತದೆ. ಒಂದಿಷ್ಟು ಹೊತ್ತು ಇದ್ದು ಹೋಗುತ್ತದೆ. ಬಂದಿದ್ದು ಹೋಗಲಿ ಬಿಡಿ.

- ಚಾಮರಾಜ ಸವಡಿ

ನಿಮಗೂ ಶುರುವಾಯ್ತೆ ಖಿನ್ನತೆ ಎಂಬ ರೋಗ?

ಆದ್ರೂ ಪರವಾಗಿಲ್ಲ ಬಿಡಿ. ಇಂತಹ ಒಂದಿಷ್ಟು ಲೇಖನಗಳನ್ನು ಬರೆಯಬಹುದು. ನಮ್ಮಂಥ ಖಿನ್ನತಿಯರಿಗೆ ಹೊರ ಬರುವ ದಾರಿ ತಿಳಿದಂತಾಯ್ತು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ಖಿನ್ನತೆ ಎಲ್ಲರಲ್ಲೂ ಇದ್ದೇ ಇರುತ್ತದೆ ಪಲ್ಲವಿ. ಆದರೆ, ಪ್ರಮಾಣ ವ್ಯತ್ಯಾಸವಾಗಬಹುದು, ಅಷ್ಟೇ. ಅದನ್ನೊಂದು ಕ್ರಿಯಾತ್ಮಕ ಅಭಿವ್ಯಕ್ತಿಯನ್ನಾಗಿ ನೋಡುವುದೊಂದೇ ಉತ್ತಮ ಮಾರ್ಗ. ಅದು ಸಾಧ್ಯವಾಗದಿದ್ದರೆ, ವೈದ್ಯರನ್ನು ಕಾಣುವುದೇ ಉತ್ತಮ.

ನಿಮ್ಮ ’ಖಿನ್ನ’ ಬರಹಗಳನ್ನು ಓದಿದ ನಂತರ, ನಿಮಗೆ ವೈದ್ಯರ ಅವಶ್ಯಕತೆ ಖಂಡಿತ ಇಲ್ಲ ಅನಿಸುತ್ತದೆ. ಪ್ರತಿಕ್ರಿಯೆಗಾಗಿ ಥ್ಯಾಂಕ್ಸ್‌.

- ಚಾಮರಾಜ ಸವಡಿ