ಗೋವಿಂದ ಸ್ವಾಮಿ ಎನ್ನುವ ಸಂತ -ಭಾಗ ೨

To prevent automated spam submissions leave this field empty.

ಅವರು ಕೇರಳದಲ್ಲಿರುವ ಶ್ರೀಸ್ವಾಮಿ ಶಿವಾನಂದರ ಆಶ್ರಮಕ್ಕೆ ಬಂದು ಅವರ ಸಲಹೆ ಪಡೆದರು. ಶಿವಾನಂದರು ಅವರನ್ನು ನಿತ್ಯಾನಂದರ ಆಶ್ರಮಕ್ಕೆ ಕಳಿಸಿದರು. ಆಗ ನಿತ್ಯಾನಂದರು ಮುಂಬಯಿಯ ವಜ್ರೇಶ್ವರಿಯಲ್ಲಿ ಮತ್ತು ನಂತರ ಗಣೇಶಪುರಿಯಲ್ಲಿದ್ದರು. ಗೋವಿಂದಸ್ವಾಮಿಯವರು ಕೇರಳದಿಂದ ಪಾದಯಾತ್ರೆಯಲ್ಲಿ ಮುಂಬಯಿ ತಲಪಿದರು. ಆಗ ಅವರಿಗೆ ೨೮ ವರುಷ ಪ್ರಾಯ. ಅಲ್ಲಿಯ ವರೆಗೆ ಅವರು ದಕ್ಷಿಣ ಭಾರತ ಬಿಟ್ಟು ಹೊರಗೆ ಹೋಗಿರಲಿಲ್ಲಾ. ರಮಣಾಶ್ರಮ ಅರುಣಾಚಲಕ್ಕೆ ಹೋದದ್ದು ಇದರ ನಂತರವೇ.
ಗಣೇಶಪುರಿಯಲ್ಲಿರುವ ನಿತ್ಯಾನಂದರಲ್ಲಿ ಹೋಗಿ ಶಿಷ್ಯನನ್ನಾಗಿ ಸ್ವೀಕರಿಸಲು ಬೇಡಿಕೊಂಡಾಗ ನಿತ್ಯಾನಂದರು ಅವನಲ್ಲಿ ಶಿಷ್ಯನಲ್ಲಿರಬೇಕಾದ ಗುಣಗಳಿವೆಯೇ ಎಂದು ಪರಿಶೀಲಿಸತೊಡಗಿದರು. ಒಂದು ದಿವಸ ಗೋವಿಂದರನ್ನು ಕರೆದು ವಜ್ರೇಶ್ವರಿಯಲ್ಲಿರುವ ಒಂದು ಹೋಟೇಲಿಗೆ ಹೋಗಿ ಕೆಲಸಕ್ಕೆ ನಿಲ್ಲಲು ಹೇಳಿದರು. ಅವರು ತಿಳಿಸಿದ ಹೋಟೇಲು ಶಾಕಾಹಾರಿ ಮತ್ತು ಮಾಂಸಾಹಾರಿಯಾಗಿತ್ತು. ಗೋವಿಂದರು ನಂಬೂದ್ರಿ ಮನೆತನದಿಂದ ಬಂದವರೆಂದು ಗೊತ್ತಿದ್ದೂ ನಿತ್ಯಾನಂದರು ಅವರನ್ನು ಆ ಹೋಟೇಲಿಗೆ ಕೆಲಸ ಮಾಡಲು ಕಳಿಸಿದ್ದರು. ಅಲ್ಲಿ ಅವರು ಮಾಂಸಹಾರವನ್ನು ಗಿರಾಕಿಗಳಿಗೆ ಸರಬರಾಜು ಮಾಡಬೇಕಾಗಿತ್ತು ಮಾತ್ರವಲ್ಲ ಅವರ ಎಂಜಲನ್ನು ಕೂಡಾ ತೆಗೆದು ಸ್ವಚ್ಛ ಮಾಡುವ ಕೆಲಸ, ಪಾತ್ರೆ ತೊಳೆಯುವ ಕೆಲಸ ಮಾಡಬೇಕಾಗಿತ್ತು. ಗೋವಿಂದರು ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದರು. ಆರು ತಿಂಗಳ ನಂತರ ನಿತ್ಯಾನಂದರು ಕೆಲಸ ಬಿಡಿಸಿ ಗಣೇಶಪುರಿಗೆ ಬರಹೇಳಿದರು.
ಅಲ್ಲಿಂದ ಬಂದವರೇ ಗೋವಿಂದರು ತನ್ನ ಸಾಧನೆಯನ್ನು ತೀವ್ರಗೊಳಿಸಿದರು. ತನ್ನ ದೈನಂದಿನ ವ್ಯವಹಾರಗಳ ಬಗ್ಗೆ ಪೂರ್ಣ ಅನಾಸಕ್ತರಾಗಿ ಸಾಧನೆಯನ್ನು ಮಾಡತೊಡಗಿದರು. ಹೀಗೆ ಅವರ ಸಾಧನೆಮಾಡುತ್ತಾ ಒಂದು ದಿವಸ ನಿತ್ಯಾನಂದರಲ್ಲಿ " ನಿಮ್ಮನ್ನೇ ನಂಬಿ ನಿಮ್ಮ ಶಿಷ್ಯನಾಗಲು ಬಂದ ನನಗೆ ನಿಮ್ಮ ರಕ್ಷಣೆಯ ಭರವಸೆ ಬೇಕಾಗಿದೆ." ಎಂದರು. "ಈಗಾಗಲೇ ನಿಮಗೆ ರಕ್ಷಣೆ ಕೊಟ್ಟಾಗಿದೆ. ಇನ್ನು ಮುಂದೆ ನೀನು ನಿನ್ನ ಸಾಧನೆಗಾಗಿ ಅನಗಾಂವ್ ಗೆ ಹೋಗಬೇಕಾಗಿದೆ. ಈಗಲೇ ಹೊರಡು." ಎಂದು ನಿತ್ಯಾನಂದರು ಹೇಳಿದರು. ಗೋವಿಂದರಿಗೆ ಅನಗಾಂವ್ ಎಲ್ಲಿದೆ, ಅಲ್ಲಿ ತನ್ನ ವಾಸದ ವ್ಯವಸ್ಥೆಯೇನು ಎಂಬುದು ಗೊತ್ತಿಲ್ಲದ ಕಾರಣ ನಿತ್ಯಾನಂದರಲ್ಲಿ ವಿಚಾರಿಸಿದ್ದಕ್ಕೆ "ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದರ ಬಗ್ಗೆ ನೀನು ಯಾವ ಚಿಂತೆಯನ್ನು ಮಾಡಬೇಡ. ಅನಗಾಂವ್ ಭಿವಂಡಿ ಪಟ್ಟಣದ ಹತ್ತಿರವಿದ್ದು, ಠಾಣಾದಿಂದ ವಾಡಾಕ್ಕೆ ಹೋಗುವ ದಾರಿಯಲ್ಲಿದೆ."
ಗೋವಿಂದರು ಅನಗಾಂವ್ ತಲಪಿದರು. ಎಲ್ಲಿ ನಿಲ್ಲುವುದೆಂದು ತಿಳಿಯದೇ ಒಂದು ಆಲದ ಮರದ ಕೆಳಗೆ ಕುಳಿತು ಧ್ಯಾನಾಸಕ್ತರಾದರು. ಹೀಗೆ ಕೆಲವು ದಿವಸ ಅನ್ನ ಆಹಾರವಿಲ್ಲದೆ ಕುಳಿತು ಧ್ಯಾನ ಮಾಡುವ ಒಬ್ಬ ಸಂತನನ್ನು ಕಂಡು ದಿವಸಾಗಲೂ ಅಲ್ಲಿಂದ ತನ್ನ ಹೊಲದ ಕೆಲಸಕ್ಕೆ ಹೋಗುವ ರೈತನಿಗೆ ಆಶ್ಚರ್ಯವಾಯಿತು. ಒಂದು ದಿವಸ ಸುರಿಯುವ ಧಾರಾಕಾರ ಮಳೆಯಲ್ಲಿ ಈ ಸಂತನ ಧ್ಯಾನಾಸಕ್ತನಾಗಿದ್ದ ಸಮಯ ಅಲ್ಲಿಂದ ಹಾದು ಹೋಗುವ ರೈತನಿಗೆ ಕನಿಕರ ಬಂದು ಜಡಿಮಳೆಯಿಂದ ಅವರನ್ನು ರಕ್ಷ್ಜಿಸಲು ಎರಡು ದಿವಸಗಳ ವರೆಗೆ ಕೊಡೆಯನ್ನು ಹಿಡಿದು ನಿಂತಿದ್ದರು. ನಂತರ ಈ ಸಂತನ ವಿಷಯ ಊರಿನ ಇತರರಿಗೂ ತಿಳಿದು ಗೋವಿಂದರ ವಾಸಕ್ಕೆ ಅನುಕೂಲಮಾಡಲು ತೊಡಗಿದರು. ಆ ರೈತ ತನ್ನ ಜಾಗದಲ್ಲಿ ಸ್ವಲ್ಪ ಜಾಗವನ್ನು ಈ ಸಂತನ ಆಶ್ರಮಕ್ಕಾಗಿ ದಾನವಾಗಿ ಕೊಟ್ಟನು. ಹೀಗೆ ಗೋವಿಂದರ ವಾಸಕ್ಕಾಗಿ ಆಶ್ರಮ ಮತ್ತು ಸಾಧನೆಗಾಗಿ ಒಂದು ಮಂದಿರವು ಸಿದ್ಧವಾಯಿತು. ಗುರು ನಿತ್ಯಾನಂದರು ಹೇಳಿದ ಪ್ರಕಾರ ಇವರ ವಾಸಕ್ಕೆ ಮತ್ತು ಸಾಧನೆಗಾಗಿ ಊರವರೇ ಇವರು ಕೇಳದೆ ಮಾಡಬೇಕಾದರೆ ಇವರಲ್ಲಿರುವ ಯಾವುದೋ ಒಂದು ಆಕರ್ಷಣೆ ಜನರನ್ನು ಸೆಳೆದಿರಬೇಕು. ಹೀಗೆ ಜನಗಳ ಸಂಪರ್ಕ ಹೆಚ್ಚಾಗಿ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಇವರು ಅಚ್ಚುಮೆಚ್ಚಿನ "ಬಾಬಾ" ಆದರು. ನಿತ್ಯಾನಂದರ ಭಕ್ತರು ಕೆಲವರು ತಮ್ಮ ಕಷ್ಟ ಪರಿಹಾರವಾಗಲು ವಜ್ರೇಶ್ರರಿ ಯಾ ಗಣೇಶಪುರಿಗೆ ಹೋದಾಗ ನಿತ್ಯಾನಂದರು "ನಿಮ್ಮ ಹತ್ತಿರವೇ ಕಷ್ಟ ಪರಿಹಾರ ಮಾಡುವವರು ಇರುವಾಗ ನೀವು ಇಲ್ಲಿಯ ವರೆಗೆ ಯಾಕೆ ಬರುತ್ತಿರಿ. ಅನಗಾಂವ್ ಗೆ ಹೋಗಿ. ಅಲ್ಲಿ ಗೋವಿಂದರು ಇದ್ದಾರೆ. ಅವರನ್ನು ನಾನೇ ಎಂದು ತಿಳಿದು ಅವರಲ್ಲಿ ಕಷ್ಟವನ್ನು ನಿವೇದಿಸಿಕೊಳ್ಳಿ. ಒಳ್ಳೆಯದಾಗುವುದು." ಎಂದು ತಿಳಿಸುತ್ತಿದ್ದರು. ಹೀಗೆ ನಿತ್ಯಾನಂದರಿಂದ ಕಳಿಸಲ್ಪಟ್ಟ ಭಕ್ತರು ತಮ್ಮ ಕಷ್ಟಗಳು ಅನಗಾಂವ್ ನಲ್ಲಿ ಪರಿಹಾರವಾಗಲು ತೊಡಗಿದ ಮೇಲೆ ಗೋವಿಂದರು ಎಲ್ಲರಿಗೂ 'ಬಾಬಾ' ಆದರು. ಹೀಗೆ ಬಾಬಾರ ನಡವಳಿಕೆಯಲ್ಲಿ ಹಲವಾರು ಬದಲಾವಣೆಗಳಾಗಲು ತೊಡಗಿತು. ಸೂಕ್ಷ್ಮರೂಪದಲ್ಲಿ ಅವರು ಹಲವಾರು ಊರುಗಳಿಗೆ ಭೇಟಿಕೊಟ್ಟಿದ್ದರು ಎಂದು ಅವರನ್ನು ಬಲ್ಲವರು ಹೇಳತೊಡಗಿದರು. ಅಂತಹದೇ ಒಂದು ಪ್ರಸಂಗ ನಮ್ಮ ಬಂಟ್ವಾಳದಲ್ಲೂ ಜರಗಿದೆ ಎಂದು ಊರ ಹಿರಿಯರು ಹೇಳುತ್ತಾರೆ. ಹಾಗೂ ಹಲವರು ಅವರನ್ನು ಹುಚ್ಚ ಎಂದೂ ಹೇಳುವವರಿದ್ದರು. ಅನಗಾಂವ್ ನಲ್ಲಿ ಅವರನ್ನು ಎಲ್ಲರೂ ಸಂತ ಎಂದು ನಂಬುತ್ತಿರಲಿಲ್ಲಾ, ೧೯೭೭ರಲ್ಲಿ ಅವರು ಒಂದು ಕೊಲೆಯ ಆಪಾಧನೆಯಲ್ಲಿ ಜೈಲ್ ಶಿಕ್ಷೆಯನ್ನೂ ಅನುಭವಿಸಬೇಕಾಯಿತು. ಅಲ್ಲಿಯ ವಿರೋಧಿಗಳು ರಾಜಕಾರಣ ಮಾಡಿದರೂ ಕಡೆಗೆ ನಿರಪರಾಧಿಯೆಂದು ಬಿಡುಗಡೆಯಾದರು. ಇದರ ನಂತರ ಅವರಿಗೆ ಅನಗಾಂವ್ ಊರು ಬೇಡವಾಗಿ ಭಿವಾಳಿಗೆ ಬಂದು ನೆಲೆಸಿದರು. ಭಿವಾಳಿಯಲ್ಲಿ ಯಾರೂ ವಾಸಮಾಡದ ಒಂದು ಬಂಗ್ಲೆಯಲ್ಲಿ ಇವರ ವಾಸ. ಇವರ ಹಲವಾರು ಭಕ್ತರು ಈ ಹಾಳುಬಿದ್ದ ಬಂಗ್ಲೆಯ ಸ್ವಚ್ಚತೆಯನ್ನು ಮತ್ತು ನವೀಕರಣವನ್ನು ಮಾಡಿ ವಾಸಕ್ಕೆ ಅನುಕೂಲವಾಗುವ ಹಾಗೆ ಮಾಡಿದರು. ಅಲ್ಲಿಯೂ ಹಲವಾರು ಪವಾಡಗಳು ನಡೆದಿರುವುದಾಗಿ ತಿಳಿದುಬಂದಿದೆ. ಈ ಎಲ್ಲಾ ಪವಾಡಗಳ ವಿಷಯ ಮಾತ್ರ ಅವರ ಕಾಲಾನಂತರ ಜನರು ಮಾತನಾಡತೊಡಗಿದರು.
ಬಂಟ್ವಾಳಕ್ಕೆ ಬಂದರೆ ಅವರ ವಾಸವು ಸ್ಮಶಾನವಾಗಿತ್ತು. ಹೀಗೆ ಅವರು ತಮ್ಮ ಜತೆಯಲ್ಲಿಯೇ ನಿತ್ಯಾನಂದ ಸ್ವಾಮಿಯವರ ಒಂದು ಪೋಟೊವನ್ನು ಸ್ಮಶಾನದಲ್ಲಿ ತೂಗಹಾಕಿ ಧ್ಯಾನಕ್ಕೆ ಕುಳಿತುಕೊಳ್ಳುವುದು ಕೆಲವು ಭಕ್ತರಿಗೆ ಸರಿಕಾಣದ ಕಾರಣ ಗೋವಿಂದಸ್ವಾಮಿಗಳಲ್ಲಿ ಆ ವಿಶಯವನ್ನು ತಿಳಿಸಿದ್ದಕ್ಕೆ ಕೂಡಲೇ ಆ ಪೋಟೊವನ್ನು ಬಿಚ್ಚಿ ನಿತ್ಯಾನಂದರ ಚಿತ್ರವನ್ನು ಮಡಚಿ ತಮ್ಮೊಟ್ಟಿಗೇ ಇಟ್ಟುಕೊಂಡು ಅದರ ಮರದ ಕಟ್ಟನ್ನು ಅಲ್ಲಿಯೇ ಉರಿಯುತ್ತಿರುವ ಚಿತೆಗೆ ಹಾಕಿದರು. ಈಗ ಅದಕ್ಕೆ ಹಾಕಿರುವ ಗಾಜಿನ ಹಾಳೆ. ಅದನ್ನು ನದಿಗೆ ಹಾಕಬಹುದಿತ್ತು. ಆದರೆ ನಿತ್ಯಾನಂದರ ಚಿತ್ರಕ್ಕೆ ಹಾಕಿದ ಗಾಜಾದುದರಿಂದ ಗೋವಿಂದರಿಗೆ ಅದು ನಿತ್ಯಾನಂದಸ್ವಾಮಿಯವರಷ್ಟೇ ಪವಿತ್ರವಾಗಿತ್ತು. ಕೂಡಲೇ ಆ ಗಾಜನ್ನು ನಯವಾಗಿ ಅರೆದು ಹುಡಿಮಾಡಿ ಬಾಯಿಗೆ ಹಾಕಿ ನೀರು ಕುಡಿದೇ ಬಿಟ್ಟರು. ಬಂಟ್ರಾಳದಲ್ಲಿ ಅವರ ಭಕ್ತರ ಸಂಖ್ಯೆಯು ಬೆಳೆಯುತ್ತಾ ಬಂತು. ಬಂಟ್ವಾಳದಲ್ಲೂ ಅವರ ಸಾನಿಧ್ಯದಿಂದಾಗಿ ವ್ಯವಹಾರಗಳಲ್ಲಿ ಉನ್ನತಿ ಪಡೆದಿರುವವರು ಹಲವಾರು ಜನರಿದ್ದಾರೆ. ಗೋವಿಂದ ಸ್ವಾಮಿಗಳು ಹಲವಾರು ದಾರಿತಪ್ಪಿದ ಜನರಿಗೆ, ಕತ್ತಲೆಯಲ್ಲಿದ್ದವರಿಗೆ ದಾರಿದೀಪವಾಗಿದ್ದರು. ಹೀಗೆ ಹಲವರ ನಂಬಿಕೆಯ ಸಂತ ಗೋವಿಂದ ಸ್ವಾಮಿಯವರು ೧೯೯೪ರ ಫೆಬ್ರುವರಿ ತಿಂಗಳ ೧೨ನೇ ತಾರೀಕಿಗೆ ಭಗವಂತನಲ್ಲಿ ಲೀನವಾದರು.

ಈಗ ಬಂಟ್ವಾಳದಲ್ಲಿ ಅವರಿಂದ ಉನ್ನತಿಯನ್ನು ಪಡೆದಿರುವ ಹಲವಾರು ಮಂದಿ ಅವರ ನೆನಪಿಗಾಗಿ ಒಂದು ಭವ್ಯವಾದ ಮಂದಿರವನ್ನು ಕಟ್ಟಿಸಿರುತ್ತಾರೆ. ಅವರಿಂದ ತಮಗೆ ಆದ ಉಪಕಾರವನ್ನು ಮರೆಯದೇ ಅವರ ನೆನಪು ಸದಾ ಜನರಲ್ಲಿ ಇರಲಿ ಎಂದು ತಮ್ಮಿಂದಾದಷ್ಟು ಸೇವೆಯನ್ನು ಕೂಡಾ ಮಾಡುತಿದ್ದಾರೆ.

ಇನ್ನೂ ಮುಂದಿನ ಭಾಗದಲ್ಲಿ ಅವರಿಂದ ಉಪಕಾರ ಪಡೆದಿರುವವರ ಅನುಭವಗಳನ್ನು ಬರೆಯುತ್ತೇನೆ.

ಲೇಖನ ವರ್ಗ (Category):