ಸಾಮ್ರಾಟನ ಸಂದೇಶ: ಫ್ರಾನ್ಜ್ ಕಾಫ್ಕಾ

To prevent automated spam submissions leave this field empty.
[ಇಪ್ಪತ್ತನೆಯ ಶತಮಾನದ ಬಹುಮುಖ್ಯ ಲೇಖಕರಲ್ಲಿ ಒಬ್ಬನಾದ ಫ್ರಾನ್ಜ್ ಕಾಫ್ಕಾನ ಕಿರು ಕಥೆಯ ಅನುವಾದ ಇದು]
 
ಹೀಗೊಂದು ಸಾಮತಿ ಇದೆ. ಸಾಮ್ರಾಟರು ನಿನಗಾಗಿ, ಸೂರ್ಯನಂಥ ಪ್ರಭುಗಳಿಂದ ಅತಿ ಅತಿ ದೂರದಲ್ಲಿ ಅಂಜುತ್ತಾ, ನೆರಳಿನಂತೆ ಅಡಗಿ ಕುಳಿತಿರುವ ನಿನಗಾಗಿ, ಸಂದೇಶವೊಂದನ್ನು ಕಳುಹಿಸಿದ್ದಾರೆ. ಮರಣಶಯ್ಯೆಯಲ್ಲಿದ್ದ ಪ್ರಭುಗಳು ನಿನಗಾಗಿಯೇ ಆ ಸಂದೇಶ ಕಳುಹಿಸಿದ್ದಾರೆ. ದೂತನನ್ನು ಹಾಸುಗೆಯ ಬಳಿಗೆ ಕರೆದು, ಪಕ್ಕದಲ್ಲೇ ಮೊಳಕಾಲೂರಿ ಕೂರುವಂತೆ ಹೇಳಿ, ಅವನ ಕಿವಿಯಲ್ಲಿ ಸಂದೇಶವನ್ನು ಪಿಸುನುಡಿದಿದ್ದಾರೆ. ಸಂದೇಶಕ್ಕೆ ಎಷ್ಟು ಮಹತ್ವಕೊಟ್ಟಿದ್ದರೆಂದರೆ ದೂತನು ಅದನ್ನೆಲ್ಲ ಮರಳಿ ತಮ್ಮ ಕಿವಿಯಲ್ಲಿ ಹೇಳಬೇಕು ಎಂದರು. ಹಾಗೆ ಹೇಳಿದ ಮೇಲೆ ಸರಿಯಾಗಿದೆ ಅನ್ನುವ ಹಾಗೆ ತಲೆದೂಗಿದರು. ಅಡ್ಡಿಯಾಗಿದ್ದ ಗೋಡೆಗಳನ್ನೆಲ್ಲ ಕೆಡವಿದ್ದರು, ವಿಶಾಲವೂ ಉನ್ನತವೂ ಆದ ಮೆಟ್ಟಿಲುಗಳ ಮೇಲೆ ಸಾಮ್ರಾಜ್ಯದ ಸಾಮಂತರೆಲ್ಲ ನಿಂತು ನೋಡುತ್ತಿದ್ದರು. ಅಡ್ಡಿಯಾಗಿದ್ದ ಗೋಡೆಗಳನ್ನೆಲ್ಲ ಕೆಡವಿದ್ದರು, ವಿಶಾಲವೂ ಉನ್ನತವೂ ಆದ ಮೆಟ್ಟಿಲುಗಳ ಮೇಲೆ ಸಾಮ್ರಾಜ್ಯದ ಸಾಮಂತರೆಲ್ಲ ನಿಂತು ನೋಡುತ್ತಿದ್ದರು. ಹೌದು, ಮರಣದ ಪ್ರೇಕ್ಷಕರಾಗಿ ಸೇರಿದ್ದ ಎಲ್ಲ ಸಾಮಂತರು, ರಾಜಕುಮಾರರುಗಳ ಎದುರಿನಲ್ಲಿ ಅವರು ಈ ಸಂದೇಶ ನೀಡಿದರು. ದೂತನು ತಟ್ಟನೆ ಹೊರಟುಬಿಟ್ಟ. ದಣಿವರಿಯದ ಮಹಾ ಶಕ್ತಿವಂತ. ಈಗ ಬಲಗೈ ಬೀಸುತ್ತಾ ಈಗ ಎಡಗೈ ಬೀಸುತ್ತಾ ಜನರ ಗುಂಪಿನಲ್ಲಿ ಜಾಗಮಾಡಿಕೊಂಡು ನಡೆದ. ಜನ ದಾರಿ ಬಿಡದಿದ್ದಾಗ ಎದೆಯ ಮೇಲಿದ್ದ ಸೂರ್ಯ ಲಾಂಛನವನ್ನು ಬೆರಳು ಮಾಡಿ ತೋರಿಸುತ್ತಿದ್ದ. ದಾರಿಯಾಗುತ್ತಿತ್ತು. ಅವನಲ್ಲದೆ ಬೇರೆ ಯಾರೇ ಆಗಿದ್ದರೂ ಅಷ್ಟು ಸುಲಭವಾಗುತ್ತಿರಲಿಲ್ಲ. ಆದರೇನು, ನೆರೆದ ಜನ ಅಪಾರ, ಕೊನೆಯೇ ಇಲ್ಲದ ಸಂದಣಿ. ಅವನೊಮ್ಮೆ ಬಯಲಿಗೆ ಹೋದರೆ ಸಾಕು, ನೀನಿರುವಲ್ಲಿಗೆ ಹಾರಿ ಬಂದುಬಿಡಬಹುದು;

ನಿನ್ನ ಮನೆಯ ಬಾಗಿಲನ್ನು ಅವನು ಮುಷ್ಟಿಯಲ್ಲಿ ಗುದ್ದುವ, ನಿನಗೆ ಪ್ರಿಯವಾಗುವ ಸದ್ದನ್ನು ಖಂಡಿತವಾಗಿಯೂ ನೀನು ಕೇಳುತ್ತೀಯೆ. ಈಗ ವ್ಯರ್ಥವಾಗಿ ದಣಿಯುತ್ತಿದ್ದಾನೆ. ಅರಮನೆಯ ಒಳಮನೆಯ ಒಳಕೋಣೆಯಲ್ಲಿ ದಾರಿ ಬಿಡಿಸಿಕೊಳ್ಳುತ್ತಿದ್ದಾನೆ. ಅವನು ಹೊರಗೆ ಬರುವುದೇ ಅಸಾಧ್ಯ. ಹಾಗೆ ಬಂದರೂ ಏನೂ ಸಾಧಿಸಿದ ಹಾಗೆ ಆಗುವುದಿಲ್ಲ. ಆಮೇಲೆ ಅವನು ಮೆಟ್ಟಿಲು ಇಳಿಯುವುದಕ್ಕೆ ಹೆಣಗಬೇಕು. ಹಾಗೆ ಮೆಟ್ಟಿಲಿಳಿದರೂ ಏನೂ ದಕ್ಕಿದಂತೆ ಅಲ್ಲ. ಸಭಾ ಮಂಟಪಗಳನ್ನು ದಾಟಬೇಕು. ಸಭಾಮಂಟಪಗಳನ್ನು ದಾಟಿದ ಮೇಲೆ ಅರಮನೆಯ ಹೊರಾಂಗಣಕ್ಕೆ ಬರಬೇಕು. ಹೊರಾಂಗಣದಲ್ಲಿ ಮತ್ತಷ್ಟು ಮೆಟ್ಟಿಲುಗಳು, ಮತ್ತಷ್ಟು ಸಭಾಂಗಣಗಳು. ಮತ್ತೆ ಇನ್ನೊಂದು ಅರಮನೆ. ಹೀಗೆ ಅರಮನೆಯಿಂದ ಪೂರ್ತಿ ಹೊರಗೆ ಬರುವುದಕ್ಕೆ ಸಾವಿರ ವರ್ಷವಾದರೂ ಬೇಕು. ಹಾಗೂ ಅವನು ಮಹಾದ್ವಾರದಿಂದಾಚೆಗೆ ಕಾಲಿಟ್ಟರೆ-ಎಂದೂ ಸಾಧ್ಯವಾಗದ ಕೆಲಸ ಅದು-ಜಗತ್ತಿನ ಕೇಂದ್ರವಾಗಿರುವ ರಾಜಧಾನಿ ಎಂಬ ಮಹಾ ನಗರ ಅವನಿಗೆದುರಾಗಿ ಬಿದ್ದುಕೊಂಡಿರುತ್ತದೆ. ರಾಜಧಾನಿ ಗಸಿ ತುಂಬಿ ಬಿರಿಯುವಂತಿರುತ್ತದೆ. ಕಿಕ್ಕಿರಿದ ಜನ ಸಂದಣಿ ಇರುತ್ತದೆ. ಯಾರೂ, ಸತ್ತ ಮನುಷ್ಯನ ಸಂದೇಶ ಹೊತ್ತು ತಂದವನೂ ಕೂಡ, ಹೆಣಗಿ, ಹೋರಾಡಿ, ಜಾಗಮಾಡಿಕೊಂಡು ಮುಂದೆ ಸರಿಯಲು ಆಗುವುದಿಲ್ಲ. ಸಂಜೆ ಕತ್ತಲಿಳಿಯುತ್ತಿರುವಾಗ ನೀನೇ ಕಿಟಕಿಯ ಬಳಿ ಕೂತು ಸಂದೇಶದ ಕನಸು ಕಾಣುತ್ತಿರು. 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಾಜರು ಸಾಮಂತರು ಎಲ್ಲರೂ ಇದ್ದರೂ ಕೂಡಾ ಮರಣಶಯ್ಯೆಯಲ್ಲಿರುವ ಪ್ರಭುಗಳು ಯಕಶ್ಚಿತ್ ಆದ ನನ್ನನ್ನು ಲೆಕ್ಕಕ್ಕೆ ತೆಗೆದುಕೊಂಡು ಒಂದು ಸಂದೇಶ ಕಳಿಸಿದರೆಂಬ ಸುದ್ದಿಯೇ ಅಪ್ಯಾಯಮಾನವಾದುದು. ಆದರೆ ಅಬ್ಬಬ್ಬಾ ಆ ಸಂದೇಶ ನನಗೆ ತಲುಪಲು ಏನೆಲ್ಲ ಅಡ್ಡಿಗಳು. ಇರಲಿ ಸಂಜೆ ಕಿಟಕಿಯ ಬಳಿ ಕುಳಿತು ಕತ್ತಲಾವರಿಸುತ್ತಿದ್ದಂತೆ ಆಗಸದತ್ತ ನೋಡಿ ಆ ಸಂದೇಶವೇನೆಂದು ಅರಿಯುವೆ.

ಕಾಫ್ಕಾನ ಗ್ರಿಗರ್‍ ಕತೆಯನ್ನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಓದಿದ್ದೆ. ಉದ್ಯೋಗಿಯೊಬ್ಬ ಕೀಟವಾಗಿ ಬದಲಾದ ಮೇಲೆ ಅವನನ್ನು ನಡೆಸಿಕೊಳ್ಳುವ ಬಗೆಯ ನಿರೂಪಣೆ ಉಳ್ಳ ಕತೆ.

ಪ್ರೀತಿಯಿಂದ
ಸಿ ಮರಿಜೋಸೆಫ್
http://cmariejoseph.blogspot.com

ಸುಮಾರು ೨೫ ವರ್ಷಗಳ ಹಿಂದೆ ನಾನೂ ಕೂಡಾ ಕಾಫ಼್ಕನ ಕೆಲವು ಕತೆಗಳನ್ನು ಓದಿ ಮೆಚ್ಚಿದವನೇ.

ಈ ಕತೆ ಕೂಡಾ ಇಷ್ಟ ಆಯ್ತು.

ಒಂದು ಸಂದೇಹ.............

ಈ ಕತೆಯಲ್ಲಿ ಸಾಮ್ರಾಟರ ಮರಣಶೈಯ್ಯೆಯಲ್ಲಿರುವಿಕೆಗೆ ಏನಾದರು ಸಾಂಕೇತಿಕ ಅರ್ಥವಿದೆಯೇ?

ಜಯದೇವ ಪ್ರಸಾದ.
’ಮೊಳೆಯಾರ’ , ಉಡುಪಿ.