ಮರೆತು ಹೋದ ಪದಗಳು

To prevent automated spam submissions leave this field empty.

ಒರಳು: ಮಿಕ್ಸಿ ಬಂದಮೇಲೆ
ಬೀಸುವಕಲ್ಲು: ಗ್ರೈಂಡರ್ ಬಂದಮೇಲೆ
ಕಳೆ ಕುಡಗೋಲು, ನೇಗಿಲು, ಎತ್ತಿನ ಬಂಡಿ: ಟ್ರಾಕ್ಟರ್ ಬಂದ ಮೇಲೆ
ಏತ: ಪಂಪ್ ಸೆಟ್ ಬಂದಮೇಲೆ
ಕುಡಗೋಲು: ಚಾಕು ಮಾತ್ರ ಗೊತ್ತು
ಕಡಗೋಲು: ಮಿಕ್ಸಿಯಲ್ಲೇ ಮೊಸರು ಕಡೆಯುವಾಗ
ಹಂಡೆ: ಬಾಯ್ಲರ್ ಬಂದಮೇಲೆ
ಇದ್ದಿಲೊಲೆ, ಸೌದೆ ಒಲೆ: ಗ್ಯಾಸ್ ಸ್ಟೌವ್ ಬಂದಮೇಲೆ
ಜರಡಿ, ಮೊರ: ಶುದ್ಧ ಸಾಮಾನು ಅಂಗಡಿಯಲ್ಲೇ ಸಿಗುವಾಗ ಇವುಗಳನ್ನು ಮರೆಯುವುದು ತಪ್ಪಾ?
ಒನಕೆ: ಒಬವ್ವನ ಕಾಲಕ್ಕೇ ಹೋಯ್ತು ಅಂತೀರಾ?
ಮಡಕೆ, ಕಲ್ಲುಸೋರೆ, ಜಾಡಿ: ಇವೆಲ್ಲಾ ಯಾವಕಾಲದ್ದು ಮಾರಾಯ್ರಾ?
ನೆಲವು:ನೆಲುವು ಅಂತಾನೂ ಹೇಳುತ್ತಿದ್ದರು: ಕಟ್ಟೋದಕ್ಕೆ ತೊಲೇನೇ ಇಲ್ವಲ್ಲಾ!
ಉಳಿದದ್ದನ್ನು ಇನ್ನುಳಿದ ಸಂಪದಿಗರು ನೆನಪು ಮಾಡಿದರೆ ಮುಂದಿನಪೀಳಿಗೆಗೆ "ಹೀಗಿತ್ತು" ಎಂದಾದರೂ ಗೊತ್ತಾಗುತ್ತೆ.
ಮರೆಯಲಿರುವ ಪದಗಳು:
ಅಣ್ಣ,ತಮ್ಮ ,ಅಕ್ಕ,ತಂಗಿ: ಮನೆಗೊಬ್ಬನೇ/ಳೇ ಮಗ/ಮಗಳು ಇರುವಾಗ ಮುಂದೆ ಈ ಮಕ್ಕಳಿಗೆ ಸಂಬಂಧ ಸೂಚಿಸುವ ಪದಗಳಾದರೂ ಪರಿಚಯವಾಗುವುದು ಹೇಗೆ?
ಚಿಕ್ಕಪ್ಪ,ಚಿಕ್ಕಮ್ಮ, ಸೋದರಮಾವ, ಸೋದರತ್ತೆ, ಭಾವ, ಮೈದುನ, ಅತ್ತಿಗೆ, ನಾದಿನಿ, ಶಡ್ಕ, ವಾರಗಿತ್ತಿ : ಮನೆಗೊಂದೇ ಮಗುವಾದಾಗ ನಮ್ಮ ಪೀಳಿಗೆಗೇ ಈ ಪದಗಳು ಕೊನೆ.
ಅಜ್ಜ, ಅಜ್ಜಿ: ಪದಗಳು ಉಳಿಯಬಹುದು ಅಪ್ಪ-ಅಮ್ಮನನ್ನು ಮಕ್ಕಳು ಸಲಹಿದರೆ!
ಕೊನೆಯಸಾಲು:
ಕೌಟುಂಬಿಕ ಸಂಬಂಧ ಉಳಿಯಬೇಕೆನ್ನುವುದಾದರೆ ಮನೆಯಲ್ಲಿ ಎರಡಾದರೂ ಮಕ್ಕಳಿದ್ದರೆ ಮಾತ್ರ ಮುಂದೆ ಉಳಿದೀತು!
ಈಬಗ್ಗೆ ನೀವು ಬರೆಯುವುದು ತುಂಬಾ ಇದೆ. ನಿಮಗಾಗಿ ಪುಟಗಳು ಖಾಲಿಇವೆ...........

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪದ ಎನ್ನಲು ಇರುವ "ಒರೆ" ಕಳೆದು ಹೋಗುವುದರಲ್ಲಿತ್ತು.
ಈ ಸಂಪದ ಸಮುದಾಯ ಅದನ್ನು ಚಾಲ್ತಿಗೆ ತಂದಿದೆ!
*ಅಶೋಕ್

ಹಂಡೆ ನಮ್ಮನೆಯಲ್ಲಿ ಇನ್ನೂ ಇದೆ.

ಭಾನುವಾರದಂದು ಹಂಡೆ ಒಲೆಯಲ್ಲೇ ನೀರು ಕಾಯಿಸಿ ಸ್ನಾನ ಮಾಡೋದು.

-ಅನಿಲ್.

ಹರಿಹರಪುರಶ್ರೀಧರ್
ಹಂಡೆ ಏನೋ ಇದೆ, ಇನ್ನೂ ಒಂದಷ್ಟು ದಿನ ಇರುತ್ತೆ. ಆದರೂ ಕೌಟುಂಬಿಕ ಸಂಬಂಧಗಳ ಪದಬಳಕೆ ಉಳಿಯುವುದು ಮುಂದೆ ಬಲು ಕಷ್ಟ ಅನಿಲ್.

ಹಂಡೆ [ಗುಳ್ಕೆ(ತುಳುವಿನಲ್ಲಿ)] ಈ ಪದ ನಮ್ಮ ಮನೆಯಲ್ಲೂ ಚಾಲ್ತಿಯಲ್ಲಿದೆ. ದೀಪಾವಳಿ ಹಿಂದಿನ ದಿನ ಗುಳ್ಕೆಗೆ ಅಮ್ಮ ಸಿಂಗಾರ ಮಾಡುತ್ತಾರೆ.

-- ನಂದಕುಮಾರ

ಹರಿಹರಪುರಶ್ರೀಧರ್
ದೀಪಾವಳೀ ಹಬ್ಬವೆಂದರೆ ಎಣ್ಣೆ ನೀರು ಹಾಕಿಕೊಳ್ಳುವುದಕ್ಕೆ ಫೇಮಸ್.ನೀರು ತುಂಬುವ ಹಬ್ಬ ಎಂದೇ ದೀಪಾವಳಿಯ ಹಿಂದಿನ ದಿನ ನಮ್ಮಲ್ಲಿ ಆಚರಣೆಯಲ್ಲಿದೆ.

ನಮ್ಮ ಮನೇಲೂ ಅಷ್ಟೆ, ೨೦೦೩ ರಲ್ಲಿ ಕಟ್ಟಿಸಿದ್ರೂ ಸ್ನೇಹಿತರೆಲ್ಲ ಲೇವಡಿ ಮಾಡಿದ್ರು ಹಠ ಹಿಡಿದು ಹಂಡೆ ಹಾಕಿಸಿದ್ದೇನೆ. ಬೀಸುವಕಲ್ಲು ತಂದಿಟ್ಟಿದ್ದೇನೆ ಉಪಯೋಗಿಸ್ಬೇಕು. ಒರಳಕಲ್ಲು ಉಪಯೋಗಿಸ್ಲಿಕ್ಕೆ ಆರಂಭಿಸಿದೆವು ಆದರೆ ನುರಿಯುತ್ತಿಲ್ಲ. ಸರಿ ಮಾಡಿಸ್ಲಿಕ್ಕೆ ಕಲ್ಲು ಕುಟಿಗರು ಸಿಕ್ತಾ ಇಲ್ಲ. ನಿಂ ತಲೆ ತಿಂದಿದಕ್ಕೆ ಕ್ಷಮೆಯಿರಲಿ.

ತುಂಬಾ ಚೆನ್ನಾಗಿ ಗುರುತಿಸಿದ್ದೀರಿ ಶ್ರೀಧರ ಸರ್‌. ಎತ್ತು ಬಂಡಿ, ಬೂದಿ, ಬಾವಿ, ಪ್ರಭಾತ್‌ಪೇರಿ (ಅಷ್ಟುದ್ದ ನಡೆದುಹೋಗಲು ಜಾಗ ಎಲ್ಲಿದೆ?), ಅಜ್ಜನ ಕೋಲಿದು ನನ್ನಯ ಕುದುರೆ- ಅಯ್ಯೋ ಎಷ್ಟೊಂದು ವಸ್ತು, ವಿಷಯಗಳು ಮರೆಯುವ ಪಟ್ಟಿಯಲ್ಲಿವೆಯಲ್ಲ. :(

- ಚಾಮರಾಜ ಸವಡಿ
http://chamarajsavadi.blogspot.com

ಚಾಮರಾಜ್,
ಕಾಲಗ ವೇಗಕ್ಕೆ ಸಿಕ್ಕಿ ಅನೇಕ ಸಂಗತಿಗಳು ಮಾಯವಾಗುವುದರಲ್ಲಿ ಸಂಶಯವಿಲ್ಲ. ಆಧುನಿಕತೆ ಬಂದಾಗ ಹಳೆಯವು ಹೋಗಲೇ ಬೇಕು, ಹೊಸನೀರು ಬಂದು ಹಳೆಯ ನೀರು ಕೊಚ್ಚಿ ಹೋದಂತೆ, ಆದರೆ ಹಿಂದಿನ ಗಟ್ಟಿತನವೂ ಮಾಯವಗುತ್ತಿದೆಯಲ್ಲಾ! ಎಂಬ ನೋವಿದೆ. ಮನೆಗೊಂದೇ ಮಗುವಿನ ಕಾನ್ಸೆಪ್ಟ್ ಭವಿಷ್ಯದಲ್ಲಿ ನಮ್ಮ ಕುಟುಂಬಗಳನ್ನು ಹೇಗೆ ಛಿದ್ರ-ಛಿದ್ರ ಮಾಡುತ್ತದೆಂಬ ವಿಚಾರವನ್ನು ನಮ್ಮ ಚಿಂತಕರು ಯೋಚಿಸಿದ್ದಾರೆಯೇ?[ನೀವು ಈಬಗ್ಗೆ ಬರೆಯ ಬಹುದೆ? ಯೋಚಿಸಿ]
ಇರಲಿ, ಮರೆತು ಹೋಗುವ ಮುಂಚೆ ನಮ್ಮ ಕಾಲದ ಕೆಲವು ಸಂಗತಿಗಳನ್ನು ಧಾಖಲಿಸುವ ಪ್ರಯತ್ನಕ್ಕೆ ಕೆಲವರಾದರೂ ಕೈ ಜೋಡಿಸಿದರೆ ಮುಂದಿನ ಮಕ್ಕಳ ಪ್ರಾಥಮಿಕ ತರಗತಿಗಳಿಗೆ ಓದುವ ವಿಷಯಗಳಾಗಬಹುದಲ್ಲಾ!!

ಹರಿಹರಪುರಶ್ರೀಧರ್

ಶ್ರೀ ಭಾಸ್ಕರ್,
ಚೌಕಾಭಾರಾ ಆಟಾಅದಿದ್ರಾ?,

ಕೆಳಗಿನ ಕೊಂಡಿಯಲ್ಲಿ ಚಿಕ್ಕಂದಿನ ಆಟದ ನೆನಪುಗಳು ಒಂದಿಷ್ಟು ಇವೆ.ಬಿಟ್ಟು ಹೋಗಿರುವುದನ್ನು ಹಿರಿಯರೊಡನೆ ಮಾತನಾಡುತ್ತಾ ತಿಳಿದುಕೊಂಡು ರೆಕಾರ್ಡ್ ಮಾಡುವಿರಾ?

http://sampada.net/blog/hariharapurasridhar/07/11/2008/13418
ಹರಿಹರಪುರಶ್ರೀಧರ್

ಚೌಕಾಭಾರ, ಅದರಲ್ಲು ೭ ಮನೆ ಆಟ ಬಹಳ ಇಷ್ಟ ಆಗುತ್ತಾ ಇತ್ತು ನನಗೆ. ಈಗ ಕವಡೆ ಎಲ್ಲಿ ಸಿಗುತ್ತೆ ಅಂತ ಹುಡುಕಬೇಕು... ಇರಲಿ..ಹುಡುಕುವ ಪ್ರಯತ್ನ ಮಾಡುವೆ :)
ಪಗಡೆ ಕೂಡ ನಾನು ಆಡಿದ್ದೆ ನನ್ನ ಅಜ್ಜಿಯ ಜೊತೆ.

೫ ವರ್ಷದ ನನ್ಮಗನಿಗೆ ಚೌಕಾಬಾರ ಕಲ್ಸಿದ್ದೇನೆ. ಹೊರಗೆ ಆಟ ಆಡಲು ಯಾರು ಸ್ನೇಹಿತರು ಸಿಗದಿದ್ದರೆ ಅವರ ಅಜ್ಜಿಯನ್ನು ಪೀಡಿಸಿ ಆಡ್ತನೆ. ಆದ್ರೆ ಅವನೆ ಗೆಲ್ಬೇಕು ಅನ್ನೊದು ಕಂಡೀಶನ್ :-(.

ತೊಂದರೆ ಇಲ್ಲ.. :) ಮುಂದಿನ ತಿಂಗಳು ಸ್ನೆಹಿತ ಒಬ್ಬ ಬರುತ್ತಾ ಇದ್ದಾನೆ.. ಅವನಿಗೆ ಹೇಳಿದ್ದೀನಿ ೮-೧೦ ಕವಡೆ ತರಲು..

ಹಸುವನ್ನು ಕಟ್ಟೋ ಸ್ಥಳ: ಕೊಟ್ಟಿಗೆ, ಹುಲ್ಲು ಹಾಕೋ ಜಾಗ: ಗೊಂತು, ಬಡುವು ಗೊತ್ತಾ? ಮನೆಯ ಬಾಗಿಲು[ಶಟ್ಟರ್] ಮೇಲೆ ಒಂದು ಹಗೆ ಇರುತ್ತಿತ್ತು. ಅದಕ್ಕೆ ತಿರುಗುಣಿ[ ಹೋಲ್ ]ಮಾಡಿ ಅದರಲ್ಲಿ ಬಾಗಿಲಿನ ಒಂದುಕಡೆಯ ಕೊಟ್ಟನ್ನು ಕೂರಿಸುತ್ತಿದ್ದರು, ಮತ್ತೊಂದು ಕೊಟ್ಟು ನೆಲದಲ್ಲಿ ಕೂರುತ್ತಿತ್ತು. ಅದರ ಹೆಸರು ಮರೆತು ಹೋಗಿದೆ. ಹಿರಿಯರೊಡನೆ ವಿಚಾರಿಸಿ ತಿಳಿಸುವಿರಾ?

ಹುಡುಕಾಟ ಮುದುವರೆಸಿ,ಕೇಶವ ಪ್ರಸಾದ್, ವಂದನೆಗಳು

ಹರಿಹರಪುರಶ್ರೀಧರ್

ಭವಿಷ್ಯದ ಆತ೦ಕಕಾರಿ ಬೆಳವಣಿಗೆಯನ್ನು ಅನಾವರಣಗೊಳಿಸುವಲ್ಲಿ ನಿಮ್ಮ ಸೃಜನಶೀಲತೆ, ನೈಜ ಸಾ೦ಸ್ಕೃತಿಕ ಕಳಕಳಿ ಈ ನಿಮ್ಮ ಒ೦ದು ಅತ್ಯ೦ತ ಪ್ರಸ್ತುತ ಲೇಖನದಲ್ಲಿ ಸು೦ದರವಾಗಿ ಮೂಡಿಬ೦ದಿದೆ. ನಿಜಕ್ಕೂ ಕ್ಷಣಕಾಲ ನನ್ನನ್ನು ಆತ್ಮಾವಲೋಕನಕ್ಕೆ ಎಳೆದೊಯ್ತು. ಹೌದು ಶ್ರೀಧರ್, ಒ೦ದು ಸಾ೦ಸ್ಕೃತಿಕ ದುರ೦ತದ ಮನೋಜ್ಞ ಚಿತ್ರಣ ಇಲ್ಲಿದೆ.
ನಾವೆಲ್ಲಾ ಎಲ್ಲಿಗೆ ಹೋಗುತ್ತಿದ್ದೇವೆ, ಎ೦ಥ ಶ್ರೀಮ೦ತ ಬಳುವಳಿಯನ್ನು ಕಳೆದುಕೊಳ್ಳುತ್ತಿದೇವಲ್ಲ!! ಎಲ್ಲರನ್ನೂ ಚಿ೦ತನೆಗೆ ಹಚ್ಚುವ ಪುಟ್ಟ ಲೇಖನ.

ಜ್ಞಾನದೇವ್ ಮೊಳಕಾಲ್ಮುರು

ಡಾ||ಜ್ಞಾನದೇವ್ ಮೊಳಕಾಲ್ಮುರು,
ನನ್ನದೇ ಕವನದ ಒಂದು ಸಾಲನ್ನು ಹೀಗೆ ಮಾರ್ಪಡಿಸುವೆ.

ಸಂಪದದ ಬರಹ ರಾಶಿಯಲ್ಲಿ
ನನ್ನ ಬರಹದ ಒಂದು ಪದವು
ನಿಮ್ಮ ಮನಕೆ ಮುದವ ನೀಡೆ ನಾನೆ ಧನ್ಯನು
ನನ್ನ ಬರಹ ಧನ್ಯವು|

" ಇದೆಲ್ಲಾ ನನ್ನ -ನಿಮ್ಮ ಮನದೊಳಗಿನ ಏನೋ ಕಳೆದುಕೊಳ್ಳುತ್ತಿರುವ ಭಾವನೆಗಳ ಒಂದು ತುಣಕು ಅಲ್ಲವೇ?

ಹರಿಹರಪುರಶ್ರೀಧರ್

ನಾನೊಂದಷ್ಟು ಪದಗಳನ್ನು ನಿಮ್ಮ ಕಾಲಕ್ಕೇ ಗೊತ್ತಿಲ್ಲದ್ದನ್ನು ಹೇಳುತ್ತೇನೆ.
ಮೋದು=ಹೊಡೆ
ಆಟರ್=ಮೇಲೆ ಬೀಳು
ನೆಗೞ್=ಪ್ರಸಿದ್ಧಿಯಾಗು, ಚಾಲ್ತಿಯಲ್ಲಿರು
ನೆಗೞ್=ಮೊಸಳೆ
ಬಟ್ಟೆ=ದಾರಿ
ಮಾಣು=ಬಿಡು, ನಿವಾರಿಸು

ಇನ್ನೂ ಬೇಕಾದಷ್ಟು

ಇವೆಲ್ಲ ನಿಮಗೆ ಗೊತ್ತಿರಲಿಕ್ಕಿಲ್ಲ.

ಕಾಲುವೆ, ಕೆರೆ, ಮರಕೋತಿಯಾಟ, ಚಿನ್ನಿದಾಂಡು, ಕುಂಟೆಬಿಲ್ಲೆ. ಬುಗುರಿ. ಮಗ್ಗಿ(Tables), ಮೊಸರನ್ನ (curdಅನ್ನ), ಕಣ್ಣಾಮುಚ್ಚಾಲೆ. ಚಿಲಕ, ಬೋಗುಣಿ, ಕಲಗಚ್ಚು, ಬೀಗ (lock), ನಡುಮನೆ, ಹಿತ್ತಲು, ಬಾವಿ,

ಅದು ಆಯುರ್ವೇದದ ಔಷಧಿ ಸಸ್ಯವಾಗಿದ್ದರೆ ಬೇರೆಯೇ ಹೆಸರು ಚಾಲ್ತಿಗೆ ಬರುತ್ತಿತ್ತು, ಈಗಲೂ ಅಂಟುಪೂರ್ಲೆ ಯಾಗೇ ಉಳಿದಿದೆ.

ರುಬ್ಬುಗುಂಡು, ಹಾರಿಕೋಲು, ತಪ್ಪೇಲಿ, ಜಲ್ಲಿ (ದೊಡ್ಡ ಗಾತ್ರದ ಬಿದಿರಿನ ಬುಟ್ಟಿ).

ಈಗ ಎಲ್ಲರೂ ಅಂಕಲ್ ಆಂಟಿಯಾಗಿರುವಾಗ ಕಾಕಾ, ಮಾಮಾ, ದೊಡ್ಡಪ್ಪ, ಕಾಕು, ಮಾಮಿ, ದೊಡ್ಡವ್ವ, ಮೌಶಿ, ಅತ್ಯಾ ಇಂಥ ಶಬ್ದಗಳು ಮರೆತು ಹೋಗ ಬಹುದು.

ಇದೇ ರೀತಿ ಹಿಂದಿನ ಕೆಲವು ವಿಶಿಷ್ಟ ಬೈಗುಳಗಳನ್ನು ಉಪಯೋಗಿಸ್ತಿದ್ರು, ಅವು ಕೂಡ ಈಗ ಮರೆಯಾಗಿವೆ. ಅವುಗಳನ್ನೂ ಕೂಡ ಪಟ್ಟಿ ಮಾಡೋಣವೇ?

ಸಂಜೀವ್,
ವಿಚಿತ್ರ ನೋಡಿ ಹೇಗಿದೆ; ನಾವು ತಂದೆಯ ಅಣ್ಣ ತಮ್ಮಂದಿರನ್ನು ದೊಡ್ಡಪ್ಪ ಚಿಕ್ಕಪ್ಪ ಎಂದೂ ತಾಯಿಯ ಅಣ್ಣ ತಮ್ಮಂದಿರನ್ನು ಸೋದರ ಮಾವ ಎಂದೂ ಕರೆಯುತ್ತೇವೆ; ಅಲ್ವಾ? ಅದೇ ಅಂಕಲ್ ಅಂದ್ರೆ ಇವರಲ್ಲಿ ಯಾರಾದರೂ ಆಗ ಬಹುದು, ಯಾರು ಯಾವ ಸಂಬಂಧ ಅಂತಾ ಗೊತ್ತಾಗುವುದಿಲ್ಲ. ಕೆಲವರು ಕೆಲವರಿಗೆ ಕೆಲವು ದಿನಗಳಿಗೆ ಕಸಿನ್, ಅವರೇ ಯಾವಾಗಲೋ ಕಪ್ಪಲ್ ಕೂಡ ಆಗಿರುವ ಉದಾಹರಣೆ ಸಾಕಷ್ಟಿದೆ.
ಆದರೆ ಇನ್ನು ಕೆಲವೇ ದಶಕಗಳಲ್ಲಿ ಅಣ್ಣ-ತಮ್ಮ,ಅಕ್ಕ-ತಂಗಿ, ಚಿಕ್ಕಪ್ಪ, ದೊಡ್ದಪ್ಪ, ಮಾವ, ಅತ್ತೆ ಎಲ್ಲವೂ ಮರೆತು ಹೋಗಲೇ ಬೇಕು, ಕರೆಯಲು ಯಾರು ಉಳಿದಿರುತ್ತಾರೆ?

ಕಾಕಾ, ಮೌಶಿ ಇವೆಲ್ಲ ಮರಾಠಿಯಿಂದ ಕನ್ನಡಕ್ಕೆ ಬಂದ ಪದಗಳು. ಈ ಪದಗಳನ್ನು ಬೀದರಿನವಳಾದ ನನ್ನಾಕೆ ಬೞಸುತ್ತಾಳೆ. ದಕ್ಷಿಣ ಕರ್ಣಾಟಕ ಅದಱಲ್ಲೂ ಹೞೆಯ ಮೈಸೂರು ಪ್ರಾಂತ್ಯದಲ್ಲಿ ಈ ಪದಗಳ ಬೞಕೆಯಿಲ್ಲ. ಬದಲಿಗೆ ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮ ಈ ಪದಗಳ ಬೞಕೆ ಕಾಣುತ್ತೇವೆ.