ವೀಕೆಂಡ್ ಪಾರ್ಟಿಗಳೂ, ಬೆಳದಿಂಗಳೂಟವೂ....

To prevent automated spam submissions leave this field empty.

ಸಾಫ್ಟ್‌ವೇರ್‍ ಪ್ರಪಂಚದಲ್ಲಿ ವೀಕೆಂಡ್ ಪಾರ್ಟಿಗಳಿಗೆ ತುಂಬ ಮಹತ್ವವಿದೆ ಅನ್ನೋದನ್ನು ಅಲ್ಲಗಳೆಯಲಾಗದು. ಅವರವರ ಭಾವಕ್ಕೆ ಅವರವರ ಟೇಸ್ಟಿಗೆ ತಕ್ಕಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಗೆಳೆಯರೊಂದಿಗೆ (ಕೆಲವರು ತಂತಮ್ಮ ಗರ್ಲ್‌ ಫ್ರೆಂಡ್‌ಗಳೊಂದಿಗೆ) ಹೊರಟುಬಿಡುವುದು "ವೀಕ್"ನ ಉದ್ದೇಶ. ಸಾಫ್ಟ್‌ವೇರ್‍ ಪ್ರಪಂಚದಲ್ಲಿನ ಎಲ್ಲ ಗೆಳೆಯರ ಪೈಕಿ ಹೆಚ್ಚಿನ ಭಾಗದಷ್ಟು ಗೆಳೆಯರು ‘ಸೋಮರಸ’ದಾಸರೇ. ಹೀಗಾಗಿ ‘ಸೋಮರಸದಾಸರ’ ಗೆಳೆತನದೊಳಗೆ ದಾಸರಲ್ಲದವರ ಪಡಿಪಾಟಲು ಹೇಳತೀರದು. ಕೆಲವರು ತಮ್ಮ ಲಿಮಿಟ್ಟಿಗಿಂತ ಜಾಸ್ತಿಯೇ ದಾಸರಾಗಿಬಿಟ್ಟರಂತೂ ಅವರನ್ನು ಅಲ್ಲಿಂದ ಕರೆತರುವವರು ನಿಜವಾಗಿಯೂ ಪಾಪಿ(?)ಗಳು. ಪಬ್ಬು, ಕ್ಲಬ್ಬು, ರೆಸ್ಟೂರಾಂಟು, ರೆಸಾರ್ಟುಗಳಲ್ಲಿ ರಾತ್ರಿಯ ಕಳೆಯೇ ಒಂಥರಾ ಇರುತ್ತೆ. ಆರ್ಟಿಫಿಷಿಯಲ್ ಗಾರ್ಡನ್, ಹೂದೋಟ, ಒಣಗಿದ ಗಿಡಗಳೊಳಗೆ ಸೀರಿಯಲ್ ಲೈಟ್ ಬಿಟ್ಟು ಸೃಷ್ಟಿಸುವ ಹೂಗಿಡಗಳ ನಡುವೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ನೆಪಕ್ಕಾದರೂ ಇರುವಂತಹ ಹುಲ್ಲಿನ ಹಾಸಿಗೆ, ಅದರ ಮಧ್ಯದೊಳಗೊಂದು ನೀರ ಕಾರಂಜಿ. ಇಷ್ಟಕ್ಕೇ ಸ್ವರ್ಗ ಸಿಕ್ಕವರಂತೆ ಉನ್ಮತ್ತರಾಗಿ, ಮದೋನ್ಮತ್ತರಾಗಿ ವಾಹ್! ಅನ್ನುವಂತಹ ಉದ್ಗಾರವೆಸೆದು ಮನತಣಿಸಿಕೊಳ್ಳುವವರ ನಡುವೆ, ನಮ್ಮ ಸೃಷ್ಟಿಯ ರಮ್ಯತೆಯ ನಡುವೆ, ನಿಸರ್ಗದ ಒಡಲಿನಲ್ಲಿ ಬೆರೆತು, ಅದರ ಸೊಬಗನ್ನು ಸವಿಯುವ ನಮ್ಮಂಥವರು ನಿಜಕ್ಕೂ ಗ್ರೇಟ್ ಅಲ್ವಾ?
ನಮ್ಮ ಊರ ಪಕ್ಕದ ಹಳ್ಳದಲ್ಲಿ ಹರಿದಾಡುವ ನೀರ ನಡುವೆ ಕಾಲಿಳಿಬಿಟ್ಟಾಗ ನೀರ ತಂಪಿಗೆ ಛಳಿಯೇ ಮೈ ಹೊಕ್ಕಂತಾಗಿ ರೋಮಾಂಚಿತರಾಗುವ, ನಾಲ್ಕಾರು ಹೆಜ್ಜೆ ದಾಟಿದರೆ ಸಿಗುವ ಗುಡ್ಡಗಳ ನಡುವೆ, ಬಗೆ ಬಗೆಯ ಗಿಡಗಳ ನಡುವೆ ತೂಗು ಮಂಚ ಕಟ್ಟಿ ತುಯ್‌ದಾಡುವ, ದಾರಿ ಬದಿಯ ಬೋರೆ ಹಣ್ಣು ಚಪ್ಪರಿಸುತ್ತ, ಆಯಾಸವಾದರೆ ಹಸಿರ ಹುಲ್ಲಿನ ಮೇಲೆ ಸುರುಳಿಯಂತೆ ಸುತ್ತಿಕೊಳ್ಳುತ್ತಾ ಆಹ್ಲಾದತೆಯನ್ನು ಪಡೆದುಕೊಳ್ಳುವ ನಮ್ಮ ಗೆಳೆಯರ ಬಳಗಕ್ಕೆ ನಿಜಕ್ಕೂ ಹೆಮ್ಮೆ. ನಾವು ಗೆಳೆಯರೆಲ್ಲರೂ ಸೇರಿ, ಹುಣ್ಣಿಮೆಯ ದಿನಗಳಲ್ಲಿ ರಾತ್ರಿ ಚಂದ್ರನ ಬೆಳಕಿನಲಿ, "ಬೆಳದಿಂಗಳೂಟ" ಮಾಡುತ್ತೇವಲ್ಲ, ನಿಜಕ್ಕೂ ಅದು ಅಮೃತಕ್ಕೆ ಸಮಾನ. ಎಲ್ಲರೂ ತಮ್ಮ ತಮ್ಮ ಮನೆಯಿಂದ ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸಿಕೊಂಡು ಚಕ್ಕಡಿ ಹತ್ತಿ ಹೊರಡುತ್ತಿದ್ದರೆ ಅದು ನಿಜಕ್ಕೂ ‘ಮದುವೆ ದಿಬ್ಬಣ’ ಹೊರಟಂತಹ ಸಂಭ್ರಮ. ಎತ್ತಿನ ಕೊರಳ ಗಂಟೆಯ ನಾದ, ರಸ್ತೆಯ ಪಕ್ಕದ ಗಿಡಗಂಟಿಗಳಲ್ಲಿ ಹೆಸರೇ ಗೊತ್ತಿಲ್ಲದ ಹುಳುವೊಂದು ಹೊರಡಿಸುವ ‘ಕಿರ್‍ರೋ' ಎನ್ನುವ ಶಬ್ದದ ಮೋಜು, ಸಣ್ಣ ಕಾಲುವೆಯ ಪಕ್ಕದ ಗಿಡದಲ್ಲಿ ಹತ್ತಿಕೊಂಡ 'ಸಣ್ಣ ಜೇನ'ನ್ನು ಎಲ್ಲರೂ ಸೇರಿ ಹಂಚಿಕೊಂಡು ತಿನ್ನುವುದು, ನಡು ನಡುವೆ ನನ್ನ ಸ್ನೇಹಿತನೊಬ್ಬ ಹಾಡಿಕೊಳ್ಳುವ ಮೈಸೂರು ಮಲ್ಲಿಗೆಯ ಹಾಡು, ಅದಕ್ಕೆ ಸೆಡ್ಡು ಹೊಡೆದವನಂತೆ ಚಕ್ಕಡಿ ಓಡಿಸುವ ರೈತನೊಬ್ಬ ಹಾಡಿಕೊಳ್ಳುವ 'ಕರಿಯೆತ್ತ ಕಾಳಿಂಗ, ಬಿಳಿಯೆತ್ತ ಬೀಳಿಂಗಾ' ಅನ್ನೋ ಜನಪದ, ಇನ್ನೊಬ್ಬನ ಹಂತಿ ಪದ ... ಅಬ್ಭಾ... ! ಹೀಗೆಯೇ ತಮಾಷಿಸಿಕೊಳ್ಳುತ್ತ, ಮಜಾ ತೆಗೆದುಕೊಳ್ಳುತ್ತ ಎಲ್ಲರೂ ಸೇರಿಕೊಂಡು ನಿರ್ಧರಿತ ತೋಟದ ಜಾಗ ತಲುಪುತ್ತೇವೆ. ಹುಲ್ಲ ಹಾಸಿಗೆ ಮೇಲೆ ಒಂದೆರಡು 'ರಗ್ಗು'ಗಳು ಒಗೆದು, ಎಲ್ಲರೂ ಚಕ್ಕಂಬಕ್ಕಳವೋ, ಮಂಡಿಯೂರಿಯೋ, ನಮಾಜು ಬೀಳುವವರಂತೆಯೋ, ಏಸುವಿನ ಮುಂದೆ ನಿಂತಂತೆಯೋ, ತಮಗ್ಯಾವುದು ಸಲೀಸು ಅನಿಸುತ್ತೋ ಆ ಭಂಗಿಯಲ್ಲಿ ಕೂತುಕೊಂಡುಬಿಟ್ಟೆವೆಂದರೆ ನಮ್ಮ ಬಳಗದ ಹರಟೆಗಳು ಆರಂಭವಾಗುತ್ತವೆ. ಜೋಕ್ಸು, ಡ್ಯಾನ್ಸೂ, ಆಕ್ಟಿಂಗೂ, ಮಿಮಿಕ್ರಿ, ನಾಟಕದ ಡೈಲಾಗ್‌ಗಳು, ಜನಪದರ ಹಾಡುಗಳು, ಸಿನಿಮಾದ ಹಾಡುಗಳು, ಭಕ್ತಿ-ಭಾವಗೀತೆಗಳು, ಕನ್ನಡದ ಗೀತೆಗಳು, ಎಲ್ಲವೂ ಕೇಳಿಸುತ್ತ, ಕೇಳಿಸಿಕೊಳ್ಳುತ್ತ ಸಮಯ ಕಳೆದುಕೊಳ್ಳುತ್ತಿದ್ದರೆ ಹಸಿವು ಗಾಯಬ್! ಅಷ್ಟರ ನಡುವೆ ಊಟೇಶ್ವರನೊಬ್ಬ ಊಟದ ನೆನಪು ಮಾಡುತ್ತಿದ್ದಂತೆ ಎಲ್ಲರೂ ‘ಹುರ್ರೋ.....’ ಅಂತ ಊಟಕ್ಕೆ ರೆಡಿ. ತಮ್ಮ ತಮ್ಮ ಬುತ್ತಿ (ಊಟದ ಡಬ್ಬಿ) ಬಿಚ್ಚಿ, ಎಲ್ಲರೂ ಒಂದೆಡೆ ಒಟ್ಟಾಗಿಸಿ, (ಯಾರ ಊಟವೂ ಗೊತ್ತಾಗಬಾರದೆಂದು ಎಲ್ಲವನ್ನೂ ಚಿತ್ರಾನ್ನದಂತೆ ಕಲೆಸಿಬಿಡಲಾಗುತ್ತದೆ) ಅದರಲ್ಲೊಬ್ಬ ಎಲ್ಲರ ತಟ್ಟೆಗೆ ಬಡಿಸುತ್ತಿದ್ದಂತೆಯೇ "ಓಂ ಅಸತೋಮಾ ಸದ್ಗಮಯ,, ತಮಸೋಮಾ ಜೋತಿರ್ಗಮಯ, ಓಂ ಶಾಂತಿ ಶಾಂತಿ ಶಾಂತಿ" ಅನ್ನುವ ಮಂತ್ರ ಪಠಿಸಿದ ಮೇಲೆಯೇ ತುತ್ತು ಬಾಯಿಗಿಡೋದು ಮತ್ತು ಅಂತಹುದೊಂದು ಮಂತ್ರ ಪಠಿಸಿದರೇನೇ ನಮಗೆ ಊಟ ಸೇರೋದು.
ಆದರೆ ಸಾಫ್ಟ್‌ವೇರ್‍ ಭಾಗಶಃ ಜನಕ್ಕೆ ಮೈಕೆಲ್ ಜಾಕ್ಸನ್‌ನ ಹುಚ್ಚು ಕುಣಿತದ ಸಂಗೀತವಿದ್ದರೇನೇ, ಕರ್ಕಶ ಹಾಡುಗಳಿದ್ದರೇನೇ ಮತ್ತು ಅಂತಹ ಸಂಗೀತಕ್ಕೆ ಅವರವರ ಗೆಳೆಯ-ಗೆಳತಿಯರು ಅರಮರ್ಧ ಬಟ್ಟೆಯಲ್ಲಿ ಸೊಂಟ ಕುಲುಕಿಸುತ್ತಿದ್ದರೇನೇ ಅವರ ಮನಸು ಪ್ರಫುಲ್ಲ ಮತ್ತು ಶಾಂತ ಶಾಂತ... ಮತ್ತು ಅಂತಹ ಪಾರ್ಟಿಗಳಲ್ಲಿ ‘ಡಿಸ್ಕೋ’ ಸಂಗೀತವಿದ್ದರೇನೇ ಅವರಿಗೆ ಗುಂಡು-ತುಂಡು ಸೇರೋದು. ಎಂತಹ ವ್ಯತ್ಯಾಸ ನೋಡಿ! ಎಲ್ಲಿಯ ಜಾಕ್ಸನ್ ಹಾಡು, ಎಲ್ಲಿಯ ಅಸತೋಮಾ ಸದ್ಗಮಯ.... !
ಸಾಫ್ಟ್‌ವೇರ್‌ನ ಸಾಫ್ಟ್ ಗೆಳೆಯರೆ, ನಿಜವಾಗಿಯೂ ಸೃಷ್ಟಿಯ ಮಧ್ಯೆ ನಿಂತುಕೊಂಡು ರಮ್ಯತೆಯ ಸೊಬಗನ್ನು ಸವಿಯುವ ಕನಸಾದರೂ ಕಾಣುತ್ತೀರಾ? ನಿಮಗೆ ಬೃಹತ್ ನಗರಗಳಲ್ಲಿ ಅಂತಹ ಸೊಬಗನ್ನು ಸವಿಯೋದಕ್ಕೆ ಸಮಯದ ಕೊರತೆ ಮತ್ತು ಕೊರೆತ ಇರುವುದು ಸಹಜವಾದರೂ ವೀಕೆಂಡ್‌ನ ಎರಡು ದಿನಗಳಾದರೂ ನಿಮಗೆ ಸಿಗುತ್ತಲ್ಲಾ, ಆ ಎರಡು ದಿನಗಳನ್ನು ನೀವು ಸೃಷ್ಟಿಯ ನೈಜ ಸೊಬಗಿನೊಂದಿಗಿದ್ದರೆ ನಿಮ್ಮ ಗೊಂದಲದ ಮನಸಿಗೊಂದಷ್ಟು ಶಾಂತತೆಯ, ಆಹ್ಲಾದತೆಯ ಸಿಂಚನವಾಗಬಹುದಲ್ವಾ? ಬದುಕಿಯೂ ಸತ್ತಂತಿರುವುದೆಂದರೆ ಅದು ಗೋರಿಯೊಳಗಿನ ಹೆಣ ಉಸಿರಾಡಿದಂತೆ ಅಲ್ಲವೆ? ಗೋರಿಯಂತಹ ಸ್ಥಳವೆಂದರೆ ಅದು ಸಾಫ್ಟ್‌ವೇರ್‍ ಅನ್ನೋ ಕಂಪನಿಯ ಗೂಡೇ ಆಗಿರಬಹುದಲ್ಲವಾ? ದಯವಿಟ್ಟು ಅದರೊಳಗಿಂದ ಎದ್ದು ಬನ್ನಿ. ಪಕ್ಕದ ಹಳ್ಳಿಯಲ್ಲಿರುವ ರೈತಬಂಧುವಿನ ತೋಟದೆಡೆಗೆ ಪಯಣ ಬೆಳೆಸಿ, ಕ್ಲಬ್ಬುಗಳಲ್ಲಿ, ರೆಸ್ಟೂರಾಂಟುಗಳಲ್ಲಿ ಹಾಕಿರುವಂತೆ ಘಂಟೆಗಿಂತಿಷ್ಟು ಅಂತ "ರೇಟ್ ಬೋರ್ಡ್‌"ನ್ನು ತೋಟದಲ್ಲಿ ಹಾಕಿರುವುದಿಲ್ಲ. ಅಲ್ಲಿರುವ ಯಾವುದಕ್ಕೂ ಬೆಲೆ ಕಟ್ಟುವುದಿಲ್ಲ. ಸಾಫ್ಟ್‌ವೇರ್‌ನ ಮಂದಿಯನ್ನು ರೈತನೊಬ್ಬ ತುಂಬ ಆದರದಿಂದ ಕಾಣುತ್ತಾನೆ, 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ' ಅಂದುಕೊಳ್ಳುತ್ತ ನಿಮ್ಮನ್ನು ಅತೀ ಆದರದಿಂದ ಸ್ವಾಗತಿಸುತ್ತಾನೆ, 'ಏನ ಬಂದಿರೆ ಹದುಳವಿದ್ದಿರೆ?' ಅಂತ ನಿಮ್ಮ ಕುಶಲವನ್ನೊಮ್ಮೆ ವಿಚಾರಿಸುತ್ತಾನೆ, ಕೂತರೆ ಮಣ್ಣಾಗುವುದೇನೋ ಎಂಬ ಆತಂಕದಿಂದ ತಾನು ಹೊದ್ದುಕೊಳ್ಳುವುದನ್ನ ನಿಮ್ಮ ಬುಡಕ್ಕೆ ಹಾಸಿಕೊಡುತ್ತಾನೆ, ಅವನ ತೋಟದಲ್ಲಿನ ನೀವು ಇಷ್ಟಪಡುವುದೆಲ್ಲವನ್ನೂ ಅವನು ಮನಃಪೂರ್ವಕವಾಗಿ ನಿಮ್ಮೆದುರಿಗಿರಿಸುತ್ತಾನೆ, ನಿಮ್ಮ ಪಿತ್ಥ ನೆತ್ತಿಗೇರಿತೆಂದರೆ ನೀರು ಹಣಿಸುತ್ತಾನೆ, ಯಾವುದ್ಯಾವುದೋ ಗಿಡಮೂಲಿಕೆಗಳ ಬಗ್ಗೆ ತಾನೇ ಮನೆ ವೈದ್ಯನೆಂಬುವಂತೆ ನಿಮಗೆಲ್ಲ ಪರಿಚಯಿಸುತ್ತಾನೆ, ಮತ್ತೆ ಅದ್ಯಾವುದಕ್ಕೂ ಆತ "ಬಿಲ್ಲು" ಕೇಳುವುದಿಲ್ಲ. ಅವನು ಕೇಳುವುದು "ರೈತ ಈ ದೇಶದ ಬೆನ್ನೆಲುಬು" ಅನ್ನೋ ಹೆಮ್ಮೆಯ ಮಾತುಗಳು. ರೈತನೇ ಅನ್ನದಾತ ಎಂದು ಹೇಳಿದರೆ ಆತ ಎದೆಯುಬ್ಬಿಸಿ ನಿಲ್ಲುತ್ತಾನೆ, ಮರುದಿನದ ಅಮೃತ ಘಳಿಗೆಗೆ ನಿಮ್ಮನ್ನು ವಿನಯದಿಂದ ಸ್ವಾಗತಿಸುತ್ತಾನೆ, ಅವನ ಮನಸ್ಸನ್ನೊಮ್ಮೆ ಸಾಫ್ಟ್‌ವೇರಿಗರು ಅರಿತುಕೊಳ್ಳುವುದೊಂದೇ ಆತನಿಗಿರುವ ಕೊರತೆ ಮತ್ತು ಕಳಕಳಿ. ಆ ಕಳಕಳಿಗೆ ನೀವು ಭಾಜನರಾಗಬೇಕಾದರೆ ನೀವೊಮ್ಮೆ ತೋಟಕ್ಕೆ ಹೋಗಿ ಬರಲೇಬೇಕು....ಬೆಳದಿಂಗಳೂಟ ಸವಿಯಲೇ ಬೇಕು....

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಕೆಲವು ದಿನಗಳ ಹಿಂದೆ ಟಿ.ವಿ. ಸುದ್ದಿಗಳಲ್ಲಿ ಡಿಸ್ಕೋ ಥೆಕ್‌, ರೆಸ್ಟೂರಾಂಟ್‌ಗಳಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ಸಾಫ್ಟ್‌ವೇರ್‌ ಕಂಪನಿಯ ಹುಡುಗ-ಹುಡುಗಿಯರನ್ನು ಪೊಲೀಸರು ಹಾಗೂ ಕನ್ನಡ ಸಂಘಟನೆಯವರು ಬಂಧಿಸಿದ್ದನ್ನು ನಾನು ನೋಡಿದ್ದೇನೆ. ಸಾಫ್ಟ್‌ವೇರ್‌ನ ಎಲ್ಲರೂ ಕುಡಿಯುತ್ತಾರೆಂದು ನಾನು ಹೇಳಿಲ್ಲ, ಹೆಚ್ಚಿನ ಸಂಖ್ಯೆಯವರೆಲ್ಲ 'ಸೋಮರಸದಾಸರೇ' ಎಂದು ಹೇಳಿದ್ದೇನೆ.

ಧನ್ಯವಾದಗಳು ಕಲ್ಪನರವರೆ,
ನಿಮ್ಮ ನೆನಪಿಗೆ ತುಂಬಾ ಥ್ಯಾಂಕ್ಸ್, ಅದನ್ನು ನಾನು ನನ್ನದೇ www.premgour.blogspot.com ಬ್ಲಾಗ್ ನಲ್ಲಿ ಬರೆದಿದ್ದೆ. ಈಗ ಸಂಪದದಲ್ಲಿ ಹೊಸದಾಗಿ ಬ್ಲಾಗ್ ಸೃಷ್ಟಿಸಿರುವುದರಿಂದಾಗಿ ಅದನ್ನೇ ಸ್ವಲ್ಪ ಮಾರ್ಪಡಿಸಿ ಬರೆದಿದ್ದೇನೆ.