ನನ್ನದಾಗಿರಲಿ ನನ್ನ ಬದುಕು- ಭಾಗ ಮೂರು

To prevent automated spam submissions leave this field empty.

ಹಿಂದಿನ ಭಾಗ http://www.sampada.net/article/15919

ರಾತ್ರಿ ಮಲಗಿದರೂ ನಿದ್ರೆ ಬರಲಿಲ್ಲ
ಚಿರೂ ನನ್ನವರ ತಮ್ಮ ಎಂಬುದನ್ನು ಬಿಟ್ಟರೆ ರಾಜಕೀಯದಲ್ಲಿ ಅತೀ ವೇಗವಾಗಿ ಬೆಳದವನು . ಆಗಿನ್ನೂ ನೆನಪಿದೆ
ಕಾಲೇಜು ಮುಗಿಸಿದ್ದ ಚಿರು ಊರಿಗೆ ಬಂದಿದ್ದ. ನನ್ನನ್ನು ನೋಡಿದರೆ ಬಡವರ ಮನೆಯಿಂದ ಬಂದಳೆಂಬ ಅಲಕ್ಷ್ಯ, ಆದರೂ ಮಾವನ ಕಣ್ಗಾವಲಿನಿಂದ ಹದ್ದು ಮೀರಿ ಮಾತಾಡಿರಲಿಲ್ಲ. ದೊಡ್ದ ಮನೆಗೆ ಹತ್ತಾರು ಆಳು ಕಾಳುಗಳು. ಅವರಲ್ಲಿ ನೀಲಮ್ಮ ನನಗೆ ತುಂಬಾ ಹೊಂದಿಕೊಂಡಿದ್ದಳು. ಆಗಷ್ತೇ ನವೀನನ ಜನನವಾಗಿತ್ತು. ಆ ವೇಳೆಗಾಗಲೆ ತಾಯಿಯನ್ನು ಕಳೆದು ಕೊಂಡಿದ್ದ ನನಗೆ ನೀಲಮ್ಮನೇ ತಾಯಿಯಾಗಿದ್ದಳು. ನನ್ನ ಬಾಣಂತನವನ್ನ ಅಚ್ಚುಕಟ್ಟಾಗಿ ಮಾಡುತಿದ್ದಳು. ನೀಲಮ್ಮನಿಗಿದ್ದ ಒಬ್ಬಳೆ ಮಗಳು ಮಂಗಳಾ ಕೂಡ ನನ್ನ ಸ್ವಂತ ತಂಗಿಯಂತೆ ಆತ್ಮೀಯವಾಗಿದ್ದಳು.
ಅದ್ಯಾವ ಸಮಯದಲ್ಲಿ ಚಿರೂ ಮತ್ತು ಮಂಗಳಾ ಸ್ನೇಹವಾಯ್ತೋ, ಪ್ರೇಮವಾಯ್ತೋ ಗೊತ್ತಿಲ್ಲ. ಅವರಿಬ್ಬರ ನಡುವೆ ಪ್ರೀತಿ ಚಿಗುರಿ ಹಣ್ಣಾಗುವ ಸಮಯಕ್ಕೆ ಅವಳಿಗೆ ತಾನು ಮಾಡಿಕೊಂಡಿದ್ದ ಅನಾಹುತ ಅರಿವಿಗೆ ಬಂತು. ಆದರೆ ತಡವಾಗಿತ್ತು
"ಅಕ್ಕ ಹೇಗಾದರೂ ಮಾಡಿ ನನ್ನ ಮದುವೆ ಮಾಡಿಸಿ" ದುಂಬಾಲು ಬಿದ್ದಳು
ಚಿರೂ ಸುತಾರಾಂ ಒಪ್ಪಲಿಲ್ಲ "ಆಫ್ಟರ್ ಆಲ್ ಒಬ್ಬ ಕೆಲಸದ ಹೆಂಗಸನ್ನ ಮದುವೆ ಆಗೋದಾ ಸಾಧ್ಯಾನೆ ಇಲ್ಲ. ಇಬ್ಬರ ತಪ್ಪೂ ಇದೆ.
ಒಂದಷ್ಟು ದುಡ್ಡು ಕೊಟ್ಟು ಸಾಗು ಹಾಕೋಣ"
ಚಂದ್ರೂದೂ ಅದೇ ರಾಗ . ಮಾವ ಈ ವಿಷಯದಲ್ಲಿ ಮಾತ್ರ ನನ್ನ ಜೊತೆಯಾಗಲಿಲ್ಲ. ಎಲ್ಲರೂ ನನ್ನ ವಿರೋಧಿಸಿದಾಗ ನಾನು ಮೂಕ ಪ್ರೇಕ್ಷಕಳಾಗಿದ್ದೆ.
ಮಂಗಳಾಗೆ ಬೇರೆ ಯಾರೋಂದಿಗೋ ಸಂಬಂಧವಿರುವುದಾಗಿ ಸುದ್ದಿ ಹಬ್ಬಿಸಿದರು.
ನೀಲಮ್ಮನ ದ್ವನಿ ಅರಣ್ಯರೋಧನವಾಯ್ತು.
ಕೆಲಸದಿಂದ ತೆಗೆಯಲಾಯ್ತು.
ಮನೆ ಕೆಲಸಬಿಟ್ಟು ಮತ್ತೇನು ಗೊತ್ತಿರದ ನೀಲಮ್ಮನಿಗೆ ನಾನೆ ಹಣ ಕೊಟ್ಟು ಮಂಗಳಾ ಚಿಕಿತ್ಸೆ ಮಾಡಿಸಲು ಹೇಳಿದೆ. ಅದನ್ನು ಮಾಡಲೂ ನನಗೆ ಹೆದರಿಕೆ .
ಬೆಂಗಳೂರಿನಲ್ಲಿ ನನಗೆ ಗೊತ್ತಿದ್ದ ಹಾಸ್ಪಿಟಲ್‌ನಲ್ಲಿ ಇರಿಸಿದೆ, ಕೆಲವು ದಿನಗಳ ನಂತರ ಹೆಣ್ಣು ಮಗುವಾಯ್ತೆಂದು ವಿಷಯ ತಿಳಿಯಿತು. ನೋಡಲೂ ಹೋಗಲಿಲ್ಲ
ಎಷ್ಟೋ ದಿನಗಳಾದ ನಂತರ ಯಾರೋ ನೀಲಮ್ಮ ಹಾಗು ಮಂಗಳಾ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆಂದು ಹೇಳಿದರು ಮಗುವಿನ ಬಗ್ಗೆ ಕೇಳಲೂ ಇಲ್ಲ ಮನಸ್ಸು ಕದಡಿತಾದರೂ ಮತ್ತೆ ವಿಷಯವನ್ನು ಕಲುಕಿದರೆ ಆಪತ್ತು ಎಂದರಿತು ಸುಮ್ಮನಾದೆ
ಅದಾದ ನಂತರ ಮಂಗಳಾಳ ಪತ್ರ ವೊಂದು ಕೈ ಸೇರಿತು. ಅದರಲ್ಲಿ ಮಗುವನ್ನು ಯಾರೋ ಒಬ್ಬರಿಗೆ ಕೊಟ್ಟಿರುವುದಾಗಿ ಹೇಗಾದರೂ ಮಾಡಿ ಮಗುವನ್ನು ಕರೆದುಕೊಂಡು ಬಂದು ಸಾಕಬೇಕಾಗಿ ಬೇಡಿಕೊಂಡಿದ್ದಳು. ಜೊತೆಗೆ ಆ ಹೆಂಗಸಿನ ವಿಳಾಸವನ್ನು ಬರೆದಿದ್ದಳು. ಸಾಯುವ ಮುನ್ನ ಬರೆದಿದ್ದಾಗಿತ್ತು ಆ ಪತ್ರ
ಆದರೆ ನನಗೆಲ್ಲಿದೆ ಅಷ್ತೊಂದು ಧೈರ್ಯ. ಬೇಡದ ಉಸಾಬರಿ ಏಕೆಂದು ಸುಮ್ಮನಾದೆ. ಆ ಮಗುವೇ ಅಪ್ಸರಾ .
ಅಪ್ಸರಾಳ ಈ ಸ್ಥಿತಿಗೆ ನಾನೇ ಕಾರಣ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು.
ಬೆಳಗ್ಗೆ ಎದ್ದಾಗ ತಲೆ ನೋವಿನಿಂದ ನರಳುತ್ತಿದ್ದೆ. ವೆಂಕಟಮ್ಮ ಕಾಫಿ ತಂದುಕೊಟ್ಟಳು. ಕಾಫಿ ಕುಡಿಯುತ್ತಿದ್ದೆ.
"ಅಮ್ಮಾ " ನವ್ಯಾ ಬಂದು ನನ್ನ ಪಕ್ಕ ಕುಳಿತಳು
" ನೀನು ಅ ಹುಡುಗಿ ಜೊತೆ ಅಡಿಗಾಸ್‌ನಲ್ಲಿ ಮಾತಾಡ್ತಿದ್ದಿದ್ದು ಅಜೇಯ್ ನೋಡಿ ಯಾರು ಅಂತ ಕೇಳಿದರು?" ಅಜೇಯ ಅವಳು ಮದುವೆಯಾಗಲಿರುವ ಹುಡುಗ ಈಗಾಗಲೆ ಸಿನಿನಾಯಕನಾಗಿ ಸ್ವಲ್ಪ ಹೆಸರು ಮಾಡಿದ್ದಾನೆ
"ನಾನ್ಯಾರ ಜೊತೆ ಮಾತ್ತಾಡಿದ್ರೆ ನಿಮಗೇನು" ಪ್ರಶ್ನಿಸಿಯೇ ಬಿಟ್ಟಿದ್ದೆ ಗೊತ್ತೇ ಇಲ್ಲ
"ಅಮ್ಮ ಅಪ್ಪ ಬೆಳಗ್ಗೆ ಎಲ್ಲ ವಿಷಯ ಹೇಳಿದರು. ನಮಗ್ಯಾಕೆ ಎಲ್ಲ ಸಲ್ಲದ ಪ್ರಾಬ್ಲಮ್ . ನಾಳೆ ಅಜೇಯ್‌ಗೆ ಈ ವಿಷಯ ಗೊತ್ತಾದ್ರೆ ಮದುವೆ ತುಂಬಾ ಕಾಂಪ್ಲಿಕೇಟೆಡ್ ಆಗುತ್ತೆ"
"ನವ್ಯ ಆ ಹುಡುಗಿ ಹೆಚ್ಚು ಕಡಿಮೆ ನಿನ್ನ ವಯಸ್ಸೇ , ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿಗೆ ತೊಂದರೆ ಆಗ್ತಾ ಇದ್ದಾರೂ ಹೀಗೆ ಮಾತಾಡ್ತಿದೀಯಲ್ಲ"
"ನೀನೇನು ಮಾಡಿದ್ದು . ಆವಾಗಾ ನೀನೂ ಆ ಮಂಗಳಾ ಪರ ಮಾತಾಡ್ಬೇಕಿತ್ತು. ನಿಂಗೆ ಹ್ಯಾಗೆ ನಿನ್ನ ಬಾಳು ಇಂಪಾರ್ಟೆಂಟೋ ಆಗಿತ್ತೋ ಹಾಗೆ ನನ್ನ ಬಾಳು ನನಗೆ. ನನ್ನ ಮದುವೆ ಮುಗಿಯೋ ತನಕ ಯಾವ ತಲೆ ಬಿಸೀನೂ ಕೊಡ್ಬೇಡ ಅಮ್ಮ. ಪ್ಲೀಸ್ ಲೆಟ್ ಮಿ ಲೀವ್" ಕಾಲು ಕೊಡವಿಕೊಂಡು ಎದ್ದು ಹೋದಳು.
ಅವಳು ಹೇಳುತ್ತಿರುವುದೂ ಸರಿಯೇ
ನವ್ಯಾಗೆ ಮದುವೆಯಾಗುವ ಕನಸಿದೆ, ಚಂದ್ರೂಗೆ ಹಣ ಮಾಡುವ ಹಂಬಲವಿದೆ , ನವೀನ್‍ಗೆ ಡೈರೆಕ್ಟರ್ ಆಗೋ ಅನಿವಾರ್ಯತೆ ಇದೆ, ಚಿರೂಗೆ ಮಿನಿಸ್ಟರ್ ನಾಳೆ ಸಿ.ಎಮ್ ಇನ್ನೂ ಮುಂದೆ ಬೆಳೆಯುವ ಮಹತ್ವಾಕಾಂಕ್ಷ್ತೆ ಇದೆ.
ಆದರೆ ನನಗೆ ಯಾವ ಗುರಿ ಇದೆ. ಇಷ್ಟವಿಲ್ಲದಿದರೂ ಹಾಡು ಹಾಡಬೇಕಾಯ್ತು, ನನ್ನಿಷ್ಟದಂತೆ ಇರಲಾಗಲಿ, ತಿನ್ನಲಾಗಲಿ, ಕುಡಿಯಲಾಗಲಿ, ಅಥವ ತೊಡಲಾಗಲಿ ಆಗಲೇ ಇಲ್ಲ
ಮದುವೆಗೆ ಮೊದಲು ಅಪ್ಪನ ಕಣ್ಗದುರುವಿಕೆಯಿಂದಲೇ ನಡುಗುತಿದ್ದೆ. ನಂತರ ಮಾವ ಹೇಳಿದ್ದ ಚಾಚೂ ತಪ್ಪದೆ ನಡೆಸುತ್ತಿದ್ದೆ.ಮಾವ ಹೋದ ನಂತರ ಇಲ್ಲಿವರೆಗೆ ಚಂದ್ರುವಿನ ಆಣತಿಯಂತೆ ಬದುಕುತ್ತಿದ್ದೇನೆ . ಮುಂದೆ ಖಂಡಿತವಾಗಿ ನವೀನ ಅಥವ ನವ್ಯಾ ಹೇಳಿದ ಹಾಗೆ ಕೇಳುತ್ತಾ ಬದುಕಬೇಕಾಗುತ್ತದೆ.
ಆರ್ಥಿಕವಾಗಿ ಸಬಲತೆ ಇದ್ದರೂ ಮಾನಸಿಕವಾಗಿ ದುರ್ಬಲಳಾಗಿದ್ದೇನೆ. ಯಾವತ್ತು ಮಾನಸಿಕವಾಗಿ ಗಟ್ಟಿಯಾಗುವುದು ? ಈ ಪ್ರಶ್ನೆ ಅನಂತವಾಗಿ ಕಾಡುತ್ತಲೇ ಇತ್ತು.
ಸ್ವಲ್ಪ ಹೊತ್ತಿನ ನಂತರ ರಾಜುವನ್ನ ಕರೆದೆ. ಆತನನ್ನು ನವೀನ ತನ್ನ ಡ್ರೈವರ್ ಮಾಡಿಕೊಂಡಿದ್ದ , ನನಗೆ ಬೇರೆ ಡ್ರೈವರ್ ಗೊತ್ತು ಮಾಡಿದ್ದರು.
ಖಂಡಿತಾ ಆತ ನಾನು ಹೇಳಿದ ಕಡೆಗೆ ಬರಲಾರ ಎಂಬುದು ತಿಳಿಯಿತು . ಆಗಲೆ ನನ್ನ ಪಿ.ಎ ಇಂದ ಅಂದಿನ ನನ್ನ ಶೆಡ್ಯೂಲ್ ಬರೆದುಕೊಳ್ಳುತ್ತಿದ್ದ ಆತ.
ಗೊಂಬೆಯಂತೆ ಜೀವನ ಸಾಗಿತ್ತು. ಅದಾದ ನಂತರ ಅಪ್ಸರಾ ದಿನಾ ಕಾಣುತ್ತಿದ್ದಳು ಆದರೆ ನನ್ನ ಹೊಸ ಡ್ರೈವರ್ ನಿಲ್ಲಿಸುತ್ತಿರಲಿಲ್ಲ .
ಮೂರು ವಾರಗಳು ಕಳೆದವು.
ಆ ವಾರದಲ್ಲೇ
ಮನೆಯಲ್ಲಿ ಮಗಳ ತಯಾರಿ ಜೋರಾಗಿ ನಡೆಯುತ್ತಿತ್ತು
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯ ಮಿನಿಸ್ಟರ್ ಪಟ್ಟ ಚಿರಂಜೀವಿಗೆ ಸಿಗುತ್ತಿತ್ತು
ಅದೇ ವೇಳೆಗೆ ನವೀನನ ಹೊಸ ಚಿತ್ರ "ಹೆಣ್ಣೇ ನೀ ಅಬಲೆಯಲ್ಲ" ತೆರೆ ಕಾಣುತ್ತಿತ್ತು.
"ಬಾಲಿವುಡ್ ದಿಗ್ಗಜ ರಾಥೋಡ್‌ರ ಶತ ಕೋಟಿ ಚಿತ್ರಕ್ಕೆ ಕನ್ನಡದ ಕೋಗಿಲೆ ಖ್ಯಾತ ಗಾಯಕಿ ಲಕ್ಷ್ಮಿಯವರಿಂದ ಐಟಮ್ ಸಾಂಗ್ " ಎಂಬ ಬರಹಗಳು ಸಿನಿಪತ್ರಿಕೆಗಳಲ್ಲಿ ಕಾಣತೊಡಗಿದ್ದವು.

ಮುಂದಿನ ವಾರ ಮಗಳ ಮದುವೆಯ ನಂತರ ಹಾಡುವುದಾಗಿ ಒಪ್ಪಿಗೆ ಕೊಟ್ಟಿದ್ದೆ. ಡೇಟ್ಸ್ ಫಿಕ್ಸ್ ಆಗಿತ್ತು.
ಒಂದೆರೆಡು ದಿನದಿಂದ ಅಪ್ಸರ ಕಾಣಿಸಲಿಲ್ಲ.ಏಕೋ ಆ ಮೊದಲಿನ ಆತಂಕ ಕಾಡುತ್ತಿರಲಿಲ್ಲ
ಮನಸ್ಸು ನಿರ್ಲಿಪ್ತವಾಗಿತ್ತು.
ನಾನೇಕೆ ಹೀಗಾದೆ ಎಂದು ಯೋಚಿಸಲೂ ಪುರುಸೊತ್ತು ಇಲ್ಲದಂತಾಗಿತ್ತು.
ಕೊನೆಗೂ ಮಗಳ ಮದುವೆ ಮುಗಿಯಿತು . ಅವಳ ಧಾರೆ ಎರೆದ ನಂತರದ ದಿನದಲ್ಲಿ
----
-----
--
-
-
ಮತ್ತೊಂದು ಮದುವೆ ದೂರದ ದೇವಸ್ಥಾನದಲ್ಲಿ ನಡೆಯಿತು ಅದು ರಾಜು ಮತ್ತು ಅಪ್ಸರಾ ಮದುವೆ. ಅಪ್ಸರಾಳ ಧಾರೆ ಎರೆಯಲು ಅಪ್ಪ ಅಮ್ಮ ನಾನೆ ಆಗಿದ್ದೆ.
ಹೌದು ನಾನು ಮಗಳ ಮದುವೆ ನಡೆದ ನಂತರ ಎಲ್ಲವನ್ನೂ ಎಲ್ಲರನ್ನೂ ತೊರೆದು ನನ್ನಂತೆಯೇ ಬದುಕಬೇಕೆಂದು ಬಂದಿದ್ದೆ ಅದರ ಮೊದಲ ಹೆಜ್ಜೆಯೇ ನನ್ನಿಂದ ತಡೆಯಲಾಗದ ಅನ್ಯಾಯದ ಫಲ ಅನುಭವಿಸುತ್ತಿರುವ ಅಪ್ಸರಾಳ ಬಾಳನ್ನು ಹಸನು ಮಾಡುವುದು.
ಅವರಿಬ್ಬರನ್ನು ಹರಸಿ ಅಪ್ಸರಾಳ ಹೆಸರಿನ ಅಕೌಂಟಿನ ವಿವರವನ್ನು ಕೊಟ್ಟ್ತೆ. ನಾನು ದುಡಿದ ಹಣದಲ್ಲಿ ಕೊಂಚ ಭಾಗವನ್ನು ಅವಳಿಗೂ ಹಾಗು ನನ್ನ ಖರ್ಚಿಗೂ ತೆಗೆದುಕೊಂಡಿದ್ದೆ.
ಅವರಿಬ್ಬರಿಗೂ ವಿದಾಯ ಹೇಳಿ ನನ್ನ ಮುಂದಿನ ಬದುಕಿಗೆ ತೆರಳಲು ಸಿದ್ದವಾದೆ
ಅದು ನನ್ನದೇ ಬದುಕು,. ನಾ ಬಯಸಿದ ಬದುಕು
ಮುಗಿಯಿತು
**************************** -----------********************೮೮
ಈ ಕಥೆಗೆ ನಿಮ್ಮ ವಿಮರ್ಶೆ ಟೀಕೆಯಾಗಲಿ, ಟಿಪ್ಪಣಿಯಾಗಲಿ, ಚರ್ಚೆಯಾಗಲಿ ಸ್ವಾಗತ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿದೆ ನೀವೂ ಬರೆದ ಕಥೆ ರೂಪಕ್ಕ ಈ ಸಂಚಿಕೆಯಲ್ಲಿ ನನ್ನ ಎಲ್ಲಾ ಪ್ರೆಶ್ನೆಗಳಿಗೆ ಉತ್ತರ ಸಿಕ್ಕಿತ್ತು ಒಂದು ಪ್ರೆಶ್ನೆ ಬಿಟ್ಟು ಅದು ರಾಥೋಡ್ ರವರು ಯಾಕೆ ಅಂತ ಖ್ಯಾತ ಗಾಯಕಿ ಲಕ್ಷ್ಮಿ ಯವರಿಂದಲೇ ಕ್ಯಾಬರೆ ಹಾಡನ್ನು ಹಾಡಿಸಬೇಕು ಅಂತ ಹಠವಿಡಿದಿದ್ದು ಅದು ಅವರು ನಿರಾಕರಿಸಿದ ಮ್ಯಾಲು ,ನಿಮ್ಮ ಕಥೆಯಲ್ಲಿ ಆ ಗಾಯಕಿಯಿಂದ ಕ್ಯಾಬರೆ ಹಾಡು ಹಾಡಿಸಿದರೆ ಸಿನಿಮಾ ಗೆಲ್ಲುತ್ತೆ ಅನ್ನೊ ಕಾರಣನಾ ಅಥವಾ ಸಮಾಜದಲ್ಲಿ ಇರೋ ಅವಳ ಹೇಸರನ್ನು ಹಾಳು ಮಾಡಬೇಕನ್ನುವ ಅವರ ಉದ್ದೇಶನೋ ಅಥವಾ ಅವಳು ಕ್ಯಾಬರೆ ಹಾಡನ್ನು ಹಾಡುವುದರಲ್ಲಿ ಪ್ರಖ್ಯಾತಿಯಾ ಇಷ್ಟೆ ನನ್ನ ಪ್ರೆಶ್ನೆಗಳು

ಒಟ್ಟಿನಲ್ಲಿ ರೂಪಕ್ಕ ನೀವೂ ಬರೆದ ಕಥೆ ತುಂಬನೆ ಚೆನ್ನಾಗಿದೆ ಮತ್ತು ಇನ್ನಷ್ಟು ನಿಮ್ಮಿಂದ ಇಂತ ಕಥೆಗಳು ಬರಲಿ

ನಿಮ್ಮವ

ಮಧುಸೂದನ್ ಗೌಡ

ರಾಥೋಡ್‌ ಪಾತ್ರ ಲಕ್ಷ್ಮಿಗಿದ್ದ ಅಸಹಾಯಕತೆಯನ್ನು ವಿವರಿಸಲು ಮಾತ್ರ. . ಲಕ್ಷ್ಮಿ ನಿರಾಕರಿಸಿದಳು ಎಂಬ ಒಂದೇ ದ್ವೇಷದಿಂದ ಹಣದಿಂದ ಅವಳ ಒಪ್ಪಿಗೆ ಪಡೆಯಲು ನಿರ್ಧರಿಸುತ್ತಾನೆ
ಕತೆ ಚೆನ್ನಾಗಿದೆ ಅಂದಿದ್ದಕ್ಕೆ ಧನ್ಯವಾದಗಳು

ರೂಪ

ಕಥೆಯ ಅಂತ್ಯ ಚೆಂದಿದೆ, ಚಿರೂವಿಗೆ ತನ್ನ ತಪ್ಪಿನ ಅರಿವು ಮೂಡಿಸಿದ್ದರೆ ಇನ್ನೂ ಕಥೆ ಮುಂದುವರೆಯುತ್ತಿತ್ತೇನೊ ಎನ್ನಿಸುತ್ತದೆ, ರಾಜು ಹಾಗೂ ಅಪ್ಸರಾ ನಡುವಿನ ಮದುವೆ ಚಿರೂವಿನ ಪಶ್ಚಾತ್ತಪಕ್ಕೆ ಸಿಲುಕವಂತೆ ಮಾಡಬಹುದಾ. ಇಲ್ಲಿ ಲಕ್ಷ್ಮಿ ಆಪ್ತಳಾದರೂ ಅವಳ ಹೆಣ್ಣಿನ ಅಸಹಾಯಕತೆ ಹಾಗೂ ಅವಳ ನಿರ್ಣಯ ಸರಿಯಿದೆ.

ಮಧು ಹೇಳುವಂತೆ
ರಾಥೋಡ್ ಪಾತ್ರ ಲಕ್ಷ್ಮಿಯ ಸ್ವಭಾವವನ್ನು ಎತ್ತಿ ತೋರಿಸಲು ಅಂದುಕೊಳ್ಳುತ್ತೇನೆ.

ಒಳ್ಳೆಯ ಕಥೆ

ಹೀಗೆ ಮುಂದುವರೆಸಿ.

ಅರವಿಂದ್

ರೂಪ,
ಇಷ್ಟು ದಿನ ಪ್ರತಿಕ್ರಿಯಿಸುವಾಗ ಅಷ್ಟೊಂದು ಯೋಚಿಸುತ್ತಿರಲಿಲ್ಲ. ಇಂದು ಯೋಚಿಸಲೇ ಬೇಕು. ಎಲ್ಲಿ ನನ್ನ ಮಾತಿನಲ್ಲಿ ತಪ್ಪಾಗುತ್ತದೋ ಎಂದು ಹೆದರ ಬೇಕು! ....
ಅಬ್ಭಾ, ಎಷ್ಟು ಸಲೀಸಾಗಿ ಓದಿಸಿಕೊಂಡಿತೆಂದರೆ... ನಿಜ ಹೇಳುವೆ, ನಾನು ಈ ತರ ಕಾದಂಬರಿಗಳನ್ನೆಲ್ಲಾ ಓದಿದವನೇ ಅಲ್ಲ. ಎರಡು ದಿನಗಳಿಂದ ತುಂಬಾ ಕೆಲಸದ ಒತ್ತಡ. ಇಂಟರ್ ನೆಟ್ ಬೇರೆ ಕೈ ಕೊಟ್ಟಿತ್ತು. ಇಂದು ಸಂಜೆ ಹೊತ್ತಿಗೆ ಅದಕ್ಕೆ ಜೀವ ಬಂದಿತ್ತು. ಕಣ್ಣಾಡಿಸಿದೆ. ತಲೆಬರಹ ನನ್ನನ್ನು ಸೆಳೆದಿರಲಿಲ್ಲ. ಈ-ಮೇಲ್ ನೋಡಿದಾಗ ಓದಲೇ ಬೇಕೆಂದು ಓದಿದೆ. ನೀವು ಮೇಲ್ ಕಳಿಸದಿದ್ದರೆ ನಿಜವಾಗಿ ನಾನು ಓದುತ್ತಿರಲಿಲ್ಲ.

ಇಷ್ಟೊಂದು ಚೆನ್ನಾಗಿ ಬರೆದರೆ ಕಾಮೆಂಟ್ ಮಾಡೋದೇನು? ಚೆನ್ನಾಗಿದೆ ಅಂದು ಕೈ ತೊಳೆದುಕೊಳ್ಳುವಂತಿಲ್ಲ. ಈ ಕಥೆ ಬರೆಯಲು ನೀವು ಹಾಕಿರುವ ಶ್ರಮಕ್ಕೆ ನ್ಯಾಯ ಸಿಗಬೇಡವೇ?...
ಎಂತಹಾ ಒಂದು ವಿಷವೃತ್ತದಲ್ಲಿ ಲಕ್ಷ್ಮಿಯನ್ನು ಸಿಲುಕಿಸಿದ್ದೀರಿ! ಪತಿರಾಯ, ಮೈದುನ ಮತ್ತು ಮಾವನ ಪಾತ್ರವನ್ನು ಹೇಗೆ ಚಿತ್ರಿಸಿದ್ದೀರೆಂದರೆ ಓದು ಓದುತ್ತಲೇ ಆ ಪಾತ್ರಗಳ ಮೇಲೆ ಓದುಗನ ಕಣ್ಣು ಕೆಂಪಾಗಬೇಕು! ಮನೆಯ ವಾತಾವರಣವು ಮಕ್ಕಳನ್ನು ಹೇಗೆ ಕೆಡಸಲೂ ಬಹುದೆಂಬುದಕ್ಕೆ ಇಬ್ಬರು ಮಕ್ಕಳ ಮಾತುಕತೆಯನ್ನು ಬರೆದು ಪಾತ್ರಗಳಿಗೆ ಜೀವ ತುಂಬಿ ಬಿಟ್ಟಿದ್ದೀರಿ. ಅಪ್ಸರಳ ಪಾತ್ರ, ಅವಳ ನೆಲೆ, ಹಿನ್ನೆಲೆ ಅಬ್ಭಬ್ಭಾ! ಕಣ್ಣಲ್ಲಿ ನೀರು ಬರುವಂತೆ ನಿರೂಪಿಸಿಬಿಟ್ಟಿದ್ದೀರಿ. ನಡು ನಡುವೆ ಒಳ್ಳೆಯವರೂ ಇರ್ತಾರೆಂಬುದಕ್ಕೆ ಡ್ರೈವರ್ ರಾಜು ಪಾತ್ರ.

ನಿಜ, ರೂಪ
ಇಂದಿನ ಸಮಾಜದಲ್ಲಿ ಅಲ್ಲಿಲ್ಲಿ ಈ ರೀತಿಯ ದೊಡ್ದವರೆನಿಸಿಕೊಂಡವರು ಇದ್ದಾರೆ. ನನ್ನನ್ನು ಸೆಳೆದ ಪಾತ್ರ ಲಕ್ಷ್ಮಿ. ಚಿನ್ನದ ಹಾಸಿಗೆ ಮೇಲೆ ಮಲಗಲು ಅನುಕೂಲಗಳಿದ್ದರೂ ವಿಷವೃತ್ತದಲ್ಲಿ ಬಂಧಿ.
ಕೊನೆಯಲ್ಲಿ ಡ್ರೈವರ್ ಬದಲಾವಣೆ, ಮಗಳ ಮದುವೆ, ಅಪ್ಸರಳ ಮದುವೆ , ಎಲ್ಲವನ್ನೂ ಎರಡು ನಿಮಿಷದ ಕಥೆಯಾಗಿ ಓಡಿಸಿ ಬಿಟ್ಟಿದ್ದೀರಿ. ಲಕ್ಷ್ಮಿಯ ಡ್ರೈವರ್ ಬದಲಾದ ಘಟನೆಯಿಂದ ಮುಂದಕ್ಕೆ ಕಥೆಯನ್ನು ಪರಿಷ್ಕರಿಸಲು ಸಾಧ್ಯವೇ ನೋಡಿ.
ಕಥೆಗಳನ್ನು ಬರೆಯುವಾಗ ತಲೆಬರಹ ಆಕರ್ಷಿಸಬೇಕು, ನೀವು ನೀಡಿರುವ ತಲೆಬರಹ ಒಂದು ಕೊಟೇಶನ್ ತರ ಇದೆ. ಅದಕ್ಕೆ " ಅಪ್ಸರ" ಎಂದೇ ಬೇಕಾದರೂ ನಾಮರಣ ಮಾಡಬಹುದು, ಅಥವಾ ಸೂಕ್ತವಾದ ಒಂದು ನಾಮಪದವಿದ್ದರೆ ಉತ್ತಮ, ಎನ್ನುವುದು ನನ್ನ ಅನಿಸಿಕೆ.
ಕೊನೆಯಮಾತು:-
ಪಾತ್ರಗಳಿಗೆ ಜೀವ ತುಂಬುವ ಕಲೆ ನಿಮಗೆ ಕರಗತವಾಗುತ್ತಿದೆ.ನಿಮ್ಮಿಂದ ಈ ರೀತಿಯ ಇನ್ನೂ ಹಲವು ಕಥೆಗಳು ಮೂಡಿಬರಲಿ, ಸಮಾಜಕ್ಕೆ ಒಂದು ಉತ್ತಮ ಸಂದೇಶ ನಿಮ್ಮಕಥೆಯಿಂದ ಸಿಗುವಂತಾಗಲೀ ಎಂದು ಮನದಾಳದಿಂದ ಹರಸುವೆ.
ಶುಭವಾಗಲಿ
ಹರಿಹರಪುರಶ್ರೀಧರ್
ಹಾಸನ

ಆತ್ಮೀಯ
ಕಥೆ ನಿಜವಾಗಿಯೂ ಅದ್ಭುತವಾಗಿದೆಯಮ್ಮ .ಕಥಾನಕ ಮತ್ತು ಬೆಳವಣಿಗೆ ನಿಜಕ್ಕೂ ಚೆನ್ನಾಗಿದೆ
ಕಥೆ ಓದಿದ ಮೇಲೆ ಸ್ವಲ್ಪ ನಮ್ಮನ್ನ ಯೋಚನೆಗೆ ಹಚ್ಚುತ್ತೆ. ಕೆಳಗಿನವು ನನ್ನ ತಲೆಗೆ ಪ್ರಶ್ನೆಗಳಾಗಿ ಕಂಡದ್ದು
ತನ್ನ ಬದುಕನ್ನ ಕಂಡುಕೊಳ್ಳುವಲ್ಲಿ ಲಕ್ಷ್ಮಿ ನಿಜವಾಗಿ ಗೆದ್ದಲು ಅಂತೀರಾ?.ಸಂಬಂಧಗಳನ್ನ ಕಳಚಿಕೊಲ್ಲೋದು ಅಷ್ಟು ಸುಲಭಾನಾ?ಅಪ್ಸರಾಗೆ ಮಾಡುವೆ ಮಾಡಿಸಿ ಬಾಳು ಕೊಡಿಸಿದ್ದು ಸರಿ,ಲಕ್ಷ್ಮಿ ತನ್ನ ತಪ್ಪನ್ನ ಸರಿ ಪಡಿಸಿಕೊಂಡಳು (ಇದರಲ್ಲಿ ಅವಳ ತಪ್ಪೇನೂ ಇರಲಿಲ್ಲ ,ಮನಸಾಕ್ಷಿ.. )ಆದರೆ ಎಲ್ಲರನ್ನೂ ಎಲಾವನ್ನೂ ತೊರೆದು ಹೋಗೋದು ಎಷ್ಟು ಸರಿ?.ಗಂಡ ಮಕ್ಕಳು ಮೈದುನರ ಕೆಟ್ಟತನದಿಂದ ರೋಸಿ ಹೋಗಿದ್ದಳು ನಿಜ ತಾನು ಅಪ್ಸರಾಗೆ ಬಾಳು ಕೊಡ್ತೀನಿ ಅಂತ ಅಂದು ಕೊಂಡಾಗ ಮಗಳ ಮಾಡುವೆ ಅಡ್ಡ ಬಂತು ಆಲ್ವಾ?ಮಗಳ ಮಾಡುವೆ ಮುಗಿದ ನಂತರ ಆ ಕೆಲಸ ಮಾಡಬಹುದಾಗಿತ್ತು .ತನ್ನ ಸ್ವಂತಿಕೆಯನ್ನ ಬೆಳೆಸಿ ಕೊಳ್ಳಬಹುದಾಗಿತ್ತು. ಒಮ್ಮೆ ತಾನು ನಿರ್ಧಾರ ಮಾಡಿದ ಮೇಲೆ ಅದನ್ನ ಪಾಲಿಸಿಯೇ ಪಾಲಿಸ್ತಿನಿ ಅಂತ ಮನಸಿಗೆ ಬಂದರೆ ಮುಗೀತು ಅದನ್ನ ಬದಲಿಸಲು ಯಾರಿಂದ ಸಾಧ್ಯ ಇಲ್ಲ ಅಂತ ಅವಳಿಗೆ ಅವಳೇ ಹೇಳಿಕೊಲ್ಲಬಹುದಾಗಿತ್ತು .ಮನೆ ಬಿಟ್ಟು ಬಾರೋ ಧೈರ್ಯ ಮಾಡಿದವಳಿಗೆ ಅದು ಕಷ್ಟ ಆಗ್ತ ಇರ್ಲಿಲ್ಲ ಆಲ್ವಾ?
ಹರೀಶ್ ಆತ್ರೇಯ

ಚೆನ್ನಾಗಿದೆ ರೂಪಾ. ಲಕ್ಶ್ಮಿಯ೦ಥಾ ಎಷ್ಟೋ ಜನ ಸಮಾಜದಲ್ಲಿ ಬದುಕಿದ್ದಾರೆ. ಅ೦ತೆಯೇ ಅಪ್ಸರಳ೦ಥವರೂ ಕೂಡಾ. ಹದವಾಗಿ ಬೆಳೆದ ಮೂಡಿದ ಕಥೆ ಕೊಟ್ಟದ್ದಕ್ಕೆ ಧನ್ಯವಾದಗಳು.

ರೂಪ ಅವರೇ:
ನಿಮ್ಮ ಈ ಕಿರು ಕಾದಂಬರಿ ಹಿಡಿಸಿತು.
ಈಗೀಗ ಅರ್ಥವಾಗದಂತೆ ಬರೆಯುವುದೇ ಫ್ಯಾಶನ್ ಆಗಿದೆ, ಓದೋದೇ ಕಷ್ಟ. ಅರ್ಥವೇ ಆಗೋಲ್ಲ.
ಆದರೆ ನೀವು ಬರೆಯುವ ಸರಳವಾದ ಶೈಲಿ ನನಗಿಷ್ಟ.

ಕೊನೆಯೂ ಚೆನ್ನಾಗೇ ಇತ್ತು, ಆದರೆ ಸಿನೆಮಾ ಟಿ ಆರ್ ಪಿ ಇಳಿದುಹೋದ ಧಾರಾವಾಹಿಗಳ ತರ ತರಾತುರಿಯಲ್ಲಿ ಮುಗಿಸಿದಂತೆ ಕಾಣಿಸಿತು.
ಅಂತೆಯೇ ಕೊನೆ ಪ್ಯಾರದಲ್ಲಿ ಸ್ವಲ್ಪ ಗುಣಮಟ್ಟ ಕಡಿಮೆಯಾಯಿತು ಅಂತ ಅನ್ನಿಸಿತು.
ಕೊನೆಯ ಪ್ಯಾರವನ್ನು ಒಂದು ಬೇರೆಯೇ ಭಾಗವಾಗಿ ಬರೆದರೆ ಇನ್ನೂ ಚೆನ್ನಾಗಿ ಬರಬಹುದು.

ಇತೀ,
ಉಉನಾಶೆ

ಉಮೇಶ್‌ರವರೆ
ಚೆನ್ನಾಗಿದೆ ಎಂದಿದ್ದಕ್ಕೆ ವಂದನೆಗಳು
ಈಗಾಗಲೆ ಮೂರು ಭಾಗ ಮಾಡಿ ಕತೆಎಳೆದಿದ್ದೆ ಇನ್ನೂಬರೆದರೆ ಓದುವವರಿಗೆ ಬೇಸರವಾಗಬಹುದು ಎಂದು ತರಾತುರಿಯಲ್ಲಿ ಮುಗಿಸಿದೆ
>>ಆದರೆ ಸಿನೆಮಾ ಟಿ ಆರ್ ಪಿ ಇಳಿದುಹೋದ ಧಾರಾವಾಹಿಗಳ ತರ ತರಾತುರಿಯಲ್ಲಿ ಮುಗಿಸಿದಂತೆ ಕಾಣಿಸಿತು.
ನಗು ತರಿಸಿತು