ಕನಸು ನನಸುಗಳ ನಡುವೆ

To prevent automated spam submissions leave this field empty.

"What is your dream for future?" "What do you dream to become in the future?" - ಮುಂತಾದ ಪ್ರಶ್ನೆಗಳು ಸ್ಕೂಲು ಕಾಲೇಜುಗಳಲ್ಲಿ ಉತ್ತರ ಹುಡುಕಿಸುವಂತೆ ಮಾಡಿದ್ದು ಕಡಿಮೆ, ಬದಲಿಗೆ ಉತ್ತರ 'ಕಟ್ಟುವಂತೆ' ಮಾಡಿರುತ್ತಿತ್ತು.   ಭಾಷಣ ಸ್ಪರ್ಧೆಗೆ ಉತ್ತಮ ಮಾತುಗಾರನನ್ನು ಅಣಿ ಮಾಡುವ ಮೂಲಗಳಾಗುತ್ತಿದ್ದವು ಅವು. ಭಾಷೆ ಅರಿತ ಹುಡುಗರಿಗೆ, ಸರಾಗವಾಗಿ ಮಾತಾಡಬಲ್ಲ ಹುಡುಗಿಯರಿಗೆ - ಬರಿಯ ಭಾಷೆಯ ಕಸರತ್ತು ಆಗಿಬಿಡುತ್ತಿತ್ತು. ಕೇಳುಗರಿಗೆ ತಾವು ಕೇಳಬೇಕೆನಿಸಿದ್ದು ಕೇಳಿಬರುವ ಸಮಯ, ಕೇಳಿಬರುವುದು, ಕೇಳಿದವರಿಂದ ಹೊರಬರುವ ಪ್ರತಿಕ್ರಿಯೆ - ಅದಕ್ಕೆ ಸಿಗುವ ಮನ್ನಣೆ, ಅವಾರ್ಡುಗಳು - ಎಲ್ಲ ತೀರ cliche!

ನನಗೆ "ಕಟ್ಟಿದ" ಉತ್ತರಗಳ ಕುರಿತು, ಉತ್ತರಗಳಿಗಾಗಿ ಕಟ್ಟಿದ ಕನಸುಗಳ ಕುರಿತು ಅಸಮಾಧಾನ ಹುಟ್ಟಿದ್ದು ಇವುಗಳಿಂದ.

ಹೀಗಾಗಿ ಉತ್ತರ ಹುಡುಕಲು ಎಂದೋ ನಾನು ಮುಂದೇನಾಗಬೇಕು ಎಂಬುದರ ಕುರಿತು ಆಲೋಚಿಸಿದ್ದಿದೆ. ಕನಸು ಕಾಣುವಷ್ಟು ಸೀರಿಯಸ್ ಆಗಿದ್ದಿದ್ದರೆ ನಮ್ಮಲ್ಲಿ ಹಲವರು ಕ್ರಿಕೆಟ್ಟಿಗರಾಗುವ ಕನಸು ಕಾಣುತ್ತಿದ್ದೆವು ಬಹುಶಃ, ಅಷ್ಟೊಂದು ಕ್ರಿಕೆಟ್ ಸವಾರಿ, ಸ್ಕೂಲು, ಕಾಲೇಜು, ಟಿ ವಿ - ಎಲ್ಲೆಲ್ಲೂ. ಅಪ್ಪ ಅಮ್ಮಂದಿರಿಗೂ ಇದರಲ್ಲಿ "ಸಖತ್ ದುಡ್ಡು" ಎಂದು ಯಾವಾಗ ಅನಿಸಿತೋ ಮಧ್ಯಮ ವರ್ಗದ ಹಲವರು ಸಾಯಂಕಾಲ "forcibly" ಮಕ್ಕಳನ್ನು ಕ್ರಿಕೆಟ್ 'ಟ್ಯೂಶನ್ನಿ'ಗೆ ಅಟ್ಟಲು ಪ್ರಾರಂಭಿಸಿದ್ದರಲ್ಲ ಆಗ! ಕಂಪ್ಯೂಟರ್ ಬಂದ ಹೊಸತರಲ್ಲಿ "ಎಷ್ಟು ಖರ್ಚಾದರೂ ಪರವಾಗಿಲ್ಲ" ಎಂದು 386, 486 ಇಟ್ಟುಕೊಂಡು ಅರ್ಧಂಬರ್ಧ ಹೇಳಿಕೊಡುತ್ತಿದ್ದ instituteಗಳಿಗೆ ಕಳುಹಿಸುತ್ತಿದ್ದರಲ್ಲ!

(ಹಾರುತ್ತಿರುವ ಪ್ಲೇನು ನೋಡಿ)
"ಪಾಪಾ, ಮೇಂ ಪೈಲಟ್ ಬನೂಂಗ... "
"ಕಭೀ ಕಭೀ ಹಮೇಂ ಭೀ ಲಿಫ್ಟ್ ದೇ ದಿಯಾ ಕರೋ... "

(ಸಿನಿಮಾ ನೋಡುತ್ತ)
"ಪಾಪಾ... "
"... "
"ಹೀರೋ!"

(ಆಟಿಕೆ ಅಂಗಡಿಯಲ್ಲಿ, ಅಪ್ಪ ಫುಟ್ ಬಾಲ್ ಹಿಡಿದು ಬಂದರೆ)
"ಪಾಪಾ, ಮೇಂ ಕ್ರಿಕೆಟರ್ ಬನೂಂಗ... "

ಎಂಬುದು ಜಾಹೀರಾತು. ಆದರೆ ಮಕ್ಕಳಲ್ಲಿ ಹುಟ್ಟಿಹಾಕುವ, ಹುಟ್ಟುವ "ಕನಸುಗಳ" ಬಗ್ಗೆ ಪಟ್ಟನೆ ಹೇಳಿ ಹೊರಟುಹೋಗುತ್ತದೆ. ಜಾಹೀರಾತು ಮನಸ್ಸಿಗೆ ಹತ್ತಿರವಾದರೂ, ಕಟ್ಟಿದ ಕನಸುಗಳ ಕಹಿ ಸತ್ಯ ಎಲ್ಲೋ ಮನದ ಮೂಲೆಯಲ್ಲಿ ರಾಚಿ ಕಸಿವಿಸಿಗೊಳಿಸಿಯೇ ಹೋಗುತ್ತದೆ.

ಉತ್ತರ ಹುಡುಕುವ ಹಿನ್ನೆಲೆಯಲ್ಲೇ:
ನಮ್ಮ ಮನೆಯಲ್ಲಿ "ಹರಿ ದೊಡ್ಡವನಾಗಿ ಏನಾಗಬೇಕು?" ಎಂಬುದರ ಕುರಿತು ಎಲ್ಲರಿಗೂ ಒಂದೊಂದು "ಕಟ್ಟಿಕೊಂಡ" ಕನಸು ಇದ್ದಿರಲಿಕ್ಕೂ ಸಾಕು! ಮನೆಯಲ್ಲಿ ಸಣ್ಣವನಲ್ವ? ನಾನೇನಾಗಬಹುದು ಎಂದು ಕೇಳಿದಾಗ ಸುಮಾರು ಉತ್ತರಗಳು ಸಿಗುತ್ತಿದ್ದವು. ಕೆಲವರಿಂದ ಆದೇಶಗಳೂ ಸಿಗುತ್ತಿದ್ದವು. ಅಮ್ಮ ಒಬ್ಬರಿಗೆ ಅಂಥದ್ದೇನೂ ಇರಲಿಲ್ಲ. ಅವರು "ನಿನಗೇನು ಇಷ್ಟವೋ ಅದು ಮಾಡು ಹರಿ. ಎಲ್ಲಕ್ಕಿಂತ ಮುಖ್ಯ ಒಳ್ಳೆತನ ಉಳಿಸಿಕೊಳ್ಳುವುದು, ಸಮಾಜಕ್ಕೆ ಒಳ್ಳೆಯನಾಗುವುದು" ಎಂದು ಕಾಳಜಿಯುಳ್ಳ ಉತ್ತರವೇ ಕೊಡುತ್ತಿದ್ದರು. ಭಾಷಣಕ್ಕೆ ಸಾಮಗ್ರಿ ಒದಗಿಸಿಕೊಳ್ಳಲು ಹೊರಟು ಅಮ್ಮನ ಉತ್ತರ ಕೇಳಿ ಅದನ್ನೇ ನೆಚ್ಚಿಕೊಂಡರೆ ಕಥೆಯೇ ಮುಗಿಯಿತು! ಊಹಿಸಿಕೊಳ್ಳಿ:

"ನಾನು ನನಗೇನು ಇಷ್ಟವಾಗುತ್ತದೋ ಅದೇ ಆಗಬೇಕೆಂದು ಬಯಸುತ್ತೇನೆ. ಆದರೆ ಮುಖ್ಯವಾಗಿ ಸಮಾಜಕ್ಕೆ ಒಳ್ಳೆಯವನಾಗಬೇಕೆಂದು ಬಯಸುತ್ತೇನೆ. ಡಿ.ವಿ.ಜಿಯವರೇ ಬರೆದಿರುವಂತೆ... ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು... "
- ಇದು ಯಾರಿಗೂ ರುಚಿಸಲಿಕ್ಕಿಲ್ಲ! ದ್ವಾಪರಯುಗದ ಸರಕು ಅನ್ನಿಸೀತು.

ಇಷ್ಟೆಲ್ಲ ನೆನಪಾದದ್ದು ನಾನು ಏನಾಗಬೇಕು ಎಂದು ನಾನೇನಂದುಕೊಂಡಿದ್ದೆ ಎಂಬುದರ ಬಗ್ಗೆ ಆಲೋಚನೆ ತಲೆಯಲ್ಲಿ ಸುಳಿದಾಗ. ನನಗೇನೋ ಕಂಪ್ಯೂಟರ್ ಇಷ್ಟವಿತ್ತು, ಫೋಟೋಗ್ರಫಿ ಇಷ್ಟವಿತ್ತು, ಕನ್ನಡ ಇಷ್ಟವಿತ್ತು, ಚೆಸ್ ಇಷ್ಟವಿತ್ತು, ಪರಿಸರ ಇಷ್ಟವಿತ್ತು, ಚಿತ್ರ, ಕಾರ್ಟೂನು ಇಷ್ಟವಾಗುತ್ತಿತ್ತು, ಸಿನಿಮಾ ಇಷ್ಟವಾಗುತ್ತಿತ್ತು.  - ಏನೇನೆಲ್ಲ ಇಷ್ಟಗಳು, ಹವ್ಯಾಸಗಳು! ಆ ನಿಟ್ಟಿನಲ್ಲಿ "ಏನು ಆಗಬೇಕು" ಎಂಬುದರ ಕುರಿತು ಏನೂ ಅಂದುಕೊಂಡದ್ದಿಲ್ಲ, ಆದರೆ ಕನಸು ಕಟ್ಟಿಕೊಳ್ಳದಿದ್ದರೂ ಕಂಡ ಕನಸುಗಳೇ ಇಷ್ಟಗಳ ಸುತ್ತ ನನಸಾಗುತ್ತ ಹೋಗಬಹುದು ಎಂದು ಅನಿಸಿದ್ದು ಏನೂ ಕಟ್ಟಿಕೊಳ್ಳದ್ದರ ಗಾಬರಿ ಕಡಿಮೆ ಮಾಡಿದ್ದುಂಟು.

ಕನಸು ನನಸುಗಳ ಈ ಲಹರಿ ಯಾಕೋ? ಹಲವು ವರ್ಷಗಳಿಂದ ಗ್ನು/ಲಿನಕ್ಸ್ ಸುತ್ತ ಆಸಕ್ತರನ್ನು ಒಟ್ಟುಗೂಡಿಸಿ ಅದರ ಸುತ್ತ ಇರುವ ತೊಂದರೆಗಳನ್ನು ಸವಾಲುಗಳನ್ನು ಚರ್ಚಿಸುತ್ತ ಏನೇನು ಮಾಡಬಹುದು ಎಂದು ಆಲೋಚಿಸುತ್ತ ನಡೆದ ಪರಿಧಿಯಲ್ಲಿ ನನಗೆ ಪರಿಚಿತನಾಗಿ, ನಮ್ಮ ಸಮೂಹಕ್ಕೆ ಸೇರ್ಪಡೆಯಾಗಿ ಈಗ ಅದರ ಬಹುಮುಖ್ಯ ಸದಸ್ಯನಾಗಿರುವ ಓಂಶಿವು ಹುಟ್ಟುಹಬ್ಬ ಇಷ್ಟೆಲ್ಲ ಆಲೋಚನೆಗಳನ್ನು ಬಡಿದೆಬ್ಬಿಸಿತು. ಇವತ್ತು ಅವನ ಹುಟ್ಟುಹಬ್ಬ. ಫೆಬ್ರವರಿ ೧೩!

ಮುಂಚಿನಿಂದ ಗುರಿ ಎನ್ನುವುದು ಏನಾದರೂ ಕೊಳ್ಳುವುದು, ನನ್ನದಾಗಿಸಿಕೊಳ್ಳುವುದು ಎಂದು ನನಗೆ ಇದ್ದದ್ದಿಲ್ಲ, ಅದರ ಪರಿಚಯವೂ ಕಡಿಮೆ. ಬಹುಶಃ ಅದು ನಾನು ಹಿಡಿದ ಹಾದಿಯಿರಬಹುದು, ಅಥವ ನನ್ನಲ್ಲಿ ಹುಟ್ಟಿಕೊಂಡ ಗುಣವೇ ಇದ್ದಿರಬಹುದು. ಇದೊಂದು "ದೊಡ್ಡ ಗುಣ" ಎಂದು ನಾನು ಹೇಳುತ್ತಿಲ್ಲ. ನನಗೆ ಅದರ ಹತ್ತಿರದ ಪರಿಚಯವಿರಲಿಲ್ಲವೆಂಬುದನ್ನು ತಿಳಿಸಲು ಈ ಸಾಲುಗಳು ಅಷ್ಟೆ. ಆದರೆ ಏನಾದರೂ ಒಂದನ್ನು ಪಡೆದುಕೊಳ್ಳಬೇಕು ಎಂದು ಗುರಿ ಇಟ್ಟುಕೊಳ್ಳುವುದೂ ಒಂದು ಗುರಿಯಾಗಬಹುದು ಎಂಬುದು ನನಗೆ ಸರಿಯಾಗಿ ಅರ್ಥವಾದದ್ದು ಬಹಳ ಇತ್ತೀಚೆಗೆ. ಹಾಗೊಂದು ಲೌಕಿಕ ಗುರಿ ಇಟ್ಟುಕೊಳ್ಳುವುದರ ಪರದೆಯ ಹಿಂದೆ ಇರುವ ಸಂಗತಿಗಳನ್ನವಲೋಕಿಸಿದರೆ ಇದರ ಅಸ್ತಿತ್ವದ ಹಿಂದಿರುವ ಮೂಲಕಾರಣ ಅಥವ ಮೂಲಕಾರಣಗಳು ಚೆನ್ನಾಗಿ ಅರ್ಥವಾಗಬಹುದು. ಮುಂದೇನಾಗಬೇಕು ಎನ್ನುವುದಕ್ಕಿಂತ ಮೈಲಿಗಲ್ಲುಗಳನ್ನು ಅರಸಿ ಹೊರಟು ಕೆಲ ದೂರ ಕ್ರಮಿಸಿ ಗುರಿ ತಲುಪುತ್ತ ಮುನ್ನಡೆಯುವುದು ವಿಭಿನ್ನ ಎಂದು ಕೂಡ ಅನಿಸಬಹುದು.

ಇದು ಸರಿಯಾಗಿ ಅರ್ಥವಾಗಿದ್ದು ತೀರ ಇತ್ತೀಚೆಗೆ ಎಂದು ಹೇಳಿದೆ, ತದನಂತರ ಹಲವು ಬಾರಿ ನನ್ನ ಗಮನ ಇದರ ಹತ್ತಿರ ಸುಳಿದು, ಇದರ ಅಸ್ತಿತ್ವ, ಅಸ್ತಿತ್ವದ ಹಿಂದಿರುವ subtle ಸಂಗತಿಗಳು ಮತ್ತೆ ಮತ್ತೆ ಅಚ್ಚು ಒತ್ತಿವೆ.

ಹಾಗೆಯೇ ಮತ್ತೊಮ್ಮೆ ಇದರ ಅಚ್ಚು ಒತ್ತಿದ ಸಂಗತಿ ನಮ್ಮ ಓಂಶಿವು career - ಅವನು ಇಲ್ಲಿಯವರೆಗೂ ತೆಗೆದುಕೊಂಡಿರುವ ಪುಟ್ಟ ಹಾದಿ...  ನಾನು ಕಳೆದ ಹಲವು ವರ್ಷಗಳು ಗಮನಿಸಿರುವಂತೆ (ಇಲ್ಲಿ ಅವನ ವೈಯಕ್ತಿಕ ಜೀವನದ ಬೌಂಡರಿಯೊಳಗೆ ಅನುಮತಿಯಿಲ್ಲದೇ ಕಾಲಿಟ್ಟು ಮಾತನಾಡುತ್ತಿರುವುದು 'ಓಕೆ' ಎಂದುಕೊಂಡು ಮುಂದುವರೆಯುವೆ). ನಮ್ಮಲ್ಲಿ ಹಲವರು ಮಧ್ಯಮವರ್ಗದವರು - ಸೂರು ಸಿರಿಯಿಂದ ತುಂಬಿಲ್ಲವಾದರೂ ಸೋರದೆ ಇರುವುದರಿಂದ ಸೂರು ಮರೆತು ದಿನಗಳನ್ನು ಸಾಗಿಸುವವರು. ಸಿರಿತನದ ಅರಿವಿಲ್ಲದಿದ್ದರೂ ಬಡತನದ ಅರಿವಿಲ್ಲದವರು!
ಆದರೆ ನಾನು ಇವನ ಜೀವನದಲ್ಲಿ ಕಂಡದ್ದರಲ್ಲಿ ವ್ಯತ್ಯಾಸವಿತ್ತು. ಅವ ಕಾರು ತೆಗೆದುಕೊಳ್ಳಬೇಕು, ಮನೆ ತೆಗೆದುಕೊಳ್ಳಬೇಕು ಎಂಬುದಕ್ಕೆ ಏಕೆ ಇಷ್ಟು ಒತ್ತು ಕೊಡುತ್ತಾನೆ, ಅದ್ಯಾಕೆ ಅವನಿಗೆ ಅದು ಬೆಳಕು ಕಾಣುವವರೆಗೂ 'ಗುರಿ'ಯಾಗಿ, ಬೆಳಕು ಕಂಡ ನಂತರ ಒಂದು ಮೆಟ್ಟಿಲು ಹತ್ತಿದಂತಾಗಿ ಕಾಣುತ್ತದೆ ಎಂಬುದು ಮೊದಲಿಗೆ ಭಿನ್ನ ಎನಿಸಿದರೂ ತದನಂತರ ಚೆನ್ನಾಗಿ ಅರ್ಥವಾದದ್ದುಂಟು. ಚಾಕಲೇಟು ಕೇಳಿದಾಗಲೆಲ್ಲ ಬಹು ಪಾಲು ಸಿಗುತ್ತಲೇ ಇದ್ದುದರಿಂದ ನನಗೆ ಚಾಕಲೇಟು ಕೊಳ್ಳುವುದು ಅಂಥದ್ದೇನೂ ವಿಶೇಷವಲ್ಲ. ಚಾಕಲೇಟು ಗೌಣ! ಮನೆಯಲ್ಲಿ ಆಗಲೇ ಕಾರುಗಳಿರುವವರಿಗೆ ಕಾರೂ ಗೌಣ. ಹಾಗೇನಾದರೂ ಬೇಕು ಅನಿಸಿದರೆ ಅದೊಂದು necessityಯಾಗಿ ಚುಚ್ಚಿದಾಗ ಮಾತ್ರ. ಮೊಬೈಲು ಕೊಂಡ ನಿಮಿಷವೇ ಅದರ ಕವರ್ರು ಕಿತ್ತು ಬಿಸುಟು ಹೊರಹೋಗುವಾಗ ಅಂಗಡಿಯವ "ಸಾರ್, ಇರಲಿ ಬಿಡಿ. ಸ್ವಲ್ಪ ದಿನ ಇಟ್ಟುಕೊಳ್ಳಿ" ಎನ್ನುವ ಅವನ ಮನಸ್ಸು ಅರ್ಥವಾಗದೇ ಇರದು. ಆದರೆ ಅದೇ ಸಮಯ ಮೊಬೈಲು ಯಾವುದೇ priced possession ಆಗದೇ ಕೇವಲ necessityಗಾಗಿ ಬಳಸುತ್ತಿರುವುದರಿಂದ ಗೌಣ ಎನ್ನಿಸುವುದೂ ಅರ್ಥವಾಗುವಂತಹ ವಿಷಯವೇ. ಇವೆರಡೂ ಮನಸ್ಸಿನ ಮುಖಗಳು, ಒಂದೇ ಮನಸ್ಸಿನಲ್ಲೇ ಇದ್ದೀತು ಕೂಡ. ಹಾಗೆ ಇಲ್ಲದಿದ್ದರೆ ಇನ್ನು ಮುಂದೆ ಏನೂ ವಿಶೇಷ ಅನಿಸಲಿಕ್ಕಿಲ್ಲ, ಹಾಗೆ ಇದ್ದರೆ ಎಲ್ಲವೂ ವಿಶೇಷ ಎನ್ನಿಸಲಿಕ್ಕೂ ಸಾಕು ಎಂಬುದರ ನಡುವೆ ತೆವಳುತ್ತ ಒಂದು ಕನಸು - ನನಸುಗಳ ಪಟ್ಟಿ ಇಟ್ಟುಕೊಂಡರೇ ಚೆಂದವೇನೋ ಅಂತಲೂ ಅನಿಸೋದುಂಟು!

ಇಂಥದ್ದೇ ಒಂದು ಉತ್ತಮ, ಚೆಂದದ ಪಟ್ಟಿ ಇಟ್ಟುಕೊಂಡು ತನ್ನ ಎಷ್ಟೋ ಕನಸುಗಳನ್ನು ನನಸಾಗಿಸಿಕೊಂಡಿರುವ ಓಂಶಿವು ಹುಟ್ಟುಹಬ್ಬ ಇವತ್ತು. ಶಿವುಗೆ ಹುಟ್ಟು ಹಬ್ಬದ ಶುಭಾಶಯಗಳು. ಓಂಶಿವು ಕಟ್ಟಿರುವ *ನಿಜವಾದ* ಕನಸುಗಳು ನನಸಾಗಲಿ ಎಂದು ಹಾರೈಸೋಣ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

".....ನಿನಗೇನು ಇಷ್ಟವೋ ಅದು ಮಾಡು ಹರಿ. ಎಲ್ಲಕ್ಕಿಂತ ಮುಖ್ಯ ಒಳ್ಳೆತನ ಉಳಿಸಿಕೊಳ್ಳುವುದು, ಸಮಾಜಕ್ಕೆ ಒಳ್ಳೆಯನಾಗುವುದು"

ಹರಿಯವರೇ,
ನಿಮ್ಮ ಅಮ್ಮನಂತೆ, ಎಲ್ಲ ಅಮ್ಮಂದಿರು ಈ ಮಂತ್ರವನ್ನು ಮಕ್ಕಳಿಗೆ ಹೇಳಿಕೊಡಬೇಕು. ಅವರ ಶಿಕ್ಷಣದ ಫಲವನ್ನು ನಾವೆಲ್ಲರೂ ನೋಡುತ್ತಾ, ಅನುಭವಿಸುತ್ತ ಇದ್ದೀವಿ. ದಯವಿಟ್ಟು ಅವರಿಗೆ ನಮ್ಮ ಕೃತಜ್ಞತೆಗಳನ್ನು ಹಾಗೂ ಅಭಿನಂದನೆಗಳನ್ನು ತಪ್ಪದೆ ತಿಳಿಸಿ. ಸತ್ಪ್ರಜೆಗಳನ್ನು ತಯಾರು ಮಾಡುವುದು ಸಣ್ಣ ಕೆಲಸವಲ್ಲ. ಅದೇ ಒಂದು ತಪಸ್ಸು.

ಓಂ ಶಿವಪ್ರಕಾಶರ ಕನಸುಗಳು ಎಲ್ಲವೂ ನಿಜವಾಗಲಿ. ಅವರ ಹುಟ್ಟುಹಬ್ಬಕ್ಕೆ ನಮ್ಮೆಲ್ಲರ ಶುಭಾಶಯಗಳು.

ಶಾಮಲ

ಓಂಶಿವಪ್ರಕಾಶ ಆಗಲೇ ಚಂದಿರನ ಅಂಗಳದತ್ತ ಯಾತ್ರೆ ಹೊರಟಿದ್ದಾರೆ. ಒಬ್ಬರೇ ಅಲ್ಲ, ಒಂದಿಷ್ಟು ಜನರನ್ನು ಕರೆದುಕೊಂಡು. ಮದುವೆಯಾದವರಿಗೆ ಅವಕಾಶವಿಲ್ಲ ಎಂದು ನಮಗೆಲ್ಲ ನಿರಾಶೆ ಮಾಡಿದ್ದಾರೆ. :(

ಕನಸುಗಳಿಗೇನು ಹರಿ, ಸಾವಿರ ಇರುತ್ತವೆ. ಆದರೆ, ಕನಸು ಕಾಣುವ ಪರಿಯೇ ಒಂಥರಾ ಚೆಂದ. ಅವು ಮಕ್ಕಳಂತೆ ಮೆತ್ತಗೇ ಆತುಕೊಂಡು ನೀಡುವ ಮುದ ಇನ್ನಷ್ಟು ಚಂದ. ಅವನ್ನು ಅಪ್ಪಿ, ಮುದ್ದಾಡಿ, ಮೆತ್ತಗೇ ಕೆಳಗಿಳಿಸಿ ನಾವು ಮುಂದೆ ಹೊರಡಲೇಬೇಕು. ಅದೇ ನನಸಿನ ಮೊದಲ ಹೆಜ್ಜೆ.

ಕನಸಿಲ್ಲದ ಜೀವನವೂ ಒಂದು ಜೀವನವಾ? ಇವತ್ತು ನಮ್ಮ ನಮ್ಮ ವೈಯಕ್ತಿಕ ಮಟ್ಟದಲ್ಲಿ ತೃಪ್ತಿ ತರುವಂಥದ್ದೇನಾದರೂ ಇದ್ದರೆ, ಅದಕ್ಕೆ ಕಾರಣ ಹಿಂದೊಮ್ಮೆ ನಾವು ಕಂಡ, ಈಗ ಬಾಲಿಶ ಅನಿಸುವಂಥ ಅಮಾಯಕ ಕನಸುಗಳು. ಕನಸುಗಳಿಗೆ ಮಿತಿಯಿಲ್ಲ. ಹಾಗೇ ಸಾಧನೆಗಳಿಗೂ.

ಹೀಗಾಗಿ, ಕನಸಿರಲಿ. ಅದನ್ನು ಕಾಣುವ ಮನಸಿರಲಿ. ಅದನ್ನು ಅನುಭವಿಸುವ ಸೊಗಸಿರಲಿ. ಸಾಧಿಸುವ ಛಲವಿರಲಿ. ಹೊಸ ಕನಸುಗಳನ್ನು ಸೇರಿಸುತ್ತ, ಹಳೆಯವನ್ನು ನನಸಾಗಿಸುತ್ತ, ಅನುಪಯುಕ್ತವಾದವುಗಳನ್ನು ಸೋಸುತ್ತ ಹಾದಿ ಸಾಗುತ್ತಿರಬೇಕು. ಓಂಶಿವಪ್ರಕಾಶ ಬಹುಶಃ ಇಂಥದೊಂದು ದಾರಿಯಲ್ಲಿ ನಡೆಯುತ್ತಿದ್ದಾರೆ. ನೀವು ಕೂಡ. ಇಲ್ಲಿ ಲೇಖನಿ ಮೂಲಕ ಪರಿಚಯವಾದ ಹಲವಾರು ಜನ ಅಂಥ ಕನಸು-ನನಸುಗಾರರೇ ಅಂತ ನನಗೆ ಅನ್ನಿಸಿದೆ.

ಕನಸುಗಳ ರೆಕ್ಕೆಗಳಿಲ್ಲದಿದ್ದರೆ ಉತ್ತರ ಕರ್ನಾಟಕದ ದೂಳು ತುಂಬಿದ ಹಳ್ಳಿಯೊಳಗಿಂದ ನಾನು ಇಷ್ಟು ದೂರ ಹಾರಿ ಬರಲಾಗುತ್ತಿರಲಿಲ್ಲ. ಗೌರಿಗೆ ಔಷಧ ಹುಡುಕಿಕೊಂಡು ಗುಳೆ ಬಂದವರು ನಾವು. ಇವತ್ತು ನಮ್ಮ ಸುತ್ತ ಕನಸು-ನನಸುಗಾರರ ದೊಡ್ಡ ಹಿಂಡೇ ಇದೆ. ನನಗಿಂತ ದೊಡ್ಡ ಬಳಗ ನನ್ನ ಮಗಳಿಗಿದೆ. ಅವಳ ಶಾಲೆಯಲ್ಲಿ ನನ್ನ ಹೆಸರು ಚಾಮರಾಜ ಅಲ್ಲ, ನನ್ನ ಹೆಂಡತಿ ಹೆಸರು ರೇಖಾ ಅಲ್ಲ. ನಾನು ಗೌರಿಯ ಪಪ್ಪಾ, ಆಕೆ ಗೌರಿಯ ಮಮ್ಮಿ.

ಕನಸು ಬೆಳೆಯುವುದು ಹೀಗೇ, ಅಲ್ಲವೆ?

ಓಂಶಿವಪ್ರಕಾಶ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಹೊಸ ಕನಸುಗಳು ಅವರಲ್ಲಿ ಮೊಳೆಯಲಿ, ನಳನಳಿಸಲಿ. ಹಬ್ಬಲಿ. ದೂರದ ಚಂದಿರನವರೆಗೆ, ಅದರಾಚೆಯ ವಿಶ್ವಪಥಕೆ.

ಏಕೆಂದರೆ, ನಡೆದಷ್ಟೂ ದಾರಿಯಿದೆ. ಪಡೆದಷ್ಟೂ ಭಾಗ್ಯವಿದೆ.

ಶಿವು ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಕನಸುಗಳೆಲ್ಲ ನನಸಾಗಲಿ.
ಹರಿ, ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಕನಸುಗಳೂ ನನಸಾಗಲಿ :)

ಬೆಳೆದದ್ದು ಕನಸುಗಳನ್ನ ಹೊತ್ತು ಕೊಂಡೇ. ಆದ್ರೆ ತುಂಬಾ ದೊಡ್ದ ಕನಸುಗಳನ್ನೇನೂ ಕಂಡಿರಲಿಲ್ಲ. ಹಾಸಿಗೆ ಇದ್ದಷ್ಟು ಕಾಲುಚಾಚು ಎಂದು ಆಗಿದ್ದನ್ನು ಮಾತ್ರ ಮಾಡಿದ್ದು ಮನೆಯಲಿದ್ದವರು. ಬೆಂಗಳೂರಿನಲ್ಲಿದ್ದೂ, ಬೆಂಗಳೂರನ್ನೇ ಕಾಣದಿದ್ದ ದಿನಗಳು ಇಂದು ಬೆಂಗಳೂರನ್ನ ನಿರಾಯಾಸವಾಗಿ ಸುತ್ತುವಾಗ ನೆನಪಿಗೆ ಬರ್ತವೆ. ಯಾರೂ ಇದನ್ನು ಮಾಡು ಎಂದು ಹೇಳಿ ನನ್ನನ್ನು ಕೆಲಸ ಮಾಡಿಸಿದ್ದಿಲ್ಲ. ಕೆಲಸ ಇರೋದನ್ನ ಅರಿತು ಮಾಡಿದ್ದೇ ಜ್ಯಾಸ್ತಿ. ಅಂತಹ ಸಮಯದಲ್ಲಿ, ನಾನು ಮಾಡಿದ್ದು, ಮಾಡ್ತಿರೋದು, ಸರಿಯೋ, ತಪ್ಪೋ, ಒಪ್ಪೋ ಇದೆಲ್ಲವನ್ನ ಹೇಳಿದ್ದು ಮನೆಯಲ್ಲಿ ಅಪ್ಪ, ಅಮ್ಮ ಮತ್ತೆ ಹೊರಗೆ ಕೆಲವೇ ಕೆಲವು ಗೆಳೆಯರು. ಮನಸ್ಸಿಗೆ ತೋಚಿದ್ದನ್ನ, ಸರಿ/ತಪ್ಪು ಲೆಕ್ಕಾಚಾರದ ಮೇಲೆ, ಇಲ್ಲ ಏನಾಗುತ್ತೆ ನೋಡೇ ಬಿಡೋಣ ಎಂಬ ಹಠವಾಧಿ ಮನೋಭಾವದೊಂದಿಗೆ, ಜೀವನದೊಂದಿಗೆ ಗುದ್ದಾಡುವಾಗ ಮಾಡಿಯೇ ತೀರುದ್ದು ಜ್ಯಾಸ್ತಿ. ಅವುಗಳೇ ನಾನು ಕಂಡ ಕನಸುಗಳು ಮತ್ತೆ ಅದರಲ್ಲಿ ಬಹಳಷ್ಟು ನನಸಾಗಿವೆ ಮತ್ತೆ ಕೆಲವು ಹಾದಿಯಲ್ಲಿ ರಾರಾಜಿಸ್ತಿವೆ. "ಕನಸುಗಳ ನನಸಾಗಿಸುತ್ತ" ಹೇಳುವ ಮುಂಚೆ ಅದರ ಹಿಂದಿನ ಕಷ್ಟಗಳ ಬಗ್ಗೆ ಬರೆಯುವುದರ ಬದಲು ಸಾಗಿದ ಹಾದಿಯಲ್ಲಿ ಕಂಡ, ಸಾಮಾನ್ಯವಾಗಿ ನಾವಷ್ಟು ಗಮನವೀಯದ ವಿಷಯಗಳ ಬಗ್ಗೆ ಬರೆಯುತ್ತಾ ಸಾಗಬೇಕು ಅನ್ನೋದು ನನ್ನಾಸೆ. ಇದನ್ನ ಬರೆದು ಮುಗಿಸುವುದು ನಾನು ಹಾಕಿಕೊಂಡಿರುವ "to-do" ನಲ್ಲಿ ಇನ್ನೂ ಹಾಗೇ ಇದೆ. ಈ ವಿಷಯಗಳು ಹಲವರಿಗೆ ನಾ ಕಂಡ ಬದುಕುನ ಕೆಲ ಮಜಲುಗಳನ್ನ ಇಣಿಕಿ ನೋಡ್ಲಿಕ್ಕೆ ಸಹಾಯ ಮಾಡ್ಬಹುದು, ಅವರು ಅದನ್ನ ನೋಡಿ ಏನಾದರೂ ಸ್ವಲ್ಪ ಕಲೀಬಹುದು, ಇಲ್ಲವಾದಲ್ಲಿ ನನ್ನ ತಪ್ಪುಗಳನ್ನ ಕಂಡಿದು ಖಂಡಿತವಾಗಿ ನನಗೆ ತಿಳಿಸಬಹುದು ಎಂದು ಕೊಂಡಿದ್ದೇನೆ. ಹೀಗೆಲ್ಲಾ ಅಂದುಕೊಂಡದ್ದನ್ನ ಮುಗಿಸಿದರೆ, ಪ್ರತೀ ವರ್ಷ ನನ್ನ ಹೊಸ ಹುಟ್ಟು ಹಬ್ಬದ ಲೆಕ್ಕಾಚಾರ ಚುಕ್ತಾ ಆಗೋದು. ಇಲ್ಲಾಂದ್ರೆ ಅದರ ಬದಲಾಗಿ ಏನಾದ್ರೂ ಬೇರೆ ಮಾಡಿದೆನಾ ಅಂತ ಚಿಂತಿಸಿ, ಬ್ಯಾಲೆನ್ಸ್ ಶೀಟ್ ರೆಡಿ ಮಾಡಿ ನನ್ನನ್ನ ನಾನು ವಿಚಾರಿಸಿಕೊಳ್ಳೋದು ಅನೇಕ ವರ್ಷಗಳಿಂದ ನಾನು ಮಾಡ್ಕೊಂಡು ಬಂದಿರೋ ಆಚರಣೆ. ಪಾರ್ಟಿ ಎಲ್ಲ, ಸುತ್ತಲಿನ ಜನರನ್ನ ನಿರಾಶೆ ಪಡಿಸಿ, ಜುಗ್ಗ ಅನ್ನಿಸ್ಕೊಳ್ದೇ ಇರೋದಕ್ಕೆ ಮಾತ್ರ. ಅದೇ ದಿನ ಅವರಿಗೂ ಕೇಳೋ ಹಾಗಿದ್ರೆ, ಒಂದೆರಡು ವಿಚಾರಗಳ ಬಗ್ಗೆ ನನ್ನ ಅನುಭವಕ್ಕೆ ತಕ್ಕಂತೆ ಮಾತುಕತೆ. ಮತ್ತೆ ಎಂದಿನಂತೆ ಕೆಲಸದಲ್ಲಿ ಮಗ್ನ. ಸುಮಾರು ಒಂದೆರಡು ವರ್ಷಗಳಿಂದ ಬರೀಲಿಕ್ಕೆ ಶುರುಮಾಡಿದ್ದನ್ನ ಹೆಚ್ಚಾಗಿ ಮುಂದುವರೆಸಿ ಕೊಂಡುಹೋಗಿ, ಅದರಲ್ಲೇ ನನ್ನ ಮನಸ್ಸಿಗೆ ಹೊಸದೊಂದು ಔಟ್ಲೆಟ್ ಕಂಡುಕೊಂಡಿದ್ದೇನೆ. ಇದೆಲ್ಲ ನನ್ನ ಮನಸ್ಸಿಗೆ ಬಂದಂತೆ ಆಚರಿಸಿಕೊಂಡು ಬಂದ ಆಚರಣೆಗಳು. ಮನಸ್ಸಿನಲ್ಲೆಲ್ಲೋ ಬೇರೆಯವರಂತೆ ನಾನೇಕಿಲ್ಲ ಅಂದುಕೊಂಡದ್ದಿದೆ. ನನಗೂ ಗಿಫ್ಟಗಳು ಬಂದಿದ್ರೆ ಅಂತ ಅಂದು ಕೊಂಡದ್ದಿದೆ. ನನ್ನ ಸಂಪಾದನೆಯಲ್ಲಿ ನನಗೆ ಬೇಕಾದ್ದನ್ನ ಕೊಂಡು, ಇತರರ ಹುಟ್ಟುಹಬ್ಬಗಳಲ್ಲಿ ಅವರಿಗೆ ಉಡುಗೊರೆ ಕೊಟ್ಟು ಸಂತೋಷ ಹಂಚಿಕೊಳ್ಳುವ ಹಂತಕ್ಕೆ ಬರೋ ಅಷ್ಟರಲ್ಲಿ, ಮೇಲೆ ಹೇಳಿದ ಆಚರಣೆಯ ವಿಚಾರಧಾರೆ ನನ್ನ ತಲೆಯಲ್ಲಿ ಹೊಕ್ಕಿತ್ತು. ನೆನ್ನೆ ಆಗಿದ್ದೂ ಅಷ್ಟೇ. ಬೆಳಕ್ಕೆ ೭ಕ್ಕೇ ಆಫೀಸು, ಕೆಲಸ ಶುರು, ಬಿಡುವಿನ ಸಮಯದಲ್ಲಿ ನನ್ನ ಕನ್ನಡ ಮತ್ತು ಇಂಗ್ಲೀಷ್ ಬ್ಲಾಗುಗಳ ಅಪ್ಡೇಟ್, ನಂತರ ಕೆಲ ಗೆಳೆಯರ ಜೊತೆ ಊಟ ಮತ್ತೆ ಕೆಲಸದ ಹಾದಿ. ಆಫೀಸಿನ ಮಂದಿಗೂ ಆಫೀಸಿನಲ್ಲೇ ಕೈಗೆ ಸಿಗದೆ ಯಾರು ಈ ದಿನವನ್ನ ದೊಡ್ಡದೆಂದು ಭಾವಿಸದ ಹಾಗೆ ನೊಡ್ಕೊಂಡಿದ್ದಾಗಿತ್ತು. ಆದ್ರೂ ಅವರ್ಯಾರೂ ನನ್ನ ಬಿಡೋರಿರಲಿಲ್ಲ. ಅದು ನನ್ನ ಕೈಗೆ ಉಡುಗೊರೆಯನ್ನ ಕೊಡೋವರ್ಗೂ ಮುಂದುವರೀತು. ಅದರೊಂದಿಗೆ ಮೊಬೈಲು, ಈ ಮೈಲು, ಒರ್ಕುಟ್, ಟ್ವಿಟರ್ ಹೀಗೆ ಹತ್ತು ಹಲವು ಕಡೆಗಳಿಂದ ಶುಭಾಶಯದ ಸಂದೇಶಗಳು. ಎಲ್ಲರಿಗೂ ಉತ್ತರಿಸಿ ಮನೆಗೆ ಹೊರಡೋಣವೆಂದರೆ ಅಲ್ಲಿ ಕಂಡು ಬಂದದ್ದು, ಹರಿ ಮೊದಲೇ ಹೇಳಿದ ಹಾಗೆ ಕೊಟ್ಟ ಶಾಕ್! ಈ ಲೇಖನದ ಮೂಲಕ. ಇದಕ್ಕೆ ಉತ್ತರಿಸಲಿಕ್ಕೆ ಶಬ್ದಗಳ ಕೊರತೆ ನನ್ನಲ್ಲಿ. ಇಂದಿಗೂ ನಾನು ಸಂಪಾದಿಸಿದ ಆಸ್ತಿ ಜ್ಯಾಸ್ತಿ ಕ್ರೆಡಿಟ್ ನಲ್ಲಿದ್ದು, ಡೆಬಿಟ್ ಮಾತ್ರ ನನ್ನ ಗೆಳೆಯ, ಗೆಳತಿಯರು ಮಾತ್ರ. ಅದರಲ್ಲೂ ಸಂಪದದ ಗೆಳೆಯರು ನನ್ನಲ್ಲಿ ಇಟ್ಟಿರುವ ವಿಶ್ವಾಸ, ತೋರುತ್ತಿರುವ ಪ್ರೀತಿಗೆ ತಕ್ಕ ಕೆಲಸ ನಾನಿನ್ನೂ ಮಾಡಬೇಕಿದೆ. ಹರಿ ಬರೆದ ಈ ಲೇಖನ ನನಗೆ ಇನ್ನೂ ಹೆಚ್ಚಿನ ಶಕ್ಕಿಯನ್ನ ನೀಡಿ, ಸಂಪದದ ಮೂಲಕ ಜ್ಞಾನದ ಹರಿವನ್ನ ಇತರರೆಡೆಗೆ ಸೇರಿಸುವಲ್ಲಿ ಸಹಕರಿಸಲಿ ಅನ್ಕೊಳ್ತೀನಿ. ಇದು ನಾನಿದುವರೆಗೂ ಪಡೆದ ಎಲ್ಲ ಉಡುಗೊರೆಗಳಿಗಿಂತಲೂ ಅಮೂಲ್ಯವಾದದ್ದು. ಯಾಕಂದ್ರೆ ಮುಂದಿನ ಹುಟ್ತುಹಬ್ಬ್ಬಕ್ಕೆ ಮೊದಲು ಹೊಸದೊಂದು ಕನಸು ಕಟ್ಟಲು ಇಲ್ಲಿ ನನಗೆ ಹೊಸ ಜಾಗ ಸಿಕ್ಕಿದೆ. ನಿಮ್ಮೆಲ್ಲ ಹಾರೈಕೆಗಳು ನನ್ನ ಕನಸುಗಳ ನನಸಾಗಿಸುವ ಯಶೋಗೀತೆ ಹಾಡ್ಬೇಕಾದ್ರೆ ಅದಕ್ಕಿಂತ ಹೆಚ್ಚಿನ ಸಂತೋಷ ಬೇರೆಯುಂಟೇ?

ಆದ್ರೂ ನನ್ನ ಸ್ವಲ್ಪ ಇಕ್ಕಟಿಗೆ ಸಿಕ್ಕಿ ಹಾಕಿಸಿದ ಹರಿ ಕೊನೆಗಳಿಗೆ ಯಲ್ಲಿ ;). ಏನ್ಬರಿಯೋದು ಅಂತ ದೊಡ್ಡ ಯೋಚನೆಯಾಗಿತ್ತು. ನಮ್ಮ ಟು-ಡು (to-do) ಹಾಗೇ ಇದೆ ಹರಿ, (to-do) ಲಿಸ್ಟ ಮುಗಿಸ್ಲಿಕ್ಕೆ ರಾಘವ, ರವಿ, ನಿಧಿ, ಮುರಳಿ, ಅರವಿಂದ ಎಲ್ಲರೂ ಎಲ್ಲ ಭಾಷೆಗಳಲ್ಲಿ ಒಂದೊಂದು ಸ್ಕ್ರಿಪ್ಟ್ ಬರೆದು ನಿನಗೆ ಕಳ್ಸೋ ಹಾಗೆ ಮಾಡೋದು ನನ್ನ ಮುಂದಿನ ಪ್ರೊಗ್ರಾಮ್. ಎಲ್ಲ ಕೆಲಸಗಳನ್ನ ಮುಗಿಸಿ ರೆಡಿಯಾಗಿರು... ಸಂಪದದ ಅನೇಕ ಕೆಲಸಗಳ ರಿಮೈಂಡರ್ ಸ್ಕ್ರಿಪ್ಟ್ ಬರೀಲಿಕ್ಕೆ ಶುರು ಹಚ್ಚಿಕೊಳ್ತೀನಿ. ಸಂಪದದ ಹೊಸ ವಿಷಯಗಳನ್ನ ಇತರರಿಗೆ ಈ ವರ್ಷ ನಾವು ಹೇಳೇ ಹೇಳ್ತೀವಿ ಅಂತ ಕಂಡ ಕನಸುಗಳ ನನಸಾಗಿಸುವ ಕೆಲಸಕ್ಕೆ ಈ ಸ್ಕ್ರಿಪ್ಟ್ ಚಾಲನೆ ನೀಡತ್ತೆ ಅನ್ಕೊಳ್ತೀನಿ.... ನನಗೀಗ ಮತ್ತೊಂದು ಕನಸು.... ಇದರ ಬಗ್ಗೆ ಮತ್ತೆ ಬರೆದು ತಿಳಿಸ್ತೀನಿ.

ನಿಮ್ಮ,
ಶಿವು

[quote]ನಮ್ಮ ಟು-ಡು (to-do) ಹಾಗೇ ಇದೆ ಹರಿ, (to-do) ಲಿಸ್ಟ ಮುಗಿಸ್ಲಿಕ್ಕೆ ರಾಘವ, ರವಿ, ನಿಧಿ, ಮುರಳಿ, ಅರವಿಂದ ಎಲ್ಲರೂ ಎಲ್ಲ ಭಾಷೆಗಳಲ್ಲಿ ಒಂದೊಂದು ಸ್ಕ್ರಿಪ್ಟ್ ಬರೆದು ನಿನಗೆ ಕಳ್ಸೋ ಹಾಗೆ ಮಾಡೋದು ನನ್ನ ಮುಂದಿನ ಪ್ರೊಗ್ರಾಮ್.[/quote]
ಏನಿದು? ;) ಯಾವ ಸ್ಕ್ರಿಪ್ಟು

<<ಓಂಶಿವು ಕಟ್ಟಿರುವ *ನಿಜವಾದ* ಕನಸುಗಳು ನನಸಾಗಲಿ ಎಂದು ಹಾರೈಸೋಣ.>>
ನಂದೊಂದು ಹಾರೈಕೆಯಿರಲಿ ಜೊತೆಗೆ.
ಬರಹ ಚೆನ್ನಾಗಿದೆ,
ಓಂಶಿವು, ವಿಶ್ ಯೂ ಹ್ಯಾಪಿ ಬರ್ತ್ ಡೇ :)

ಬಶೀರ್ ಕೊಡಗು, ದುಬೈ

ಶಿವು,
ಹುಟ್ಟು ಹಬ್ಬದ ಶುಭಾಶಯಗಳು. ನೀವು ಕಟ್ಟಿರುವ ಕನಸುಗಳು ನನಸಾಗಲಿ ಎಂದು ಹಾರೈಸುವೆ.

ಹರಿ,
ಕನಸು ನನಸುಗಳ ನಡುವಿನ ಜೀವನದ ಲೇಖನ ಮನ ಮುಟ್ಟುವಂತಿದೆ.
-ಸವಿತ