ಚೈನ್ ಮೈಲ್‍ಗಳು

To prevent automated spam submissions leave this field empty.

ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು ತಿಳಿಸುತ್ತಾರೆ. ಕೆಲವರು ಇವುಗಳನ್ನು ಸ್ಪ್ಯಾಮ್ ಮೈಲ್‍ಗಳು ಎಂದೂ ಪರಿಗಣಿಸುವರು. ಇವರ ಚಟುವಟಿಕೆಗಳು ಹೇಗಿರುತ್ತದೆ ಎಂಬುದು ಬಹಳ ಕೌತುಕವಾದ ವಿಷಯ.

ಮೊದಲಿಗೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರೂ ಪುಕ್ಕಟೆ ಊಟ ಕೊಡುವುದಿಲ್ಲ. ಎಲ್ಲರೂ ಎಲ್ಲ ಕೆಲಸವನ್ನೂ (ಸಾಮಾನ್ಯವಾಗಿ) ಮಾಡುವುದು, ಅದರಿಂದ ಪ್ರತಿಯಾಗಿ ಏನಾದರೂ ಹೆಚ್ಚಿನದಾಗಿ ಬರಬೇಕೆಂಬುದೇ. ಹತ್ತು ರೂಪಾಯಿಯನ್ನು ನಿಮಗೆ ಕೊಡುವಂತಿದ್ದರೆ ಅವರಿಗೆ ಕಡಿಮೆಯೆಂದರೆ ೧೫ - ೨೦ ರೂಪಾಯಿಗಳ ವರಮಾನ ಇದ್ದೇ ಇರಬೇಕು. ಈ ಚೈನ್ ಮೈಲ್‍ಗಳನ್ನು ಕಳುಹಿಸುವವರು, ಮೊದಲಿಗೆ ಆದಷ್ಟೂ ಹೆಚ್ಚಿನ ಜನಗಳ ಸ್ನೇಹವನ್ನು ಸಂಪಾದಿಸುತ್ತಾರೆ.

ಇಂತಹ ಕೃತ್ಯಗಳು ಈ ಹಿಂದೆ ಪ್ರಾರಂಭವಾಗಿದ್ದು ಹೀಗೆ. ಇದಕ್ಕಾಗಿ ಮೊದ ಮೊದಲಿಗೆ ಸೇರುವ ಸದಸ್ಯರುಗಳಿಗೆ ಹೆಚ್ಚಿನ ಆಮಿಷ ತೋರಿಸುವರು. ಇಂದು ೫೦೦ ರೂಪಾಯಿ ಕೊಟ್ಟು ಒಂದು ೫೦೦೦ ರೂಪಾಯಿಗಳ ಮೌಲ್ಯದ ವಸ್ತುವನ್ನು ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದೆನ್ನುವರು. ಮೊದ ಮೊದಲಿಗೆ ಬರುವವರಿಗೆ ಹೇಳಿದ ಹಾಗೆ ಕೊಡುವರು. ಹೆಚ್ಚಿನ ಜನಗಳು ಸದಸ್ಯರಾದ ಮೇಲೆ, ಅವರ ನಿಜವಾದ ಬಣ್ಣವನ್ನು ತೋರುವರು. ಹಣ ಸಂಗ್ರಹಿಸಿ ರಾತ್ರೋರಾತ್ರಿ ಮಾಯವಾಗುವರು. ಮನ್‍ಜೋಗ ಎಂಬ ಸಂಸ್ಥೆ ಇದೇ ತರಹದ ಕೃತ್ಯವನ್ನು ಕೈಗೊಂಡಿತ್ತು. ಇಂತಹ ಆಮಿಷಗಳಿಂದ ಜನಗಳು ಸ್ವಲ್ಪ ಎಚ್ಚೆತ್ತುಕೊಂಡಿದ್ದಾರೆ ಎಂಬುದು ಅವರುಗಳಿಗೆ ಮನೋಗತವಾಗಿದೆ. ಈಗೀಗ ಕಳೆದ ೪-೫ ವರ್ಷಗಳಿಂದ ಅಂತರ್ಜಾಲ ತಾಣಗಳನ್ನು ಭೇಟಿ ನೀಡುವವರು ಜಾಸ್ತಿಯಾಗಿರುವುದನ್ನು ಮನಗಂಡ ಅವರುಗಳು/ಅವರಂತಹವರು ಈ ಹಾದಿಯಲ್ಲಿಯೂ ಕೈ ಹಾಕುತ್ತಿದ್ದಾರೆ. ಅವರೇನು ಮಾಡುತ್ತಿರಬಹುದು ಎಂಬುದು ನನ್ನ ಊಹೆಯಷ್ಟೇ. ಅದು ಹೀಗಿದೆ.

ಇಂತಹ ಸರಣಿ ಅಂಚೆಗಳನ್ನು ಕಳುಹಿಸುವುದರಿಂದ ಅವರುಗಳಿಗೆ ಅಂಚೆವಿಳಾಸಗಳು ಸುಲಭದಲ್ಲಿ ದೊರೆಯುವುದು. ಹಸುರು ಸಂಪತ್ತು (ವನ್ಯರಾಶಿ) ಹೆಚ್ಚಿಸುವೆವು ನಮ್ಮೊಡನೆ ಕೈ ಜೋಡಿಸಿ ಎಂದು ಒಂದು ಬಗೆಯ ಪ್ರಚಾರ ಮಾಡಿದರೆ, ಇಂದು ಹತ್ತು ರೂಪಾಯಿ ಕಳುಹಿಸಿ ಸದಸ್ಯರಾಗಿ, ನಿಮ್ಮ ಸ್ನೇಹಿತರುಗಳನ್ನೂ ಪರಿಚಯಿಸಿ, ಒಬ್ಬರ ಪರಿಚಯಕ್ಕೆ ನಿಮಗೆ ೫ ರೂಪಾಯಿಯಂತೆ ಹಣ ಪಾವತಿ ಮಾಡುವೆವು ಎಂದೆಲ್ಲಾ ಪ್ರಚಾರ ಮಾಡುವರು. ಹತ್ತು ರೂಪಾಯಿಯೇನೂ ಬಹಳ ದೊಡ್ಡದಲ್ಲ. ಆದರೆ ನೀವು ನಿಮ್ಮ ಸ್ನೇಹಿತರನ್ನು ಕಳೆದುಕೊಳ್ಳುವ ಸಂಭವ ಹೆಚ್ಚು. ಮೊದ ಮೊದಲು ಸದಸ್ಯರುಗಳು ಆದವರಿಗೆ ನಿಯಮಿತವಾಗಿ ಹಣ ಬರುತ್ತಿರುತ್ತದೆ. ಅವರು ಇನ್ನೂ ಹೆಚ್ಚಿನ ಸದಸ್ಯರನ್ನು ಪರಿಚಯಿಸುತ್ತಿರುತ್ತಾರೆ. ಸದಸ್ಯರು ಹೆಚ್ಚಾಗುತ್ತಿದ್ದಂತೆ ಹಣ ಕೂಡುವುದು ಹೆಚ್ಚಾಗುತ್ತದೆ. ಈ ಅಂಚೆ ಎಲ್ಲಿಂದ ಬರುತ್ತದೆ, ಹೇಗೆ ಬರುತ್ತದೆ ಎಂಬುದರ ಬಗ್ಗೆ ಯಾರಿಗೂ ಚಿಂತೆ ಇರುವುದಿಲ್ಲ. ಹೆಚ್ಚಿನ ಹಣ ಕೂಡುವುದರೊಳಗೆ ಈ ತಂತ್ರವನ್ನು ಪ್ರಾರಂಭಿಸಿದವರು ನಾಪತ್ತೆಯಾಗಿರುತ್ತಾರೆ. ಕೆಲವರುಗಳಂತೂ ಮನೆ ಮಂದಿಯವರೆಲ್ಲರ ಹೆಸರಿನಲ್ಲಿ ಹಣ ಸಂದಾಯ ಮಾಡಿದ್ದರೆ, ಇನ್ನೂ ಕೆಲವರು ಬೇರೆ ಬೇರೆ ಹೆಸರುಗಳಲ್ಲಿ ತಮ್ಮದೇ ಹಣವನ್ನು ಸಂದಾಯಿಸಿರುತ್ತಾರೆ. ಹಣ ಕಳೆದುಕೊಂಡ ಮೇಲೆ, ಪೊಲೀಸರ ಮೇಲೆ, ಹಣಕಾಸು ಇಲಾಖೆಯ ಮೇಲೆ ಮತ್ತಿತರರ ಮೇಲೆ ಕೂಗಾಡುತ್ತಿರುತ್ತಾರೆ. ಇದು ಪ್ರತಿನಿತ್ಯ ಕಂಡು ಬರುವ ದೃಶ್ಯಗಳು. ಅನಾದಿಕಾಲದಿಂದ ನಡೆದು ಬಂದ ಕೃತ್ಯಗಳು. ಇದನ್ನು ತಿಳಿದೂ ತಿಳಿದೂ ನಮ್ಮ ಜನಗಳು ಏಕೆ ಬಲಿಯಾಗುತ್ತಾರೆ.

ಮೊನ್ನೆ ನಡೆದ ಒಂದು ಘಟನೆ. ಕಿರಿಯರೊಬ್ಬರು ನನ್ನ ಅಂತರ್ಜಾಲ ತಾಣಕ್ಕೆ ಭೇಟಿಯನ್ನಿತ್ತು, ಸ್ನೇಹಿತರಾಗಬಯಸಿದರು. ನಾನೂ ಸ್ನೇಹಹಸ್ತವನ್ನು ಚಾಚಿದೆ, ಸ್ವೀಕರಿಸಿದೆ. ವಿಚಾರ ವಿನಿಮಯಕ್ಕೆಂದು ನನ್ನ ತಾಣದಲ್ಲೊಂದು ಮುಕ್ತವಾದ ವೇದಿಕೆಯನ್ನು ನಿರ್ಮಿಸಿದ್ದರು (ನಾಡಿಗರು). ಅಲ್ಲಿ ಈ ಕಿರಿಯರು ಹಸುರು ಕ್ರಾಂತಿಯ ಬಗ್ಗೆ ಒಂದು ಅಡ್ವರ್ಟೈಸ್‍ಮೆಂಟ್ ಹಾಕಿ, ಎಲ್ಲರಿಗೂ ಸದಸ್ಯರಾಗಲು ಕೇಳಿಕೊಂಡಿದ್ದರು. ಸದ್ಯಕ್ಕೆ ಸ್ವಲ್ಪ ಕಾಲದಲ್ಲಿಯೇ ನಾನು ಅದನ್ನು ನೋಡಿದ್ದೆ. ಅಲ್ಲ! ಇದರ ಒಳ ಹೊರಗು ಅರಿತ ನನ್ನ ತಾಣದಲ್ಲಿಯೇ ಹೀಗೆ ಮಾಡುವುದಾ? ತಕ್ಷಣ ಆ ಅಡ್ವರ್ಟೈಸ್‍ಮೆಂಟ್ ಕಿತ್ತು ಹಾಕಿ, ಮುಕ್ತವೇದಿಕೆಯನ್ನು ಮುಚ್ಚಿದೆವು. ೨-೩ ದಿನಗಳಾದ ಮೇಲೆ ಆ ಕಿರಿಯರು, 'ನನ್ನನ್ನು ಕಂಡು ಹೆದರುತ್ತಿರುವಿರಾ? ನಾನು ನಿಮಗೇನೂ ತೊಂದರೆ ಮಾಡುವುದಿಲ್ಲ. ಕೆಲಸಕ್ಕೆ ಹೋಗದೆಯೇ ಸುಲಭದಲ್ಲಿ ಹಣ ಮಾಡುವುದು ಹೇಗೆಂದು ತಿಳಿಸುತ್ತಿರುವೆ, ಎಂದು ಹೇಳಿದರು. ಆಗ ನಾನು ಅವರಿಗೆ ಹತ್ತು ನಿಮಿಷಗಳ ಕಾಲ ಇಂತಹ ಸ್ಕೀಮ್‍ಗಳ ಬಗ್ಗೆ ನಿರರ್ಗಳವಾಗಿ ಚಾಟಿಸಿದೆ. ಅವರ ಬಾಯಿ ಮುಚ್ಚಿ ಹೋಯಿತು. ಕಡೆಗೆ, 'ಸಾರ್, ನನಗೆ ಇಷ್ಟೆಲ್ಲಾ ವಿಷಯಗಳು ತಿಳಿದಿರಲಿಲ್ಲ, ನಾನು ಕೆಲಸವಿಲ್ಲದೇ ಇಲ್ಲಿ ಕೆಲಸ ಮಾಡುತ್ತಿರುವೆ. ನನ್ನ ಮಾಲಿಕರು ಹೇಳಿದ ಹಾಗೆ ಕೇಳುತ್ತಿರುವೆನಷ್ಟೆ'. ಇನ್ಮೇಲೆ ಈ ರೀತಿ ಮಾಡೋಲ್ಲ'.

ಸುಲಭವಾಗಿ ಯಾರೂ ಏನನ್ನೂ ಕೊಡೋಲ್ಲ ಎಂಬುದನ್ನು ಮರೆಯಬೇಡಿ. ನಿಮ್ಮಿಂದ ಏನನ್ನೋ ನಿರೀಕ್ಷಿಸಿಯೇ ಇರುತ್ತಾರೆ ಎಂಬುದನ್ನು ಮರೆಯಬೇಡಿ.

ಲೇಖನ ವರ್ಗ (Category):