ಕೆಂಪಾದವೋ ಎಲ್ಲ ಕೆಂಪಾದವೋ॒॒॒॒॒॒॒॒॒॒॒.॒.

To prevent automated spam submissions leave this field empty.

ಪ್ರತಿನಿತ್ಯ ಬೆಳಿಗ್ಗೆ ಲಘುವ್ಯಾಯಾಮವೆಂದು ವಾಯು ಸಂಚಾರಕ್ಕೆ ಹೊರಟಾಗ ದಾರಿಯಲ್ಲೆಲ್ಲ ಅರಳಿದ ಗುಲ್‌ಮೊಹರ್(ಮೇಫ್ಲವರ್) ಗಮನ ಸೆಳೆಯಿತು. ದಾರಿಯುದ್ದಕ್ಕೂ ತಲೆತುಂಬ ಹೂಮುಡಿದ ಮದುಮಗಳಿಂತಿರುವ ಗುಲ್‌ಮೊಹರ್ ಯಾರನ್ನೇ ಆಗಲಿ ಗಮನ ಸೆಳೆಯದೇ ಇರದು. ಮೇ ತಿಂಗಳಲ್ಲಿ ನಿಗಿನಿಗಿಸುವ ಕೆಂಡದಂತಿರುವ ಗುಲ್‌ಮೊಹರ್ ಹೂಗಳ ಗಾಢ ಕೆಂಪು ವರ್ಣ ತಕ್ಷಣವೇ ಆಕರ್ಷಿಸುತ್ತದೆ.
ವಕ್ರ ವಿನ್ಯಾಸಗಳ ರೆಂಬೆ, ಕೊಂಬೆಗಳನ್ನು ಹೊಂದಿರುವ ಗುಲ್‌ಮೊಹರ್ ಮರದಲ್ಲಿ ಮಾರ್ಚ್ ತಿಂಗಳಿನಿಂದ ಎಲೆಗಳು ಕಡಿಮೆಯಾಗಿ ಹೂ ಅರಳಲು ಆರಂಭವಾಗುವುದು. ಮೇ ತಿಂಗಳು ಗುಲ್‌ಮೊಹರ್‌ನ ವರ್ಣ ವೈಭವದ ಪರಾಕಾಷ್ಠೆಯ ತಿಂಗಳು. ಗಾಢ ಕೆಂಪು ಬಣ್ಣವನ್ನು ಹೊಂದಿದ, ೪-೫ ದಳಗಳಿಂದ ಕೂಡಿದ ಹೂಗಳು, ಗುಚ್ಛವಾಗಿ ಕೊಂಬೆಗಳ ಮೇಲೆಲ್ಲ ಅರಳಿ ನೋಡುಗರ ನೋಟವನ್ನು ಸೆರೆಹಿಡಿಯುತ್ತವೆ. ಹೀಗಾಗಿಯೇ ಇವನ್ನು ಮೇ ಫ್ಲವರ್ ಎಂದೂ ಕರೆಯುವುದು.
ಗುಲ್‌ಮೊಹರ್‌ನ ಬೊಟಾನಿಕಲ್ ಹೆಸರು ಡೆಲೊನಿಕ್ಸ್ ರೆಜಿಯಾ, ಆಂಗ್ಲ ನಾಮಧೇಯ ಫ್ಲೆಮ್ ಬೊಯಾಂಟ್. ಜನೆವರಿ ತಿಂಗಳಿನಿಂದ ಎಲೆ ಚಿಗುರಿ ಅಚ್ಚ ಹಸಿರಾಗುವ ಗುಲ್‌ಮೊಹರ್, ಮಾರ್ಚ್ ತಿಂಗಳಿನಿಂದ ಹೂ ಅರಳಿಸುವ ಪ್ರಕ್ರಿಯೆಗೆ ತೊಡಗುತ್ತದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಗುಲ್‌ಮೊಹರ್‌ನ ಬೀಜಗಳ ಉತ್ಪಾದನಾ ತಿಂಗಳುಗಳು. ಗುಲ್‌ಮೊಹರ್‌ನ ಬೀಜಗಳನ್ನು ೨ ವರ್ಷಗಳವರೆಗೂ ಕಾಯ್ದಿಟ್ಟು, ಬಿತ್ತನೆ ಮಾಡಿ ಬೆಳೆಸಬಹುದಾಗಿದೆ. ಯಾವುದೇ ಹೆಚ್ಚಿನ ಉಪಚಾರಗಳನ್ನು ಬಯಸದ ಗುಲ್‌ಮೊಹರ್ ಗಿಡ ಸಾಮಾನ್ಯ ಉಷ್ಣಾಂಶ, ನೀರು, ಹವಾಮಾನಗಳಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.
ಸಾಮಾನ್ಯವಾಗಿ ಎಲ್ಲೆಡೆ ಬೆಳೆಯುವ ಗುಲ್‌ಮೊಹರ್‌ನ ಹೂಗಳ ಗಾಢವರ್ಣ ನಿತ್ಯ ಜೀವನದಲ್ಲಿ ಚೇತೋಹಾರಿಯೆನಿಸದೇ ಇರದು. ಆದರೆ ಇದಕ್ಕಾಗಿ ವರ್ಷದಲ್ಲಿ ಎಪ್ರೀಲ್ ಹಾಗೂ ಮೇ ತಿಂಗಳಿನವರೆಗೂ ಕಾಯಬೇಕೆನ್ನುವುದೇ ಬೇಸರದ ಸಂಗತಿಯಾಗಿದೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಿಯ ಸಿದ್ಧರಾಮ ಹಿರೇಮಠ್ ಅವರೇ,
ನಿಜಕ್ಕೂ ಮೈಸೂರಿನ ಅಂದವನ್ನು ಹೆಚ್ಚಿಸುತ್ತಿದ್ದುದು ಈ ಗುಲ್ಮೊಹರ್ ಗಿಡಗಳೇ. ಆದರೆ ಇತ್ತೀಚಿನ ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲಾ ಮರಗಿಡಗಳು ಕಣ್ಮರೆಯಾಗುತ್ತಿರುವುದರಿಂದ ಊರು ತನ್ನ ಅಂದವನ್ನು ಕಳೆದುಕೊಳ್ಳುತ್ತಿದೆಯೇನೋ ಎಂದು ಸಂಕಟವಾಗಿತ್ತಿದೆ. ಇತ್ತಿಚೆಗೆ ಹಾಸನಕ್ಕೆ ಹೋಗಿದ್ದೆ. ಅದೂ ಸಹಾ ಮರಿ ಮೈಸೂರಿನಂತೆ ಗುಲ್ಮೊಹರ್ ಗಿಡಗಳಿಂದ ರಾರಾಜಿಸುತ್ತಿತ್ತು . ಈಗ ಅವುಗಳನ್ನು ಕಾಣದೇ ಮನಸ್ಸಿಗೆ ತುಂಬಾ ಬೇಸರವಾಯಿತು. ಗುಲ್ಮೊಹರನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
ಶೈಲಾಸ್ವಾಮಿ

ಒಳ್ಳೆ ಫೋಟೋ ಹಿರೇಮಠ ಅವರೇ. ನನ್ನ ಹತ್ತಿರ ೮.೧ mega pixel ನ fuji ಡಿಜಿಟಲ್ ಕ್ಯಾಮೆರಾ ಇದೆ. ಇದರಲ್ಲಿ ಒಳ್ಳೆ ಫೋಟೋ ( ಹೆಚ್ಚು resolution ಬರುವ) ತೆಗೆಯಬಹುದೇ?

ಪ್ರತಿಕ್ರಿಯೆಗಳಿಗೆ ಧನ್ವವಾದಗಳು. ಲತೀಫ್ ಅವರೆ, ನಾನು ಫೋಟೊ ತೆಗೆದದ್ದು ನನ್ನ ಸೋನಿ ಸೈಬರ್ ಶಾಟ್ ಡಿಜಿಟಲ್ ಕ್ಯಾಮೆರಾದಿಂದ, ಅದು 5.1 ಮೆಗಾ ಪಿಕ್ಸೆಲ್ ದು. ಇನ್ನು ನಿಮ್ಮ ಹೆಚ್ಚಿನ್ ಮೆಗಾ ಪಿಕ್ಸೆಲ್ ಕ್ಯಾಮೆರಾದಲ್ಲಿ ಫೋಟೊ ಬರಲ್ವಾ? ಮುಖ್ಯವಾಗಿ ನಾವು ತೆಗೆಯಬೇಕಾದ ಚಿತ್ರದ ಲೊಕೇಶನ್ ಮುಖ್ಯ. ಹಾಗೂ ನೆರಳು, ಬೆಳಕುಗಳ ಮಾಹಿತಿ ಅವಶ್ಯ. ಮಧ್ಯಾಹ್ನಕ್ಕಿಂತ ಯಾವಾಗಲೂ ಫೋಟೊಗಳು ಬೆಳಿಗ್ಗೆ ಹಾಗೂ ಸಂಜೆ ಚೆನ್ನಾಗಿ ಬರುತ್ತವೆ. ರೆಸಲ್ಯೂಶನ್ ಸಹ ಚೆನ್ನಾಗಿರುತ್ತದೆ. ಧನ್ಯವಾದಗಳು. -ಸಿದ್ಧರಾಮ ಹಿರೇಮಠ.