ಮಾನವೀಯತೆಯ ಪ್ರತೀಕ ಮುಂಬಯಿ

To prevent automated spam submissions leave this field empty.

(ಈ ಲೇಖನವು ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ನಿನ್ನೆಯ ದಿನ ಪ್ರಕಟವಾಗಿದೆ.)
ಮೊನ್ನೆ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಈಗಾಗಲೇ ಜಗತ್ತಿಗೇ ಮಾಹಿತಿ ದೊರಕಿದೆ. ಹೆಚ್ಚಿಗೆ ಹೇಳಲು ಏನೂ ಉಳಿದಿಲ್ಲ. ಆದರೂ ನನಗೆ ತಿಳಿದ, ನಾನು ಅನುಭವಿಸಿದದ್ದನ್ನು ತಿಳಿಸ ಬಯಸುವೆ. ಮೊನ್ನೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಸುದ್ದಿ ಜಗತ್ತನ್ನೇ ತಲ್ಲಣಿಸಿದೆ. ಅಂದು ಮಂಗಳವಾರ, ಎಂದಿನಂತೆ ನಾನು ೬.೧೪ರ ಬೊರಿವಿಲಿ ಫಾಸ್ಟ್ ಲೋಕಲ್‍ನಲ್ಲಿ ಗೋರೆಗಾಂವಿಗೆ ಹೊರಟೆ. ಮುಂಬೈ ಸೆಂಟ್ರಲ್ ಸ್ಟೇಷನ್ನಿನವರೆವಿಗೆ ಗಾಡಿ ಸರಿಯಾಗಿಯೇ ಚಲಿಸಿತು. ಮಹಾಲಕ್ಷ್ಮಿ ಸ್ಟೇಷನ್ನಿನ ಕಡೆಗೆ ಹೋಗುತ್ತಿರುವಾಗ ಇದ್ದಕ್ಕಿದ್ದಂತೆಯೇ ಟ್ರೈನ್ ನಿಂತಿತು.

ಬಾಗಿಲಲ್ಲಿ ನಿಂತಿದ್ದವರು ಮುಂದಕ್ಕೆ ಬಗ್ಗಿ ನೋಡಿ, ಮುಂದೆ ಸಾಲಾಗಿ ಟ್ರೈನ್‍ಗಳು ನಿಂತಿವೆ, ಸದ್ಯಕ್ಕೆ ಮುಂದೆ ಹೋಗಲಾಗುವುದಿಲ್ಲ ಎಂದು ಗಾಡಿಯಿಂದ ಹೊರಕ್ಕೆ ಜಿಗಿಯುತ್ತಿದ್ದರು. ಹೇಗಿದ್ದರೂ ಗಾಡಿ ಮುಂದೆ ಹೋಗಲೇಬೇಕು, ಸ್ವಲ್ಪ ತಡವಾಗಿಯಾದರೂ ಮನೆ ಸೇರುವುದು ನಿಶ್ಚಿತ ಎಂದು ಅಲ್ಲಿಯೇ ಕುಳಿತಿದ್ದೆ. ಅರ್ಧ ಘಂಟೆಯಾದರೂ ಗಾಡಿಗಳು ಅಲ್ಲಾಡಲಿಲ್ಲ. ಮುಂದಿದ್ದ ಗಾಡಿಗಳು ಅಲ್ಲಿಯೇ ನಿಂತಿದ್ದವು. ಹಿಂದಿನ ಗಾಡಿಗಳ ಜನಗಳೂ ಇಳಿದು ಹಳಿಗಳ ಮೇಲೆ ನಡೆದು ಮುನ್ನಡೆಯುತ್ತಿದ್ದರು. ನನ್ನ ಅಕ್ಕ ಪಕ್ಕ ಕುಳಿತವರು ತಮ್ಮ ತಮ್ಮ ಮನೆಗಳಿಗೆ, ಸ್ನೇಹಿತರುಗಳಿಗೆ ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಟೆಲಿಫೋನ್ ಮತ್ತು ಮೊಬೈಲ್‍ಗಳೆಲ್ಲವೂ ಸ್ತಬ್ಧವಾಗಿದ್ದುವು. ಯಾರೋ ಒಬ್ಬರಿಗೆ ಮೊಬೈಲ್ ಮೂಲಕ ಒಂದು ಸಂದೇಶ ಬಂದಿತಂತೆ. ಅವರು ತಿಳಿಸಿದಂತೆ ಖಾರ್ ರಸ್ತೆ ಸ್ಟೇಷನ್ನಿನಲ್ಲಿ ಬಾಂಬ್ ಸ್ಫೋಟಗೊಂಡಿರುವುದರಿಂದ ಲೋಕಲ್ ಟ್ರೈನ್ ಸೇವೆ ನಿಲ್ಲಿಸಿದ್ದಾರೆ ಎಂದು ತಿಳಿಯಿತು. ಅಷ್ಟು ಹೊತ್ತಿಗೆ ಟ್ರೈನ್ ಒಳಗಿರುವ ಧ್ವನಿವರ್ಧಕದ ಮೂಲಕ ಫೋಷಣೆ ಆಯಿತು. ಓವರ್‌ಹೆಡ್ ತಂತಿಗಳಲ್ಲಿ ವಿದ್ಯುತ್ ಸರಬರಾಜು ಇಲ್ಲದ ಕಾರಣ ಅನಿರ್ದಿಷ್ಟ ಕಾಲದವರೆವಿಗೆ ಗಾಡಿಗಳು ಮುಂದೆ ಹೋಗುವುದಿಲ್ಲ ಎಂದು ತಿಳಿಸುತ್ತಿದ್ದರು. ಇನ್ನು ಕುಳಿತು ಪ್ರಯೋಜನವಿಲ್ಲವೆಂದು ನಾನು ಮಹಾಲಕ್ಷ್ಮಿ ಸ್ಟೇಷನ್ನಿನ ಕಡೆಗೆ ನಡೆದೆ. ಅಲ್ಲಿ ಟ್ಯಾಕ್ಸಿಯ ಮೂಲಕ ಮನೆಗೆ ಹೋಗಲು ಪ್ರಯತ್ನಿಸಿದೆ. ಯಾವುದೇ ಟ್ಯಾಕ್ಸಿಗಳು ಖಾಲಿ ಇರಲಿಲ್ಲ. ರಸ್ತೆಯಲ್ಲಿ ಎಲ್ಲೆಲ್ಲಿ ನೋಡಿದರೂ ವಾಹನಗಳ ಟ್ರಾಫಿಕ್ ಜಾಮ್ ಆಗಿದ್ದಿತು. ಕಳೆದ ವರ್ಷದ ಜುಲೈ ೨೬ರ ಸಮಯದ ಮಳೆಯಲ್ಲಿ ಇದೇ ತರಹದ ಪರಿಸ್ಥಿತಿಯನ್ನು ಎದುರಿಸಿದ್ದ ನಾನು, ಅಂದು ನಡಿಗೆಯಲ್ಲಿ ಮನೆಯನ್ನು ತಲುಪಿದ್ದೆ. ಅದೇ ತರಹ ಈ ಸಲವೂ ಹಳಿಯ ಮೇಲೆ ನಡೆದು ಮನೆಯ ಕಡೆಗೆ ಹೊರಟೆ. ಹಾದಿಯುದ್ದಕ್ಕೂ ಹಳಿಗಳ ಮೇಲೆ ಲೋಕಲ್ ಟ್ರೈನ್‍ಗಳು ನಿಂತಿದ್ದುವು. ಮೋಟರ್‌ಮ್ಯಾನ್ ಮತ್ತು ಗಾರ್ಡ್‍ಗಳೂ ಮಾತ್ರ ಗಾಡಿಗಳಲ್ಲೇ ಕುಳಿತಿದ್ದರು. ಅವರುಗಳಿಗೂ ಏನಾಗಿದೆಯೆಂದು ತಿಳಿಯದಾಗಿತ್ತು. ಹಾಗೆಯೇ ಮುಂದೆ ದಾದರ ಸ್ಟೇಷನ್ನಿಗೆ ತಲುಪುವ ವೇಳೆಗಾಗಲೇ ಸಮಯ ೯ ಆಗುತ್ತಿತ್ತು. ದಾದರ ಸ್ಟೇಷನ್ನಿನಲ್ಲಿ ದೂರದೂರುಗಳಿಂದ ಬರುವ ಜನಗಳ ಸಾಗಾಣಿಕೆಗೆ ಅನುಕೂಲವಾಗಲೆಂದು ಪೊಲೀಸರು ಟ್ಯಾಕ್ಸಿಯವರ ಸೇವೆಯನ್ನು ನಿರ್ವಸುವರು. ಅಲ್ಲಿಯಾದರೂ ಟ್ಯಾಕ್ಸಿ ದೊರಕುವುದೆಂದು ಸ್ಟೇಷನ್ನಿನ ಹೊರಗೆ ಬಂದೆನು. ಅಲ್ಲಿ ಒಂದು ಟ್ಯಾಕ್ಸಿಯಲ್ಲಿ ಮೂವರು ಮಹಿಳೆಯರಿದ್ದು ಇನ್ನೊಬ್ಬರು ಗಂಡಸರು ಯಾರಾದರೂ ಅಂಧೇರಿ ಕಡೆಗೆ ಹೋಗುವವರಿದ್ದರೆ ಬನ್ನಿರೆಂದು ಕರೆದರು. ನಾನು ಆ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದೆ. ಟ್ಯಾಕ್ಸಿಯವನು ಮೀಟರು ಸರಿಯಾಗಿ ಹಾಕಿಲ್ಲವೆಂದು ಆ ಮಹಿಳೆಯರು ಗಲಾಟೆ ಮಾಡುತ್ತಿದ್ದರೆ, ೨೦-೨೨ ವರ್ಷದ ಯುವ ಟ್ಯಾಕ್ಸಿ ಚಾಲಕನು, ತಾನು ಬರಲು ತಯಾರಿರಲಿಲ್ಲ, ಪೊಲೀಸಿನವನ ತಗಾದೆಯಿಂದಾಗಿ ಬರುತ್ತಿದ್ದೇನೆ, ಎಲ್ಲಿಯೋ ಗಲಾಟೆ ಇದೆಯಂತೆ, ನನಗ್ಯಾಕೆ ತೊಂದರೆ ಆಗಬೇಕು ಎನ್ನುತ್ತಿದ್ದನು. ಇವರಿಬ್ಬರಿಗೂ ವಿಷಯದ ಅರಿವಾಗಿಲ್ಲವೆಂದು ಅರಿತ ನಾನು, ಮಾತುಂಗ, ಖಾರ್ ಸ್ಟೇಷನ್ನುಗಳಲ್ಲಿ ಲೋಕಲ್ ಟ್ರೈನ್‍ನಲ್ಲಿ ಆಗಿರುವ ಬಾಂಬ್ ಸ್ಫೋಟದ ಬಗ್ಗೆ ಹೇಳಿದಾಗ ಅವರುಗಳು ಸ್ತಂಭೀಭೂತರಾದರು. ಆ ಹೆಣ್ಣುಮಕ್ಕಳನ್ನುದ್ದೇಶಿಸಿ, ನಮಗೆ ದೇವರು ಹೊಟ್ಟೆ ತುಂಬಾ ನೀಡಿದ್ದಾನೆ, ಈತನಿಗೆ ಇದೇ ಅನ್ನದಾತ, ಸ್ವಲ್ಪ ಹೆಚ್ಚಿನ ಹಣ ಮಾಡಿಕೊಳ್ಳುವಂತಿದ್ದರೆ ಮಾಡಿಕೊಳ್ಳಲಿ, ನಾವುಗಳು ಸುರಕ್ಷಿತವಾಗಿ ಮನೆ ಸೇರಿದರಾಯಿತಲ್ಲವೇ ಎಂದಾಗ ಅವರುಗಳು ಸುಮ್ಮನಾದರು. ನಂತರ ಆ ಟ್ಯಾಕ್ಸಿ ಚಾಲಕನನ್ನುದ್ದೇಶಿಸಿ, ಜನಗಳಿಗೆ ಸಹಾಯಿಸುವಂತಿದ್ದರೆ ಇದೇ ಸಕಾಲ, ಇದರಿಂದ ನಾಲ್ಕು ಜನಗಳು ನಿನ್ನ ಸ್ಮರಿಸುವಂತಾಗಬೇಕು, ನೀನಿನ್ನೂ ಚಿಕ್ಕವನು ತನು ಮನಗಳು ಗಟ್ಟಿಯಾಗಿವೆ, ದುಡಿಯಲು ಇನ್ನೂ ದೀರ್ಘ ಕಾಲವಿದೆ ಎನ್ನಲು ಅವನೂ ಸುಮ್ಮನಾದನು. ಈ ಮಧ್ಯೆ ಟ್ಯಾಕ್ಸಿ ಧಾರಾವಿ ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ವಾಹನಗಳು ವಿಪರೀತವಾಗಿ ಒಂದಕ್ಕೊಂದು ಅಂಟಿದಂತೆ ಬಂಪರ್ ಟು ಬಂಪರ್ ಚಲಿಸುತ್ತಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಯುವಕರು, ಮಕ್ಕಳು, ಮುದುಕರು ಹೋಗಿ ಬರುವವರೆಲ್ಲರಿಗೂ ಚಹಾ, ಬಿಸ್ಕತ್ತುಗಳು, ಬಾಳೆಹಣ್ಣು, ವಡಾ ಪಾವ್, ಕುಡಿಯುವ ನೀರು ವಿತರಿಸುತ್ತಿದ್ದರು. ಒಮ್ಮೆ ಕೊಟ್ಟ ನಂತರ ಮತ್ತೆ ಮತ್ತೆ ಬೇಕಾ ಎಂದು ಉಪಚರಿಸುತ್ತಿದ್ದರು. ಇಂತಹ ದೃಷ್ಯವನ್ನು ಕಳೆದ ವರ್ಷ ನಾನು ನೋಡಿದ್ದೆ. ನಾನು ಕಂಡಂತೆ, ಮುಂಬಯಿ ಒಂದೇ ಕಡೆ ಜನತೆಯು ಹೀಗೆ ತಮ್ಮ ಮಾನವತೆಯನ್ನು ಪ್ರದರ್ಷಿಸುತ್ತಿರುವುದು. ಟ್ರಾಫಿಕ್ ಜಾಮ್ ಇರುವೆಡೆಗಳಲ್ಲಿ ನಾಗರಿಕರೇ ನಿಂತು ವಾಹನಗಳ ಓಡಾಟವನ್ನು ನಿಯಂತ್ರಿಸುತ್ತಿದ್ದರು. ಪೊಲೀಸರೊಂದಿಗೆ ಸಹಕರಿಸುತ್ತಿದ್ದರು. ನಾವು ಪ್ರಯಾಣಿಸುತ್ತಿದ್ದ ಟ್ಯಾಕ್ಸಿಯು, ವೆಸ್ಟರ್ನ್ ಎಕ್ಸ್‍ಪ್ರೆಸ್ ಹೈವೇಯಲ್ಲಿ ಚಲಿಸುತ್ತಿರುವಾಗ, ಆಂಬುಲೆನ್ಸ್‍ಗಳ ನಿರಂತರ ಸೈರನ್ ಸದ್ದು ಕೇಳಿ ಬರುತ್ತಿತ್ತು. ಅವುಗಳಲ್ಲಿ ಗಾಯಾಳುಗಳನ್ನು ಮತ್ತು ಚಿಂತಾಜನಕ ಸ್ಥಿತಿಯಲ್ಲಿರುವವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸುತ್ತಿದ್ದರು. ಆ ವಾಹನಗಳಿಗೆ ಮಿಕ್ಕೆಲ್ಲ ವಾಹನಗಳು ಆದ್ಯತೆ ಕೊಟ್ಟು ಹಾದಿ ಬಿಟ್ಟುಕೊಡುತ್ತಿದ್ದವು. ಈ ಮಧ್ಯೆ ಮುಖಂಡರುಗಳನ್ನು ಹೊತ್ತೊಯ್ದ ವಾಹನಗಳೂ ಕೆಂಪು ದೀಪ ಹಾಕಿಕೊಂಡು ಬರುತ್ತಿದ್ದವು. ಅವೂಗಳಿಗೆ ಆದ್ಯತೆಯ ಮೇರೆಗೆ ಹೋಗಲು ಪೊಲೀಸರು ಹಾದಿ ಮಾಡಿಕೊಡುವಾಗ, ಅಕ್ಕ ಪಕ್ಕ ಇರುವ ವಾಹನಗಳೂ ಮಧ್ಯೆ ತೂರುತ್ತಿದ್ದವು. ಇವೆಲ್ಲವನ್ನೂ ನೋಡುತ್ತಾ ಅಂಧೇರಿ ತಲುಪುವ ವೇಳೆಗೆ ರಾತ್ರಿಯ ೧೦.೩೦ ಆಗಿದ್ದಿತು. ಆ ಹೆಣ್ಣುಮಕ್ಕಳು ಓಶಿವರಾ ಕಡೆಗೆ ಹೋಗಬೇಕಿದ್ದುದರಿಂದ ನಾನು ಹಾದಿಯಲ್ಲಿಯೇ ಇಳಿದೆ. ಚಾಲಕನಿಗೆ ೧೦೦ ರೂಪಾಯಿ ಕೊಟ್ಟಾಗ, ಆತ ೪೧ ರುಪಾಯಿ ಚಿಲ್ಲರೆ ಕೊಡಲು ಬಂದನು. ಯಾಕೆ ಎಂದು ಕೇಳಲು, ಸಾರ್, ಮೀಟರ್ ಪ್ರಕಾರ ನಿಮ್ಮ ಪಾಲಿನ ಹಣ ಮಾತ್ರ ತೆಗೆದುಕೊಳ್ಳುವೆ ಎಂದು. ಅದಕ್ಕೆ ನಾನು, ಇರಲಿ ಪರವಾಗಿಲ್ಲ, ಇಂದು ದೇವರಂತೆ ಬಂದು ನನ್ನನ್ನು ಮನೆಗೆ ಹೋಗಲು ಸಹಾಯಿಸುತ್ತಿರುವೆ, ಇಟ್ಟುಕೋ ಎಂದು ಮುಂದೆ ನಡೆದೆ. ಆ ಸಮಯದಲ್ಲೂ ಸಿಟಿ ಬಸ್ಸುಗಳು ವಿಪರೀತ ತುಂಬಿದ್ದವು. ಒಂದು ಬಸ್ಸಿನಲ್ಲೂ ಕಾಲಿಡಲು ಸ್ಥಳವಿರಲಿಲ್ಲ. ಅಂಧೇರಿಯಿಂದ ಗೋರೆಗಾಂವಿಗೆ ಆಟೋ ಹಿಡಿಯಲು ಪ್ರಯತ್ನಿಸುತ್ತಿರುವಾಗ, ಒಂದು ಕಾರು ಹತ್ತಿರ ಬಂದಿತು, ಅದರೊಳಗೆ ಕುಳಿತವರೊಬ್ಬರು, ನಾನು ಬೊರಿವಿಲಿ ಕಡೆಗೆ ಹೋಗುತ್ತಿರುವೆ, ನೀವು ಆ ಹಾದಿಯಲ್ಲಿ ಪ್ರಯಾಣಿಸುವಂತಿದ್ದರೆ ತಮ್ಮ ಜೊತೆಗೆ ಬರಬಹುದೆಂದರು. ಅದರಲ್ಲಿ ಪ್ರಯಾಣಿಸುವಾಗ ತಿಳಿದ ವಿಷಯವೆಂದರೆ, ಕಂಪನಿಗಳ ಕಾರುಗಳು ತಮ್ಮ ಸಿಬ್ಬಂದಿಯನ್ನು ಮನೆ ತಲುಪಿಸಲು ಕಾರುಗಳನ್ನು ವ್ಯವಸ್ಥಿತಗೊಳಿಸಿದ್ದವು. ಮಧ್ಯೆ ಯಾರೇ ಬಂದರೂ ಅವರನ್ನು ಕರೆದೊಯ್ಯಬೇಕೆಂದು ತಿಳಿಸಿದ್ದರಂತೆ. ಮಾನವೀಯತೆಯ ಪ್ರದರ್ಶನಕ್ಕೆ ಮಿತಿಯುಂಟೆ. ಆ ಕ್ಷನದಲ್ಲಿ ನನ್ನ ಕಣ್ಣುಗಳು ತೇವವಾಯಿತೆಂಬುದು ಉತ್ಪ್ರೇಕ್ಷೆಯ ಮಾತಲ್ಲ. ಗೋರೆಗಾಂವಿನಲ್ಲಿ ನನ್ನ ಇಳಿಸಿದ ಕಾರು ಮುನ್ನಡೆಯಿತು. ಕಡೆಗೆ ನಾನು ಕ್ವಾರ್ಟರ್ಸ್ ತಲುಪುವ ವೇಳೆಗಾಗಲೇ ಸಮಯ ಮಧ್ಯರಾತ್ರಿಯ ೧೨ ದಾಟಿತ್ತು. ನಮ್ಮ ಕ್ವಾರ್ಟರ್ಸಿನಲ್ಲಿ ಬೇಗನೆ ಮನೆಗೆ ಬಂದವರೆಲ್ಲರೂ ಗೇಟಿನ ಬಳಿ ನಿಂತಿದ್ದರು. ಎಲ್ಲರ ಮುಖಗಳಲ್ಲು ಚಿಂತೆ ಎದ್ದು ಕಾಣುತ್ತಿತ್ತು. ಯಾರಾದರೂ ಮನೆಗೆ ಬಂದರೆ ಅವರ ಮುಖದಲ್ಲಿ ಒಬ್ಬರು ಬಂದರು, ಇನ್ನೊಬ್ಬರು ಬಂದರು ಎಂದು ಸಂತೋಶ ವ್ಯಕ್ತವಾಗುತ್ತಿತ್ತು. ನಾನು ಮನೆಯೊಳಗೆ ಕಾಲಿಡುತ್ತಿದ್ದಂತೆ ಪತ್ನಿ ಹೇಳಿದಳು, ಬಂಧು ಮಿತ್ರರುಗಳಿಂದ ಒಂದೇ ಸಮನೆ ದೂರವಾಣಿಯ ಕರೆಗಳು ಬರುತ್ತಿದೆ ಎಂದು. ರಾತ್ರಿ ೧೧ರ ನಂತರ ದೂರವಾಣಿ ಮತ್ತು ಮೊಬೈಲ್‍ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದವು. ಈ ಮಧ್ಯೆ ಅಂಧೇರಿಯಲ್ಲಿರುವ ಕಾಲೇಜಿಗೆ ಹೋಗಿದ್ದ ನನ್ನ ಮಗಳನ್ನು ಈ ಕಡೆಗೆ ಬರಗೊಡದೇ, ಅಂಧೇರಿಯಲ್ಲೇ ಇದ್ದ ಅವಳ ಸ್ನೇಹಿತೆ, ತನ್ನ ಮನೆಗೆ ಕರೆದೊಯ್ದಿದ್ದಳು. ನಾನು ಮನೆ ಸೇರುತ್ತಿದ್ದಂತೆ ನನ್ನ ಕುಟುಂಬಕ್ಕೆ ನೆಮ್ಮದಿಯುಂಟಾಯಿತು. ಆಗ ಟಿವಿ ವಾರ್ತೆಯ ಪ್ರಕಾರ ೧೧ ನಿಮಿಷಗಳಲ್ಲಿ ೭ ಸ್ಥಳಗಳಲ್ಲಿ ಬಾಂಬುಗಳು ಸ್ಫೋಟಗೊಂಡಿರುವ ವಿಷಯ ನನಗೆ ತಿಳಿಯಿತು. ಸ್ಫೋಟಗೊಂಡ ಒಂದು ಲೋಕಲ್ಲಿನಲ್ಲಿ ನನ್ನ ಸ್ನೇಹಿತನೊಬ್ಬನು ಪ್ರಯಾಣಿಸುತ್ತಿದ್ದನಂತೆ. ಅವನಿದ್ದ ಪಕ್ಕದ ಬೋಗಿಯಲ್ಲಿ ಸ್ಫೋಟವಾಗಿದ್ದು, ಹೆಣಗಳ ರಾಶಿಯನ್ನು ಅವನು ನೋಡಿದ್ದನು. ನಂತರ ತಿಳಿದು ಬಂದ ಮಾಹಿತಿಯಂತೆ ಅದೇ ಬೋಗಿಯಲ್ಲಿದ್ದ ನನ್ನ ಇನ್ನೊಬ್ಬ ಸ್ನೇಹಿತನಿಗೆ ತಲೆಗೆ ಹೆಚ್ಚಿನ ಪೆಟ್ಟು ಬಿದ್ದು, ಕೈ ಕೂಡಾ ಮುರಿದಿದೆ. ಅಷ್ಟಲ್ಲದೇ ಆ ಸ್ಫೋಟದ ಶಬ್ದದಿಂದಾಗಿ ಖಾಯಂ ಕಿವುಡನಾಗಿ ಉಳಿಯುವ ಸಾಧ್ಯತೆಗಳಿವೆ. ಹೀಗೇ ಇನ್ನೊಬ್ಬ ಸಹ ಅಧಿಕಾರಿಯೂ ಇನ್ನೊಂದು ಗಾಡಿಯಲ್ಲಿ (೫.೫೭ ವಿರಾರ ಲೋಕಲ್) ಸಂಚರಿಸುತ್ತಿದ್ದು ಅವರು ಇಂದು ತಮ್ಮ ಅನುಭವವನ್ನು ಹೇಳಿಕೊಂಡು ಅತ್ತರು. ಅವರಿದ್ದ ಬೋಗಿಯ ಇನ್ನೊಂದು ಭಾಗದಲ್ಲಿ ಸ್ಫೋಟಗೊಂಡಿತ್ತು. ಅಲ್ಲಿದ್ದವರೊಬ್ಬರು ಮೊಬೈಲ್ ಮೂಲಕ ಹಾಡು ಕೇಳುತ್ತಿದ್ದರಂತೆ. ಅವರಿಗೆ ಸ್ಫೋಟದ ಅರಿವಾಗಿರಲಿಲ್ಲ. ಆದರೆ ಪಕ್ಕದಲ್ಲಿದ್ದ ಕಿಟಕಿ ಬೀಳುತ್ತಿರುವಂತೆ ತೋರಿದಾಗ ಅದನ್ನು ಹಿಡಿಯಲು ಹೋಗಿದ್ದಾರೆ. ಅದೇ ವೇಳೆಗೆ ಕೈ ಹಿಡಿತಕ್ಕೆಂದು ಮೇಲೆ ಇರುವ ಸರಳು ಮೇಲೆ ಬಿದ್ದು ಪಕ್ಕದ ಒಬ್ಬರು ಅನಾಮತ್ತಾಗಿ ಬಿದ್ದರಂತೆ. ಏನಾಗುತ್ತಿದೆಯೆಂದು ಇವರಿಗೆ ತಿಳಿಯುವಷ್ಟರಲ್ಲಿ ಅವರ ಕೈ ಮೇಲೆ ಕಿಟಕಿ ಬಿದ್ದು ಕೈ ಮುರಿದಿದೆ. ನನ್ನ ಸ್ನೇಹಿತರು ಇಶ್ಟೆಲ್ಲವನ್ನೂ ಒಂದೇ ಕ್ಷಣದಲ್ಲಿ ಆದದ್ದನ್ನು ಕಂಡುದಲ್ಲದೇ ತಮ್ಮ ಸುತ್ತಲೂ ಹೆಣಗಳ ರಾಶಿಯನ್ನು ಕಂಡು ದಿಗ್ಭ್ರಮಿತರಾಗಿದ್ದಾರೆ. ಈಗಲೂ ಅವರ ಬಾಯಿಂದ ಸರಿಯಾಗಿ ಮಾತುಗಳೇ ಹೊರಡುತ್ತಿಲ್ಲ. ಇನ್ನೊಬ್ಬ ಸ್ನೇಹಿತ ಸ್ಫೋಟದ ಬಳಿಕ ಗಾಡಿಯಿಂದ ಹಾರಿ ಸ್ಫೋಟಿಸಿದ ಬೋಗಿಯ ಬಳಿ ಬರಲು ತನ್ನ ಪಕ್ಕದಲ್ಲಿರುವ ಒಂದು ದೇಹ ಅಲುಗಾಡುತ್ತಿದ್ದು ಅದರ ಕಣ್ಣಿನ ಗುಡ್ಡೆಗಳು ಹೊರ ಬಂದಿರುವುದನ್ನು ಕಾಂಡನಂತೆ. ಎಂಥ ಭೀಕರ ದೃಷ್ಯ. ಇದನ್ನು ನೋಡುವುದಿರಲಿ, ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ಗಾಯಾಳುಗಳನ್ನು ಶುಶ್ರೂಷೆ ಮಾಡುವ ಸಮಯದಲ್ಲಿ ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿತ್ತು. ಅದಕ್ಕಾಗಿ ರಕ್ತದಾನವನ್ನು ಮಾಡಿರೆಂದು ಕೇಳಿಕೊಂಡಿದ್ದರು. ೩-೪ ಘಂಟೆಗಳ ಅಂತರದಲ್ಲಿ ಮತ್ತೆ ಬಂದ ವರದಿಯ ಪ್ರಕಾರ, ನಿರೀಕ್ಷೆಗೂ ಮೀರಿದಷ್ಟು ರಕ್ತವನ್ನು ಸಂಗ್ರಹಿಸಿಯಾಗಿದೆ, ಇನ್ನು ಸದ್ಯಕ್ಕೆ ಯಾರೂ ರಕ್ತವನ್ನು ಕೊಡುವುದು ಬೇಡವೆಂದು ತಿಳಿಸಿದ್ದರು. ಚಲನಚಿತ್ರೋದ್ಯಮದಲ್ಲಿ ಹೆಸರು ಮಾಡಿರುವ ರಾಹುಲ್ ಬೋಸ್, ಶಬಾನಾ ಅಝ್ಮಿ, ಜಾವೇದ್ ಅಖ್ತರ್ ಮುಂತಾದವರೂ ಜನಗಳಿಗೆ ಸಹಾಯ ಹಸ್ತ ನೀಡುವಲ್ಲಿ ಬೀದಿಗಿಳಿದಿದ್ದರೆಂದರೆ ಈ ನಗರವನ್ನು ಒಂದೇ ಕುಟುಂಬವೆನ್ನಬಹುದು. ಸ್ಫೋಟದ ಕಾರಣದಿಂದ, ಓವರ್‌ಹೆಡ್ ತಂತಿಗಳು ತುಂಡಾಗಿದ್ದುವು, ಮತ್ತು ಕೆಲ ಕಡೆಗಳಲ್ಲಿ ಹಳಿಗಳಿಗೆ ಜಖಂ ಆಗಿದ್ದಿತು. ರಾತ್ರಿಯೆಲ್ಲ ಕೆಲಸ ಮಾಡಿ ರೈಲ್ವೇ ಸಿಬ್ಬಂದಿಯವರು ಮೇಲಿನ ತಂತಿಗಳನ್ನು ಸರಿಪಡಿಸಿ, ಹಳಿಗಳನ್ನು ಸುಸ್ಥಿತಿಯಲ್ಲಿಟ್ಟು, ಜಖಂ‍ಗೊಂಡ ಗಾಡಿಗಳನ್ನು ಯಾರ್ಡ್‍ಗಳ ಕಡೆಗೆ ತಳ್ಳುವ ಕೆಲಸವನ್ನು ಮಾಡಿದ್ದರು. ಮಾರನೆಯ ದಿನ ಬೆಳಗ್ಗೆ ೬ ಘಂಟೆಗೆ ಸ್ವಲ್ಪ ಮಟ್ಟಿಗೆ ರೈಲ್ವೇ ಸೇವೆಯು ಪುನರಾರಂಭಗೊಂಡಿತ್ತು. ಸುಸ್ತಾದ ಕಾರಣ ನಾನು ಬ್ಯಾಂಕಿಗೆ ಹೋಗಲಿಲ್ಲವಾದರೂ, ಕಛೇರಿಗಳು, ಶಾಲಾ ಕಾಲೇಜುಗಳು ತಮ್ಮ ನಿತ್ಯದ ಕೆಲಸವನ್ನು ನಿರ್ವಹಿಸಿದ್ದವು. ಇಂತಹ ಪರಿಸ್ಥಿತಿಯನ್ನು ಮತ್ತೆಲ್ಲಿಯಾದರೂ ನೋಡಲು ಸಿಗುವುದೇ? ದಿನಕ್ಕೆ ೩೦ ರಿಂದ ೩೫ ಲಕ್ಷ ಜನಗಳನ್ನು ನಗರದ ಸುತ್ತಲೂ ಎಲ್ಲ ಕಡೆಗೆ ಸಾಗಿಸುವುದು ಜೀವ ನಾಡಿಯಲ್ಲದೇ ಮತ್ತಿನ್ನೇನು. ಘಾಸಿಯಾದರೂ ಒಮ್ಮೆ ತನ್ನ ಗಾಯವನ್ನು ನೆಕ್ಕಿ ಮರಳಿ ಜೀವನದ ಕಡೆಗೆ ಗಮನ ಕೊಡುವ ಮತ್ತೊಮ್ಮೆ ಮುಂಬಯಿ ಮಿಕ್ಕೆಲ್ಲ ನಗರಗಳಿಗಿಂತ ವಿಭಿನ್ನ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿತು. ಇಲ್ಲಿ ಸಲ್ಲುವವರು ಎಲ್ಲಿಯೂ ಸಲ್ಲುವರು ಎಂಬ ಮಾತು ಮತ್ತೆ ಸಾಬೀತಾಯಿತಲ್ಲವೇ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶ್ರೀನಿವಾಸರೆಗೆ ನಮಸ್ಕಾರಗಳು.

ನಿಮ್ಮ ಲೇಖನಿಯಿಂದ ಮೂಡಿ ಬಂದ ಧ್ವನಿ, ಮುಂಬೈ ಸರಣಿ ಬಾಂಬಿನ ಕಥೆ/ವ್ಯಥೆ, ನನಗೆ ಇನ್ನೂ ಕೇಳಿಸುತ್ತಿದೆ ! ಏಕೆಂದರೆ ಅನೇಕ ಬಾರಿ, ಅಂತಹ ಸನ್ನಿವೇಷಗಳು ನಮ್ಮನ್ನೂ ತಟ್ಟಿವೆ. ಮಾನವೀಯತೆಯ ಹೆಸರಿನಲ್ಲಿ, ಬಿ.ಎಮ್.ಸಿ 'ಆಲಸಿ' ಯಾಗದಿರಲಿ ಎಂದು ಹಾರೈಸೋಣ ! ಈಗ ತಾನೇ 'ಬರ್ಖ ದತ್ 'ಎನ್.ಡೀ.ಟಿ.ವಿ ಯಲ್ಲಿ, ನಡೆಸಿಕೊಟ್ಟ, ಇದೇ ಶೀರ್ಷಿಕೆಯಮೇಲೆ ಒಂದು ಪ್ರಶ್ನೋತ್ತರಗಳ ಕಾರ್ಯಕ್ರಮ, ಪ್ರಸಾರ ಮಾಡಿತು.
ಈ ಪಿಡುಗಿಗೆ ಕೊನೆ ಎಲ್ಲಿ ?
ಇಂಡೊನೇಶಿಯದಲ್ಲಿ ಮತ್ತೆ 'ಸೋನಾಮಿ' ಬಂದಿದೆಯಂತೆ ! ಇನ್ನು ನಮ್ಮ ದೇಶಕ್ಕೆ ಅದರ ಪರಿಣಾಮವೇನೋ, ದೇವರೇಬಲ್ಲ.

ಮುಂಬೈ ಜನರ ಧೈರ್ಯ ಮೆಚ್ಚುವ ವಿಷಯವೇ. ಈ ಮೆಚ್ಚುಗೆಯ ಮಹಾಪೂರದಲ್ಲಿ ಅವರ ಬದುಕನ್ನು ಮತ್ತಷ್ಟು ಅಪಾಯಕ್ಕೆ ಕೆಡವುತ್ತಿರುವ ಆಡಳಿತದ ದೌರ್ಬಲ್ಯಗಳ ಬಗ್ಗೆಯೂ ಚರ್ಚೆಯಾಗಬೇಕಿದೆ. ಸ್ಫೋಟವೊಂದು ನಡೆದ ಮರುದಿನವೇ ನಗರ ಮೊದಲ ಸ್ಥಿತಿಗೆ ಬರುತ್ತಿದೆ ಎಂದರೆ ಈ ನಗರ ಸಂವೇದನೆಗಳನ್ನು ಕಳೆದುಕೊಳ್ಳುವಷ್ಟು ಸ್ಫೋಟಗಳು ಸಂಭವಿಸಿವೆ ಎಂದೂ ಅರ್ಥೈಸಬಹುದಲ್ಲವೇ. ಅಂದರೆ ಮುಂಬೈನ ಜನತೆಗೆ ಇರುವ ಧೈರ್ಯದ ದುರ್ಬಳಕೆಯಲ್ಲಿ ಸರಕಾರ ತೊಡಗಿದೆ. ಅಥವಾ ಸರಕಾರ ತನ್ನ ಅಸಮರ್ಥತೆಯನ್ನು ಮುಂಬೈನ ಸಾಮಾನ್ಯ ಜನರ ಧೈರ್ಯದ ಮರೆಯಲ್ಲಿ ಬಚ್ಚಿಡುತ್ತಿದೆ.

ಕೊನೆಯದಾಗಿ ಮತ್ತೊಂದು ವಿಷಯ. ಪತ್ರಿಕೆಗಳ ಡೆಡ್ ಲೈನ್ ತವಕಕ್ಕೆ ಸ್ಪಂದಿಸುವ ಲೇಖಕರು ಬಹಳ ಕಡಿಮೆ. ಆದರೆ ತ.ವಿ.ಶ್ರೀ. ಅವರು ನನ್ನ ಅಪರಾತ್ರಿಯ ದೂರವಾಣಿ ಕರೆಗೆ ಸ್ಪಂದಿಸಿ ಈ ಲೇಖನವನ್ನು ಉದಯವಾಣಿಗಾಗಿ ಬರೆದು ಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳು.

-ಇಸ್ಮಾಯಿಲ್.