ಝೆನ್ ೧೦ : ಇನ್ನೂ ಮೂರು ದಿನ

To prevent automated spam submissions leave this field empty.
ಹಕು-ಇನ್ನ ಶಿಷ್ಯ ಸುಯಿಒ ಒಳ್ಳೆಯ ಗುರುವೆಂದು ಖ್ಯಾತನಾಗಿದ್ದ. ಬೇಸಗೆಯಲ್ಲಿ ಗುರು ಶಿಷ್ಯರೆಲ್ಲ ಏಕಾಂತ ಧ್ಯಾನವನ್ನು ಮಾಡುವ ಕಾಲದಲ್ಲಿ ಜಪಾನಿನ ದಕ್ಷಿಣ ದ್ವೀಪಗಳಿಂದ ಒಬ್ಬ ಶಿಷ್ಯ ಅವನನ್ನು ಹುಡುಕಿಕೊಂಡು ಬಂದ. "ಒಂದೇ ಕೈಯಿಂದ ಹುಟ್ಟುವ ಸದ್ದನ್ನು ಕೇಳಿಸಿಕೊ" ಎಂಬ ಮುಂಡಿಗೆಯನ್ನು ಗುರು ಅವನಿಗೆ ನೀಡಿದ. ಧ್ಯಾನದ ಮೂಲಕ ಉತ್ತರವನ್ನು ಕಂಡುಕೋ ಎಂದ. ಶಿಷ್ಯ ಮೂರು ವರ್ಷಗಳನ್ನು ಗುರುವಿನೊಡನೆ ಕಳೆದ. ಆದರೂ ಅವನಿಗೆ ಉತ್ತರ ದೊರೆಯಲಿಲ್ಲ, ಗುರು ನೀಡಿದ್ದ ಪರೀಕ್ಷೆಯನ್ನು ದಾಟಲಿಲ್ಲ. ಅವತ್ತು ರಾತ್ರಿ, ಕಣ್ಣಿನ ತುಂಬ ನೀರು ತುಂಬಿಕೊಂಡು, ನಾಚಿಕೆಯಿಂದ ತಲೆ ತಗ್ಗಿಸಿಕೊಂಡು, ಗುರುವಿಗೆ ಹೇಳಿದ-"ಗುರುವೇ, ನೀವು ಇತ್ತ ಸಮಸ್ಯೆಯನ್ನು ಪರಿಹರಿಸಲು ಆಗಲಿಲ್ಲ. ಸೋತು ನಮ್ಮೂರಿಗೆ ಹಿಂದಿರುಗುತ್ತಿದ್ದೇನೆ". "ಇನ್ನೊಂದು ವಾರ ಇರು. ಸತತವಾಗಿ ಧ್ಯಾನ ಮಾಡು" ಎಮದ ಸುಯಿಒ. ಅದೂ ಆಯಿತು. ಆದರೂ ಶಿಷ್ಯನಿಗೆ ಯಾವ ಸಾಕ್ಷಾತ್ಕಾರವೂ ಆಗಲಿಲ್ಲ. "ಇನ್ನೊಂದು ವಾರ ಇರು" ಎಂದ ಗುರು. ವಿಧೇಯತೆಯಿಂದ ಇನ್ನೂ ಒಂದು ವಾರ ಕಳೆದ ಶಿಷ್ಯ. ಫಲವೇನೂ ಸಿಗಲಿಲ್ಲ. "ಇನ್ನೂ ಒಂದು ವಾರ ನೋಡು" ಎಂದ ಗುರು. ಮತ್ತೆ ಅದೇ ವಿಫಲತೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ಕಳಿಸಿಬಿಡಿ ಎಂದು ಶಿಷ್ಯ ಗೋಗರೆದ. ಇನ್ನೈದು ದಿನ ಧ್ಯಾನಮಾಡಿ ನೋಡು ಎಂದ ಗುರು. ಮತ್ತೆ ಅದೇ ಹಾಡು. ಗುರು ಹೇಳಿದ. "ಇನ್ನು ಮೂರು ದಿನ ಧ್ಯಾನಮಾಡು. ನಿನಗೆ ಸಾಕ್ಷಾತ್ಕಾರವಾಗದಿದ್ದರೆ ಹೋಗಿ ಪ್ರಾಣಕಳೆದುಕೋ". ಎರಡನೆಯ ದಿನ ಶಿಷ್ಯನಿಗೆ ಸಾಕ್ಷಾತ್ಕಾರವಾಗಿತ್ತು.

ಪ್ರತಿಕ್ರಿಯೆಗಳು

ಸರ್, ಮುಂಡಿಗೆ ಪದದ ಅರ್ಥವೇನು? ಮುಂಡಾಸು ಅಥವಾ ರುಮಾಲು ಎನ್ನುವ ಅರ್ಥವೇ? ಇಲ್ಲಿ ಶಿಷ್ಯನಿಗೆ ಸಾಕ್ಷಾತ್ಕಾರ ಮೊದಲು ಏಕಾಗಲಿಲ್ಲ. ಅವನಲ್ಲಿ ಏಕಾಗ್ರತೆಯಲ್ಲಿ ಲೋಪವಿತ್ತೇ? ಅಥವಾ ಗುರುವಿನ ಅನುಗ್ರಹವಾಗಿರಲಿಲ್ಲವೇ? ನಿಮ್ಮ ಚಿಂತನೆಗಳ ಸರಮಾಲೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. --- ತವಿಶ್ರೀನಿವಾಸ

ಮುಂಡಿಗೆ ಎಂದರೆ ಕಂಬ ಎಂದರ್ಥ. ಅದರೆ ಈ ಮೇಲಿನ ಸಂದರ್ಭದಲ್ಲಿ ಏನೆಂದು ನನಗೂ ಸ್ಪಷ್ಟವಾಗಿಲ್ಲ.

ಮುಂಡಿಗೆ ಅಂದರೆ ಒಗಟಿನಂಥ ಮಾತು. ಕನಕ ದಾಸರ ಮುಂಡಿಗೆಗಳು ಪ್ರಸಿದ್ಧವಾಗಿವೆ. ಮೇಲು ನೋಟಕ್ಕೆ ಅಪಾರ್ಥ ಅಥವ ಅರ್ಥವಿಲ್ಲ ಅನ್ನಿಸುವ ಮಾತು ಯೋಚನೆ ಮಾಡಿದಂತೆ ಅರ್ಥಪೂರ್ಣ ಅನ್ನಿಸುವಂತೆ ಇರುವುದು ಮುಂಡಿಗೆ. "ಮನೆಯೊಳಗೆ ಒಬ್ಬ ಗಂಡ, ಹೊರಗೆ ಒಬ್ಬ ಮಿಂಡ" ಅನ್ನುವಂಥ ಮಾತನ್ನು ಅನೇಕ ಅನುಭಾವಿಗಳು ಹೇಳುತ್ತಾರೆ. ಶಿವನ ಕೂಡೆ ಹಾದರ ಮಾಡಿದೆ ಅನ್ನುವವರೂ ಇದ್ದಾರೆ. ಲೋಕದಲ್ಲಿ ಲೋಕದವರಂತೆ ಇದ್ದೂ ತಮ್ಮ ಆಧ್ಯಾತ್ಮಿಕ ಅನುಭವವನ್ನು ಬಿಡದೆ ಉಳಿಸಿಕೊಂಡಿರುವುದನ್ನು ಇಂಥ ಮಾತುಗಳು ಸೂಚಿಸುತ್ತವೆ. ಒಂದು ಕೈ ಚಪ್ಪಾಳೆ "ಮೌನ"ವನ್ನು ಕುರಿತದ್ದು, ಶಿಷ್ಯ "ಚಪ್ಪಾಳೆ"ಯನ್ನು ಮಾತ್ರ ಗಮನಿಸಿ ಆ ಸದ್ದನ್ನು ಹುಡುಕುತ್ತಾನೆ. ನಿಜವಾಗಿ ಮೌನವು ಗುರು ಹೇಳಿದ ಮಾತಿನ ಅರ್ಥ ಎಂದು ಅರಿವಾದಾಗ ಅವನಿಗೆ ಧ್ಯಾನದ ಸ್ಥಿತಿ ದೊರೆಯುತ್ತದೆ. ಈ ಕತೆಯ ಮುಂಡಿಗೆ ಇಂಟೆನ್ಸಿಟಿಯನ್ನು ಕುರಿತದ್ದು. ಸುಮ್ಮನೆ ಹುಡುಕುತ್ತೇವೆ ಎಂದುಕೊಳ್ಳುವುದು ಒಂದು ಬಗೆಯ ಪಲಾಯನ ವಾದ. ನನ್ನನ್ನು ಕಾಡುವ ಪ್ರಶ್ನೆ ಜೀವನ್ಮರಣದ ಪ್ರಶ್ನೆ ಎಂಬಂಥ ತೀವ್ರತೆ ಇದ್ದಾಗ ಆಧ್ಯಾತ್ಮದ ಸಾಧನೆಗೂ ಅರ್ಥ. ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಆಗದೆ ಇದ್ದರೆ ಸಾಯುವುದೇ ಒಳ್ಳೆಯದು ಎಂದಾಗ ಶಿಷ್ಯನಿಗೆ ಅನ್ವೇಷಣೆಗೆ ಬೇಕಾದ ಮೊನಚು ದೊರೆಯುತ್ತದೆ. ಝೆನ್ ಕತೆಗಳು ಮತ್ತು ವಡ್ಡಾರಾಧನೆ ಎಂಬ ಪ್ರಾಚೀನ ಕನ್ನಡದ ಕಥೆಗಳು ಸಾಕ್ಷಾತ್ಕಾರವು ತಟ್ಟನೆ ಆಗುವ ಸಂಗತಿ ಎಂಬುದನ್ನೇ ಹೇಳುತ್ತವೆ. ಸೂಕ್ತ ಮನೋಧರ್ಮ ಮೂಡಿದ ಕ್ಷಣದಲ್ಲಿ ತಟ್ಟನೆ ಅರಿವು ಹೊಳೆಯುತ್ತದೆ. ಗುರುವಿನ ಮಾತಿನ ಬಿಸಿ ಶಿಷ್ಯನ ಮನೋಧರ್ಮದಲ್ಲಿ ತರುವ ಪರಿವರ್ತನೆ ಮತ್ತು ಅದರಿಂದ ಪಡೆಯುವ ಅನುಭವ ಈ ಕಥೆಯ ಮುಖ್ಯ ಸಂಗತಿ. ಶಿಷ್ಯನ ಧ್ಯಾನದಲ್ಲಿ ತೀವ್ರತೆ ಇರದಿದ್ದುದರಿಂದಲೇ ಅವನಿಗೆ ಯಾವ ಅನುಭವವೂ ಅಗಿರಲಿಲ್ಲ. ಸಾಕ್ಷಾತ್ಕಾರವಾಗದಿದ್ದರೆ ಪ್ರಾಣ ಕಳೆದುಕೊಳ್ಳುವುದೇ ಉಳಿದ ದಾರಿ ಎಂದಾಗ ಆ ಆಘಾತವೇ ಸಾಕ್ಸಾತ್ಕಾರದ ಸಡನ್‌ನೆಸ್ ಗೆಕಾರಣವಾಗುತ್ತದೆ. "ಅಗುವ ಅನುಭವ ಈ ಕ್ಷಣವೇ ಅಗಬೇಕು, ಮುಂದೆ ಎಂದೋ ಅಲ್ಲ. ಹಾಗೆ ನಿಧಾನವಾಗಿ ಸಕ್ಷಾತ್ಕಾರ ಪಡೆಯುತ್ತೇನೆ ಅನ್ನುವುದಕ್ಕೆ ನೀವೇನು ಅಮರರೆ?" ಎಂದು ಕೆಲವು ವಚನಕಾರರು ಕೇಳಿರುವುದೂ ಉಂಟು. ಇಲ್ಲೇ, ಈಗಲೇ ಎಂಬುದು ಝನ್ ನ ಇನ್ನೊಂದು ತತ್ವ.

ಧನ್ಯವಾದಗಳು ಸರ್. ಈ ಪದ ನನಗೆ ಗೊತ್ತಿರ್ಲಿಲ್ಲ. ನಿಮ್ಮ ವಿವರಣೆ ತುಂಬಾ ಸರಳವಾಗಿದೆ. ಇದೇ ತರಹದ ಒಗಟಿನ ಪದಗಳನ್ನು ಶಿಶುವಿನಾಳ ಷರೀಫರ ಗೀತೆಗಳಲ್ಲೂ ಕಾಣಬಹುದು. --- ತವಿಶ್ರೀನಿವಾಸ

ಕಥೆ ಓದಿದ ಮೇಲೆ ಅದರ ಅರ್ಥ ಗೊತ್ತಾಗದೆ ತೊಳಲಾಡುತ್ತಿದ್ದೆ; ನಿಮ್ಮ ವಿವರಣೆಯನ್ನು ಓದಿದ ಮೇಲೆ ಕಥೆಯ ಉದ್ದೇಶ ಏನೆಂದು ತಿಳಿಯಿತು; ಅದಕ್ಕೆ ಧನ್ಯವಾದಗಳು.