ಶಂಕರ ರಾಮಾನುಜ ’ಸಹಜನ್ಮ’ಯೋಗ!

To prevent automated spam submissions leave this field empty.

ಶಂಕರ ಜಯಂತಿ ಮತ್ತು ರಾಮಾನುಜಾಚಾರ್ಯರ ತಿರುನಕ್ಷತ್ರ (ಜಯಂತಿ) ಎರಡೂ ಒಂದೇ ದಿನ ಆಗಿರುವುದೊಂದು ಯೋಗ!

ಭಗವದ್ದರ್ಶನದ ತಪದಲ್ಲಿ ಭಿನ್ನ ಮಾರ್ಗಗಳನ್ನು ಅವಲಂಬಿಸಿದ ಆಚಾರ್ಯದ್ವಯರ ಜನ್ಮದಿನವು ಒಂದಾಗಿ ಬಂದಿರುವುದು ಪ್ರಕೃತಿಯು ನಮಗೆ ಒಂದುಗೂಡಿ ನಡೆಯುವಂತೆ ನೀಡಿರುವ ಸಂದೇಶವೆಂದೇ ಭಾವಿಸಬಹುದು.

ಮಾರ್ಗಗಳು ಭಿನ್ನವಾಗಿದ್ದಾಗ್ಗ್ಯೂ ಶಂಕರ ಮತ್ತು ರಾಮಾನುಜರ (ಹಾಗೂ ಮಧ್ವಾಚಾರ್ಯರ) ಗುರಿ ಒಂದೇ ಆಗಿತ್ತೆನ್ನುವುದನ್ನು ನಾವು ಗಮನಿಸಬೇಕು. ಇಹ-ಪರಗಳ ಅರ್ಥಶೋಧ ಮತ್ತು ಜೀವನದ ಸತ್ಯಶೋಧ ಇದೇ ಇವರ ಜೀವನದ ಗುರಿಯಾಗಿತ್ತು. ಈ ಅತ್ಯುಚ್ಚ ಗುರಿಯನ್ನು ಸಾಧಿಸಿದ ಪರಮಾರ್ಥ ಸಾಧಕರು ಈ ಮಹನೀಯರು.

ಶಂಕರರ ಅದ್ವೈತ, ರಾಮಾನುಜರ ವಿಶಿಷ್ಟಾದ್ವೈತ ಹಾಗೂ ಮಧ್ವರ ದ್ವೈತ ಸಿದ್ಧಾಂತಗಳು ಭಿನ್ನ ಮಾರ್ಗಗಳಲ್ಲಿ ಸಾಗಿದರೂ ಈ ದಾರ್ಶನಿಕರು ಕಂಡ ಪರಮ ಸತ್ಯವು ಒಂದೇ ಆಗಿರುವುದು ಗಮನಾರ್ಹ.

’ಬೃಹ್ಮಂ ಸತ್ಯಂ ಜಗನಿಥ್ಯಾ ಜೀವೋ ಬ್ರಹ್ಮಸ್ಯ ನಾಪರಃ’
(ಅರ್ಥ: ಬ್ರಹ್ಮವು ಸತ್ಯ, ಜಗತ್ತು ಮಿಥ್ಯೆ, ಜೀವಾತ್ಮವು ಬ್ರಹ್ಮವೇ ಹೊರತು ಬೇರಲ್ಲ) ಎಂದ ಶಂಕರರ ದೃಷ್ಟಿ,

’ಮತ್ತ ಏವ ಸರ್ವ ವೇದಾನಾಂ ಸಾರಭೂತಂ ಅರ್ಥಂ ಶ್ರುಣು’ (ಶ್ರೀ ಗೀತಾ ಭಾಷ್ಯ) ಎನ್ನುವ ಮೂಲಕ,
’ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ, ಕ್ಷರಃ ಸರ್ವಾಣಿ ಭೂತಾನಿ ಕೂಟಸ್ತೋಕ್ಷರ ಉಚ್ಯತೇ’ (ಭಗವದ್ಗೀತೆ) (ಅರ್ಥ: ನಶ್ವರ, ಶಾಶ್ವತ ಇವೆರಡು ಈ ಲೋಕದಲ್ಲಿ ಪುರುಷರೂಪಗಳು; ಎಲ್ಲ ದೇಹಗಳೂ ನಶ್ವರ, ಜೀವಾತ್ಮ ಶಾಶ್ವತ) ಎಂದ ಶ್ರೀಕೃಷ್ಣನ ಮಾತನ್ನು ಸಮರ್ಥಿಸಿದ ರಾಮಾನುಜರ ದೃಷ್ಟಿ

ಮತ್ತು, ’ಜೀವೇಶ್ವರ ಭಿದಾ ಚೈವ ಜಡೇಶ್ವರ ಭಿದಾ ತಥಾ....’ ಎಂದು ಜೀವ-ಈಶ್ವರ, ಜಡ-ಈಶ್ವರ ಮುಂತಾಗಿ ಪ್ರಪಂಚದ ಭೇದಪಂಚಕವನ್ನು ಸಾರಿದ ’ಪರಮಶ್ರುತಿ’ಯ ಪ್ರತಿಪಾದಕ ಮಧ್ವರ ದೃಷ್ಟಿ ಎಲ್ಲವೂ ಜೀವ-ಜೀವನದ ಸತ್ಯಾರ್ಥಶೋಧದೆಡೆಗೇ ಹರಿದಿದ್ದವು.

’ಸತ್ಯಂ ವದ, ಧರ್ಮಂ ಚರ’ (ಸತ್ಯವನ್ನು ಹೇಳು, ಧರ್ಮವನ್ನು ಆಚರಿಸು) ಎಂಬ ಸಕಲ ವೇದೋಪನಿಷದ್ಸಾರವನ್ನೇ ಈ ಮೂವರು ಪರಮಾಚಾರ್ಯರೂ ಜಗತ್ತಿಗೆ ಬೋಧಿಸಿದರು.

ಇವರ ಬೋಧನೆಯಂತೆ ನಾವಿಂದು ಸತ್ಯ-ಧರ್ಮದ ಮಾರ್ಗದಲ್ಲಿ ನಡೆಯಬೇಕಾಗಿದೆ. ಅದಕ್ಕಾಗಿ ನಮ್ಮೊಳಗಿನ ಭೇದಭಾವವನ್ನು ತೊರೆಯಬೇಕಾಗಿದೆ.

’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್‌ಸಾಕ್ಷಿಣೀ
ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
........ಗುರುರಿತ್ಯೇಷಾ ಮನೀಷಾ ಮಮ’ (ಮನೀಷಾಪಂಚಕ), ಅಂದರೆ,

’ಎಚ್ಚರ, ಕನಸು, ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ, ಯಾವ ಚಿತ್‌ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ, ಆ ಚಿತ್‌ಸ್ವರೂಪವೇ ನಾನು, ನೋಟದ ವಸ್ತು ನಾನಲ್ಲ’, ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿ ನನ್ನ ಗುರು, ಎಂದ ಆದಿಶಂಕರರ ಮಾತಿನಂತೆ ನಾವಿಂದು ಸತ್ ಚಿತ್ ಸ್ವರೂಪರಾಗಿ ಬಾಳಬೇಕಾಗಿದೆ.

’ನಿಯಮ, ಬದ್ಧತೆ, ಏಕರೂಪ (ಒಂದೇ ಗುಣ) ಹೊಂದಿರುವವನು, ಹಾಗೂ, ತಾನು ದೈವಾಂಶಸಂಭೂತ (ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು) ಎಂಬುದನ್ನರಿತು ಅದರಂತೆ ಮುನ್ನಡೆಯುವವನು ಅವನೇ ಶ್ರೇಷ್ಠನು’ ಎಂಬ ಆದಿಶಂಕರರ ನುಡಿಗನುಗುಣವಾಗಿ ನಮ್ಮನ್ನು ನಾವಿಂದು ರೂಪಿಸಿಕೊಳ್ಳಬೇಕಾಗಿದೆ.

ಈ ಆಚಾರ್ಯತ್ರಯರ ತತ್ತ್ವಸಾರವನ್ನರಿತು ಅದರನುಸಾರ ಜೀವನವನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ನಮಗೆ ಇಂದಿನ ವಿಷಮ ಸಾಮಾಜಿಕ ಸನ್ನಿವೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಇದೆ.

ಆಚಾರ್ಯತ್ರಯರು ಹೇಳಿರುವ ಶ್ರೇಷ್ಠಗುಣಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳೋಣ, ಶ್ರೇಷ್ಠರೂ ಸುಖಿಗಳೂ, ಮತ್ತು ತನ್ಮೂಲಕ, ಜೀವನಸಾರ್ಥಕ್ಯ ಹೊಂದಿದ ಜೀವಾತ್ಮರೂ ನಾವಾಗೋಣ.

ಲೇಖನ ವರ್ಗ (Category):