ಇದು 'ಯಾಂತ್ರಿಕ ಪ್ರೀತಿ'ಯಲ್ಲ!

To prevent automated spam submissions leave this field empty.

ಶಿವಮೊಗ್ಗದಲ್ಲಿ ಇಕ್ಬಾಲ್ ಅಹಮದ್ ಎಂಬ ರೈಲ್ವೆ ಮೆಕಾನಿಕ್‌ಗೆ ಶಿವಮೊಗ್ಗ-ತಾಳಗುಪ್ಪ ಮಾರ್ಗದ ಪುಟಾಣಿ ರೈಲೆಂದರೆ ಅದೇನೋ ಅಕ್ಕರೆ.( ಅದೆಷ್ಟು ಪುಟಾಣಿ ಎಂದರೆ ಕೇವಲ 52 ಸೀಟಿನದು. ಅದಕ್ಕೆ ಟ್ರೈನ್ ಕಾರ್ ಎಂದೇ ಕರೆಯುವುದು.) ಹೊರಗಡೆ ಆಟವಾಡಿ ಗಾಯ ಮಾಡಿಕೊಂಡು ಬಂದ ಪುಟ್ಟ ಮಗುವನ್ನು ಸುಶ್ರೂಷೆ ಮಾಡುವಂತೆ ಆ ರೈಲನ್ನು ಆರೈಕೆ ಮಾಡುತ್ತಿದ್ದರು. ತಾವಿಲ್ಲದಿದ್ದಾಗ ಇತರ ಕೆಲಸಗಾರರು ಕುಡಿದು ಗಾಡಿಯನ್ನು ಮುಟ್ಟಿದರೆ ಇವರು ಕಿಡಿಕಿಡಿ. ಅದೇ ಆತಂಕದಲ್ಲಿ ಕೆಲಸಕ್ಕೆ ಎಂದೂ ರಜೆ ತೆಗೆದುಕೊಳ್ಳುತ್ತಿರಲಿಲ್ಲ. ಅದರ ಚಾಲಕನಿಗೂ ಇವರದೇ ತರಬೇತಿ. ಒಮ್ಮೆ ಅನಂತಪುರದ ಬಳಿ ೧೫ ದಿನಗಟ್ಟಲೇ ಕೆಟ್ಟುನಿಂತಾಗ, ಗಾಡಿ ಬಿಟ್ಟಿರಲಾರದೇ ಹಳಿ ಸರಿ ಇಲ್ಲದಿದ್ದರೂ ಸಾಹಸ ಮಾಡಿ ಶಿವಮೊಗ್ಗಕ್ಕೆ ತಂದಿದ್ದಿದೆ. ಆದರೆ ಇತ್ತೀಚೆಗೆ ತಾಳಗುಪ್ಪ ಮಾರ್ಗ ಬ್ರಾಡ್‌ಗೇಜ್‌ಗೆ ಬದಲಾಗುತ್ತಿದ್ದಂತೆ ಈ ರೈಲು ಮ್ಯೂಸಿಯಂ ಸೇರಿತು. ಮಗುವನ್ನು ಹಾಸ್ಟೆಲ್‌ಗೆ ಬಿಟ್ಟುಬಂದ ತಾಯಿಯಂತೆ ಇವರು ಕೊರಗಿದರು. ಈಗಲೂ ವಾರಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೋ ನಂಜನಗೂಡಿನಲ್ಲಿರುವ ರೈಲ್ವೇ ಮ್ಯೂಸಿಯಂಗೆ ಗಾಡಿಯನ್ನು ನೋಡಲೆಂದೇ ಹೋಗುತ್ತಾರೆ. ಸ್ವಲ್ಪ ದೂರ ಚಲಾಯಿಸಿ, ಸರಿಯಾಗಿದೆ ಎಂದು ಸ್ಪಷ್ಟಪಡಿಸಿಕೊಂಡು ಮರಳುತ್ತಾರೆ, ಮತ್ತೆ ಅಲ್ಲಿಗೆ ಹೋಗುವ ದಿನಾಂಕ ನಿಗದಿ ಪಡಿಸಿಕೊಂಡೇ.

ಮೊನ್ನೆ ಮೇ ಒಂದರಂದು ನಾನು ರಜೆಯ ವಿರಾಮದಲ್ಲಿ ಮನೆಯಲ್ಲಿದ್ದೆ. ಟಿವಿಯಲ್ಲಿ ಕಾರ್ಮಿಕ ದಿನಾಚರಣೆ, ಶೋಷಣೆ, ಬಡತನ ಎಂದೇನೋ ಬರುತ್ತಿತ್ತು. ನಾನು ಜಯಂತ್ ಕಾಯ್ಕಿಣಿಯವರ ಕಥಾ ಸಂಕಲನದಲ್ಲಿ ಮುಳುಗಿದ್ದೆ. ಅದರ ಕಥೆಯೊಂದರಲ್ಲಿ ನಾಯಕ ತನ್ನ ಟ್ರಕ್ಕಿನೊಂದಿಗೆ ಅಂಥ ಭಾವನಾತ್ಮಕ ಸಂಬಂಧ ಇಟ್ಟುಕೊಂಡ ಪ್ರಸಂಗವಿದೆ. ಅಲ್ಲಿ ಟ್ರಕ್ ಅವನ ಗೆಳೆಯ, ಪ್ರೇಯಸಿ, ತುಂಟ ಮಗು, ಕಷ್ಟಕಾಲದಲ್ಲಿ ಗಂಭೀರವಾಗಿ ಸಮಾಧಾನಿಸಬಲ್ಲ ಹಿರಿಯ. ಕೂಡಲೇ ನನಗೆ ಇಕ್ಬಾಲರೂ, ಆ ಟ್ರೈನ್‌ಕಾರೂ ನೆನಪಾಯಿತು.

ಯಂತ್ರದೊಂದಿಗೆ ಕೆಲಸ ಮಾಡುತ್ತಾ ಮಾಡುತ್ತಾ ಮನುಷ್ಯನೂ ಯಂತ್ರದಂತಾಗುತ್ತಾನೆ ಎನ್ನುವುದು ಒಂದು ಸಾಮಾನ್ಯ ಅಭಿಪ್ರಾಯ. ಚಾರ್ಲಿ ಚಾಪ್ಲಿನಂಥ ಮಹಾನ್ ಪ್ರತಿಭಾವಂತರು, ಚಿಂತಕರು ಹಲವು ರೀತಿಯಲ್ಲಿ ಆ ಭಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮನುಷ್ಯನ ಭಾವನಾ ಲೋಕ ಎಷ್ಟು ವಿಚಿತ್ರವೆಂದರೆ ಅಂಥ ಯಂತ್ರದೊಂದಿಗೂ ತನ್ನ ಸಂಬಂಧವನ್ನು ಸೃಷ್ಟಿಸಿಕೊಳ್ಳಬಲ್ಲದು. ತನ್ನ ಸಂವೇದನೆಯನ್ನೂ ರೂಪಿಸಿಕೊಳ್ಳಬಲ್ಲದು. ಬಹುಶ: ಮನುಷ್ಯರ ಜತೆಗಿದ್ದೂ ಇದ್ದೂ ಯಂತ್ರವೂ ಮನುಷ್ಯನಂತಾಗಿಬಿಟ್ಟಿರುತ್ತದೆಯೇನೋ, ಮನಸುಳ್ಳವರ ಪಾಲಿಗೆ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಊಟಿಯಲ್ಲಿ ಹೆರಿಟೇಜ್ ರೈಲು ಎಂದು ಉಳಿಸಿಕೊಂಡಿದ್ದಾರೆ ಅಲ್ಲವೇ ಅದೇ ತರಹ ಒಂದು ಬದಿಯ ಹಳಿಯನ್ನಾದರೂ ಉಳಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು.

ರಜನಿ ಅವರೆ,
ನಿಮ್ಮ ಬರಹ ತುಂಬಾ ಚೆನ್ನಾಗಿದೆ. ಶಿವಮೊಗ್ಗಾದವನಾದ ನನಗೆ ಮತ್ತು ಬಾಲ್ಯಕಾಲದಿಂದಲೂ ರೈಲಿನೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡ ನನಗೆ ಶ್ರೀ ಇಕ್ಬಾಲ್ ಅಹ್ಮದ್ ಅವರ ಬಗ್ಗೆ ಗೌರವ ಮೂಡಿತು. "ಅತಿಪರಿಚಯಾದವಜ್ಞಾ" ( ಅತಿಯಾದ ಪರಿಚಿತತೆ ಅಸಡ್ಡೆ ಹುಟ್ಟಿಸುತ್ತದೆ) ಎಂಬ ಮಾತಿಗೆ ಶ್ರೀ ಇಕ್ಬಾಲ್ ಅಪವಾದವಾಗಿದ್ದಾರೆ. ಚಾರ್ಲಿ ಚಾಪ್ಲಿನ್‌ನ "The Great Dictator" ಸಿನೆಮಾ ನೋಡಿದ ಯಾರಾದರೂ ನೀವು ಚಾಪ್ಲಿನ್ ಬಗ್ಗೆ ಬರೆದಿರುವ ಮಾತನ್ನು ಒಪ್ಪಬಹುದು. ಆದರೆ ಎಲ್ಲ ನಿಯಮಕ್ಕೂ ಅಪವಾದವೆನಿಸಿರುವವರು ಇದ್ದೇ ಇರುತ್ತಾರಲ್ಲ!! ಶ್ರೀ ಇಕ್ಬಾಲ್ ಅಹ್ಮದ್ ಅವರಂಥ ಅಸಾಮಾನ್ಯ ಜನಸಾಮಾನ್ಯರೊಬ್ಬರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ನಿಜಕ್ಕೂ ಇದು ಒಂದು ಕೌತುಕವೇ ಸರಿ.
ಈಗಿನ ದಿನಗಳಲ್ಲಿ ಮನುಷ್ಯ ತನ್ನ ನೆರೆ ಹೊರೆಯವರನ್ನೇ ಪ್ರೀತಿಸಲು ಸಾಧ್ಯವಿಲ್ಲದಿರುವಾಗ, ಈ ಪ್ರೀತಿ, ನಿಜವಾಗಿಯೂ ಯಾಂತ್ರಿಕ ಪ್ರೀತಿಯಾಗಿರಲಾರದು

ಕಾರ್ತಿಕ್