ಸತ್ಯನಾರಾಯಣರ ಕಾಲಜಿಂಕೆ ಕಾದಂಬರಿ

To prevent automated spam submissions leave this field empty.

ಗೆಳೆಯ ಸತ್ಯನಾರಾಯಣರ ಹೊಸ ಕಾದಬರಿ ಕಾಲಜಿಂಕೆ ಪ್ರಕಟವಾಗಿದೆ. ಡಾ. ಯು. ಆರ್. ಅನಂತಮೂರ್ತಿ ಮುನ್ನುಡಿ ಬರೆದಿದ್ದಾರೆ. ಸತ್ಯನಾರಾಯಣ ತುಂಬ ಕಡಿಮೆ ಆದರೆ ತುಂಬಾ ಅಚ್ಚುಕಟ್ಟಾಗಿ ಬರೆಯುತ್ತಾರೆ. ಅವರ ಬರೆಹ ನಂಬುವುದು ಬರೆಹದಲ್ಲಿನ ಶಕ್ತಿಯನ್ನು ಮಾತ್ರ. ಅವರ ಪ್ರಬಂಧಗಳನ್ನ ಓದಿದ್ದರೆ, ಕಥೆಗಳನ್ನ ಓದಿದ್ದರೆ ನಿಮಗೆ ಇದು ಮನಸ್ಸಿಗೆ ಬರುತ್ತದೆ.ಆದ್ದರಿಂದಲೆ ಒಂದು ತರಹೆ ಅನ್‌ ಕಾಂಪ್ರಮೈಸಿಂಗ್ ಬರಹಗಾರ ಇವರು ಅಂತ ನನಗೆ ಅನ್ನಿಸಿದೆ. ಈ ಕಾದಂಬರಿಯಲ್ಲಿ ನಿಜ ಹೇಳಬೇಕೆಂದರೆ ಅನ್ನೋ ಒಂದು ಸಾಲುಒಂದು ಭಾಗವಾಗಿದೆ. ಇದು ಕಥೆಯ protagonist ರಂಗನಾಥನ ಸಮಸ್ಯೆಯಾ? ಈ ರಂಗನಾಥ ನಾವೋ, ನೀವೋ, ಅಥವಾ ಸತ್ಯನಾರಾಯಣರಾ ಅಂತ ಕೇಳಿಕೊಂಡು ಕಾದಂಬರಿನ ಓದೋಕೆ ಶುರು ಮಾಡಿದಿರೋ ಪ್ರಾಬ್ಲಂ ಶುರುವಾಗುತ್ತೆ. ಅದಕ್ಕೇನೆ ನಿರಾಳವಾಗಿ ಓದಿ. ಇದರಲ್ಲಿ ತುಂಬಾ ಎಳೆಗಳಿದ್ದಾವೆ. ರಂಗನಾಥ ಮೊದಲು ಪ್ರವೇಶ ಮಾಡ್ತಾನೆ. ಆದ್ದರಿಂದ ಕಥೆಯ protagonist ಅವನು ಅಂದೆ. ಆದರೆ ಪ್ರಾರ್ಥನಾ, ಸುಧಾ, ಸ್ವಾಮಿನಾಥ, ಅವನ ತಂದೆ ನಾರಾಯಣ ಮೂರ್ತಿ ಇವರೆಲ್ಲ ಈ ಫ್ಯಾಬ್ರಿಕ್ಕಿನಲ್ಲಿ ವಾರ್ಫ್ ಮತ್ತು ವೆಫ್ಟ್ ಅಂತಾರಲ್ಲ ಹಾಗೆ ಕೂಡಿಕೊಂಡಿದ್ದಾರೆ. ಆದರೆ ಅವರು ಆ ಕ್ಷಣಕ್ಕೆ ಸಂತೆಗೆ ಬಂದವರ ಹಾಗೆ ಇದ್ದಾರೆ. ಪ್ರತಿಯೊಂದು ಎಳೆಯಲ್ಲು ಅವರವರು protagonist ಆಗಿದ್ದಾರೆ. ಹೀಗೆ ಬಿಡಿಬಿಡಿಯಾದರೂ ಅವೆಲ್ಲವೂ ಒಂದು ಆರ್ಗ್ಯಾನಿಕ್ ಆಗಿ ಕೂಡಿಕೊಳ್ಳುವುದು ಕಾದಂಬರಿಯನ್ನು ಓದಿ ಮುಗಿಸಿದ ಮೇಲೆಯೇ. ಸತ್ಯನಾರಾಯಣ ಬರೆಯುವ ಬಹಳ ಕಥೆಗಳು ಹೀಗೆ ಒಳಗೆ ಸೇರಿಕೊಳ್ಳುವ ಆಮೇಲೆ ದೊಡ್ಡದಾಗಿ ಬೆಳೆದು ಹೊಟ್ಟೆ ಸೀಳಿಕೊಂಡು ಹೊರಬರುವ ಹನುಮಂತನ ಗುಣವನ್ನ ಪಡೆದುಕೊಂಡಿರುತ್ತವೆ. ಸಾಮಾನ್ಯವಾಗಿ ಕವಿತೆ ಬೇಡುತ್ತಲ್ಲ ಓದಿನ ನಂತರ ಮೌನ ತಾಳಿ ನಮ್ಮೊಂದಿಗೆ ನಾವೇ ಅನುಸಂಧಾನದಲ್ಲಿ ತೊಡಗುವುದನ್ನು, ಅಂತಹ ಮನಸ್ಥಿತಿಯನ್ನು ಡಿಮ್ಯಾಂಡ್ ಮಾಡುತ್ತವೆ. ಅನುಭವಕ್ಕೆ ಬರದ್ದನ್ನು ಬರೆಯಬಾರದು ಎಂದು ಹಠ ತೊಟ್ಟಂತೆ ಬರೆಯುವ ಸತ್ಯನಾರಾಯಣ ಅಪ್ಪರ್(?) ಮಧ್ಯಮವರ್ಗದ ಮನೋಧಾರ್ಮಿಕ ಸಂಕಟಗಳನ್ನು ತಮ್ಮ ಬರವಣಿಗೆಯ ಮೂಲ ಕನ್ಸರ್ನ್ ಮಾಡಿಕೊಂಡಿದ್ದಾರೆ ಅನ್ನಿಸುತ್ತೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮೊದಲು ಇಂಗ್ಲೀಷ್ ಆಡುಮಾತಿನಲ್ಲಿ ಪ್ರವೇಶ ಮಾಡಿತು . ನಿನ್ನೆ ಮೊನ್ನೆ ನಾವು ನಮ್ಮ ತಂದೆ ಅಜ್ಜರು ಉಪಯೋಗಿಸಿದ ಕನ್ನಡ ಶಬ್ದ ಕೈಬಿಟ್ಟು ಇಂಗ್ಲೀಷ್ ಅನ್ನು ಆಡು ಮಾತಿನಲ್ಲಿ ಉಪಯೋಗಿಸಿದೆವು . (ಬೆಳಿಗ್ಗೆ , ಮುಂಜಾನೆ ಇತ್ಯಾದಿಗಳು ಮಾರ್ನಿಂಗುಗಳಾದವು ಗೆಳೆಯರು ಸ್ನೇಹಿತರು ಫ್ರೆಂಡ್ಸಾದರು ಇ..) ಟೀವಿಯಲ್ಲಿ ಸಂಭಾಷಣೆ , ಧಾರಾವಾಹಿಯ ಭಾಷೆ ಗಮನಿಸಿ.

ವಾರಪತ್ರಿಕೆಯೊಂದರಲ್ಲಿ ಒಂದು ಕನ್ನಡ ಕಥೆಯಲ್ಲಿ ಅರ್ಧದಷ್ಟು ಇಂಗ್ಲೀಷನ್ನು ನೋಡಿದೆ.

ಈಗ ಈ ಲೇಖನ. ಶಿಷ್ಟ ( ಗ್ರಂಥಸ್ಥ ) ಕನ್ನಡವೂ ಕಂಗ್ಲೀಷ್ ಆಗುತ್ತಿದೆಯೇ ?
ಗ್ರಾಂಥಿಕ ಕನ್ನಡವೂ ಇಂಗ್ಲೀಷಿನತ್ತ ಹೊರಳುತ್ತಿದೆಯೇ ? ಸಾಹಿತಿ , ವಿಮರ್ಶಕರೂ ಕನ್ನಡ ಮರೆಯುತ್ತಿದ್ದಾರೆಯೇ ?

ಈ ಲೇಖನದಲ್ಲಿ
ಅನ್‌ ಕಾಂಪ್ರಮೈಸಿಂಗ್ ಬರಹಗಾರ - ರಾಜಿಮಾಡಿಕೊಳ್ಳದ ಬರಹಗಾರ ಎನ್ನಬಹುದಿತ್ತಲ್ಲವೇ ? ಹಾಗೆಯೇ
ಪ್ರಾಬ್ಲಂ ಶುರುವಾಗುತ್ತೆ. - ಸಮಸ್ಯೆ ಶುರುವಾಗುತ್ತೆ.
ಡಿಮ್ಯಾಂಡ್ ಮಾಡುತ್ತವೆ. - ಬೇಡುತ್ತವೆ
ಬರವಣಿಗೆಯ ಮೂಲ ಕನ್ಸರ್ನ್ - ಬರವಣಿಗೆಯ ಮೂಲ ಕಾಳಜಿ
ಎಂದಿದ್ದರೆ ಬರುತ್ತಿದ್ದಿಲ್ಲವೇ ?

"protagonist" , "ಈ ಫ್ಯಾಬ್ರಿಕ್ಕಿನಲ್ಲಿ ವಾರ್ಫ್ ಮತ್ತು ವೆಫ್ಟ್ ಅಂತಾರಲ್ಲ ಹಾಗೆ " , "ಆರ್ಗ್ಯಾನಿಕ್ ಆಗಿ " ಇವುಗಳ ಅರ್ಥವನ್ನು ತಿಳಿಯಲು ನಾನು ಏನು ಮಾಡಲಿ ? ಯಾರ ಕೇಳಲಿ ? ಇಂಥದನ್ನು ಓದುವ ಬದಲು ಓಡಿ ಹೋದೇನು.

ಇನ್ನು ಕನ್ನ್ಡಡದ ಗತಿ ಏನೋ ? ಕನ್ನಡ ಮತ್ರ ಬರುವ , ಬಳಸುವ ನಮ್ಮ ಬಹುಪಾಲು ಕರ್ನಾಟಕದ ಜನತೆಯ ಗತಿ ಏನೋ ? ಒಂದೇ ದಾರಿ . ಇಂಗ್ಲೀಷೇ .

* ಇನ್ನು ಮನೆಗಳಲ್ಲಿ ಕನ್ನಡ ಶಬ್ದಕೋಶ ಬೇಕಿಲ್ಲ - ಇಂಗ್ಲೀಷ್ ಡಿಕ್ಷನರಿ ಇಸ್ ಏ ಮಸ್ಟ್ ಕಣ್ರೀ.
* ಒಂದನೇ ವರ್ಗದಿಂದ ಏಕೆ ಕನ್ನಡ ? - ಗರ್ಭಸ್ಥ ಶಿಶುವಿಗೇ ಅಭಿಮನ್ಯುವಿನ ಹಾಗೆ ಇಂಗ್ಲೀಷ್ ದೀಕ್ಷೆ ಯಾಗುತ್ತದೆ .
* ಅಳಿದುಳಿದ ಸದ್ಯದ ಪೀಳಿಗೆಗಾಗಿ ( ಪೀಳಿಗೆ ಅಂದರೆ ಅರ್ಥ ಹೇಳಬೇಕೇನೋ - ಜನರೇಶನ್ ಕಣ್ರೀ) ಇಂಗ್ಲೀಷ್ ಅನ್ನಾದರೂ ಕಲಿಸಿ ಇಲ್ಲ ಇಂಗ್ಲೀಷ ಪದಗಳ ಕನ್ನಡ ಲಿಪಿಯಲ್ಲಿ ಒಂದು ಡಿಕ್ಷನರಿ ಮಾಡಿ .

**** ಸಾಯುತಿದೆ ನಿಮ್ಮ ನುಡಿ , ಕನ್ನಡ ಕಂದರಿರಾ , ಏನು ಮಾಡುತ್ತಿದ್ದೀರಿ ? ಅಳಿದುಳಿದ ಕನ್ನಡ ಬಾಷೆಯನ್ನು ಶುದ್ಧತೆಯ ಚರ್ಚೆಯಿಂದ ಆಡುಭಾಷೆ ,ತಪ್ಪು ಪದ , ಸಂಸ್ಕೃತಕ್ಕೆ ಕನ್ನಡ ಪದ ಎಂದೆಲ್ಲ ಕೊಲ್ಲುತ್ತಿದ್ದೀರಿ .

ಕನ್ನಡಮ್ಮನೇ , ನಿನ್ನ ಕಥೆ ಮುಗಿಯಿತು. ನಿನ್ನ ಮಕ್ಕಳೇ ನಿನ್ನ ಕತ್ತು ಹಿಚುಕುತ್ತಿದ್ದಾರೆ ? ಇನ್ನು ಯಾರು ನಿನ್ನನ್ನು ಉಳಿಸಿಕೊಳ್ಳಬೇಕು ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಬಂಗಾಲಿ ಆಡು ಭಾಷೆ ಮತ್ತು ಸಾಹಿತ್ಯಕ ಭಾಷೆಗಳಲ್ಲಿ ತುಂಬಾ ವ್ಯತ್ಯಾಸವಿದೆ, ಹಾಗೆ ಕನ್ನಡದಲ್ಲೂ ಸಾಹಿತ್ಯದಲ್ಲಿಯಾದರೂ ಶುದ್ಧ ಕನ್ನಡ ಬಳಸಬೇಕು, ಹಾಗೆ ಸಾಧ್ಯವಾಗದಿದ್ದಲ್ಲಿ, ದಯವಿಟ್ಟು ಬರೆಯಲೇ ಬೇಡಿ.

ಬನ್ನಿ ಹೊಸ ನಾಡ ಕಟ್ಟೋಣ

ಮಹೇಶ್, ಸಾಹಿತ್ಯಿಕ ಸರಿ, ತಿಳಿಸಿದ್ದಕ್ಕೆ ವಂದನೆಗಳು. ಬರಹ ಅಂತ ಬಳಸಿದರೆ ಇನ್ನೂ ಉತ್ತಮ. ಆದರೆ ತಮ್ಮ ಮುಂಚಿನ ಪ್ರತಿಕ್ರೀಯೆಯಲ್ಲಿ ನಿಮ್ಮ ಅನುಮಾನ ಪರಿಹರಿಸ ಬಯಸಿದಿರೋ ಅಥವಾ ತಪ್ಪನ್ನು ತೋರಿಸ ಬಯಸಿದಿರೋ ಒಂದೂ ತಿಳಿಯುವದಿಲ್ಲ, ಹಾಗೆ ಮಾಡದೆ, ತಪ್ಪಿದ್ದಲ್ಲಿ ನೇರವಾಗಿ ತಿಳಿಸಿ, ತಿದ್ದಿಕೊಳ್ಳುವೆ. ಕನ್ನಡಕ್ಕೆ ಹೆಚ್ಚು ಹತ್ತಿರವಾದ ಪದ ಬಳಕೆಯೇ ನನ್ನ ಉದ್ದೇಶ ಸಹಿತ.

ವಿಜಯ ಕರ್ನಾಟಕದಲ್ಲಿ ಬರೆಯುವ ವಿಶ್ವೇಶ್ವರ್ ಭಟ್ಟರ ಇಂದಿನ ಲೇಖನ ಓದಿದೆ, ಅನವಶ್ಯಕ(ಮಹೇಶ್ ಕನ್ನಡ ಪದ?) ಇಂಗ್ಲಿಶ್ ಎದ್ದು ಕಾಣುತ್ತದೆ.ರವಿ ಬೆಳಗೆರೆ ಮತ್ತೊಂದು ಹೆಸರು. ಮಿಶ್ರಿಕೋಟಿಯವರು ಇಂಥ ಬೆಳವಣಿಗೆಯನ್ನು ಗಮನಕ್ಕೆ ತಂದದ್ದು ಒಳ್ಳೆಯದು.

 ಹೊಸ ನಾಡ ಕಟ್ಟೋಣ

ಪ್ರಿಯ ಶ್ರೀಕಾಂತ್

ನಿಮ್ಮ ಅಭಿಪ್ರಾಯವನ್ನ ಓದಿದ್ದೆ.  ಆದರೆ ನೀವು ಅದರ  ಫಾಲೋ ಅಪ್   ಮಾಡಬಹುದು ಅಂತ ಅಂದುಕೊಂಡಿರಲಿಲ್ಲ. ನೀವು ಮಾತಾಡಲು ಹೊರಟಿದ್ದು, ಸಂತೋಷವಾಯಿತು ಅದನ್ನಿಲ್ಲಿ ಓದಿ. ನಿಮ್ಮ ಮಾತಿಗೆ ಕೆಲವು ಮಾತುಗಳನ್ನ ಸೇರಿಸಬಹುದು ಅನ್ನಿಸುತ್ತೆ. ಸತ್ಯನಾರಾಯಣರ ಪುಸ್ತಕಕ್ಕೆ ಅನಂತಮೂರ್ತಿಯವರು ಬರೆದಿರುವುದು ಬೆನ್ನುಡಿ, ನಾನು ಬರೆದಂತೆ ಮುನ್ನುಡಿಯಲ್ಲ. ಸಂಪದದ ಓದುಗರಲ್ಲಿ ಕ್ಷಮೆ ಯಾಚಿಸುತ್ತೇನೆ, ಫಾಕ್ಚುವಲ್ ಎನ್ನಬಹುದಾದ ತಪ್ಪಿಗಾಗಿ. ನಾನು ಒಂದು ಕಾಲದಲ್ಲಿ ರಾ. ವಿಜಯರಾಘವ ಅಂತ ಹೆಸರಿಟ್ಟುಕೊಂಡಿದ್ದೆ.  ಕಥೆ ಬರೆಯಲು ಶುರುಮಾಡಿದಾಗ. ಆ ಮೇಲೆಈಗಿನ ರೂಪಕ್ಕೆ ಬದಲಿಸಿಕೊಂಡೆ. ಇದು ನಿಜ ನಾಮಧೇಯ ಕೂಡ. 28 ವರ್ಷಗಳ ಹಿಂದೆ ಕೆ.ಜಿ.ಎಫ್ ನಲ್ಲಿ ಕೆಲಸಕ್ಕೆ ಸೇರಿದ ಕೆಲ ದಿನಗಳು ಆದಮೇಲೆ.  ಅಲ್ಲಿನ ತಮಿಳು, ಇಂಗ್ಲಿಶ್, ತೆಲುಗು, ಕನ್ನಡ ಭಾಷೆಗಳ ನಡುವೆ ಕನ್ನಡ ತಾನೂ ಬೆಳೆದುಕೊಂಡು ಈಗ ಎಲ್ಲವೂ ಸಹಬಾಳ್ವೆಯಲ್ಲಿ ಇವೆ. ಗಣಿ ಮುಚ್ಚಿಹೋಗಿ ಬದುಕು ದುಸ್ತರವಾದ ಮೇಲೆ ಅಂಬೇಡ್ಕರ್ ರಸ್ತೆಯಲ್ಲಿದ್ದ ತಮಿಳ್ ಮನ್ರಂ ಕಚೇರಿಗೆ ಹಾಕಿದ ಬಾಗಿಲು ತೆರೆದದ್ದನ್ನ ನಾನು ನೋಡಲೇ ಇಲ್ಲ. ಮೊನ್ನೆ ನಾನು ಬ್ರಾಂಚ್‌ ಮೇನೇಜರಾಗಿ ಅಲ್ಲಿದ್ದಾಗ ಅಲ್ಲಿನ ಲೈನುವಾಸಿಗಳು ತಮಿಳುಚೂರು ಕನ್ನಡ ಚೂರು ಬೆರೆಸಿ ಮಾತಾಡೋರು. ನಾನು ಅಷ್ಟು ಕನ್ನಡ ಇಷ್ಟು ತಮಿಳು ಮಾತಾಡುತ್ತಿದ್ದೆ. ಆ ಜನರನ್ನ ನಾನು, ನನ್ನನ್ನ ಆ ಜನರು ಪರಸ್ಪರ ಪ್ರೀತಿಸುತ್ತ ಇದ್ದೆವು. ಇರಲಿ ಶ್ರೀಕಾಂತ್. ಸತ್ಯನಾರಾಯಣರ ಪುಸ್ತಕ ವಿಸ್ತಾರವಾದ ವಿಮರ್ಶೆಗೆ ಅವಕಾಶ ಮಾಡಿಕೊಡುತ್ತದೆ. ಅದನ್ನು ಓದುವುದು, ಅದರ ಬಗ್ಗೆ ಮಾತಾಡೋದು ಕೂಡ ಕನ್ನಡದ, ಕನ್ನಡ ಜನರ ಕೆಲಸ ಅಲ್ಲವಾ. ಅಂದಹಾಗೆ ನನ್ನದೊಂದು ಇಂಗ್ಲಿಶ್ ಕಾದಂಬರಿ ಪ್ರಕಟವಾಗಿದೆ- ಅನ್ ಈವನ್ ಎಡ್ಜಸ್ ಅಂತ. ಕ್ಯಾಲಿಕಟ್‌ನ ಯೇತಿ ಬುಕ್ಸ್ ಪ್ರಕಟಿಸಿದ್ದಾರೆ.ಪ್ರೀತಿ ಇರಲಿವಿಜಯರಾಘವನ್‌