"ದೈವಮ್ ಮಾನುಷ ರೂಪೇಣಾ" ಇದು ನಿಜಾನ? ನನ್ನೊಂದು ಅನುಭವ..

To prevent automated spam submissions leave this field empty.

ವೃತ್ತಿ ಜೀವನದ ಏರು ಮಜಲುಗಳೆಂಬ ಬಿಸಿಲ್ಗುದುರೆಯನ್ನರಸಿ ಅಲೆದಾಡುತ್ತಾ ಹೈದರಾಬಾದ್ ನಗರದವರೆಗೆ ಬಂದಿದ್ದ ದಿನಗಳವು.
ಅದೊಂದು ದಿನ ಎಂದಿನಂತೆ ಮಿಂಚಂಚೆಯ ಬಾಗಿಲನ್ನು ತೆರೆದಾಗ ಕಂಡಿದ್ದು, "ನಿಮ್ಮನ್ನು ನೇರ ಸಂದರ್ಶನಗೋಸುಗ 'ನವಿ ಮುಂಬೈನ ಖರ್ಗರ್ ನೋಡ್'ನಲ್ಲಿನ ನಮ್ಮ ಪ್ರಧಾನ ಕಚೇರಿಗೆ ಆಹ್ವಾನಿಸುತ್ತಿದ್ದೇವೆ" ಎಂಬ ಸೀಮೆನ್ಸ್ ಕಂಪನಿಯ ಮಾನವ ಸಂಪನ್ಮೂಲ ಘಟಕದ ಮುಖ್ಯಸ್ಥರ ದಪ್ಪಕ್ಷರದ ಸಾಲುಗಳು. ವಾರದ ಹಿಂದೆಯಷ್ಟೇ ದೂರವಾಣಿಯ ಮುಖಾಂತರವೇ ಕಿರು ಸಂದರ್ಶನವನ್ನ ಸಮರ್ಥವಾಗಿ ಎದುರಿಸಿದ್ದು ಪೂರಕವೆಂಬಂತೆ ಲಹರಿಯೋಪಾದಿಯಾಗಿ ನನ್ನ ಮನದಲ್ಲಿ ಹರಿದಾಡತೊಡಗಿತು.
ತತ್ ಕ್ಷಣವೇ ಮುಂಬೈನ ಸೀಮೆನ್ಸ್ ಕಚೇರಿಗೆ ಫೋನಾಯಿಸಿ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಹೆಚ್ಚಿನ ವಿವರಗಳನ್ನ ಕಲೆ ಹಾಕಿದೆ. ನಿಗದಿತ ದಿನಕ್ಕೆ ಕೇವಲ ಮೂರು ದಿವಸಗಳು ಬಾಕಿಯಿದ್ದವು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಯ ಟ್ರಾವೆಲ್ ಡೆಸ್ಕ್ ಕಡೆಯಿಂದ ಹೈದರಾಬಾದ್-ಮುಂಬೈ-ಹೈದರಾಬಾದ್ ಟಿಕೆಟ್ಟನ್ನು ತತ್ಕಾಲ್ನಲ್ಲಿ ಹೇಗೋ ಕಾಡಿ ಬೇಡಿ ಗಿಟ್ಟಿಸಿಯಾಗಿತ್ತು. ಆದರೆ ಎರಡು ದಿವಸದ ರಜೆ ಪಡೆಯಲು ಕೊಂಚ ದೊಡ್ಡದಾದ ಸುಳ್ಳನ್ನೇ ಹೇಳಬೇಕಾಗಿ ಬಂದದ್ದಂತೂ ನಿಜ.

ಹೈದ್ರಾಬಾದಿನ ನಾಂಪಲ್ಲಿ ರೈಲ್ವೇ ಸ್ಟೇಶನ್ ನಿಂದ ಮಧ್ಯಾಹ್ನ ಸುಮಾರು ಮೂರು ಘಂಟೆಗೆ ತನ್ನ ಎಂದಿನ ಶೈಲಿಯಲ್ಲಿ ಹೊಗೆ ಉಗುಳುತ್ತಾ, ಕೂ ಎಂದು ಕೂಗುತ್ತಾ, ಕೊಂಚ ಹಿತವಾಗಿ ಕುಲುಕುತ್ತಾ ಹೊರಟೇ ಬಿಟ್ಟಿತ್ತು ಹುಸೇನ್ ಸಾಗರ್ ಎಕ್ಸ್ ಪ್ರೆಸ್ಸ್ ರೈಲು. ಸ್ಲೀಪರ್ ಕ್ಲಾಸ್ ಭೋಗಿಯ ಕೊನೆಯ ಸೈಡ್ ಅಪ್ಪರ್ ಬರ್ತ್ ನನಗೆ ಮೀಸಲಾಗಿಟ್ಟಿದ್ದ ಆಸನ. ಎಲ್ಲವೂ ಹಿತವಾಗಿದೆಯೆಂದುಕೊಳ್ಳುವಷ್ಟರಲ್ಲೇ ಇದ್ದಕ್ಕಿದ್ದ ಹಾಗೆ ನನ್ನನ್ನೇ ಅರಸಿ ಬಂದಂತಿದ್ದ ಪಕ್ಕದ ಶೌಚ ಕೋಣೆಯ ಕಮಟು ಉಚ್ಚೆಯ ವಾಸನೆ ವಾಕರಿಕೆ ತರಿಸುವ ಹಾಗಿತ್ತು. ಯಾರನ್ನು ಶಪಿಸಿದರೂ ಪ್ರಯೋಜನವಿಲ್ಲವೆಂದೂ ಹೇಗೋ ಸಹಿಸಿಕೊಂಡರಾಯಿತೆಂದೂ ನನ್ನನ್ನು ನಾನೇ ಸಮಾಧಾನಪಡಿಸಿಕೊಳ್ಳಲೆತ್ನಿಸಿದೆ. ನನ್ನ ಟೊಣಪು ದೇಹಕ್ಕೆ ಹೇಳಿಮಾಡಿಸಿದ ಆಸನವಲ್ಲವಾದ್ದರಿಂದಲೋ ಏನೋ ಕನಿಷ್ಟ ಒದ್ದಾಡಲೂ ಸಾಧ್ಯವಾಗದೆ ರಾತ್ರಿ ಪೂರ ನಿದ್ದೆ ಹತ್ತಲಿಲ್ಲ.

ಬೆಳಗಾಗುವುದನ್ನೇ ಅರೆ ತೆರೆದ ಕಂಗಳಿಂದ ನಿರೀಕ್ಷಿಸುತ್ತಿದ್ದ ನನಗೆ ರಾತ್ರಿ ಪೂರ ನೆನಪುಗಳೆಂಬ ಸಂಗಾತಿಗಳು ಮಧುರ ಸಾಂಗತ್ಯವನ್ನು ಇತ್ತವಾದರೂ ನಿದ್ದೆಯಿಲ್ಲದೆ ದೇಹ ನಿತ್ರಾಣವಾದಂತಿತ್ತು.
ಮುಂಬೈನ ಪರಿಚಯವಿರದಿದ್ದ ನನ್ನ ಮನದಲ್ಲಿ ಹೇಗೋ, ಏನೋ ಎಂಬ ಅಳುಕು. ಮುಂಜಾನೆ ಸುಮಾರು ಐದು ವರೆ ಗಂಟೆಗೆ ಮುಂಬೈನ ಚತ್ರಪತಿ ಶಿವಾಜಿ ಟರ್ಮಿನಲ್ ನಲ್ಲಿ ಉಸ್ಸೆಂದು ನಿಂತ ರೈಲಿನಿಂದ ಕೆಳಗಿಳಿದು ಒಮ್ಮೆ ಸುತ್ತಲೂ ಕಣ್ಣಾಡಿಸಿದೆ. ಇನ್ನೂ ಮಬ್ಬು ಮಬ್ಬಾಗಿದ್ದ ಅಲ್ಲಿ ಅಷ್ಟೊಂದು ಜನಸಂದಣಿ ಇರಲಿಲ್ಲ. ಹೋಗಬೇಕಿದ್ದ ನವಿ ಮುಂಬೈನ ವಿವರಗಳನ್ನು ಕೆಲ ಸಹ ಪ್ರಯಾಣಿಕರೊಂದಿಗೆ ಪಡೆದಿದ್ದೆನಾದ್ದರಿಂದ ನೇರವಾಗಿ ನವಿ ಮುಂಬೈ ಕಡೆ ಹೋಗುವ ಲೋಕಲ್ ಟ್ರೈನ್ ಟಿಕೆಟ್ಟನ್ನು ಖರೀದಿಸಿದೆ. ಸುಮಾರು ಒಂದರ್ಧ ಗಂಟೆ ಕಾಯುತ್ತಾ ನಿಂತ ನಂತರ ಬಂದ ಲೋಕಲ್ ಟ್ರೈನ್ ಪ್ಲಾಟ್ ಫಾರ್ಮ್ ಒಂದರಲ್ಲಿ ನಿಂತಿತು. ಅಷ್ಟರಲ್ಲಾಗಲೇ ಜನಸಂದಣಿಯ ಗಿಜಿಗಿಜಿ ಶುರುವಾಗಿತ್ತಾದ್ದರಿಂದ, ಚಕ್ರವ್ಯೂಹ ಭೇದಿಸಿದ ಅಭಿಮನ್ಯುವಿನಂತೆ ದಾರಿಗೆ ಅಡ್ಡ ಸಿಕ್ಕ ಎಲ್ಲರನ್ನು ಭೇಧಿಸಿ ಮುನ್ನುಗ್ಗಿ ಕೊನೆಗೂ ನಿಲ್ಲಲಷ್ಟೇ ಸಾಧ್ಯವಾಗುವಷ್ಟು ಸ್ವಲ್ಪ ಜಾಗವನ್ನು ಪಡೆಯಲು ಶಕ್ತನಾದೆ.

ಅಬ್ಬಾ.. ಅದೆಂತಹ ಪ್ರತಿಸ್ಪರ್ಧಾ ಯಾಂತ್ರಿಕ ಪ್ರಪಂಚ! ಜನುಮದಲ್ಲಿ ಮುಂಬೈನಲ್ಲಿನ ಕೆಲಸ ಬೇಡವೆಂದು ಪ್ರತಿಜ್ಞೆ ಮಾಡಿಬಿಡಬೇಕೆನ್ನುವಷ್ಟರಲ್ಲಿ ನಾ ಇಲ್ಲಿಗೆ ಬಂದಿರುವ ಮಹಾನ್(?) ಉದ್ದಿಶ್ಯದ ನೆನಪಾಗಿ ಅದನ್ನು ಸದ್ಯಕ್ಕೆ ಅಲ್ಲಿಗೇ ಬಿಟ್ಟೆ. ರಾತ್ರಿ ಪೂರ ನಿದ್ದೆಯಿಲ್ಲದೆ ಮೊದಲೇ ನಿತ್ರಾಣನಾದಂತಿದ್ದ ನನಗೆ ಲೋಕಲ್ ಟ್ರೈನ್ ನಲ್ಲಿನ ಸಹ ಪ್ರಯಾಣಿಕ ಬಂಧುಗಳು ಹಿಂಡಿ ಹಿಪ್ಪೆ ಮಾಡುತ್ತಲಿದ್ದರು. ಇನ್ನೆಷ್ಟು ಹೊತ್ತು ಹೀಗೆ ನಿಲ್ಲುವುದೆಂದು ಮರುಗಲೆತ್ನಿಸಿದೆ. ಈಗ ಸಿಕ್ಕಿತೇನೋ, ಮುಂದಿನ ನಿಲುಗಡೆಯೇ 'ಖರ್ಗರ್ ನೋಡ್' ಇರಬಹುದೇನೋ ಎಂದಂದಿಕೊಂಡದ್ದಷ್ಟೇ ಬಂತು, ಯಾರನ್ನೂ ಕೇಳಿದರೂ ಅವಸರವಸರವಾಗಿ 'ಮುಂದೆ' ಎಂದಷ್ಟೇ ಹೇಳುತ್ತಿದ್ದರು. ಸರಿ ಸುಮಾರು ಎರಡು ತಾಸಿನ ಉಸಿರುಗಟ್ಟಿಸುತಲಿದ್ದ ಸತತ ಪ್ರಯಾಣದ ನಂತರ ಬೋಗಿಯ ಬಹುತೇಕ ಆಸನಗಳೆಲ್ಲ ಖಾಲಿಯಾಗಿತ್ತು. ಅಲ್ಲಿದ್ದ ಯಾರೋ ಒಬ್ಬರು ಗುನುಗಿದರು ಮುಂದಿನದು ನವಿ ಮುಂಬೈನ 'ಖರ್ಗರ್ ನೋಡ್' ನಿಲುಗಡೆ ಎಂದು.

ನಿಲ್ದಾಣದ ಮೆಟ್ಟಿಲುಗಳನ್ನು ಹತ್ತಿ ಹೊರನಡೆದ ನನಗೆ ಕಂಡ ಆಟೊ ಸಾಲಿನ ಕಡೆ ಕೈ ಬೀಸಿದೆ. ಡುರ್ರ್ ಎಂದು ನನ್ನ ಬಳಿ ಬಂದ ಆಟೊದಲಿದ್ದವನು "ಎಲ್ಲಿಗೆ"? ಎಂದ.
"ಸೀಮೆನ್ಸ್ ಕಚೇರಿ ಎಲ್ಲಿದೆ"? ಎಂದೆ. "ಬನ್ನಿ ಹತ್ತಿ ಕರೆದುಕೊಂಡು ಹೋಗ್ತಿನಿ" ಎಂದ. "ಅಲ್ಲಿ ಹತ್ತಿರ ಯಾವುದಾದರೂ ಲಾಡ್ಜ್ ಇದೆಯಾ"? ಎಂದೆ. ಹೌದು ಎಂದು ತಲೆಯಾಡಿಸಿದ. ಹಾಗಾದರೆ ಲಾಡ್ಜ್ ಹತ್ತಿರ ಬಿಡು ಸಾಕು ಎಂದೆ. ಕೆಲವಾರು ನಿಮಿಷಗಳ ಪ್ರಯಾಣದ ನಂತರ ಯಾವುದೋ ಒಂದು ಅದ್ಧೂರಿಯದೆಂದು ಹೇಳಬಹುದಾದ ಹೋಟೆಲ್ ಅಪಾರ್ಟ್ಮೆಂಟ್ ನ ಮುಖ್ಯದ್ವಾರದಲ್ಲಿ ನಿಲ್ಲಿಸಿದ. ಜೇಬಿನಲ್ಲಿದ್ದ ದುಡ್ಡನ್ನೊಮ್ಮೆ ಪರಿಶೀಲಿಸಿ ಸ್ವಲ್ಪ ಅಧೀರನಾದಂತೆ ನನಗೆ ಇಷ್ಟು ದೊಡ್ಡ ಹೋಟೆಲ್ ಅಗತ್ಯವಿಲ್ಲ, ಯಾವುದಾದರೂ ಸಣ್ಣ ಲಾಡ್ಜ್ ಆದರೆ ಒಳ್ಳೆಯದೆಂದೆ. "ಇಲ್ಲ ಸ್ವಾಮಿ, 'ಖರ್ಗರ್ ನೋಡ್' ನಲ್ಲಿರೋದು ಇದೊಂದೇ ಹೋಟೆಲ್. ಇಲ್ಲಿಂದ ಎಂಟತ್ತು ಮೈಲಿಯಿಂದಾಚೆ ಹಲವು ಸಣ್ಣ ಲಾಡ್ಜ್ ಗಳು ಇವೆ, ನೀವು ಬಯಸಿದರೆ ಅಲ್ಲಿಗೆ ಹೋಗೋಣ" ಎಂದ. ಸಂದರ್ಶನದ ನಿಗದಿತ ಸಮಯ ಹತ್ತಿರಾಗುತ್ತಿತ್ತಾದ್ದರಿಂದ ಬೇಡ ಇಲ್ಲಿಯೇ ಇಳಿಯುತ್ತೇನೆಂದೆ. ಆಟೋದವನಿಗೆ ದುಡ್ಡನ್ನಿತ್ತು ಆ ಹೋಟೆಲ್ ನೊಳಗೆ ನಡೆದೆ. "3500/- ರೂಪಾಯಿಯ ಡಿಲಕ್ಸ್ ರೂಮ್ ಮಾತ್ರ ಖಾಲಿಯಿದೆ" ಎಂದ ಹೋಟೆಲ್ ನ ಮ್ಯಾನೇಜರ್. ನನ್ನಲ್ಲಿದ್ದ ಹಣ ಅವನು ಕೇಳಿದ್ದಕ್ಕಿಂತ ಕಡಿಮೆಯಿತ್ತಾದ್ದರಿಂದ ಕೇವಲ ಸ್ನಾನ ಮತ್ತು ಬಟ್ಟೆ ಬದಲಾಯಿಸಲಷ್ಟೆ ನನಗೆ ರೂಮಿನ ಅಗತ್ಯವಿರುವುದಾಗಿ ವಿವರಿಸಿ, ಸ್ವಲ್ಪ ಸಮಯದ ಮಟ್ಟಿಗೆ ಮಾತ್ರ ನನಗೆ ಯಾವುದಾದರೂ ರೂಮನ್ನ ಕಡಿಮೆ ಬೆಲೆಗೆ ಕೊಡಿರೆಂದು ಬಿನ್ನವಿಸಿಕೊಂಡೆ. ನನ್ನ ನಮ್ರತೆಯ ಮಾತುಗಳು ಅವನಲ್ಲಿ ಯಾವುದೇ ಪರಿಣಾಮವನ್ನ ಬೀರಲಿಲ್ಲ ಅನಿಸುತ್ತಿತ್ತು. ನನ್ನನ್ನೊಮ್ಮೆ ಅಪಾದಮಸ್ತಕ ನೋಡಿ ಸಾಧ್ಯವಿಲ್ಲವೆಂದು ನಿಷ್ಠುರವಾಗಿ ಪ್ರತಿಕ್ರಿಯಿಸಿದ. ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿತ್ತು. ಮುಂದೇನು ಮಾಡುವುದೆಂದು ತಲೆ ಕೆರೆಯುತ್ತಾ ಹೊರ ಬಂದೆ. ಅಲ್ಲಿದ್ದ ಕೆಲ ಅಂಗಡಿಗಳಲ್ಲಿ ಸುತ್ತ ಮುತ್ತ ಯವುದಾದರೂ ಲಾಡ್ಜ್ ಇದೆಯೇ ಎಂದು ವಿಚಾರಿಸುತ್ತಾ ನಡೆದ ನನಗೆ ಕೆಲವರು ಇದೆಯೆಂದೂ ಕೆಲವರು ಇಲ್ಲವೆಂದೂ ಹೇಳುತ್ತಿದ್ದರಾದ್ದರಿಂದ, ಸುಮಾರು ಒಂದು ಮೈಲಿಗೂ ಉದ್ದ ಅದೇ ಧಾಟಿಯಲ್ಲಿ ಕೇಳುತ್ತಾ ಸುತ್ತ ಮುತ್ತ ನೋಡುತ್ತಾ ನಡೆದೆ. ಏನೂ ಪ್ರಯೋಜನವಾಗಲಿಲ್ಲ. ಬೆಳಗ್ಗೆಯಿಂದ ಶೌಚಾದಿ ಕ್ರಿಯೆಗಳನ್ನೊ ಮಾಡಿರಲಿಲ್ಲವಾದ್ದರಿಂದ ಅದರ ತಾತ್ಕಾಲಿಕ ಬಿಗಿ ಹಿಡಿತ ನನ್ನಿಂದ ಅಸಾಧ್ಯವೆನಿಸತೊಡಗಿತ್ತು. ಹೀಗೆ ಎಷ್ಟು ದೂರ ಅಂತ ನಡೆಯುವುದು, ಸಮಯ ಕೂಡ ಮೀರುತ್ತಿದೆ, ಎಂದೆಲ್ಲಾ ಯೋಚಿಸುತ್ತಾ ಒಂದೆಡೆ ನಿಂತು ಬಿಟ್ಟೆ. ದೈಹಿಕವಾಗಿ ಸೋತಿದ್ದ ನನ್ನಲ್ಲಿ ನನ್ನ ಮನಸ್ಸನ್ನ ಸೋಲದ ಹಾಗೆ ಕಾಪಾಡಿಕೊಳ್ಳಲಾಗಲಿಲ್ಲ. ಅಷ್ಟರಲ್ಲಾಗಲೇ ಕಣ್ಣೀರು ಜಿನುಗಲು ಅನುವಾಗುತ್ತಿತ್ತು. ನನ್ನ ಭಾಗ್ಯವನ್ನ ಹಳಿಯುತ್ತಾ, ವಾಪಸ್ಸು ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿ ಶೌಚಾದಿಗಳನ್ನು ಮುಗಿಸಿಕೊಂಡು ಶಿವಾಜಿ ಟರ್ಮಿನಸ್ ಕಡೆಗೆ ಹೋಗುವ ರೈಲನ್ನು ಹತ್ತುವುದೆಂದು ನಿರ್ಧಾರಕ್ಕೆ ಬಂದಿದ್ದೆ.

ಎಲ್ಲವೂ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗುತ್ತಿದೆಯಲ್ಲಾ, ಜೀವನದ ಒಂದು ದೊಡ್ಡ ಅವಕಾಶವನ್ನ ನಾನಾಗೇ ಕಳೆದುಕೊಳ್ಳುತ್ತಿದ್ದೇನಲ್ಲಾ ಎಂದು ಕೊರಗುತ್ತಾ, ಯಾವುದಾದರೂ ಆಟೊ ಬರಬಹುದೆಂದು ಎದುರು ನೋಡುತ್ತಾ ಭಾರವಾದ ಹೆಜ್ಜೆಗಳನ್ನಾಕುತ್ತ ನಡೆದೆ. ಆ ಮಧ್ಯೆ ಸಂಭಾವಿತರಂತೆ ಕಾಣಿಸುತ್ತಿದ್ದ ಸುಮಾರು 60-65 ವಯಸ್ಸಿನವರು ಎಂದು ಗುರುತಿಸಬಹುದಾಗಿದ್ದ ಹಿರಿಯರೊಬ್ಬರು ಎದುರಾದರು. ಮನದಲ್ಲಿ ಏನೋ ಹೊಳೆದಂತೆ ಅವರನ್ನು ನಮ್ರತೆಯಿಂದ ಕೇಳಿಯೇ ಬಿಟ್ಟೆ "ಸಾರ್ ನಾನು ಇಲ್ಲಿಗೆ ಹೊಸಬ, ನಿಮಗೆ ಇಲ್ಲಿ ಯಾವುದಾದರೂ ಲಾಡ್ಜ್ ಗೊತ್ತಿದ್ದರೆ ಹೇಳ್ತೀರಾ"?. ನನ್ನ ಅಸಹಾಯಕತೆಯನ್ನ ಬಹು ಬೇಗ ಅರಿತವರಂತೆ ನಾ ಮೊದಲು ಹೋಗಿದ್ದ ಹೋಟೆಲ್ ನ ಬಗ್ಗೆಯೇ ಹೇಳತೊಡಗಿದರು. ಅಲ್ಲಿನ ದುಬಾರಿತನದ ಬಗ್ಗೆ ನಾ ವಿವರಿಸಿದಾಗ ನನ್ನ ಅಂತರಾಳ ಅರ್ಥೈಸಿಕೊಂಡಂತೆ "ನೀ ಬಯಸುತ್ತಿರೋ ಯಾವುದೇ ಲಾಡ್ಜ್ ಇಲ್ಲಿ ಅಲಭ್ಯನಪ್ಪಾ, ಮೊದಲು ಇದೊಂದು ಕೈಗಾರಿಕಾ ಪ್ರದೇಶವಾಗಿತ್ತು ಮತ್ತು ಇತ್ತೀಚೆಗೆ ಇಲ್ಲಿ ಸ್ವಲ್ಪ ಬೆಳವಣಿಗೆ ಆಗ್ತಿದೆ ಅಷ್ಟೇ" ಎಂದು ನನಗೆ ಆ ಕ್ಷಣಕ್ಕೆ ಅನಗತ್ಯವಾಗಿದ್ದ ಏನೇನೋ ಸ್ಥಳಪುರಾಣಗಳನ್ನು ಹೇಳಹತ್ತಿದರು. ಧನ್ಯವಾದಗಳನ್ನರ್ಪಿಸಿ ಹೊರಡಲುನುವಾದ ನನ್ನನ್ನೊಮ್ಮೆ ತದೇಕವಾಗಿ ನೋಡಿ "ಎಲ್ಲಿಂದ ಬಂದಿದ್ದೀಯಪ್ಪ, ಯಾರನ್ನು ನೋಡ್ಬೇಕಿತ್ತು"? ಎಂದರು. ಅವರ ಸೌಜನ್ಯಕ್ಕೆ ಸೋತು ನಾ ಹೈದ್ರಾಬಾದ್ನಿಂದ ಬಂದಿದ್ದೇನೆಂದೂ ಇಲ್ಲಿಗೆ ಬಂದಿರುವ ಕಾರಣವನ್ನೂ ಪ್ರವರದಂತೆ ಒಪ್ಪಿಸಿದೆ. ಅಷ್ಟಕ್ಕಾಗಲೇ ಅವರ ಕಣ್ಣಲ್ಲಿ ಮಿಂಚೊಂದು ಹೊಳೆದಂತೆ "ನುವ್ವು ಹೈದ್ರಾಬಾದ್ನುಂಚಿ ವಚ್ಚ್ಯಾವಾ, ಕೊಂಚ ನಾ ಬಿಡ್ಡಕೀ ಫೋನ್ ಚೆಯ್ಯಾಲಿ, ನಾತೊ ರಾ"? ಎಂದು ಫೋನ್ ಬೂತ್ ನೆಡೆಗೆ ನನ್ನ ಕರೆದೊಯ್ದರು. ನಾನು ಅವಾಕ್ಕಾದವನಂತೆ ಅವರನ್ನು ಹಿಂಬಾಲಿಸಿದೆ. ನಾನು ತೆಲುಗಿನವನು ಎಂದು ಅಷ್ಟೊಂದು ಖುಷಿಯಾದರೋ ಏನೋ ಅನಿಸಿತ್ತು. ನನಗೋ ತೆಲುಗು ನಿರರ್ಗಳವಾಗಿ ಮಾತಾಡಲು ಬರುತ್ತಿರಲಿಲ್ಲ. ಸಮಯ ಬೇರೆ ಮೀರುತ್ತಿದೆ, ಕಿಬ್ಬೊಟ್ಟೆಯಲ್ಲಿ ತೀವ್ರ ಒತ್ತಡ ಬೇರೆ, ಈ ಮನುಷ್ಯ ಏಕೆ ನನಗೆ ಕಾಯಲಿಕ್ಕೆ ಹೇಳಿದ್ದಾರೋ ಗೊತ್ತಾಗದೆ ತೀವ್ರವಾಗಿ ಚಡಪಡಿಸತೊಡಗಿದೆ.

"ಹೂಂ.. ಹೇಳೊ.. ಕೇಳಿಸ್ತಿದೆ, ಎಷ್ಟು? ಹತ್ತು ಗಂಟೆಗಾ? ಸರಿ ಬರ್ತೀನಿ" ಎಂದು ಫೋನ್ ನಲ್ಲಿ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡತೊಡಗಿದ ಅವರನ್ನು ಕಂಡು ನನಗೆ ಆಶ್ಚರ್ಯ,ಆನಂದ ಎಲ್ಲವೂ ಆಗತೊಡಗಿತ್ತು ಧರ್ಮ ಸಂಕಟದ ಜೊತೆ ಜೊತೆಗೆ. ಫೋನಾಯಿಸಿ ನನ್ನೆಡೆಗೆ ಬಂದ ಆ ಹಿರಿಯರನ್ನು "ಸಾರ್, ನೀವು ಕನ್ನಡದವರಾ"? ಎಂದೆ. "ಅರೆ, ಇದೇನಪ್ಪಾ ಇದು, ನಿನಗೆ ಕನ್ನಡ ಬರುತ್ತಾ"? ಅಂದರು. "ನಾನು ಕನ್ನಡದವನೇ ಸಾರ್" ಎಂದೆ ಹೆಮ್ಮೆಯಿಂದ. "ಹೌದಾ, ಮತ್ತೆ ಹೈದ್ರಾಬಾದ್ನಿಂದ ಬಂದೆ ಅಂತ ಅಂದೆ ನೀನು"? ಎಂದರು. "ಹೌದು ಸಾರ್ ನಾನು ಅಲ್ಲಿ ಕೆಲಸ ಮಾಡ್ತಿದ್ದೀನಿ, ಅಲ್ಲಿಂದಾನೆ ಇಲ್ಲಿಗೆ ಬಂದೆ" ಎಂದೆ.
"ಅಯ್ಯೋ ದೇವರೇ, ಇವನು ನಮ್ಮವನು ಬೇರೆ.. ಇವನಿಗೆ ಇಲ್ಲಿ ನಾನು ಹೇಗೆ ಸಹಾಯ ಮಾಡ್ಲಪ್ಪಾ"? ಎಂದು ಏನೇನೋ ನನಗೂ ಕೇಳಿಸುವಂತೆ ತಮ್ಮೊಳಗೇ ಗೊಣಗಿಕೊಳ್ಳತೊಡಗಿದರು. "ಸಾರ್, ನಿಮ್ದು ಯಾವೂರು"? ಎಂದೆ.
"ನಂದು ದೊಡ್ಡ ಕಥೇನಪ್ಪಾ.. ಹುಟ್ಟಿ ಬೆಳೆದದ್ದೆಲ್ಲಾ ಬೆಂಗ್ಳೂರೆನೆ, ಹೊಟ್ಟೆಪಾಡಿಗಾಗಿ ದೇಶ ಎಲ್ಲಾ ಸುತ್ತಾಡಿ ಸದ್ಯ ಈಗ ಇಲ್ಲಿರೋ ಮಗನ ಮನೇಲಿ ಇದ್ದೀನಿ. ನಂದು ಅಂತ ಹೇಳ್ಕೊಳೋಕೆ ಬೆಂಗ್ಳೂರಲ್ಲಿ ಏನೂ ಇಲ್ಲ" ಎಂದರು.
"ಮತ್ತೆ, ಅಷ್ಟು ಚೆನ್ನಾಗಿ ತೆಲುಗು ಮಾತಾಡ್ತಿದ್ರಿ"? ಅಂದೆ. "ಹೇಳಿದ್ನಲ್ಲಾ.. ನಾನು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ತಿರುಗಿದ್ದೀನಿ ಅಂತ, ನೀನು ಯಾವ ರಾಜ್ಯದಿಂದ ಬಂದಿದ್ರೂ ಬಹುಶಹ ನಾನು ಆ ರಾಜ್ಯದ ಭಾಷೆ ಮಾತಾಡ್ತಿದ್ದೆ ಅನಿಸುತ್ತೆ" ಎಂದರು.

ಅವರ ವಿಶ್ವಮಾನವ ಉದಾರತೆಯ ಆಲೋಚನೆಗೆ ನಾ ಮರುಳಾದೆ. ನಾ ತೆಲುಗಿನವನೇನೋ ಎಂದುಕೊಂಡು ನನ್ನ ಮೇಲೆ ವಿಶೇಷ ಮುತುವರ್ಜಿ ವಹಿಸುತ್ತಿದ್ದರೆಂದು ಆಲೋಚಿಸಿದ ನನ್ನ ಸಂಕುಚಿತ ಮನಸ್ಸಿಗೆ ಕಸಿವಿಸಿಯಾಯಿತು.
"ನೀನು ಸ್ನಾನ ಮಾಡಿ, ಬಟ್ಟೆ ಬದಲಿಸಿಕೊಂಡ್ರೆ ಸಾಕೇ"? ಎಂದರು. ಭಾವ ಶೂನ್ಯದಲ್ಲೂ ಭರವಸೆ ಪುಟಿದಂತಾಯ್ತು. ತತ್ ಕ್ಷಣವೇ "ಹಾ...ಅಷ್ಟು ಸಾಕು ಸಾರ್" ಎಂದೆ ತಡವರಿಸುತ್ತಾ. ಬಾ ನನ್ನೊಟ್ಟಿಗೆ ಎಂದವರೇ ದಾಪುಗಾಲನ್ನಿಡುತ್ತಾ ಎತ್ತಲೋ ನಡೆಯಲನುವಾದರು. ಸುಮಾರು ಆರೇಳು ನಿಮಿಷಗಳು ಅವರ ಹಿಂದೆ ಅವರನ್ನನುಸರಿಸಿ ನಡೆದೆ. ಆರೇಳಂತಸ್ತಿನ ಅಪಾರ್ಟ್ಮೆಂಟೊಂದರ ಒಳಗೆ ಹೋಗುತ್ತಲಿದ್ದ ಆ ಹಿರಿಯರ ಹಿಂದೆ ಅಂಜುತ್ತಲೇ ನಡೆದೆ.
ಲಿಫ್ಟಿನ ಒಳಗೆ ಹೋದವರೇ ನನ್ನನ್ನು ಸೇರಿಕೊಳ್ಳೆಂದು ಹೇಳಿದರು. ಮಂತ್ರ ಮುಗ್ಧನಾದವನಂತೆ 'ಹೂಂ' ಎಂದು ಒಳ ನಡೆದೆ. ನಾಲ್ಕನೇ ಅಂತಸ್ತಿನಲ್ಲಿದ್ದ ಒಂದು ಕೊಠಡಿಯ ಬಾಗಿಲನ್ನು ತೆರೆದು 'ಒಳಗೆ ಬಾ' ಎಂದರು.
ಮೂರು ಶಯನ ಕೋಣೆಯ, ವಿಸ್ತಾರವಾದ ಅಂಗಳದ, ಅದ್ದೂರಿಯಿಂದಲೇ ಕೂಡಿತ್ತೆಂದು ಹೇಳಬಹುದಾದ ಸಂಸಾರೊಂದಿಗರ ಭವ್ಯವಾದ ಮನೆ ಅದು. ಅಷ್ಟರಲ್ಲಾಗಲೇ ನನಗೆ ಎಲ್ಲವೂ ಅರ್ಥವಾಗತೊಡಗಿತ್ತು. ತಮ್ಮ ಮನೆಗೇ ನನ್ನನ್ನು ಕರೆದುಕೊಂಡುಬಂದಿದ್ದಾರೆಂದು.

"ಅಲ್ಲಿದೆ ನೋಡಪ್ಪಾ ಬಾತ್ರೂಮ್, ಸ್ವಲ್ಪ ಬೇಗ ಎಲ್ಲ ಮುಗಿಸಿಕೊಂಡು ಬಾರಪ್ಪಾ.. ನನಗೆ ಹೊರಗೆ ಸ್ವಲ್ಪ ಕೆಲ್ಸ ಇದೆ" ಎಂದ ಆ ಹಿರಿಯರ ಮಾತಲ್ಲಿ ದೈನ್ಯತೆ ಇತ್ತು. ಅಂತರ್ಮುಖಿಯಾದ ನಾನು ಸ್ವಲ್ಪ ಅಳುಕಿನಿಂದಲೇ ನನ್ನೆಲ್ಲ ಕೆಲಸಗಳನ್ನು ತ್ವರಿತವಾಗೇ ಮುಗಿಸಿಕೊಂಡು ಬಂದೆ. "ನೀನು ಕೆಲಸದ ಸಂದರ್ಶನಕ್ಕಾಗಿ ಹೋಗ್ತಿರೋದು ಅಂತ ಹೇಳ್ತಿದ್ದೆ ಅಲ್ಲವೇ? ಸರಿ ಹಾಗಾದರೆ.. ಅಲ್ಲಿ ನೋಡು ದೇವರ ಮನೆ ಇದೆ, ಎರಡು ಗಂಧದ ಕಡ್ಡಿ ಹಚ್ಚಿ ಕೈ ಮುಗಿದು, ಅಲ್ಲಿರೋ ಪ್ರಸಾದನೂ ಸ್ವಲ್ಪ ತಗೋಳಪ್ಪ.. ಆ ದೇವರು ಒಳ್ಳೆಯವರನ್ನ ಕೈ ಬಿಡೊಲ್ಲಾ" ಅಂದರು.
ನನಗಾಗಲೇ ದೇವರನ್ನು ಕಂಡಷ್ಟೇ ಆನಂದ, ಉದ್ವೇಗ ಎಲ್ಲವೂ ಸಮ್ಮಿಳಿತಗೊಂಡು ಅಶ್ರುಗಳು ಹನಿಯಿಕ್ಕಲಾರಂಭಿಸಿದವು. "ಈಗ ಹೊರಡೋಣವೇ.. ನಾನು ಸ್ವಲ್ಪ ತುರಾತುರಿಯಲ್ಲಿದ್ದೇನಾದ್ದರಿಂದ ಪ್ರಯಾಣ ಮಾಡಿ ಸುಸ್ತಾಗಿರೊ ನಿನಗೆ ಇನ್ನೂ ಸ್ವಲ್ಪ ಹೊತ್ತು ವಿಶ್ರಾಂತಿ ತಗೋ ಎಂದು ಹೇಳಲಾಗ್ತಿಲ್ಲ" ಎಂದು ಮರುಗತೊಡಗಿದರು.
"ನನಗೂ ಹೊತ್ತಾಗ್ತಿದೆ ಸಾರ್, ಬನ್ನಿ ಹೋಗೋಣ"ವೆಂದೆ ಉಗುಳನ್ನು ನುಂಗುತ್ತಾ. ಅಲ್ಲಿಂದ ಹೊರನಡೆದು ಮತ್ತೆ ಆ ಟೆಲೆಫೋನ್ ಬೂತ್ ಹತ್ತಿರ ಬಂದೆವು. "ನೀನು ಸೀಮೆನ್ಸ್ ಕಂಪನಿಗಲ್ವಾ ಹೋಗ್ತಿರೋದು, ನಾನೂ ಆ ಕಡೆನೇ ಹೋಗ್ಬೇಕು. ಸ್ವಲ್ಪ ಫೋನ್ ಮಾಡಿ ಬರ್ತೀನಿ ತಡಿ" ಎಂದವರೇ ಫೋನ್ ಎತ್ತಿಹಿಡಿದು "ಇಲ್ಲ ಕಣೋ.. ಹಾಗಲ್ಲಾ ಕಣೋ.. ಅಯ್ಯೋ ನಿನಗೆ ಹೇಗೆ ಹೇಳಲಿ..." ಎಂದು ತನ್ನ ಮಗನನ್ನು ಸಮಾಧಾನಿಸುತ್ತಿದ್ದರು. ಮಾತು ಮುಗಿಸಿಬಂದ ಅವರ ಮುಖಾರವಿಂದ ಪೇಲವವಾಗಿತ್ತು.

"ಏನಾಯ್ತು ಸಾರ್"? ಅಂದೆ. "ಅಯ್ಯೋ ಬಿಡಪ್ಪಾ ಅದೊಂದು ಕಥೆ.. ಸೊಸೆ ಹೆರಿಗೆಗಾಗಿ ಆಸ್ಪತ್ರೆಯಲ್ಲಿದ್ದಾಳೆ, ಮಗನೂ ಅಲ್ಲೇ ಇದ್ದಾನೆ. ನಾನು ಅವರಿಗೆ ದಿನವೂ ಅಡಿಗೆ ಮಾಡಿ ಹತ್ತು ಗಂಟೆಯ ಒಳಗೆ ತೆಗೆದುಕೊಂಡು ಹೋಗ್ಬೇಕು. ಇವತ್ತು ಸ್ವಲ್ಪ ತಡವಾಗಿದ್ದಕ್ಕೆ ಅಪ್ಪ ಎಂತಲೂ ನೋಡದೆ ನನ್ನ ಮಗ ಬೈಯುತ್ತಿದ್ದ ಅಷ್ಟೇ.." ಎಂದರು. ಅವರ ಕಣ್ಣು ತೇವವಾಗಿತ್ತು. "ವಯಸ್ಸಾದವರು ಮಕ್ಕಳ ಮನೆಯಲ್ಲಿ ಇರಬಾರ್ದಪ್ಪಾ.." ಎಂದೆಲ್ಲಾ ಮರುಗತೊಡಗಿದರು.
"ಅಯ್ಯೋ.. ಎಂತಹ ಪ್ರಮಾದವಾಯ್ತು ಸಾರ್.. ನನ್ನಿಂದಾಗಿ ನೀವು ಬೈಸಿಕೊಳ್ಳಬೇಕಾಗಿ ಬಂತು.. ನಿಮ್ಮ ಋಣ ನಾ ಹೇಗೆ ತೀರಿಸಲಿ ಸಾರ್.. ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ.." ಎನ್ನುತ್ತಾ ಅವರ ಕಾಲಿಗೆರಗಲು ಪ್ರಯತ್ನಿಸಿದಾಕ್ಷಣ ನನ್ನ ತೋಳನ್ನಿಡಿದು, "ನಾನೂ ಕೂಡ ನಿನ್ಹಾಗೇ ನಿನ್ನ ವಯಸ್ಸಲ್ಲಿ ಇಂತಹ ಸನ್ನಿವೇಶಗಳನ್ನು ಎದುರಿಸಿದ್ದೇನಪ್ಪಾ.. ಜೀವನ ಹಾಗೇನೇ..ಯಾವುದಕ್ಕೂ ಎದೆಗುಂದಬಾರದು.. ನಿನ್ನನ್ನು ಮೊದಲು ಮಾತಾಡಿಸಿದ ತತ್ ಕ್ಷಣವೇ ನಿನ್ನ ಪ್ರಾಮಾಣಿಕತೆ ಅರ್ಥವಾಗಿತ್ತು. ನಿನ್ನನ್ನು ನಾನು ಅಸಹಾಯಕನಾಗಿ ಬಿಡಬಾರದು ಅಂತಲೇ ಈ ಒಂದು ಸಣ್ಣ ಸಹಾಯ ಅಷ್ಟೇ.. ನನಗೋ ಮಕ್ಕಳು ಸೊಸೆಯರ ದೈನಂದಿಕ ಜಂಜಾಟ ಹೊಸದಲ್ಲ.. ನೀನು ನಿನ್ನ ಜೀವನ ರೂಪಿಸಿಕೊಳ್ಳೋಕೆ ಹೊರಟಿದ್ದೀಯ, ನಿನ್ನನ್ನು ನೋಡಿದರೆ ನನಗೆ ಏನೋ ಅವ್ಯಕ್ತ ಸಂತೋಷವಾಗ್ತಿದೆ..ಇವೆಲ್ಲಕ್ಕೂ ತಲೆ ಕೆಡಿಸಿಕೋಬೇಡ...ನಿನಗೆ ಒಳ್ಳೆಯದಾಗಲಿ" ಎನ್ನುತ್ತಾ ಹತ್ತಿರವೇ ಹಾದು ಬಂದ ಒಂದು ಆಟೋವನ್ನ ನಿಲ್ಲಿಸಿದರು. ಒಳಗೆ ಕುಳಿತ ಅವರು ನನ್ನನ್ನು ಒಳಗೆ ಕೂರೆಂದೂ, ದಾರಿ ಮಧ್ಯದಲ್ಲೇ ನೀನು ಹೊಗಬೇಕಿರುವ ಸ್ಥಳವಿದೆಯೆಂದೂ ಹೇಳಿದರು.

ಆರೇಳು ನಿಮಿಷಗಳ ನಂತರ "ಹಾ.. ಇದೇ ನೋಡು ಸೀಮೆನ್ಸ್ ನ ಕಚೇರಿ, ಇಲ್ಲಿ ಇಳಿದುಕೊಂಡುಬಿಡು" ಎಂದರು. ಆಟೋವಿನಿಂದ ಇಳಿದು ಅವರನ್ನೊಮ್ಮೆ ನೋಡಿ "ನಿಮ್ಮ ಉಪಕಾರ ಹೇಗೆ ತೀರಿಸಲಿ ಸಾರ್.. " ಎನ್ನುತ್ತಾ ಏನೋ ನೆನಪಾದವನಂತೆ "ಸಾರ್, ನಿಮ್ಮ ಹೆಸರು"? ಎಂದೆ. "ಗಣಪತಿ ಭಟ್" ಎಂದರು ನಗುತ್ತಾ. "ನಿಮ್ಮ ಫೋನ್ ನಂಬರ್ ಕೊಡ್ತೀರಾ.." ಎಂದೆ. "ಅಯ್ಯೋ.. ಮನೆಯಲ್ಲಿ ಫೋನ್ ಇಲ್ಲಾಪ್ಪಾ.. ಮಕ್ಕಳ ಹತ್ತಿರ ಮೊಬೈಲ್ ಫೋನ್ ಇದೆ..ನನ್ನ ಹತ್ತಿರ ಇಲ್ಲ.. ಪರವಾಗಿಲ್ಲ ಬಿಡು, ಮತ್ತೊಮ್ಮೆ ಈ ಕಡೆ ಬಂದಾಗ ಮನೆಗೆ ಬಾ.. ನನಗೆ ಹೊತ್ತಾಗ್ತಿದೆ ಬರ್ತೀನಿ..ನಿನಗೆ ಒಳ್ಳೆಯದಾಗಲೀ" ಎಂದವರೆ ಕೈ ಬೀಸುತ್ತಾ ಹೊರಟು, ಕೆಲವೇ ನಿಮಿಷಗಳಲ್ಲಿ ಮರೆಯಾಗಿಬಿಟ್ಟರು. ಅವರು ಹೋದ ದಾರಿಯ ದಿಗಂತವನ್ನೇ ನೋಡತೊಡಗಿದೆ. ಸಂದರ್ಶನಕ್ಕೆ ಇನ್ನೂ ಇಪ್ಪತ್ತು ನಿಮಿಷಗಳು ಬಾಕಿ ಇದ್ದವು. ನನಗಂತೂ ಇದೆಲ್ಲಾ ಕನಸಿನಲ್ಲಿ ನಡೆದ ಹಾಗೆ ಭಾಸವಾಗ್ತಾ ಇತ್ತು. ಯಾವುದೋ ಅಪರಿಚಿತ ಊರಿನಲ್ಲಿ ಅಸಹಾಯಕವಾಗಿ ಆಗಂತುಕನಂತೆ ತಿರುಗಾಡುತ್ತಿದ್ದ ನನ್ನ ಜಾತಿ, ಕುಲ, ಗೋತ್ರವೊಂದನ್ನೂ ಕೇಳದೆ ನನ್ನ ಅವಶ್ಯಕತೆಗಳಿಗೆ ಸತ್ಕಾಲದಲ್ಲಿ ಸ್ಪಂದಿಸಿದ ಆ ಹಿರಿಯರು ನನಗಂದು ದೇವರಂತೆಯೇ ಕಂಡಿದ್ದರು. "ದೈವಮ್ ಮಾನುಷ ರೂಪೇಣಾ" ಎನ್ನುವ ಉಕ್ತಿ ನನ್ನ ಜೀವನದಲ್ಲಿ ಸತ್ಯವಾದದ್ದಂತೂ ಸತ್ಯವಷ್ಟೇ.

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಅಗತ್ಯಕ್ಕಿಂತ ಹೆಚ್ಚಿನ ದೀರ್ಘತೆ ಕೆಲವೊಮ್ಮೆ ವಿಷಯದ ಆಶಯವನ್ನೇ ಮರೆಸಿಬಿಡುತ್ತದೆ. ಇದು ನಿಮ್ಮ ಲೇಖನವನ್ನು ಓದುವಾಗಿನ ನನ್ನ ಅನುಭವ.

ಹಾಗೇನಿಲ್ಲ ಲತೀಫ್. ಲೇಖನವನ್ನು ಓದಿದಾಗ ಈ ರೀತಿಯಾದೊಂದು ಅಭಿಪ್ರಾಯ ಮೂಡಿಬಂತು. ಸಂಪದದ ಸಹೃದಯ ಓದುಗಳಾಗಿ ಹೇಳಿದ್ದೇನೆ ಅಷ್ಟೇ.

ಮಂಜುನಾಥ್:
ಇಂತಹ ಅನುಭವ ನನಗೂ ಆಗಿದ್ದಿದೆ. ಚೆನ್ನಾಗಿ ಬರೆದಿದ್ದೀರಿ.
ಅವರನ್ನು ಮುಂದೆ ಭೇಟಿಯಾದಿರಾ? ಅದೇ ಕೊನೆ ಭೇಟಿನಾ?
ಇತೀ,
ಉಉನಾಶೆ

ಮತ್ತೊಮ್ಮೆ ಮುಂಬೈಗೆ ಹೋಗುವ ಅವಕಾಶ ಸಿಕ್ಕಿಲ್ಲ ಸಾರ್...ಅವರನ್ನು ಭೇಟಿಯಾಗುವ ಆಸೆ ಇನ್ನೂ ಜೀವಂತವಾಗಿದೆ ಅಷ್ಟೇ.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಇನ್ನು ದಾರಿಯೇ ಇಲ್ಲದಾಗಿದೆ ಎನ್ನುವ ಸಂದರ್ಭದಲ್ಲಿ ಸಿಗುವ ಸಹಕಾರ ನಿಜಕ್ಕೂ ದೈವಮ್ ಮಾನುಷ ರೂಪೇಣಾ ಎನ್ನುವುದನ್ನು ನೆನಪಿಗೆ ತರುತ್ತದೆ. ನೀವು ಅವರ ನಂಬರ್ ತೆಗೆದುಕೊಂಡು ಅಥವಾ ಅವರ ಮನೆಗಾದರೂ ಹೋಗಿ ಬರುವ ಮೂಲಕ.....
ಬರಹ ದೀರ್ಘವಾದರೂ ಉತ್ತಮವಾಗಿದೆ ಮಂಜುನಾಥ್.