ನಾವು ಕಳೆದುಕೊಂಡಿರುವ ಸೂಕ್ಷ್ಮಗಳು

To prevent automated spam submissions leave this field empty.

ಜನವರಿ ಬಂತೆಂದರೆ ಯಾರು ಯಾರೋ ಡೈರಿ ತಂದು ಕೊಡುತ್ತಿದ್ದರು. ಅದರಲ್ಲಿ ಜಾಸ್ತಿ ಪುಟಗಳು, ಒಂದು ದಿನಕ್ಕೆ ಒಂದು ಪುಟ ಇರುವಂಥವು ಆಯ್ದು ಒಂದೋ ಎರಡೋ ನಾನು ಇಟ್ಟುಕೊಂಡು ಉಳಿದಿದ್ದನ್ನ ಯಾರು ಕೇಳಿದರೆ ಅವರಿಗೆ ಕೊಟ್ಟು ಬಿಡುತ್ತಿದ್ದೆ. ಸಾಮಾನ್ಯವಾಗಿ ನಾನು ಉಳಿಸಿಕೊಂಡವು ಕವಿತೆ ಬರೆಯಲು ಅಥವಾ ಮನಸ್ಸಿಗೆ ಹಿಂಸೆ ತಂದ ಘಟನೆಗಳನ್ನು ಕುರಿತು ಟಿಪ್ಪಣಿ ಬರೆಯಲು ಬಳಕೆಗೆ ಬರುತ್ತಿದ್ದವು. ಥಟ್ಟನೆ ಹೊಳೆದ ಒಂದೆರಡು ಸಾಲುಗಳು ಅಲ್ಲಿ ದಾಖಲಾಗುತ್ತಿದ್ದವು. ಕವಿತೆಯಾಗುವ ಭಾಗ್ಯವಿದ್ದವು ಆಗುತ್ತಿದ್ದವು. ಕೆಲವು ಸಲ ಕವಿತೆಗೆ ವಸ್ತುವಲ್ಲ ಇದು, ಪ್ರಬಂಧಕ್ಕೆ ಸಮ ಅನ್ನಿಸಿದರೆ ಅದು ಅಲ್ಲೇ ಪ್ರಬಂಧವಾಗಿ ಬೆಳೆಯುತ್ತಿತ್ತು; ಅಥವ ಕಥೆಯಾದರೆ ಕಥೆಯಾಗಿ. ಮೊದಲು ಹೊಳೆದ ಸಾಲು ಯಾವ ಸಂದರ್ಭದಲ್ಲಿ ಮನಸ್ಸಿನಲ್ಲಿ ಮೂಡಿದ್ದೆಂದು ನೆನಪಲ್ಲಿ ಇಲ್ಲದಿದ್ದರೆ ಮುಂದೆ ಹೋಗದೆ ಹಠ ಮಾಡಿಕೊಂಡು ಕೂರುತ್ತಿತ್ತು. ಒಂದು ಸಾಲು ಎರಡು ಸಾಲುಗಳಲ್ಲಿ ನಿಂತುಹೋದವು ಕೆಲವಕ್ಕೆ ಮುಂದೆಂದಾದರೂ ಬೆಳೆಯುವ ಭಾಗ್ಯ ದೊರಕಿದ್ದು ಉಂಟು. ಉಳಿದವುಗಳಲ್ಲಿ ಹಾಗೇ ಕುಟುಕು ಜೀವ ಹಿಡಿದುಕೊಂಡಿರೋವು ಕೆಲವು, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಕಾಟು ಹಾಕಿಸಿಕೊಂಡು ಸತ್ತುಬಿದ್ದ ಸಾಲುಗಳು ಕೆಲವು ಆ ಹಳೆಯ ಡೈರಿಗಳ ತೆರೆದರೆ ನಮ್ಮೂರ ದಾಸನ ಕೆರೆಯಲ್ಲಿನ ಹಳೆಯ ವಕ್ರವಾದ ಗೋರಿಕಲ್ಲುಗಳ ಹಾಗೆ ಕಾಣುತ್ತವೆ. ಯಾವಾಗಾದರೊಮ್ಮೆ ಈ ಹಳೆಯ ಡೈರಿಗಳನ್ನು ತೆರೆದು ಮುಂದಿಟ್ಟುಕೊಂಡು ಕೂರುತ್ತೇನೆ. ಕೆಲವೊಮ್ಮೆ ಅಲ್ಲಿ ನಮೂದಿಸಿದ ಹಳೆಯ ತಲ್ಲಣಗಳು ಅದೇನು ಇವತ್ತಿನ ಘಟನೆಯೆಂಬಂತೆ ಇನ್ನೂ ಜೀವಂತವಾಗಿಯೇ ಇರುವುದು ಏನೂ ಬದಲಾಗುವುದಿಲ್ಲವೆಂಬ ಸಿನಿಕತನಕ್ಕೆ ನೀರೆರೆದು ಪೋಷಿಸಿ ಮತ್ತಷ್ಟು ಸಿನಿಕತನದ ಹುಟ್ಟಿಗೆ ಕಾರಣವಾಗುವುದೇನೋ ಎನ್ನುವ ಹೊಸ ತಲ್ಲಣಕ್ಕೆ ಕಾರಣವಾಗುತ್ತದೆ.

ಕಂಪ್ಯೂಟರ್ ಬಸಲು ಶುರುಮಾಡಿದ ಮೇಲೆ ಡೈರಿಗಳಲ್ಲಿ ಬರೆಯುವುದು ಕಡಿಮೆಯಾಗಿದೆ. ಆದರೂ ನನಗೆ ಹಾಗೆ ನೋಟುಬುಕ್ಕುಗಳಲ್ಲಿ, ಹಳೆಯ ಡೈರಿಗಳಲ್ಲಿ ಏನಾದರೂ ಬರೆಯುವುದನ್ನು ಮತ್ತೆ ಆಚರಣೆಗೆ ತರಬೇಕೆಂದು ತುಂಬ ಸಲ ಅನ್ನಿಸಿದ್ದುಂಟು. ಇಂಥ ಒಂದು ಪಕ್ಕಕ್ಕೆಸೆದ ಒಂದು ಡೈರಿಯನ್ನು ಮೊನ್ನೆ ಭಾನುವಾರ ತೆರೆದು ನೋಡಿಕೊಂಡು ಕೂತಿದ್ದೆ. ಜೀರ್ಣಾವಸ್ಥೆಗೆ ತಲುಪಿದ್ದ ಅದರಲ್ಲಿ ಇನ್ನೂ ಕೆಲವು ಹಾಳೆಗಳಿದ್ದವು. ಬಳಸಬಹುದಾದ ಪರಿಸ್ಥಿತಿಯಲ್ಲಿ ಇರಲಿಲ್ಲ ಅಷ್ಟೆ. 22.3.1992 ಎಂದು ದಿನಾಂಕ ನಮೂದಿಸಿ ಬರೆದಿದ್ದ ಒಂದು ಟಿಪ್ಪಣಿ ಅಲ್ಲಿತ್ತು. ಓದಿದೆ. ಅದನ್ನು ನೀವೂ ಓದಿದರೆ ಚೆನ್ನ ಅನ್ನಿಸಿದ್ದರಿಂದ ಪ್ರಕಟಿಸುತ್ತಿದ್ದೇನೆ. ಅದು ಇಲ್ಲಿದೆ, ಓದಿ: “ ‘At some moment you must stop life and look in to it’ - Raja Rao. “ನಿನ್ನೆ ರಾತ್ರಿ ಟಿ.ವಿ ಯಲ್ಲಿ ವರ್ಲ್ಡ್ ದಿಸ್ ವೀಕ್ ಕಾರ್ಯಕ್ರಮ ನೋಡಿಕೊಂಡು ಕೂತಿದ್ದೆ. ನನ್ನ ಜೊತೆ ನನ್ನ ಮಗಳೂ ಇದ್ದಳು. ಹತ್ತೂವರೆ ಆದರೂ ಇನ್ನೂ ನಿದ್ದೆ ಮಾಡದೆ ಅವಳು ನನ್ನ ಏಕಾಗ್ರತೆಗೆ ಭಂಗ ತರುವ ಮಾತುಗಳನ್ನಾಡುತ್ತ ಕೂತಿದ್ದಳು. ಅವತ್ತಿನ ಕಾರ್ಯಕ್ರಮದ ಬಹುಪಾಲು ದಕ್ಷಿಣ ಆಫ್ರಿಕದಲ್ಲಿ ನಡೆದ ರೆಫರೆಂಡಮ್ಮಿನಲ್ಲಿ ಡಿ. ಕ್ಲಾರ್ಕ್ ತರಲಿರುವ ಸುಧಾರಣೆಗಳಿಗೆ ಬೆಂಬಲ ದೊರಕಿದ್ದು, ಅದರ ಬೆನ್ನಲ್ಲಿ ಬಿಳಿಯರು ಕರಿಯರ ನಡುವೆ ಹೊಡೆದಾಟ ಜೋರಾಗಿರುವುದು ಮೊದಲಾದವುಗಳ ಬಗ್ಗೆ ಇತ್ತು. ಬಿಳಿಯರು ಕರಿಯರು ಪ್ರತ್ಯೇಕ ಮೆರವಣಿಗೆಗಳನ್ನು ತೆಗೆದಿದ್ದರು. ಅವರ ನಡುವೆ ತೀವ್ರ ಘರ್ಷಣೆ ಹುಟ್ಟಿಕೊಂಡಿತ್ತು. ಒಂದು ಓಡುತ್ತಿದ್ದ ರೈಲಿನಿಂದ ಬಿಳಿಯರು ಕರಿಯರನ್ನು ಹೊರಕ್ಕೆ ಎಳೆದೆಳೆದು ಬಿಸುಟಿದ್ದರು. ಕರಿಯರನೇಕರು ದಾರುಣವಾದ ಸಾವನ್ನಪ್ಪಿದ್ದರು. ಹಾಗೆ ಸತ್ತ ಕರಿಯನೊಬ್ಬನ ಹೆಣ ಕಂಡು ನನ್ನ ಹತ್ತು ವರ್ಷದ ಮಗಳು ಕೇಳಿದ ಪ್ರಶ್ನೆ ಇದು: “ಅಪ್ಪಾ, ಅವರೇಕೆ ಹಾಗೆ ಕೊಂದುಕೊಳ್ಳುತ್ತಿದ್ದಾರೆ? ಅವರಿಗೆ ಇದರಿಂದ ಏನು ಸಿಗುತ್ತೆ?” “ಏನೆಂದು ಉತ್ತರ ಕೊಡಲಿ? ಇಂತಹ ಉತ್ತರಿಸಲಾಗದ ಸ್ಥಿತಿಯೇ ನನ್ನಿಂದ ಮರ್ತ್ಯವ ಕೊಡು ಮತ್ತೆ ಎಂದು ಏಸು ದೇವರನ್ನು ಬೇಡುವ ಕವಿತೆಯನ್ನು ಬರೆಸಿರಬೇಕು. “ರಾಜಾರಾಯರ ಒಂದು ವಾಕ್ಯವನ್ನು ಈ ಟಿಪ್ಪಣಿಯ ಮೊದಲಲ್ಲಿ ಉದ್ಧರಿಸಲಾಗಿದೆ. ಯಾವ ಪುಸ್ತಕದ್ದೆಂದು ಗೊತ್ತಿಲ್ಲ. ಈ ಸಾಲುಗಳನ್ನು ಮಾತ್ರ ಎಲ್ಲಿಯೋ ಓದಿದ್ದೆ. ವರ್ಲ್ಡ್ ದಿಸ್ ವೀಕ್ ಕಾರ್ಯಕ್ರಮ ನೋಡಿದ ಹಿನ್ನೆಲೆಯಲ್ಲಿ ಗದ್ದಲವಿಡಿದ ಮನಸ್ಸಿನಲ್ಲಿ ನಮಗೀಗ ವ್ಯವಧಾನವಿಲ್ಲ. ಕೇಳಲೂ ಇಲ್ಲ, ಒಳಗಿನೊತ್ತಾಯವನ್ನು ಆಡಲು ಮಾತೇ ಇಲ್ಲ.

ಜೊತೆಗೆ ಕೇಳುವವರು ಯಾರು ಎನ್ನುವ ಸಂಶಯ ಬೇರೆ. ಎಲ್ಲೋ ಒಂದು ಕಡೆ ಒಂದು ಬಗೆಯ ಕೈಲಾಗದ ಸ್ಥಿತಿಗೆ ನಾವು ತಲುಪಿಬಿಟ್ಟಿದ್ದೇವೇನೋ? ಇದರ ಜೊತೆಗೆ ನಮ್ಮ ಮನಸ್ಸುಗಳು ಗದ್ದಲದಿಂದ ತುಂಬಿಹೋಗಿವೆ. ಗದ್ದಲ ಇಡಿಕಿರಿದ ಮನ/ಮೌನಕ್ಕಾವ ಪರಿಭಾಷೆ ಎಂದು ನಾನೇ ಬರೆದೆ. ನನ್ನ ಬಗ್ಗೆ ತಾನೆ ಅನ್ನಿಸಿದೆ. “ಮನಸ್ಸುಗಳು ಗದ್ದಲದಿಂದ ತುಂಬಿಹೋಗಿವೆ. ಮೌನವಿಲ್ಲಿಲ್ಲ. ಮೌನದಲ್ಲಿ ವಿಕಾಸಗೊಳ್ಳುವ ಸಂಗೀತದ ಮಾರ್ದವತೆಯಿಲ್ಲ. ಮೌನಕ್ಕೆ ನಮ್ಮನ್ನು ದೂಡಿ ಅನುಸಂಧಾನಕ್ಕೆ ನೇರ್ಪುಗೊಳಿಸುವ ಓದು ಇಲ್ಲ. ಬದುಕನ್ನು ನೋಡುವ ನೋಟವೂ ಇಲ್ಲ. ನಮ್ಮ ಬದುಕಿನ ಗತಿ ವಿಧಾನಗಳನ್ನು ನೋಡಿಕೊಳ್ಳುವ ಕಾಲಾವಕಾಶವನ್ನು ದಕ್ಕಿಸಿಕೊಳ್ಳದೆ ಹೋಗಿದ್ದೇವೆ. ಅಂದ ಮೇಲೆ ನಮಗೆ ಸಂಗೀತವೋ, ಸಾಹಿತ್ಯವೋ ಲೌಕಿಕ ಲಾಭವಿರದ ತೀರಾ ಯಃಕಶ್ಚಿತ್ ವಿಷಯಗಳಷ್ಟೇ. “ಇಂತಹ ಜೀವನವು ಒಂದು ಕ್ರಮವಾಗಿ ಹೋಗುತ್ತಿದೆ ಎಂಬುದೇ ಆತಂಕವುಂಟುಮಾಡುವ ಸಂಗತಿ. ನಾವೀಗಲಾದರೂ ಥಟ್ಟನೆ ಬ್ರೇಕನ್ನೊತ್ತಿ ನಿಲ್ಲಬೇಕು. ಇದು ಸರಿಯಾದ ವೇಳೆ: ನಮ್ಮ ಬದುಕನ್ನು ನಿಲ್ಲಿಸಿ ಅದರ ಒಳಗಿಣುಕಿ ನೋಡಲು, ನಮ್ಮ ಬಗ್ಗೆ ನಾವೇ ಪ್ರಶ್ನಿಸಿಕೊಳ್ಳಲು.”ಇದಿಷ್ಟು ಟಿಪ್ಪಣಿ. ಉಳಿದದ್ದು ನೀವು ಹೇಳಬೇಕು.

ಆರ್. ವಿಜಯರಾಘವನ್‌ 24.08.2006

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

‘At some moment you must stop life and look in to it’ - Raja Rao.
ಓದಿ ಒಂದು ವಿಷಯ ನೆನಪಾಯಿತು . ಬರೆಯುತ್ತಿದ್ದೇನೆ . ಪ್ರಸ್ತುತವೋ ಅಪ್ರಸ್ತುತವೋ ಗೊತ್ತಿಲ್ಲ . ಹಿಂದೆ ಬುದ್ಧನ ಕುರಿತಾದ , ಕಾವ್ಯಾಲಯ , ಮೈಸೂರು ಪ್ರಕಟಿಸಿದ ವಿಜ್ಜಾಚರಣಸಂಪನ್ನ ಎಂಬ ಪುಸ್ತಕದಲ್ಲಿ ಈ ವಿಷಯ ಇತ್ತು.

ಅಂಗುಲಿಮಾಲ ಒಬ್ಬ ಕ್ರೂರಿ ದರೋಡೆಕೋರ . ಜನರನ್ನು ಅಡ್ಡಗಟ್ಟಿ ದೋಚುತ್ತಿದ್ದ , ಕೊಲ್ಲುತ್ತಿದ್ದ , ಅವರ ಕೈಬೆರಳುಗಳ ಮಾಲೆಯನ್ನು ಧರಿಸಿದ್ದ.
ಒಂದು ಸಲ ಬುದ್ಧನು ಅವನ ಹತ್ತಿರದಿಂದ ಹಾದು ಹೋಗುತ್ತಿದ್ದ . ಅಂಗುಲಿಮಾಲನನ್ನು ನೋಡಿದವರು ಓಡಿಯಾದರೂ ಹೋಗುತ್ತಿದ್ದರು , ಇಲ್ಲವೆ ಕಾಲಿಗಾದರೂ ಬೀಳುತ್ತಿದ್ದರು . ಬುದ್ಧನಾದರೋ ತನ್ನ ಪಾಡಿಗೆ ತಾನು ತನ್ನ ಗತಿಯಲ್ಲೇ ಸಾಗುತ್ತಿದ್ದ . ಆಗ ಅಂಗುಲಿಮಾಲ ಕೂಗಿದ.
'ಯಾರದು? ನಿಲ್ಲು!'

ಆಗ ಬುದ್ಧ ಹೇಳಿದ . 'ನಿಲ್ಲಬೇಕಾದವನು ನಾನಲ್ಲ , ನೀನು . ಪಾಪದ , ಅಪರಾಧದ ವಿಷವರ್ತುಲದಲ್ಲಿ ಸಿಕ್ಕು ಚಲಿಸುತ್ತಿದ್ದೀಯ . ನೀನು ಧರ್ಮದಲ್ಲಿ ನಿಲ್ಲಬೇಕಾಗಿದೆ.'
ಆಗ ಅಂಗುಲಿಮಾಲನು ತನ್ನ ತಪ್ಪನ್ನರಿತು ತನ್ನನ್ನು ಬದಲಿಸಿಕೊಂಡು ಅವನ ಶಿಷ್ಯನಾದನು . ಅವನನ್ನು ತಿರಸ್ಕರಿಸಿದ ಸಮಾಜವು ಅವನನ್ನು ಸ್ವೀಕರಿಸಿತು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ವಿಜಯರಾಘವನ್, ನೀವು ಬರೆದಿರುವುದು ಬರಿಯ ಒ೦ದು ಡೈರಿಯ ಕಥೆಯಲ್ಲ. ಅದು ನಮ್ಮ ಬದುಕಿನ ಅತ್ಯುತ್ತಮ ಕ್ಷಣಗಳ ಬಗ್ಗೆಯೂ ಹೌದು!

ರಾತ್ರಿ ಡೈರಿ ಬರೆಯಲೂ ಅಸಾಧ್ಯವಾಗುವಷ್ಟು ಸುಸ್ತಾಗಿದ್ದರೆ, ಆಗ ಆ ಸುಸ್ತಿನ ಬಗ್ಗೆ ಡೈರಿ ಬರೆಯಬೇಕು ನೋಡಿ. ಸುಸ್ತೆಲ್ಲ ಮಾಯ! ಬರೆಯದಿದ್ದರೆ ನಮ್ಮ ಸಾಧನೆಗಿ೦ತಲೂ ಕನಸುಗಳದ್ದೇ ಮೇಲುಗೈ ಆಗುತ್ತದೆ. ಅ೦ದುಕೊ೦ಡ ಸಣ್ಣಪುಟ್ಟ ಕೆಲಸಗಳನ್ನು ಮಾಡದಿದ್ದರೆ ದೀರ್ಘ ನರಳಾಟ ಕೆಲವರನ್ನು ಡಿಪ್ರೆಷನ್‍ಗೆ ತಳ್ಳಿದರೆ ಮತ್ತೆ ಕೆಲವು ಭಾಗ್ಯವ೦ತರಲ್ಲಿ ಅದು ಪಾಪಪ್ರಜ್ನೆ ಹುಟ್ಟುಹಾಕಿ, ಪ್ರತಿಕ್ಷಣದ ಸುದೀರ್ಘ ಅನುಭವವನ್ನು ದಕ್ಕಿಸಿಕೊಡುತ್ತದೆ. ಅದು ಡೈರಿ ಬರೆವ ಮನಶ:ಕ್ತಿಯ ಮಾಯೆ!

ರಾತ್ರಿಯ ನೀರವ, ಡೈರಿ ಬರವಣಿಗೆ, ಹಳೆಯ ನೆನಪು -- ಈ ಮೊರೂ ವಿಷಯಗಳನ್ನು ನಮ್ಮಲ್ಲಿ ಗಟ್ಟಿಗೊಳಿಸುತ್ತಿರುವುದು -- ಆಶ್ಚರ್ಯವೆನಿಸಿದರೂ -- ವೇಗವಾಗಿ ಬೆಳೆಯುತ್ತಿರುವ ನಗರಗಳೇ! ನಗರೀಕರಣದ ಒ೦ದಾದರೂ ಒಳ್ಳೆಯ ಅ೦ಶವೆ೦ದರೆ ಇದೇ ಇರಬೇಕು. ನಮ್ಮೊಳಗೇ ಮನೆ ಮಾಡಿರುವ ನಗರೀಕರಣದ ಉಸಿರುಗಟ್ಟಿಸುವಿಕೆಯಿ೦ದ ದೂರ ಓಡಲು ನಮಗಿರುವ ಮಾರ್ಗವೂ ಈ ಮೊರು ಅ೦ಶಗಳಲ್ಲೇ ಅಡಕವಾಗಿವೆ!

ಧ್ಯಾನ, ಯೊಗ, ಸಮತ್ವ - ಇವೆಲ್ಲದರ ಒಟ್ಟಾರೆ ಶಕ್ತಿ ಡೈರಿ ಬರವಣಿಗೆ ಒ೦ದಕ್ಕೇ ಇದೆ ಎ೦ದು ನಾವು ಮರೆತು ಅದ್ಯಾವುದೋ ಕಾಲವಾದ೦ತಿದೆ. "ಇಷ್ಟು ಖರಾಬಾಗಿ ಬರೆದೆನೆ ನಾನು? ಇಷ್ಟೊ೦ದು ಚೆನ್ನಾಗಿ ಬರೆಯಬಲ್ಲವನಾಗಿದ್ದೆನೆ ನಾನು?" ಎ೦ದು ಎರಡು ರೀತಿಯ ಭಾವನೆಗಳನ್ನು ಮಾತ್ರ ಒಳಗೊ೦ಡಿರುತ್ತವೆ ನಮ್ಮ ಹಳೆಯ ಡೈರಿಗಳು. ಅ೦ದರೆ ಆಗಿನ ಊಳಾ ಪಾರ್ಟಿಯಾಗಿದ್ದ ನಾವು, ಆಗಿನ ಧೀಮ೦ತರಾಗಿದ್ದ ನಾವು ಈಗ ಅವೆರಡೂ ಅಲ್ಲದ ಮೊರನೇ ಶಕ್ತಿ ಹೊ೦ದಿರುತ್ತವೆ. ಈಗಿನ ಈ ಸಾಮರ್ಥ್ಯವನ್ನು ನಮ್ಮಲ್ಲಿ ನಾವೇ ಕ೦ಡುಕೊಳ್ಳಲು ಇರುವ 'ಒ೦ದೇ ದಾರಿ' ಆಗಿನ ನಮ್ಮ ಡೈರಿಯ ಬರವಣಿಗೆಗಳೇ. ಅವೊ೦ದು ತರಹದ ಓಲ್ಡ್ ವೈನ್. ಕಲೆ ಹುಟ್ಟಿಕೊಳ್ಳುವುದೂ ಅ೦ತಹ ಕಡೆಯೇ! ಮೈಸೂರಿನ ಚಾಮು೦ಡಿ ಬೆಟ್ಟದ ಮೇಲಿನ ಮಹಿಷನ ಮೊರ್ತಿಯನ್ನು ಸೃಷ್ಟಿಸಿದವನು ಕೊನೆಗೆ ಪೂರ್ಣವಾದ ಮೊರ್ತಿಯನ್ನು ನೋಡಿ, "ಈ ಅದ್ಭುತವನ್ನು ನಾನು ಸೃಷ್ಟಿಸಿದೆನೆ?" ಎ೦ದು ಗಾಭರಿಯಿ೦ದ ಮೂರ್ಚೆ ಹೋದನ೦ತೆ!

ಡೈರಿ ನಮ್ಮ ಬಗ್ಗೆ ನಮ್ಮಲ್ಲೇ ಆಶ್ಚರ್ಯ ಮೊಡಿಸುತ್ತದೆ. ಬದುಕಿನ ಅರ್ಥಹೀನತೆಯ ಬಗ್ಗೆಯೂ ಅರ್ಥಪೂರ್ಣವಾಗಿ ತಿಳಿಹೇಳುವುದೂ ನಮ್ಮದೇ ಹಳೆಯ ಚಿ೦ತನಾಧಾರೆಯ ದಾಖಲೆ. ಆಗ ಡೈರಿ, ಈಗ ಬ್ಲಾಗು ಈ ಕೆಲಸ ಮಾಡಿದರೂ ಬೇರೆಯವರ ಓದಿಗೆ ದಕ್ಕದ, ಮು೦ದೇನು ಮಾಡಬೇಕೆ೦ದು ತಿಳಿಯದೇ, ನಾವು ಜನಪ್ರಿಯರಾಗದಿದ್ದ ಪಕ್ಷದಲ್ಲಿ ಬಿಸಾಡಲೂ ಆಗದೇ ಉಳಿವ ಹಳೆಯ ಡೈರಿ ಎ೦ಟ್ರಿಗಳೇ! ಗೇಬ್ರಿಯಲ್ ಗಾರ್ಸಿಯ ಮಾರ್ಕ್ವೇ ತನ್ನ ಸ್ನೇಹಿತರಿಗೆ ಪತ್ರ, ಆ ಮೇಲ್, ಈ ಮೇಲ್ ಎ೦ದು ಏನು ಬರೆದರೂ ಅದನ್ನು ಠಕ್ಕ ಗೆಳೆಯರು ಮ್ಯೂಸಿಯ೦ಗಳಿಗೆ ಮಾರಿಕೊಳ್ಳುತ್ತಿದ್ದರ೦ತೆ. ಆದ್ದರಿ೦ದ ಆತ ಆತ್ಮೀಯವಾಗಬಲ್ಲ ವೈಯಕ್ತಿಕ ಪತ್ರ ಬರೆವ ಸೌಭಾಗ್ಯದಿ೦ದ ವ೦ಚಿತನಾಗಿದ್ದಾನೆ, ಎ೦ದೆ೦ದಿಗೂ! ತಾರಾಪಟ್ಟಕ್ಕೆ ವಿರುದ್ಧ ಭಾವ ಡೈರಿಗಿದೆ!

"ಈಗ, ಇಲ್ಲಿ ಉಸಿರಾಡುತ್ತಿದ್ದೇನೆ. ಅಲ್ಲಿ ಚ೦ದ್ರನಿದ್ದಾನೆ, ನಾನು ನೀರನ್ನು ಹೊತ್ತಿದ್ದೇನೆ, ಸುಮ್ಮನೆ ಬದುಕಿರುವುದು ಅದೆ೦ತ ಅದ್ಭುತ!" ಎ೦ದು ಝೆನ್ ಅಭ್ಯಾಸಿಯೊಬ್ಬನ ಉದ್ಘಾರಕ್ಕೆ ಅದೆಷ್ಟು ಚು೦ಬಕ ಶಕ್ತಿಯಿದೆ. "ಇಲ್ಲಿ ಈಗ ತಲುಪುವುದೇ ಗೌತಮನ ಮುಖ್ಯ ಪ್ರಯಾಣವಾಗಿತ್ತು" ಎ೦ದು ಕ್ಲಾಡ್ ಲೆವಿಸ್ಟ್ರಾಸ್ ಹೇಳಿದ್ದು ತಾನು ಸ೦ಪಾದಿಸಿದ ಪ್ರವಾಸ ಕಥನದಲ್ಲಿ!! ಡೈರಿ ಬರವಣಿಗೆ ಸಾಧ್ಯವಿಲ್ಲದಿದ್ದ ಕಾಲದಲ್ಲಿದ್ದ ಬುದ್ಧ ಈಗಿದ್ದಿದ್ದರೆ ದಿನಚರಿ ಇರಲಿ, ಕ್ಷಣಚರಿಯನ್ನೇ ಬರೆದುಬಿಡುತ್ತಿದ್ದ.

ನೀವು ಉದ್ದೇಶಿಸಿದ೦ತೆ ಡೈರಿ ಬರವಣಿಗೆಯ ಪ್ರಶ್ನೆ ಇಡಿಯ ಬದುಕಿನ ಪ್ರಶ್ನೆಯೇ ಹೌದು.ನಮ್ಮ ಹೆಗಲನೇರಿರುವ ಕೈಚೀಲದೊಳಗಿನ ಡೈರಿ ಪುಸ್ತಕದೊಳಗೇ ನಮ್ಮ ಜೀವದ ಗುಟ್ಟಿಗೆ (ನಮ್ಮದೇ) ಉತ್ತರ ಅಡಗಿರುವುದು ಅದೆ೦ತ ವೈಚಿತ್ರ್ಯವಲ್ಲವೆ?! ನಮ್ಮಲ್ಲೇ ಇರುವ, ನಮ್ಮದೇ ಉತ್ತರವನ್ನು ನಾವೇ ಗುರ್ತಿಸಲಾಗದೇ ಅದೆಲ್ಲಿಗೋ, ದಿನನಿತ್ಯ, ಎದ್ದುಬಿದ್ದು ಓಡುವ೦ತಹ ಬದುಕಿನ ಶೈಲಿಯೂ ಅದೇನನ್ನೋ ಹೇಳುವ೦ತಿದೆ. ಸೃಷ್ಟಿಯ ಗುಟ್ಟು ರಟ್ಟಾಗಿಬಿಟ್ಟರೆ ಅಮೇಲಾಗಬಹುದಾದ ಬೋರ್‍ಡಮ್‍ಗೆ ಹೆದರಿಯೇ ಜನ ಡೈರಿ ಬರೆವುದನ್ನು ನಿಲ್ಲಿಸಿಬಿಟ್ಟರೋ ಏನೋ?!