ಗಾದೆಗಳು : ಬೀದಿಯಲ್ಲೇ ಹುಟ್ಟಿದರೂ, ತೋರಿಸುವುದು ರಾಜಮಾರ್ಗ!

To prevent automated spam submissions leave this field empty.

"ಶ್ರೀಮಂತರಿಗೆ ಕೊಡುವ ಗೌರವ ಬಡವರಿಗೆ ಯಾರೂ ಎಂದೂ ತೋರಿಸುವುದಿಲ್ಲ, ತೋರಿಸಬೇಕೆಂಬ ಕಾನೂನೇನು ಇಲ್ಲ. ರಾಮೇಗೌಡ್ರು ಬಂದ್ರೆ ಜಮಖಾನೆ ಹಾಸಿ ಉಪಚರಿಸುವ ಜನ, ದಿನಗೂಲಿ ಮಾಡುವ ’ರಾಮ್ಯಾ’ ಬಂದರೆ ತೋರಿಸುವುದಿಲ್ಲ. ಹಣ ಇದ್ರೆ ಎಲ್ರು ನಮ್ಮವ್ರು ತಮ್ಮವ್ರು ಅಂತಾರೆ. ಗುಣ ಒಂದೇ ಇದ್ರೆ ಸಾಲ್ದು, ಸ್ವಲ್ಪ ಹಣ ಸಹ ಬೇಕು ಮರ್ಯಾದೆ ಗಿಟ್ಟಿಸಿಕೊಳ್ಳೋಕೆ. ಹಣ, ಐಶ್ವರ್ಯ ಇದ್ದವನೇ ದೊಡ್ಡವನು, ಇಲ್ಲದಿದ್ರೆ ದೇವರೇ ಗತಿ." ಇಷ್ಟೆಲ್ಲಾ ಉದ್ದುದ್ದಾದ ಅರ್ಥ ಬಿಡಿಬಿಡಿಸಿ ಹೇಳೊ ಬದಲು,

"ದೊಡ್ಡವರು ಬಂದ್ರೆ ಒದರಿ ಹಾಸ್ತೀವಿ
ಬಡವರು ಬಂದ್ರೆ ಬಾಗ್ಲಲ್ ನಿಲ್ಲಿಸ್ತೀವಿ"

ಅಂದ್ರೆ ಎಷ್ಟು ಚನ್ನ? [ಒದರಿ = ಕೂಗಿ]. ಇದೇ ಗಾದೆ(Proverb)ಗಿರುವ ಶಕ್ತಿ.  "ಮಾಡಿದ್ದುಣ್ಣೊ ಮಹರಾಯ", "ಹಾಸಿಗೆ ಇದ್ದಷ್ಟು ಕಾಲು ಚಾಚು", "ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ", "ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ", ಎಂಬ ಅನೇಕ ಗಾದೆಗಳು ಜೀವನಾನುಭವವನ್ನು, ಅತ್ಯಂತ ಸಂಕ್ಷಿಪ್ತವಾಗಿ, ವಿವೇಕಪೂರ್ಣವಾಗಿ, ಪರಿಣಾಮಕಾರಿಯಾಗಿ ಹೇಳಬಲ್ಲವು.  "ಗಾದೆಗಳು ಅನುಭವದ ಸಾಂದ್ರತೆಗೆ, ವಸ್ತುವೈವಿಧ್ಯತೆಗೆ, ಸಂಸ್ಕೃತಿ ಸಂಪನ್ನತೆಗೆ, ವಿಚಾರ ವೈಭವಕ್ಕೆ ಹೆಸರಾದುವು." ಯಾವುದೇ ಜನಾಂಗದ ಆತ್ಮಚರಿತ್ರೆ, ತಕ್ಕಮಟ್ಟಿಗೆ ಬಾಹ್ಯಚರಿತ್ರೆ ಕೂಡ ಆ ಜನಾಂಗದ ಗಾದೆಗಳಲ್ಲಿ ಗೋಚರಿಸುತ್ತದೆ. ಉಪ್ಪು ಊಟಕ್ಕೆ ಹೇಗೆ ಅಗತ್ಯವೋ ಹಾಗೆ ಗಾದೆ ಮಾತಿಗೆ ಅವಶ್ಯಕ. ಗಾದೆಗಳಿಲ್ಲದ ದೇಶವಿಲ್ಲ, ಗಾದೆಗಳಿಂದ ದೂರವಾದ ಭಾಷೆಯಿಲ್ಲ. ಗಾದೆಗಳನ್ನು ಬಳಸದ ಮನುಷ್ಯನಿಲ್ಲ.

"ಗಾದೆಗಳು ಯಾವುದೇ ವಿದ್ವಾಂಸನೊಬ್ಬನ ಪರಿಶ್ರಮದ ಫಲವಲ್ಲ. ಅದು ಬೀದಿಯಲ್ಲಿ ಸಿಕ್ಕುವ ಜ್ಞಾನ. ಅಂದಂದಿನ ಅನುಭವಕ್ಕೆ ಅಲ್ಲಲ್ಲೇ ರೂಪುತಾಳಿ, ಬಾಯಿಂದ ಬಾಯಿಗೆ ಚಲಾವಣೆಯಾಗುತ್ತಾ ಅಂದಂದಿನ ಸಂಧರ್ಭಕ್ಕೆ ಒದಗುವ ಕಾರಣದಿಂದ, ಗಾದೆಗಳು ಹುಟ್ಟಿ ಬೆಳೇದದ್ದು ಬೀದಿಯಲ್ಲೇ [ಜಿ.ಎಸ್.ಶಿವರುದ್ರಪ್ಪ]." ಗಾದೆ ಹಲವರ ಜ್ಞಾನ ಒಬ್ಬನ ವಿವೇಕ - The wisdom of many and the wit of one. ಗಾದೆ ಪ್ರಜ್ಞಾಪೂರ್ವಕವಾಗಿ ರಚಿಸಿದ ಸಾಹಿತ್ಯ ಪ್ರಕಾರವಲ್ಲ; ಸಹಜವಾಗಿ ಮಾತಿನ ಓಘದಲ್ಲಿ ಸೃಷ್ಟಿಯಾಗಿ, ಪ್ರವಹಿಸುತ್ತದೆ.

ಸಾಹಿತ್ಯ ಹಾಗೂ ಭಾಷಿಕ ವೈಲಕ್ಷಣಗಳ ಸಮ್ಮಿಲನ ಗಾದೆ. ಅಂದರೆ ಇದು ಪೂರ್ಣ ಸಾಹಿತ್ಯವೂ ಅಲ್ಲ, ಪೂರ್ಣ ಭಾಷಿಕವೂ ಅಲ್ಲ. ವೇದಗಳಾದರೋ ವಿದ್ವಾಂಸರೊಬ್ಬರು ಸಾಮಾಜಿಕ ಜೀವನದ ಅನುಭವಗಳನ್ನು, ನ್ಯಾಯ ನೀತಿಗಳನ್ನು ಕ್ಲಿಷ್ಟವಾದ ಭಾಷೆಯಲ್ಲಿ ಹಿಡಿದಿಟ್ಟ ಕೆಲಸಗಳು. ಆದರೆ ಗಾದೆಗಳು ಜನಸಾಮಾನ್ಯರು ತಮ್ಮ ದೈನಂದಿನ ಬದುಕಿನಲ್ಲಿ ಅನುಭವಿಸಿದ್ದನ್ನೆಲ್ಲಾ ಕ್ಷಣಾರ್ಧದಲ್ಲಿ ಹಿಡಿದಿಟ್ಟ ಕಿವಿಮಾತುಗಳು. "ಗಾದೆ ವೇದಕ್ಕೆ ಸಮಾನ ಎಂಬುದು ಗಾದೆಯನ್ನೇ ಕುರಿತು ಒಂದು ಗಾದೆ. ವೇದದಂತೆ ಗಾದೆಯೂ ಅಜ್ಞಾತಕತೃವಾಗಿ ವಾಕ್ ಪರಂಪರೆಯಲ್ಲಿ ಸಾಗಿ ಬಂದದ್ದು, ಪ್ರಾಚೀನ ತಮವಾದದ್ದು, ಅಧ್ಯಾತ್ಮ ಭೂಮಿಕೆಯಲ್ಲಿ ವೇದ ಹೇಗೋ ಲೌಕಿಕ ಭೂಮಿಕೆಯಲ್ಲಿ ಗಾದೆ ಹಾಗೆ...ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಗಾದೆಯೂ ಇದೆ. ಈ ಹೊತ್ತು ವೇದಗಳ ಪ್ರಾಮಾಣ್ಯ ಹಿಂದೆ ಬಿದ್ದಿದೆ; ಆದರೆ ಗಾದೆಗಳು ಅಪ್ರತಿಹತವಾದಿಯೇ ಉಳಿದಿವೆ." ಗಾದೆಗೆ ಜನಭಾಷೆಯಲ್ಲಿ ಮಾತ್ರ ಅಸ್ತಿತ್ವ ಎಂಬುದನ್ನು ಗಮನಿಸಬೇಕು. ಸಂಸ್ಕೃತದಲ್ಲಿರುವ ಸುಭಾಷಿತ, ಲೋಕೋಕ್ತಿ, ನ್ಯಾಯ ಮುಂತಾದುವುಗಳು ಗಾದೆಗಳಿಗೆ ಸಂಪೂರ್ಣ ಸಂವಾದಿಯಾಗಲಾರವು.
ವಿದ್ವಾಂಸರೊಬ್ಬರು, "ಒಂದು ದೇಶದ ಗಾದೆಗಳೇ ಸಾಕು, ಆ ದೇಶವನ್ನು ಅರ್ಥಮಾಡಿಕೊಳ್ಳಲು" ಎಂದಿದ್ದರಂತೆ.  "ಒಂದು ದೇಶದ ನಿಜವಾದ ಬಣ್ಣ, ಬದುಕು ಅಲ್ಲಿನ ಗಾದೆಗಳ ಮೂಲಕ ಬಯಲಾಗುತ್ತದೆ. ಜನತೆಯ ಕಳೆದ ದಿನಗಳ ರೋಷ, ಕೆಚ್ಚು, ಮೌಢ್ಯ, ಮನಸಿಕ ವಿಕಾಸ, ನಗೆ, ನೋವು, ನ್ಯಾಯ, ಅನ್ಯಾಯ - ಮೊದಲಾದ ಎಲ್ಲ ಸಂಗತಿಗಳ ಮಡು ಈ ಗಾದೆಗಳು [ಕಾಳೇಗೌಡ ನಾಗವಾರ]". ಗಾದೆಗಳಲ್ಲಿ ನಮ್ಮ ನಿತ್ಯ ಜೀವನಕ್ಕೆ ಸಂಬಂದಿಸಿದ ಘಟನೆಗಳು, ಜನಸಾಮಾನ್ಯರ ಜೀವನದಲ್ಲಿನ ಅನೇಕ ನಂಬಿಕೆಗಳು, ಜಾತಿ ಪದ್ಧತಿಗಳನ್ನು ಕುರಿತ ವಿಡಂಬನೆಗಳು, ಮಾನವೀಯ ಮೌಲ್ಯಗಳು, ಒಂದು ಪ್ರದೇಶಕ್ಕೆ ಸಂಬಂಧಿಸಿದ ಐತಿಹಾಸಿಕ, ಪೌರಾಣಿಕ ಅಂಶಗಳು ಕಂಡುಬರುತ್ತವೆ. ಅಷ್ಟೇ ಅಲ್ಲ, ಆಹಾರ ಪದಾರ್ಥಗಳ ಬಗೆಗಿನ ರುಚಿ, ಅಭಿರುಚಿಗಳ ವೈವಿಧ್ಯವೂ, ಬೇಸಾಯಕ್ಕೆ, ಪಶುಪಾಲನಗೆ ಸಂಭಂದಿಸಿದ, ಸಂಸಾರಕ್ಕೆ ಸಂಭಂದಿಸಿದ ಕಿವಿಮಾತುಗಳೂ ಸಹ ಗಾದೆಗಳಲ್ಲಿ ಕಾಣಬಹುದು. ಒಂದು ದೇಶದ/ಪ್ರದೇಶದ ಗಾದೆಗಳು ಗೊತ್ತಿದ್ದರೆ, ಆ ದೇಶ/ಪ್ರದೇಶ-ವನ್ನು ಅರ್ಥಮಾಡಿಕೊಂಡ ಹಾಗೆ ಎನ್ನಬಹುದು. "ಚೀನಾದ ಜನನಾಯಕ ಮವೋ ತ್ಸೆ-ತುಂಗ್ (Mao Tse-Tung) ಸಾಂಸ್ಕೃತಿಕ ಕ್ರಾಂತಿಯ ಹರಿಕಾರರಾದ ತನ್ನ ಒಡನಾಡಿಗಳ ನಡುವಣ ಸಂವಾದದಲ್ಲಿ ಆ ದೇಶದ ಗಾದೆ, ಗೀತೆ, ಜನಪದಕತೆ, ಐತಿಹ್ಯಗಳನ್ನು ಸಂಧರ್ಭೋಚಿತವಾಗಿ ಬಳಸಿ ವಿಶ್ಲೇಸಿಸುತ್ತಾ ಅವರ ಮನಸ್ಸಿನಾಳದಲ್ಲಿ ಇಳಿಯುವ ರೀತಿಯು ಅತ್ಯಂತ ವಿಶಿಷ್ಟವಾದುದು."

ಗಾದೆಗಳು ನಮ್ಮ ಸಂಸ್ಕೃತಿ ಸಂಪ್ರದಾಯಗಳಿಗೆ ಹಿಡಿದ ಕೈಗನ್ನಡಿಗಳು. ಮಹಾನಗರಗಳಲ್ಲೇ ಬೆಳೆದ ಸಹಸ್ರಾರು ಮಿತ್ರರಿಗೆ ಅರ್ಥವಾಗದೇ ಉಳಿಯಬಹುದಾದ ಹಲವಾರು ಗಾದೆಗಳಿವೆ. ನಮ್ಮ ನೆಲದ ಬಗ್ಗೆ, ಸಂಸ್ಕೃತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಾಬೇಕೆಂಬ ಯಾವ ವ್ಯಕ್ತಿಯೇ ಆಗಲಿ, ಗಾದೆಗಳನ್ನು ಅವುಗಳ ಒಂದು ಸಾಮಾಜಿಕ ಚೌಕಟ್ಟಿನಲ್ಲಿ(social context) ಅರ್ಥಮಾಡಿಕೊಂಡರೆ ಸಾಕು, ನಮ್ಮ ಹಿಂದಿರುವ ಸಂಪ್ರದಾಯ ಸಂಸ್ಕೃತಿಗಳನ್ನು ಅರ್ಥಮಾಡಿಕೊಂಡ ಹಾಗೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಗಾದೆಗಳು ಸಾಂಸ್ಕೃತಿಕ ಅಧ್ಯನಕ್ಕೆ ಅಪೂರ್ವ ಸಾಮಾಗ್ರಿಗಳಾಗಬಲ್ಲವು. ಕನ್ನಡದಲ್ಲೇ ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಶುದ್ಧ ಜಾನಪದ ಗಾದೆಗಳಿವೆ. ಜಗತ್ತಿನ ಎಷ್ಟೋ ಭಾಷೆಗಳಲ್ಲಿ ಗಾದೆಗಳ ಶಾಸ್ತ್ರೀಯ ಅಧ್ಯಯನ ನಡೆದಿದೆಯಂತೆ. ಕನ್ನಡದಲ್ಲೂ ಗಾದೆಗಳ ಸಂಗ್ರಹ ಕಾರ್ಯ ನಡೆದಿದೆ. ಸಾವಿರಾರು ಗಾದೆಗಳನ್ನು ಒಂದೇ ಪುಸ್ತಕದಲ್ಲಿ ಓದಬಹುದಾಗಿದೆ. ಪ್ರೊ. ರಾಮೆಗೌಡರ "ನಮ್ಮ ಗಾದೆಗಳು", ಪ್ರೊ. ಕಾಳೆಗೌಡ ನಾಗವಾರರ "ಬೀದಿ ಮಕ್ಕಳು ಬೆಳೆದೊ" ಪುಸ್ತಕಗಳಲ್ಲಿ ಸಹಸ್ರಾರು ಗಾದೆಗಳ ಸಂಗ್ರಹವಿದೆ. ಆದರೆ ನಮಗೆ ಸಿಕ್ಕಿರುವ ಗಾದೆಗಳನ್ನು ಅದರ ಸಾಮಜಿಕ ಪರಿಸರ/ಚೌಕಟ್ಟಿನಲ್ಲಿ ವ್ಯಾಖ್ಯಾನಿಸುವ ಕಾರ್ಯವೊಂದು ನಡೆಯಬೇಕಾಗಿದೆ ಎನಿಸುತ್ತದೆ. ಎಲ್ಲಾ ಗಾದೆಗಳ ಸಮಗ್ರ ವ್ಯಾಖ್ಯಾನಗಳುಳ್ಳ ಗ್ರಂಥಗಳು ಇವೆಯೋ ಇಲ್ಲವೋ ಗೊತ್ತಿಲ್ಲ, ನನಗಂತೂ ಸಿಕ್ಕಿಲ್ಲ. ವಿಚಾರಿಸಿದರೆ, "ಅಂಥ ಪುಸ್ತಕಗಳು ಕನ್ನಡದಲ್ಲಿ ಇನ್ನೂ ಬಂದಿಲ್ಲ ಸರ್" ಎನ್ನುವ ಉತ್ತರ ಸಿಕ್ಕಿದ್ದೂ ಉಂಟು. ಪ್ರಾಧ್ಯಾಪಕರು, ವಿಧ್ಯಾರ್ಥಿಗಳು, ಮುಖ್ಯವಾಗಿ, ವಿಶ್ವವಿದ್ಯಾಲಯಗಳು ಗಾದೆಗಳ ಸಮಗ್ರ ವ್ಯಾಖ್ಯಾನದ ಕಾರ್ಯಕ್ಕೆ ಕೈಹಾಕಿದರೆ ಜನಸಾಮಾನ್ಯರಿಗಾಗುವ ಉಪಕಾರ ಅಷ್ಟಿಷ್ಟಲ್ಲ. ಅಂತಹ ವ್ಯಾಖ್ಯಾನದ ಕಾರ್ಯ ಕನ್ನಡ ಸಮಗ್ರ ಜಾನಪದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗುತ್ತದೆ. ನಮ್ಮ ಜಾನಪದ ಪರಂಪರೆಯನ್ನು ಉಳಿಸುವುದಕ್ಕೆ ಮತ್ತೊಂದು ದಾರಿಯ ಸೃಷ್ಟಿಯಾಗುತ್ತದೆ.

ಹೆಚ್ಚಿನ ಓದಿಗಾಗಿ:

 1. "ಬೀದಿ ಮಕ್ಕಳು ಬೆಳೇದೊ - ಗಾದೆಗಳ ಸಂಕಲನ" - ಪ್ರೊ. ಕಾಳೇಗೌಡ ನಾಗವಾರ, ಸಪ್ನಾ ಬುಕ್ ಹೌಸ್ ಬೆಂಗಳೂರು.
 2. "ನಮ್ಮ ಗಾದೆಗಳು" - ಪ್ರೊ. ರಾಮೇಗೌಡ, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು.
 3. "ಜಾನಪದ ಸ್ವರೂಪ" - ಹಾ. ಮಾ. ನಾಯಕ.
 4. "ಜಾನಪದ: ಸ್ವರೂಪ ಮತ್ತು ಸಾಹಿತ್ಯ" - ಪ್ರೊ. ಡಿ ಲಿಂಗಯ್ಯ ಮತ್ತು ಡಾ. ಕೆ. ಆರ್. ಸಂಧ್ಯಾರೆಡ್ಡಿ - ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಕನ್ನಡದ ಕೆಲವು ಜನಪ್ರಿಯ ಗಾದೆಗಳು [ಗ್ರಂಥಋಣ: "ಜಾನಪದ: ಸ್ವರೂಪ ಮತ್ತು ಸಾಹಿತ್ಯ"]

೧. ಸರಳವಾದ ಗಾದೆಗಳು

 • ಹಾಸಿಗೆ ಇದ್ದಷ್ಟು ಕಾಲು ಚಾಚು.
 • ಮನಸ್ಸಿದ್ದರೆ ಮಾರ್ಗ.
 • ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.
 • ಕೂತು ತಿಂದರೆ ಕುಡಿಕೆ ಹೊನ್ನು ಸಾಲದು.

೨. ಪೌರಾಣಿಕ ಗಾದೆಗಳು

 • ರಾಮರಾಜ್ಯ ಬಂದರೂ ರಾಗಿ ಬೀಸೋದು ತಪ್ಪಿತೆ?
 • ರಾತ್ರಿಯೆಲ್ಲಾ ರಮಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಭಂಧ ಅಂತ ಕೇಳಿದಂಗೆ.
 • ಜಗಳದಿಂದ ಕೌರವರು ಕೆಟ್ಟರು, ಹೆಣ್ಣಿನಿಂದ ರಾವಣ ಕೆಟ್ಟ.

೩. ಐತಿಹ್ಯ ಗಾದೆಗಳು

 • ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡಲಿಲ್ಲ.
 • ತಿರುಪತಿ ಕ್ಷೌರಿಕರು ತಲೆ ಬೋಳಿಸಿದಂತೆ!
 • ಕಾಲವಲ್ಲದ ಕಾಲದಲ್ಲಿ ಕಾಗೆ ರಾಗಿ ತಿಂದಿತು.
 • ಮಣ್ಣೇ ನೋಡದ ತಾಯಿ ನೀನು ಮಾಗಡಿ ನೋಡೋದು ದಿಟವ?

೪. ಸಾಮಾಜಿಕ ಗಾದೆಗಳು

 • ಮುಖ ನೋಡಿ ಮಣೆ ಹಾಕು.
 • ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ.
 • ಇಲ್ಲಿಗೂ ಬಂದೆಯಾ ಜಡೆಶಂಕರ?
 • ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
 • ಮನೆಗೆ ಮಾರಿ, ಪರರಿಗೆ ಉಪಕಾರಿ.
 • ತಿರ್ಕೊಂಡ್ ಬಂದ್ರು ಕರ್ಕೊಂಡ್ ಉಣ್ಣು.
 • ಅನ್ಯಾಯದ ಗಳಿಕೆ ಅಡವೀ ಪಾಲು

೫. ನೀತಿ ಗಾದೆಗಳು

 • ಅಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರದು.
 • ಕಿಡಿ ಸಣ್ಣಾದಾದ್ರು ಕಾಡು ಸುಡಬಲ್ಲದು.
 • ಕುಲ ಬಿಟ್ಟರೂ ಛಲ ಬಿಡಬಾರದು.
 • ಕೊಟ್ಟು ಕುದಿಬಾರ್ದು ಇಟ್ಟು ಹಂಗಿಸಬಾರ್ದು.
 • ಜಾತಿ ಬಿಟ್ಟರೂ ನೀತಿ ಬಿಡಬಾರದು.
 • ಜ್ಯೋತಿ ಇಲ್ಲದ ಮನೇಲಿ ನೀತಿ ಇಲ್ಲ.

೬. ಕೌಟುಂಬಿಕ ಗಾದೆಗಳು

 • ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ.
 • ಅಳಿಯಾ ಮನೆ ತೊಳಿಯಾ!
 • ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ.
 • ಅಳಿಯನ ಅರಮನೆಗಿಂತ ಮಗನ ಕಿರಿಮನೆ ಲೇಸು.
 • ಅತ್ತೆ ಇಲ್ಲದ ಮನೇಲಿ ಸೊಸೆ ಬಿತ್ತಾರಿ!
 • ತುಂಬಿದ ಕೆರೇನೂ, ತುಂಬಿದ ಮನೇನೂ ಒಡಿಬಾರದು.

೭ ಸಾಹಿತ್ತಿಕ ಗಾದೆಗಳು

 • ಒಲಿದರೆ ನಾರಿ, ಮುನಿದರೆ ಮಾರಿ.
 • ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
 • ಎಳಿಲಾರದ ಎತ್ತು, ಮೆಳೇ ಮೇಲೆ ಬಿತ್ತು.

ನಿಮಗೆ ಮತ್ತಷ್ಟು ಗಾದೆಗಳು ಗೊತ್ತಿದ್ದರೆ commentsನಲ್ಲಿ ಸೇರಿಸಿ, ಇಲ್ಲಿರುವ ಗಾದೆಗಳ ಪಟ್ಟಿಯನ್ನು ವಿಸ್ತರಿಸಿ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿ ಬರ್ದಿದ್ದೀರಿ ....
ಅಂದ ಹಾಗೆ "ದೊಡ್ಡವರು ಬಂದ್ರೆ ಒದರಿ ಹಾಸ್ತೀವಿ, ಬಡವರು ಬಂದ್ರೆ ಬಾಗ್ಲಲ್ ನಿಲ್ಲಿಸ್ತೀವಿ" ಅನ್ನೊ ಗಾದೆಮಾತಲ್ಲಿ ಒದರು 'ಝಾಡಿಸಿ' ಅನ್ನೊ ಅರ್ಥ ಇರ್ಬೊದು ಅಂತ ನಂಗೆ ಅನ್ಸುತ್ತೆ ...

@ ವ್ಯಾಸರಾಜ್,
ಇಲ್ಲ, "ಒದರಿ" ಅನ್ನೋ ಶಬ್ದ ಉತ್ತರ ಕರ್ನಾಟಕದಲ್ಲಿ ಸರ್ವೇ ಸಾಮಾನ್ಯವಾಗಿ ಬಳಸುವ ಪದ. "ಅವನಿಗೆ ತುಸು ಒದರೋ" ಅಂದರೆ "ಅವನಿಗೆ ಸ್ವಲ್ಪ ಕೂಗೋ/ಬರಹೇಳೋ" ಎಂದ ಹಾಗೆ. ಈ ಗಾದೆಯಲ್ಲಿ ದೊಡ್ಡವರು ಬಂದರೆ/ಕಂಡರೆ ಕೂಗಿ ಕರೆದು, ಕುಳಿತುಕೊಳ್ಳಲು ಜಮಖಾನೆ ಹಾಸ್ತಿವಿ ಅನ್ನೊ ಅರ್ಥ ಬರುತ್ತೆ.

<<"ಒದರಿ" ಅನ್ನೋ ಶಬ್ದ ಉತ್ತರ ಕರ್ನಾಟಕದಲ್ಲಿ ಸರ್ವೇ ಸಾಮಾನ್ಯವಾಗಿ ಬಳಸುವ ಪದ>>
ನೀವು ಹೇಳಿದ್ದು ಸರಿ ..ನಾನು ಅಲ್ಲಿಯವನೇ ...ಹಾಗೆಯೇ ದೊಡ್ಡವರು ಬಂದಾಗ ಜಮ್ಖಾನಿಯನ್ನು ಝಾಡಿಸಿ ಹಾಸ್ಬೇಕು ಅಂತ ಇದೆ ಅಂತ ಕೇಳಿದ್ದೆ ... ನಾನು ತಪ್ಪಾಗಿದ್ರು ಇರ್ಬೋದು ..ಅಲ್ದೆ ಸುಮಾರು ಜನ (ಉ ಕರ್ನಾಟಕದಲ್ಲಿ) ಒದರು ಎಂಬ ಪದವನ್ನ ಝಾಡ್ಸಿ ಅನ್ನೋ ಅರ್ಥದಲ್ಲಿ ಬಳಸೋದು ಕಂಡಿದಿನಿ .... ಗೊತ್ತಿದೋವ್ರು ತಿಳಿ ಹೇಳ್ಬೆಕು ....

’ಝಾಡಿಸಿ’ ಅನ್ನೋ ಪದನೇ ನಮ್ಮ ಕಡೆ ಬಳಕೆ ಆಗೋದು. ’ಒದರಿ’ ಎಂಬುದನ್ನು ಉತ್ತರ ಕರ್ನಾಟಕದಲ್ಲಿ ಬಳಸುವುದಿಲ್ಲ. ಮಯ್ಸೂರು ಸೀಮೆಯಲ್ಲಿ ಬಳಸುತ್ತಾರೆ.
ಅದನ್ನು ’ವದರಿ’ ಎಂಬಂತೆ ಉಚ್ಛರಿಸುತ್ತಾರೆ.

ಮಂಜುನಾಥ್ ರವರೇ,
ಲೇಖನ ಅಧ್ಯಯನಪೂರ್ಣವಾಗಿದೆ. ಒಳ್ಳೆಯ ಆಕರಗಳಿಂದ ಸಮೃದ್ಧವಾಗಿದೆ. ಕೆಲ ತಪ್ಪುಗಳು ನನಗೆ ಕಂಡುಬಂದಿವೆ. ಸರಿ ಎನಿಸಿದರೆ ಪರಿಗಣಿಸಿ. ತಪ್ಪಿದ್ದರೆ ನನ್ನನ್ನು ತಿದ್ದಿ.
ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.
ರಾತ್ರಿಯೆಲ್ಲಾ ರಮಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಭಂಧ ಅಂತ ಕೇಳಿದಂಗೆ.
ತಿರುಪತಿ ಕ್ಷೌರಿಕರು ತಲೆ ಬೋಳಿಸಿದಂತೆ!
ಅಳಿಯಾ ಮನೆ ತೊಳಿಯಾ!
ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.

ಇವ್ಯಾವೂ ಗಾದೆಗಳಲ್ಲ. ಆಡುಭಾಷೆಯಲ್ಲಿ ಕೆಲವು ಉಪಮೆಗಳನ್ನು ಭಾಷಾ ಸೌಂದರ್ಯಕ್ಕಾಗಿ ಬಳಸುತ್ತಾರೆ ನಮ್ಮ ಜನಪದರು.

ಇಲ್ಲಿಗೂ ಬಂದೆಯಾ ಜಡೆಶಂಕರ?
ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡಲಿಲ್ಲ.
ಇವು ಗಾದೆಗಳಲ್ಲ. ಸೌಂದರ್ಯಕ್ಕಾಗಿ ಭಾಷೆಯ ಸೊಗಡು ಅಥವಾ ತೂಕವನ್ನು ಹೆಚ್ಚಿಸುವುದಕ್ಕಾಗಿ ವ್ಯಂಗ್ಯಕ್ಕಾಗಿ ಬಳಸುವ ಉಪಮಾ ರೂಪದ ಪದಪುಂಜಗಳು. ಇವನ್ನು ಗಾದೆಗಳ ಪಟ್ಟಿಯಲ್ಲಿ ನೀವು ಹೇಳಿರುವ ಲೇಖಕರು ಸೇರಿಸಿದ್ದರೆ ಅದು ಅವರು ಮಾಡಿರುವ ತಪ್ಪು.

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ.
ಇದು ಗಾದೆಯಾಗಲು ಸಾಧ್ಯವೇ ಇಲ್ಲ. ಗಾದೆಗಳು ಅನುಭವದ ಮಾತುಗಳು. ಹೆಣ್ಣುಮಗಳನ್ನು ಸಾಗಹಾಕಲು ಮಾಡಿದ ಪಲಾಯನವಾದದ ಮಾತು ಇದು. ಅನುಭವವಲ್ಲ.

ಎಲ್ಲಾ ಗಾದೆಗಳು ಸಂಪೂರ್ಣ ಸತ್ಯವಾಗಿಯೇ ಇರುತ್ತವೆ ಅವು ಸರ್ವಕಾಲಿಕ ಎಂಬುದು ಒಪ್ಪಲಾಗದ ಮಾತು. ಸಂದರ್ಭಕ್ಕೆ ತಕ್ಕಂತೆ ಗಾದೆಗಳ ಬಳಕೆಯಾಗುತ್ತದೆ.
ಉದಾ: ಇಲಿಯಾಗಿ ನೂರುಕಾಲ ಬಳುವುದಕ್ಕಿಂತ ಹುಲಿಯಾಗಿ ಮೂರು ಗಳಿಗೆ ಬಾಳು.
ಗಾಳಿ ಬಂದಾಗ ತೂರಿಕೊ.
ಇವೆರಡೂ ಗಾದೆಗಳು ವಿರುದ್ಧ ಅರ್ಥಗಳನ್ನು ಕೊಡುತ್ತವೆ. ಇವೆರಡರಲ್ಲಿ ಯಾವುದನ್ನು ಪಾಲಿಸುತ್ತೀರಿ? ಅದು ನಿಮ್ಮ ಹಿನ್ನೆಲೆ ಮತ್ತು ಸ್ವಭಾವಗಳನ್ನು ಅವಲಂಬಿಸಿರುತ್ತದೆ.

ಇನ್ನೊಂದು ಗಾದೆ : ಬೆಳೆಯುವ ಪೈರು ಮೊಳಕೆಯಲ್ಲಿಯೆ.
ಇದು ಶುದ್ಧ ಸುಳ್ಳು. ಎಲ್ಲಾ ಸಂದರ್ಭಗಳಲ್ಲಿ ಅನ್ವಯಿಸಲಾಗದು. ಚಿಕ್ಕಂದಿನಲ್ಲಿ ನಾಚಿಕೆ ಸ್ವಭಾವದ ಗಾಂಧೀಜಿ ಎಂದೂ ಮಹಾತ್ಮನಾಗುವ ಲಕ್ಷಣಗಳನ್ನು ತೋರಿಸಿದ್ದಿಲ್ಲ. ಎರಡು ಮೂರನೆಯ ತರಗತಿಯಲ್ಲಿ ಫೇಲಾಗುತ್ತಿದ್ದ ನನ್ನ ಸಹಪಾಠಿಗಳು ಡಿಗ್ರೀಯಲ್ಲಿ ರ್ಯಾಂಕ್ ಪಡೆದುದನ್ನು ತೋರಿಸುತ್ತೇನೆ.

ಗಾದೆಗಳು ಒಂದು ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂಬುದನ್ನು ನಾನು ಒಪ್ಪುತ್ತೇನೆ. ಜನರಲ್ಲಿನ ’ಕಾಮನ್’ ಎನ್ನಬಹುದಾದಂತಹ ಮನೋಭಾವ ಈ ಗಾದೆಗಳ ಹುಟ್ಟಿಗೆ ಕಾರಣವಾಗಿರುತ್ತ್ತವೆ.

ಉಳಿದಂತೆ ನಿಮ್ಮ ಬರಹದಲ್ಲಿ ಕಾಗುಣಿತದ ತಪ್ಪುಗಳು ಕಾಣುತ್ತವೆ. ಪೊಸ್ಟ್ ಮಾಡುವ ಮುಂಚೆ ಲೇಖನವನ್ನು ಇನ್ನೊಮ್ಮೆ ಓದಿದರೆ ಇವನ್ನು ಕಡಿಮೆಗೊಳಿಸಬಹುದು.
ಕೆಲವು ಗಾದೆಗಳ ಸ್ವರೂಪ ಬದಲಾಗಿದೆ ನಿಮ್ಮ ಬರಹದಲ್ಲಿ.
ಉದಾ: ಮುಖ ನೋಡಿ ಮಣೆ ಹಾಕು.

ಈ ಪದಗುಚ್ಚವನ್ನು ವಾಕ್ಯದ ಒಂದು ಭಾಗವಾಗಿ ಬಳಸುತ್ತಾರೆಯೇ ಹೊರತು ಗಾದೆಯಾಗಿ ಅಲ್ಲ. ಉದಾ."ಅವರು ಮುಖ ನೋಡಿ ಮಣೆ ಹಾಕುವವರು" ಎನ್ನುತ್ತಾರೆಯೇ ಹೊರತು "ಮುಖ ನೋಡಿ ಮಣೆಹಾಕು" ಎಂದು ಬೋಧಿಸುವುದಿಲ್ಲ. ಗಾದೆಗಳು ಒಂದು ರೀತಿಯಲ್ಲಿ ಬೋಧನೆಗಳು. ಅವು ಬಹುತೇಕ positive ಆಗಿಯೇ ಇರುತ್ತವೆ. ಈ ಹೇಳಿಕೆ negetive ಬೋಧನೆಯನ್ನು ನೀಡುತ್ತ್ತದೆ. ಹಾಗಾಗಿ ಇದು ಬೋಧನೆಯಲ್ಲ

ನನಗನ್ನಿಸುವಂತೆ ತಾವು ಇನ್ನೂ ಭಾಷೆಯ ಮತ್ತು ಜನಪದ ಸಾಹಿತ್ಯ(?)ದ ಆಳಕ್ಕೆ ಇನ್ನೂ ಇಳಿಯಬೇಕೆನ್ನಿಸುತ್ತದೆ. ಈ ಲೇಖನ ಹೊತ್ತಗೆಗಳನ್ನು ಆಧರಿಸಿ ಬರೆದದ್ದೇ ಹೊರತು ಸ್ವಂತ ವಿಚಾರದಿಂದ ಮತ್ತು ನೇರ ಗಮನಿಸುವಿಕೆಯಿಂದ ಬರೆದದ್ದಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಈ ರೀತಿಯ ತಪ್ಪುಗಳು ಸಾಕಷ್ಟಿವೆ. ಸಧ್ಯಕ್ಕೆ ಇಷ್ಟು ಸಾಕೆನಿಸುತ್ತದೆ. ಹೆಚ್ಚಿನ ಅಧ್ಯಯನ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ನಂಬಿದ್ದೇನೆ.
ನನ್ನ ಪ್ರತಿಕ್ರಿಯೆಯನ್ನು ವಯಕ್ತಿಕವಾಗಿ ತೆಗೆದುಕೊಳ್ಳದೇ ವಿಷಯಕ್ಕೆ ಹೊಂದಿಸಿಕೊಳ್ಳುತ್ತೀರಿ ಎಂದುಕೊಳ್ಳುತ್ತೇನೆ. ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಹಾಗೂ ನನ್ನ ಆಕ್ಷೇಪಣೆಗಳಿಗೆ ಸಮರ್ಥನೆಗಳಿದ್ದರೆ ಸ್ವಾಗತ.

@ ಶ್ರೀಹರ್ಷ ರವರೆ,
ನಿಮ್ಮ ಮುಕ್ತ ಮನಸ್ಸಿನ ಪ್ರತಿಕ್ರಿಯೆಗೆ ನಾನು ಅಭಾರಿ...
೧. ಈ ಲೇಖನ ಮೇಲ್ಕಾಣಿಸಿದ ಪುಸ್ತಕಗಳಲ್ಲಿ ಗಾದೆಗಳ ಬಗ್ಗೆ ಓದಿಯೇ ಬರೆದದ್ದು, ಸಾಲದ್ದಕ್ಕೆ ಅವರಿವರ ಹತ್ತಿರ ಚರ್ಚೆಯೂ ಮಾಡಿ ಬರೆದದ್ದು. ನೀವು ನಾನು ಸಂಗ್ರಹಿಸಿದ ಎಷ್ಟೋ ಗಾದೆಗಳನ್ನು ಗಾದೆಗಳೇ ಅಲ್ಲ ಎಂದಿದ್ದೀರಿ, ಒಂದು ವೇಳೆ ನಿಮ್ಮ ಮಾತು ನಿಜವಾಗಿದ್ದರೆ, ಅದು ಕನ್ನಡ ಸಾಹಿತ್ಯ ಪರಿಷತ್ತಿನವರದೇ ತಪ್ಪು ಎಂದುಕೊಳ್ಳುತ್ತೇನೆ. ಏಕೆಂದರೆ ಆ ಗಾದೆಗಳನ್ನು ಕ.ಸಾ.ಪ.ನವರ ಪುಸ್ತಕದಿಂದ "ಎತ್ತಿಕೊಂಡದ್ದು" (ಗ್ರಂಥಋಣದಲ್ಲಿ ಹೆಸರಿಸಿದ್ದೇನೆ).
೨. @"ಕೆಲವು ಗಾದೆಗಳ ಸ್ವರೂಪ ಬದಲಾಗಿದೆ" - ಖಂಡಿತವಾಗಿಯೂ ನನ್ನ ಉದ್ದೇಶ ಅದಾಗಿರಲಿಲ್ಲ. ಓದಿದ್ದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದೊಂದೇ ಗುರಿಯಾಗಿತ್ತು. ಇಬ್ಬಗೆಯ ಅರ್ಥ ಕಂಡುಬಂದಲ್ಲಿ ಕ್ಷಮಿಸಿ.
೩. ಮುಂದಿನ ಸಲ ಪೋಸ್ಟ್ ಮಾಡುವುದಕ್ಕಿಂತ ಮುಂಚೆ ಖಂಡಿತವಾಗಿ ಇನ್ನೆರಡು ಸಲ ಓದಿ, ತಪ್ಪನ್ನು ತಿದ್ದುತ್ತೇನೆ. ಮತ್ತೆ ತಪ್ಪಿದರೆ, ದಯವಿಟ್ಟು ತಿಳಿಸಿ.
೪. ನೀವು ಹೇಳಿದ ಹಾಗೆ, ನಾನು ಜಾನಪದದ ಆಳಕ್ಕೆ ಇಳಿಯಬೇಕಾಗಿದೆ. ಪ್ರಯತ್ನಿಸುತ್ತೇನೆ. ನಿಮ್ಮ ಸಲಹೆಗಳಿಂದ ಸ್ವಲ್ಪವಾದರೂ ಸಹಾಯವಾಗಬಹುದು.
೫. ಸಾಹಿತ್ಯದ ಹಲವು ಬಗೆಗಳಲ್ಲಿ ಸ್ವಂತಿಕೆ ಕಂಡುಕೊಳ್ಳಬಹುದು ಆದರೆ ಜಾನಪದದಲ್ಲಿ ಎಲ್ಲಿಂದ ಬರಬೇಕು ಸ್ವಂತಿಕೆ? ಶಿವರುದ್ರಪ್ಪನವರು ಹೇಳುವ ಹಾಗೆ, ಜಾನಪದ ಬೀದಿಯಲ್ಲಿ ಸಿಕ್ಕುವ ಜ್ಞಾನ. ಅಂದಂದಿನ ಅನುಭವಕ್ಕೆ ಅಲ್ಲಲ್ಲೇ ರೂಪುತಾಳಿ, ಬಾಯಿಂದ ಬಾಯಿಗೆ ಚಲಾವಣೆಯಾಗುತ್ತಾ ಅಂದಂದಿನ ಸಂಧರ್ಭದಲ್ಲಿ ಹುಟ್ಟಿಕೊಂಡದ್ದು. ಅಳಿದುಳಿದ ಜಾನಪದವನ್ನು ಓದಿ, ವಸ್ತುಗಳನ್ನು ಸಂಗ್ರಹಿಸಿ, ಸಂಪದ ಓದುಗರಿಗೆ ಜಾನಪದದಲ್ಲಿ ಆಸಕ್ತಿ ಹುಟ್ಟಿಸುವುದಷ್ಟೇ ನನ್ನ ಉದ್ದೇಶವಾಗಿತ್ತು.
ನಿಮ್ಮ ಸಲಹೆಗಳಿಗೆ ನಾನು ಋಣಿ....

<<ಸಾಹಿತ್ಯದ ಹಲವು ಬಗೆಗಳಲ್ಲಿ ಸ್ವಂತಿಕೆ ಕಂಡುಕೊಳ್ಳಬಹುದು ಆದರೆ ಜಾನಪದದಲ್ಲಿ ಎಲ್ಲಿಂದ ಬರಬೇಕು ಸ್ವಂತಿಕೆ?>>
ನಾನು ಹೇಳಿದ್ದು ಹಾಗಲ್ಲ. ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬರೆಯುವುದಕ್ಕಿಂತ ಅದರ ಜೊತೆಗೆ ನಿಮ್ಮ ವಿಚಾರವಂತಿಕೆಯನ್ನು ಸೇರಿಸಿದ್ದರೆ ಕ.ಸಾ.ಪದ ಅಥವಾ ಪುಸ್ತಕ ಬರೆದವರ ತಪ್ಪುಗಳು ನಿಮ್ಮ ಲೇಖನದಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ. ಅಂದರೆ ನೀವು ಪರಿಗಣಿಸಿದ ಆಕರಗಳಲ್ಲಿ ಬರೆದಿರುವುದು ಸರಿ ಇದೆಯೋ ತಪ್ಪಿದೆಯೋ ಎಂದು ವಿವೇಚಿಸಬೇಕಿತ್ತು ಎಂದು ಹೇಳಬಯಸಿದೆ ಅಷ್ಟೆ.
ಹೀಗೆಯೇ ಬರೆಯುತ್ತಿರಿ. ಶುಭವಾಗಲಿ.