ನ್ಯಾನೋ ಕಥೆಗಳು

To prevent automated spam submissions leave this field empty.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು .2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!.


3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!!

4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು .

5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು .


6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು .

7) ಮಾರುಕಟ್ಟೆಯಲ್ಲಿ ಎದುರು ಸಿಕ್ಕಾಗ ನೋಡಿಯೂ ನೋಡದವನಂತೆ ಮುಖ ಹೊರಳಿಸಿ ಹೋದ ಗೆಳೆಯನು ಮನೆಗೆ ಹೋಗಿ "Hi dude !!! Whatsup ??? ಎಂದು ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿದನು .

8) " ಅಲೆಲೆ .. ಮುದ್ದುಮಲೀ ಹೊತ್ತೆ ನೋವಾ ??? " ಎಂದು ತಮ್ಮ ಪಾಪುವನ್ನು ಉಪಚರಿಸಿದ ಡಾಕ್ಟರನ್ನು ಕಂಡು ಮಗುವಿನೊಂದಿಗೆ ಮಗುವಾಗಿ ನಡೆದುಕೊಳ್ಳುತ್ತಾರೆ ಎಂದು ಸಂತೋಷಪಟ್ಟ ಹೆತ್ತವರು ಕೊನೆಗೆ ಡಾಕ್ಟರು " ನಾಲ್ಕು ಗುಲಿಗೆ ಬಲೆದು ಕೊತ್ತೀನಿ .. ಬೆಳಿಗ್ಗೆ ಮತ್ತು ಲಾತ್ಲಿ ಕೊದಿ " ಎಂದಾಗ ಕಂಗಾಲಾದರು .


9) ಆತ್ಮಹತ್ಯೆಗೆ ಪ್ರಯತ್ನಿಸಿ ಕಲಬೆರಕೆ ವಿಷದಿಂದ ಸಾಯದೆ ಹೋದ ರೈತನು ಆಸ್ಪತ್ರೆಯಲ್ಲಿ ಕೊಟ್ಟೆ ಕಲಬೆರಕೆ ಔಷಧದಿಂದ ಸತ್ತ .


10) ಸೀರೆ ತರುವುದನ್ನು ಮರೆತೆ ಎಂದು ಗಂಡ ಹೇಳಿದಾಗ " ನೀವೂ ಮನುಷ್ಯರಾ ?? ಎಂದು ಗುಡುಗಿದ ಮಡದಿ , ಗಂಡ ಅಡಗಿಸಿಟ್ಟಿದ್ದ ಸೀರೆ ಹೊರ ತೆಗೆದಾಗ "ಅಲ್ಲ ದೇವರು !!! ದೇವರು !!! " ಎಂದು ವಾಕ್ಯ ಪೂರ್ತಿ ಮಾಡಿದಳು ..

12) ಉತ್ತರ ಪತ್ರಿಕೆಯ ಮೇಲೆ ಅಧ್ಯಾಪಕರ ಕೆಂಪು ಶಾಯಿಯಲ್ಲಿ ಬರೆದದ್ದು ಏನೆಂದು ತಿಳಿಯದೆ ಅವರನ್ನೇ ಹೋಗಿ ಕೇಳಿದ ಗುಂಡನಿಗೆ ಅಧ್ಯಾಪಕರು " ಅದಾ ?? ಅದು ಕೈಬರವಣಿಗೆ ಸ್ಫುಟ ಮತ್ತು ಸುಂದರವಾಗಿರಬೇಕು ಎಂದು ಬರೆದದ್ದು " ಎಂದರು .


13) ದಿನವೂ ಒಂದು ರುಪಾಯಿ ದಾನ ಮಾಡುತ್ತಿದ ಒಬ್ಬ ಭಿಕ್ಷುಕನಿಗೆ ಒಂದು ದಿನ ಕೊಡದೆ ಹೋದಾಗ ಅವನು " ಕೊಡದೆ ಇರುವ ಪುಣ್ಯಾತ್ಮರು ಹೇಗೂ ಕೊಡುವುದಿಲ್ಲ ಇವತ್ತು ಈ ಕೊಡುವ ಬ್ಯಾವರ್ಸಿಗೆ ಏನಾಯ್ತು ??? " ಎಂದು ಗೊಣಗಿದ .

14) ನನ್ನ ಒತ್ತಾಯದ ಕಾಟಾಚಾರಕ್ಕೆ ಲೇಖನ ಓದುವ ಓದುಗರು ನಂಬರ 11 ಇಲ್ಲದೆ ಇರುವುದನ್ನು ಗಮನಿಸಲೇ ಇಲ್ಲ .

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಎಲ್ಲ ಕಥೆಗಳೂ ಅದ್ಭುತವಾಗಿವೆ ... ನಾನು ನಂಬರ್ ೧೧’ಅನ್ನು ನೋಡಲಿಲ್ಲ .... (ಸಂಖ್ಯೆ) Quantity ಗಿಂತ Quality ನೋಡಿದ್ರಿಂದ... ನನ್ನ ವ್ಯಾಖ್ಯಾನ (ಹಾಗೇ ಸುಮ್ಮನೆ) ೧. ಗಂಡ - ಹೆಂಡತಿ ಇಬ್ಬರೂ ದುಡಿವ ಈ ಕಾಲದಲ್ಲಿ ಮಗುವು ’ಆಂಟೀ ಇವರುಗಳು ಯಾರು’ ಎಂದು ಅಪ್ಪ-ಅಮ್ಮ ಕಡೆ ಕೈ ತೋರಿಸಿ ಮನೆ ಕೆಲಸದವಳನ್ನು ಕೇಳುತ್ತದೆ ೨. ಸದಾ ಆಕಾಶದ ಕಡೆ ನೋಡುತ್ತಾ ಗುಣಾಕಾರ ಹಾಕುವವರಿಗೆ ನೆಲದ ಮೇಲೆ ನೆಡೆಯುವುದು ಕಾಣುವುದಾದರೂ ಹೇಗೆ ? ೫. ಕಣ್ಣಿದ್ದೂ ಕುರುಡರ ಹಾಗೆ ಆಡುವವರಿಗೆ ಇನ್ನೇನು ಹೇಳಲು ಸಾಧ್ಯ ಹೇಳಿ ೬. ಇಬ್ಬರೂ ಮಾಡಿದ್ದು ಹಣಕ್ಕಾಗಿ ತಾನೇ? ೭. ಜಿಗರಿಗಳಲ್ಲೇ ಗುಜರಿ ಆಗಿರೋದ್ರಿಂದಾನೇ ಅದಕ್ಕೇ ಸ್ಕ್ರಾಪ್ ಅನ್ನೋದು ! ೮. ಬೆಲಿಗ್ಗೆ ಇಂದ ಲಾತ್ಲಿವಲೆಗೂ ಮುದ್ದು ಮಲಿಗಲನ್ನೇ ನೋಲ್ತಾ ನೋಲ್ತಾ ಪಾಪ .... ೯. ಒಟ್ಟಿನಲ್ಲಿ ಅಂದುಕೊಂಡಿದ್ದ ಕೆಲಸ ಆಯ್ತು ಅನ್ನಿ !

ಒಂದೊಂದು ಕತೆಯನ್ನೂ ಕಾದಂಬರಿಯಾಗಿಸಬಹುದು. ಇದು ಟ್ವಿಟರ್ ಯುಗವಲ್ಲವೇ? ನ್ಯಾನೋ ಕತೆಗಳೇ ಇರಲಿ ಬಿಡಿ. ತುಂಬ ಚೆನ್ನಾಗಿವೆ ಕತೆಗಳು. ಅದರಲ್ಲೂ ನಿಮ್ಮ ೧೧ನೇ ಕತೆ ಸಕತ್! - ಕೇಶವ (www.kannada-nudi.blo...)

ಎಲ್ಲಿ ಕಾಣಿಸ್ಲಿಲ್ಲ ಅಂತಿದ್ದೆ, ಬ್ಯಾಂಗ್ ಎಂಟ್ರಿ ಕಣ್ರಿ, ಚೆನ್ನಾಗಿವೆ ನಿಮ್ ನ್ಯಾನೋ ಕತೆಗಳು ಮತ್ತು ಹೆಸರೂ ಕೂಡ! :)

>> HP, ನಿಮ್ಮ ಗಾಳ ಕಚ್ಚಿ ಸಿಕ್ಕಿಬೀಳಲಾರೆ. ನನ್ನ ಶಸ್ತ್ರವಾದ ಕೀಲಿಮಣೆಯನ್ನು ತ್ಯಜಿಸಿ ವಿಶ್ರಮಿಸುತ್ತೇನೆ. -- ಶತದಡ್ಡ