ಸತ್ಯ ದರ್ಶನ !

To prevent automated spam submissions leave this field empty.

ಶುದ್ದ ಸೋಮವಾರ ಬೆಳಿಗ್ಗೆ. ಆರಾಮವಾಗಿ ಎಂಟಕ್ಕೆ ಎದ್ದೆ, ಕಾರಣ ರಜೆ ಹಾಕಿದ್ದೆ. ಹತ್ತು ಘಂಟೆಗೆ ಯಾವುದೋ ಕಂಪನಿಯಲ್ಲಿ ಇಂಟರ್ವ್ಯೂ ಇತ್ತು. ಮನೆಯಿಂದ ಹತ್ತು ನಿಮಿಷದ ದಾರಿ ಮಾತ್ರ. ಹಾಗಾಗಿ ಗಡಿಬಿಡಿ ಇಲ್ಲ. ನಿತ್ಯಕರ್ಮಗಳನ್ನು ಮುಗಿಸಿ, ಕಾಫೀ ಹೀರಿ, ತಿಂಡಿ ಏನಿದೆ ಎಂದು ನೋಡಲು ರೆಫ್ರಿಜಿರೇಟರ್ ಕದವನ್ನು ತೆರೆದೆ. ಅಮ್ಮ ಮಾಡಿಟ್ಟು ಹೋಗಿದ್ದ ಉಪ್ಪಿಟ್ಟು ಇತ್ತು. ಸ್ವಲ್ಪ ಹೊರ ತೆಗೆದಿಟ್ಟೆ, ಆಮೇಲೆ ಬಿಸಿ ಮಾಡಿಕೊಳ್ಳೋಣ ಎಂದು. ಲ್ಯಾಪಿನ ಮೇಲೆ ಲ್ಯಾಪುಟಾಪನ್ನೇರಿಸಿ ಸೋಫಾದ ಮೇಲೆ ಕುಳಿತು, ಹಾಗೇ ಟೀವಿಯನ್ನೂ ಆನ್ ಮಾಡಲು ರಿಮೋಟ್ ಕೈಗೆತ್ತಿಕೊಂಡೆ. ಅಷ್ಟರಲ್ಲಿ, ನನ್ನ ಹಿಂದಿನಿಂದ ದನಿಯೊಂದು ಮೂಡಿ ಬಂತು "ಇನ್ನೂ ತಿಂಡಿ ತಿಂದಿಲ್ಲವೇ?" ಅಂತ

ತಿರುಗಿ ನೋಡಿದೆ. ಬಿಳೀ ಪಂಚೆ ಬಿಳೀ ಷರಟು ತೊಟ್ಟ ತಾತ ನಿಂತಿದ್ದರು. "ರೂಮ್ ಟೆಂಪರೇಚರ್’ಗೆ ಬರಲಿ ಅಂತ ಹಾಗೇ ಎತ್ತಿಟ್ಟಿದ್ದೇನೆ" ಅಂದೆ ... ಅದು ಹಾಗೇ ಹೊರಳಿ ಬಂದ ಮಾತಾಗಿತ್ತು ಅಷ್ಟೇ, ಮರು ಕ್ಷಣ ಸಣ್ಣ ದನಿಯಲ್ಲಿ ಕಿರುಚಿಯೇ ಬಿಟ್ಟೆ !!

ಅಪ್ಪ-ಅಮ್ಮ ಇಬ್ಬರೂ ಅಜ್ಜಿಯನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿದ್ದರು. ಹಾಗಾಗಿ ನಾನೊಬ್ಬನೇ ... ಈಗ ನನ್ನ ಜೊತೆಯಲ್ಲಿ ನನ್ನ ತಾತ ... ನನ್ನ ಪ್ರೀತಿಯ ತಾತ ! ... ಹತ್ತು ವರ್ಷಗಳ ಹಿಂದೆ ನಮ್ಮನ್ನೆಲ್ಲ ಅಗಲಿ ಹೋದ ತಾತ !! .... ಈಗ ಸಡನ್ನಾಗಿ ಎಂಟ್ರಿ ಕೊಟ್ಟರು ಅಂದರೇ ... ಇಲ್ಲ... ಭ್ರಮೆಯಲ್ಲ !! ನಿಜಕ್ಕೂ ನಿಂತಿದ್ದಾರೆ ...

ಕಳೆದ ಪಿತೃಪಕ್ಷದಲ್ಲೊಂದು ದಿನ, ಹೊರಗೆ ಕಾಗೆಯೊಂದು ಒಂದೇ ಸಮನೆ ಕಾವ್-ಕಾವ್ ಎಂದು ಕೂಗುತ್ತಿರುವಾಗ ನಾನು ಅಜ್ಜಿಯೊಡನೆ ಹಾಸ್ಯ ಮಾಡಿದ್ದೆ "ನೋಡಜ್ಜೀ, ಯಾರೋ ನಮ್ಮ ಬಳಗ ಇರಬೇಕು, ಬಂದಿದ್ದಾರೆ" ಅಂತ. ಅಜ್ಜಿ ಅದಕ್ಕೆ ರೇಗಿಕೊಂಡೇ ನುಡಿದಿದ್ದರು "ಈಗಿನ ಕಾಲದ ಹುಡುಗರಿಗೆ, ನಮ್ಮ ಸಂಪ್ರದಾಯ ಅಂದರೆ ಅಷ್ಟಕ್ಕಷ್ಟೇ. ಎಲ್ಲ ಹಾಸ್ಯ ಇವಕ್ಕೇ. " ಹೀಗೇ ಸಾಗಿತ್ತು. "ನಾನು ಸುಮ್ಮನೆ ಹೇಳಿದೆ ಅಜ್ಜಿ. ನನ್ನ ಬಿಟ್ಟುಬಿಡಿ" ಅಂತ ನಾನು ಕಾಲಿಗೆ ಬೀಳೋದು ಬಾಕಿ ಇತ್ತು. ಅಜ್ಜಿಯನ್ನು ರೇಗಿಸಿದರ ಫಲವೋ ಏನೋ ಎಂಬಂತೆ ಈಗ ತಾತ ದರ್ಶನ.

ಅದೇ ಶಾಂತತೆಯಲ್ಲಿ ನನ್ನನ್ನು ಸಮಾಧಾನಗೊಳಿಸಿ ನಿನಗೆ ಸತ್ಯದರ್ಶನ ಮಾಡಿಸಲೆಂದೇ ಬಂದಿದ್ದೀನಿ, ಹೆದರಬೇಡ ಎಂದೆಲ್ಲಾ ಸಾಂತ್ವನಗೊಳಿಸಿ, ಮೊದಲು ನನ್ನನ್ನು ತಿಂಡಿ ತಿಂದು ಮುಗಿಸೆಂದು ಬಲವಂತ ಮಾಡಿದರು. ಮೊದಲಿಂದಲೂ ಹೀಗೆ ಈ ತಾತ ’ಹೊರಗಡೆ ಹೊರಡುವ ಮುನ್ನ ಅಮ್ಮ ಏನು ಮಾಡಿದ್ದಾರೋ ಅದನ್ನು ಹೊಟ್ಟೆಗೆ ಹಾಕಿಕೊಂಡು ಹೋಗಿ. ಬರುವುದು ಒಂದರ್ಧ ಘಂಟೆ ತಡವಾದರೂ ಚಿಂತೆಯಿಲ್ಲ’ ಅಂತ ... ಓ! ಅಂದರೆ ನಾವೀಗ ಹೊರಗಡೆ ಹೊರಟಿದ್ದೀವಿ ಅಂತಾಯ್ತು ... ಈಗ ನಾವು ಹೊರಗೆ ಹೊರಟರೆ, ತಾತನನ್ನು ಬಲ್ಲವರು ಅವರನ್ನು ನೋಡಿ ಎಲ್ಲರೂ ಭೀತಿಯಿಂದ ಎದ್ದು ಬಿದ್ದು ಓಡುತ್ತಾರೆ ... ಅಲ್ಲದೇ, ನನಗೆ ಇಂಟರ್ವ್ಯೂ ಬೇರೆ ಇದೆ"

ತಾತ ನುಡಿದರು "ನೀನೇನೂ ಚಿಂತೆ ಮಾಡಬೇಡ. ನಾನು ನಿನ್ನ ಕಣ್ಣಿಗೆ ಬಿಟ್ಟು ಇನ್ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಹಾಗೇ ನೀನು ನನ್ನೊಂದಿಗೆ ಮಾತನಾಡುತ್ತಿರುವಾಗ ಬೇರೊಬ್ಬರಿಗೆ ಕೇಳಿಸುವುದೂ ಇಲ್ಲ, ಯಾಕೆಂದರೆ ನಮ್ಮಿಬ್ಬರ ಸಂಭಾಷಣೆ ಏನಿದ್ದರೂ ಮನದಲ್ಲಿ ಮಾತ್ರ". "ಹೌದಲ್ವೇ? ನಾನು ಆಗಿಂದಲೂ ಬಾಯೇ ಬಿಟ್ಟಿಲ್ಲ ಹಾಗಿದ್ರೂ ಇಬ್ರೂ ಮಾತನಾಡುತ್ತಿದ್ದೇವಲ್ಲ ?"

ನಾನೂ, ತಾತ ಇಬ್ಬರೂ ಕಾರಿನಲ್ಲಿ ಹೊರಟೆವು. ಇನ್ನೂ ಕಾಲು ಘಂಟೆ ಇರುವಂತೆಯೇ ನಾವು ಅಲ್ಲಿದೆವು. ತಾತ ಏನೂ ಮಾತನಾಡದೆ ಸುಮ್ಮನಿದ್ದರು. ನಾನು ಒಳಗೆ ಹೋಗಿ ಅರ್ಧ ಘಂಟೆಯಲ್ಲಿ ಹೊರಗೆ ಬಂದೆ. ಇಬ್ಬರೂ ಹೊರಟು ಕಾರಿನಲ್ಲಿ ಕುಳಿತೆವು. ತಾತ ಕೇಳಿದರು "ಹೇಗಾಯ್ತು ?" ನಾನೆಂದೆ "ಚೆನ್ನಾಗೇ ನೆಡೆಯುತ್ತಿತ್ತು. ಆಮೇಲೆ ಯಾವುದೋ ಫೋನ್ ಬಂತು. ನಂತರ ಇಂಟರ್ವ್ಯೂ ಸಡನ್ನಾಗಿ ಮುಗಿದು ಹೋಯ್ತು. ಆಮೇಲೆ ತಿಳಿಸ್ತೀನಿ ಅಂದು ಕಳಿಸಿಬಿಟ್ರು. ಬರೀ ಮೋಸ ಅನ್ನಿಸುತ್ತೆ. ಅವನನ್ನಾ ಹಿಡ್ಕೊಂಡ್ ಹೊಡೆದುಬಿಡೋ ಅಷ್ಟು ಸಿಟ್ಟು ಬಂತು"

ತಾತ ನುಡಿದರು "ನಿನ್ನ ಊಹೆ ಸರಿ. ನಿನಗೆ ಈ ಕೆಲಸ ಸಿಗೋಲ್ಲ. ಅದು ಬೇರೆಯವರಿಗೆ ಸಿಗಲಿದೆ. ಅದು ಬೇರೆ ಯಾರೂ ಅಲ್ಲ. ನಿನ್ನನ್ನು ಇಂಟರ್ವ್ಯೂ ಮಾಡಿದ ’ರಾಜಾರಾಯ’ನ ಹೆಂಡತಿಯ ತಮ್ಮನಾದ ’ಪ್ರತಾಪ’ನಿಗೆ. ಈ ರಾಜಾರಾಯನಿಗೆ ಪ್ರತಾಪನನ್ನು ತಂದು ತನ್ನ ಕಂಪನಿಯಲ್ಲಿ ಕೆಲಸ ಕೊಡಲು ಇಷ್ಟವಿಲ್ಲ, ಕಾರಣ ಅವನಿಗಿರೋ ರಾಜಕೀಯದ ನಂಟು. ರಾಜಾರಾಯನನ್ನೇ ಎತ್ತಂಗಡಿ ಮಾಡಿ ಆ ಸ್ಥಾನದಲ್ಲಿ ಕುಳಿತುಕೊಳ್ಳೋ ತಾಕತ್ತು ಪ್ರತಾಪನಿಗಿದೆ. ಆದರೆ ಹೆಂಡತಿಯ ಬಲವಂತ. ಆಗ ಬಂದಿದ್ದು ಅವಳದೇ ಫೋನ್. ಅವಳು ಬಲವಂತ ಮಾಡುತ್ತಿರುವುದಕ್ಕೂ ಕಾರಣ ಇದೆ". 

"ತನ್ನ ತಂದೆಯಿಂದ ಮದುವೆ ಸಮಯದಲ್ಲಿ ಬಳುವಳಿಯಾಗಿ ಬಂದ ಕಂಪನಿಯಲ್ಲಿ ತನ್ನ ತಮ್ಮನಿಗೆ ಜಾಗ ಕೊಡಲು ಇವಳು ಸಿದ್ದವಿಲ್ಲ. ಪ್ರತಾಪನ ಕಂಪನಿ ಮುಳುಗಿ ಎರಡು ವರ್ಷ ಆಯ್ತು. ಗಂಡನ ಕಂಪನಿಗಿಂತ ಇವಳದು ತುಸು ದೊಡ್ಡದಾದ್ದರಿಂದ, ಪ್ರತಾಪನನ್ನು ಅಲ್ಲಿ ಬಿಟ್ಟು, ನಂತರ ಇವಳೂ ’ಬೋರ್ಡ್ ಆಫ್ ಡೈರೆಕ್ಟರ್ಸ್’ನಲ್ಲಿ ಒಬ್ಬಳಾಗಬಹುದು ಅಂತ. ಗಂಡ ಅವಳನ್ನು ತನ್ನ ಆಫೀಸಿನ ಬೋರ್ಡ್’ಗೆ ಬರಲು ಬಿಟ್ಟಿರಲಿಲ್ಲ. ಹಾಗೇ ಅವಳು ತನ್ನ ಕಂಪನಿಯ ವ್ಯವಹಾರದಲ್ಲಿ ಗಂಡನನ್ನು ಕಾಲಿಡಲು ಬಿಟ್ಟಿರಲಿಲ್ಲ. ಅಲ್ಲದೇ, ಗಂಡನಿಗೂ ಅವನ ಸೆಕ್ರೆಟರಿಗೂ ಇರೋ ಸಂಬಂಧವನ್ನು ಬೇಗ ಮುರಿಯದಿದ್ದರೆ, ಅವನ ಆಸ್ತಿ ಎಲ್ಲಿ ಅವಳ ಕೈಗೆ ಹೊರಟುಹೋಗುವುದೋ ಎಂಬ ಆತಂಕ. ಆದರೆ ಅವಳ ತಮ್ಮನ ಹಿಂದೆ ಬಿದ್ದಿರುವ ಆ ಸೆಕ್ರೆಟರಿ, ತಾನೂ ಕಂಪನಿಯ ದೊಡ್ಡ ಸ್ಥಾನಕ್ಕೆ ಏರಬಹುದೆಂಬ ಆಸೆ ಹೊಂದಿದ್ದಾಳೆ ಎಂಬುದು ಈ ಗಂಡ-ಹೆಂಡತಿಗೆ ಗೊತ್ತಿಲ್ಲ. ಎಲ್ಲ ದೊಡ್ಡವರ ಆಟ. ಈ ಇಡೀ ಆಟದಲ್ಲಿ ನಿನ್ನಂಥವರ ಪಾತ್ರ ಇಲ್ಲವೇ ಇಲ್ಲ ಎನಿಸುವಷ್ಟು. ಆ ಸೆಕ್ರೆಟರಿಯಂಥವರ ಪಾತ್ರ ಪಗಡೆ ಆಟದ ಕಾಯಿಯಂತೆ. ಇನ್ನೊಂದು ತಿಂಗಳಲ್ಲಿ ಅವಳಿಗಾಗುವ ಅನ್ಯಾಯ ನೆನಸಿಕೊಂಡರೆ ಬೇಜಾರಾಗುತ್ತೆ". ಕೇಳ್ತಾ ಕೇಳ್ತಾ ತಲೆ ತಿರುಗತೊಡಗಿತು.

ಉಪ್ಪಿಟ್ಟು ಸಾಕಾಗಲಿಲ್ಲವೆಂದು ತೋರುತ್ತೆ. ಹಸಿವಾಗ ತೊಡಗಿತು. ಹಾಗೇ ಬದಿಯಲ್ಲಿ ತೆಗೆದುಕೊಂಡು ನನ್ನ ನೆಚ್ಚಿನ ಹೋಟೆಲ್’ಗೆ ಕಡೆ ಹೋದೆ. ಬೀದಿ ಕೊನೆಯಲ್ಲಿದ್ದ ಕುರುಡು ಬಿಕ್ಷುಕನನ್ನು ಕಂಡು ಅಯ್ಯೋ ಎನ್ನಿಸಿ ದುಡ್ಡು ಕೊಟ್ಟೆ. ತಾತ ಸುಮ್ಮನೆ ನಕ್ಕರು ಅಷ್ಟೇ ! ಒಳಗೆ ಹೋದ ಮೇಲೆ ತಾತನನ್ನು ಕೇಳಿದೆ "ನಕ್ಕಿದ್ದೇಕೆ ?" ಅಂತ.

ತಾತ ನುಡಿದರು "ನಿನ್ನಿಂದ ನೆಡೆದದು ಅಪಾತ್ರದಾನ. ಏಕೆಂದರೆ ಅವನು ಕುರುಡನೂ ಅಲ್ಲ ಭಿಕ್ಷುಕನಂತೂ ಮೊದಲೇ ಅಲ್ಲ. ನೀನು ತ್ರಿಕಾಲಜ್ಞ್ನಾನಿ ಅಂತ ಭಕ್ತಿಯಿಂದ ತಲೆ ಬಾಗೋ ಆಷಾಡಭೂತಿ ಸ್ವಾಮೀಜಿಯ ಶಿಷ್ಯ ಅಥವಾ ಪಾರ್ಟನರ್. ಜನರ ಮಧ್ಯೆ ಇದ್ದು, ಎಲ್ಲರ ವಿಷಯ ತಿಳಿದುಕೊಂಡು ತನ್ನ ಕಳ್ಳ ಗುರುವಿಗೆ ಒಪ್ಪಿಸುತ್ತಾನೆ. ನಿನ್ನ ಮುಖ ನೋಡುತ್ತಲೇ ನಿನ್ನ ಸಂಪೂರ್ಣ ಜಾತಕ ನುಡಿವ ’ಅದ್ಭುತ ಶಕ್ತಿ’ಯ ಸ್ವಾಮೀಜಿಗೆ ಇವನಿಂದಲೇ ವಿಷಯ ದೊರಕೋದು. ಜೊತೆಗೆ ಅವನಿಗಿರೋ ಸೂಕ್ಷ್ಮ ಬುದ್ದಿ. ಉದಾಹರಣೆಗೆ ಪಂಚೆಯುಟ್ಟ ಚಿಂತಿತ ಮುಖದಿ ಸ್ವಾಮೀಜಿಯ ಬಳಿ ಹೋದವನೊಬ್ಬನನ್ನು ನೋಡಿದ ಕೂಡಲೇ ಆ ಸ್ವಾಮಿ ಕೇಳೋ ಪ್ರಶ್ನೆ ’ಮಗಳ ಮದುವೆ ಚಿಂತೆ ಅಥವಾ ಮಗ ನೌಕರಿ ಚಿಂತೆ ಅಲ್ಲವೇ ?’ ಎನ್ನುತ್ತಾರೆ. ಈ ಪ್ರಶ್ನೆ ಕೇಳಲು ಸ್ವಾಮೀಜಿಯೇ ಆಗಬೇಕೆ? ಇನ್ನೊಂದು ವಿಷಯ ಗೊತ್ತಾ ? ಈ ಸ್ವಾಮಿಗೆ ಮತ್ತೊಬ್ಬ ಅಸಿಸ್ಟೆಂಟ್ ಇದ್ದಾನೆ. ಅವನು ಆಟೋ ಓಡಿಸುತ್ತಾನೆ. ಆಟೋ ಡ್ರೈವರ್’ಗೆ ಎಷ್ಟು ಮನೆಗಳ ಒಳ ವಿಚಾರಗಳು ಗೊತ್ತಿರುತ್ತೋ ಆ ಪರಮಾತ್ಮನಿಗೇ ಗೊತ್ತು !". 

ಇವೆಲ್ಲ ನನಗೇಕೆ ಅರಿಯಲಿಲ್ಲ ? ಯೋಚಿಸುತ್ತಿರುವಾಗಲೇ, ನನ್ನ ಮುಂದಾಗಿ ಶಂಕರಪ್ಪ ಹಾದು ಹೋದರು. ಅವರನ್ನು ಕಂಡು ವಿಶ್ ಮಾಡಿ ಒಂದು ನಿಮಿಷ ಮಾತನಾಡಿದೆ. ಅವರು ಹೋದ ಮೇಲೆ ತಾತನಿಗೆ ಹೇಳಿದೆ "ನನಗೆ ಅಂಕ ಕಡಿಮೆ ಬಂದಾಗ ಇಂಜಿನೀರಿಂಗ್ ಸೀಟಿಗಾಗಿ ಪರದಾಡುತ್ತಿದ್ದೆ. ಇವರು ಎರಡು ಲಕ್ಷಕ್ಕೆ ಬೆಂಗಳೂರಿನಲ್ಲೇ ಸೀಟು ಕೊಡಿಸ್ತೀನಿ ಅಂದರು. ಆಮೇಲೆ ಯಾರೋ ಮಧ್ಯೆ ಬಂದು ಕೆಲಸಾ ಕೆಡಿಸಿದರು. ಕೊನೆಗೆ ಇವರು ಬಹಳ ಕಷ್ಟಪಟ್ಟು ರಾಯಚೂರಿನಲ್ಲಿ ಸೀಟು ಕೊಡಿಸಿದರು. ಐವತ್ತು ಸಾವಿರ ವಾಪಸ್ಸು ಕೊಟ್ಟರು". ತಾತ ನಕ್ಕರು.

ಪ್ರತಿ ನಗುವಿಗೂ ಒಂದೊಂದು ಸತ್ಯ ದರ್ಶನ ಆಗುತ್ತಿದೆ. ಈಗೇನು ಎಂಬಂತೆ ನೋಡಿದೆ. ತಾತ ನುಡಿದರು "ಎರಡು ಲಕ್ಷಕ್ಕೆ ಬೆಂಗಳೂರಿನ ಕಾಲೇಜಿನಲ್ಲಿ ಸೀಟು ಅಂದರೆ ನಗದೆ ಇನ್ನೇನು ಮಾಡಲಿ. ಯಾರೋ ಮಧ್ಯೆ ಬರಲಿಲ್ಲ. ಇದು ಅವರಾಡಿದ ಆಟ ಅಷ್ಟೆ. ಮೊದಲ ದೀಪಾವಳಿ ಪ್ರಯುಕ್ತ ಅಳಿಯನಿಗೆ ಒಂದು ಕಾರು ಕೊಡಿಸುವ ಯೋಚನೆಯಲ್ಲಿದ್ದಾಗ ಸಿಕ್ಕಿದ್ದು ನೀನು. ನೀ ಕೊಡೋ ಎರಡು ಲಕ್ಷ ಅವರಿಗೆ ಯಾಕೆ ಸಾಕು? ಆ ಸಮಯದಿ ಸಿಕ್ಕಿದ್ದು ಒಬ್ಬ ಉತ್ತರ ಭಾರತೀಯ. ಅವನಿಂದ ಹತ್ತು ಲಕ್ಷ ತೆಗೆದುಕೊಂಡು ಬೆಂಗಳೂರಿನಲ್ಲಿ ಸೀಟು ಕೊಡಿಸಿ, ನಿನ್ನನ್ನು ರಾಯಚೂರಿಗೆ ಕಳಿಸಿದರು. ಗುರುತಿನವನು ಅಂತ ನಿನ್ನ ಕಣ್ಣೊರೆಸಲು ಐವತ್ತು ಸಾವಿರ ವಾಪಸ್ಸು ಕೊಟ್ಟರು, ಅಷ್ಟೇ! "

 

ಎಲ್ಲ ಕಡೆ ವಂಚನೆ, ಮೋಸ, ಹಗಲು ದರೋಡೆ ! ತಲೆ ತಿರುಗುವಿಕೆ ಹೆಚ್ಚಾಯಿತು. ಥಟ್ಟನೆ ಹೋದವಾರ ನೆಡೆದ ಮದುವೆ ಮನೆ ಗಲಾಟೆ ವಿಷಯ ನೆನಪಿಗೆ ಬಂತು. ಹೆಣ್ಣಿನ ಕಡೆಯವರ ವಜ್ರದ ನೆಕ್ಲೇಸು ವರ ಮಹಾಶಯನ ಶರಟಿನ ಜೋಬಿನಲ್ಲಿ ಸಿಕ್ಕಿತಲ್ಲ ಅದರ ಗುಟ್ಟೇನು? ಮದುವೆ ನಿಲ್ಲಿಸಲು ಅವನ ಗೆಳೆಯ ಮಾಡಿದ ಹುನ್ನಾರ ತಾನೇ? ಅವನನ್ನು ಹಿಡಿದು ತದುಕಿದಾಗ ಇರಲಿ ಅಂತ ನಾನೂ ಒಂದು ಧರ್ಮದೇಟು ಕೊಟ್ಟು ಛತ್ರದಿಂದ ಹೊರ ಹಾಕಿದೆವು. ಅವನು ಹಾಗೇಕೆ ಮಾಡಿದ ? ತಾತ ವಿಷಾದದಿಂದ ನಕ್ಕರು.

 

"ಆ ವರಮಹಾಶಯನಿಗೆ ಮೊದಲೇ ಮದುವೆಯಾಗಿತ್ತು. ಈ ಸುಳಿವನ್ನು ಅರಿತ ಅವನ ಗೆಳೆಯ ನೆಕ್ಲೇಸು ಕದ್ದ ಅರೋಪವನ್ನು ವರನ ಮೇಲೆ ಬರಿಸಿದರೆ ಮದುವೆ ನಿಲ್ಲುತ್ತೆ, ಹುಡುಗಿಯ ಬಾಳೂ ಉಳಿಯುತ್ತೆ ಅಂತ ಹಾಗೆ ಮಾಡಿದ. ಅವನ ದುರಾದೃಷ್ಟ. ಏನೋ ಮಾಡಲು ಹೋಗಿ ಏನೋ ಆಯ್ತು." 

 

ಮಾಣಿ ಊಟ ತಂದಿಟ್ಟ. 

 

ಮನಸ್ಸು ಸುಸ್ಥಿತಿಯಲ್ಲಿದ್ದರೆ ಊಟವೂ ರುಚಿಯಾಗಿರುತ್ತೆ. ಆದರೆ ಈಗ ಖಂಡಿತ ನನಗೆ ಊಟ ರುಚಿಸಲಿಲ್ಲ. ಕೋಳಿ ಕೆದಕಿದಂತೆ ಕೆದಕಿ ಊಟ ಮುಗಿಸಿ ತಟ್ಟೆಗೆ ನೀರು ಹಾಕಿದೆ. ತಾತ ಮತ್ತೆ ನಕ್ಕರು. ನೊಂದ ನಗುವಿನಂತೆ ಕಂಡಿತು ನನಗೆ. ಏಕೆಂದು ಕೇಳಿದೆ. ತಾತ ನುಡಿದರು "ಪ್ರತಿ ರಾತ್ರಿ ಈ ಹೋಟೆಲ್ಲಿನ ಹಿಂದೆ ಒಂದು ವಹಿವಾಟು ನೆಡೆಯುತ್ತದೆ. ಹೋಟೆಲ್ಲಿನವರು ನಿನ್ನಂತಹವರು ಎಸೆದಿರುವ ಈ ಊಟವನ್ನು ಒಂದು ಡಬ್ಬಕ್ಕೆ ತುಂಬಿರುತ್ತಾರೆ. ಒಬ್ಬ ತನ್ನ ಸೈಕಲ್ಲಿನಲ್ಲಿ ಬಂದು ಆ ಡಬ್ಬವನ್ನು ಹೆಕ್ಕಿ ’ತಿನ್ನಬಹುದು’ ಎನಿಸುವ ಖದ್ಯಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳುತ್ತಾನೆ. ಅವನು ತೆಗೆದುಕೊಂಡ ಊಟಕ್ಕೆ ಹಣ ಪಾವತಿ ಮಾಡುತ್ತಾನೆ. ಹೋಟೆಲ್ಲಿನವರು ಬೇಡವೆಂದರೂ ಅವನು ಕೊಡುತ್ತಾನೆ. ಕಾರಣ ಕೇಳಿದರೆ, ಬಿಟ್ಟಿ ಬಂದದ್ದಕ್ಕೆ ಬೆಲೆ ಇರೋಲ್ಲ ಅಂತಾನೆ ಪುಣ್ಯಾತ್ಮ. ಅವನು ಹೆಕ್ಕಿಕೊಂಡ ಊಟವನ್ನು ಮನೆಗೆ ಒಯ್ದು ತನ್ನ ಮಕ್ಕಳಿಗೆ ನೀಡುತ್ತಾನೆ. ರಾತ್ರಿ ಪಾಳಿ ಮಾತ್ರ ಅವರ ಊಟ."

 

ಈಗ ನಿಜಕ್ಕೂ ತಲೆ ಗಿರಕಿ ಹೊಡೆದು ಕೆಳಗೆ ಬಿದ್ದೆ. ತಾತ ಹಿಡಿದುಕೊಳ್ಳಲಿಲ್ಲ ... ಏಕೆಂದರೆ ಅವರು ಅಲ್ಲಿರಲಿಲ್ಲ !! ನಾನು ಲ್ಯಾಪ್ ಟಾಪ್ ಮೇಲೆ ಬಿದ್ದೆ. ಹಾಗಿದ್ದರೆ ನಾನು ಇಷ್ಟು ಹೊತ್ತೂ ಕಂಡಿದ್ದು ಕನಸೇ? ರಾತ್ರಿಯೆಲ್ಲ ನಿದ್ದೆ ಮಾಡಿ ಸೋಫಾದ ಮೇಲೆ ಕುಳಿತ ಕೂಡಲೆ ನಿದ್ದೆ ಬರುವುದೇ? ತಾತ ನಮ್ಮ ಮನೆಗೆ ಬಂದದ್ದು ಮಿಥ್ಯವೇ? ಸತ್ಯ ದರ್ಶನವಾಗಿದ್ದು ಸತ್ಯವೇ? ಇಲ್ಲಾ ಮಿಥ್ಯವೇ? 

 

ನನಗಂತೂ ಏನೂ ಗೊತ್ತಾಗುತ್ತಿಲ್ಲ. ನಿಮಗೆ?

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತಮಾಷೆಯ ಪ್ರಸಂಗಗಳಿಗೆ ಕೊನೆಯಲ್ಲಿ ಎಂಥಾ ಗಂಭೀರ ಟಚ್ ಕೊಟ್ಟಿರಲ್ಲಾ ಶ್ರೀನಾಥ್. ಭಲೇ ಭಲ್ಲೆಯವರೇ :-)

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಸನ್ನ ಮೊದಲಿಂದಲೂ ಪಂಚತಂತ್ರ ಕಥೆಗಳ ತಂತ್ರಕ್ಕೆ ಮಾರುಹೋಗಿದ್ದೆ. ಸರಳವಾದ ಕಥೆಯಲ್ಲಿ ಎಂಥಾ ಅದ್ಬುತ ನೀತಿಯ ಕಥೆಗಳವು. ಅಂಥ ಒಂದು ಸಣ್ಣ ಪ್ರಯತ್ನ ಮಾಡಿದೆ ಇಲ್ಲಿ.