''ಇಂದು' ಆಕೆ ಬದುಕಿದ್ದರೆ!?'

To prevent automated spam submissions leave this field empty.

ಅದು ೧೯೭೭ - ೭೮ರ ಇಸವಿಯಿದ್ದಿರಬೇಕು, ಬಿಹಾರದ ಬೆಲ್ಚಿ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರ ಕ್ರೌರ್ಯಕ್ಕೆ  ಸಿಕ್ಕಿ ದಲಿತರ ಮಾರಣ ಹೋಮವಾಗಿತ್ತು. ಘಟನೆಯಲ್ಲಿ ನೊಂದವರಿಗೆ ಸಾಂತ್ವಾನ ಹೇಳಲು (ರಾಜಕೀಯ ಉದ್ದೇಶವು ಇತ್ತು, ಅದು ಬೇರೆ ಮಾತು ಬಿಡಿ) ಅದೇ ದಿನ ನಡು ರಾತ್ರಿಯಲ್ಲಿ ಏಕಾಂಗಿಯಾಗಿ ದಿಲ್ಲಿಯಿಂದ ಹೊರಟು,ಜೀಪಿನಿಂದ ಪ್ರಯಾಣ ಶುರು ಮಾಡಿ,ನಂತರ ಜೀಪು ಮುಂದೆ ಸಾಗದಿದ್ದಾಗ ರೈತನ ಟ್ರಾಕ್ಟರ್ ನಲ್ಲಿ ಮುಂದೆ ಸಾಗಿ, ನಡುವಲ್ಲಿ ನದಿ ಬಂದಾಗ ಆನೆಯೇರಿ ಘಟನೆ ನಡೆದ ಸ್ಥಳಕ್ಕೆ ಒಬ್ಬಂಟಿಯಾಗಿ ಬಂದ ಅವರನ್ನು ನೋಡಿದಾಗ ನೊಂದವರಿಗೆ ಸಾಕ್ಷಾತ್ 'ತಾಯಿ'ಯನ್ನು ನೋಡಿದಂತೆ ಆಯ್ತು. ಆ ತಾಯಿ 'ಇಂದಿರಾ ಗಾಂಧೀ' ಅವರ ಕಣ್ಣೀರು ಒರೆಸಿದ್ದಳು.

೧೯೭೧ರ ಸಮಯದಲ್ಲಿ ಪಾಕಿಗಳು ಅವರ ಸಹೋದರರು ಎಂದೆ ಹೇಳಿಕೊಳ್ಳುವ ಬಾಂಗ್ಲಾದೇಶದವರ ಮೇಲೆ ದೌರ್ಜನ್ಯ ಮಾಡುತಿದ್ದಾಗ,ಸೈನ್ಯವನ್ನು ನುಗ್ಗಿಸಿ ಪಾಕಿಗಳಿಗೆ ಮರೆಯಲಾಗದ ಪಾಠವನ್ನೇ ಕಲಿಸಿದ್ದರು, ಆಗಿನ ವಿರೋಧ ಪಕ್ಷದ ನಾಯಕರಾಗಿದ್ದಂತಹ 'ವಾಜಪೇಯಿ' ಅವರೇ ಅವರನ್ನು 'ದುರ್ಗಾ' ಅಂತ ಕರೆದಿದ್ದರು.ಆ ಯುದ್ಧದಲ್ಲಿ ಇಂದಿರಾ ಗಾಂಧಿಯವರು ನಡೆದು ಕೊಂಡ ರೀತಿಯತ್ತಲ್ಲ, ಆ ಯುದ್ಧದಲ್ಲಿ ಅವರು ತೋರಿದ ಗಟ್ಟಿತನವನ್ನ ಮತ್ಯಾವ ಭಾರತದ ಪ್ರಧಾನಿಯೂ ತೋರಿಸಿಲ್ಲ ಬಿಡಿ.ಖುದ್ದು ಅವರಪ್ಪನನ್ನೇ  ಈ ವಿಷಯದಲ್ಲಿ ಅವರು ಮೀರಿಸಿದ್ದರು.

೭೧ರ ಯುದ್ಧವೇನು ಇದ್ದಕಿದ್ದಂತೆ ಶುರುವಾದದ್ದಲ್ಲ, ಪೂರ್ವ ಪಾಕಿಸ್ತಾನದ (ಬಾಂಗ್ಲಾದೇಶ) ಮೇಲೆ ಈಗಿನ ಪಾಕಿಸ್ತಾನದವರ ಮಿಲಿಟರಿ ದಬ್ಬಾಳಿಕೆ ಮಿತಿ ಮೀರಿತ್ತು.ಬೆಂಕಿ ಹತ್ತಿದ್ದು ಪಾಕಿನಲ್ಲಿ, ಬಿಸಿ ತಟ್ಟಿದ್ದು ಭಾರತಕ್ಕೆ. ನಿರಾಶ್ರಿತರ ಸಂಖ್ಯೆ ದೇಶವನ್ನೇ ಅಲ್ಲಾಡಿಸುವ ಮಟ್ಟಿಗೆ ಬೆಳೆದಿತ್ತು.ಪಾಕಿಗಳಿಗೆ ಇತ್ತ ಚೀನಾ ಅತ್ತ ಅಮೇರಿಕಾದ ಬೆಂಬಲ ಬೇರೆ.ಇಂದಿರಮ್ಮ ಮೊದಲು ಅಮೇರಿಕಾವನ್ನ ಪಾಕಿಗಳಿಗೆ ಬುದ್ದಿ ಹೇಳುವಂತೆ ಕೇಳಿದರು ಅಮೇರಿಕಾ ಜಪ್ಪಯ್ಯ ಅನ್ನಲಿಲ್ಲ,ಬದಲಿಗೆ ಅಮೆರಿಕ-ಪಾಕ್-ಚೀನಾದ ಒಂದು axis ನಿರ್ಮಾಣ ಮಾಡಿಕೊಂಡು,ಭಾರತವೇನಾದರೂ ಪಾಕಿನ ಮೇಲೆ ಬಿದ್ದರೆ ಚೀನಾ-ಅಮೇರಿಕಾಗಳೆರಡು ಭಾರತದ ಮೇಲೆ ಮುಗಿ ಬೀಳುವ ಸಾಧ್ಯತೆ ಇತ್ತು.

ಆದರೆ ಇಂದಿರಮ್ಮ ಈ ಯುದ್ಧವನ್ನ ನಿರ್ವಹಿಸಿದ ರೀತಿಯೇ ಬೇರೆ, ಆಕೆ ರಷ್ಯಾದೊಂದಿಗೆ ನಾಗರಿಕ ಒಪ್ಪಂದವನ್ನು ಮಾಡಿಕೊಂಡಳು (ಅದು ಸೈನಿಕ ನೆರವನ್ನು ಬಳಸಿಕೊಳ್ಳುವ ಒಪ್ಪಂದವು ಆಗಿತ್ತು!). ಮುಖ್ಯವಾಗಿ ೭೧ ರ ಯುದ್ಧದಲ್ಲಿ ಆಕೆ ಮಾಡಿದ ಒಳ್ಳೆ ಕೆಲಸವೆಂದರೆ ಆಯಾ ವಿಷಯಗಳಲ್ಲಿ ಪರಿಣಿತರ ಸಲಹೆಯನ್ನ ಪಾಲಿಸಿದ್ದು.ಹಾಗೆ ಮಾಡಿದ್ದರಿಂದಲೇ ಯುದ್ಧ ಶುರುವಾಯಿತು ಅನ್ನುವಷ್ಟರಲ್ಲೇ ಪಾಕಿಗಳನ್ನು ಮಂಡಿಯೂರಿಸಿ ಕೂರಿಸಲು ಸಾಧ್ಯವಾಗಿದ್ದು! ಅಮೇರಿಕಾ-ಚೀನಗಳಿಗೆ ಆಕ್ರಮಣ ಮಾಡಲು ಸಮಯವೇ ಸಿಗಲಿಲ್ಲ! ಮತ್ತು ಆ ಯುದ್ದದ ಗೆಲುವಿನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೊಂದು ಕಳೆ ಬಂದು ಬಿಟ್ಟಿತ್ತು. ಭಾರತ ಕೇವಲ ಶಾಂತಿ ಮಂತ್ರವಲ್ಲ ಅಗತ್ಯ ಬಿದ್ದರೆ 'ಕ್ರಾಂತಿಯ ಕಹಳೆ'ಯನ್ನು ಮೊಳಗಿಸಬಲ್ಲದು ಅಂತ ತೋರಿಸಿಕೊಟ್ಟ ಯುದ್ಧ ಅದು.

೧೯೮೪ ರಲ್ಲಿ ಅವರು 'ಆಪರೇಷನ್ ಬ್ಲೂ- ಸ್ಟಾರ್' ನಡೆಸದೆ ಹೋಗಿದ್ದರೆ, ಇಂದು ಪಾಕಿಸ್ತಾನದ ಬಳಿಯೇ ಖಲಿಸ್ತಾನವು ಸೃಷ್ಟಿಯಾಗುತ್ತಿತ್ತು. ಈ ಆಪರೇಷನ್ ನಡೆದರೆ ತಮ್ಮ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ,ಅವರು ಅದನ್ನು ದೇಶಕ್ಕೋಸ್ಕರ ಮಾಡಿದರು.ofcourse ಭಿಂದ್ರನ್ವಾಲೆ ಅವರ ಸೃಷ್ಟಿಯೇ ಆದರೂ, ಭಾರತದಂತಹ ದೇಶದಲ್ಲಿ ಧಾರ್ಮಿಕ ಕೇಂದ್ರದ ಮೇಲೆ ದಾಳಿಮಾಡಿಸಲು ಎಂಟೆದೆಯಿರಬೇಕು. ಇಂದಿರಮ್ಮ  ಅದನ್ನು ಸಾಧಿಸಿ ತೋರಿಸಿದಳು.

ಬ್ಯಾಂಕ್ಗಳ ರಾಷ್ಟ್ರೀಕರಣದಂತಹ ಹತ್ತು ಹಲವರು ಜನಪರ ಕಾರ್ಯಕ್ರಮಗಳು. ಇನ್ನು 'ಸಂತಾನ ನಿಯಂತ್ರಣ' ಈ ದೇಶಕ್ಕೆ ಅಗತ್ಯವಾಗಿ ಬೇಕಾಗಿತ್ತು. ಅದನ್ನು ಜಾರಿಗೆ ತಂದರೂ ಅದನ್ನು ಕಾರ್ಯ ರೂಪಕ್ಕಿಳಿಸಿದ ಪರಿಯಿದೆಯಲ್ಲ, ಅದೇ ಇಂದಿರಮ್ಮನ ಸೋಲಿಗೆ ಕಾರಣವಾಗಿತ್ತು. ಮತ್ತೆ ಅಂತ ಕಾರ್ಯಕ್ರಮ ಜಾರಿಗೆ ತರುವುದು ಒತ್ತಟ್ಟಿಗಿರಲಿ,ಮಾತನಾಡಲು ಸಹ ಈಗಿನ ನಾಯಕರಿಗೆ ಸಾಧ್ಯವಿಲ್ಲ ಬಿಡಿ. 

ಎಮರ್ಜೆನ್ಸಿಯ ನಂತರ ಅವಳನ್ನ ಕಾಡಿಸಿದ ಜನತಾ ಸರ್ಕಾರವನ್ನ (ಪಾಪಕ್ಕೆ ಶಿಕ್ಷೆ!) ರಾಜಕೀಯವಾಗಿ ಹಣಿಯುತ್ತ, ಮತ್ತೆ ಧೂಳಿನಿಂದ ಮೇಲೆದ್ದು ಬಂದ ಪರಿ ಆಕೆಯಲ್ಲಿನ ರಾಜಕಾರಣಿ,ಹಠವಾದಿಯನ್ನ ತೋರಿಸುವಂತದ್ದು. ಇಂದಿರೆ ಅಂದಾಕ್ಷಣ ಎಮರ್ಜೆನ್ಸಿ,ಸಂಜಯ್ ಅಂತ ತಪ್ಪು ತೋರಿಸಬಹುದೇನೋ ನಿಜ.ಆದರೆ ಆಕೆ ಭಾರತದ 'ಐರನ್ ಲೇಡಿ' ಅನ್ನುವುದನ್ನ ಅವಳ ವೀರೋಧಿಗಳು ವೀರೋಧಿಸಲಾರರು!

ಪಾಕಿಗಳ,ಚೀನಿಗಳ, ಉಗ್ರವಾದಿಗಳ ಆರ್ಭಟ ಹೆಚ್ಚಿರುವ ಈ ದಿನಗಳಲ್ಲಿ ನನಗೆ ಪದೇ ಪದೇ ಅನ್ನಿಸುವುದು''ಇಂದು' ಆಕೆ ಬದುಕಿದ್ದರೆ!?'.ನಿನ್ನೆ ಅವರ  ೯೦ನೆ ಜನ್ಮ ದಿನ.ಇಂದಿರೆಯಂತ ನಾಯಕಿಯರು ಮತ್ತೆ ಮತ್ತೆ ಹುಟ್ಟಿ ಬರಲಿ. 

ಪ್ರತಿಕ್ರಿಯೆಗಳು

ಇಂದಿರಮ್ಮ ಕೇವಲ ಗಟ್ಟಿಗಿತ್ತಿಯಲ್ಲ, ಪ್ರಚಂಡ ರಾಜಕಾರಣಿ. ಯುದ್ಧದಲ್ಲಿ ಗೆದ್ದರೆ ಸಾಲದೆಂದು ಆಕೆಗೆ ಗೊತ್ತಿತ್ತು. ಅಮೇರಿಕ ಧಾಳಿ ಮಾಡುವ ಮೊದಲೇ ಮೂರನೆ ಜಗತ್ತಿನ ದೇಶಗಳನ್ನು ಒಪ್ಪಿಸಿ ಬಾಂಗ್ಲಾದೇಶಕ್ಕೆ ಮಾನ್ಯತೆ ಕೊಡಿಸಿಬಿಟ್ಟರು. ಅಮೇರಿಕಕ್ಕೆ ಈ ಮೂಲಕ ನೆಲ ತೊರಿಸಿದ್ದರು! ಅಮೇರಿಕಾ ಮುಖಭಂಗ ಮಾಡಿಕೊಂಡು ವಾಪಸು ತೆರಳಬೇಕಾಯಿತು.

ರಾಕೇಶ್, ಲೇಖನ ತು೦ಬಾ ಚೆನ್ನಾಗಿದೆ. ಇ೦ದಿರಾ ಗಾ೦ಧಿ ನಮ್ಮ ಭಾರತ ದೇಶ ಕ೦ಡ೦ತ ಒಬ್ಬ ಪ್ರತಿಭಾವ೦ತ ಹೆಣ್ಣುಮಗಳು. ಅವರ೦ತಹ ಪ್ರಧಾನಿ ಮು೦ದೆ ನಮಗೆ ಸಿಗೋದು ಅಸಾಧ್ಯ ಅನ್ಸುತ್ತೆ. _ವಿದ್ಯಾ

ಎಂಚಿನ ಶೆಟ್ರೆ, ಪಾಲಿಟಿಕ್ಸ್ ಸೇರೋ ಆಲೋಚನೆ ಉಂಟಾ?? <<ಮೇಲ್ಜಾತಿಯವರ ಕ್ರೌರ್ಯಕ್ಕೆ ಸಿಕ್ಕಿ ದಲಿತರ ಮಾರಣ ಹೋಮವಾಗಿತ್ತು>> ಇಂತಾ ಹೀನ ಕ್ರತ್ಯ ನಡೆದ ಮೇಲೂ, ಒಬ್ಬ ಪ್ರಧಾನಿ, ಆ ಸ್ಥಳಕ್ಕೆ ಭೇಟಿ ನೀಡಿಲ್ಲ ಅಂದರೆ, ಆತ ಭಾರತದ ಪ್ರಧಾನಿಯಾಗಲು ಅನರ್ಹ.. ಇದರಲ್ಲಿ ವಿಶೇಷತೆಯೇನು?? <<ಸೈನ್ಯವನ್ನು ನುಗ್ಗಿಸಿ ಪಾಕಿಗಳಿಗೆ ಮರೆಯಲಾಗದ ಪಾಠವನ್ನೇ ಕಲಿಸಿದ್ದರು>> ಪಾಠ ಕಲಿಸಿದರೋ, ಪಾಠ ಕಲಿತುಕೊಂಡೆವೋ.. ಯಾರ್ಯಾರಿಗೋ ದೇಶ ದೊರೆಕಿಸಿಕೊಟ್ಟು, ಭೂ ಲೋಕದ ಸ್ವರ್ಗ ಕಾಶ್ಮೀರ ಮತ್ತು ಅರುಣಾಚಲದ ಕೆಲ ಪ್ರದೇಶಗಳನ್ನು, ಪಾಕಿ ಚೀನಿ ಗಳಿಗೆ ಬಿಟ್ಟು ಕೊಟ್ಟು ಇಷ್ಟು ವರ್ಷ ಪಾಠ ಪುಸ್ತಕಗಳಲ್ಲಿ ಸುಳ್ಳು ನಕಾಶೆ ಬಿಡಿಸಿಕೊಂಡು ಆತ್ಮ ಸಂತ್ರಪ್ತಿ ಪಟ್ಟುಕೊಳ್ತಾ ಇದ್ದೆವಲ್ವೆ?? ಯಾರ ಖುಷಿಗೋ?? << 'ವಾಜಪೇಯಿ' ಅವರೇ ಅವರನ್ನು 'ದುರ್ಗಾ' ಅಂತ ಕರೆದಿದ್ದರು >> ಗೆದ್ದೆತ್ತಿನ ಬಾಲ ಹಿಡಿಯೋದು ಅಂದ್ರೆ ಇದೆ ಅನ್ಸುತ್ತೆ, ವಸುಂಧರಾ ರಾಜೇ , ಕಾಂಗ್ರೆಸ್ಸ್ ಅಧಿನಾಯಕಿ ಸೋನಿಯಾ ಗ್ಯಾಂಡೆ(ಮೈನೋ) ಅವರನ್ನು ಕರೆದಿದ್ರು(ಆದ್ರೆ ಅಧಿಕಾರದಲ್ಲಿದ್ದಾಗ).. << ೧೯೮೪ ರಲ್ಲಿ ಅವರು 'ಆಪರೇಷನ್ ಬ್ಲೂ- ಸ್ಟಾರ್' ನಡೆಸದೆ ಹೋಗಿದ್ದರೆ, ಇಂದು ಪಾಕಿಸ್ತಾನದ ಬಳಿಯೇ ಖಲಿಸ್ತಾನವು ಸೃಷ್ಟಿಯಾಗುತ್ತಿತ್ತು >> ಇದರ ಬಗ್ಗೆ ಅಷ್ಟೊಂದು ತಿಳುವಳಿಕೆ ಇಲ್ಲ .. ಅಮೃತ ಸರದ ಸ್ವರ್ಣ ಮಂದಿರದಲ್ಲಿ ಅಷ್ಟೊಂದು ಉಗ್ರರ ಸೈನ್ಯ ಮತ್ತು ಶಸ್ತ್ರಾಸ್ತ್ರ ಜಮಾವಣೆಯಾಗುವ ವರೆಗೂ, ಸರಕಾರ ಮಣ್ಣು ತಿಂತಿತ್ತ??(ಉದಾಹರಣೆಗೆ ನಕ್ಸಲ್ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ, ವಿಶ್ವದಲ್ಲೇ ಶೌರ್ಯಕ್ಕೆ ಹೆಸರುವಾಸಿಯಾದ ಭಾರತಿಯ ಸೈನ್ಯವನ್ನು ಇಟ್ಟುಕೊಂಡೂ, ಅತ್ತ ನಕ್ಸಲಿಗರು ನಾಗರೀಕ ಮತ್ತು ಪೋಲಿಸರನ್ನು ಕೊಲ್ಲುತ್ತಿದ್ದರೂ, ಇತ್ತಿಂದ ಶಾಂತಿ ಸಂದೇಶ ಕಳುಹಿಸುತ್ತಾರಲ್ಲ...)... ಇದನ್ನೊಂದು ಹೆಮ್ಮೆಯೇನ್ನೋದಾದ್ರೆ.. ಇದರ ಎದುರು "1984 Anti-Sikh Riots" ನಲ್ಲಿ ಮಡಿದ ಅಸಂಖ್ಯಾತ ಸಿಖ್ ಕುಟುಂಬಗಳ ನೋವು ಅಷ್ಟೊಂದು ಗೌಣವೇ?? << ಬ್ಯಾಂಕ್ಗಳ ರಾಷ್ಟ್ರೀಕರಣದಂತಹ ಹತ್ತು ಹಲವರು ಜನಪರ ಕಾರ್ಯಕ್ರಮಗಳು. >> ಹತ್ತು ಹಲವರು ಒಳಗೆ ಏನನ್ನು ತುಂಬಿಸೋಣ?? <<'ಸಂತಾನ ನಿಯಂತ್ರಣ' ಈ ದೇಶಕ್ಕೆ ಅಗತ್ಯವಾಗಿ ಬೇಕಾಗಿತ್ತು. ಅದನ್ನು ಜಾರಿಗೆ ತಂದರೂ ಅದನ್ನು ಕಾರ್ಯ ರೂಪಕ್ಕಿಳಿಸಿದ ಪರಿಯಿದೆಯಲ್ಲ>> ನನಗೆ ತಿಳಿದ ಪ್ರಕಾರ ಇದನ್ನು ಕಾರ್ಯ ರೂಪಕ್ಕೆ ತಂದಿದ್ದು ದಿವಂಗತ ಸಂಜಯ ಗ್ಯಾಂಡೆ... ಈ 'ಸಂತಾನ ನಿಯಂತ್ರಣ' ಕಾಯಿದೆ ಜಾರಿಗೆ ತರುವ ಹೊತ್ತಿನಲ್ಲೇ, ವಿಮಾನ ಅಪಘಾತವೊಂದರಲ್ಲಿ ವಿವಾದತ್ಮಕವಾಗಿ ಮರಣ ಹೊಂದಿದರು... ಇದರ ಹಿಂದೆ.................................................... ಬ್ಯಾಡ ಬಿಡಿ, ಇದರ ಬಗ್ಗೆ ಹೇಳಿ ನಾನ್ಯಾಕೆ ಕೆಟ್ಟವನೆನಿಸಿಕೊಳ್ಳಲಿ :) <<ಭಾರತದ 'ಐರನ್ ಲೇಡಿ' ಅನ್ನುವುದನ್ನ ಅವಳ ವೀರೋಧಿಗಳು ವೀರೋಧಿಸಲಾರರು!>> 'Golden Lady' ಅನ್ನೋಣ ಬಿಡಿ.. ಕಬ್ಬಿಣಕ್ಕೆ ತುಕ್ಕು ಹಿಡಿಯುತ್ತೆ.. ಆಕೆ 'Golden Lady' ಯಾಕಂದ್ರೆ ಆಕೆ ಚಿನ್ನದ ಚಮಚವನ್ನು ಬಾಯೊಳಗೆ ಇಟ್ಟುಕೊಂಡೆ ಹುಟ್ಟಿದ್ದರು... ತಂದೆ, ಪ್ರಧಾನಿ, ಮಹಾತ್ಮಾ ಗಾಂಧಿಯ ವಿಶೇಷ ಆಸ್ಥೆ, ಅದು ಎಷ್ಟರ ವರೆಗೆ ಎಂದರೆ, ತನ್ನ ಗಾಂಧಿ ಉಪನಾಮವನ್ನು ಧಾರೆ ಎರೆಯುವಷ್ಟು , ಅದಲ್ಲದೆ ಆ ಕಾಲದಲ್ಲಿ ಇಷ್ಟೊಂದು ಚಿಲ್ಲರೆ ಪಕ್ಷಗಳಿರಲಿಲ್ಲ, ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಲು ಅಡ್ಡಗಾಲು ಹಾಕುತ್ತಿರುವ, ಇಂದಿನಂತಹ ದುರಾಚಾರಿ ನಾಯಕರುಗಳು ಇರ್ಲಿಲ್ಲ.. <<ಎಮರ್ಜೆನ್ಸಿಯ ನಂತರ ಅವಳನ್ನ ಕಾಡಿಸಿದ ಜನತಾ ಸರ್ಕಾರವನ್ನ (ಪಾಪಕ್ಕೆ ಶಿಕ್ಷೆ!) ರಾಜಕೀಯವಾಗಿ ಹಣಿಯುತ್ತ, ಮತ್ತೆ ಧೂಳಿನಿಂದ ಮೇಲೆದ್ದು ಬಂದ ಪರಿ ಆಕೆಯಲ್ಲಿನ ರಾಜಕಾರಣಿ,ಹಠವಾದಿಯನ್ನ ತೋರಿಸುವಂತದ್ದು. >> ಜನತಾ ಸರ್ಕಾರವನ್ನು ಹಣಿದರೋ, ಅಥವಾ ನಮ್ಮ ಇಂದಿನ ಹೊಲಸು ರಾಜಕಾರಣಿ ಗಳ ಸಂಸ್ಕೃತಿ ಆ ಪಕ್ಷದಿಂದ ಶುರುವಾಯಿತೋ, ಇದರಿಂದಾಗಿಯೇ ಆ ಪಕ್ಷ ನಿರ್ನಾಮವಾಯಿತೋ ಗೊತ್ತಿಲ್ಲ :)

<<ಇಂತಾ ಹೀನ ಕ್ರತ್ಯ ನಡೆದ ಮೇಲೂ, ಒಬ್ಬ ಪ್ರಧಾನಿ, ಆ ಸ್ಥಳಕ್ಕೆ ಭೇಟಿ ನೀಡಿಲ್ಲ ಅಂದರೆ, ಆತ ಭಾರತದ ಪ್ರಧಾನಿಯಾಗಲು ಅನರ್ಹ.. ಇದರಲ್ಲಿ ವಿಶೇಷತೆಯೇನು??>> ಈ ಕೃತ್ಯ ನಡೆದಾಗ ಇಂದಿರಾ ಪ್ರಧಾನಿ ಆಗಿರಲಿಲ್ಲ! ಆದರೂ ಹೋಗಿದ್ದರು. ಪ್ರಧಾನಿ ಆಗಿದ್ದ ಮೊರಾರ್ಜಿ ಹೋಗಿರಲಿಲ್ಲ. <<ಪಾಠ ಕಲಿಸಿದರೋ, ಪಾಠ ಕಲಿತುಕೊಂಡೆವೋ.. ಯಾರ್ಯಾರಿಗೋ ದೇಶ ದೊರೆಕಿಸಿಕೊಟ್ಟು ....>> ಇದೆಲ್ಲಾ ಆಗಿದ್ದು ನೆಹರೂರಿಂದ.. ಇಂದಿರಾ ಒಂದಿಂಚನ್ನೂ ಬಿಟ್ಟು ಕೊಟ್ಟಿಲ್ಲ.. << ಅಮೃತ ಸರದ ಸ್ವರ್ಣ ಮಂದಿರದಲ್ಲಿ ಅಷ್ಟೊಂದು ಉಗ್ರರ ಸೈನ್ಯ ಮತ್ತು ಶಸ್ತ್ರಾಸ್ತ್ರ ಜಮಾವಣೆಯಾಗುವ ವರೆಗೂ, ಸರಕಾರ ಮಣ್ಣು ತಿಂತಿತ್ತ??>> ಇಂದಿರಾ ಬರೋದಕ್ಕಿಂತ ಮುಂಚೆಯಿಂದಲೂ ಇದು ನಡೆಯುತ್ತಿತ್ತು. ಕೊನೆಗೊಳಿಸಿದ್ದು ಇಂದಿರಾ! <<ಇದನ್ನೊಂದು ಹೆಮ್ಮೆಯೇನ್ನೋದಾದ್ರೆ.. ಇದರ ಎದುರು "1984 Anti-Sikh Riots" ನಲ್ಲಿ ಮಡಿದ ಅಸಂಖ್ಯಾತ ಸಿಖ್ ಕುಟುಂಬಗಳ ನೋವು ಅಷ್ಟೊಂದು ಗೌಣವೇ??>> ಒಪ್ಪತಕ್ಕ ಮಾತು! ಆದರೆ ಕಾರಣ ಇಂದಿರಾ ಅಲ್ಲ. ರಕ್ತದಾಹಿ ಕಾಂಗ್ರೆಸ್ಸಿಗರು! <<ಮಹಾತ್ಮಾ ಗಾಂಧಿಯ ವಿಶೇಷ ಆಸ್ಥೆ, ಅದು ಎಷ್ಟರ ವರೆಗೆ ಎಂದರೆ, ತನ್ನ ಗಾಂಧಿ ಉಪನಾಮವನ್ನು ಧಾರೆ ಎರೆಯುವಷ್ಟು >> ಈ ಅಮೂಲ್ಯ ಮಾಹಿತಿ ಎಲ್ಲಿ ಸಿಕ್ಕಿತೋ? ಇತಿಹಾಸ ಪ್ರಜ್ಞೆ ಇರದಿದ್ದರೆ ಬೇಡ. ಕನಿಷ್ಟ ಸಾಮಾನ್ಯ ಯೋಚನೆಯೂ ಬೇಡವೇ?ಹಾಳಾಗಿ ಹೋಗಲಿ, ಮಾತಿರುವುದು ಇಂದಿರಾ ಬಗ್ಗೆ ಅದೊಂದನ್ನು ಬಿಟ್ಟು ಬೇರೆ ಎಲ್ಲವನ್ನೂ ಬರೆಯಲಾಗಿದೆ! ವಿಷಯದ ಬಗ್ಗೆಯಾದರೂ ವಸ್ತು ನಿಷ್ಟತೆ ಬೇಡವೇ?

<< ಈ ಕೃತ್ಯ ನಡೆದಾಗ ಇಂದಿರಾ ಪ್ರಧಾನಿ ಆಗಿರಲಿಲ್ಲ! ಆದರೂ ಹೋಗಿದ್ದರು. ಪ್ರಧಾನಿ ಆಗಿದ್ದ ಮೊರಾರ್ಜಿ ಹೋಗಿರಲಿಲ್ಲ. >> ಕ್ಷಮಿಸಿ ಗೊತ್ತಿರ್ಲಿಲ್ಲ :) << ಮಹಾತ್ಮಾ ಗಾಂಧಿಯ ವಿಶೇಷ ಆಸ್ಥೆ, ಅದು ಎಷ್ಟರ ವರೆಗೆ ಎಂದರೆ, ತನ್ನ ಗಾಂಧಿ ಉಪನಾಮವನ್ನು ಧಾರೆ ಎರೆಯುವಷ್ಟು ಈ ಅಮೂಲ್ಯ ಮಾಹಿತಿ ಎಲ್ಲಿ ಸಿಕ್ಕಿತೋ? >> ಸುಮ್ನೆ, ಒಮ್ಮೆ ಗೂಗಲಿಸಿದೆ, ಸಿಕ್ತು ಈ ಕೆಳಗಿನ ಲಿಂಕು.. http://www.vepachedu... ವಿಕಿ ಪೀಡಿಯ ದಲ್ಲೂ ಇಂದಿರೆಯ ಪತಿ ಫಿರೋಜ್ ಖಾನ್ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ :) http://en.wikipedia.... << ಇತಿಹಾಸ ಪ್ರಜ್ಞೆ ಇರದಿದ್ದರೆ ಬೇಡ. ಕನಿಷ್ಟ ಸಾಮಾನ್ಯ ಯೋಚನೆಯೂ ಬೇಡವೇ?ಹಾಳಾಗಿ ಹೋಗಲಿ, ಮಾತಿರುವುದು ಇಂದಿರಾ ಬಗ್ಗೆ ಅದೊಂದನ್ನು ಬಿಟ್ಟು ಬೇರೆ ಎಲ್ಲವನ್ನೂ ಬರೆಯಲಾಗಿದೆ! ವಿಷಯದ ಬಗ್ಗೆಯಾದರೂ ವಸ್ತು ನಿಷ್ಟತೆ ಬೇಡವೇ? >> :)

ಎಂಚಿನ ಶೆಟ್ರೆ, ಪಾಲಿಟಿಕ್ಸ್ ಸೇರೋ ಆಲೋಚನೆ ಉಂಟಾ?? ಗೊತ್ತಿಲ್ಲ! :) <<ಇಂತಾ ಹೀನ ಕ್ರತ್ಯ ನಡೆದ ಮೇಲೂ, ಒಬ್ಬ ಪ್ರಧಾನಿ, ಆ ಸ್ಥಳಕ್ಕೆ ಭೇಟಿ ನೀಡಿಲ್ಲ ಅಂದರೆ, ಆತ ಭಾರತದ ಪ್ರಧಾನಿಯಾಗಲು ಅನರ್ಹ.. ಇದರಲ್ಲಿ ವಿಶೇಷತೆಯೇನು??>> ವಿಶೇಷ ಅಂದ್ರೆ ಅಲ್ಲಿ ಭೇಟಿ ನೀಡಿದಾಗ ಅವರು ಭಾರತದ ಪ್ರಧಾನಿ ಆಗಿರಲ್ಲಿಲ್ಲ! ಮತ್ತೆ ಆಗ ಪ್ರಧಾನಿ ಆಗಿದ್ದ ಮಿ|| ಮೊರಾರ್ಜಿ ದೇಸಾಯಿ ಭೇಟಿ ನೀಡಿರಲಿಲ್ಲ! <<ಪಾಠ ಕಲಿಸಿದರೋ, ಪಾಠ ಕಲಿತುಕೊಂಡೆವೋ.. ಯಾರ್ಯಾರಿಗೋ ದೇಶ ದೊರೆಕಿಸಿಕೊಟ್ಟು, ಭೂ ಲೋಕದ ಸ್ವರ್ಗ ಕಾಶ್ಮೀರ ಮತ್ತು ಅರುಣಾಚಲದ ಕೆಲ ಪ್ರದೇಶಗಳನ್ನು, ಪಾಕಿ ಚೀನಿ ಗಳಿಗೆ ಬಿಟ್ಟು ಕೊಟ್ಟು ಇಷ್ಟು ವರ್ಷ ಪಾಠ ಪುಸ್ತಕಗಳಲ್ಲಿ ಸುಳ್ಳು ನಕಾಶೆ ಬಿಡಿಸಿಕೊಂಡು ಆತ್ಮ ಸಂತ್ರಪ್ತಿ ಪಟ್ಟುಕೊಳ್ತಾ ಇದ್ದೆವಲ್ವೆ?? ಯಾರ ಖುಷಿಗೋ??>> ನಿಜ,ಅದನ್ನ ಮಾಡಿದ್ದು ಅವರಪ್ಪ ಅವರಲ್ಲ.ಆದರೆ 'ಯಾರ್ಯಾರಿಗೋ ದೇಶ ದೊರೆಕಿಸಿಕೊಡದಿದ್ದಿದ್ದರೆ' ಇವತ್ತು ಅನುಭವಿಸುತ್ತಿರುವ ಕಷ್ಟಗಳು ಇನ್ನು ದುಪ್ಪಟ್ಟಾಗುತಿತ್ತು , ಅದನ್ನು ತಪ್ಪಿಸಿದವರು ಇಂದಿರಮ್ಮ! << 'ವಾಜಪೇಯಿ' ಅವರೇ ಅವರನ್ನು 'ದುರ್ಗಾ' ಅಂತ ಕರೆದಿದ್ದರು >> ಗೆದ್ದೆತ್ತಿನ ಬಾಲ ಹಿಡಿಯೋದು ಅಂದ್ರೆ ಇದೆ ಅನ್ಸುತ್ತೆ, ವಸುಂಧರಾ ರಾಜೇ , ಕಾಂಗ್ರೆಸ್ಸ್ ಅಧಿನಾಯಕಿ ಸೋನಿಯಾ ಗ್ಯಾಂಡೆ(ಮೈನೋ) ಅವರನ್ನು ಕರೆದಿದ್ರು(ಆದ್ರೆ ಅಧಿಕಾರದಲ್ಲಿದ್ದಾಗ)..>> ನೋ .. ಕಾಮೆಂಟ್ಸ್! ಇಲ್ಲಿ ಇವರೆಲ್ಲ ಯಾಕೆ? <<ಇದರ ಬಗ್ಗೆ ಅಷ್ಟೊಂದು ತಿಳುವಳಿಕೆ ಇಲ್ಲ .. ಅಮೃತ ಸರದ ಸ್ವರ್ಣ ಮಂದಿರದಲ್ಲಿ ಅಷ್ಟೊಂದು ಉಗ್ರರ ಸೈನ್ಯ ಮತ್ತು ಶಸ್ತ್ರಾಸ್ತ್ರ ಜಮಾವಣೆಯಾಗುವ ವರೆಗೂ, ಸರಕಾರ ಮಣ್ಣು ತಿಂತಿತ್ತ??(ಉದಾಹರಣೆಗೆ ನಕ್ಸಲ್ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ, ವಿಶ್ವದಲ್ಲೇ ಶೌರ್ಯಕ್ಕೆ ಹೆಸರುವಾಸಿಯಾದ ಭಾರತಿಯ ಸೈನ್ಯವನ್ನು ಇಟ್ಟುಕೊಂಡೂ, ಅತ್ತ ನಕ್ಸಲಿಗರು ನಾಗರೀಕ ಮತ್ತು ಪೋಲಿಸರನ್ನು ಕೊಲ್ಲುತ್ತಿದ್ದರೂ, ಇತ್ತಿಂದ ಶಾಂತಿ ಸಂದೇಶ ಕಳುಹಿಸುತ್ತಾರಲ್ಲ...)...>> ಅಮೃತ ಸರದ ಸ್ವರ್ಣ ಮಂದಿರದಲ್ಲಿ ಅಷ್ಟೊಂದು ಉಗ್ರರ ಸೈನ್ಯ ಮತ್ತು ಶಸ್ತ್ರಾಸ್ತ್ರ ಜಮಾವಣೆಯಾಗುವ ವರೆಗೂ, ಸರಕಾರ ಮಣ್ಣು ತಿಂತಿತ್ತ?? ಈ ಪ್ರಶ್ನೆ ಒಪ್ಪುವನ್ತದ್ದೆ, ಆದರೆ ಅದೆಲ್ಲ ಆದ್ಮೇಲೆ ಅಲ್ಲಿ ಇಂದಿರಾ ನಡೆದು ಕೊಂಡ ಹಾಗೆ ಯಾವ ಮಹಾನ್ ನಾಯಕನಿಗೂ ನಡೆಯಲು ಸಾಧ್ಯವಿಲ್ಲ ಅನ್ನೋದೇ ವಿಷ್ಯ! ಇನ್ನ ನಕ್ಸಲ್ ಅಟ್ಟಹಾಸ ಮತ್ತೆ ಈ ಲೇಖನಕ್ಕೆ ಸಂಬಂಧವಿಲ್ಲ, ಅದು ನೀವ್ ಹೇಳಿದಷ್ಟು ಸುಲಭವಾಗಿ ,ಕೇವಲ ಗುಂಡಿನಿಂದ ಅದಗಿಸಬಹುದಾದನ್ತದ್ದ ಸಮಸ್ಯೆ ಅಲ್ಲ ಸರ್ ಅದು. <<ಇದನ್ನೊಂದು ಹೆಮ್ಮೆಯೇನ್ನೋದಾದ್ರೆ.. ಇದರ ಎದುರು "1984 Anti-Sikh Riots" ನಲ್ಲಿ ಮಡಿದ ಅಸಂಖ್ಯಾತ ಸಿಖ್ ಕುಟುಂಬಗಳ ನೋವು ಅಷ್ಟೊಂದು ಗೌಣವೇ??>> ನಾನೆಲ್ಲಿ ಹಾಗೆ ಹೇಳಿದೆ? <<ನನಗೆ ತಿಳಿದ ಪ್ರಕಾರ ಇದನ್ನು ಕಾರ್ಯ ರೂಪಕ್ಕೆ ತಂದಿದ್ದು ದಿವಂಗತ ಸಂಜಯ ಗ್ಯಾಂಡೆ... ಈ 'ಸಂತಾನ ನಿಯಂತ್ರಣ' ಕಾಯಿದೆ ಜಾರಿಗೆ ತರುವ ಹೊತ್ತಿನಲ್ಲೇ, ವಿಮಾನ ಅಪಘಾತವೊಂದರಲ್ಲಿ ವಿವಾದತ್ಮಕವಾಗಿ ಮರಣ ಹೊಂದಿದರು... ಇದರ ಹಿಂದೆ.................................................... ಬ್ಯಾಡ ಬಿಡಿ, ಇದರ ಬಗ್ಗೆ ಹೇಳಿ ನಾನ್ಯಾಕೆ ಕೆಟ್ಟವನೆನಿಸಿಕೊಳ್ಳಲಿ :)>> ಅನಗತ್ಯ ಕಮೆಂಟು! <<ಆಕೆ 'Golden Lady' ಯಾಕಂದ್ರೆ ಆಕೆ ಚಿನ್ನದ ಚಮಚವನ್ನು ಬಾಯೊಳಗೆ ಇಟ್ಟುಕೊಂಡೆ ಹುಟ್ಟಿದ್ದರು... ತಂದೆ, ಪ್ರಧಾನಿ, ಮಹಾತ್ಮಾ ಗಾಂಧಿಯ ವಿಶೇಷ ಆಸ್ಥೆ, ಅದು ಎಷ್ಟರ ವರೆಗೆ ಎಂದರೆ, ತನ್ನ ಗಾಂಧಿ ಉಪನಾಮವನ್ನು ಧಾರೆ ಎರೆಯುವಷ್ಟು , ಅದಲ್ಲದೆ ಆ ಕಾಲದಲ್ಲಿ ಇಷ್ಟೊಂದು ಚಿಲ್ಲರೆ ಪಕ್ಷಗಳಿರಲಿಲ್ಲ, ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳಲು ಅಡ್ಡಗಾಲು ಹಾಕುತ್ತಿರುವ, ಇಂದಿನಂತಹ ದುರಾಚಾರಿ ನಾಯಕರುಗಳು ಇರ್ಲಿಲ್ಲ..>> ಅವ್ರು ಚಿನ್ನ ಇಟ್ಕೊಂಡು ಹುಟ್ಟಿದ್ರೋ ಬಿಟ್ರೋ ಅದಿಲ್ಲಿ ಲೆಕ್ಕಕ್ಕಿಲ್ಲ ಸರ್. ಎಷ್ಟು ಪಕ್ಷ ಇದ್ದಿದ್ದ್ರು ಅವ್ರು ಅವರೆ, ಯಾರಿಗೂ ತಲೆ ಕೆಡಿಸಿಕೊಳ್ಳುವ ಜಾಯಮಾನ್ದವರಾಗಿರಲಿಲ್ಲ ಅನ್ನೋದೇ ಇಂದಿರಾ ಸ್ಪೆಷಲ್!

<<ವಿಶೇಷ ಅಂದ್ರೆ ಅಲ್ಲಿ ಭೇಟಿ ನೀಡಿದಾಗ ಅವರು ಭಾರತದ ಪ್ರಧಾನಿ ಆಗಿರಲ್ಲಿಲ್ಲ! ಮತ್ತೆ ಆಗ ಪ್ರಧಾನಿ ಆಗಿದ್ದ ಮಿ|| ಮೊರಾರ್ಜಿ ದೇಸಾಯಿ ಭೇಟಿ ನೀಡಿರಲಿಲ್ಲ! >> ಕ್ಷಮಿಸಿ ಗೊತ್ತಿರ್ಲಿಲ್ಲ :) ನೋ .. ಕಾಮೆಂಟ್ಸ್! ಇಲ್ಲಿ ಇವರೆಲ್ಲ ಯಾಕೆ? ನಂದು ನೋ ಕಮೆಂಟ್ಸ್ :) << ನಿಜ,ಅದನ್ನ ಮಾಡಿದ್ದು ಅವರಪ್ಪ ಅವರಲ್ಲ.ಆದರೆ 'ಯಾರ್ಯಾರಿಗೋ ದೇಶ ದೊರೆಕಿಸಿಕೊಡದಿದ್ದಿದ್ದರೆ' ಇವತ್ತು ಅನುಭವಿಸುತ್ತಿರುವ ಕಷ್ಟಗಳು ಇನ್ನು ದುಪ್ಪಟ್ಟಾಗುತಿತ್ತು , ಅದನ್ನು ತಪ್ಪಿಸಿದವರು ಇಂದಿರಮ್ಮ! >> ದೇಶ ವಿಭಜನೆಗೆ ಕಾರಣ -- ನೆಹರು ಜಿನ್ನಾ ಪಾಕಿಸ್ತಾನ ಕೇಳಲು ಕಾರಣ -- ನೆಹರು ಕಶ್ಮೀರ ಕೈತಪ್ಪಲು ಕಾರಣ -- ನೆಹರು ದೇಶದ ಈ ಪರಿಸ್ಥಿತಿಗೆ ಕಾರಣ -- ನೆಹರು ಎಲ್ಲ ನೆಹರು ಮಾಡಿದ್ದಾದರೆ, ಉಳಿದವರೆಲ್ಲ, ಕಡ್ಲೆ ಕಾಯಿ ತಿನ್ತಿದ್ರ?? ಏಳನೇ ತರಗತಿಯಲ್ಲಿ, ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ಚಮಚ ಕ್ಷಮಿಸಿ ಚಾಚ ನೆಹರು ರವರೆ ಬಗ್ಗೆ ಮಾಡಿದ ಭಾಷಣಕ್ಕೆ ಮೊದಲ ಬಹುಮಾನ ತಂದುಕೊಟ್ಟ ನೆಹರು ರವರನ್ನು ನಿಂದಿಸಿದರೆ, ನನ್ನ ಭಾಷಣಕ್ಕೆ ಮಾಡಿದ ಅವಮಾನ.. ನೆಹರುರವರ ಬಗ್ಗೆ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಉನ್ನತಿಯ ಸ್ಥಾನ ಇದೆ.. ಅವರ ಬಗ್ಗೆ ಕೀಳಾಗಿ ಮಾತನಾಡಿದರೆ, ಬೇಜಾರಾಗುತ್ತೆ :) 'ಯಾರ್ಯಾರಿಗೋ ದೇಶ ದೊರೆಕಿಸಿಕೊಡದಿದ್ದಿದ್ದರೆ' ಉದಾಹರಣೆಗೆ, ನಮ್ಮ ಸಹೋದರ ಶ್ರೀ ಲಂಕಾದ ತಮಿಳರಿಗೆ, ದೇಶ ದೊರಕಿಸಿಕೊಡದೆ, ಅವರೆಲ್ಲ ಈಗ ನಮ್ಮ ದೇಶಕ್ಕೆ ಬಂದು, ಗುಡಿಸಿ ಗಂಡಾಂತರ ಮಾಡ್ತಾ ಇದ್ದಾರಲ್ಲ :) ಹಾಗಂತ, ಇನ್ನೂ ಟಿಬೆಟ್ ಗೆ ಒಂದು ದೇಶ ಕೊಡ್ಸ್ಲಿಕ್ಕೆ ಆಗ್ಲಿಲ್ಲ ನೋಡಿ .., ಇನ್ನೂ ನೇಪಾಳಕ್ಕೆ ಒಂದು ಕಪಾಳಮೋಕ್ಷ ಮಾಡಲು ಇಂದಿರಮ್ಮನಿಗೆ ಕಾಯ್ಬೇಕೆನೋ?? << ಅದು ನೀವ್ ಹೇಳಿದಷ್ಟು ಸುಲಭವಾಗಿ ,ಕೇವಲ ಗುಂಡಿನಿಂದ ಅದಗಿಸಬಹುದಾದನ್ತದ್ದ ಸಮಸ್ಯೆ ಅಲ್ಲ ಸರ್ ಅದು. >> ಪ್ರಪಂಚದಲ್ಲಿ ಯಾವುದೂ ಸುಲಭ ಅಲ್ಲ :) , ಸುಲಭ ಅಂದ್ರೆ, ನಮ್ಮ ಪೋಲಿಸರನ್ನ ಒಂದು ನಳಿಕೆಯ ಬಂದೂಕು ಕೊಟ್ಟು ನಕ್ಸಲರೆದುರು ಹೋರಾಟಕ್ಕೆ ಕಳುಹಿಸುವುದು.. ಇವತ್ತಿನ ವರೆಗೂ ಭಾರತದಲ್ಲಿ ನಕ್ಸಲರಿಂದಾಗಿ ಅಬ್ಬಬ್ಬ ಅಂದರೆ ೬೦೦೦ ಜನ ಸತ್ತಿದ್ದಾರೆ ಅಷ್ಟೇ :) http://en.wikipedia.... << ಅವ್ರು ಚಿನ್ನ ಇಟ್ಕೊಂಡು ಹುಟ್ಟಿದ್ರೋ ಬಿಟ್ರೋ ಅದಿಲ್ಲಿ ಲೆಕ್ಕಕ್ಕಿಲ್ಲ ಸರ್. ಎಷ್ಟು ಪಕ್ಷ ಇದ್ದಿದ್ದ್ರು ಅವ್ರು ಅವರೆ, ಯಾರಿಗೂ ತಲೆ ಕೆಡಿಸಿಕೊಳ್ಳುವ ಜಾಯಮಾನ್ದವರಾಗಿರಲಿಲ್ಲ ಅನ್ನೋದೇ ಇಂದಿರಾ ಸ್ಪೆಷಲ್! >> ನಾನೂ ಯಾರಿಗೂ ತಲೆ ಕೆಡಿಸಿಕೊಳ್ಳುವ ಜಾಯ ಮಾನದವನಲ್ಲ ... ಆದ್ರೆ ನನ್ನನ್ನು ಈ ದೇಶದ ಪ್ರಧಾನಿ ಮಾಡುವವರ್ಯಾರು?? ಎಷ್ಟಾದ್ರೂ ನಾನೊಬ್ಬ ಮಧ್ಯಮ ವರ್ಗದ ಕೃಷಿ ಕುಟುಂಬದಿಂದ ಬಂದಿರುವುದು :( ನಿಜ, ಇಂದಿರಮ್ಮ ನ ಬಗ್ಗೆ ಶತ್ರುಗಳೂ, ಮನದ ಮೂಲೆಯಲ್ಲಿ ಮೆಚ್ಚುಗೆ ಸೂಚಿಸುತ್ತಾರೆ.. ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕೆಟ್ಟ ಕುತೂಹಲ.. ಬುದ್ದಿ ಜೀವಿಗಳಲ್ಲದ ತಮ್ಮಿಂದ ಒಂದು ವಿಷಯಾಧಾರಿತ ಲೇಖನ ನಿರೀಕ್ಷಿಸಿದ್ದೆ.. ಆದ್ರೆ, ಬರಿ ಹೊಗಳಿಕೆಯಲ್ಲೇ ಮುಗಿಸಿದ್ದಿರ.... ನಮಸ್ಕಾರ..

<<ದೇಶ ವಿಭಜನೆಗೆ ಕಾರಣ -- ನೆಹರು ಜಿನ್ನಾ ಪಾಕಿಸ್ತಾನ ಕೇಳಲು ಕಾರಣ -- ನೆಹರು ಕಶ್ಮೀರ ಕೈತಪ್ಪಲು ಕಾರಣ -- ನೆಹರು ದೇಶದ ಈ ಪರಿಸ್ಥಿತಿಗೆ ಕಾರಣ -- ನೆಹರು ಎಲ್ಲ ನೆಹರು ಮಾಡಿದ್ದಾದರೆ, ಉಳಿದವರೆಲ್ಲ, ಕಡ್ಲೆ ಕಾಯಿ ತಿನ್ತಿದ್ರ?? >> ಚಾಚ ನೆಹರು ಬಗ್ಗೆ ಹುಡುಕಿದರೆ ನನ್ನದೇ ಎರಡು ಲೇಖನಗಳಲ್ಲಿ ಅವರನ್ನ ವರ್ಣಿಸಿದ್ದೇನೆ ಒಮ್ಮೆ ಓದಿಕೊಳ್ಳಿ . <<ಬುದ್ದಿ ಜೀವಿಗಳಲ್ಲದ ತಮ್ಮಿಂದ ಒಂದು ವಿಷಯಾಧಾರಿತ ಲೇಖನ ನಿರೀಕ್ಷಿಸಿದ್ದೆ.. ಆದ್ರೆ, ಬರಿ ಹೊಗಳಿಕೆಯಲ್ಲೇ ಮುಗಿಸಿದ್ದಿರ....>> ನಂಗೆ ಬುದ್ದಿ ಇಲ್ಲ ಅಂತ ಹೇಳಿಬಿಟ್ರಿ :) .. ಇಂದಿರಾ ಅಂದಾಕ್ಷಣ ಕಣ್ಣಿಗೆ ಕಟ್ಟುವುದು ೧೯೭೧,೧೯೮೪- ಹಾಗೂ ಎಮರ್ಜೆನ್ಸಿ. ನಾನಿಲ್ಲಿ ಬರೆದಿರೋದು ೭೧,೮೪ ರ ಬಗ್ಗೆ ಮಾತ್ರ. ಹಾಗಂತ ಲೇಖನದಲ್ಲಿ ನಾನೆಲ್ಲೂ ಆಕೆ ಏನು ತಪ್ಪೇ ಮಾಡಿಲ್ಲ ಅಂತ ಹೇಳಿದ್ದೆನ?,ಅಂತ ಗಟ್ಸ್ ಇರೋ ನಾಯಕ/ಕಿ ಮತ್ತೊಬ್ಬರು ನಮಗೆ ಸಿಕ್ಕಿಲ್ಲ ಅಂತಷ್ಟೇ ಹೇಳಿದ್ದೇನೆ. ಧನ್ಯವಾದಗಳು :) ರಾಕೇಶ್ ಶೆಟ್ಟಿ :)

ಇಂದು ಆ ಇಂದಿರಾ ಗಾಂಧಿ ಬದುಕಿ ಇದ್ದಿರುತ್ತಿದ್ದರೆ ಆ ರಾಜೀವ ಗಾಂಧಿಯೂ ಬದುಕಿರುತ್ತಿದ್ದನೇನೋ ಆಕೆ ಸತ್ತಿರದಿದ್ದರೆ ರಾಜೀವ ಪ್ರಧಾನಿ ಆಗಿರುತ್ತಿರಲಿಲ್ಲ ಪ್ರಧಾನಿ ಆಗದಿದ್ದಾಗ ಆತ ಕುಲಗೆಟ್ಟು ಹೋಗ್ತಿರಲಿಲ್ಲ ಹಾಗಾಗಿದ್ದಲಿ ಬೋಫೋರ್ಸ್ ಕಾಂಡ ಆಗುತ್ತಿರಲಿಲ್ಲ ಅಲ್ಲದೆ ಶ್ರೀಲಂಕಾಕ್ಕೆ ನಮ್ಮ ಸೈನ್ಯ ಕಳಿಸುತ್ತಿರಲಿಲ್ಲ ಬೋಫೋರ್ಸಿಲ್ಲದೇ ವಿಪಿ ಸಿಂಗ್ ಪ್ರಧಾನಿ ಆಗ್ತಿರಲಿಲ್ಲ ಆತನಾಗದೇ ಇದ್ದಿದ್ದರೆ ಚಂದ್ರಶೇಖರನೂ ಆಗ್ತಿರಲಿಲ್ಲ ತಮಿಳರಿಗೆ ರಾಜೀವನ ಮೇಲೆ ದ್ವೇಶ ಹುಟ್ಟಿಕೊಳ್ತಿರಲಿಲ್ಲ ಆತ ತೊಂಬತ್ತೊಂದರಲ್ಲಿ ಆ ಸಾವಿಗೆ ಈಡಾಗುತ್ತಿರಲಿಲ್ಲ ಆತನಿದ್ದಿದ್ದರೆ ನರಸಿಂಹ ರಾವ್ ಪ್ರಧಾನಿ ಆಗ್ತಿರಲೇ ಇಲ್ಲ ಈ ವಿದೇಶೀ ಸೋನಿಯಾ ರಾಜಕೀಯಕ್ಕೆ ಬರುತ್ತಿರಲಿಲ್ಲ ಶರದ ಪವಾರನ ಹೊಸ ಕಾಂಗ್ರೆಸ್ ಹುಟ್ಟಿಕೊಳ್ಳುತ್ತಿರಲಿಲ್ಲ ರಾಹುಲ ಗಾಂಧಿ ಹೀಗೆ ಮದುವೆ ಆಗದೇ ಉಳಿಯುತ್ತಿರಲಿಲ್ಲ ರಾಕೇಶ್ ಶೆಟ್ರು ಇಂದು ಈ ಲೇಖನ ಬರೆಯುತ್ತಲೇ ಇರಲಿಲ್ಲ ಹಾಗಾಗಿ ನಾನು ಈ ಪ್ರತಿಕ್ರಿಯೆ ಬರೆಯ ಬೇಕೆಂದೇ ಇರಲಿಲ್ಲ ಇಂದಿರಾಳನ್ನು ಕೊಂದ ಆ ಗುಂಡುಗಳು ಶಾಂತಿ ಕೆಡಿಸಿದವು ನನ್ನ ಈ ನಾಲ್ಕು ಸಾಲುಗಳಿಲ್ಲಿ ನಿಮ್ಮ ಶಾಂತಿ ಕೆಡಿಸಿದವು

ಇಂದಿರಾ ಗಾಂಧಿ ಇಂದು ಬದುಕಿದ್ದಿದ್ದರೆ ಅಖಿಲ ಭಾರತ ಕಾಂಗ್ರೇಸ್ (ಇಂದಿರಾ) ಪಕ್ಷ ಇಂದು ಇಂದಿರೆಯನು ಕಳೆದುಕೊಂಡು ಬರೇ ಕಾಂಗ್ರೆಸ್ ಪಕ್ಷವಾಗಿರುತ್ತಿರಲಿಲ್ಲ. ಕಾಂಗ್ರೇಸ್ (ಐ) ಯಾವಾಗ ಕಾಂಗ್ರೇಸ್ ಆಯ್ತೋ ಆ ದೇವರಿಗೇ ಗೊತ್ತು... ದೆಹಲಿಯ ಕಾಂಗ್ರೇಸ್ ಕಚೇರಿಯ ಮುಂದಷ್ಟೇ "ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ (ಐ)" ಅನ್ನುವ ನಾಮ ಫಲಕ ಇದೆ. ಬೇರೆಲ್ಲೂ ಇಂದಿರೆಯ ಸುಳಿವೇ ಇಲ್ಲ.