ವೇದ ಎಂದರೇನು ?

To prevent automated spam submissions leave this field empty.

(ಈ ಲೇಖನ ವನ್ನು ಮೊದಲೇ ಪ್ರಕಟಿಸಿದ್ದೆ  ಆದರೇ ಅವು ಕಳೆದು ಹೋದದ್ದರಿಂದ ಈಗ ಮತ್ತೇ ಅವಗಳನ್ನು  ಮತ್ತೊಮ್ಮೆ  ಹಾಕುತ್ತಿದ್ದೇನೆ )

ವೇದ ಎಂದರೇನು ?
ವೇದಗಳು ಹಿಂದೂಗಳಿಗೆ ಮಾತ್ರ ಅಲ್ಲ ,ಸತ್ಯ ಅರಸುವ ವಿಶ್ವದ ಯಾವುದೇ ದೇಶದ ಯಾವುದೇ ವ್ಯಕ್ತಿಗೂ ಅತ್ಯಂತ ಪವಿತ್ರ ಗ್ರಂಥಗಳ ಸಂಕಲನ. ಹಿಂದೂಗಳು ತಮ್ಮ ಸಾಂಸ್ಕೃತಿಕ ಸಂಪತ್ತಿನ ತವರು ಮನೆಯೆಂದು ವೇದಗಳನ್ನು ಆದರಿಸುತ್ತಾರೆ .ಮಾನವೀಯತೆಯ ಮೇರುಕೃತಿಗಳು ವೇದಗಳು ,ಅದು ನಮ್ಮ ಸನಾತನ ಧರ್ಮದ ಆಧಾರ.

ವೇದಗಳು ತತ್ತ್ವಶಾಸ್ತ್ರದ ತವರು .ಧರ್ಮ ಸಂಸ್ಕೃತಿಗಳ ನೆಲೆ .ಅರ್ಥ ಶಾಸ್ತ್ರ ,ವೈದ್ಯಶಾಸ್ತ್ರ ,ನೀತಿಶಾಸ್ತ್ರ ,ಕಾಮಶಾಸ್ತ್ರ ಹಾಗೂ ಜ್ಞಾನ ವಿಜ್ಞಾನಗಳ ಆಕರ.ಮೌಲಿಕ ಬದುಕಿಗೆ ,ಸೂಕ್ಸ್ಮ ಸಂವೇದನೆಗೆ ಆಳವಾದ ಚಿಂತನೆಗೆ ಭಾವುಕತೆಯ ಸ್ಪಂದನಗಳಿಗೆ ಸ್ಪೂರ್ಥಿ ನೀಡುವ ಜ್ಞಾನಸಾಗರ.

ಹೀಗೆ ವೇದವು ಎಲ್ಲ ವಿದ್ಯೆಗಳ ಆಗರವೆಂಬುದು ಎಷ್ಟು ದಿಟವೋ ಅದಕ್ಕಿಂತ ಹೆಚ್ಚಿನ ಮಹತ್ವದ ಇನ್ನೊಂದು ಮುಖ ವೇದಕ್ಕಿದೆ.ಮಾನವನ ಪವಿತ್ರವಾದ ಬದುಕಿಗೆ ಚಾಲನೆ ನೀಡಿ ,ಅನಂತ ಸದ್ಗುಣಗಳ ಶಾಶ್ವತ ಧಾಮನಾದ ಪರಮಾತ್ಮನ ಅರಿವು ನೀಡಿ ,ಸಾಧಕನನ್ನು ಕತ್ತಲೆಯಿಂದ ಬೆಳಕಿನೆಡೆಗೆ ,ಅರಿವಿನಿಂದ ಅಮೃತತ್ತ್ವದೆಡೆಗೆ ಕೊಂಡೋಯ್ಯುವ ,ಇಹ ಪರಗಳ ಬಂಧು -ವೇದವಾಗಿರುತ್ತದೆ .

ವೇದವೆಂದರೇನು ಎನ್ನುವದನ್ನ ಸಂಕ್ಷಿಪ್ತ ವಾಗಿ ನೋಡುವ .

ವಿದ್ ಎಂಬ ಧಾತುವಿನಿಂದ ವೇದ ಎಂಬ ಪದ ಬಂದಿದೆ - ವಿದ್ ಇದರ ಅರ್ಥ ಜ್ಞಾನ ,ತಿಳುವಳಿಕೆ ಎಂದು ಅರ್ಥಕೊಡಲಾಗಿದೆ.

೧) "ವೇದೇನ ವೈ ದೇವಾ ಅಸುರಾಣಂ ವಿತ್ತಂ ವೇದ್ಯಮವಿಂದತ"

ಕಾಠಕ ,ಮೈತ್ರಾಯಣೀಯ , ತೈತ್ತರೀಯ ಸಂಹಿತೆಗಳು "ವೇದ " ಶಬ್ದದ ನಿರ್ವಚನವನ್ನು ಹೇಗೆ ಮಾಡುತ್ತವೆ ----- " ಅಸುರರ ಸಿರಿ , ಪರಮಾತ್ಮನ ಕೃಪೆ ,ದೊರಕಿಸಲು ಕಾರಣವಾದುದರಿಂದ ಅಪೌರಷೆಯ ವಾದ ಶಬ್ದರಾಶಿಯು ವೇದವೆನಿಸಿದೆ "

೨.---"ವೇದಿರ್ದೆವೆಭ್ಯೋ ನಿಲಾಯತ /ತಾಂ ವೇದೇನಾನ್ವಾವಿಂದನ್ ವೇದೇನ ವೇದಂ ವಿವಿದು: ಪ್ರಥಿವೀಯಂ "

ವೇದಗಳನ್ನ ಅಧ್ಯಯನ ಮಾಡಿದ ದೇವತೆಗಳು , ಅದರಿಂದ ಪರಮ ಪುರುಷನಾದ ಪರಮಾತ್ಮನನ್ನು ಹಾಗು ಎಲ್ಲ ಬಗೆಯ ಸಿರಿಯನ್ನೂ ಹೊಂದಿದರು .

೩.... "ನೆಂದ್ರಿಯಾಣಿ ನಾನುಮಾನಂ ವೇದಾ ಹ್ಯೇವೈನಂ ವೇದಯಂತಿ " ಇತಿ ಪಿಪ್ಪಲಾದ ಶ್ರುತಿ:

" ಕಣ್ಣು ,ಕಿವಿ ,ಮನಸ್ಸು ಮೊದಲಾದ ಇಂದ್ರಿಯಗಳು ಪರಮಾತ್ಮನನ್ನು ಕಾಣಿಸಲಾರವು ,ಜಟಿಲವಾದ ತರ್ಕಶಾಸ್ತ್ರವೂ ಕೂಡ ಪರಮಾತ್ಮನ ಅರಿವು ಮಾಡಿಸದು .ಕೇವಲ ವೇದಗಳು ಮಾತ್ರವೇ ಪರಮಾತ್ಮನನ್ನು ತಿಳಿಸಬಲ್ಲವು .ಆದ್ದರಿಂದಲೇ ಅವು ವೇದವೆನಿಸಿವೆ ".

೪.....ಕಪರ್ದಿಸ್ವಾಮಿಯು " ಜೀವಾತ್ಮನಿಗೆ ,ಸಂಸಾರದ ಕಡಲಿನಿಂದ ಶಾಶ್ವತವಾದ ಬಿಡುಗಡೆ ದೊರಕಿಸುವ ಸತ್ಕರ್ಮ ಗಳನ್ನು ನಿರೂಪಿಸುವ ಗ್ರಂಥವೇ ವೇದ".

೫...ಹರದತ್ತ ........" ಪರತತ್ತ್ವವನ್ನು ಯಥಾವತ್ತಾಗಿ ತಿಳಿಸುವ ಶಬ್ದರಾಶಿ ವೇದ ".

೬.....ಮನು " ಪ್ರತ್ಯಕ್ಷಾನುಮಾನಗಳು ಯಾವ ಪರವಸ್ತುವನ್ನು ತಿಳಿಸಲಾರವೋ ಅಂತಹ ಪರತತ್ತ್ವದ ಅರಿವು ನೀಡುವ ಕಾರಣದಿಂದ ವೇದವು ಅಪೌರುಷೆಯ ವಾದ ಶಬ್ದ ರಾಶಿ ವೇದವೆನಿಸಿದೆ .

೭....ಹೇಮಚಂದ್ರ -........."ಧರ್ಮ ಹಾಗೂ ಪರತತ್ತ್ವ ದ ಅರಿವು ನೀಡುವದರಿಂದ ಈ ಶಬ್ದರಾಶಿ ವೇದವೆನಿಸಿದೆ "

ಮೇಲೆ ಹೇಳಿದ ಅರ್ಥಗಳನ್ನು ವಿಮರ್ಸಿಸಿದರೆ ವೇದಗಳೆಂದರೆ ಸಂಪೂರ್ಣ ಲೌಕಿಕ ಬದುಕನ್ನು ಸಾರ್ಥಕಗೊಳಿಸಿ ,ಅತೀಂದ್ರಿಯ ವಾದ ಧರ್ಮ , ಸ್ವರ್ಗ ,ಪರತತ್ತ್ವವಾದ ಪರಮಾತ್ಮನ ಬೋಧನೆಯೇ ವೇದದ ಪ್ರಮುಖ ಗುರಿಯೆಂದು ಸ್ಪಷ್ಟ ವಾಗಿ ತಿಳಿದುಬರುತ್ತದೆ .

" ವೇದದ ಪ್ರತಿಯೊಂದು ಸ್ವರಗಳು, ವರ್ಣಗಳು ಪರಮಾತ್ಮನ ಪಾರಮ್ಯವನ್ನು ಬಣ್ಣಿಸುತ್ತವೆ .ಇಷ್ಟೇ ಏಕೆ ? ಸಮುದ್ರದ ಭೋರ್ಗರೆತ ,ಮೋಡಗಳ ಗುಡುಗು ,ಪಕ್ಷಿಗಳ ಕಲರವ ಮೊದಲಾದ ಎಲ್ಲ ದ್ವಾನ್ಯಾತ್ಮಕ ಶಬ್ದಗಳು ಪರಮಾತ್ಮನ ಹಿರಿಮೆಯನ್ನು ವರ್ಣಿಸುತ್ತವೆ ,ಇದು ವೇದದ ಮುಖ್ಯವಾದ ಸಂದೇಶ "

ಹೀಗೆ ವೇದದ ಯಥಾರ್ಥವಾದ ಉದ್ದೇಶವನ್ನು ಅರಿತು ಅದನ್ನು ಪಠಿಸಿದಾಗ ಮಾತ್ರವೇ ,ಅದು ಸಾರ್ಥಕ . ಕೇವಲ ಮೂಲಾಧಾರದ ವಲಯದಲ್ಲೇ ಸುತ್ತುವವರಿಗೆ ಆ ಅನಾಹತ ನಾದದ ಅರಿವು ಆಗುವದಿಲ್ಲ . ಇಲ್ಲವಾದಲ್ಲಿ " ಯಾಸ್ಕ " ರ ಅನಿಸಿಕೆಯಂತೆ " ಅರ್ಥ ಸ್ಮ್ರುತಿಯಿಲ್ಲದ ವೇದದ ನಿರಂತರ ಪಠಣ ,ಅಧ್ಯಾಪನ ,ಎಲ್ಲವೂ ಒಂದು ದೊಡ್ಡ ಹೊರೆ ಮಾತ್ರ "
..............................

.........

" ವೇದ " ಎನ್ನೋ ಶಬ್ದವು ಜ್ಞಾನಾರ್ಥಕವಾದ "ವಿದ್ " ಧಾತುವಿನಿಂದ ನಿಷ್ಪನ್ನವಾಗಿದೆ . ಪ್ರತಿಯೊಬ್ಬ ಮನುಷ್ಯನಿಗೂ ಸೌಖ್ಯವನ್ನು ಪಡೆಯಬೇಕೆಂದು ಇಚ್ಛೆಯೂ ಹಾಗೆಯೇ ದುಃಖಗಳನ್ನು ಪರಿಹರಿಸಿಕೊಳ್ಳಬೇಕೆಂದು ಆಸೆಯೂ ಇರುತ್ತದೆ .ಅಂದರೆ ಪ್ರತಿಯೊಬ್ಬ ಮಾನವನಿಗೂ ಸುಖಾದಿಗಳು ಇಷ್ಟವಾಗಿಯೂ ದುಃಖಾದಿಗಳು ಇಷ್ಟವಲ್ಲದೆ ಅನಿಷ್ಟವಾಗಿಯೂ ಇರುತ್ತದೆ .ಈ ರೀತಿಯಾಗಿ ಇಷ್ಟವಾದ ಸುಖಾದಿಗಳನ್ನ ಪಡೆಯಲು ಮತ್ತು ದುಃಖಾದಿ ಅನಿಷ್ಟಗಳನ್ನು ಪರಿಹರಿಸಿಕೊಳ್ಳಲು ಪ್ರತ್ಯಕ್ಷ ,ಅನುಮಾನಗಳಿಗಿಂತ ಭಿನ್ನವಾದ ಅಲೌಕಿಕ ವಾದ ಉಪಾಯವನ್ನು ಯಾವ ಗ್ರಂಥವು ತಿಳಿಸುತ್ತದೆಯೋ ಆ ಜ್ಞಾನ ರೂಪವಾದ ಗ್ರಂಥಗಳೇ "ವೇದ" ಎಂದು ಕರೆಯುತ್ತಾರೆ .

ವೇದಗಳನ್ನು ನಿತ್ಯ ಆಗಮ ಎಂಬುದಾಗಿ ನಮ್ಮ ಪರಂಪರೆ ಅಂಗೀಕರಿಸಿದೆ .ಶ್ರುತಿ , ತ್ರಯೀ , ಅಮ್ನಾಯ ,ಅನುಪೂರ್ವಿ ,ಅನಂತಪಾರ ,ಅನುವಚನ ಮೊದಲಾದ ಇತರ ಅನೇಕ ಹೆಸರುಗಳಿಂದ ಇವು ಪ್ರಸಿದ್ಧವಾಗಿವೆ .

 • ಸದಾ ಇರುವದರಿಂದ "ವೇದ "
 • ಶ್ರವಣ ದಿಂದಲೇ ಅದರ ಅಧ್ಯೇತ್ರಗಳು ಅವುಗಳನ್ನು ತಿಳಿದು ಅಧ್ಯಯನ ಮಾಡುವದರಿಂದ "ಶ್ರುತಿ "
 • ಅರ್ಥತ: ಮಾತ್ರವಲ್ಲದೆ ಶಬ್ದತ : ಸಹ ಅವುಗಳಲ್ಲಿ ನಿತ್ಯತ್ವ ಇರುವದರಿಂದ "ಆಮ್ನಾಯ "
 • ಆನುಪೂರ್ವಿಯಲ್ಲಿ ಯಾವುದೇ ವ್ಯತ್ಯಾಸ ಎಂದೂ ಇಲ್ಲದಿರುವದರಿಂದ "ಆನುಪೂರ್ವಿ "
 • ವಿನಾಶ ಹಾಗೂ ಪರಿಮಿತಿ ಗಳಿಂದ ರಹಿತವೆಂದು "ಅನಂತಾಪಾರ"

ಗಳೆಂದು ಆಯಾ ಹೆಸರುಗಳಿಗೆ ಅನ್ವರ್ಥಕ ವಾಗಿರುವದನ್ನು ಕಾಣಬಹುದು . ಬಹುತೇಕ ಆಧುನಿಕ ವಿದ್ವಾಂಸರು ಸಹ ಇವುಗಳನ್ನು ಮನುಕುಲದ ಅತೀ ಪ್ರಾಚೀನ ಕೃತಿ ಗಳೆಂದು ಅಂಗೀಕರಿಸಿರುವರು.

ವೇದಗಳು ಸೃಷ್ಟಿಯ ಆದಿಯಲ್ಲಿ ಪರಮಾತ್ಮನಿಂದ ಉದ್ಭಾಸಿತ ವಾದ ಯಾವ ವ್ಯಕ್ತಿಗತ ಇತಿಹಾಸಗಳಿಗೂ ಎಡೆಯಿಲ್ಲದ ಶಾಸ್ತ್ರಗಳು ಎಂಬ ಭಾವನೆಗೆಯೇ ಕುಠಾರಾಘಾತ ವಾಗಿದೆ .
ಹೀಗಾಗಿ ಮ್ಯಾಕ್ಸ ಮುಲ್ಲರ್ ,ಗ್ರಿಫಿತ್ ,ವುಲ್ಹರ್ ಮೊದಲಾದ ಪಾಶ್ಚ್ಯಾತ್ಯ ವಿದ್ವಾಂಸರು (?) ಅವರ ಮಾನಸಿಕ ಪುತ್ರರಾದ ಭಾರತೀಯ ವಿದ್ವಾಂಸರು (?) ತಮ್ಮ ಅರೆಬೆಂದ ಜ್ಞಾನವನ್ನ ವೇದಗಳಲ್ಲಿ ತುರುಕಿ ,ತಮ್ಮ ಮೂಗಿನ ನೇರಕ್ಕೆ ವೇದಗಳನ್ನು ಎಳೆದು .ತಮ್ಮ ತಮ್ಮ ಜ್ಞಾನದ ಮಟ್ಟಕ್ಕೆ ವೇದಗಳನ್ನು ಇಳಿಸಿ ,ವೇದಗಳು ಕಾಡಾಡಿಗಳ ಹಾಡುಗಳು ,ಅದೊಂದು ಜನಪದ ಸಾಹಿತ್ಯ ,ಗೊಲ್ಲರ ಗೀತೆಗಳು ಎಂದು ಬೊಗಳೆ ಬಿಟ್ಟು ತಮ್ಮ ಅಜ್ಞಾನ ಪ್ರದರ್ಶನ ಮಾಡಿ ,ಏನೋ ಸಾಧಿಸಿದವರಂತೆ ಬೀಗುವದರಿಂದ ನಿಜವಾದ ವೇದಕ್ಕಾಗಲಿ ಅದರ ಅರ್ಥಕ್ಕಾಗಲಿ ಅದರ ಮಹತ್ವಕ್ಕಾಗಲಿ ಕುಂದು ಬರದು.
.................................................................

ವೇದಗಳೆಷ್ಟು ?

 • ಋಕ್ ,ಯಜುಸ್ ,ಸಾಮ ಎಂಬುದಾಗಿ ವೇದಗಳು ಮೂರು ಬಗೆ ಯಾಗಿರುತ್ತದೆ .
 • ಶಾಖೆ ಯ ದೃಷ್ಟಿಯಿಂದ ನೋಡಿದಾಗ ವೇದಗಳು ನಾಲ್ಕು

1) ಋಕ್ ಶಾಖೆ ೨) ಯಜು :ಶಾಖೆ ೩) ಸಾಮ ಶಾಖೆ ೪) ಅಥರ್ವ ಶಾಖೆ

 • ವಾಸ್ತವವಾಗಿ ಗ್ರಾಂಥಿಕ ಅಸ್ತಿತ್ವದ ಮೂಲಕ ನೋಡಿದಲ್ಲಿ ವೇದಗಳು ಎರಡೇ ಆಗಿವೆ .

1) ಪದ್ಯಮಯ ವಾದ (ಛಂದೋಬದ್ಧವಾದ ) ಅಪೌರುಷೆಯ ಶಬ್ದರಾಶಿಯು "ಋಗ್ವೇದ " ಎನಿಸಿದೆ .
೨) ಗಧ್ಯಮಯವಾದ ಶಬ್ದರಾಶಿಯು "ಯಜುರ್ವೇದ " ವೆನಿಸಿದೆ .

 • ಈ ಎರಡು ವಿಧವಾದ ಮಂತ್ರಗಳಿಗೆ ಗಾನ ಸೇರಿದಾಗ ಅದು "ಸಾಮ " ವೆನಿಸುತ್ತದೆ . ಸಾಮವೇದದಲ್ಲಿ ಯಜುರ್ವೇದ ಮಂತ್ರಗಳು ಅತ್ಯಂತ ಕಡಿಮೆ ಇದ್ದು ಋಗ್ವೇದ ಮಂತ್ರಗಳೇ ಹೆಚ್ಚಾಗಿರುತ್ತವೆ . ಆದ್ದರಿಂದಲೇ ಋಗ್ವೇದದ ಮತ್ತೊಂದು ಗಾನದ ಮುಖ "ಸಾಮ " ವೆಂಬ ಪ್ರತಿಪಾದನೆ ಛಾಂದೋಗ್ಯದಲ್ಲಿ ದೊರಕುತ್ತದೆ . ( ಋಚ್ಯ ಭೂಡಂ ಸಾಮ 1.೬.1).
 • ಮೂಲತಹ ವೇದಗಳು ಮೂರೇ ತರ ,ಅದಕ್ಕೆಂದೇ ಅದಕ್ಕೆ "ತ್ರಯೀ "ಎಂದು ಹೆಸರು ,ಇಲ್ಲಿ ತ್ರಯೀ ಮೂರು ಎಂದರ್ಥ .ಯಾವುದು ಮೂರು ಎಂದರೆ . ಪದ್ಯರೂಪವಾದ ವೇದ , ಗದ್ಯರೂಪವಾದ ವೇದ ಮತ್ತು ಗಾನ ರೂಪವಾದ ವೇದ .
 • ಇದರಂತೆ ಅಥರ್ವೆದಕ್ಕೂ ಋಕ್ ,ಯಜುರ್ಮಂತ್ರ ಗಳಿಂದ ಹೊರತು ಪಡಿಸಿದ ಗ್ರಾಂಥಿಕ ಹಿನ್ನಲೆ ಇರುವದಿಲ್ಲ . ಋಗ್ವೇದ ಹಾಗೂ ಯಜುರ್ವೇದ ದಲ್ಲಿ ಇರದ ,ಇಂದು ದೊರಕುವ ಅಥರ್ವೇದದ ಮಂತ್ರಗಳು ಕೂಡಾ ಉಪಲಬ್ಧವಿಲ್ಲದ ಋಕ್ ಯಜು :ಶಾಕೆಗೆ ಸಂಬಂದಿಸಿದ್ದಾಗಿವೆ . ಆಧ್ಯಾತ್ಮಿಕ ಜೀವನದ ಜೊತೆಗೆ ಐಹಿಕವಾದ ಬಾಳುವೆಯನ್ನು ಸುಖಮಯವಾಗಿಸಲು ರೂಪುತಳೆದ ಋಕ್ ಹಾಗೂ ಯಜುಸ್ಸಿನ ಮಂತ್ರಗಳ ಕ್ರಮಬದ್ಧವಾದ ಸಂಕಲನವೇ "ಅಥರ್ವೇದ "ವಾಗಿರುತ್ತದೆ .
 • ಹೀಗೆ ವೇದಗಳು ಒಂದೋ ಪದ್ಯಮಯ ಒಂದೋ ಗದ್ಯಮಯ ಅಥವಾ ಇವುಗಳಿಗೆ ಗಾನ ಸೇರಿದಾಗ ಸಾಮವೆನಿಸುವದು.
 • ಕೃತಯುಗದಲ್ಲಿ ಆರ್ಷ ವಾಙ್ಮಯ ಏಕಮುಖವಾಗಿತ್ತು ,ಪರಮ ಪುರುಷನಾದ ಪರಮಾತ್ಮನ ಬೋಧನೆಯೇ ಅದರ ಮುಖ್ಯ ಗುರಿಯಾಗಿತ್ತು .ಅಂದಿನ ಸಾಧಕರಿಗೆಲ್ಲ ಸಮಗ್ರ ವೇದದಲ್ಲಿ ಪರಮಾತ್ಮನನ್ನು ಗುರುತಿಸುವ ಜಾಣ್ಮೆ ಇತ್ತು . ಅಂದು ಋಕ್ ,ಯಜುಸ್ ,ಸಾಮ ವೆಂಬ ಪ್ರಭೇದ ವಿರಲಿಲ್ಲ . ಎಲ್ಲ ಅವಿಭಕ್ತವಾದ ಆರ್ಷ ವಾಙ್ಮಯ ವನ್ನು ಅಂದು "ಮೂಲವೇದ " ಎಂದು ಕರೆಯುತ್ತಿದ್ದರು .
 • ಯುಗಧರ್ಮಕ್ಕೆ ಅನುಸಾರವಾಗಿ ಉಂಟಾಗುವ ಬುದ್ಧಿ ಶೈಥಿಲ್ಯವನ್ನು ಗಮನಿಸಿದ ಬಾದರಾಯಣರು ವೇದ ವಿಭಾಗ ಮಾಡಿದರು .

....................................................

ವಸ್ತುತಃ ಮೂಲಭೂತವಾಗಿ ವೇದ ವಾಙ್ಮಯ ಎರಡೇ ತರ: ಗದ್ಯ ಮತ್ತು ಪದ್ಯ .ಗದ್ಯಕ್ಕೋ ಪದ್ಯಕ್ಕೋ ಗಾನ ಸೇರಿದರೆ ಅದು ಸಾಮವಾಗುತ್ತದೆ .ಈ ಮೂರು ಬಿಟ್ಟರೆ ವಾಙ್ಮಯ ದಲ್ಲಿ ಇನ್ನೊಂದು ಬಗೆ ಇಲ್ಲ .

ಈ ಮೂರು ಮುಖವನ್ನೇ ಓಂಕಾರದ ಮೂರು ಅಕ್ಷರ ಹೇಳುತ್ತವೆ : ಅ +ಉ +ಮ್ .

ಮೊದಲು ಬೀಜರೂಪವಾದ ಓಂಕಾರ ವಿತ್ತು .ಒಂಕಾರವೇ ಚಿಗುರೊಡೆದು ಮೂರು ವ್ಯಾಹೃತಿ ಗಳಾದವು : ಭೂ , ಭುವ :, ಸುವ :
ವ್ಯಾಹೃತಿ ಯ ಮೂರು ಪದಗಳು ಟಿಸಿಲೊಡೆದು ಗಾಯತ್ರಿಯ ಮೂರು ಪಾದ ಗಳಾದವು .ಟಿಸಿಲು ಟೊಂಗೆ ಯಾಗಿ ಬೆಳೆದು ಪುರುಷ ಸೂಕ್ತದ ಮೂರು ವರ್ಗಗಳಾದವು .

ಇವೆ ವಿಸ್ತಾರ ವಾಗಿ ಬೆಳೆದು ಹೆಮ್ಮರವಾಗಿ ಮೂರು ವೇದಗಳಾದವು . ಇದು ಪ್ರಾಚೀನರು ವೇದ ಕಲ್ಪವೃಕ್ಷದ ಬೆಳೆವನಿಗೆಯನ್ನು ಕಂಡ ಬಗೆ .

ಬೆಳೆದು ನಿಂತ ಮರದ ಎಲ್ಲ ಸತ್ವ ಸಾರವೂ ಸೂಕ್ಷ್ಮ ರೂಪದಲ್ಲಿ ಬೀಜದಲ್ಲಿದೆ .

ಋಗ್ವೇದ ಸಾರವೇ "ಅ "
ಯಜುರ್ವೇದದ ಸಾರವೇ "ಉ "
ಸಾಮವೇದದ ಸಾರವೇ "ಮ"

ಮೂರು ಸಾರಾಕ್ಷರಗಳು ಸೇರಿ ಓಂಕಾರ ವಾಯಿತು ,ಮೂರು ಅಕ್ಷರಗಳು ಬಿತ್ತರಗೊಂದು ವೇದಗಳು ಮೂರಾದವು .

ಈಗೊಂದು ವಿವರಣೆ .....

ಋಗ್ವೇದ ಅಕ್ಷರ "ಅ" ಕಾರವೇ ಏಕಾಗಬೇಕು ?

" ಉ " ಕಾರವೇ ಯಜುರ್ವೇದದ ಅಕ್ಷರ ಏಕಾಗಬೇಕು ?

"ಮ " ಮಕಾರವೇ ಏಕೆ ಸಾಮವೇದದ ಅಕ್ಷರ ?

ಎಲ್ಲ ಅಕ್ಷರಗಳು ಎಲ್ಲ ವೇದಗಳಲ್ಲಿ ಬರುತ್ತವೆ . ಈ ಮೂರು ಅಕ್ಷರಗಳಲ್ಲಿ ಏನಂಥ ವಿಶೇಷ ?

ಈ ಮೂರು ಅಕ್ಷರಗಳ ಆಯ್ಕೆಗೆ ಅಧಾರಭೂತವಾದ ಸುಳಿವು ಮೂಲತಹ : ವೇದಗಳಲ್ಲೇ ಸಿಗುತ್ತವೆ .

ಋಗ್ವೇದದ ಅಕ್ಷರ "ಅ " ಕಾರ ಅದಕ್ಕೆಂದೇ ಋಕ್ ಸಂಹಿತೆ ಅಕಾರದಿಂದಲೇ ಮೊದಲಾಗುತ್ತದೆ :

ಅಗ್ನಿ ಮೀ ಳೇ ಪುರೋಹಿತಮ್........(1.1.1)
ಅಕಾರದಿಂದ ಪ್ರಾರಂಭವಾಗಿ ಇಕಾರದಲ್ಲಿ ಕೊನೆಗೊಳ್ಳುತ್ತದೆ :
...

...........ಯಥಾ ವ : ಸುಸಹಾಸತಿ (೧೦.೧೯1.೪)


" ಅ " ಕಾರದಿಂದ "ಇ "ಕಾರದ ತನಕ ಋಗ್ವೇದ ದ ಪಯಣ .ಇದು ಋಕ್ ಸಂಹಿತೆಯ "ಅಥ " ಮತ್ತು "ಇತಿ ".

ಋಕ್ ಸಂಹಿತೆಯ ಕೊನೆಯ ಅಕ್ಷರ "ಇ " ಕಾರದಿಂದಲೇ ಯಜು :ಸಂಹಿತೆ ಪ್ರಾರಂಭ ವಾಗುತ್ತದೆ :

ಇಷೇ ತ್ವೋರ್ಜೆ ತ್ವಾ .................(1.1.1)
"ಇ "ಕಾರದಿಂದ ಪ್ರಾರಂಭವಾಗಿ "ಉ " ಕಾರದಲ್ಲಿ ಕೊನೆಗೊಳ್ಳುತ್ತದೆ .

........ಸಮುದ್ರೋ ಬಂಧು : (೭.೫.೨೫ )

"ಅ" ಕಾರದಿಂದ "ಇ " ತನಕ ಋಗ್ವೇದ "ಇ " ಕಾರದಿಂದ "ಉ " ಕಾರದ ತನಕ ಯಜುರ್ವೇದ.
ಅನಂತರ ಅಕ್ಷರ "ಮ "ಕಾರ .ಆದರೆ ಸಾಮ ಸಂಹಿತೆ ಮಕಾರದಿಂದ ಪ್ರಾರಂಭ ವಾಗುವದೂ ಇಲ್ಲ ಮುಗಿಯುವದೂ ಇಲ್ಲ .

ಸಾಮ ವೇದ ಪ್ರಾರಂಭವಾಗುವದು "ಅ" ಕಾರದಿಂದಲೇ
ಸಾಮವೇದ ಮುಗಿಯುವುದು "ಉ" ಕಾರದಿಂದಲೇ .
ಅನಂತರದ ಅಕ್ಷರ "ಮ " ಆದರೆ ಸಾಮ ಸಂಹಿತೆ " ಮ "ಕಾರದಿಂದ ಪ್ರಾರಂಭ ವಾಗುವದೂ ಇಲ್ಲ ಮುಗಿಯುವದೂ ಇಲ್ಲ .

ಸಾಮ ವೇದ ಪ್ರಾರಂಭವಾಗುವದು "ಅ" ಕಾರದಿಂದಲೇ

ಅಗ್ನ ಆ ಯಾಹಿ ..................(1)


ಸಾಮವೇದ ಮುಗಿಯುವುದು "ಉ" ಕಾರದಿಂದಲೇ

..................ಬ್ರ್ಹಸ್ಪತಿರ್ದಧಾತು .(೧೮೭೫)

ಋಗ್ವೇದ ಮತ್ತು ಯಜುರ್ವೇದ ಮಂತ್ರಗಳೇ ಬರುವದರಿಂದ ಆದ್ಯಂತ ದಲ್ಲಿ "ಅ" ಕ್ಕರ "ಉ" ಕಾರ ಬರುವದು ಸಹಜ .

ಹಾಗಾದರೆ "ಮ " ಏಕೆ ಸಾಮವೇದ ಅಕ್ಷರ ?

"ಮ್ ss" ಎನ್ನುವದು ಸಂಗೀತದ ನಾದದ ಅನುಕೃತಿ .ಅದಕ್ಕೆಂದೇ ಅದು ಸಾಮವೇದ ಸಂಕೇತ .

ಅದರಿಂದ" ಅ " ಕಾರದಿಂದ "ಇ " ಕಾರದ ವರೆಗೆ ಋಗ್ವೇದ
"ಇ " ಕಾರದಿಂದ "ಉ " ಕಾರದ ವರೆಗೆ ಯಜುರ್ವೇದ .

ಈ "ಅ "ಕಾರ -"ಉ "ಕಾರ ಗಳಿಗೆ ಸಾಮ ಸೇರಿದಾಗ ಅರ್ಥಾತ ಗಾನ ಸೇರಿದಾಗ ಅದು ಸಾಮವೇದ ವಾಗುತ್ತದೆ .

(ಅಧಾರ : ಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರ ಪ್ರವಚನ ಮತ್ತು ಬರಹಗಳು )

ಮುಂದುವರೆಯುವದು .......

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಲೇಖನ ಚೆನ್ನಾಗಿದೆ. ಬನ್ನಂಜೆಯವರ ವಿವರಣೆ ವೇದವಿಚಾರವನ್ನು ಸರಳಗೊಳಿಸಿದೆ. ವೇದಗಳು ನಿತ್ಯಸತ್ಯದ ಆಕರಗಳು ಎಂಬಲ್ಲಿ ಎರಡುಮಾತಿಲ್ಲ. ಆದರೆ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಒಬ್ಬೊಬ್ಬರದು ಒಂದೊಂದು ದಾರಿ. ಇದು ಸಹಜವೇ, ಯಾಕೆಂದರೆ ಪರಮಾತ್ಮನ ಸ್ವರೂಪವನ್ನು ಸೀಮಿತ ಇಂದ್ರಿಯ ಶಕ್ತಿಯಿರುವ ನಾವು ಮಾತಿನಿಂದಾಗಲೀ ಬರಹದಿಂದಾಗಲೀ ಸಂಪೂರ್ಣವಾಗಿ ತಿಳಿಯಲಾಗದು. (ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ......) >>ವೇದಗಳು ಸೃಷ್ಟಿಯ ಆದಿಯಲ್ಲಿ ಪರಮಾತ್ಮನಿಂದ ಉದ್ಭಾಸಿತ ವಾದ ಯಾವ ವ್ಯಕ್ತಿಗತ ಇತಿಹಾಸಗಳಿಗೂ ಎಡೆಯಿಲ್ಲದ ಶಾಸ್ತ್ರಗಳು ಎಂಬ ಭಾವನೆಗೆಯೇ ಕುಠಾರಾಘಾತ ವಾಗಿದೆ .>> ಇದು ನಂಬಿಕೆ, ಆದರೆ ವೇದಗಳಲ್ಲಿ ಅನೇಕ ಋಷಿಮುನಿಗಳ ರಾಜರ್ಷಿಗಳ ಪ್ರಸ್ತಾಪವಾಗಿದೆ. ಪುರೂರವ ಊರ್ವಶೀ ಸಂವಾದವಿದೆ, ಆದರೆ ವೇದಗಳಿಗೆ ಅನಂತಾರ್ಥ ವೆಂದಿರುವುದರಿಂದ ದಯಾನಂದಸರಸ್ವತಿ ಮೊದಲಾದವರು ಈ ಮಂತ್ರಗಳಿಗೂ ಕೂಡ ಅನುಭಾವಿಕವಾದ ಅರ್ಥವನ್ನು ಬರೆದಿದ್ದಾರೆ. >>ಹೀಗಾಗಿ ಮ್ಯಾಕ್ಸ ಮುಲ್ಲರ್ ,ಗ್ರಿಫಿತ್ ,ವುಲ್ಹರ್ ಮೊದಲಾದ ಪಾಶ್ಚ್ಯಾತ್ಯ ವಿದ್ವಾಂಸರು (?) ಅವರ ಮಾನಸಿಕ ಪುತ್ರರಾದ ಭಾರತೀಯ ವಿದ್ವಾಂಸರು (?) ತಮ್ಮ ಅರೆಬೆಂದ ಜ್ಞಾನವನ್ನ ವೇದಗಳಲ್ಲಿ ತುರುಕಿ ,ತಮ್ಮ ಮೂಗಿನ ನೇರಕ್ಕೆ ವೇದಗಳನ್ನು ಎಳೆದು .ತಮ್ಮ ತಮ್ಮ ಜ್ಞಾನದ ಮಟ್ಟಕ್ಕೆ ವೇದಗಳನ್ನು ಇಳಿಸಿ ,ವೇದಗಳು ಕಾಡಾಡಿಗಳ ಹಾಡುಗಳು ,ಅದೊಂದು ಜನಪದ ಸಾಹಿತ್ಯ ,ಗೊಲ್ಲರ ಗೀತೆಗಳು ಎಂದು ಬೊಗಳೆ ಬಿಟ್ಟು ತಮ್ಮ ಅಜ್ಞಾನ ಪ್ರದರ್ಶನ ಮಾಡಿ ,ಏನೋ ಸಾಧಿಸಿದವರಂತೆ ಬೀಗುವದರಿಂದ ನಿಜವಾದ ವೇದಕ್ಕಾಗಲಿ ಅದರ ಅರ್ಥಕ್ಕಾಗಲಿ ಅದರ ಮಹತ್ವಕ್ಕಾಗಲಿ ಕುಂದು ಬರದು.>> .................................................................>> ಕೇವಲ ಪಾಶ್ಚ್ಯಾತ್ಯ ವಿದ್ವಾಂಸರು ಮಾತ್ರವಲ್ಲ ಭಾರತೀಯ ವಿದ್ವಾಂಸರು ಕೂಡಾ ತಮ್ಮ ಮೂಗಿನ ನೇರಕ್ಕೆ ಅರ್ಥವಿಸಿದ್ದು ಇದೆ.(ಮಹೀಧರರ ಅಶ್ಲೀಲ ಭಾಷ್ಯ)ಸಾಯಣಾಚಾರ್ಯರು ಅನೇಕ ಪೌರಾಣಿಕ ಕತೆಗಳನ್ನು ವೇದಗಳಿಗೆ ಸಂಬಂಧಿಸಿ ತಮ್ಮ ಭಾಷ್ಯದಲ್ಲಿ ನೀಡಿದ್ದಾರೆ. ನಾನು ಈ ಮುಂಚೆ ವೇದಗಳು ಜನಪದ ಸಾಹಿತ್ಯವೇ ಎನ್ನುವ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿರಲಿಲ್ಲ. ಆದರೆ ಡಾ.ರಾ. ಗಣೇಶ ಮತ್ತು ಡಿ.ವಿ.ಜಿ. ಮುಂತಾದವರ ಅಭಿಪ್ರಾಯವು ವೇದಗಳು ಜನಪದ ಸಾಹಿತ್ಯ ಎಂದಾಗಿದೆ. ಸಮಾಜದ ವಿವಿಧ ಸ್ತರೀಯ ಜನರ (ಸತ್ಯದ ಕುರಿತಾದ) ಉದಾತ್ತ ಅಭಿವ್ಯಕ್ತಿಯೇ ವೇದ. ಆದ್ದರಿಂದ ವೇದವನ್ನು ಜನಪದಸಾಹಿತ್ಯ ಎಂದರೆ ತಪ್ಪಿಲ್ಲ ಎನ್ನುವುದು ಅವರ ಅಭಿಮತ. ಕೇವಲಕಾಡಿನ ಋಷಿಮುನಿಗಳು ಮಾತ್ರವಲ್ಲದೇ ರಾಜರ್ಷಿಗಳು ಕೂಡ ಮಂತ್ರ ದೃಷ್ಟಾರರಾಗಿದ್ದಾರೆ , ಆದ್ದರಿಂದ ವೇದ ಕಾಡಾಡಿಗಳ ಗೊಲ್ಲರ ಸಾಹಿತ್ಯ ಎನ್ನುವುದರಲ್ಲಿ ಅರ್ಥವಿಲ್ಲ.

>>ಕೃತಯುಗದಲ್ಲಿ ಆರ್ಷ ವಾಙ್ಮಯ ಏಕಮುಖವಾಗಿತ್ತು ಪ್ರಭಾಕರ್ ಅವರೆ, ಈ ಮಾತಿನ ಬಗ್ಗೆ ಸ್ವಲ್ಪ ವಿವರ ಕೊಡುವಿರಾ? ಅಂದರೆ, ಈ ಕೃತಯುಗದ ವಿಷಯ ವೇದಗಳಲ್ಲಿ ಎಲ್ಲಾದರೂ ಹೇಳಿದೆಯೇ? ಅಥವಾ ಇದು ಇನ್ಯಾವುದಾದರೂ ಭಾಷ್ಯದಿಂದ ತೆಗೆದ ಮಾತೇ? ತಿಳಿಸಿ. ನನಗೆ ಗೊತ್ತಿರುವ ಹಾಗೆ ಕೃತ-ತ್ರೇತಾ ಮೊದಲಾದ ಯುಗಗಳ ಕಲ್ಪನೆ ಬಂದದ್ದು ನಂತರ. ವೇದಾಂಗ ಜ್ಯೋತಿಷದಲ್ಲಿ ಹೇಳಿರುವುದು ಕೂಡ ಐದುವರ್ಷಗಳಿಗೊಮ್ಮೆ ಮರುಕಳಿಸುವ ಯುಗಗಳನ್ನು ಮಾತ್ರ. ಇದು ಬಹಳ ಜನಕ್ಕೆ ಆಶ್ಚರ್ಯ ಅನಿಸಬಹುದು. ಆದರೆ ಯುಗ ಅಂದರೆ ಐದು ವರ್ಷಗಳ ಅವಧಿ ಅಂತ ಇತ್ತು. -ಹಂಸಾನಂದಿ

ನಿಮ್ಮ ಮಾತು ನಿಜ ವೇದದಲ್ಲಿ ಕೃತಯುಗದ ಮಾತು ಬರೋಲ್ಲ . ಅಲ್ಲಿ ಯುಗದ ಕಲ್ಪನೆ ಸಿಗೋಲ್ಲ . ಋಗ್ವೇದದಲ್ಲಿ ಯುಗ ಅನ್ನೋ ಪದ ಮೂರನೆಯ ಮಂಡಲದ ೨೬ ಸೂಕ್ತದ ೩ ನೆಯ ಮಂತ್ರದಲ್ಲಿ ಬಳೆಕೆಯಾಗಿದೆ . ಅಲ್ಲಿ ಯುಗ ಅಂದರೆ ಕ್ಷಣ ಅಥವಾ ದಿನ ಅಥವಾ ಕಾಲ ಅನ್ನುವ ಅರ್ಥದಲ್ಲಿ ಬಳಸಬಹುದು . ನೀವು ಹೇಳಿರುವ ಹಾಗೆ ವೇದಾಂಗ ಜ್ಯೌತಿಶದಲ್ಲಿ ಯುಗ ಅಂದರೆ ಐದು ದಿನ ಎಂಬುದು ಸತ್ಯ . ಒಂದೇ ಪದಕ್ಕೆ ಅನೇಕ ಅರ್ಥಗಳಿರುವದು ವೈದಿಕ ಭಾಷೆಯ ವೈಶಿಷ್ಟ್ಯ . ಇಲ್ಲಿ ನಾನು ಯುಗ ಅಂದರೆ ಪುರಾಣದ ಅರ್ಥದಲ್ಲಿ ಬಳಸಿದ್ದು . ಆದರೆ ನಾನು "ಕೃತಯುಗದಲ್ಲಿ ಆರ್ಷ ವಾಙ್ಮಯ ಏಕಮುಖವಾಗಿತ್ತು ಹೇಳಿದೆ ಹೊರತು ವೇದದಲ್ಲಿ ಕೃತಯುಗ ವೆಂದಲ್ಲ ". ಪ್ರತಿಕ್ರಿಯೆಗೆ ಧನ್ಯವಾದ

ಪ್ರಭಾಕರ್ ಸರ್, ವೇದಗಳ ಕುರಿತು ಪ್ರಾಥಮಿಕ ತಿಳಿವಳಿಕೆ ನೀಡುವ ಅದ್ಭುತ ಲೇಖನ ಇದು. ಧನ್ಯವಾದಗಳು. ನಾನು ಈ ಹಿಂದೆ ಬರೆದ ಲೇಖನವು ವೇದಗಳಲ್ಲಿ ಏನಿದೆ ಎಂಬುದರ ಸ್ಥೂಲ ಪರಿಚಯ ನೀಡುವ ಪ್ರಯತ್ನದ ಒಂದು ತುಣುಕಾಗಿತ್ತು. ಆದರ ತಾವು ವೇದಗಳು ಎಂದರೇನು ಎಂಬುದರ ವಾಚ್ಯಾರ್ಥ ವಿವರಣೆ ನೀಡಿದ್ದೀರಿ. ಕೃತಜ್ಞ. ಆದರೆ ಇಲ್ಲಿ ನನಗೆ ಕೆಲವು ಸಂದೇಹಗಳಿವೆ; ಸಾಧ್ಯವಾದರೆ ದಯವಿಟ್ಟು ಪರಿಹರಿಸಿ. 1) \\ಇದರಂತೆ ಅಥರ್ವೆದಕ್ಕೂ ಋಕ್ ,ಯಜುರ್ಮಂತ್ರ ಗಳಿಂದ ಹೊರತು ಪಡಿಸಿದ ಗ್ರಾಂಥಿಕ ಹಿನ್ನಲೆ ಇರುವದಿಲ್ಲ . ಋಗ್ವೇದ ಹಾಗೂ ಯಜುರ್ವೇದ ದಲ್ಲಿ ಇರದ ,ಇಂದು ದೊರಕುವ ಅಥರ್ವೇದದ ಮಂತ್ರಗಳು ಕೂಡಾ ಉಪಲಬ್ಧವಿಲ್ಲದ ಋಕ್ ಯಜು :ಶಾಕೆಗೆ ಸಂಬಂದಿಸಿದ್ದಾಗಿವೆ . ಆಧ್ಯಾತ್ಮಿಕ ಜೀವನದ ಜೊತೆಗೆ ಐಹಿಕವಾದ ಬಾಳುವೆಯನ್ನು ಸುಖಮಯವಾಗಿಸಲು ರೂಪುತಳೆದ ಋಕ್ ಹಾಗೂ ಯಜುಸ್ಸಿನ ಮಂತ್ರಗಳ ಕ್ರಮಬದ್ಧವಾದ ಸಂಕಲನವೇ "ಅಥರ್ವೇದ "ವಾಗಿರುತ್ತದೆ// ಈ ವಿವರಣೆ ನನಗೆ ಸ್ಪಷ್ಟವಾಗಲಿಲ್ಲ. ಗ್ರಾಂಥಿಕ ಎಂದರೆ ಗ್ರಂಥ ರೂಪ ಎಂದು ನಾನು ತಿಳಿದಿದ್ದೇನೆ. ಅಂದರೆ ಋಕ್-ಯಜುಸ್ ವೇದಗಳಿಗೆ ಗ್ರಾಂಥಿಕ ಹಿನ್ನಲೆ ಇತ್ತು- ಅಥರ್ವಕ್ಕೆ ಇರಲಿಲ್ಲ ಎಂದರೆ ಅದು ವಿರೋಧಾಭಾಸ ಆಗುವುದಿಲ್ಲವೆ? ಇಂದು ದೊರಕುವ ಅಥರ್ವ.... ಎಂದರೆ ಅಥರ್ವ ವೇದ ಪೌರುಷೇಯವೇ (ಮಾನವ ರಚಿಸಿಕೊಂಡಿದ್ದೇ)? ಹಾಗೆ ರಚಿಸಿ ನಂತರ ಅವನ್ನು ಋಕ್-ಯಜುಸ್ ಶಾಖೆಗಳು ಎಂದು ಹೇಳಿದರೆ? .....ಕ್ರಮಬದ್ಧವಾದ ಸಂಕಲನ ಎಂದ ಮೇಲೆ ಅಥರ್ವವೊಂದನ್ನು ಅಧ್ಯಯನ ಮಾಡಿಬಿಟ್ಟರೆ ಸಾಕು; ಸುಲಭವಾಗಿ ಋಕ್ ಹಾಗೂ ಯಜುಸ್ ಗಳ ಅಧ್ಯಯನ ಮಾಡಿದಂತೆಯೇ ಸರಿ ಎಂದಂತಾಗುವುದಿಲ್ಲವೆ?-ಇದು ಏಕೋ ಗೊಂದಲ ಉಂಟುಮಾಡುತ್ತಿದೆ! (ಅಥರ್ವ ವೇದದ ಬಗ್ಗೆಯೇ ಪ್ರಚಲಿತವಾಗಿ ಅನೇಕ ತಪ್ಪು ಕಲ್ಪನೆಗಳಿವೆ- ಅದು ಅಜ್ಞಾನದಿಂದ ಆದದ್ದು. ಅದು ಬೇರೆ ಮಾತು ಬಿಡಿ) 2) \\ಯುಗಧರ್ಮಕ್ಕೆ ಅನುಸಾರವಾಗಿ ಉಂಟಾಗುವ ಬುದ್ಧಿ ಶೈಥಿಲ್ಯವನ್ನು ಗಮನಿಸಿದ ಬಾದರಾಯಣರು ವೇದ ವಿಭಾಗ ಮಾಡಿದರು.// ಇದು ನಾನು ಕೇಳಿ ತಿಳಿದಂತೆ ವೇದಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಕರಗತ ಮಾಡಿಕೊಂಡಿದ್ದರಿಂದ ಬಾದರಾಯಣರಿಗೆ ವೇದ ವ್ಯಾಸ ಎಂದು ಹೆಸರಾಯಿತೇ ವಿನಹ, ಎಲ್ಲರೂ ತಿಳಿದಂತೆ ಅವರು ವೇದಗಳನ್ನು ವಿಭಾಗಿಸಲಿಲ್ಲ; ವೇದಗಳು ಮೂಲದಲ್ಲಿ ವಿಭಾಗಿಸಿಕೊಂಡೇ ಇದ್ದವು ಎಂಬುದಕ್ಕೆ ಋಗ್ವೇದದಲ್ಲೇ ಮಂತ್ರವೊಂದಿದೆಯಂತಲ್ಲ? ಹೌದೆ? 3) ಬೀಜಾಕ್ಷರಗಳ ವಿವರಣೆಯಂತೂ ಅತ್ಯದ್ಭುತವಾಗಿದೆ. ಆದರೆ ಸಾಮವೇದಕ್ಕೆ ನೀಡಿರುವ ವಿವರಣೆ ಮತ್ತೆ ಗೊಂದಲ ಉಂಟು ಮಾಡುತ್ತಿದೆ. ಋಕ್, ಯಜುಸ್ ಮಂತ್ರಗಳಿಗೆ ಕೊನೆಯಲ್ಲಿ `ಮ್' ಸೇರಿಸಿಬಿಟ್ಟರೆ ಅದು ಸಾಮ ವೇದವಾಗುತ್ತದೆಯೇ? ಉದಾ: ಶೃತಿಬದ್ಧವಾಗಿ ನಿರ್ದಿಷ್ಟ ಏರಿಳಿತಗಳೊಂದಿಗೆ....ಸುಸಹಾಸತಿಮ್, ..... ಬಂಧುಮ್, ...ಧಾತುಮ್ ಎಂದರೆ ಅದು ಸಾಮವೇದವಾಗುತ್ತದೆ; ಇಲ್ಲವಾದರೆ ಇಲ್ಲ ಎಂಬರ್ಥವೆ? ನೀವು ಗಮನಿಸಿರಬಹುದು. ಉತ್ತರ ಭಾರತದಲ್ಲಿ ಹೇಳುವ ವೇದ ಮಂತ್ರಗಳ ಪರಿಯನ್ನು ಟಿ.ವಿ.ಯಲ್ಲಿ ಆಗಾಗ ಕೇಳುತ್ತಿರುತ್ತೇವೆ. (ಉದಾ: ರಾಜೀವ್ ಗಾಂಧಿ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಮೂಡಿಬಂದ ಲೈವ್ ಟೆಲಿಕಾಸ್ಟ್ ನಲ್ಲಿ ಪುರೋಹಿತ ಹೇಳುತ್ತಿದ್ದ ಮಂತ್ರಗಳ ರಾಗವೇ ಒಂದು ರೀತಿ ಹಿಂದೂಸ್ಥಾನಿ ರಾಗದಂತೆ ಭಿನ್ನವಾಗಿತ್ತು) ಆದರೆ ದಕ್ಷಿಣ ಭಾರತದ ವೇದ ಮಂತ್ರಗಳ ರಾಗವೇ ಬೇರೆ! ಇದು ಹೇಗೆ? ವೇದಗಳನ್ನು ಯಾವ ರಾಗಕ್ಕೆ ಬೇಕಾದರೂ ಅಳವಡಿಸಬಹುದೆಂದೆ?

1) ಋಗ್ವೇದ ದಲ್ಲಿ ಇರುವ ಮಂತ್ರಗಳೇ ಇನ್ನಿತರ ವೇದಗಳಲ್ಲಿ ಹೆಚ್ಚಾಗಿ ಬರುತ್ತವೆ . ಹೀಗಾಗಿ ಅಥರ್ವಕ್ಕೆ ಋಗ್ವೇದ ಮತ್ತು ಯಜುರ್ವೇದ ಮಂತ್ರಗಳನ್ನು ಹೊರತು ಪಡಿಸಿದ ಗ್ರಾಂಥಿಕ ಹಿನ್ನಲೆ ಇಲ್ಲ ಅಂತ ಬರೆದಿದ್ದು .ಅವೇ ಮಂತ್ರಗಳೇ ಅಲ್ಲಿ ಬರುತ್ತವೆ ಅಂದಮೇಲೆ ಅದನ್ನ ಮಾನವ ರಚಿಸಿದ ಎನ್ನಲು ಸಾಧ್ಯವೇ ಇಲ್ಲ . ಗ್ರಾಂಥಿಕ ರೂಪ ಅಂದರೆ ಅದೇ ಮಂತ್ರಗಳೇ ಹೊರತು ಬೇರೇ ಮಂತ್ರಗಳಿಲ್ಲ ಅನ್ನುವ ಕಾರಣಕ್ಕೆ ಪ್ರತ್ಯೇಕ ಗ್ರಾಂಥಿಕ ಹಿನ್ನಲೆ ಇಲ್ಲ ಅಂದಿದ್ದು ಅಷ್ಟೇ . ೨) ಇಲ್ಲ ವೇದವ್ಯಾಸ ವೇದ ವಿಭಾಗ ಮಾಡಿದರು . ಮೊದಲು ಒಂದೇ ವೇದ ಇದ್ದದ್ದು ಅದನ್ನು ಯಜ್ಞಕ್ಕೆ ಅನುಕೂಲ ವಾಗಲೆಂದು ನಾಲ್ಕು ಬೇರೇ ಬೇರೇ ವಿಭಾಗ ಮಾಡಿದರು . ಒಂದು ಯಜ್ಞ ಪೂರೈಸಲು ನಾಲ್ಕು ಜನ ಬೇಕಾಗುತ್ತಾರೆ ಪ್ರತಿಯೊಬ್ಬರ ಕಾರ್ಯಕ್ಕೆ ಅನುಕೂಲವಾಗಲೆಂಬ ದೃಷ್ಟಿಯಿಂದ ನಾಲ್ಕು ವಿಭಾಗ ಮಾಡಿ ನಾಲ್ಕು ಜನ ಶಿಷ್ಯರಿಗೆ ಬೋಧನೆ ಮಾಡಿದರು . ೩) "ಮ್" ಎನ್ನುವದು ನಾದದ ಸಂಕೇತ ಹೊರತು ಋಕ್, ಯಜುಸ್ ಮಂತ್ರಗಳಿಗೆ ಕೊನೆಯಲ್ಲಿ `ಮ್' ಸೇರಿಸಿಬಿಟ್ಟರೆ ಅದು ಸಾಮ ವೇದವಾಗುತ್ತದೆ ಅನ್ನುವದು ನನ್ನ ಅರ್ಥ ವಲ್ಲ . ಪ್ರತಿಕ್ರಿಯೆಗೆ ಧನ್ಯವಾದ