ಎಲ್ಲಿ ಹೋದರು ನನ್ನವರು ?

To prevent automated spam submissions leave this field empty.

ಎಲ್ಲಿ ಹೋದರು ನನ್ನವರು ?ನಮ್ಮದು ದೊಡ್ಡ ಕುಟುಂಬ. ಒಟ್ಟು ಸಂಸಾರ. ಹುಟ್ಟಿನಿಂದಲೂ ಒಟ್ಟಿಗೆ ಇದ್ದೇವೆ. ಆಟ, ಊಟ, ಏಳೋದೂ, ಬೀಳೋದೂ ಎಲ್ಲ ನಮ್ಮ ನಮ್ಮಲ್ಲೇ. ಬಹಳಷ್ಟು ಸಾರಿ ನಮ್ಮನ್ನು ಕಂಡು, ಅ ಸುಖ ಇಲ್ಲದವರು, ಕರುಬಿದ್ದೇ ಹೆಚ್ಚು.
 


ಕಾಲಕಾಲಕೆ ಹಿಗ್ಗುತ್ತಾ ಕುಗ್ಗುತ್ತಾ ನಮ್ಮ ಜೀವನವೂ ಸಾಗಿತ್ತು. ಪೋಷಕರ ಪಾಲನೆ ಪೋಷಣೆ ಚೆನ್ನಾಗಿಯೇ ಇದ್ದುದರಿಂದ ದಷ್ಟ ಪುಷ್ಟವಾಗೇ ಇದ್ದೆವು.
 


ಒಂದೇ ಸಮನೆ ಯಾರಿಗೂ ಸುಖ ಎಂಬುದು ಇರುವುದಿಲ್ಲ. ನಮ್ಮೊಳಗೂ ಕೆಲವರು ಸೇರಿ ನಮ್ಮನ್ನು ಪೀಡಿಸಿದ್ದು ಉಂಟು. ಆದರೆ ನಮ್ಮ ಮನೆ ಹಿರಿಯರು ಕಟ್ಟುನಿಟ್ಟಾಗಿ ಇದ್ದುದರಿಂದ ಹೊರಗಿನವರ ಆಟವೇನೂ ಸಾಗುತ್ತಿರಲಿಲ್ಲ ಬಿಡಿ.


ಯಾವುದೇ ಒಂದು ಸಂಸಾರ ಒಟ್ಟಾಗಿ ನಿಲ್ಲಬೇಕಾದಲ್ಲಿ ಯಜಮಾನನು ದಂಡನಾಯಕನಂತೆ ಜವಾಬ್ದಾರಿ ಹೊರಬೇಕು. ’ದಂಡ’ಕ್ಕೆ ನಾಯಕನಾಗಬಾರದು !
 


ಒಟ್ಟಿಗೆ ಹುಟ್ಟಿ ಬೆಳೆದ ಮಾತ್ರಕ್ಕೆ ಎಲ್ಲರ ಗುಣವೂ ಒಂದೇ ಆಗಿರುತ್ತೇನು? ಒಬ್ಬೊಬ್ಬರದು ಒಂದೊಂದು ಗುಣ. ನಮ್ಮಲ್ಲಿ ಆ ತಾರತಮ್ಯ ಬರಬಾರದು, ಕೊನೆವರೆಗೂ ಒಟ್ಟಾಗಿ ನಿಲ್ಲಬೇಕು ಎಂದು ನಾವು ಎಣಿಸಿದ್ದರೂ ಅವನ ಎಣಿಕೆಯೇ ಬೇರೆ ಅಲ್ಲವೇ?
 


ಗುಣ ವ್ಯತ್ಯಾಸವಾದಂತೆ ತಮ್ಮ ಬಣ್ಣ ತೋರಿದರು. ಏನು ಮಾಡಲು ಸಾಧ್ಯ ? ರೆಕ್ಕೆ ಬಲಿತ ಮೇಲೆ ಹಕ್ಕಿ ದೂರಾಗುವುದು ಪ್ರಕೃತಿ ಧರ್ಮ ತಾನೇ? ನಮ್ಮಲ್ಲಿ ದೂರಾದವರಿಗೆ ಬೇರೆಯೇ ಕಾರಣವಿತ್ತು. ದೂರಾದವರನ್ನು ಇಲ್ಲ ಎಂದು ತೋರಿಸಿಕೊಂಡು ಇನ್ನೊಬ್ಬರ ಮುಂದೆ ನಗೆಪಾಟಲಾಗುವುದು ಹೇಗೆ ಎಂದು ಮರೆಮಾಚಲು ಪ್ರಯತ್ನ ನೆಡೆಸುತ್ತಿದ್ದೆವು. ಹಾಗಾಗಿ ಉಳಿದ ನಾವುಗಳು ಸಾಧ್ಯವಾದಷ್ಟು ಒಟ್ಟಾಗಿ ನಿಂತೆವು. ಒಂದು ಮನೆಯ ಮರ್ಯಾದೆ ಪ್ರಶ್ನೆ ಇದು. ಈ ಮುನ್ನ, ಕಂಡವರೆಲ್ಲರ ಮುಂದೆ ನಾವೆಲ್ಲ ಒಂದು, ನಮ್ಮನ್ನು ಯಾರೂ ಬೇರೆ ಮಾಡಲು ಸಾಧ್ಯವಿಲ್ಲ ಎಂದೆಲ್ಲ ಕೊಚ್ಚಿಕೊಂಡಿದ್ದರ ಫಲವಿದು.
 


ಕಾಯಿಲೆ ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತದೆಯೇ? ಅದೇನೋ ಗೊತ್ತಿಲ್ಲ, ಗಾದೆ ಮಾತು ಬಂದಾಗ ಮರಕ್ಕೂ ಖಾಯಿಲೆ ಬರುತ್ತದೆ ಎಂಬ ವಿಚಾರ ಅಂದಿನವರಿಗೆ ಗೊತ್ತಿರಲಿಲ್ಲವೋ ಏನೋ? ಇರಲಿ ಬಿಡಿ. ವಿಚಾರದಲ್ಲಿ ವಿಷಯಾಂತರ ಬೇಡ ! ನಾನೀಗ ಹೇಳಹೊರಟಿದ್ದು ನಮ್ಮ ಕುಟುಂಬದಲ್ಲಿನ ಖಾಯಿಲೆ ಬಗ್ಗೆ.
 


ಅದೇನಾಯ್ತೋ ಏನೋ ಗೊತ್ತಿಲ್ಲ .. ಮೂವತ್ತು ವರ್ಷಕ್ಕೇ ನಮ್ಮ ಮನೆಯಲ್ಲಿ ಲತ್ತೆ ಬಡಿದು ಜನ ಕಡಿಮೆ ಆಗಲು ತೊಡಗಿದರು .. ಹುಟ್ಟಿದ ಮೇಲೆ ಸಾವು ಅನಿವಾರ್ಯ, ನಿಜ. ಆದರೆ ಇಷ್ಟು ಚಿಕ್ಕ ವಯಸ್ಸಿಗೇ? ನನ್ನ ಬುದ್ದಿಗೆ ನನಗೇ ನಗು ಬಂತು. ಅಲ್ಲಾ, ಸಾವಿಗೂ ವಯಸ್ಸು ಅಂಬೋದು ಇದೆಯೇ? ಹೋಗ್ಲಿ ಬಿಡಿ, ಬುದ್ದಿ ಇದ್ದೋರು ಅದರ ಬಗ್ಗೆ ಯೋಚನೆ ಮಾಡಲಿ, ನನಗೇನು? ಇರಲಿ ಸಾವು ನೋವಿಗೆ ಸ್ಪಂದಿಸಲೇ ಬೇಕಲ್ಲವೇ? ಒಬ್ಬೊಬ್ಬರೇ ತರಗೆಲೆಗಳಂತೆ ಉರುಳಿದರು.
 


ದಟ್ಟವಾಗಿದ್ದ ನಮ್ಮ ಸಂಸಾರಕ್ಕೆ ಯಾವ ಕಾಕ ದೃಷ್ಟಿ ಬಿತ್ತೋ ಏನೋ, ಈಗ ಬಹಳ ಶಿಥಿಲವಾಗಿದೆ. ಗಿಜಿ ಗಿಜಿ ಎಂದಿದ್ದ ಮನೆಯಿಂದು ಭಣಗುಟ್ಟುತ್ತಿದೆ. ಓಡಾಡಲೂ ಸ್ಥಳವಿಲ್ಲದ ನೆಲದಲ್ಲಿಂದು ಆಟೋ ಓಡಿಸುವಷ್ಟು ಜಾಗ ಇದೆ ಲೇವಡಿ ಮಾಡಿದರು ಕಂಡವರು.
 


ಉಳಿದುಕೊಂಡ ನಾವು ಕೆಲವರು ದೊಡ್ಡ ಮನೆಯಲ್ಲಿ ಎಲ್ಲೆಲ್ಲೂ ಹಂಚಿಹೋಗಿರುವುದರಿಂದ ಇದ್ದರೂ ತಿಳಿಯುತ್ತಿಲ್ಲ. ಎಷ್ಟೊ ಸಾರಿ ಒಂದೇ ಸಾಂಸಾರದವರಾದರೂ ಸಂಪರ್ಕವಿಲ್ಲದಿದ್ದರೆ ಅದು ಹಾಗೇ ಬಿಟ್ಟು ಹೋಗುತ್ತದೆ.
 


ಇವೆಲ್ಲ ನೆಡೆದು ಹಲವಾರು ದಿನಗಳೇ ಆದರೂ, ಕನ್ನಡಿಯಲ್ಲಿ ನನ್ನನ್ನೇ ನೋಡಿಕೊಳ್ಳುತ್ತಿರುವ ನಾನು, ಸದ್ಯಕ್ಕೆ ನೆತ್ತಿಯ ಮೇಲೆ ನಿಂತಿರುವ ಏಕ ಮಾತ್ರ "ಕೂದಲು" ನಾನು, ಯೋಚಿಸಿತ್ತಿರುವುದು ಇಷ್ಟೇ .. ಬಕ್ಕ ತಲೆಯ ನನ್ನೆಜಮಾನನೇ, ಎಂದುದುರುವೆನೋ ನಿನ್ನ ನುಣುಪಾದ ತಲೆಯಿಂದ   ನಾನು!

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಓದುತ್ತಾ ಹೋದಂತೆ ನಿಮ್ಮ ಕುಟುಂಬದ ಬಗ್ಗೆ ಅನುಕಂಪ ತೋರುತ್ತಿದ್ದಂತೆಯೇ ಇದು ಕೇಶ ಪುರಾಣ ಎಂದು ಅರಿವಾಗಿ ನಗು ಬಂತು. ಕೂದಲು ಹೋದರೇನಂತೆ, ಇದೆಯಲ್ಲಾ ಗಲ್ಫ್ ಗೇಟ್. ಅಲ್ಲಿಗೆ ಹೋದರೆ ಸುಂದರವಾಗಿ ಕೂದಲುಗಳನ್ನು ಬಿತ್ತಿ ಸುರಸುಂದರಾನ್ಗನನ್ನಾಗಿ ಮಾಡಿ ಕಳಿಸುತ್ತಾರೆ. ಕೊಲ್ಲಿಯಲ್ಲಿರುವವರಿಗೆ ಇದು ದೊಡ್ಡ ಸಮಸ್ಯೆಯೇ, ಈ ಕೂದಲು ಉದುರುವಿಕೆ. ಸುದೈವವಶಾತ್ ನನ್ನಲ್ಲಿರುವ ಬಲಿಷ್ಠ ಜೀನುಗಳು ಈ ಪೀಡೆ ಆವರಿಸಲು ಬಿಡಲಿಲ್ಲ. ಚೆನ್ನಾಗಿದೆ ಲೇಖನ bhalle ಅವರೇ.

ಅನಂತ ಧನ್ಯವಾದಗಳು ಅಬ್ದುಲ್ ಅವರೇ .... ಈ ಕೂದಲು ಉದುರಿಂಗ್ ಭಯಂಕರ ಪ್ರಾಬ್ಲೆಮ್ ಕಣ್ರೀ ... ಈ ಲೇಖನಕ್ಕೆ ಸ್ಪೂರ್ತಿ ಬಹಳ ಹಿಂದೆ ನಮ್ಮ ಮನೆಯ ಸಮೀಪದಲ್ಲಿದ್ದ ಒಂದು ಸಂಸಾರ. ತಂದೆ, ಮಗ - ಇವರಲ್ಲಿ ಸಿಕ್ಕಾಪಟ್ಟೆ ಸಾಮ್ಯತೆ ... ತಲೆಕೂದಲ ಸಮೇತ... ಹಿಂದಿನಿಂದ ತಲೆ ನೋಡಿದರೆ ಯಾರು ತಂದೆ ಯಾರು ಮಗ ಅಂತ ಹೇಳೋದೇ ಕಷ್ಟ ಅನ್ನೋ ಹಾಗಿದ್ದರು :-)

ಶ್ರೀನಾಥ್ , ಓದುತ್ತ ಇರಬೇಕಾದರೆ ಮೊದಲು ನಿಮ್ಮ ಕುಟುಂಬದ ಕಥೆ ಎಂದುಕೊಂಡು ಬೇಸರವಾಯಿತು ಕೊನೆಯ ಮಿಂಚಿನಂಥ ಪಂಚು ಚೆನ್ನಾಗಿತ್ತು . ನನ್ನ ಕೇಶ ಕುಟುಂಬದ ದಾರುಣ ಕಥೆಯನ್ನು ಯಾವತ್ತೋ ಬರೆದಿದ್ದೇನೆ. http://www.sampada.n... ವಂದನೆಗಳೊಂದಿಗೆ ವಿಕಟಕವಿ

ಈ ಲೇಖನಕ್ಕೆ ಸ್ಪೂರ್ತಿ ಬಹಳ ಹಿಂದೆ ನಮ್ಮ ಮನೆಯ ಸಮೀಪದಲ್ಲಿದ್ದ ಒಂದು ಸಂಸಾರ. ತಂದೆ, ಮಗ - ಇವರಲ್ಲಿ ಸಿಕ್ಕಾಪಟ್ಟೆ ಸಾಮ್ಯತೆ ... ತಲೆಕೂದಲ ಸಮೇತ... ಹಿಂದಿನಿಂದ ತಲೆ ನೋಡಿದರೆ ಯಾರು ತಂದೆ ಯಾರು ಮಗ ಅಂತ ಹೇಳೋದೇ ಕಷ್ಟ ಅನ್ನೋ ಹಾಗಿದ್ದರು :-)

ನಾನು ಪೂರ್ತಿ ಓದಿ, ಕಮೆಂಟ್ಸ್ ಓದಬೇಕಾದರೆ ಗೊತ್ತಾಗಿದ್ದು ಇದು ಕೂದಲಿನ ಸಂಸಾರದ ಕಥೆ ಅಂತಾ :-(. (ಕೊನೆ ೨ ವಾಕ್ಯ ಓದೇ ಇರಲಿಲ್ಲ!) ನಾನು ಈ ಸಲ ಶ್ರೀನಾಥ್ ಅವರು ಸೀರಿಯಸ್ ಕಥೆ ಬರೆದು ಬಿಟ್ಟಿದ್ದಾರೆ ಅಂತಾ ಕಣ್ಣೀರು ಒಂದು ಲೀಟರ್ ಸುರಿಸಿಬಿಟ್ಟೆ. ಛೇ! ನನ್ನ ಕಂಬನಿ ವ್ಯರ್ಥವಾಯಿತು.

ಇಂಚರ, ನಿಮಗೆ’ಕ್ಲೈಮಾಕ್ಸ್ ಮೊದಲೇ ಓದುವ’ ಅಭ್ಯಾಸ ಇತ್ತಲ್ವಾ? >>>(ಕೊನೆ ೨ ವಾಕ್ಯ ಓದೇ ಇರಲಿಲ್ಲ!) !!! -ಕೊನೆಯ ಎರಡು ವಾಕ್ಯವನ್ನು ಓದಿ ನಕ್ಕು, ನಂತರ ಉಳಿದುದನ್ನು ಓದಿ ಕಣ್ಣೀರು ಹಾಕಿರಬಹುದು. :( ಶ್ರೀನಾಥ್, ಕೊನೆಯವರೆಗೂ ಸಸ್ಪೆನ್ಸ್,ಟೆನ್ಷನ್..ಓದಿ ಮುಗಿದ ಮೇಲೆ ಪುನಃ ಒಮ್ಮೆ ಓದಿದೆ. ಬಹಳ ಚೆನ್ನಾಗಿದೆ. ಇದೇ ರೀತಿ ವಿಕಟಕವಿಗಳು ಬರೆದ ’ಕೇಶ’ ವನ ಕತೆ ಓದದವರಿದ್ದರೆ ಓದಿ. ನಕ್ಕು ನಕ್ಕು ಸುಸ್ತಾಗುವಿರಿ. -ಗಣೇಶ.

ಶುರುವಿನಲ್ಲಿ ಕುತೂಹಲ (ಕದನ) ವಿದ್ದರೆ ತಕ್ಷಣ ಕ್ಲೈಮಾಕ್ಸ್ ಓದಿಬಿಡಬಹುದು. ಶುರುವಿನಲ್ಲಿ ಸಾಯಿಕುಮಾರ್ ತರಹ ಗೋಳು ಶುರು ಮಾಡಿಕೊಂಡರು, ನಾನು ಅದಕ್ಕೆ ಕ್ಲೈಮಾಕ್ಸ್ ಇನ್ನೇನಿರುತ್ತೆ ಅಂತಾ ಓದಲೇ ಇಲ್ಲ :-( ಛೇ! ನನ್ನ ಇಮೇಜ್ ಹಾಳಾಗಿ ಹೋಯಿತು.

ನಿಮ್ಮ ಕಂಬನಿ ವ್ಯರ್ಥಗೊಳಿಸಿದ್ದಕ್ಕೆ ವಿಷಾದಿಸುತ್ತೇನೆ. ಮುಂದಿನ ಯಾವುದಾದರೂ ಬರಹದಲ್ಲಿ ಮತ್ತೆ ಅಳಿಸುತ್ತೇನೆ ಎಂದು ಹೇಳಲೂ ಬೇಸರವಾಗುತ್ತಿದೆ :-) ಬಹಳ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಸಿದ್ದೀರಿ ಇಂಚರ :-)

ಶ್ರೀನಾಥ್ ಅವರೇ... ನಿಮ್ಮ ಕೇಶ ಪುರಾಣ ಚೆನಾಗಿದೆ. ನಾನೂ ಏನೋ ನಿಜವಾಗಲೂ ಒಟ್ಟು ಕುಟುಂಬದ ಕಥೆ ಎಂದು ತುಂಬಾ ಸೀರಿಯಸ್ ಆಗಿ ಓದಿದೆ. ಕೊನೆ ಎರಡು ಸಾಲು ಓದಿದಾಗ ನಗು ತಡೆಯಲಾಗಲಿಲ್ಲ. ಕೊನೆಯವರೆಗೆ ಗುಟ್ಟು ಬಿಟ್ಟುಕೊಡದೆ, ನಮ್ಮನ್ನೆಲ್ಲಾ ಬಕರಾ ಮಾಡಿದ್ದೀರಿ. :-) ಶ್ಯಾಮಲ

ಮೊದಲು ಅತ್ತು ನಂತರ ನಕ್ಕಲ್ಲಿ, ಅತ್ತಿದ್ದು ಮರೆತು ಹೋಗುತ್ತೆ ಎಂದು ಈ ನಡುವೆ ಇಂತಹ ಕಥೆಗಳನ್ನು ಬರೆವ ಪ್ರಯತ್ನ ಮಾಡಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ಯಾಮಲ ಅವರೇ...

ಚಿತ್ರ ಇದೆಯೇನೋ ಅಂತ ನೋಡ್ತಾ ಇದ್ದೆ, ಚಿತ್ರ ಹಾಕಿ ನೋಡೋಣ ಶ್ರೀನಾಥ ಅವರೆ, "ಮೇ ಬಿ ಯು ಕ್ಯಾನ್ ವಿನ್ ಎ ಪ್ರೈಸ್ ಇನ್ "ಕಲವಾಟೋಸ್" ಕಾಂಪಿಟೇಶನ್" ~ಮೀನಾ ( ಇದು ಒಂದು ಆದರ್ಶ ಮನುಷ್ಯನ ಗುಣ ಅಂತೆ, ಯಾವುದು ಅಂತ ಗೊತ್ತಾಗದೇ ಇದ್ದರೆ, ಕೇಳಿ ಹೇಳುತ್ತೇನೆ)

ಮೀನ ಅವರಿಗೆ ಧನ್ಯವಾದಗಳು ಖಲ್ವಾಟ ಪದ ಕೇಳಿ ಬಹಳ ದಿನವಾಗಿತ್ತು. ನೆನಪಿಸಿದ್ದಕ್ಕೆ ಧನ್ಯವಾದಗಳು. ನನ್ನ ಚಿತ್ರ ಹಾಕಲಿಲ್ಲ ಏಕೆಂದರೆ ನಾನಿನ್ನೂ ಖಲ್ವಾಟ ಆಗಿಲ್ಲ !!! "ಆದರ್ಶ ಮನುಷ್ಯನ ಗುಣ'ದ ಬಗ್ಗೆ ಗೊತ್ತಿಲ್ಲ ಅಂದರೆ ನಾನು ಅಂತಹ ಮನುಷ್ಯನಲ್ಲ ಅಂತ ಆಯಿತು :-) ಸದ್ಯ ಬದುಕಿದೆ! ದಯವಿಟ್ಟು ತಿಳಿಸಿ ....

"ಆದರ್ಶ ಮನುಷ್ಯನ ಗುಣ'ದ ಬಗ್ಗೆ ಗೊತ್ತಿಲ್ಲ ಅಂದರೆ ನಾನು ಅಂತಹ ಮನುಷ್ಯನಲ್ಲ ಅಂತ ಆಯಿತು :-) ಸದ್ಯ ಬದುಕಿದೆ! ದಯವಿಟ್ಟು ತಿಳಿಸಿ .... ("ತಮ್ಮನ್ನು ತಾವೇ ವಸ್ತುಗಳನ್ನಾಗಿಸಿ, ಹಾಸ್ಯಮಾಡುವುದು" ಆದರ್ಶ ಮನುಷ್ಯನ ಒಂದು ಗುಣವಂತೆ ( ಹದಿನಾರು (ಅಥವಾ ೧೮) ಗುಣಗಳಲ್ಲೊಂದಂತೆ) ನಿಮಗೂ ಒಂದು ಗುಣ ಇದೆ ಅಂತ ಸಾಭೀತುಪಡೆಸಿದ್ದೀರಲ್ಲಾ ಆಗಲೆ? ಶುಭದಿವಸ ನಿಮಗೆ ~ಮೀನಾ.

Nice one Sreenath!, Mixture of Suspense+Comedy :)...Awesome! I like the sentences relevant to the story, the following to name a few.. ಪೋಷಕರ ಪಾಲನೆ ಪೋಷಣೆ ಚೆನ್ನಾಗಿಯೇ ಇದ್ದುದರಿಂದ ದಷ್ಟ ಪುಷ್ಟವಾಗೇ ಇದ್ದೆವು :) ನಮ್ಮೊಳಗೂ ಕೆಲವರು ಸೇರಿ ನಮ್ಮನ್ನು ಪೀಡಿಸಿದ್ದು ಉಂಟು. (Henu? :) ) ಯಜಮಾನನು ದಂಡನಾಯಕನಂತೆ ಜವಾಬ್ದಾರಿ ಹೊರಬೇಕು. ’ದಂಡ’ಕ್ಕೆ ನಾಯಕನಾಗಬಾರದು ! :) When we read the story for the second time, the above sentences makes us laugh :) Cheers Raghu

ಶ್ರೀನಾಥ, ನಿಮ್ಮ ಬರಹವನೋದಿದಾಗ ನನ್ನನ್ನೇ ನಾ ಕನ್ನಡಿಯ ಮುಂದೆ ನಿಂತಿರುವಂತೆ ಕಂಡೆ ತಮ್ಮ ಕೊನೆಯ ದಿನಗಳನ್ನು ಎಣಿಸುತಿರುವ ತಲೆ ಮೇಲಿನ ಕಾದಲುಗಳ ನಾನೆಣಿಸಿಕೊಂಡೆ ನನಗೇ ಕೇಳಿಸದ ಆ ಸ್ವಗತ ದೂರದ ನಿಮಗೆ ಕೇಳಿಸಿದ್ದಾದರೂ ಹೇಗೆ ಎಂದಾಶ್ಚರ್ಯಗೊಂಡೆ ನಮ್ಮವರ ನಾವೇ ಅರಿತುಕೊಳ್ಳದೇ ಇದ್ದೊಡೆ ನಾವವರ ಕಳೆದುಕೊಳ್ಳುತ್ತೇವೆಂದರಿತುಕೊಂಡೆ!!! - ಆತ್ರಾಡಿ ಸುರ‍ೇಶ ಹೆಗ್ಡೆ.

ಸುರೇಶ್’ವರಿಗೆ ಧನ್ಯವಾದಗಳು ... ಅದ್ಭುತ ಕವನ .... ತನ್ನವರನ್ನೆಲ್ಲ ಕಳೆದುಕೊಂಡು ಮರಳುಗಾಡಿನಲ್ಲಿ ನಿಂತ ಏಕಾಂಗಿ ಪ್ರಯಾಣಿಕನಂತಹ ಆ ’ಕೂದಲು’ ನೀಡಿದ ಕರೆ ನನಗೆ ಕೇಳಿದ್ದು ಒಂದು ರೀತಿಯ ಅಶರೀರವಾಣಿಯಂತೆ :-)

>>ತಮ್ಮ ಕೊನೆಯ ದಿನಗಳನ್ನು ಎಣಿಸುತಿರುವ ತಲೆ ಮೇಲಿನ ಕಾದಲುಗಳ ನಾನೆಣಿಸಿಕೊಂಡೆ ನನಗೇ ಕೇಳಿಸದ ಆ ಸ್ವಗತ ದೂರದ ನಿಮಗೆ<<< ಸುರೇಶ್ ಅವರೆ,(ತಮಾಷೆಗೆ..........) "ಕಾದಲುಗಳು , ಕೂದಲುಗಳ ಮರಿಗಳೇ? ಅದರಹಾಗೇ ಇರುತ್ತಾ?" ~ಮೀನ.

ಶ್ರೀನಾಥ್ ಅವರೇ, ನಿಮ್ಮ ತಲೆಮೇಲಿನ ಸ೦ಸಾರ ಹಾಳಾಗುತ್ತಿರುವುದು ನಮಗೂ ಬೇಸರವಾಗಿದೆ. ಆದರೆ ಈಗೆಲ್ಲಾಒ೦ಟಿ ಬದುಕು ಅಭ್ಯಾಸವಾಗಿ ಸಹಜವೇ ಆಗಿದೆ. ಅದೇನೇ ಇದ್ದರೂ, ತಲೆಯೊಳಗಿನ ಬುದ್ಧಿ ಸರಿ ಇದ್ದರಾಯಿತು ಬಿಡಿ.

ಹಳೆ ಮರ ಉರುಳೋವಾಗ ಎಳೆ ಮರ ನಕ್ಕಿತ್ತಂತೆ, ಇವತ್ತಿನ ಪರಿಸ್ಥಿತಿಯಲ್ಲಿ ನನ್ನ ಸಂಸಾರ ಆನಂದ ಸಾಗರ. ಆದ್ರೂ ನಿಮ್ಮ ಕಥೆಗೆ ನಾನು ನಗಲ್ಲ.

ಕುತೂಹಲಕಾರಿಯಾದ ಶೀರ್ಷಿಕೆ ಕೊಟ್ಟು, ನಮ್ಮನ್ನು ಬೇಸ್ತು ಬೀಳಿಸಿದ ಭಲ್ಲೇ ಅವ್ರೆ ಬರಹ ಓದಿ ನಕ್ಕಿದ್ದೇ ನಕ್ಕಿದ್ದು:())))))))))))))))))))))))) ಪ್ರತಿ ವಾಕ್ಯ ಪ್ರಯೋಗವೂ :()) ಮಾಡದೇ ಇರಲಿಲ್ಲ.... ಈ ತರಹ ಶೀರ್ಷಿಕೆ ಓದಿ ಬೇಸ್ತು ಬಿದ್ದದ್ದು ನಾನೊಬ್ಬನೇ ಅಲ ಅಂತ ಎಲ್ಲರ ಪ್ರತಿಕ್ರಿಯೆ ಓದಿ ಗೊತ್ತಾಗಿ 'ಸಮಾಧಾನ' ಆಯ್ತು:(())) ತುಂಬಾ ಚೆನ್ನಾಗಿದೆ.. ಪುರುಷರ ಸಾರ್ವತ್ರಿಕ ಸಮಸ್ಯೆ ಬಗ್ಗೆ ಚೆನ್ನಾಗಿ ಹಾಸ್ಯಾತ್ಮಕವಾಗಿ ಹೇಳಿದ್ದೀರ... ಈ ಬರಹ ಇಂದು ನನ್ನ ಕಣ್ಣಿಗೆ ಬಿದ್ದುದು ನ ಓದಿ ಮನ ಪ್ರಫುಲ್ಲವಾಗಿದ್ದು.. ನಿಮಗೆ ವಂದನೆಗಳು...