ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

To prevent automated spam submissions leave this field empty.

ತೇಜಸ್ವಿಯವರನ್ನು ಸ್ಮರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅವರ ಚಿಂತನೆಗೆ ಕನ್ನಡಿ ಹಿಡಿಯುವಂತಹ ಅವರ ಈ ಬರಹ ಸದಸ್ಯರ ಮುಂದಿಡಲು ಬಯಸುತ್ತೇವೆ. ಈ ಬರಹ 'ಸಂಪದ'ದಲ್ಲಿ ಆಗಸ್ಟ್ ೨೦೦೫ರಂದು ಮೊದಲು ಪ್ರಕಟವಾಗಿತ್ತು.

ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಮೊದಲು ಚಾರಿತ್ರಿಕವಾಗಿ ಮೀಸಲಾತಿ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅದು ಹುಟ್ಟು ಹಾಕಿರುವ ವಿರೋಧಾಭಾಸಗಳನ್ನು ಮಂಡಿಸಬಯಸುತ್ತೇನೆ.

ಮೊಟ್ಟ ಮೊದಲನೆಯನದಾಗಿ ಮೀಸಲಾತಿಯ ಮೂಲ ಉದ್ದೇಶದ ಬಗ್ಗೆಯೇ ಗೊಂದಲಗಳು ಆರಂಭವಾಗಿರುವುದನ್ನು ಗಮನಿಸಬೇಕು. ಮೀಸಲಾತಿ ಜಾತಿಗಳನ್ನು ಸಮರ್ಥಿಸುವ ಜಾತೀಯತೆಯನ್ನು ಪ್ರೋತ್ಸಾಹಿಸುವ ಆಂದೋಳನವೇ? ಭಾರತದ ಸೆಕ್ಯುಲರ್ ಆಂದೋಲದ ಭಾಗವೇ? ಎಂಬುದನ್ನು ಈಗ ಸ್ಪಷ್ಟ ಪಡಿಸಬೇಕಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀ ಎಲ್.ಜಿ. ಹಾವನೂರ್ ಅವರು ಸಾರ್ವಜನಿಕ ಭಾಷಣವೊಂದರಲ್ಲಿ ಜಾತಿಗಳು ಶಾಶ್ವತ, ಇವು ಸೂರ್ಯ ಚಂದ್ರರಿರುವವರೆಗೂ ಇರುತ್ತವೆ ಎಂದಿದ್ದರು. ಜಾತಿಗಳು ಭವಿಷ್ಯದಲ್ಲೂ ಶಾಶ್ವತವಾಗಿ ಉಳಿಯುತ್ತವೆಯೋ ಇಲ್ಲವೋ ಭವಿಷ್ಯವನ್ನು ಬಲ್ಲವರಾರು? ಅದನ್ನು ಹಾವನೂರರೂ ಹೇಳಲಾರರು. ಆದರೆ ಈ ಹೇಳಿಕೆಯ ಮೂಲಕ ಹಾವನೂರರು ಪ್ರತಿನಿಧಿಸಿದ ಧೋರಣೆ ಮಾತ್ರ ಕಳವಳಕಾರಿಯಾದುದು. ಮೀಸಲಾತಿಯ ಮೂಲ ಆಶಯಗಳಲ್ಲೇ ಗೊಂದಲ ಪ್ರಾರಂಭವಾಗಿರುವುದರ ಮುನ್ಸೂಚನೆ ಇದೆಂದು ನನಗನ್ನಿಸುತ್ತದೆ.

ಕರ್ನಾಟಕದಲ್ಲಿ ಮೀಸಲಾತಿ ಜಾರಿಗೆ ಬಂದ ನಂತರ ಸಂಭವಿಸಿದ ಕೆಲವು ಚಾರಿತ್ರಿಕ ಬೆಳವಣಿಗೆಗಳೂ ಈ ಗೊಂದಲಕ್ಕೆ ಕಾರಣವೆಂದು ಹೇಳಬಹುದು. ಮೀಸಲಾತಿಯ ಪರಿಣಾಮವಾಗಿ ಜಾತೀಯ ಸಂಘಟನೆಗಳು ಶುರುವಾದುವು. ಅಸಂಘಟಿತರಾಗಿ ಕರ್ನಾಟಕಾದ್ಯಂತ ಚದುರಿದ್ದ ಪ್ರತಿಯೊಂದು ಜಾತಿಯೂ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ತಮತಮಗೆ ಒಂದು ಮಠವನ್ನೂ ಅದಕ್ಕೊಬ್ಬ ಜಗದ್ಗುರುವನ್ನೂ ನಿರ್ಮಿಸತೊಡಗಿದವು. ಇಷ್ಟಲ್ಲದೆ ಅನೇಕ ಜಾತಿಗಳೊಳಗೇ ಉಪ ಪಂಗಡಗಳೇರ್ಪಟ್ಟು ಅವು ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸತೊಡಗಿದವು. ಮುಸ್ಲಿಂ ಮತ್ತು ಲಿಂಗಾಯತ ಕೋಮಿನ ಉದಾಹರಣೆಗಳನ್ನು ಇಲ್ಲಿ ಪರಿಶೀಲಿಸಬಹುದು.

ಇದರೊಡನೆ ಭಾರತದಲ್ಲಿ ಜಾತಿ ಪದ್ಧತಿ ಕೆಳ ವರ್ಗಗಳಲ್ಲಿ ವೃತ್ತಿ ಮೂಲವಾಗಿ ರೂಪುಗೊಂಡಿದ್ದರಿಂದ ನೂರಾರು ಹೊಸಹೊಸ ವೃತ್ತಿಯ ಸಮುದಾಯಗಳು ಹುಟ್ಟಿಕೊಂಡು ತಾವೇ ಒಂದೊಂದು ಹೊಸ ಜಾತಿಗಳೆಂದು ಗುರುತಿಸಿಕೊಳ್ಳತೊಡಗಿದವು. ಈ ಎಲ್ಲಾ ಜಾತಿಗಳವರೂ ತಾವು ಅತ್ಯಂತ ಹಿಂದುಳಿದವರೆಂದು ಹೇಳಿಕೊಂಡು ಮೀಸಲಾತಿಯಲ್ಲಿ ಸ್ಥಾನ ಕೇಳುತ್ತಾ ಹಿಂದುಳಿಯಲು ಪೈಪೋಟಿ ಆರಂಭಿಸಿದವು. ಮೀಸಲಾತಿಯಿಂದ ಉದ್ಭವವಾದ ಈ ಬೆಳವಣಿಗೆಯನ್ನು ನಾನು ಅನಪೇಕ್ಷಣೀಯ ಬೆಳವಣಿಗೆಯೆಂದು ಆಕ್ಷೇಪಿಸುತ್ತಿಲ್ಲ ಅಥವಾ ಪ್ರೋತ್ಸಾಹಿಸಬೇಕೆಂಬುದೂ ನನ್ನ ಉದ್ದೇಶವಲ್ಲ. ಆದರೆ ಈ ಬೆಳವಣಿಗೆಯ ಅರ್ಥವೇನು? ಇದು ಮೀಸಲಾತಿಯ ಉದ್ದೇಶವೇ? ಎಂದು ವಿಶ್ಲೇಷಿಸ ಬಯಸುತ್ತೇನೆ. ಈ ಘಟ್ಟದಲ್ಲಿ ಯೋಚಿಸಿದಾಗ ಹಾವನೂರರ ಹೇಳಿಕೆ ಮತ್ತು ಆಶಯದಂತೆ ಮೀಸಲಾತಿ ಜಾತಿಗಳನ್ನೂ ಜಾತೀಯತೆಯನ್ನೂ ಪೋಷಿಸುವ ಮತ್ತು ಪ್ರತಿಪಾದಿಸುವ ಆಂದೋಳನದಂತೆಯೇ ಕಾಣುತ್ತದೆ.

ಆದರೆ ನಮ್ಮ ಸಂವಿಧಾನ ಕರ್ತೃ ಅಂಬೇಡ್ಕರ್ ಮೀಸಲಾತಿಯ ಹಿಂದೆ ಇಟ್ಟುಕೊಂಡಿದ್ದ ಉದ್ದೇಶ ಇದಲ್ಲವೆಂದು ನನ್ನ ದೃಢ ನಂಬಿಕೆ. ಜಾತ್ಯತೀತ ಭಾರತದ ನಿರ್ಮಾಣಕ್ಕಾಗಿಯೇ ಅವರು ಮೀಸಲಾತಿಯನ್ನು ಸಂವಿಧಾನದಲ್ಲಿ ಸೇರಿಸಿದುದು. ಜಾತೀಯ ಕಾರಣದಿಂದಲೇ ಹಿಂದುಳಿದ ವರ್ಗಗಳನ್ನು ಜಾತಿಗಳ ಮೂಲಕವೇ ಗುರುತಿಸಿ ಮೇಲೆತ್ತಬೇಕಾಗುತ್ತದೆಂದು ಅವರು ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸಿದರು. ಮೀಸಲಾತಿಯ ಹಿಂದಿನ ಅವರ ಉದ್ದೇಶ ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ರೂಪಿಸಬೇಕೆಂಬುದೇ ಹೊರತು ವರ್ಣಾಶ್ರಮ ಧರ್ಮದ ಜಾತೀಯ ರಾಷ್ಟ್ರವಾಗಿ ರೂಪಿಸಬೇಕೆಂಬುದಂತೂ ಅಲ್ಲ. ದೇಶ ವಿಭಜನೆಯಂಥ ಘಟನೆಗಳ ಘೋರ ಪರಿಣಾಮಗಳು ಕಣ್ಣೆದುರಿಗೇ ಇರುವಾಗ ಅವರ ಆದರ್ಶಗಳು ಜಾತ್ಯತೀತ ರಾಷ್ಟ್ರವಾಗಿತ್ತೆಂದು ನಿಸ್ಸಂಶಯವಾಗಿ ಹೇಳಬಹುದು.

ಮೀಸಲಾತಿಯ ಪೂರ್ವೋದ್ದೇಶ ಇದೆಂದು ಒಪ್ಪುವುದಾದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಳೆದ ಐದು ದಶಕಗಳಿಂದ ಇರುವ ಮೀಸಲಾತಿ ನಮ್ಮ ಸಂವಿಧಾನದ ಆಶೋತ್ತರಗಳ ದಿಕ್ಕಿನಲ್ಲಿ ಸಾಗುತ್ತಿಲ್ಲವೆಂದು ಹೇಳಬಹುದು. ಜಾತಿಗಳನ್ನು ಸಂಘಟಿಸುವುದು ಮತ್ತು ಜಾತಿಗಳಲ್ಲಿ ಮೂಲಭೂತವಾದವನ್ನು ಪ್ರಚೋದಿಸುವುದರ ಮುಖಾಂತರ ಹೆಚ್ಚು ಹೆಚ್ಚು ಉಪಜಾತಿಗಳನ್ನೂ ಹೊಸ ಹೊಸ ಜಾತಿಗಳನ್ನೂ ನಿರ್ಮಿಸುವುದರ ಮೂಲಕ ನಾವು ಜಾತ್ಯತೀತ ಸಮಾಜದತ್ತ ಸಾಗಲು ಸಾಧ್ಯವೇ ಇಲ್ಲ.

ನಾನು ಮೀಸಲಾತಿಯನ್ನು ತಿರಸ್ಕರಿಸುತ್ತಿಲ್ಲ. ನಿಷ್ಪ್ರಯೋಜಕವೆಂದು ಅಲ್ಲಗಳೆಯುತ್ತಲೂ ಇಲ್ಲ. ಹಿಂದುಳಿದ ಮೀಸಲಾತಿ ಇಲ್ಲದಿದ್ದರೆ ಹಿಂದುಳಿದ ಜಾತಿಗಳಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನಾನು ಸರ್ವಥಾ ಒಪ್ಪುತ್ತೇನೆ. ಅಂದರೆ ಮೀಸಲಾತಿ ಜಾತಿಗಳ ನಡುವೆ ಒಂದು ಮಟ್ಟದ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ತರುವುದರಲ್ಲಿ ಸಫಲವಾಗಿದೆ. ಆದರೆ ಇದು ಜಾತ್ಯತೀತ ರಾಷ್ಟ್ರ ನಿರ್ಮಿಸುವತ್ತ ಸಾಗುತ್ತಿದೆಯೇ ಇಲ್ಲವೇ ಎಂಬುದೇ ಈಗಿರುವ ಪ್ರಶ್ನೆ.

ಹಾಗಿದ್ದರೆ ಮೀಸಲಾತಿ ನಮ್ಮ ಸಂವಿಧಾನ ಕರ್ತೃಗಳ ಮೂಲೋದ್ದೇಶಕ್ಕೆ ತದ್ವಿರುದ್ಧ ಪರಿಣಾಮಗಳನ್ನು ಏಕೆ ಮಾಡಿತು? ಕಳೆದ ಐದು ದಶಕಗಳ ಮೀಸಲಾತಿಯ ಪರಿಣಾಮವಾಗಿ ಜಾತೀಯತೆ ಸಡಿಲಗೊಳ್ಳುವುದರ ಬದಲು ಇನ್ನಷ್ಟು ಬಿಗಿಯಾಗುತ್ತಾ ಉಲ್ಭಣಗೊಳ್ಳುತ್ತಾ ಬಂದುದೇಕೆ?

ನಮ್ಮ ಸಂವಿಧಾನ ಕರ್ತೃಗಳಾದ ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮೊದಲಾದವರ ಕೆಲವು ಲೆಕ್ಕಾಚಾರಗಳು ತಪ್ಪಾದವೆಂದು ಕಳೆದ ಐದು ದಶಕಗಳ ಚರಿತ್ರೆಯನ್ನು ಅವಲೋಕಿಸಿದರೆ ತಿಳಿಯುತ್ತದೆ. ಇವರೆಲ್ಲಾ ಸಮಾಜದ ಕೆಳ ವರ್ಗಗಳಲ್ಲಿದ್ದ ಜಾತಿಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಿದರೆ ಅಂದರೆ ಜಾತಿಗಳ ನಡುವೆ ಒಂದು ಮಟ್ಟದ ಸಮಾನತೆಯನ್ನಾದರೂ ಸಾಧಿಸಿದರೆ ಜಾತಿ ಪದ್ಧತಿ ಮತ್ತು ಜಾತೀಯ ಸಂಕೋಲೆಗಳು ತನ್ನಿಂದ ತಾನೇ ಸಡಿಲಾಗುತ್ತಾ ವರ್ಣಾಶ್ರಮ ಮೂಲ ಸಮಾಜ ನಿಧಾನವಾಗಿ ವರ್ಗಮೂಲ ಸಮಾಜವಾಗಿ ರೂಪಾಂತರಗೊಳ್ಳುತ್ತದೆ ಎಂದು ಊಹಿಸಿದರು. ಇವರೆಲ್ಲರ ತಾತ್ವಿಕ ನಿಲುವಿಗೆ ಆ ಕಾಲದ ಚಿಂತನೆಗಳ ಮೇಲೇ ಪ್ರಭಾವ ಬೀರಿದ್ದ ಡೈಲಕ್ಟಿಕಲ್ ಮೆಟೀರಿಯಲಿಸಂ ಕೂಡಾ ಕಾರಣವಿರಬಹುದು. ಅವರು ಜಾತಿಗಳ ಆರ್ಥಿಕ ಸಮಾನತೆ ಸಾಧ್ಯವಾಗುತ್ತಲೂ ಅವು ತಮ್ಮ ವರ್ಣ ಸ್ವರೂಪವನ್ನು ಕಳೆದುಕೊಂಡು ಹೆಚ್ಚು ಚಲನಶೀಲವಾದ ವರ್ಗಗಳಾಗಿ ರೂಪುಗೊಳ್ಳುತ್ತವೆ. ಸ್ಥಗಿತಗೊಂಡಿರುವ ಜಾತಿಗಳು ಸಡಿಲಾಗುತ್ತಾ ಜಾತಿಗಳ ನಡುವಣ ಪ್ರತ್ಯೇಕತೆ ಕಡಿಮೆಯಾಗಿ ಒಂದರೊಳಗೊಂದು ವಿಲೀನವಾಗಲು ಶುರುವಾಗುತ್ತವೆ ಎಂದು ಭಾವಿಸಿದರು. ಇದು ತಂತಾನೇ ಸಂಭವಿಸುವ ಸಾಮಾಜಿಕ ಸ್ಥಿತ್ಯಂತರವಾದುದರಿಂದ ಅದಕ್ಕೊಂದು ಸಾಂವಿಧಾನಿಕ ಮಾರ್ಗ ಸೂಚಿಸಲಿಲ್ಲ ಅಥವಾ ಕಲ್ಪಿಸಲಿಲ್ಲ.

ಅವರ ಈ ನಿಲುವು ತಾತ್ವಿಕವಾಗಿ ತಪ್ಪೆಂದು ನಾನು ಭಾವಿಸುವುದಿಲ್ಲ. ಏಕೆಂದರೆ ವಾಸ್ತವವಾಗಿ ಜಾತಿಯ ವಜ್ರಮುಷ್ಠಿ ಸ್ವಾತಂತ್ರ್ಯಾನಂತರ ಸಡಿಲಾಗುತ್ತಾ ಬಂದಿದ್ದು ನಿಜ. ಜಾತಿಗಳು ಬೇರೆ ಬೇರೆಯಾದರೂ ಆರ್ಥಿಕವಾಗಿ ಒಂದೇ ವರ್ಗದಲ್ಲಿದ್ದ ಸಹಸ್ರಾರು ಯುವಕ ಯುವತಿಯರು ಅಂತರ್ಜಾತೀಯ ವಿವಾಹವಾಗತೊಡಗಿದ್ದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದು. ಆದರೆ ಈ ರೀತಿ ಜಾತಿಯ ಸಂಕೋಲೆಗಳನ್ನು ತ್ಯಜಿಸಿ ಮದುವೆಯಾಗಿದ್ದ, ಮದುವೆಯಾಗುತ್ತಿರುವ ಯುವಜನರಿಗೆ ಎದುರಾಗುವ ಮುಖ್ಯ ಪ್ರಶ್ನೆಯೆಂದರೆ ಮುಂದೇನು? ಎನ್ನುವುದು. ನಮ್ಮ ಸಂವಿಧಾನ ಕರ್ತೃಗಳ ಲೆಕ್ಕಾಚಾರ ತಪ್ಪಿದ್ದು ಇಲ್ಲೇ. ನಮ್ಮ ಸಂವಿಧಾನ ಜಾತ್ಯತೀತತೆಯ ಘೋಷಣೆ ಮಾಡಿತೇ ಹೊರತು ಜಾತಿ, ಧರ್ಮ, ಬುಡಕಟ್ಟುಗಳಿಂದ ತುಂಬಿದ್ದ ದೇಶದಲ್ಲಿ ಜಾತ್ಯತೀತರಾದವರು ಗುರುತಿಸಿಕೊಳ್ಳಲು, ಅನುಸರಿಸಲು ಯಾವ ನಾಗರಿಕ ಸಂಹಿತೆಯನ್ನೂ ಬದಲಿಯಾಗಿ ಕೊಟ್ಟಿಲ್ಲ. ಅಂತರ್ಜಾತೀಯ ವಿವಾಹವಾದವರಿಗೂ ಅವರ ಮಕ್ಕಳಿಗೂ ಉಳಿದಿರುವುದು ಒಂದೇ ದಾರಿ. ತಮ್ಮ ಗಂಡನ/ತಂದೆಯ ಜಾತಿಯೊಂದಿಗೆ ಗುರುತಿಸಿಕೊಳ್ಳುವುದು. ನಮ್ಮ ಸಂವಿಧಾನದಲ್ಲಿ ಅಂತರ್ಗತವಾಗಿರುವ ವೈರುದ್ಧ್ಯದ ದೆಸೆಯಿಂದ ಭಾರತದ ಜಾತ್ಯತೀತ ಆಂದೋಲನ ಕ್ಷುಲ್ಲಕ ಮತಾಂತರ ಆಂದೋಲನವಾಗಿ ಪರಿವರ್ತಿಸಲ್ಪಟ್ಟಿತು. ಗುರು ಹಿರಿಯರನ್ನೂ ಸಮಾಜವನ್ನೂ ಎದುರು ಹಾಕಿಕೊಂಡು ಅಂತರ್ಜಾತೀಯ ವಿವಾಹವಾದ ತರುಣ ತರುಣಿಯರು ಕೊನೆಗೆ ಎಲ್ಲೂ ಸಲ್ಲದ ತ್ರಿಶಂಕುಗಳಾಗಿ ಅನಾಥರಾಗಬೇಕಾದ ಪರಿಸ್ಥಿತಿ ಉಂಟಾಯಿತು.

ಈ ಪರಿಸ್ಥಿತಿಯ ಅರಿವು ಅಂಬೇಡ್ಕರ್ ಅವರಿಗೆ ಇರಲಿಲ್ಲವೆಂದು ನಾನು ನಂಬುವುದಿಲ್ಲ. ಏಕೆಂದರೆ ಹಿಂದೂ ಧರ್ಮವನ್ನೂ, ಅದು ಪ್ರತಿಪಾದಿಸುವ ವರ್ಣಾಶ್ರಮ ಧರ್ಮವನ್ನೂ ಸಂಪೂರ್ಣವಾಗಿ ತಿರಸ್ಕರಿಸಿದ ಮೇಲೂ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಯಾವುದಾರೂ ಒಂದು ಗುಂಪಿನ ಜೊತೆ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದುದರಿಂದಲೇ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು. ಇದರಿಂದ ತಮಗಿದ್ದ ಸಮಸ್ಯೆಯನ್ನು ವೈಯಕ್ತಿಕವಾಗಿ ಪರಿಹರಿಸಿಕೊಂಡರೇ ಹೊರತು ಜಾತ್ಯತೀತ ಆಂದೋಲನಕ್ಕೆ ಒಂದು ಸಂವಿಧಾನಾತ್ಮಕ ಅಸ್ತಿತ್ವವನ್ನು ಕೊಡಲಿಲ್ಲ. ಇಂದು ಬೌದ್ಧ ಧರ್ಮ ಜಗತ್ತಿನ ಅತ್ಯಂತ ಸೆಕ್ಯುಲರ್ ಧರ್ಮವಾಗಿದ್ದರೂ ಅದು ಜಾತ್ಯತೀತ ರಾಷ್ಟ್ರಕ್ಕೆ ಬದಲಿಯಾಗಲು ಸಾಧ್ಯವಿಲ್ಲ. ಸರಿಯಾದ ಬದಲಿಯೆಂದರೆ ‘ರಾಷ್ಟ್ರೀಯ ನಾಗರಿಕ ಸಂಹಿತೆ ’ ಮಾತ್ರ.

ಇವತ್ತು ಅಂತರ್ಜಾತೀಯ ವಿವಾಹವಾದ ಜಾತ್ಯತೀತರನ್ನು ಬಿಟ್ಟರೆ ‘ರಾಷ್ಟ್ರೀಯ ನಾಗರಿಕ ಸಂಹಿತೆ’ ಯಾರಿಗೂ ಬೇಡವಾಗಿದೆ. ಜಾತಿಯಿಂದ ದೊರಕುವ ಸವಲತ್ತುಗಳ ರುಚಿ ಹಿಡಿದಿರುವ ಪ್ರತಿಯೊಂದು ಜಾತಿ ಮತ್ತು ಧರ್ಮಗಳೂ ಇದನ್ನು ಉಗ್ರವಾಗಿ ವಿರೋಧಿಸುತ್ತವೆ. ಈಗಿರುವ ಒಂದೇ ದಾರಿಯೆಂದರೆ ಕೊನೆಯ ಪಕ್ಷ ಐಚ್ಛಿಕವಾಗಿ, ಇಷ್ಟವಿದ್ದವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದಾದ ಸವಲತ್ತನ್ನು ಸಂವಿಧಾನದಲ್ಲಿ ಕೊಡುವುದು. ಜಾತೀಯತೆಯ ಸಂಕೋಲೆಗಳಿಂದ ದೂರಾಗಲು ಹಂಬಲಿಸುವ ಆದರ್ಶವಾದಿಗಳಿಗಾದರೂ ಆಯ್ಕೆಯ ಸ್ವಾತಂತ್ರ್ಯ ನೀಡುವುದು.

ಸಂವಿಧಾನ ತಿದ್ದುಪಡಿಯಂಥ ಗುರುತರ ಹೊಣೆ ರಾಜ್ಯ ಸರಕಾರವೊಂದರ ಅಡಿಯಲ್ಲಿ ಬರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವ್ಯಾಪ್ತಿಯನ್ನು ಮೀರಿದ್ದೆಂದು ನನಗೆ ಗೊತ್ತು. ಆದರೆ ಈ ಆಯೋಗ ತನ್ನ ಪರಿಮಿತಿಯೊಳಗೇ ಅಂತರ್ಜಾತೀಯ ವಿವಾಹವಾದವರನ್ನು ಜಾತ್ಯತೀತ ಗುಂಪೆಂದು ಗುರುತಿಸಿ ಅವರಿಗೆ ಕೊಂಚವಾದರೂ ಪ್ರೋತ್ಸಾಹ ಕೊಟ್ಟರೆ ನಿಧಾನವಾಗಿಯಾದರೂ ಇದು ‘ಐಚ್ಛಿಕ ನಾಗರಿಕ ಸಂಹಿತೆ’ಯೊಂದನ್ನು ಸಂವಿಧಾನ ದತ್ತವಾಗಿ ಕೊಡಲು ಒತ್ತಡವಾಗಿ ಪರಿಣಮಿಸಬಹುದೆಂದು ತಿಳಿದಿದ್ದೇನೆ. ಈ ದಿಸೆಯಲ್ಲಿ ಆಯೋಗ ಇಡುವ ಸಣ್ಣ ಹೆಜ್ಜೆ ಮೀಸಲಾತಿಯ ಅರ್ಥವನ್ನೇ ಬದಲಿಸಿ ಪುನರ್ ವ್ಯಾಖ್ಯಾನ ಮಾಡುತ್ತದೆ. ಕರ್ನಾಟಕಾದ್ಯಂತ ಅಸಂಘಟಿತರಾಗಿ ಚದುರಿರುವ ಈ ಜಾತ್ಯತೀತರಿಗೆ ಪ್ರೋತ್ಸಾಹವನ್ನೂ ಹೊಸ ಹುರುಪನ್ನೂ ನೀಡುತ್ತದೆ. ಕರ್ನಾಟಕದಲ್ಲಿ ಅವ್ಯಕ್ತವಾಗಿ ನಡೆಯುತ್ತಿರುವ ಜಾತ್ಯತೀತ ಸೆಕ್ಯುಲರ್ ಆಂದೋಲನಕ್ಕೆ ಅಧಿಕೃತ ಸಮ್ಮತಿ ದೊರಕಿಸಿದಂತಾಗುತ್ತದೆ.

‘ಸಂಪದ’ದ ಸದಸ್ಯರಿಗೆ ಮತ್ತು ಓದುಗರಿಗೆ ತೇಜಸ್ವಿಯವರನ್ನು ಪರಿಚಯಿಸುವ ಅಗತ್ಯವಿಲ್ಲ. ಕನ್ನಡ ಕಂಡ ಅತಿ ವಿಶಿಷ್ಟ ಲೇಖಕರಲ್ಲಿ ಒಬ್ಬರಾದ ತೇಜಸ್ವಿ ಸದಾ ವರ್ತಮಾನದ ರಾಜಕಾರಣಕ್ಕೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದ್ದಾರೆ. ಅಂತರ್ಜಾತೀಯ ವಿವಾಹವಾಗಿ ಜಾತಿಯನ್ನೂ ಮೀರಿ ನಿಂತರೂ ಭಾರತೀಯ ಕಾನೂನುಗಳು ಮಾತ್ರ ಎಲ್ಲರನ್ನೂ ಒಂದು ಜಾತಿ ಇಲ್ಲವೇ ಧರ್ಮದ ಅನುಯಾಯಿಗಳನ್ನಾಗಿಯೇ ನೋಡುತ್ತದೆ. ಅಂತರ್ಜಾತೀಯ ವಿವಾಹವಾಗುವ ದಂಪತಿಗಳು ತಾತ್ವಿಕವಾಗಿ ಜಾತಿಯನ್ನು ಕಡೆಗಣಿಸುತ್ತಾರೆ. ಆದರೆ ಕಾನೂನಿನಂತೆ ಪತ್ನಿ ತನ್ನ ಪತಿಯ ಜಾತಿಗೆ ಇಲ್ಲವೇ ಧರ್ಮಕ್ಕೆ ಜಾತ್ಯಂತರ/ಮತಾಂತರಗೊಳ್ಳುತ್ತಾಳೆ. ಜಾತಿಯನ್ನು ನಾವು ಬಿಟ್ಟರೂ ಜಾತಿ ನಮ್ಮನ್ನು ಬಿಡದ ವಿಪರ್ಯಾಸವನ್ನು ತೇಜಸ್ವಿ ಇಲ್ಲಿ ಚರ್ಚಿಸಿದ್ದಾರೆ. ಈ ಬರೆಹ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಡಾ.ರವಿವರ್ಮ ಕುಮಾರ್ ಅವರಿಗೆ ಬರೆದ ಪತ್ರದ ರೂಪದಲ್ಲಿತ್ತು. ಅದರ ಸಂಪಾದಿತ ಆವೃತ್ತಿಯನ್ನು ಇಲ್ಲಿ ಪ್ರಕಟಿಸಲಾಗಿದೆ. ಲೇಖನದ ಹಿನ್ನೆಲೆಯ ಕುರಿತ ಹೆಚ್ಚಿನ ವಿವರಗಳಿಗೆ [:http://sampada.net/blog/8|ನನ್ನ ಬ್ಲಾಗ್ ನೋಡಿ]. - [:http://sampada.net/blog/8|ಇಸ್ಮಾಯಿಲ್]

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಳ್ಳೆಯ, ಮನೋಜ್ಞ ಲೇಖನ. ಇದನ್ನು ಬರೆಯಲು ನಿಜಕ್ಕೂ ಗಂಡೆದೆ ಬೇಕು. ಇದನ್ನು ಬರೆದ ಮೇಲೇ ಯಾರಿಂದಲಾದರೂ ಬೆದರಿಕೆ ಬಂದಿತ್ತೇ? ಇದನ್ನು ಬರೆದು ಪ್ರಕಟಿಸಿದ ಮೇಲೆ ಎಷ್ಟು ಜನಗಳನ್ನು ಎದುರು ಹಾಕಿಕೊಳ್ಳಬೇಕಾಗತ್ತೆ. ಇದೇ ದಿಕ್ಕಿನಲ್ಲಿ ಎಲ್ಲರೂ ಯೋಚಿಸುತ್ತಾರೆ, ಆದರೆ ಗಟ್ಟಿಯಾಗಿ ಇದರ ಬಗ್ಗೆ ಚರ್ಚಿಸಲೂ ಹೆದರುತ್ತಾರೆ. ಮುಖ್ಯವಾಗಿ ಅಂತರ್ಜಾತೀಯ ವಿವಾಹ ಆಗುವಾಗ, ನನಗನ್ನಿಸಿದ ಹಾಗೆ ಅಲ್ಲಿ ಸಮಾಜವನ್ನು ಉದ್ಧಾರ ಮಾಡಬೇಕು ಅನ್ನುವ ಉದ್ದೇಶವಿರೋದಿಲ್ಲ. ಪ್ರೇಮ ವಿವಾಹ ಇದ್ದ ಹಾಗೆ. ಅಲ್ಲಿ ನಿಜಕ್ಕೂ ಪ್ರೇಮವಿರೋದಿಲ್ಲ. ಅಲ್ಲಿರೋದು ಕಾಮ. ಬಿಸಿ ಇಳಿದಾಗ ಜನರ ಚಿಂತನೆಯೂ ಜರ್ರನೆ ಇಳಿಯುತ್ತದೆ. ಹಾಗಂತ ಎಲ್ಲರೂ ಹಾಗಲ್ಲ. ನಿಜಕ್ಕೂ ಸಮಾಜ ಸುಧಾರಿಸಬೇಕು ಅನ್ನುವವರೂ ಕೆಲವರಿರುತ್ತಾರೆ. ನಮ್ಮಲ್ಲಿ ಕೆಲವು ಸಮಯ ಸಾಧಕರು (ಆಪರ್ಚ್ಯುನಿಸ್ಟ್ಸ್) ಇರುವ ಬಗ್ಗೆ ನಾನು ಕಂಡ ಒಂದು ಘಟನೆ ಹೇಳಲು ಬಯಸುವೆ. ನನ್ನ ಸ್ನೇಹಿತೆ ಉತ್ತಮ ಜಾತಿಯವಳಾಗಿದ್ದಳು (ಸೋ ಕಾಲ್ಡ್). ಅವಳು ನಮ್ಮಲ್ಲೇ ಕೆಲಸ ಮಾಡುವ ಇನ್ನೊಬ್ಬ ಕೆಳ ವರ್ಗದವನ ಜೊತೆ ಓಡಾಡುತ್ತಿದ್ದಳು. ಸ್ವಲ್ಪ ದಿನಗಳಲ್ಲೇ ಪ್ರೇಮ ವಿವಾಹವಾಯಿತು. ಇಬ್ಬರೂ ತಮ್ಮ ತಮ್ಮ ಮನೆಯವರನ್ನು ಎದುರು ಹಾಕಿಕೊಳ್ಳಬೇಕಾಯಿತು. ಆಗ ಅವಳು ಹೇಳುತ್ತಿದ್ದದ್ದು, ನನ್ನ ಮಗ ಅಥವಾ ಮಗಳಿಗೆ ಯಾವುದೂ ಜಾತಿಯ ಕೊಂಡಿ ಸಿಗಿಸುವುದಿಲ್ಲ, ಎಂದು. ಎರಡು ವರ್ಷಗಳ ತರುವಾಯ ಮಗ ಹುಟ್ಟಿದ. ಕೆಲ ವರುಷಗಳಾಯಿತು. ನಾನು ಕೇಳಿದ್ದೆ, ನಿಮ್ಮ ಮಗನನ್ನು ಶಾಲೆಗೆ ಸೇರಿಸುವಾಗ ಅರ್ಜಿಯಲ್ಲಿ ಯಾವ ಜಾತಿ ಎಂದು ಬರೆದಿರಿ, ಅಂತ. ಅದಕ್ಕೆ ಅವಳು ನನ್ನ ಗಂಡನ ಜಾತಿಯನ್ನೇ ಬರೆದೆ ಅಂದಳು. ಅರ್ರೇ! ಈ ಮುಂಚೆ ನೀವು ಮಗನಿಗೆ ಜಾತಿಯ ಕೊಂಡಿಯನ್ನೇ ಸಿಗಿಸೋದಿಲ್ಲ ಅಂತಿದ್ರಿ, ಅಂದದ್ದಕ್ಕೆ, ಅವಳ ಪ್ರತಿಕ್ರಿಯೆ - 'ಹಾಗಾದ್ರೆ ಅವನಿಗೆ ಉತ್ತಮವಾದ ಕೆಲಸ ಸಿಗೋದು ಹೇಗೆ? ಹೇಗಿದ್ದರೂ ಈ ಜಾತಿ ಪದ್ಧತಿ, ಮೀಸಲಾತಿ ಇವುಗಳು ಕನಿಷ್ಟ ಪಕ್ಷ ಇನ್ನೂ ನೂರು ವರುಷಗಳಿರುತ್ತವೆ. ನನ್ನ ಮಗನಿಗೆ ನನ್ನ ಹಾಗೇ ಬ್ಯಾಂಕಿಗೆ ಸೇರಿಸುವ ಬದಲು, ಐ ಏ ಎಸ್ ಮಾಡಲು ಅನುಕೂಲ ಆಗಲಿ ಎಂದು ಹಾಗೆ ಮಾಡಿದೆ'. ಹೀಗೆ ಯೋಚಿಸುವವರೂ ಇದ್ದರೆ, ಅಂಬೇಡ್ಕರ್ ಅಂತಹ ಮಹಾನುಭಾವರು ಕಂಡ ಕನಸು ನನಸಾದೀತೇ? ಅಂಬೇಡ್ಕರ್ ಅವರು ಮಹಾರಾಷ್ಟದಲ್ಲಿ ಕೆಳ ವರ್ಗದವರುಗಳಿಗೆ ಹೇಳಿ ಕೊಟ್ಟ ಮಂತ್ರ ಅಂದರೆ, ಮೊದಲಿಗೆ ನಿಮ್ಮ ಉಪನಾಮಗಳನ್ನು ಬದಲಾಯಿಸಿ. ಯಾರಿಗೂ ಅದರಿಂದ ನೀವು ಕೆಳವರ್ಗದವರೆಂದು ಗೊತ್ತಾಗಬಾದದು. ನಂತರ ಕಲಿಯಿರಿ, ಕಲಿಸಿರಿ, ಸಮಾಜದ ದೌರ್ಜನ್ಯದ ವಿರುದ್ಧ ತಿರುಗಿ ಬೀಳಿ. ಎಂತಹ ಉನ್ನತ ವಿಚಾರ. ಜಾತಿ ಬರುವುದು ಕರ್ಮದಿಂದ, ಹುಟ್ಟಿನಿಂದಲ್ಲ. ಹೊಲಸ ತಿಂಬುವನೇ ಹೊಲೆಯ --- ತವಿಶ್ರೀನಿವಾಸ

ನಮಸ್ಕಾರ, ತೇಜಸ್ವಿಯವರ ಲೇಖನವನ್ನು ಹೊರತೆಗೆದು ನಮಗೆಲ್ಲ ಓದಲು ಅನುವುಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು. ಈ ಹಿಂದೆಯೇ ಅವರ ಬಹುತೇಕ ಪುಸ್ತಕಗಳನ್ನು ಓದಿದ್ದೆ. ಕನ್ನಡ ಮತ್ತು ಗಣಕ ವಿಷಯದಲ್ಲಿ ಇತ್ತೀಚೆಗೆ ನಡೆದ ಚರ್ಚೆ ಸಂದರ್ಭದಲ್ಲಿ ನನಗೆ ಅವರ ನೇರ ಪರಿಚಯವಾಯಿತು. ಆ ಸಂದರ್ಭದಲ್ಲಿ ಅವರು ಸಾರ್ವಜನಿಕವಾಗಿ ಹೇಳಿದ ಒಂದು ಮಾತು ಎಷ್ಟು ಸತ್ಯ -"ಕುವೆಂಪು ಶತಮಾನೋತ್ಸವ ಎಂದು ದುಡ್ಡು ಖರ್ಚು ಮಾಡುವುದು ಸಂಪೂರ್ಣ ವ್ಯರ್ಥ. ಅದರ ಬದಲು ಕನ್ನಡಕ್ಕೆ ಅತೀ ಅಗತ್ಯವಿರುವ ತಂತ್ರಾಂಶಗಳನ್ನು ತಯಾರಿಸಿ". ನೆನಪಿಡಿ. ಹೀಗೆ ಹೇಳಿರುವವರು ಸ್ವತಃ ಕುವೆಂಪು ಅವರ ಮಗ. ಈ ನಿಷ್ಠುರವಾದಿತ್ವಕ್ಕೇ ನನಗೆ ಅವರು ತುಂಬ ಇಷ್ಟ. ಸಿಗೋಣ, ಪವನಜ ----------- Think globally, Act locally

ನಿಜವಾಗಲು - ನಾವಿನ್ನು ಜಾತಿಯನ್ನು ಬಿಟ್ಟಿಲ್ಲಾ. ಬರಿ ಜಾತಿಯ ಬದಲಾವಣೆಯಾಗಿದೆ ಅಷ್ಟೆ. 1> ಜಾತಿ ಬೇರೆ ರೀತಿಯಲ್ಲಿ ಸೃಷ್ಟಿ ಆಗಿಯೇ ಆಗುತ್ತೆ. ಈಗ ನೋಡಿ IT / NON IT ಅನ್ನೋ ಜಾತಿ ಸೃಷ್ಟಿ ಆಗಿದೆ. ಇದರಿ೦ದ Digital DividU.. ಆ Divide ಅ೦ತ್ತಿದ್ದಾರೆ. ಈ ರೀತಿ ಹಳೆ ಬ್ರಾಹ್ಮನ್ಕೇ ಹೋದರೂ,ಹಳೆ ಪುರೋಹಿತ್ತರು ಎಲ್ಲ್ರು ಹೋದರು - ಈಗ್ ತ೦ತ್ರ ಜ್ನಾನಿಗಳು , Politicians, CEOs ಬ೦ದಿದ್ದಾರೆ. ಅವರ ಸೂತ್ರವೆ ಸರಿ ಅ೦ತ ಹೇಳಿ ತಾವು ದೊಡ್ಡವರಾಗುತ್ತಾರೆ. ಜಾತಿ ತನ್ನ ಹೊಸ ಮುಖವಾಡ ಹಾಕಿಕ್ಕೊ೦ಡು ಬರುತ್ತೆ ಬೇರೆ ಹೆಸರಿನಲ್ಲಿ ಬರಬಹುದು - ಬೇರೆ ರೂಪದಲ್ಲಿ ಬರಬಹುದು. "ನಾನು ಬೇರೆ" ಎ೦ಬೋ ತಪ್ಪು ತಿಳುವಳಿಕೆ - ಇರೋವರೆಗು ಜಾತಿ ಭೇದ ಇದ್ದೇ ಇರುತ್ತೆ. 2> ಬೇರೆ ದೇಶದಲ್ಲಿ ಜಾತಿಗಳ ಬಗ್ಗೆ ನೀವು ಓದಿದ್ದರೆ, ಈ ವಿಷಯ ಇನ್ನು ಮನದಟ್ಟಾಗುತ್ತದೆ. ಉದಾಹರಣೆಗೆ - ಈ ರೀತಿ ಸುದ್ದಿ ನೀವು ದಿನ ಪತ್ರಿಕೆ ಯಲ್ಲಿ ನೋಡಿರ ಬಹುದು. another 20 people were killed during inter-clan violence between the Murule and the Garre communities in Mandera(KENYA). http://www.world-cri... ಜಾತಿ ನಮ್ಮ ದೇಶದಲ್ಲಿ ಕಸುಬಿನಿ೦ದ ಬ೦ದಿರುವುದು. ಇದು Logical ಆಗಿದ್ದರೆ. ಆದರೆ ಈ ಹೊರ ದೇಶದಲ್ಲಿ - ಅ೦ತ ಬೇರೆ ಯಾವ ಕಾರಣಗಳಿ೦ದ ಉದ್ಭವವಾಯ್ತು ? ನ೦ಬಿಕೆಗಳು ಬೇರೆ ಅಥವಾ ತತ್ತ್ವಗಳು ಬೇರೆ. ಮತ್ತೊ೦ದು ಉದಾಹರಣೆ : The History of the Conflict between Sunni and Shi'a Islam http://bladehelix.bl...

ಇಲ್ಲಿ ಚರ್ಚಿಸಿರುವ ವಿಷಯಗಳು ಬಹಳಪ್ರಸ್ತುತವಾಗಿವೆ.

೧. ಮೀಸಲಾತಿಯ ಪೂರ್ವೋದ್ದೇಶ ಜಾತ್ಯಾತೀತ ರಾಷ್ಟ್ರವನ್ನಾಗಿ ರೂಪಿಸ ಬೇಕೆಂದೇ ಹೊರತು,ವರ್ಣಾಶ್ರಮಧರ್ಮದ ಜಾತೀಯ ರಾಷ್ಟ್ರವಾಗಿ ಅಲ್ಲ.

೨.ಅಂತರ್ಜಾತೀಯ ವಿವಾಹಗಳಿಂದ ಹುಟ್ಟಿದಮಕ್ಕಳು ತಮ್ಮ ಜನ್ಮದಾತರ ಜಾತಿಯೊಂದೆಗೆ ಗುರುತಿಸಿಕೋಳ್ಳುವುದು. (ಬಹುಶಃ ಯಾವುದು ಲಾಭಕರವೋ ಅದು)ಗುರು ಹಿರಿಯರಿಗೆ , ಸಮಾಜಕ್ಕೆ ವಿರುದ್ಧವಾಗಿ ಹೋರಾಡಿ ಮುಂದುವರೆದು ಎಲ್ಲೂ ಸಲ್ಲದ 'ತ್ರಿಶಂಕು' ಗಳಾಗಿದ್ದಾರೆ.

೩. ಹೀಗೆ ನಾವು ಬಿಟ್ಟರೂ ಜಾತಿ ನಮ್ಮನ್ನು ಬಿಡದು !!!