ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

To prevent automated spam submissions leave this field empty.

ನೀ ಹೀಗೇಕೆ ಕಾಡುತಿರುವೆ ಪ್ರಿಯೆ!
ಅದೆಂದೋ ಮುಗಿಯಿತಲ್ಲ ಕಥೆ,
ಇದೇನಿದ್ದರೂ ನೆನಪುಗಳ ವ್ಯಥೆ,
ನಾನಿಲ್ಲಿ, ನೀನಲ್ಲಿ, ದೂರ ತೀರದಲ್ಲಿ,
ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!

ಅದೆಷ್ಟು ವರ್ಷಗಳು ಜಾರಿದವು,
ಅದೆಷ್ಟು ಊರುಗಳು ಬದಲಾದವು,
ಅದೆಷ್ಟು ಋತುಗಳು ಬಂದು ಹೋದವು,
ಅದೆಷ್ಟು ನಿಟ್ಟುಸಿರು, ಅದೆಷ್ಟು ಕಂಬನಿ,
 ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!

ನಾ ಮೊದಲೋ ನೀ ಮೊದಲೋ ನಾನರಿಯೆ,
ಆದರೆ ಇಬ್ಬರೂ ದಾಟಿಹೆವು ಸಾಗರವ,
ನಾನೊಂದು ತೀರದಿ, ನೀ ಇನ್ನೊಂದು ತೀರದಿ,
ಸೇರುವುದು ಮತ್ತೆ ಕನಸಿನ ಮಾತೇ ಸರಿ,
ಆದರೂ ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ಓಡುವ ಕಾರಲಿ, ಮಾಡುವ ಕೆಲಸದಲಿ
ಬಿರುಬೇಸಿಗೆಯ ಬಿಸಿಗಾಳಿಯಲಿ,
ಎಂದಾದರೊಮ್ಮೆ ಬರುವ ಮಳೆಹನಿಯಲಿ
ಚುಮುಗುಟ್ಟುವ ಮುಂಜಾವಿನ ಛಳಿಯಲಿ
ಒಡಲಾಳದ ಕದಲುವಿಕೆಯಲಿ ನಿನದೇ ನೆನಪು,
ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ನಾನಂದುಕೊಂಡೆ ನಿನ್ನ ಮರೆತೆನೆಂದು
ನಾ ನೆಮ್ಮದಿಯಲಿ ಬದುಕುತಿರುವೆನೆಂದು
ನೀ ನಿನ್ನ ಬಾಳ ಹಾದಿಯಲಿ ಸಾಗುತಿರುವೆ ಸುಖವಾಗೆಂದು
ಏನಂದುಕೊಂಡರೂ, ಎಷ್ಟೇ ನಿನ್ನ ಮರೆತೆನೆಂದರೂ
ನೀ ಮತ್ತೆ ಮತ್ತೆ ಬರುತಿರುವೆ, ನನ್ನ ಕನಸಲಿ,
ನೀ ನಿಂತೇ ಇರುವೆ ನನ್ನ ಮನಸಲಿ,
ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಮಂಜುನಾಥ್; ಛೆ! ಹೀಗಾಗಬಾರದಿತ್ತು. ನೀವಿಬ್ಬರೂ ಒಟ್ಟಿಗೆ ಹೋಗಬೇಕಾಗಿತ್ತಲ್ಲವೆ? ಅಥವಾ ನೀವೇ ಅವರನ್ನು ಜತೆಯಲ್ಲೇ ಕರೆದೊಯ್ಯಬೇಕಿತ್ತಲ್ಲವೆ? ಕವನ ಚೆನ್ನಾಗಿದೆ. ನೀವು ಚೆನ್ನಾಗಿಯೇ ಕವನ ಬರೆಯುತ್ತೀರಲ್ಲಾ ಇನ್ನೇನು? ಎಷ್ಟು ಕವನ ಆಗಿದೆ ನಿಮ್ಮದು? ಮತ್ತೆ ಹೊರತನ್ನಿ ಒಂದು ಸಂಕಲನ.

ಅಯ್ಯೋ ಪ್ರಭಾಕರ್, ಅದೊಂದು ದೊಡ್ಡ ಕಥೆ, ಮುಗಿಯದ ವ್ಯಥೆ, ರೈಲು ಮಿಸ್ಸಾಗಿದೆ, ಈಗ ಚಿಂತಿಸಿ ಫಲವಿಲ್ಲ ಬಿಡಿ. http://sampada.net/a..., ಇಲ್ಲೆಮ್ಮೆ ನೋಡಿ. ಅಂದ ಹಾಗೆ ಒಂದು ಕವನ ಸಂಕಲನ, ಇನ್ನೊಂದು ಕಥಾ ಸಂಕಲನ ಹೊರ ತರುವ ಯೋಚನೆಯೇನೋ ಇದೆ. ಕಾಲ ಕೂಡಿ ಬರಬೇಕಷ್ಟೆ.

ಮಂಜುನಾಥ್; ನಿಮ್ಮ `ರೈಲುಗಳು ಮಿಸ್ಲಾದ' ಕಥೆ ಓದಿದೆ. ನಾಗರಹಾವು ಸಿನಿಮಾದ ರಾಮಾಚಾರಿ-ಜಲೀಲ್ ಪ್ರಸಂಗದಿಂದ ಆರಂಭವಾಗಿ ಕೊನೆಗೆ `ಧರ್ಮ ಸೆರೆ' ಕಾದಂಬರಿಯಲ್ಲಿ ಅಂತ್ಯಕಂಡಿದೆ!? Love is blind ಎನ್ನುವುದು ಇದಕ್ಕೇ ಇರಬೇಕು!

ಮಂಜುನಾಥ್; ನಿಮ್ಮ ಹಿತೈಷಿಯಾಗಿ ನನ್ನ ಸಲಹೆ ಇಷ್ಟೆ: ಮನಸ್ಸಿನ ಮಾತನ್ನು ಎಂದೂ ಕೇಳಬೇಡಿ; ಬುದ್ಧಿಯನ್ನೇ ಆಶ್ರಯಿಸಿ. ಆಗ ನಿಮ್ಮ ಒಳ ಮನಸ್ಸಿನಲ್ಲೇ ಒಂದು ಕ್ರೈಮಾಕ್ಸ್ ಉಂಟಾಗಿ ಅಂತ್ಯ ಕಾಣುತ್ತೆ. ಇಲ್ಲದಿದ್ದರೆ ಇಂತಹ ವಿಷಯಗಳಲ್ಲಿ ಅಂತ್ಯವೇ ಇರೋದಿಲ್ಲ!

ಇದೊಂದು ಅಂತ್ಯವಿಲ್ಲದ ಕಥೆ ಗೆಳೆಯ, ಇದಕಿಲ್ಲ ಅಂತಿಮ ಚುಕ್ಕಿಯ ವಿದಾಯ, ಕಾಣುತ್ತಿಲ್ಲ ಮರೆಯುವ ಉಪಾಯ, ನೆನಪಿದ್ದಷ್ಟು ಹೆಚ್ಚೆಚ್ಚು ಅಪಾಯ!