ಹೊಸ ಜಿಲ್ಲೆಯಾಗಿ ಯಾದಗಿರಿ: ಕೊನೆಗೂ ನನಸಾದ ಬಹುದಿನದ ಕನಸು

To prevent automated spam submissions leave this field empty.

1997ರಲ್ಲೇ ಜಿಲ್ಲೆಯಾಗಬೇಕೆಂಬ ಕೂಗು ಕೇಳಿಬಂದಿದ್ದರೂ, ಯಾದಗಿರಿ ’ಗುಡ್ಡ’ಕ್ಕೆ ಜಿಲ್ಲೆಯ ಮೆರಗು ಸಿಕ್ಕಿದ್ದು ಮತ್ತೊಂದು ದಶಕದ ನಂತರವೇ. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಯೋಚನೆ ಸರ್ಕಾರಕ್ಕೆ ಬಂದಾಗ, ಗೋಕಾಕ ಮತ್ತು ಚಿಕ್ಕೋಡಿಯ ಜನರು ರೊಚ್ಚಿಗೆದ್ದು ತಮ್ಮ ನಗರವೇ ಜಿಲ್ಲೆಯಾಗಬೇಕೆಂಬ ಹಠ ಹಿಡಿದರು. ಪರಿಣಾಮವಾಗಿ, ಬೆಳಗಾವಿ ಇನ್ನೂ ಹಾಗೆಯೇ ಇದೆ. ಅಂತಹದೇ ಬಿಸಿ ಗಾಳಿ ಗುಲ್ಬರ್ಗ ಜಿಲ್ಲೆಯಲ್ಲೂ ಬೀಸಿದಾಗ, ಯಾದಗಿರಿ ಮತ್ತು ಶಹಪೂರ ತಾಲ್ಲೂಕುಗಳೂ ಜಿಲ್ಲೆಯ ಸ್ಥಾನಕ್ಕಾಗಿ ಸೆಣೆಸಿದವು. ಹಲವು ವರ್ಷಗಳ ಮಾತಿನ ಚಕಮಕಿಯ ನಂತರ ಕೊನೆಗೆ ನಕ್ಕಿದ್ದು ಯಾದಗಿರಿ ಗುಡ್ಡ.

ಯಾದಗಿರಿ, ಒಂದು ಜಿಲ್ಲೆಗೆ ಬೇಕಾದ ಎಲ್ಲ ಅರ್ಹತೆಗಳಿರುವಂತಹ ನಗರ. ಖರ್ಗೆಯವರಂತಹ ಧುರೀಣರ ರಾಜಕೀಯ ಬೆಂಬಲ ಪಡೆದಂತಹ ನಗರ. ಸೆಪ್ಟೆಂಬರ್ 26, 2009ರಂದು ಗುಲ್ಬರ್ಗಾದಲ್ಲಿ ಜುರುಗಿದ ಐತಿಹಾಸಿಕ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿಗಳು ಯಾದಗಿರಿ ನೂತನ ಜಿಲ್ಲೆಯನ್ನಾಗಿ ಅಸ್ತಿತ್ವಕ್ಕೆ ಬರಲಿದೆ ಎಂದು ಘೋಷಿಸಿದರು (ಈ ಘೋಷಣೆಯಿಂದ ಪಕ್ಕದ ಶಹಪೂರದಲ್ಲಿ ಆಗಬಹುದಾದ ಗಲಭೆಯನ್ನು ತಡೆಯಲು ಆಗಲೇ ಅಗತ್ಯವಾದ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು!). ಅಕ್ಟೋಬರ 31ರಂದೇ ಜಾರಿಗೆ ಬರಬೇಕಾಗಿದ್ದ ಜಿಲ್ಲೆಯ ಸ್ಥಾನ, ನೆರೆಯ ಹಾವಳಿಯಿಂದ ಮುಂದೂಡಲ್ಪಟ್ಟಿತು. ಬಹಳಷ್ಟು ಜನ ಜಿಲ್ಲೆಯ ಸ್ಥಾನ ಮತ್ತಷ್ಟು ದೂರ ಹೋಯಿತು ಎಂದೇ ತಿಳಿದಿದ್ದರು. ಕೇಂದ್ರ ಜನಗಣತಿ ಇಲಾಖೆಯು ಗಣತಿ ಕಾರ್ಯ ಕೈಗೊಳ್ಳಲಿರುವ ಕಾರಣ ಈ ತಿಂಗಳ 31ರ ನಂತರ ಕಂದಾಯ ಗ್ರಾಮ, ತಾಲ್ಲೂಕು, ಉಪವಿಭಾಗ ಹಾಗೂ ಜಿಲ್ಲೆಯ ಗಡಿಗಳನ್ನು ಬದಲಿಸಲು ಬರುವುದಿಲ್ಲ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು, ಡಿಸೆಂಬರ್ 30ರ ಒಳಗೆ ಯಾದಗಿರಿಯನ್ನು ಜಿಲ್ಲೆಯನ್ನಾಗಿ ಮಾಡುವ ಧೃಡ ನಿರ್ಧಾರವನ್ನು ಮಾಡಿದ್ದಾರೆ [ಪ್ರಜಾ ವಾಣಿ]. ಅದಲ್ಲದೇ ಜ್ಯೋತಿಷಿಗಳು "ಡಿಸೆಂಬರ್ 30, ಬಧವಾರ, ತ್ರಯೋದಶಿ, ರೋಹಿಣಿ ನಕ್ಷತ್ರವಿದ್ದು, ಬೆಳಗಿ ಜಾವ, ಅಂದರೆ, 5.30ರಿಂದ  11ಗಂಟೆಯವರೆಗಿನ ಮಹೂರ್ತ ಒಳ್ಳೆಯದಿದ್ದು, ಈ ಸಮಯದಲ್ಲಿ ಕೈಗೊಂಡ ನಿರ್ಧಾರಗಳು ಬಹಳ ಕಾಲ ಬಾಳುತ್ತವೆ" ಎಂದು (ಜ್ಸೋತಿಷಿ ಚನ್ನಬಯ್ಯ ಸ್ವಾಮಿಗಳು) ಹೇಳಿರುವುದು ಯಡಿಯೂರಪ್ಪನವರಿಗೆ ಯಾದಗಿರಿಯನ್ನು ಜಿಲ್ಲೆಯಾಗಿ ಘೋಷಿಸಲು ಮತ್ತಷ್ಟು ಸ್ಪೂರ್ತಿಯನ್ನು ಕೊಟ್ಟಿರಬೇಕು!!

ಗುಲ್ಬರ್ಗಾ ಜಿಲ್ಲೆಯ ವಿಭಜನೆಗೆ ಸಂಭಂಧಿಸಿದಂತೆ ಹಲವು ಬಗೆಹರಿಯದ ವಿಷಯಗಳಿವೆ. "ಯಾದಗಿರಿ ಓಕೆ, ಮೂರೇ ತಾಲ್ಲೂಕು ಸಾಕೇ?[ಕನ್ನಡ ಪ್ರಭ]" ಎಂಬ ಪ್ರಶ್ನೆಯಾಗಲಿ, ಹೊಸ ಜಿಲ್ಲೆಯೊಂದಕ್ಕೆ ಬೇಕಾದ ಕಛೇರಿ-ಕಟ್ಟಡಗಳ ಬೇಡಿಕೆಗಳಾಗಲಿ [ವರದಿ], ಸೂಕ್ತ ಹಣಕಾಸಿನ ಬೆಂಬಲ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ಕೂಲಂಕುಷವಾಗಿ ವಿಚಾರ ವಿಮರ್ಶೆ ಮಾಡಬೇಕಾಗಿದೆ. ಜನಗಣತಿಯ ಕಾರ್ಯ ಶುರುವಾಗುವ ಮೊದಲೇ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಅವಸರದಿಂದ ಇತ್ಯರ್ಥವಾಗದಿರುವ ವಿಷಯಗಳನ್ನು ಬಗೆಹರಿಸದಿದ್ದರೆ, ಜ್ಸೋತಿಷಿ ಚನ್ನಬಯ್ಯ ಸ್ವಾಮಿಯವರ ಭವಿಷ್ಯವಾಣಿ ಹುಸಿಯಾಗುವ ಸಾಧ್ಯತೆಗಳೇ ಹೆಚ್ಚು! ಒಂದು ಹಿಂದುಳಿದ ಜಿಲ್ಲೆ ಮುಂದೆ ಬರಬೇಕಾದರೆ ಅದಕ್ಕೆ ಎಲ್ಲಾ ರೀತಿಯ ಸಹಾಯ ಅತ್ಯವಶ್ಯಕ. ಇಂದಿರುವ ಮತ್ತು ಮುಂದೆ ಬರುವ ಸರಕಾರಗಳು ಇದನ್ನು ಗಮನದಲ್ಲಿಟ್ಟು, ಅಗತ್ಯಬಿದ್ದಾಗಲೆಲ್ಲಾ ಸೂಕ್ತ ಸಹಾಯ ಒದಗಿಸಿದಾಗ ಮಾತ್ರ ಹೊಸ ಜಿಲ್ಲೆಗೊಂದು ಅರ್ಥವಿರುತ್ತದೆ.

ಅದೇನೆ ಇರಲಿ, ವಿಧ್ಯರ್ಥಿ ಜೀವನದ ಸುಮಾರು ಐದು ವರ್ಷಗಳನ್ನು ಯಾದಗಿರಿಯಲ್ಲೇ ಕಳೆದ ನನಗೆ, ಅದು ಜಿಲ್ಲೆಯಾಗುತ್ತಿರುವುದೊಂದು ಸಂತಸದ ಸಂಗತಿ. ಕೊನೆಗೂ ಜಿಲ್ಲಾ ಸ್ಥಳದಲ್ಲಿ ಹೈ ಸ್ಕೂಲ್ ಮುಗಿಸಿದೆನಲ್ಲ ಎಂಬ ಹಗ್ಗಳಿಕೆ! ಮೊದಲ ಬಾರಿ ಯಾದಗಿರಿಯ ಹೆಸರು ಕೇಳಿದಾಗ ಅದೊಂದು ವಿಚಿತ್ರವಾದ ಹೆಸರಾಗಿ ಕಂಡಿತ್ತು. ಕೆಲವರು ಯಾದ್ಗಿರ್ (Yadgir) ಎಂದು, ಇನ್ನು ಕೆಲವರು ಯಾದಗಿರಿ, ಯಾದ್ಗೀರ್, ಯಾದಗಿರ್ ಎಂತಲೋ ಕರೆಯುತ್ತಿದ್ದರು. ಯಾದಗಿರಿ ಎಂಬ ಹೆಸರಾದರು ಎಲ್ಲಿಂದ ಬಂತು? ನನಗೆ ಸಿಕ್ಕ ಉತ್ತರಗಳ ಪ್ರಕಾರ, ಹಿಂದೆ ಈ ಪ್ರದೇಶವನ್ನು "ಯಾದವ" ಎಂಬ ರಾಜವಂಶ ಆಳುತ್ತಿತ್ತಂತೆ. "ಯಾದವರ" ಪ್ರಭಾವದಿಂದ ಮತ್ತು ಯದಗಿರಿಯಲ್ಲಿ ಒಂದು (ಭವ್ಯವಾದ?) ಗುಡ್ಡ ಇರುವುದರಿಂದ, ಈ ಊರಿಗೆ "ಯಾದವರ ಗಿರಿ" [ಗಿರಿ=ಗುಡ್ದ=ಬೆಟ್ಟ] ಎಂದು ಕರೆಯಲು ಪ್ರಾರಂಭವಾಯಿತಂತೆ. ನಂತರ ಅದು, ’ಯಾದವನ ಗಿರಿ’ ->”ಯಾದವ ಗಿರಿ’ -> ’ಯಾದಗಿರಿ’ -> ”ಯಾದ್ಗೀರ್’ (Yadgir) ಎಂದು ಸರಳೀಕೃತಗೊಂಡಿದೆ.

ಯಾದಗಿರಿಯಿಂದ ಕೇವಲ 17 ಕಿ.ಮೀ. ದೂರದಲ್ಲಿ ಮೈಲಾಪುರವಿದೆ. ಅಲ್ಲಿಯ ಮೈಲಾರಲಿಂಗ ದೇವರ ಜಾತ್ರೆ ತುಂಬಾ ಪ್ರಸಿದ್ಧವಾದದ್ದು. "ಹೆಬ್ಬಂಡೆಗಳು, ಸಾಲು ಬೆಟ್ಟಗಳು, ದೈತ್ಯಾಕರದ ಮರಗಳು, ಇವುಗಳ ನಡುವೆಯೇ ಮೈಲಾರಲಿಂಗನ ಜಾತ್ರೆ." ಜಾತ್ರೆಯಲ್ಲಿ "ಏಳ್ ಕೋಟಿ ಏಳ್ ಕೋಟಿಗೆ" ಎನ್ನುವ ಜೈಕಾರ ಸರ್ವೇ ಸಾಮನ್ಯ! ಒಮ್ಮೆ ಜಾತ್ರೆಗೆ ಹೋದಾಗ ನನಗೆ ಸಿಕ್ಕ ಅನುಭವ ಅಪೂರ್ವವಾದದ್ದು. ಅಲ್ಲಿನ ಜನರ ಜಾನಪದ ಬದುಕು, ಮೂಢ ಭಕ್ತಿ, ಶ್ರಧ್ಧೆ, ಜಾತ್ರೆಯಲ್ಲಿ ನಾನು ಕಲಿತ ಜೀವನದ ಪಾಠಗಳು, ಮೈಲಾರ ದೇವರ ಇತಿಹಾಸ, ಇತ್ಯಾದಿ ವಿಷಯಗಳಿಗೆ ಸಂಭಂದಿಸಿದಂತೆ ನನ್ನ ಅನಿಸಿಕೆಗಳನ್ನು ಬರದಿದ್ದೇನೆ, ನೋಡಿ: ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ-೧, ಭಾಗ-೨, ಭಾಗ-೩, ಭಾಗ-೪, The End!. ಮೈಲಾಪುರ ಜಾತ್ರೆಯ ಚಿತ್ರಗಳು ಇಲ್ಲಿವೆ.

ಗುರುಮಠಕಲ್ ಯಾದಗಿರಿಗ ಹತ್ತಿರವಿರುವ ಪಟ್ಟಣ. ನಮ್ಮ ರಾಜ್ಯದ ರಾಜಕೀಯ ಧುರೀಣರಾದ ಮಲ್ಲಿಕಾರ್ಜುನ್ ಖರ್ಗೆಯವರ ವಿಧಾನ ಸಭಾ ಕ್ಷೇತ್ರ. ಅದು ತಾಲ್ಲೂಕು ಅಲ್ಲದೇ ಹೋದರೂ, ಖರ್ಗೆಯವರ ’ಕೃಪೆಯಿಂದ’ ಪ್ರಗತಿಪರ,  ಅಭಿವೃದ್ಧಿ ಹೊಂದಿದ ಪಟ್ಟಣವಾಗಿದೆ. ಅಲ್ಲಿರುವ ರಸ್ತೆಗಳು ಯಾದಗಿರಿಯ ರಸ್ತೆಗಳಿಗಿಂತ ಎಷ್ಟೋ ಉತ್ತಮ. ಗುರುಮಠಕಲ್ ಪಟ್ಟಣದ ಸುತ್ತಮುತ್ತ ನೀರಿನ ತಾಣವಿಲ್ಲದಿದ್ದರೂ ಹತ್ತಾರು ಕಿ.ಮೀ. ದೂರದಿಂದ ನೀರು ಸರಬರಾಜುಗೊಳ್ಳುತ್ತದೆ. ಅಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಪ್ರಥಮ ದರ್ಜೆ ಕಾಲೇಜಿನ ವರೆಗೆ ವಿದ್ಯಾಭ್ಯಾಸದ ಅನುಕೂಲವಿದೆ. ಇಡೀ ಗುಲ್ಬರ್ಗಾ (ಮತ್ತು ಯಾದಗಿರಿ) ಜಿಲ್ಲೆಯಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿದ ಪಟ್ಟಣವೆಂದರೆ ಗುರುಮಠಕಲ್! ಖರ್ಗೆಯವರ ಉತ್ತಮ ಕೆಲಸ ಕಾರ್ಯಗಳಿಗೆ ಗುರುಮಠಕಲ್ ಒಂದು ಕೈಗನ್ನಡಿಯಂತಿದೆ. ಶೀಘ್ರದಲ್ಲೇ ಗುರುಮಠಕಲ್ ಸಹ ತಾಲ್ಲೂಕು ಆಗುವುದು ಸ್ಪಷ್ಟವಾಗಿದೆ.

"ಚಿಕ್ಕ ಜಿಲ್ಲೆ ಉತ್ತಮ ಆಡಳಿತಕ್ಕೆ ಮಾರ್ಗ. ಒಂದು ಚಿಕ್ಕ ಜಿಲ್ಲೆಗೆ ಒಬ್ಬ ಜಿಲ್ಲಾಧಿಕಾರಿ, ಒಬ್ಬ ಎಸ್ಪಿ, ಮತ್ತಿತರ ಅಧಿಕಾರಿಗಳಿರುವುದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆ" ಎಂಬ ಯಡಿಯೂರಪ್ಪನವರ ಅಭಿಪ್ರಾಯ ಯಾದಗಿರಿಯ ಮಟ್ಟಿಗೆ ಎಷ್ಟು ನಿಜವೆಂಬುದನ್ನು ಕಾದು ನೋಡಬೇಕು.

ಯಾದಗಿರಿಯ ಕೆಲವು ಚಿತ್ರಗಳು:

  

ಯಾದಗಿರಿ ಗುಡ್ಡದ ಮೇಲಿಂದ ಕಂಡ ನೋಟ

 

ಗುಡ್ಡದ ಮೇಲಿಂದ ಕಾಣುವ ಕೆರೆ ಮತ್ತು ಭೀಮಾ ನದಿ

   

                 ತೋಪು


            ನಮ್ಮ ಶಾಲೆ ("ನ್ಯೂ ಕನ್ನಡ")

            ಯಾದಗಿರಿ ಗುಡ್ಡ

 

                  ಸೂರ್ಯಾಸ್ತ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತುಂಬ ಸೊಗಸಾದ ಲೇಖನ ಬರೆದಿದ್ದೀರಿ ಮಂಜುನಾಥ್‌. ನಿಮ್ಮ ಲೇಖನ ಓದುತ್ತ ಓದುತ್ತ ನನಗೆ ಕೊಪ್ಪಳ ಜಿಲ್ಲೆಯಾಗಿದ್ದು ನೆನಪಾಯ್ತು. ಸಣ್ಣ ತಾಲ್ಲೂಕಾಗಿದ್ದ ಕೊಪ್ಪಳ ಜಿಲ್ಲೆಯಾದ ನಂತರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅಂಥ ಸಾಧ್ಯತೆ ಯಾದಗಿರಿಗೂ ಇದೆ. ಸಾಮ್ಯತೆ ದೃಷ್ಟಿಯಿಂದಲೂ ಯಾದಗಿರಿ ಮತ್ತು ಕೊಪ್ಪಳ ಒಂದೇ ರೀತಿ ಇವೆ. ಗುಡ್ಡ, ನದಿ, ಕೆರೆ ಎಲ್ಲವೂ ಡಿಟ್ಟೋ. ಸಾಕಷ್ಟು ಮಾಹಿತಿ ಸೇರಿಸಿದ್ದೀರಿ. ಉತ್ತಮ ಚಿತ್ರಗಳನ್ನು ನೀಡಿದ್ದೀರಿ. ಹೊಸ ಜಿಲ್ಲೆಯ ವಿಶೇಷತೆಗಳ ಬಗ್ಗೆ ಹೀಗೇ ಬರೆಯುತ್ತಿರಿ. ಕಡೇ ಪಕ್ಷ ಯಾದಗಿರಿ ಎಂಬುದು ಕರ್ನಾಟಕದಲ್ಲಿ ಇದೆ ಎಂಬುದಾದರೂ ಕೆಲ ಜನರಿಗೆ ಗೊತ್ತಾಗಲಿ.

ತುಂಬಾ ಒಳ್ಳೇ ಬರಹ ...ನನ್ನೂರಾದ ಯಾದಗಿರಿ ಬಗ್ಗೆ ಚೆನ್ನಾಗೇ ಬರ್ದಿದ್ದೀರಿ.. ಹತ್ತು ಹನ್ನೆರಡು ವರ್ಷಗಳ ನಿರೀಕ್ಷೇಯ ನಂತರ ಅಂತೂ ಕೊನೆಗೆ ಕಾಲ ಕೂಡಿ ಬಂದಿದೆ ... ಜಿಲ್ಲೆಯಿಂದ ಎಷ್ಟು ಬೆಳವಣಿಗೆ ಆಗುತ್ತೋ ಗೊತ್ತಿಲ್ಲ ಆದ್ರೂ ಸ್ವಲ್ಪ ಅಂತ್ರೂ ಆಗೆ ಆಗುತ್ತೆ ... ಫೋಟೊಗಳೂ ಚೆನ್ನಾಗಿವೆ...