ಡಬ್ಬಾ ಕ್ಯಾಮೆರಾದಲ್ಲಿ ಸೂರ್ಯಗ್ರಹಣ

To prevent automated spam submissions leave this field empty.

’ತಿಂಡಿ ತಿನ್ನುವುದಾದರೆ ಹನ್ನೊಂದು ಗಂಟೆ ಒಳಗೆ ತಿನ್ನಿ. ಊಟ ಮಾಡುವುದಾದರೆ ಮಧ್ಯಾಹ್ನ ನಾಲ್ಕರ ನಂತರ ಮಾತ್ರ’ ಎಂದು ಮಡದಿ ಫರ್ಮಾನು ಹೊರಡಿಸಿದಾಗಲೇ ನನ್ನ ಹೊಟ್ಟೆಗೆ ಗ್ರಹಣ ಹಿಡಿದಾಗಿತ್ತು. ಅವಸರದಲ್ಲಿ ತಿಂಡಿ ತಿನ್ನುವ ಹೊತ್ತಿಗೆ ಹೊರಗೆ ಗ್ರಹಣ ಶುರುವಾಗಿತ್ತು. ಮಡದಿ ಟಿವಿ ಮುಂದೆ ಪ್ರತಿಷ್ಠಾಪಿತಳಾಗುವ ಹೊತ್ತಿಗೆ, ಹಳೆಯ ಎಕ್ಸ್‌ರೇ ಫಿಲಂ ಹಾಗೂ ಡಬ್ಬಾ ಕ್ಯಾಮೆರಾ ಹಿಡಿದು ನಾನು ಬೀದಿಯಲ್ಲಿ ನಿಂತಿದ್ದೆ. ಅಕ್ಷರಶಃ ಒಂಟಿಯಾಗಿ!

ಬೀದಿಯಲ್ಲಿ ನಾನೆಂಬ ಒಂದೇ ಒಂದು ನರಪಿಳ್ಳೆ ಇರಲಿಲ್ಲ!

ಬೀದಿ ನಾಯಿಗಳೂ ಮುಖ ಮರೆಸಿಕೊಂಡಿದ್ದವು. ರಜೆ ಇದ್ದಾಗೆಲ್ಲ ಕಲರವ ತುಂಬಿಸಿರುತ್ತಿದ್ದ ಬೀದಿಗಳು ಬಿಕೋ ಎನ್ನುತ್ತಿದ್ದವು. ಒಂದೆರಡು ಮನೆಗಳಿಂದ ಟಿವಿ ಹಾಗೂ ಜ್ಯೋತಿಷಿಗಳ ಏರು ದನಿಯ ಎಚ್ಚರಿಕೆಗಳು ಮಸುಕಾಗಿ ಕೇಳಿ ಬರುತ್ತಿದ್ದುದು ಬಿಟ್ಟರೆ, ಸದ್ದು ಕೂಡ ಅಷ್ಟಕ್ಕಷ್ಟೇ.

ಎಕ್ಸ್‌ರೇ ಫಿಲಂನಲ್ಲಿ ಸೂರ್ಯಗ್ರಹಣದ ದೃಶ್ಯ ಚೆನ್ನಾಗಿಯೇ ಕಾಣುತ್ತಿತ್ತು. ಆದರೆ, ಕ್ಯಾಮೆರಾ ಹಿಡಿಯುತ್ತಲೇ ಕಾಣುತ್ತಿದ್ದುದು ಬರೀ ಬೆಳಕು. ಫೊಟೊ ತೆಗೆಯುವುದು ಹೇಗೆ? ಎಕ್ಸ್‌ರೇ ಫಿಲಮನ್ನೇ ಕ್ಯಾಮೆರಾ ಲೆನ್ಸ್‌ಗೆ ಅಡ್ಡ ಹಿಡಿದರೆ ಕಾಣುತ್ತಿದ್ದುದು ಮಂಕು ಚಿತ್ರ ಮಾತ್ರ. ಅದರಲ್ಲಿ ಸೂರ್ಯನನ್ನು ಹುಡುಕಬೇಕಿತ್ತು.

ಮೋಡ ಅಡ್ಡ ಬಂದಾಗೆಲ್ಲ ಕುರುಡಾಗಿ ಕ್ಲಿಕ್ಕಿಸುತ್ತ, ಮೋಡ ತಿಳಿಯಾದಾಗ, ಫಿಲಂ ಅಡ್ಡ ಹಿಡಿಯುತ್ತ ಒಂದಿಷ್ಟು ಫೊಟೊಗಳನ್ನು ತೆಗೆದಾಯ್ತು. ’ಅಯ್ಯೋ, ಅಷ್ಟ್ಯಾಕೆ ಕಷ್ಟಪಡ್ತೀರಿ. ಇಂಟರ್‌ನೆಟ್‌ನಲ್ಲಿ ಫೋಟೊಗಳು ಸಿಕ್ತವೆ’ ಎಂದು ಮಡದಿ ಕರೆದರೂ ಕೇಳಿಸದೇ, ಡಬ್ಬಾ ಕ್ಯಾಮೆರಾದಲ್ಲಿ ಫೊಟೊ ತೆಗೆದೇ ಸಿದ್ಧ ಎಂದು ಹಠ ಮುಂದುವರಿಸಿದೆ.

ಗ್ರಹಣ ತನ್ನ ಗರಿಷ್ಠ ಮಟ್ಟ ತಲುಪುವವರೆಗೆ ಫೊಟೊ ತೆಗೆದಿದ್ದೇ ಲಾಭ. ಆಮೇಲೆ ಮೋಡಗಳು ಮಾಯವಾದವು. ಎಲ್ಲೆಡೆ ಮಂಕು ಬೆಳಕು. ಗೃಹಮಂತ್ರಿಯ ಎಚ್ಚರಿಕೆ ಮೀರಿ ಒಂದಿಷ್ಟು ಬಿಸ್ಕಿಟ್‌ ಕಬಳಿಸಿ, ನೀರು ಕುಡಿದು, ನಿಯಮ ಮುರಿದ ಹೆಮ್ಮೆಯಲ್ಲಿ ಮತ್ತೆ ಮುಗಿಲಿಗೆ ಮುಖವೊಡ್ಡಿದೆ. ಎಕ್ಸ್‌ರೇ ಫಿಲಂನೊಳಗಿಂದ ಸೂರ್ಯಗ್ರಹಣದ ಸೊಗಸನ್ನು ಆಸ್ವಾದಿಸುತ್ತ ಇಡೀ ಮಧ್ಯಾಹ್ನ ಖಾಲಿ ಬೀದಿಯಲ್ಲಿ ಒಂಟಿಯಾಗಿ ಓಡಾಡಿದೆ.

ನಡುನಡುವೆ ಕುತೂಹಲ ತಾಳದೇ ಮಡದಿಯೂ ಎಕ್ಸ್‌ರೇ ಫಿಲಂ ಕಸಿದು ಗ್ರಹಣ ದಿಟ್ಟಿಸಿದ್ದೂ ಆಯ್ತು. ’ಏಕೋ ಕಣ್ಣು ಒಂಥರಾ ಮಂಜಾಗ್ತಿವೆ’ ಎಂದು ಆಕೆ ಗಾಬರಿಪಟ್ಟಳಾದರೂ ನಾನು ಕ್ಯಾರೇ ಅನ್ನಲಿಲ್ಲ. ಗ್ರಹಣ ಮನಸ್ಸಿಗೆ ಹಿಡಿದರೆ ಹಾಗಾಗುತ್ತೆ ಎಂದು ಉಡಾಫೆ ಮಾತಾಡಿದೆ. ಬಹುಶಃ ನನ್ನ ಮಾತು ಗುರಿ ಮುಟ್ಟಿರಬೇಕು. ಆಮೇಲೆ ಆಕೆಯ ಕಣ್ಣುಗಳು ಮಂಜಾದಂತೆ ಕಾಣಲಿಲ್ಲ.

ಸಂಜೆ ಕೂತು, ಫೊಟೊಗಳನ್ನು ಡೌನ್‌ಲೋಡ್‌ ಮಾಡಿ ನೋಡಿದರೆ ಖುಷಿಯಾಯ್ತು. ಆರೇಳು ಫೋಟೊಗಳು ಪರವಾಗಿಲ್ಲ ಎನ್ನುವಂತೆ ಬಂದಿದ್ದವು. ಗ್ರಹಣವನ್ನು ಇತರರು ಎಷ್ಟೇ ಚೆನ್ನಾಗಿ ತೆಗೆದಿರಬಹುದು. ಆದರೆ, ನನ್ನ ಡಬ್ಬಾ ಕ್ಯಾಮೆರಾದಲ್ಲಿ ಹಿಡಿದ ಫೊಟೊಗಳು ಕೊಟ್ಟ ಖುಷಿಯೇ ಖುಷಿ. ನಾನು ಐದು ಅಥವಾ ಆರನೇ ತರಗತಿಯಲ್ಲಿ ಇದ್ದಾಗ ಊರಲ್ಲಿ ಬರಿಗಣ್ಣಲ್ಲಿ ನೋಡಿದ ಖಗ್ರಾಸ ಸೂರ್ಯಗ್ರಹಣ ಹಾಗೂ ೧೯೯೫ರಲ್ಲಿ (ಬಹುಶಃ) ಬೆಂಗಳೂರಿನಲ್ಲಿ ನೋಡಿದ ಇಂಥದೇ ಇನ್ನೊಂದು ಗ್ರಹಣದ ನೆನಪು ಬಂದಿತು.

ಅವತ್ತಿಗೂ ಇವತ್ತಿಗೂ ಬದಲಾಗದ ಒಂದಂಶವೆಂದರೆ, ಈಗಿನಂತೆ ಆಗಲೂ ಬಹುತೇಕ ಜನ ಗ್ರಹಣ ನೋಡದೇ ಮನೆ ಒಳಗೇ ಇದ್ದುದು. ಗ್ರಹಣವೇನೋ ಸ್ವಲ್ಪ ಸಮಯದ ನಂತರ ಬಿಡುತ್ತದೆ. ಆದರೆ, ಜನರ ಮನಸ್ಸಿಗೆ ಕವಿದ ಗ್ರಹಣ ಮಾತ್ರ ಬಿಡಲು ನಮ್ಮ ಜೀವಿತಾವಧಿ ಸಾಕಾಗಲಿಕ್ಕಿಲ್ಲ ಅಂತ ಅಂದುಕೊಳ್ಳುತ್ತ ಫೊಟೊ ಅಪ್‌ಲೋಡ್‌ ಮಾಡಿದೆ.

- ಚಾಮರಾಜ ಸವಡಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಯಾರೋ ನಿರ್ಮಿಸಿದ ಹೆದ್ದಾರಿಗಿಂತ, ನಾವೇ ನಿರ್ಮಿಸಿಕೊಂಡ ಕಾಲುಹಾದಿ ಆಪ್ಯಾಯಮಾನ ಅಲ್ಲವೇ ಸಾಲಿಮಠರೇ. ಅಂತೂ ನನ್ನ ಶ್ರೀಮತಿ ಬೆಂಬಲಕ್ಕೆ ಬುದ್ಧಿಜೀವಿಗಳೇ ಸಿಕ್ಕಂತಾಯ್ತು :)

ಗ್ರಹಣ ಸೂರ್ಯನಿಗೆ ಮಾತ್ರ ಎಂದುಕೊಂಡಿದ್ದೆ! ಬುದ್ದಿಗೂ ಹಿಡಿಯುತ್ತೆ ಅಂತ ನಿಮ್ಮನ್ನು ನೋಡಿ ಗೊತ್ತಾಯಿತು! ನನಗೆ "ಬುದ್ದಿಜೀವಿ" ಅನ್ನೋ ಸರ್ಟಿಫಿಕೇಟ್ ಕೊಡುವ ಹಿರಿತನ ತಮಗೆ ಬೇಕಿತ್ತೇ? ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆ ನೀಡಿ ಕೊಚ್ಚೆ ಮೇಲೆ ಕಲ್ಲೆಸೆಯುವ risk ನನಗೆ ಬೇಕಿತ್ತೇ?

ಡಬ್ಬ ಕೆಮೆರಾದಲ್ಲೇ ಇಷ್ಟು ಸುಂದರವಾಗಿ ಚಿತ್ರ ತೆಗೆದ ನಿಮಗೆ, ಎಸ್ ಎಲ್ ಆರ್ ಕೊಟ್ಟಿದ್ರೆ ಏನ್ ಮಾಡ್ತಿದ್ರಿ? <<ಅವತ್ತಿಗೂ ಇವತ್ತಿಗೂ ಬದಲಾಗದ ಒಂದಂಶವೆಂದರೆ, ಈಗಿನಂತೆ ಆಗಲೂ ಬಹುತೇಕ ಜನ ಗ್ರಹಣ ನೋಡದೇ ಮನೆ ಒಳಗೇ ಇದ್ದುದು. ಗ್ರಹಣವೇನೋ ಸ್ವಲ್ಪ ಸಮಯದ ನಂತರ ಬಿಡುತ್ತದೆ. ಆದರೆ, ಜನರ ಮನಸ್ಸಿಗೆ ಕವಿದ ಗ್ರಹಣ ಮಾತ್ರ ಬಿಡಲು ನಮ್ಮ ಜೀವಿತಾವಧಿ ಸಾಕಾಗಲಿಕ್ಕಿಲ್ಲ. >> ಗ್ರಹಣ ಸಮಯದಲ್ಲಿ ಹಾನಿಕಾರಕ ವಿಕಿರಣ ಪ್ರಸರಣವಾಗುವುದು ವೈಜ್ಞಾನಿಕವಾಗಿಯೂ ಒಪ್ಪಿಕೊಳ್ಳಲಾಗಿದೆ. ಧೂಮಪಾನದಿಂದ ಆರೋಗ್ಯಕ್ಕೆ ಹಾನಿ ಎಂದೂ ವೈಜ್ಞಾನಿಕವಾಗಿಯೂ ಒಪ್ಪಿಕೊಳ್ಳಲಾಗಿದೆ ಎಂದಾಗ. ಇದಕ್ಕುತ್ತರವಾಗಿ, ಧೂಮಪಾನ ಮಾಡಿಯೂ ಆರೋಗ್ಯವಾಗಿರುವ ೮೦ ವರ್ಷ ಮೀರಿದ ಮುದುಕರನ್ನು ತೋರಿಸುತ್ತಾರೆ ನನ್ನ ಗೆಳೆಯರು. ಇದಕ್ಕುತ್ತರವಾಗಿ ಒಂದು ಸುಂದರ ಹೂನಗೆಯನ್ನು ಬೀರಿ ಸುಮ್ಮನಾಗುತ್ತೇನೆ, ಯಾಕಂದರೆ, ಧೂಮಪಾನಕ್ಕಿಂತಲೂ ಗೆಳೆಯರು ಮುಖ್ಯ ನನಗೆ :)

<< ಡಬ್ಬ ಕೆಮೆರಾದಲ್ಲೇ ಇಷ್ಟು ಸುಂದರವಾಗಿ ಚಿತ್ರ ತೆಗೆದ ನಿಮಗೆ, ಎಸ್ ಎಲ್ ಆರ್ ಕೊಟ್ಟಿದ್ರೆ ಏನ್ ಮಾಡ್ತಿದ್ರಿ? >> ಚಿಂದಿ ಉಡಾಯಿಸ್ತಿದ್ದೆ ಅನಿಸುತ್ತೆ ಸೋಮಯಾಜಿಯವರೇ. :) ನಿಜ, ಗ್ರಹಣ ಸಮಯದಲ್ಲಿ ಹಾನಿಕಾರಕ ಅತಿನೇರಳೆ ಕಿರಣಗಳ ಚಟುವಟಿಕೆ ಹೆಚ್ಚು. ಆದರೆ, ಜನ ಭಯಬೀಳುತ್ತಿರುವುದು ಆ ಕಾರಣಕ್ಕಾಗಿ ಅಲ್ಲ ಎನ್ನುವುದೇ ವಿಷಾದದ ಸಂಗತಿ. ಅಪಾಯವಾಗದಂತೆ ವೀಕ್ಷಣೆ ಸಾಧ್ಯವಿರುವಾಗ, ಈ ಒಂದು ಕಾರಣಕ್ಕಾಗಿ ಇಡೀ ಗ್ರಹಣವನ್ನೇ ಭಯ, ಅನುಮಾನದಿಂದ ನೋಡುವ ವಿಷಯ ನನಗೆ ಬೇಸರ ಉಂಟು ಮಾಡಿದೆ. ಅಲ್ಪಸ್ವಲ್ಪ ಉಲ್ಲಂಘನೆಯಿಂದ ಅಂಥ ಅಪಾಯವಾಗುವುದಿಲ್ಲ. ಆದರೆ, ಆ ಕಾರಣ ಮುಂದೊಡ್ಡಿ ಇಡೀ ಪ್ರಕ್ರಿಯೆಯನ್ನೇ ನಿರಾಕರಿಸುವುದು ಬಹಳ ಅಪಾಯಕಾರಿ ಅನಿಸುತ್ತದೆ.

camera ಅಂದ್ರೇನೆ ಡಬ್ಬ, ಇನ್ನು ಡಬ್ಬಾ camera ಅಂದ್ರೆ ಹೇಗೆ :) ತಮಾಷೆಗೆ ಹೇಳಿದೆ. ಚಿತ್ರಗಳು ಚೆನ್ನಾಗಿವೆ. ನಿಮ್ಮ ಮನೆಯವರ ಕಣ್ಣುಗಳಿಗೆ ತೊಂದರೆ ಏನೂ ಆಗಿಲ್ಲ ತಾನೆ? ಒಂದೊಂದ್ಸಾರಿ x-ray film ಸಾಲೋದಿಲ್ಲ. ಕಣ್ಣಿಗೆ retinal damage ಆದರೆ ರಿಪೇರಿ ಅಸಾಧ್ಯ. ವೆಂ.

ಥ್ಯಾಂಕ್ಸ್‌ ವೆಂಕಟೇಶಮೂರ್ತಿಯವರೇ, ಗ್ರಹಣವನ್ನು ನಿರಂತರವಾಗಿ ದಿಟ್ಟಿಸಿ ನೋಡಿದರೆ ಅಪಾಯವಾಗಬಹುದೇನೋ. ಆದರೆ, ಫಿಲಂ ಮೂಲಕ ನೋಡಿದ್ದರಿಂದ, ಅದೂ ಬಿಟ್ಟು ಬಿಟ್ಟು ನೋಡಿದ್ದರಿಂದ ಎಂಥ ಸಮಸ್ಯೆಯೂ ಆಗಿಲ್ಲ.

ಫ್ಲಾಪಿ ಡಿಸ್ಕ್‌ನ ಟೇಪ್‌ ಕೂಡ ಉತ್ತಮ. ಎಕ್ಸ್‌ರೇ ಫಿಲಂನ್ನು ಎರಡು ಮಡಿಕೆ ಮಾಡಿ ನೋಡಿದರೆ, ಪ್ರಖರತೆಯೂ ಕಡಿಮೆಯಾಗಿ ಕಾಣುತ್ತದೆ. ನಾನು ಒಮ್ಮೊಮ್ಮೆ ಇಳಿ ಸಂಜೆಯ ಸೂರ್ಯನನ್ನು ಹೀಗೆ ನೋಡುವುದುಂಟು.

ಸವಡಿ ಸಾರ್, ಫೋಟೋ ಚೆನ್ನಾಗಿಯೇ ಬಂದಿದೆ... :) ನಾನೂ ನಿನ್ನೆಯ ಗ್ರಹಣ ನೋಡಿದೆ. ಹಾಸ್ಟೆಲ್ ಮಹಡಿ ಮೇಲೆ ಹೋಗಿ, ಸನ್ ಗ್ಲಾಸ್, ಎಕ್ಸ್ರೇ ಶೀಟ್ ಹಿಡ್ಕೊಂಡು, ಕಂಡಾಗ ಏನೋ ಖುಷಿ ಆಯ್ತು! ನೋಡದ್ದನ್ನ ನೋಡಬಾರದ್ದನ್ನ ನೋಡಿದೆ ಅಂತ.. :) ಮನೆಲಿದ್ರೆ ನೋಡ್ಲಿಕ್ಕಾಗ್ತಿರ್ಲಿಲ್ಲ!!

ಅಂದುಕೊಂಡಿದ್ದೆ ಗ್ರಹಣದ ಫೋಟೋವನ್ನು ಸಂಪದದಲ್ಲಿ ಯಾರಾದರೂ ಹಾಕುತ್ತಾರೆ ಎಂದು. ಫೋಟೋಗಳೆಲ್ಲಾ ಚೆನ್ನಾಗಿ ಬಂದಿವೆ. ಧನ್ಯವಾದಗಳು

ಚಾಮರಾಜರೆ, ಚಿತ್ರ ಸೂಪರ್..ಆದರೂ... ಕಳೆದ ಗ್ರಹಣದ ಟೈಮಲ್ಲಿ ತೆಗೆದುಕೊಂಡ ಕನ್ನಡಕ ನನ್ನ ಬಳಿ ಇತ್ತು. ಅದನ್ನು ಹಾಕಿಕೊಂಡು ನನ್ನ ಕ್ಯಾಮರದಲ್ಲಿ ಪೋಟೋ ತೆಗೆಯಲು ಪ್ರಯತ್ನಿಸಿದೆ. ಬರೀ ಕತ್ತಲು. ಕನ್ನಡಕದ ಒಂದು ಕಣ್ಣಿಗೆ ಕ್ಯಾಮರ ಕಣ್ಣು ಇಟ್ಟು , ಬಿಡದೇ ಮೂರು ಫೋಟೋ ತೆಗೆದೆ.. ೨ ಫೋಟೋಗಳು ಚೆನ್ನಾಗಿ ಬಂದಿವೆ... ತಲೆಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳದ್ದು :( ಮನೆಯವರ ಬಳಿ-ಅದಕ್ಕಾಗಿ ಸ್ಪೆಷಲ್ ಕ್ಯಾಮರಾಗಳು ಬೇಕು, ಈ ಡಬ್ಬಾ ಕ್ಯಾಮರಾದಲ್ಲಿ ಯಾರಿಂದಲೂ ಸಾಧ್ಯವಿಲ್ಲಾ ಎಂದೆ..ನಿಮಗೆ ಕೇಳಿಸಿತಾ? ಇಲ್ಲದಿದ್ದರೆ ಡಬ್ಬಾಕ್ಯಾಮರಾ ಎಂದು ಹೆಡ್ಡಿಂಗ್ ಹಾಕಿದ್ದು ಯಾಕೆ? -ಗಣೇಶ.

<< ಕನ್ನಡಕದ ಒಂದು ಕಣ್ಣಿಗೆ ಕ್ಯಾಮರ ಕಣ್ಣು ಇಟ್ಟು , ಬಿಡದೇ ಮೂರು ಫೋಟೋ ತೆಗೆದೆ.. ೨ ಫೋಟೋಗಳು ಚೆನ್ನಾಗಿ ಬಂದಿವೆ... ತಲೆಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳದ್ದು :( >> :) ಎಕ್ಸ್‌ರೇ ಫಿಲಮನ್ನು ಕೈಗೆಟಕುವ ದೂರದಲ್ಲಿ ಇಟ್ಟು, ಕ್ಯಾಮೆರಾ ಲೆನ್ಸನ್ನು ಅದಕ್ಕೆ ಫೋಕಸ್‌ ಮಾಡಿ ತೆಗೆದೆ. ಎರಡು ಫೊಟೊಗಳು ಮೋಡ ಇದ್ದಾಗ ತೆಗೆದಿದ್ದು. ಡಬ್ಬಾ ಕ್ಯಾಮೆರಾ ಎಂಬ ಹೆಡ್ಡಿಂಗ್‌ ಹಾಕಿದ್ದರ ಉದ್ದೇಶ: ನನ್ನ ಕ್ಯಾಮೆರಾದಲ್ಲಿ ಕ್ಲಿಕ್‌ ಮಾಡಿದರೆ ಎರಡು-ಮೂರು ಸೆಕೆಂಡ್‌ ತಡವಾಗಿ ಕ್ಲಿಕ್‌ ಆಗುತ್ತದೆ. ಜಾಸ್ತಿ ಝೂಮ್‌ ಮಾಡಲಿಕ್ಕೆ ಆಗದು. ಸ್ಪಷ್ಟತೆ ಕಡಿಮೆ. ಮತ್ತೆ ಫೊಟೊ ತೆಗೆಯಲು ಪ್ರಯತ್ನಿಸಿ. ಮೋಡ ಮುಸುಕಿದಾಗ ಬೆಸ್ಟ್‌ ಸಮಯ.