ಹಲಗೆ ಹಣ್ಣು ಎಂಬ ಕಾಡುಫಲ

To prevent automated spam submissions leave this field empty.

 


 

        ಚುಮು ಚುಮು ಚಳಿಗಾಲ ಮುಗಿಯುತ್ತಾ ಬಂತು. ನಮ್ಮ ಮಲೆನಾಡಿನಲ್ಲಿ ಅಷ್ಟೇನು ಭೀಕರವಲ್ಲದ ಬೇಸಿಗೆ ಆರಂಭ. ಈ ಬೇಸಿಗೆ ಆರಂಭವಾಯಿತೆಂದರೆ ನಮ್ಮಲ್ಲಿನ ಹುಡುಗರಿಗೆ ಶಾಲೆ ಮುಗಿಯುವ ದಿವಸ. ಅಷ್ಟಾದಮೇಲೆ ರಜದಲ್ಲಿ ಗುಡ್ಡ ಸುತ್ತುವುದೇ ಕೆಲಸ. ನಗರ ಪಟ್ಟಣದ ಮಕ್ಕಳು  ಸಿನೆಮಾ ಹಾಲ್ ಗೆ ಮುತ್ತಿದ ಹಾಗೆ ನಮ್ಮಲ್ಲಿನ ಹುಡುಗರು ಗುಡ್ಡ ಮುತ್ತುತ್ತಾರೆ. ಅಲ್ಲಿದೆ ಅವಕ್ಕೆ ಮಜ. ಆ ಮಜಕ್ಕೆ ಮುಖ್ಯ ಕಾರಣ ಕಾಡು ಹಣ್ಣುಗಳು. ಪರಿಗೆ-ಮುಳ್ಳು ಹಣ್ಣು-ಕೌಳಿ ಹಣ್ಣು-ಜಾವಣಿಗೆ ಹಣ್ಣು- ಹೀಗೆ  ನಾನಾ ತರಹದ ಹಣ್ಣು ಗಳ ಖಜಾನೆ ಅಲ್ಲಿ  ಮಕ್ಕಳಿಗಾಗಿ ತೆರೆದಿರುತ್ತದೆ. ಸಿಕ್ಕಿದ್ದು  ಇವರಿಗೆ ಸಿಗದ್ದು  ಹಕ್ಕಿಗಳಿಗೆ. ಆ ಕಾಡು ಹಣ್ಣುಗಳಿಗೋ ಒಂದು ವಿಶಿಷ್ಠ ರುಚಿ. ಅತ್ತ  ಸಿಹಿಯೂ ಅಲ್ಲದ ಇತ್ತ ಹುಳಿಯೂ  ಅಲ್ಲದ ಹಣ್ಣುಗಳ ಸಂಖ್ಯೆ  ಸ್ವಲ್ಪ ಜಾಸ್ತಿ. ಅಂತಹ ಒಂದು ಅದ್ಭುತ ಹಣ್ಣುಗಳ ಪಟ್ಟಿಗೆ ಸೇರುವುದು  ಈಗ ನೀವು ಚಿತ್ರದಲ್ಲಿ ನೋಡಿದ  ಹಲಗೆ ಹಣ್ಣು.

         ಈ ಹಲಗೆ ಹಣ್ಣು (ಬೇರೆಡೆ ಬೇರೆ ಹೆಸರು ಕರೆಯಬಹುದು) ಒಮ್ಮೆ ತಿಂದರೆ  ನಿಮಗೆ ಮುಂದೆ ಆ ಹಣ್ಣು  ನೋಡಿದಾಗ, ನೋಡಿದಾಗ ಏನು,? " ಹಲಗೆ ಹಣ್ಣು " ಎಂಬ ಹೆಸರು ಕೇಳಿದಾಗ ಬಾಯಲ್ಲಿ ಛಳ್ ಅಂಥ ನೀರು  ಉಕ್ಕುತ್ತದೆ. ತೆಳ್ಳನೆಯ ಬೂದಿ ಬಣ್ಣದ ಹರಪಲು ಮುಚ್ಚಿಕೊಂಡಿರುವ ಇದನ್ನು ನಮ್ಮ  ಅಂಗಿಗೆ ನಿಧಾನ ಉಜ್ಜಿಕೊಳ್ಳಬೇಕು ಆಗ  ಕಡು ಕೆಂಪು ಬಣ್ಣದ ಒಳಮೈ ಹೊರಚಾಚುತ್ತದೆ. ಆಗ ತಿನ್ನುವುದಕ್ಕಿಂತ  ನೋಡುವುದೇ  ಅಂದ. ನಂತರ  ನಾಲಿಗೆ  ಮೇಲಿಟ್ಟು  ಚೀಪಿದರೆ  "ವಾವ್" ಅದರ  ಮಜವೇ ಮಜ.

ಹಲಗೆ   ಗಿಡ ಎನ್ನುವದಕ್ಕಿಂತ  ಬಳ್ಳಿ ಎನ್ನಬಹುದು. ಹಲಗೆ ಬಳ್ಳಿ ಏಕಾಂಗಿಯಾಗಿ ಬೆಳೆಯಲಾರದು. ಪೊದೆಗಳಲ್ಲಿ ಹುಟ್ಟಿ ಸುತ್ತೆಲ್ಲಾ  ಆವರಿಸಿಕೊಳ್ಳುತ್ತದೆ.  ಪೆಬ್ರವರಿ ಆರಂಭದಲ್ಲಿ  ಹಸಿರು ಬಣ್ಣದ ಕಾಯಾಗಿ ಅಂತ್ಯದಲ್ಲಿ  ಹಣ್ಣಾಗುತ್ತದೆ. ಹಕ್ಕಿಗಳ ಪರಮ ಪ್ರೀತಿಯ ಹಣ್ಣು ಇದು. ಕಾಡು ಕೋಳಿಯೂ  ಇದನ್ನು ತಿನ್ನುತ್ತದೆ.

ರುಚಿ ಯನ್ನು ಮೆಚ್ಚಿ  ಹತ್ತಿಪ್ಪತ್ತು  ತಿಂದಿರೋ  ಹೊಟ್ಟೆ ನೋವು ಶುರುವಾಗಿಬಿಡುತ್ತದೆ  ಜೋಕೆ. ವಿನಾಶದ ಅಂಚಿನಲ್ಲಿರುವ ಈ ಬಳ್ಳಿಯನ್ನು  ನಮ್ಮ  ವನದಲ್ಲಿ  ರಕ್ಷಿಸಿಡಲು ಹರ ಸಾಹಸಪಟ್ಟಿದ್ದು ಈ ವರ್ಷ ಶ್ರಮ ಸಾರ್ಥಕ್ಯ ಕಂಡಿದೆ. ಹಣ್ಣುಗಳು  ಹತ್ತಾರು ಬಿಟ್ಟಿತ್ತು. ನಾನು ನಾಲ್ಕೈದು ತಿಂದೆ  ಮಕ್ಕಳಿಗೆ ಒಂದಿಷ್ಟು ಕೊಟ್ಟೆ  ಹಕ್ಕಿಗಳಿಗೆ ಉಳಿದದ್ದು ಬಿಟ್ಟೆ. ಹಣ್ಣು ಸಿಕ್ಕಾಗ  ಒಮ್ಮೆ  ರುಚಿ ನೋಡಿ. ಅದ್ಭುತ ರುಚಿ ಇದೆ

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಶರ್ಮರೇ ಹಳ್ಳಿ ಎಂದರೆ ನಂಗೂ ಇಷ್ಟ ರುಚಿ ಬಿಡಿ ಹಣ್ಣಾರೂ ಕಾಂಬೋ ಅಂದ್ಕಂಡ್ರೆ ಹಲಗೆಯೂ ಇಲ್ಲ ಅದರ ಕೋಲೂ ಇಲ್ಲ ಹಾಕಿ ಇನ್ನೋದ್ಸರಿ, ಕಂಡ್ಕಂಬೋ

ಗೋಪಿನಾಥರೆ, ಹಲಗೆ ಹಣ್ಣು ಹುಡುಕಿಕೊಂಡು ಹಳ್ಳಿಗೆ ಹೋಗಲು ಸಾಧ್ಯವಿಲ್ಲ. ಶರ್ಮರ ಬ್ಲಾಗ್‌ಗೆ ನುಗ್ಗಿ ನೋಡಿಕೊಂಡು ಬಂದೆ- http://shreeshum.blo... ಶರ್ಮರೆ ಲೇಖನ ಹಾಗೂ ಹಣ್ಣಿನ ಚಿತ್ರ ಚೆನ್ನಾಗಿದೆ. -ಗಣೇಶ.

ನನಗೆ ಚಿತ್ರ ಸೇರಿಸುವುದು ಸಮಸ್ಯೆಯಾಗಿದೆ. ನಾನು ಸೇರಿಸಿದ ಚಿತ್ರಗಳೆಲ್ಲಾ ಹೀಗೆ ಜಸ್ಟ್ ಇಂಗ್ಲೀಷ್ ಎಕ್ಸ್ ಮಾರ್ಕ ಪಡೆದು ಕುಂತುಬಿಡುತ್ತವೆ ಅಷ್ಟೆ. ಮೊನ್ನೆ ಹೀಗೆ ಆಗಿತ್ತು. ಯುಆರ್ಎಲ್ ಕಾಪಿ ಮಾಡಿ ಪಿಕಾಸದಿಂದ ಹಾಕಿ ಅಂತ ಹೇಳಿದರು. ಆದರೂ ಚಿತ್ರ ಅಪ್ಲೋಡ್ ಆಗಲಿಲ್ಲ. ಯಾರಾದರೂ ಲೇಖನದಲ್ಲಿ ಚಿತ್ರ ಸೇರಿಸುವ ಬಗೆ ಹೇಗೆಂದು ತಿಳಿಸುವಿರಾ?. ಕೇವಲ ಚಿತ್ರ ಹಾಕುವುದಾದರೆ ಬ್ರೌಸ್ ಮಾಡಿದರಾಯಿತು ಆದರೆ ಲೇಖನಕ್ಕಾದ್ರೆ ಹಾಗಲ್ಲ ಮತ್ತೆ ಹೇಗೆ?

ಶರ್ಮರೇ ಮೊದಲು ನೀವು ನಿಮ್ಮ ಚಿತ್ರಗಳನ್ನು ಜಿ ಮೈಲ್ ನಲ್ಲಿ ನಲ್ಲಿ ಅಪ್ ಲೋಡಮಾಡಿಕೊಳ್ಳಿರಿ ಯಾವ ಚಿತ್ರ ಬೇಕೋ ಆ ಚಿತ್ರದ ಮೇಲೆ ರೈಟ್ ಕ್ಲಿಕ್ ಮಾಡಿದರೆ ಬಂದ ಆಪ್ಶನ್ ಗಳಲ್ಲಿ ಕೊಪಿ ಇಮೇಜ್ ಲೊಕೇಶನ್ ಅನ್ನು ಕಾಪಿ ಮಾಡಿ ಕೊಂಡು ನಿಮಗೆಲ್ಲಿ ಬೇಕೋ ಅಲ್ಲಿ ಅಂಟಿಸಿದರಾಯ್ತು. ಅಥವಾ ನೀವು ಒಪ್ಪಿದರೆ ನಿಮ್ಮ ಹಲಗೆ ಹಣ್ಣಿನ ಚಿತ್ರವನ್ನು ಇಲ್ಲಿ ಹಾಕಿ ತೋರಿಸಲೇ?