ಹೀಗೊ೦ದು ಸತ್ಯ ಕಥೆ - ಡಾ| ಶರತ್

To prevent automated spam submissions leave this field empty.

ಬೆ೦ಗಳೂರಿನ ಹೊರಭಾಗದ ಹೆಬ್ಬಾಳದ ಸಮೀಪದಲ್ಲಿರುವ ಗೆದ್ದಲಹಳ್ಳಿಯ ನಿವಾಸಿ ಮಕ್ಕಳ ತಜ್ನರಾದ ಶ್ರೀ. ಶರತ್ ಕುಮಾರ್ ಮೂಲತ: ಮ೦ಗಳೂರಿನವರು.

ಕಳೆದ ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟು ಗೆದ್ದಲಹಳ್ಳಿಯಲ್ಲಿ ತಮ್ಮ ಕ್ಲಿನಿಕ್ ನೆಡೆಸಿಕೊ೦ಡು ಬ೦ದು, ಸುತ್ತಮುತ್ತಲ ಅಂದರೆ ಗ೦ಗೇನಹಳ್ಳಿ, ಅಶ್ವಥ್ ನಗರ, ಸಂಜಯನಗರ,ನಾಗಶೆಟ್ಟಿಹಳ್ಳಿಯ ನಿವಾಸಿಗಳ ಮನೆ ಮಾತಾಗಿದ್ದರು.

ಸಹೃದಯ ಜೀವಿಯಾದ ಇವರ ಬಳಿ ಬರುತ್ತಿದ್ದವರಲ್ಲಿ ಬಹುತೇಕ ಹಳ್ಳಿಯ ಜನರೇ ಹೆಚ್ಛು. ರೋಗಿಗಳ ಜೊತೆ ಅವರು ಮಾತನಾಡುವಾಗ ನಮಗೆ ಕೆಲವೊಮ್ಮೆ ಮೋಜು ಎನಿಸುತ್ತಿತ್ತು. ಉದಾ: 'ಮೈ ಬಿಸಿ ಎಂದರೆ ಎಷ್ಟು ಬಿಸಿ' 'ವಾಂತಿ ಎಂದರೆ ಗಳ ಗಳಾ ಅಂತ ಮಾಡಿತ್ತಾ ಅಥವಾ ಹೇಗೆ? ಎಷ್ಟು ಸಾರಿ ಆಯ್ತು' 'ಭೇದಿ ನೀರಾಗಿ ಆಯ್ತಾ' 'ಈ ಮಾತ್ರೆ ಬೆಳಿಗ್ಗೆ ಊಟಕ್ಕೆ ಮು೦ಚೆ ಮಾತ್ರ ತೊಗೊಳ್ಳಿ ಆಯ್ತಾ? ಊಟಕ್ಕೆ ಮು೦ಚೆ ಮಾತ್ರ. ಮೂರು ದಿನ ಬಿಟ್ಟು ಬ೦ದು ನನ್ನ ನೋಡಿ' ಎಂದು.  ಒಮ್ಮೆ ಹಾಗೇ ಯೋಚನೆ ಮಾಡಿದಾಗ ಅವರ ಪರಿ ಅರ್ಥವಾಯಿತು. ಸಮಸ್ಯೆ ಪೂರ್ಣವಾಗಿ ಅರ್ಥ ಮಾಡಿಕೊ೦ಡು ಅದಕ್ಕೆ ತಕ್ಕ ಮದ್ದು ನೀಡುತ್ತಿದ್ದರು. ಅಲ್ಲದೆ ರೋಗಿಗಳಿಗೆ ಅರ್ಥವಾಗಲಿ ಎ೦ದು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದರು.

ಬಡವರಲ್ಲಿ ಹೆಚ್ಚು ಹಣ ತೆಗೆದುಕೊಳ್ಳುತ್ತಿರಲಿಲ್ಲ. ಮಕ್ಕಳ ವೈದ್ಯರೇ ಆದರೂ ಹಿರಿಯರನ್ನೂ ನೋಡುತ್ತಿದ್ದರು. ಏಳಲಾಗದ ಪರಿಸ್ಥಿತಿಯಲ್ಲಿ ಇರುವವರ ಮನೆಗೇ ಹೋಗಿ ಶುಶ್ರೂಷೆ ಮಾಡುತ್ತಿದ್ದರು.  ಉದಾ: ಎಷ್ಟೋ ಸಾರಿ ನಮ್ಮ ಮನೆಗೆ ನಮ್ಮ ತಾಯಿಯನ್ನು ನೋಡಲು ರಾತ್ರಿ ಹನ್ನೊಂದಕ್ಕೂ ಬಂದ ಉದಾಹರಣೆ ಇದೆ.  ಭಾರತಕ್ಕೆ ಹೋದಾಗ ಸುಮ್ಮನೆ ಹೋಗಿ ಅವರನ್ನು ಮಾತಾನಾಡಿಸಿಕೊ೦ಡು ಬರುತ್ತಿದ್ದೆ.

ಕಳೆದ ಗುರುವಾರ ರಾತ್ರಿ ಯಾರೋ ರೋಗಿಗಳ ಕಡೆಯವರು ಮಗುವಿಗೆ ತೀವ್ರ ಜ್ವರ. ಏಳಲೂ ಆಗುತ್ತಿಲ್ಲ ದಯವಿಟ್ಟು ಬ೦ದು ನೋಡಿ ಎ೦ದು ಕರೆದುಕೊ೦ಡು ಹೋದರಂತೆ.

ಕ್ಲಿನಿಕ್'ನಿ೦ದ ಹೊರಗೆ ಕಾಲಿಟ್ಟ ವೈದ್ಯ ಶರತ್ ಮತ್ತೆ ಹಿ೦ದಿರುಗಲಿಲ್ಲ !!!!

ಸುಳ್ಳು ಹೇಳಿ ವೈದ್ಯರನ್ನು ತಮ್ಮೊ೦ದಿಗೆ ಕರೆದೊಯ್ದು ಶರತ್ ಕುಮಾರ್ ಅವರ ಕುತ್ತಿಗೆ ಬಿಗಿದು ಪ್ರಾಣ ತೆಗೆದಿದ್ದಾರೆ !!!!

ಹಣ ಮತ್ತು ಒಡವೆಗಾಗಿ ಹೀಗೆ ಮಾಡಲಾಗಿದೆ ಎ೦ದು ಕೇಳ್ಪಟ್ಟೆ. ಹಾಗೆ೦ದೇ ಪತ್ರಿಕೆಯವರೂ ವರದಿ ಮಾಡಿದ್ದಾರೆ.

ಹಗಲಾಗಲಿ ಇರುಳಾಗಲಿ ರೋಗಿಗಳೇ ಸೇವೆಯನ್ನು ದೈವಾರಾಧನೆಯ೦ತೆ ನೆಡೆಸಿಕೊ೦ಡು ಬ೦ದ ವೈದ್ಯರಿಗೆ ಈ ಗತಿ ಬ೦ದಿದ್ದು ಸಹಿಸಿಕೊಳ್ಳಲಾರದ ನೋವು. ಎರಡು ಮೂರು ಹಳ್ಳಿಯ ಜನರಿಗೆ ಸಾರ್ವಜನಿಕ ದರ್ಶನ ಏರ್ಪಡಿಸಿ ನಂತರ ಅವರ ದೇಹವನ್ನು ಮಿಕ್ಕ ಕಾರ್ಯಕ್ಕೆ ಹುಟ್ಟೂರಿಗೆ ಒಯ್ದರೆ೦ದು ತಿಳಿದುಕೊ೦ಡೆ.

ಹಲವಾರು ಜೀವ ಉಳಿಸಿದ ಇ೦ತಹ ಸಹೃದಯ ವೈದ್ಯರ ಜೀವ ತೆಗೆದ ಕಡು ಪಾಪಿಗಳು ಶ್ರೀಘ್ರದಲ್ಲೇ ಕಾನೂನಿನ ಕೈಗೆ ಸಿಗಲಿ ಸಿಕ್ಕು ತಕ್ಕ ಶಿಕ್ಷೆ ಅನುಭವಿಸುತ್ತಾರೆ೦ದು ಅ೦ದುಕೊಳ್ಳೋಣ

ಮೃತರ ಆತ್ಮಕ್ಕೆ ಭಗವ೦ತ ಶಾ೦ತಿ ನೀಡಲಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಭಲ್ಲೆಯವರೇ, ಬೇಸರವಾಯಿತು. ಡಾ|| ಶರತ್ ರವರ ಸೇವೆ ಇನ್ನೂ ಬೆ೦ಗಳೂರಿಗೆ ಬೇಕಿತ್ತು. ಅಷ್ಟರಲ್ಲಿಯೇ ಅವರು ಬೆ೦ಗಳೂರಿಗರನ್ನು ಅಗಲಿದ್ದು ವಿಷಾದವೆನಿಸಿತು. ಅದೂ ಎ೦ಥ ಸಾವು? ಛೇ!! ನಮಸ್ಕಾರ.

ಡಾ. ಶರತ್ ಕುಮಾರ್ ನಮ್ಮ ಕುಟುಂಬಕ್ಕೆ ತುಂಬಾ ಪರಿಚಿತರು ಮತ್ತು ಬೇಕಾಗಿದ್ದವರು. ಅನೇಕ ಬಾರಿ ಮನೆಗೆ ಬಂದು ವಯಸ್ಸಾದ ತಂದೆ-ತಾಯಿಯರಿಗೆ ಚಿಕಿತ್ಸೆ ನೀಡಿದ್ದ ಹಸನ್ಮುಖಿ ವೈದ್ಯರು. ನಾವೂ ಭಾರತಕ್ಕೆ ಹೋದಾಗ ಅವರನ್ನು ಮಾತಾಡಿಸಿಕೊಂಡು ಬರುತ್ತಿದ್ದೆವು. ಇವರ ದಾರುಣ ಹತ್ಯೆ ತಿಳಿದು ಆಘಾತವಾಯ್ತು. ಇಂತಹ ನೀಚಕೃತ್ಯ ಎಸಗುವವರು ಇರುವುದನ್ನು ಅರ್ಥಮಾಡಿಕೊಳ್ಳಲೂ ಅಸಾಧ್ಯವೆನಿಸುತ್ತದೆ. ಪ್ರಭು

ಸರ್ ಕೇಳಿ ಬೇಸರವಾಯ್ತು. ಉತ್ತಮ ಮನುಷ್ಯನಿಗೆ ಕಾಲವಿಲ್ಲ ಎಂದು ಹಿರಿಯರು ನುಡಿಯುವುದು ಸತ್ಯ. ಅವರ ಆತ್ಮಕ್ಕೆ ಆ ದೇವರು ಚಿರ ಶಾಂತಿ ನೀಡಲಿ ಹಾಗೇ ಅವರ ಕುಟುಂಬವರ್ಗದವರು ಧ್ಯರ್ಯ ತಂದುಕೊಳ್ಳಲಿ ಮಾತ್ರ ಎನ್ನಬಹುದಾಗಿದೆ. ಅವರ ಸಾವಿಗೆ ಕಾರಣರಾದಂತವರನ್ನು ಕಾನೂನು ಕ್ರಮಕ್ಕೆ ಒಳಪಡಿಸುವುದುಕ್ಕಿಂತ ಬೇರೆ ರೀತಿಯ ಶಿಕ್ಷೆ ನೀಡಿದರೆ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳು ಮರುಕಳಿಸುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಧನ್ಯವಾದಗಳು ಲೇಖನ - ನಾಯಿಮರಿ ಸಾವಿನ ನೆನಪು ಮಾಸುವ ಮುನ್ನ.........

ಛೆ. ಜೀವ ಉಳಿಸುವವರ ಜೀವ ತೆಗೆಯುವವರು ನಿಜಕ್ಕೂ ನೀಚರು. ಕೊಲೆಗಡುಕರಿಗೆ ಕಠಿಣ ಶಿಕ್ಷೆ ಆಗಿ ಶರತ್ಕುಮಾರ್ ಅವರ ಕುಟುಂಬಕ್ಕೆ ನ್ಯಾಯ ಸಿಗಲಿ.

ಬೆಂಗಳೂರಿನ ಸುರಕ್ಷಾ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ತಾಜಾ ತಾಜಾ ನೂರಾರು ಉದಾಹರಣೆಗಳಲ್ಲಿ ಇದೂ ಒಂದು. ಪತ್ರಿಕೆಗಳಲ್ಲಿ ವರದಿಯಾಗುವ ಘಟನೆಗಳಿಗಿಂತ ವರದಿ ಆಗದಿರುವ ಘಟನೆಗಳೇ ಜಾಸ್ತಿ ಇವೆ. ಎಲ್ಲಾ ವಿಭಾಗಗಳಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿರುವಾಗ ಇದಕ್ಕಿಂತ ಒಳ್ಳೆಯ ದಿನಗಳನ್ನು ನಾವು ನಿರೀಕ್ಷಿಸುವುದೂ ತಪ್ಪು.

ಆರೋಪಿಗಳು ಸಿಕ್ಕಿದ್ದಾರೆ; ಇಂದಿನ ವಿಜಯಕರ್ನಾಟಕದ ಸುದ್ದಿಯ ಪ್ರಕಾರ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಒಂದೇ ಊರಿನವರಾಗಿದ್ದು ಇಂತಹ ಹೇಯಕೃತ್ಯ ಮಾಡಲು ಮನಸ್ಸು ಮಾಡಿದ ಈ ಪಾಪಿಗಳಿಗೆ ದಿಕ್ಕಾರ ! http://www.vijaykarn...

ರಾಜಕೀಯ ಪ್ರೇರಿತವಲ್ಲದ ಅಪರಾಧ ಘಟನೆಗಳಲ್ಲಿ, ಆರೋಪಿಗಳನ್ನು ಹಿಡಿಯುವಲ್ಲಿ ಬೆಂಗಳೂರಿನ ಆರಕ್ಷ ಇಲಾಖೆ ಇತ್ತೀಚೆಗೆ ಸಾಕಷ್ಟು ಯಶಸ್ವಿಯಾಗುತ್ತಿದೆ. ಆದರೆ, ಅಪರಾಧಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗುತ್ತಿಲ್ಲ ಅನ್ನುವುದು ಶೋಚನೀಯ ಸ್ಥಿತಿ. ನಾವೀಗ ಎಷ್ಟೇ ಧಿಕ್ಕಾರ ಹಾಕಿದರೂ ಹೋದ ಜೀವ ಮರಳಿಬಾರದು ಹಾಗೂ ಆ ವೈದ್ಯರ ಕುಟುಂಬದ ಸದಸ್ಯರ ನೋವನ್ನು ಯಾರಿಂದಲೂ ನೀಗಿಸಲಾಗದು, ಅನ್ನುವ ವಿಚಾರ ಮನಸ್ಸಿಗೆ ನೋವನ್ನು ನೀಡುತ್ತದೆ.

ಶ್ರೀನಾಥ್ ಭಲ್ಲೆಯವರೇ, ಅಂತರ್ಜಾಲದಲ್ಲಿ ಓದಿದೆ. ಡಾ. ಶರತ್ ರವರ ಕುರಿತು ಎಷ್ಟೆಲ್ಲಾ ಜನರು (ಜಗತ್ತಿನ ಬೇರೆ ಬೇರೆ ಕಡೆಗಳಿಂದ) 'ಅವರು ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಹಗಲು - ರಾತ್ರಿಯೆನ್ನದೇ ಕರೆದಾಗಲೆಲ್ಲ ಬರುತ್ತಿದರು. ತುಂಬಾ ಕಡಿಮೆ ಶುಲ್ಕ ತೆಗೆದುಕೊಳ್ಳುತ್ತಿದ್ದರು' ಎಂದು ಬರೆದಿದ್ದಾರೆ. ಹೀಗಾಗಿ, ಅವರೊಬ್ಬ ಜನಾನುರಾಗಿ ವೈದ್ಯರಾಗಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಅಂಥವರನ್ನೇ - ಅಪಹರಣಕಾರರ ಕೋರಿಕೆಯಂತೆ ಆಭರಣಗಳನ್ನು ಕೊಟ್ಟ ಮೇಲೂ - ಕೊಂದ ಜನರ ಕುರಿತು ಏನು ಹೇಳಬೇಕೋ ತಿಳಿಯುತ್ತಿಲ್ಲ. ಛೇ.

ನಿಮ್ಮ ಮಾತು ಸತ್ಯ ... ಬಂಧುವಲ್ಲ, ಬಳಗವಲ್ಲ, ಒಡಹುಟ್ಟಿದವರಂತೂ ಅಲ್ಲವೇ ಅಲ್ಲ ... ಆದರೂ ಅವರು ನಮ್ಮಲ್ಲೊಬ್ಬರಾಗಿದ್ದರು ... ಹೆಚ್ಚು ಬರೆಯಲಾರೆ ... ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು ...

ಛೇ ಎಂತಹ ದಾರುಣ ವಿಷಯ. ಜೀವದಾನ ಮಾಡಲು ಸಿದ್ಧನಾಗಿ ಬಂದ ವೈದ್ಯನ ಕತ್ತು ಕೊಯ್ಯುವ ಈ ಕ್ರೂರತನ ಮನುಷ್ಯರಿಗೆ ಮಾತ್ರ ಸಾಧ್ಯವಾಗುತ್ತದೆ ಅನ್ನಿಸುತ್ತೆ, ಮೃಗಗಳು ಖಂಡಿತ ಈ ಮಟ್ಟಕ್ಕೆ ಇಳಿಯಲಾರವು! ಇಂತಹ ಮನಸ್ಥಿತಿಯನ್ನು ಮನುಷ್ಯರಲ್ಲಿ ಉಂಟುಮಾಡಿರುವುದು ಇಂದಿನ ನಮ್ಮ ಸಮಾಜ. ಇಂತಹ ನಾಗರೀಕತೆಯೂ ಬೇಕೇ?