ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೨

To prevent automated spam submissions leave this field empty.

ಮೊದಲ ಭಾಗ ಇಲ್ಲಿದೆ.. http://sampada.net/article/24590ನಗರದ ಪ್ರಮುಖ ರಸ್ತೆಯಲ್ಲಿದ್ದೆವು. ರಸ್ತೆ ಮಧ್ಯದಲ್ಲಿ ಪ್ರಥಮ ಬಾರಿ ಒಬ್ಬ ಹೆಂಗಸನ್ನು ನೋಡಿದೆ. ನೀಲಕಾಶ ಬಣ್ಣದ ಮಾಸಲು ಬಟ್ಟೆಯ ಬುರ್ಖಾಧಾರಿ. ಮುಡಿಯಿಂದ ಪಾದದವರೆಗೆ ಏನೂ ಕಾಣಿಸದು. ಆಕೆಗೆ ನೋಡಲನುವಾಗುವಂತೆ ಕಣ್ಣಿನ ಭಾಗದಲ್ಲಿ ಪರದೆಯಂತೆ ಸಣ್ಣ ಸಣ್ಣ ತೂತುಗಳಿದ್ದವು. ತನ್ನ ಕೆಳಗೆ ಒಂದು ಪುಟ್ಟ ಮಗುವನ್ನು ಕೊಳೆಯೇ ಪ್ರಧಾನದಂತಿದ್ದ ಚಾದರವೊಂದರ ಮೇಲೆ ಮಲಗಿಸಿ, ರಸ್ತೆಯಲ್ಲಿ ಅಡ್ಡಾಡುತ್ತಿದ್ದ ವಾಹನಗಳೆಡೆ ಕೈ ಚಾಚುತ್ತಿದ್ದಳು. ಆಗತಾನೆ ಮರದಿಂದ ನೆಲಕ್ಕೆ ಬಿದ್ದ ಕೆಂಪನೆಯ ಹಣ್ಣಿಗೆ ಮಣ್ಣು ಮೆತ್ತಂತಿತ್ತು ಆ ಮಗುವಿನ ಆಗಿನ ರೂಪ. ಆ ದೃಶ್ಯ ಕರುಳು ಹಿಂಡುವಂತಿತ್ತು. ಮುಂದೆ ಹೋದಂತೆಲ್ಲಾ ಅದೇ ಅವಸ್ಥೆಗಳನೇಕವು ಎದುರಾದವು. ಇನ್ನೂ ಒಳ ಪ್ರವೇಶಿಸುತ್ತಿದ್ದಂತೆ ಪೇಟೆಯಲ್ಲಿ ಖರೀದಿಗೆಂದು ಬಂದಿದ್ದ ಅನೇಕ ಹೆಂಗಸರು ಕಾಣಿಸಿದರು. ಪ್ರತಿಯೊಬ್ಬರೂ ಬಿರಬಿರನೆ ಹೆಜ್ಜೆ ಹಾಕುತ್ತಿದ್ದುದು ಏಕೆಂದು ತಿಳಿಯಲಿಲ್ಲ. ಹಿಂದೆ ನೋಡಿದ ಹೆಂಗಸಿಗಿಂತ ಪರವಾಗಿಲ್ಲವೆಂಬಂತೆ ಇತ್ತು ಅವರ ಉಡುಪು. ಸ್ವಲ್ಪ ಶುಭ್ರವಾಗಿತ್ತು. ಇಲ್ಲಿ ಉಲ್ಲೇಖಾರ್ಹವೆಂದರೆ ಪ್ರತಿಯೊಬ್ಬರದೂ ಒಂದೇ ಬಣ್ಣದ ಬುರ್ಖಾ. ಎಲ್ಲರದೂ ಒಂದೇ ರೀತಿಯ ಏಕತಾನತೆ. ಅವರು ಹೇಗೆ ಕಾಣ್ತಾರೋ? ಅವರ ವಯಸ್ಸೆಷ್ಟೋ?.. ಅಲ್ಲಿನ ಜನರು ಬಹು ಸೂಕ್ಷ್ಮವೆಂದೆಣಿಸುವ ವಿಷಯದ ಬಗೆಗೆ ಮೊಹಮ್ಮದ್ ನನ್ನು ಕೇಳಿ ಕೆಣಕದಿರುವುದೇ ಉಚಿತವೆಂದು ಭಾವಿಸಿ ಸುಮ್ಮನೆ ನೋಡುತ್ತಾ ಕುಳಿತೆ.

ಕಿಕ್ಕಿರಿದಿದ್ದ ಜನಸಂದಣಿಯ ಪೇಟೆಯ ಬೀದಿ ಅದು. ಟ್ರಾಫಿಕ್ ಸಿಗ್ನಲ್ ದೀಪಗಳು ಅದೆಂದೋ ತಮ್ಮ ಕರ್ತವ್ಯವನ್ನು ಮರೆತಂತೆ ತೋರುತ್ತಿತ್ತು. ಪಾಚಿ ಬಣ್ಣದ ಅಂಗಿ-ಶರಾಯಿ ಧರಿಸಿದ್ದ, ಆರಕ್ಷಕನಂತೆ ಕಾಣುತ್ತಿದ್ದ ಒಬ್ಬನು ದಪ್ಪನೆಯ ದೊಣ್ಣೆಯನ್ನು ಹಿಡಿದು ದೊಣ್ಣೆಯನ್ನು ಶೂನ್ಯಕ್ಕೆ ಅಡ್ಡಾದಿಡ್ಡೀ ಬೀಸುತ್ತಾ ವಾಹನ ಚಾಲಕರೊಡನೆ ಜಗಳಕ್ಕೆ ಬಿದ್ದಿದ್ದ. ನಿಯಂತ್ರಣವಿಲ್ಲದ ರಸ್ತೆಯಲ್ಲಿ, ಒಬ್ಬರಿಗೊಬ್ಬರು ಸೆಡ್ಡು ಹೊಡೆಯಲೇನೋ ಎಂಬಂತೆ ಸಿಕ್ಕ ಸಿಕ್ಕ ಸಂದು ಗೊಂದುಗಳಲ್ಲೆಲ್ಲಾ ತಮ್ಮ ವಾಹನಗಳನ್ನು ನುಗ್ಗಿಸುತ್ತಿದ್ದರು. ವಾಹನಗಳ ಚೀತ್ಕಾರ ಮುಗಿಲುಮುಟ್ಟಿತ್ತು. ತಾಳ್ಮೆ ಕಳೆದುಕೊಂಡವಂತೆ ಮೊಹಮ್ಮದ್ ಕೂಡ ಕಾರಿನ ಹಾರ್ನ್ ಬಾರಿಸಲುನುವಾದ. ಹಿಂದೆ ಕೂತಿದ್ದ ’ಗಾಝ್ಮೆಂಡ್ ಸೆಕ’ಸುಮ್ಮನಿರುವಂತೆ ಮೊಹಮ್ಮದ್ ಗೆ ಗದರುತ್ತಿದ್ದ. "ದಿನವೂ ಹೀಗೆಯೇ ಇರುತ್ತದೆಯೇ"? ನನ್ನ ಪ್ರಶ್ನೆಗೆ ಮೊಹಮ್ಮದ್ " ಇಲ್ಲಾ.. ಇವತ್ತು ಗುರುವಾರದ ಸಂತೆ, ನಾಳೆ ಎಲ್ಲಾ ಬಂದ್. ಅದಕ್ಕಾಗಿಯೇ ಇಷ್ಟೊಂದು ಗಜಿಬಿಜಿ" ಎಂದುತ್ತರಿಸಿದ. ಈ ಮಧ್ಯೆ ನನ್ನನ್ನು ದಿಟ್ಟಿಸುತ್ತಿದ್ದ ಕೆಲ ಸ್ಥಳೀಯರು ನನ್ನತ್ತ ಮಂದಹಾಸ ಬೀರಿದರೆ ಇನ್ನೂ ಕೆಲವರು ಆಶ್ಚರ್ಯಗೊಂಡವರಂತೆ ತೀಕ್ಷ್ಣವಾಗಿ ನೋಡುತ್ತಿದ್ದರು. ಯಾರೋ ಒಬ್ಬನಂತೂ "ಹಿಂದೂಸ್ತಾನೀ...." ಎಂದು ಕೂಗಿದ್ದೂ ಕೇಳಿಸಿತು.

ಆ ಹೊತ್ತಿನಲ್ಲಿ ಅಲ್ಲೊಂದು ವಿಸ್ಮಯ ನೋಡಿದೆ. ಪಾಶ್ಚಿಮಾತ್ಯ ಶೈಲಿಯ ದಿರಿಸನ್ನು ಹೊದ್ದಿದ್ದ, ಕೆಂಪು ತೊಗಲಿನ, ಕಪ್ಪು ತಲೆ ಕೂದಲಿನ, ಇಬ್ಬರು ಹೆಂಗಳೆಯರು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದರು. ಏನೋ ಆಶ್ಚರ್ಯ ಕಂಡವನಂತೆ ಮೊಹಮ್ಮದ್ ನನ್ನು ತಿವಿದು ಅಲ್ಲಿ ನೋಡುವಂತೆ ಸೂಚಿಸಿದೆ. " ಓ.. ಹಝಾರಾ!" ಎಂದಷ್ಟೇ ಸುಮ್ಮನಾದ ಆತ. "ಏನದು ಹಝಾರ"? ನನ್ನ ಪ್ರಶ್ನೆಗೆ ಮರುತ್ತರಿಸಿದ ಮೊಹಮ್ಮದ್ "ಪಾರ್ಸೀ" ಎಂದ. "ಓಹೋ.. ಪಾರ್ಸಿ ಹೆಂಗಸರು ಬುರ್ಖಾ ಧರಿಸೋಲ್ಲವೇ"? ನನ್ನ ಈ ಪ್ರಶ್ನೆಯನ್ನ ನಿರೀಕ್ಷಿಸಿದ್ದ ಮೊಹಮ್ಮದ್, "ಹಾಗೇನಿಲ್ಲ.. ಬಹುಪಾಲು ಪಾರ್ಸಿ ಶ್ರೀಮಂತ ಮನೆತನದ ಹೆಂಗಸರು ಹೀಗೇ.. ಮೊದಲು ಇವರೂ ಕೂಡ ಬುರ್ಖಾದಲ್ಲೇ ಇರುತ್ತಿದ್ದರು. ತಾಲಿಬಾನ್ ಪಡೆ ಕಾಬೂಲ್ ನಿಂದ ಕಾಲ್ಕಿತ್ತಿದ್ದೇ ತಡ ಎಲ್ಲರೂ ಗರಿ ಬಿಚ್ಚಿಕೊಂಡಿದ್ದಾರೆ". ಮೊಹಮ್ಮದ್ ಮಾತಿನಲ್ಲಿ ಅಸಮಧಾನವಿದ್ದದ್ದನ್ನು ಗ್ರಹಿಸಿ ಇನ್ನೇನನ್ನೂ ಕೇಳಲು ಮನಸ್ಸು ಮಾಡಲಿಲ್ಲ. ಗಂಡಸರು, ಹೆಂಗಸರೆಂಬ ಭೇದವಿಲ್ಲದೆ ಪ್ರತಿಯೊಬ್ಬರೂ ’ಹಿಜಬ್’ನಲ್ಲಿ ಇರಬೇಕೆಂಬ ತಾಲಿಬಾನಿಗಳ ಅಲಿಖಿತ ಫರ್ಮಾನಿಗೆ ಇಂದಿಗೂ ಅಲ್ಲಿನ ಬಹುಪಾಲು ಜನ ಸ್ಪಂದಿಸುತ್ತಿದ್ದಾರೆ ಎಂಬ ಸಂಗತಿ ನಾ ಅತಿಥಿ ಗೃಹಕ್ಕೆ ವಾಪಸ್ಸಾದ ನಂತರ ಗೊತ್ತಾಗಿತ್ತು. ಕಾಬೂಲ್ ನಲ್ಲಿ ನಮ್ಮ ಕಂಪನಿ ನಡೆಸುತ್ತಿದ್ದ ಬೃಹತ್ ಮಿಲಿಟರಿ ಲಾಂಡ್ರಿಗಳಲ್ಲಿ ಸ್ಥಳೀಯರೇ ಕೆಲಸ ಮಾಡುತ್ತಿದ್ದು, ಕೆಲಸ ಮಾಡುವಾಗ ಮಾತ್ರ ಕಂಪನಿಯ ಒದಗಿಸುತ್ತಿದ್ದ ದಿರಿಸನ್ನು ಧರಿಸಿ ಹೊರಡುವ ವೇಳೆಗೆ ತಮ್ಮ ಎಂದಿನ ದೇಸೀ ಉಡುಗೆಗೆ ಬದಲಾಗುತ್ತಿದ್ದುದನ್ನು ನಾ ಖುದ್ದಾಗಿ ಗಮನಿಸಿದೆ. ಅವರಲ್ಲಿ ಕೆಲವರನ್ನ ನಾ ಪ್ರಶ್ನಿಸಲಾಗಿಯೂ ಸಂವಹನ ಕೊರತೆಯಿಂದಾಗಿ ನನ್ನನ್ನು ದಿಟ್ಟಿಸಿ "ಹಿಂದುಸ್ತಾನೀ?" ಎಂದಷ್ಟೇ ಹೇಳಿ ನಕ್ಕು ನಡೆದು ಬಿಡುತ್ತಿದ್ದರು.

ರಸ್ತೆಯಾಚೆ ಕಟ್ಟಡಗಳ ಸಾಲುಗಳನ್ನು ನೋಡುತ್ತಾ ಕುಳಿತಿದ್ದೆ. ಯುದ್ಧದಲ್ಲಿ ಮಿಂದು ನಲುಗಿದ್ದ ಕೆಲವು ಇನ್ನೂ ಪುನರುಜ್ಜೀವನಗೊಂಡಿರಲಿಲ್ಲ. ಬಹುಪಾಲು ಕಟ್ಟಡಗಳು ಹಳೆಯ ಕಾಲದವು. ಹೊಸದಾಗಿ ನಿರ್ಮಿತವಾದವುಗಳು ಕೆಲವೆಂದೇ ಹೇಳಬೇಕು. ಕೆಲ ಕಟ್ಟಡಗಳಂತೂ ಯುದ್ಧದಲ್ಲಿ ತನಗೆ ಬಿದ್ದಿದ್ದ ಏಟಿಗೆ ಸೊಂಟ ಮುರಿದಹಾಗೆ ಭೂಮಿಯನ್ನು ಮುಟ್ಟಲು ಪ್ರಯತ್ನಿಸುತ್ತಿದ್ದವು. ಅಂತಹ ಕಟ್ಟಡಗಳನ್ನು ಬಹುಪಾಲು ಆಫ್ಘನ್ ನಿರಾಶ್ರಿತರು ಆಕ್ರಮಿಸಿಕೊಂಡಿದ್ದರು. ತಮ್ಮ ಮೇಲೆ ಅದೆಂದಾದರೂ ಬೀಳುವುದೆಂಬ ನೈಜತೆಯ ಹೊರತಾಗಿಯೂ! ರಸ್ತೆ ಬದಿಯ ಕೆಲ ಗೋಡೆಗಳ ಮೇಲೆ ಸಿನೆಮಾ ಭಿತ್ತಿ ಚಿತ್ರಗಳು ಅಂಟಿಸಲ್ಪಟ್ಟಿದ್ದವು. ಬಾಲಿವುಡ್, ಪಾಕಿಸ್ತಾನೀ ಸಿನೆಮಾ ಸೇರಿದಂತೆ ಅಲ್ಲಿನ ಸ್ಥಳೀಯ ಭಾಷೆಗಳ ಚಿತ್ರಗಳ ಪೋಸ್ಟರ್ ಗಳು ನನಗೆ ಕುತೂಹಲವನ್ನುಂಟುಮಾಡಿದ್ದವು. ಸಿನೆಮಾ ನೋಡುವ ಸ್ವಾತಂತ್ರ್ಯ ಅಲ್ಲಿನ ಜನರಿಗೆ ಕೆಲ ತಿಂಗಳುಗಳ ಹಿಂದೆಯಷ್ಟೇ ಪುನಃ ಸಿಕ್ಕಿತ್ತೆಂಬ ಮಾಹಿತಿ ನನಗೆ ಸಿಕ್ಕಿತ್ತು. ಸರ್ಕಾರೀ ಕಚೇರಿಗಳೆಂದು ಗುರುತಿಸಬಹುದಾಗಿದ್ದ ಅನೇಕ ಕಟ್ಟಡಗಳನ್ನು ಶಸ್ತ್ರಧಾರೀ ಆಫ್ಘನ್ ಮಿಲಿಟರಿ ಯೋಧರು ಕಾವಲಾಗಿದ್ದುದು ಸಾಮಾನ್ಯವಾಗಿತ್ತು. ಅನೇಕ ಕಟ್ಟಡಗಳ ಹೊರವಲಯವನ್ನು ಆಳೆತ್ತರದ ಕಾಂಕ್ರೀಟ್  T - Wall ಗಳಿಂದ ಸುತ್ತುವರೆಸಲಾಗಿದ್ದದ್ದನ್ನು ನೋಡಿ ಅತೀವ ಚಕಿತನಾದದ್ದು ಹೌದು. ಪ್ರಮುಖವಾಗಿ ಶೆಲ್ ಧಾಳಿ ಇಲ್ಲವೇ ಗುಂಡಿನ ಧಾಳಿಯ ರಕ್ಷಣೆಗೆ ಮಿಲಿಟರಿ ಕ್ಯಾಂಪ್ ನಲ್ಲಿನ ಎಲ್ಲ ರೀತಿಯ ಕಟ್ಟಡ ಮತ್ತು ನಿರ್ಧಿಷ್ಟ ಪ್ರದೇಶವನ್ನು ಈ ರೀತಿಯ T - Wall ಗಳನ್ನು ಬಳಸಿ ರಕ್ಷಣೆ ಒದಗಿಸಲಾಗುವುದನ್ನು ಕಂದಹಾರ್ ಬೇಸ್ ಕ್ಯಾಂಪ್ ನಲ್ಲಿ ನೋಡಿದ್ದೆ.

ಸಂತೆಯ ಜನಸಂದಣಿಯ ಮಧ್ಯದಲ್ಲಿದ್ದೆವು. ಸೋಜಿಗವೆಂದರೆ ಗುರುವಾರದ ಆ ಸಂತೆ ರಸ್ತೆಯನ್ನೆಲ್ಲಾ ಬಾಚಿಕೊಂಡುಬಿಟ್ಟಿತ್ತು. ಅಡ್ಡಾದಿಡ್ಡಿ ಅಡ್ಡಾಡುತ್ತಿದ್ದ ಜನರನ್ನೂ, ಕಿರುಚುತಲಿದ್ದ ಸಹವಾಹನಗಳನ್ನೂ ಸಂಭಾಳಿಸಿಕೊಂಡು ಕಾರನ್ನು ಚಲಾಯಿಸುತ್ತಿದ್ದ ಮೊಹಮ್ಮದ್ ನ ತಾಳ್ಮೆಗೆ ಆ ಕ್ಷಣ ನಾ ಮನಸೋತಿದ್ದೆ. ತರಹೇವಾರಿ ತರಕಾರಿಗಳು, ಹಣ್ಣುಗಳು, ದಪ್ಪನೆಯ ತಂದೂರ್ ರೊಟ್ಟಿಗಳು, ಕೋಳಿ, ಕುರಿಯಿಂದಿಡಿದು ದನದ ಮಾಂಸದ ರಾಶಿಯನ್ನು ಒಟ್ಟೊಟ್ಟಿಗೇ ಇಟ್ಟು ಮಾರಾಟ ಮಾಡುತ್ತಿದ್ದ ಪರಿಯನ್ನು ಜೇವನದಲ್ಲಿ ಪ್ರಥಮ ಬಾರಿ ನೋಡಿದೆ. ಅದೊಂದು ರಣರಂಗದ ಅವಶೇಷವೇನೋ ಅನಿಸುವ ಹಾಗಿತ್ತು ಅಲ್ಲಿನ ಚಿತ್ರಣ. ಕುರಿ-ಮೇಕೆಯ ತಲೆಕಾಲುಗಳನ್ನು ದೊಡ್ಡದಾದ ಹರಿವಾಣಗಳಲ್ಲಿ ವೃತ್ತಾಕಾರದ ವಿವಿಧ ರಚನೆಯಲ್ಲಿ ಜೋಡಿಸಲಾಗಿದ್ದ ಪರಿ ಗ್ರಾಹಕರನ್ನ ಸೆಳೆಯಲೋಸುಗ ಪ್ರದರ್ಶಿಸುತ್ತಿದ್ದ ಕೌಶಲ್ಯ. ಸೋಜಿಗವೆಂದರೆ ನಮ್ಮಲ್ಲಿ ತರಕಾರಿಯನ್ನು ಹೀಗೆ ಜೋಡಿಸುತ್ತಾರೆ. ಕೆಲವರಂತೂ ಮಾರುತಿ ವ್ಯಾನ್ ನಂತಿದ್ದ ವಾಹನದ ಹಿಂದಿನ ಬಾಗಿಲನ್ನು ತೆಗೆದು ಆ ಜಾಗದಲ್ಲಿ ಪೇರಿಸಿಟ್ಟ ಮಾಂಸವನ್ನು ಮಾರುತ್ತಿದ್ದರು. ಅಲ್ಲಿನ ಜನರಂತೂ ಮುಗಿಬಿದ್ದು ಅವುಗಳನ್ನು ಖರೀದಿಸುತ್ತಿದ್ದ ಪರಿ ತನ್ನ ಸರಂಜಾಮನ್ನು ಸೀದು ಹಾಕಿದರೆ ಸಾಕೆಂಬಂತೆ ಕೊಳ್ಳುವವರಿಗೆ ತರಹೇವಾರಿ ಆಮಿಶವನ್ನೀಯುತ್ತಿದ್ದ ವ್ಯಾಪಾರಿಗಳಿಗೆ ಉತ್ತಮ ಸ್ಪಂದನೆಯಂತಿತ್ತು. ಇಲ್ಲಿನ ಇನ್ನೊಂದು ವಿಶೇಷವೆಂದರೆ ಬಹುಪಾಲು ವ್ಯಾಪಾರಿಗಳು ಗಂಡಸರು ಹಾಗೂ ಬಹುಪಾಲು ಗ್ರಾಹಕರು ಹೆಂಗಸರಾಗಿದ್ದದ್ದು. ಇದನ್ನೆಲ್ಲಾ ಕಣ್ತುಂಬಿಸಿಕೊಂಡು ಕುಳಿತು ನೋಡುತ್ತಿದ್ದ ನನಗೊಂದು ಶಾಕ್ ಕಾದಿತ್ತು. ಹದ್ದಿನಂತಿದ್ದ ಯಾವೊದೋ ಹಕ್ಕಿಯೊಂದನ್ನು ಹಿಡಿದಿದ್ದೊಬ್ಬನು ನಮ್ಮ ಕಾರಿನ ಬಳಿ ಒಂದೇ ಉಸುರಿಗೆ ಓಡಿ ಬರುತ್ತಿದ್ದ. ಕೆಲ ಕ್ಷಣದಲ್ಲೇ ಪ್ರತ್ಯಕ್ಷನಾದ ಆತ ನನ್ನ ಮುಖಕ್ಕೆ ಆ ಸತ್ತ ಹಕ್ಕಿಯನ್ನಿಡಿದು ತನ್ನ ಬಲಗೈ ಬೆರಳುಗಳನ್ನು ಮಡಚಿ ಬಿಚ್ಚಿ ’ಫೈವ್ ಡಾಲರ್’ ಎನ್ನುತ್ತಾ ದಂತ ಪಂಕ್ತಿ ಪ್ರದರ್ಶನ ಮಾಡುತ್ತಿದ್ದ. ತಬ್ಬಿಬ್ಬಾದ ನಾನು ಏನು ಜರುಗುತ್ತಿದೆಯೆಂದು ಅರ್ಥವಾಗದೆ ಮೊಹಮ್ಮದ್ ನತ್ತ ನೋಡಿದೆ. ಹಿಂದಿದ್ದ ’ಗಾಝ್ಮೆಂಡ್ ಸೆಕ’ಆ ಅನಿರೀಕ್ಷಿತ ಆಗಂತುಕನನ್ನು ಓಡಿಸುವಂತೆ ಮೊಹಮ್ಮದನಿಗೆ ಆಗ್ರಹಿಸಿದ. ಮೊಹಮ್ಮದ್ ಜೋರಾಗಿ ಗದರಿಸಿದರೂ ಕದಲದ ಆಸಾಮಿ ಬೆರಳನ್ನು ನಾಲ್ಕು ಮಾಡಿ, ನಾಲ್ಕಕ್ಕೆ ಇಂಗಳೀಷಿನಲ್ಲಿ ಏನು ಹೇಳಬೇಕೆಂದು ಗೊತ್ತಿಲ್ಲದೆ ಹಲ್ಕಿರಿಯುತ್ತಲೇ ಇದ್ದ. ಮೊಹಮ್ಮದ್ ಅವನೊಡನೆ ಅದ್ಯಾವ ರಾಜಿಗೆ ಬಂದನೋ ಆ ದೇವರಿಗೇ ಗೊತ್ತು, ಅಂತೂ ಆತ ಪಕ್ಕ ಸರಿದರೂ ನನ್ನನ್ನು ತೀಕ್ಷ್ಣವಾಗಿ ನೋಡುವುದನ್ನು ಜಾರಿಯಲ್ಲಿಟ್ಟಿದ್ದ. ಆ ಅನಿರೀಕ್ಷಿತ ಘಟನೆಯ ಸೂತ್ರಧಾರನ ಮುಖವನ್ನು ನಾನೂ ನೋಡುತ್ತಲೇ ಇದ್ದೆ.

ಯಾವುದೋ ಅನ್ಯ ಗ್ರಹ ಜೀವಿಯನ್ನು ನೋಡುವ ಹಾಗೆ ನನ್ನನ್ನು ನೋಡುತ್ತಿದ್ದ ಅಲ್ಲಿನ ಹಲವಾರು ಜನರನ್ನ ಕಂಡೆ. ಕಾಬುಲ್ ನ ಹೃದಯ ಭಾಗಕ್ಕೆ ಬಂದಿದ್ದ ನನ್ನ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುವ ಸಲುವಾಗಿಯೋ ಇಲ್ಲಾ ಅನುಕಂಪವೋ ತಿಳಿಯದು. ಕುಳ್ಳಗಿನ ಮಂಗೋಲಿಯನ್ ಮುಖದವರು, ಅಜಾನುಬಾಹು ಪಠಾನ್ ಗಳು, ಸ್ಫುರದ್ರೂಪಿ ಪಾರ್ಸಿಗಳು, ಉತ್ತರ ಭಾರತೀಯರಂತೆಯೂ ಕಾಣುವ ಕೆಲ ಮಂದಿಯನ್ನು ಒಂದೇ ಜಾಗದಲ್ಲಿ ನೋಡಿ ಪುಳಕಿತನಾಗಿದ್ದೆ. ಶ್ವೇತ, ಕಪ್ಪು, ಕಂದು, ಕೆಂಪು ಬಣ್ಣದ ವೈವಿಧ್ಯಮಯ ನಿಲುವಂಗಿ, ಪೈಜಾಮ, ತುಂಡು ಕೋಟು, ಕತ್ತು ಪಟ್ಟಿ, ರುಮಾಲಿನಂತಹ ಪೇಟ ಇಲ್ಲವೇ ಪೂರಿಯಂತಿದ್ದ ತಲೆ ಟೋಪಿಯ ಆಫ್ಘಾನ್ ಜನರ ದೇಸೀ ಉಡುಗೆ ನನಗೆ ಇಷ್ಟವಾಗಿತ್ತು. ಬಹುತೇಕರು ಗಡ್ಡಧಾರಿಗಳು. ನಯವಾಗಿ ಮುಖವನ್ನು ಶೇವ್ ಮಾಡಿದ್ದವರೂ ಅಲ್ಲಲ್ಲಿ ಸಿಗುತ್ತಿದ್ದರು. ಮುಖ್ಯವಾಗಿ ಅವರ ಧಿರಿಸುಗಳ ಮೇಲಿದ್ದ ಕೊಳೆಯ ಪ್ರಮಾಣ ಅವರವರ ಬಡತನ/ಸಿರಿತನದ ಅನುಪಾತವನ್ನು ಹೇಳುತ್ತಿತ್ತು. ನಗರ ಪ್ರದೇಶದ ಹೊರಗೆ ಕೆಲವರಂತೂ ಸಾರ್ವಜನಿಕವಾಗಿಯೇ ಬಂದೂಕುಗಳನ್ನು ಹೆಗಲಿಗೇರಿಸಿಕೊಂಡು ಸಾಮಾನ್ಯರಂತೆ ನಡೆದಾಡುತ್ತಿದ್ದುದು ನಿಜಕ್ಕೂ ಆಶ್ಚರ್ಯದ ಜೊತೆ ಜೊತೆಗೆ ಆತಂಕವನ್ನೂ ಉಂಟು ಮಾಡಿತ್ತು. ಇವೆಲ್ಲಾ ಬದುಕಿನೊಟ್ಟಿಗಿನ ಸಾಮಾನ್ಯ ಸಂಗತಿಗಳೆಂಬಂತೆ ವ್ಯವಹರಿಸುತ್ತಿದ್ದ ಜನರನ್ನು ನೋಡಿ ಇದೆಂತಹ ವಿಪರ್ಯಾಸವೆಂದುಕೊಂಡೆ.
ಮುಖ್ಯರಸ್ತೆಗೆ ಬೆನ್ನುತಿರುಗಿಸಿ ಒಂದು ಕಡಿದಾದ ಅಡ್ಡ ರಸ್ತೆಗೆ ಕಾರನ್ನು ಚಾಲಿಸುತ್ತಿದ್ದ ಮೊಹಮ್ಮದ್ "ಮಾಲಿಕ್ ನ ಅಂಗಡಿ ಇಲ್ಲೇ ಹತ್ತಿರದಲ್ಲಿದೆ, ಆದರೆ ಪಾರ್ಕಿಂಗ್ ಮಾಡಲು ಜಾಗ ಸಿಗುತ್ತಿಲ್ಲವಲ್ಲ" ಎಂದು ಗೊಣಗಿಕೊಳ್ಳುತ್ತಿದ್ದ. ಅಷ್ಟರಲ್ಲಿ ಮಾಸಲು ಬಟ್ಟೆಯ ಹುಡುಗರ ಹಿಂಡೊಂದು ಕಾರಿಗಡ್ಡವಾಗಿ ಬಂದು ನಿಂತು ಮೊಹಮ್ಮದ್ ನೊಡನೆ ಯಾವುದೋ ಸಂಭಾಷಣೆಯಲ್ಲಿ ನಿರತವಾದವು. ಆ ಹುಡುಗರಲ್ಲಿ ಒಬ್ಬ ರಸ್ತೆಯ ದಿಕ್ಕುಗಳಿಗೆಲ್ಲಾ ತನ್ನ ಕೈಯನ್ನು ಹರಿಬಿಡುತ್ತಾ ಅದೇನನ್ನೋ ವಿವರಿಸುತ್ತಿದ್ದ. ಬಹುಶಹ ಕಾರಿನ ಪಾರ್ಕಿಂಗ್ ಗಾಗಿ ಖಾಲಿ ಜಾಗವನ್ನು ತೋರಿಸುತ್ತಿರಬಹುದೆಂದುಕೊಂಡೆ. ಅದು ನಿಜವಾಗಿತ್ತು. ಕೃತಜ್ಞತಾಪೂರ್ವಕವಾಗಿ ಆ ಹುಡುಗರಲ್ಲೊಬ್ಬನಿಗೆ ಕೆಲ ನಾಣ್ಯಗಳನ್ನೂ ಎರಡು ನೀರಿನ ಬಾಟಲ್ ಗಳನ್ನೊ ಕೊಟ್ಟ ಮೊಹಮ್ಮದ್ ಕಾರನ್ನು ಹಿಮ್ಮುಖವಾಗಿ ಚಲಾಯಿಸತೊಡಗಿದ. "ಇದ್ಯಾವ ರೀತಿ ಭಿಕ್ಷೆ ಕೇಳುವ ದಂಧೆ?" ಮೂದಲಿಸುವವನಂತೆ ಕೇಳಿದೆ. ಸ್ವಗತದಲ್ಲೇ ನಗುವಾಡುತ್ತಿದ್ದವನಂತಿದ್ದ ಮೊಹಮ್ಮದ್ ನನಗೆ ಉತ್ತರಿಸಲಿಲ್ಲ. ನನ್ನ ಪ್ರಶ್ನೆ ಅವನನ್ನು ಘಾಸಿಗೊಳಿಸಿತೇನೋ ಎನಿಸುತ್ತಿತ್ತು. ಆದರೆ ಆ ಕ್ಷಣದ ಮೊಹಮ್ಮದ್ ನ ನಡವಳಿಕೆ ಸಂತನೊಬ್ಬನಂತಿತ್ತು.

ಕೆಲ ಕಟ್ಟಡಗಳ ಸಾಲಿನ ಸಂದಿಗೆ ನುಗ್ಗಿ ಗಕ್ಕನೆ ಕಾರನ್ನು ನಿಲ್ಲಿಸಿದ ಮೊಹಮ್ಮದ್ ತನ್ನ ಸೊಂಟದಲ್ಲೇನೋ ತಡಕಾಡಿ, ಏನನ್ನೋ ಖಾತ್ರಿ ಪಡಿಸಿಕೊಂಡವನಂತೆ ಬನ್ನಿ ಹೋಗೋಣವೆಂದ. "ಓಹೋ ಮೊಹಮ್ಮದ್ ಕೂಡ ಬಂದೂಕು ಧಾರಿಯೇ!" ಸ್ವಗತಿಸಿಕೊಂಡೆ. ಅಲ್ಲಿ ನಾನೊಬ್ಬ ಮಾತ್ರ ನಿರಾಯುಧನಾಗಿದ್ದದ್ದು!. ಆ ಕ್ಷಣ ಕೊಂಚ ಬಾಯಿಯ ಪಸೆಯಾರಿತ್ತು. ನಾನು ಹೊರ ಬಂದು ಆರಂತಸ್ತಿನ ಆ ಕಟ್ಟಡವನ್ನು ನೋಡುತ್ತಾ ನಿಂತೆ. ಗುಂಡಿನ ಗಾಯಗಳನ್ನ ಹೊದ್ದಿದ್ದ ಕಟ್ಟಡದ ಒಂದು ಕಡೆಯ ಗೋಡೆ ಕೆಲ ವರ್ಷಗಳ ಹಿಂದಿನ ಯುದ್ಧದ ಕಥೆಯನ್ನು ಹೇಳುತ್ತಿತ್ತು. ’ಇಝೈತ್ ಝೈಮಿ’ ಮಾತ್ರ ಬರಲು ಒಲ್ಲೆ ಎಂದೂ, ನಾ ಕಾರಲ್ಲೇ ಕೂರುವೆ ನೀವು ಹೋಗಿಬನ್ನಿರೆಂದು ಬಿನ್ನವಿಸಿಕೊಳ್ಳುತ್ತಿದ್ದ. ಈತನಿಗೆ ಕಾಬುಲ್ ನಗರ ಮೊಹಮ್ಮದ್ ನಂತೆಯೇ ಚಿರಪರಿಚಿತ. ಐದಾರು ವರುಷಗಳ ಹಿಂದೆಯೇ ಕಾಬುಲ್ ನಲ್ಲಿ ಬಂದು ಕೆಲಸ ನಿರ್ವಹಿಸುತ್ತಿದ್ದಾನೆ. ಹೀಗ್ಯಾಕೆ ಇವ ಹೊರ ಬರಲು ಹಿಂದೇಟು ಹಾಕುತ್ತಿದ್ದಾನೆ? ಆ ಹೊತ್ತಿನಲ್ಲಿ ನನಗೇನೋ ಸಂಶಯವಾಗಹತ್ತಿತ್ತು. ಇಝೈತ್ ನ ನಡವಳಿಕೆಯಿಂದ ಆ ಕ್ಷಣ ಎಲ್ಲರ ಮುಖ ಪೇಲವವಾದದ್ದನ್ನು ಗಮನಿಸಿದೆ. ಆ ಇಬ್ಬರು ಯೂರೋಪಿಯನ್ನರು ಜಗಳ ಮಾಡುವಂತೆ ನನಗರ್ಥವಾಗದ ಭಾಷೆಯಲ್ಲಿ ಏರು ದನಿಯಲ್ಲಿ ಮಾತನ್ನು ಹಂಚಿಕೊಳ್ಳುತ್ತಿದರು. "ಇವನಿಲ್ಲಿರಲಿ, ನಡೆಯಿರಿ ನಾವು ಹೋಗೋಣ" ಗಾಝ್ಮೆಂಡ್ ನಮಗೆ ಆದೇಶವನ್ನಿತ್ತು ಸೊಂಟ ತಡಕಾಡಹತ್ತಿದ. ಎಲ್ಲಿ ಹೋಗುತ್ತಿದ್ದೆವೋ?.. ಏನು ನಡೆಯುತ್ತಿದೆಯೋ?.. ನನಗಾಗ ಪ್ರತಿಯೊಂದೂ ಅಸಮಂಜಸದಂತಾಗಿ ಜೊತೆಗಿದ್ದಿಬ್ಬರನ್ನೂ ಸುಲಭವಾಗಿ ನಂಬಲಾರದ ಮನಸ್ಥಿತಿ ಮಾರ್ಪಾಟಾಗಿತ್ತು.

ಕಟ್ಟಡಗಳು ಒಂದಕ್ಕೊಂದು ಅಂಟಿಕೊಳ್ಳಲು ತವಕಿಸುತ್ತಿರುವಂತಿರೋ ಬಲು ಇಕ್ಕಟ್ಟಾದ ನಿರ್ಜನ ಪ್ರದೇಶವದು. ಮಾರುದ್ದ ಹೆಜ್ಜೆಯನ್ನಿಟ್ಟು ನಡೆಯುತ್ತಿದ್ದ ಮೊಹಮ್ಮದ್ ನನ್ನು ನಾವಿಬ್ಬರೂ ಹಿಂಬಾಲಿಸುತ್ತಿದ್ದೆವಾದರೂ ಅವನ ಗತಿಗೆ ನಮ್ಮನ್ನು ಒಗ್ಗಿಸಿಕೊಳ್ಳಲಾಗದೆ ಹಿಂದೆ ಬೀಳುತ್ತಿದ್ದೆವು. ಒಮ್ಮೆ ನಿಂತು ನಮ್ಮನ್ನು ನೋಡಿ "ಕೆಲವೇ ನಿಮಿಷಗಳ ಕಾಲ್ನಡೆಯಷ್ಟೆ" ಎಂದ. ನನಗರಿವಾದಂತೆ, ಸಂತೆ ನಡೆಯುತ್ತಿದ್ದ ಹಿಂದಿನ ಭಾಗದಲ್ಲಿ ನಾವಿದ್ದೆವು. ಸಂತೆಯ ಜನರ ಗಿಜಿಗಿಜಿ ಶಬ್ದ ನಾನಿದ್ದಲ್ಲಿಗೆ ಅಸ್ಪಷ್ಟವಾಗಿ ತಲುಪುತ್ತಿತ್ತು. ಅನೀರಿಕ್ಷತವಂತೆ ’ಭಗ್ ’ಎಂಬಂತೆ ಬಂದಿತ್ತು ಕಠೋರ ವಾಸನೆ. "ಓಹ್.. ಇದೇನಿದು ಸಹಿಸಲಸಾಧ್ಯ..!" ಒಮ್ಮೆಗೆ ನಾನೂ ಮತ್ತು ಗಾಝ್ಮೆಂಡ್ ಕೂಗಿಕೊಂಡೆವು. "ಜೋರಾಗಿ ಹೆಜ್ಜೆ ಹಾಕಿ ನೀವು, ಸಂತೇಲಿ ಉಳಿಯೋ ಮಾಂಸನೆಲ್ಲಾ ಆ ಗಟಾರಕ್ಕೆ ಎಸೆದುಬಿಡ್ತಾರಲ್ಲಾ.....?" ಎಂದು ರಾಗವಾಡುತ್ತಿದ್ದ ಮೊಹಮ್ಮದ್. ಕುತೂಹಲಕ್ಕೆ ಒಮ್ಮೆ ನೋಡುವೆನೆಂದರೂ ಗಟಾರವದು ದೃಷ್ಟಿಗೆ ನಿಲುಕುತ್ತಿರಲಿಲ್ಲ. ಆಳೆತ್ತರದ ಗೋಡೆ ಮರೆಮಾಡಿತ್ತು. ನನಗೋ ತಡೆಯಲಾರದ ಸಿಟ್ಟು ಬರಲಾರಂಭಿಸಿತ್ತು. ಯಾರ ಮೇಲೆ? ಗೊತ್ತಿಲ್ಲ! ನನ್ನನ್ನು ಇಲ್ಲಿಗೆ ಕಳುಹಿಸಿದ ಕಂಪನಿಯ ಮೇಲೋ, ನನ್ನ ಕರ್ಮಕ್ಕೋ ಅಥವಾ ಮೊಹಮ್ಮದ್ ನ ಮೇಲೋ.. ನಿರ್ಧರಿಸಲಾಗಲಿಲ್ಲ.

ಸುಮಾರು ಆರಾಳೆತ್ತರದ ಕಾಂಪೌಂಡ್ ಗೋಡೆ ತನ್ನ ನೆತ್ತಿಯ ಮೇಲೆ ಮುಳ್ಳಿನ ಸುರುಳಿಯ ಹರವನ್ನು ಹೇರಿಕೊಂಡು ನಿಂತಿತ್ತು. ಅದಕ್ಕೆ ಅಷ್ಟೇ ಎತ್ತರಕ್ಕಿದ್ದ ಕಬ್ಬಿಣದ ಗೋಡೆಯ ರೂಪದ ಗೇಟನ್ನು ಸಿಕ್ಕಿಸಿದ್ದರು. ಅದರ ಮುಂದೆ ಬಂದು ನಿಂತ ಮೊಹಮ್ಮದ್ ಒಮ್ಮೆಗೇ ಬಲಗೈಯಲ್ಲಿ ಬಡಿಯಲು ಶುರುವಾದ. ಗೇಟಿನ ಮಧ್ಯಕ್ಕಿದ್ದ ನಾಲ್ಕಿಂಚಗಲದ ಆಯತಾಕಾರದ ಕಿರು ಕಿಂಡಿಯೊಂದರ ಬಾಗಿಲು ಸರಕ್ಕನೆ ಜರುಗಿ ಎರಡು ಕಣ್ಣುಗಳು ಪಿಳಿ ಪಿಳಿ ಎಂದಾಡುತ್ತಿತ್ತು. ಕೆಲ ಕ್ಷಣಗಳ ನಂತರ ಕಿರ್ರ್ ಎಂದು ಅರಚುತ್ತಾ ಗೋಡೆಯ ಪಕ್ಕಕ್ಕೆ ಸರಿದ ಆ ಬೃಹದಾಕಾರದ ಕಬ್ಬಿಣದ ಬಾಗಿಲು ನಮ್ಮನ್ನು ಒಳಕ್ಕೆ ಬಿಟ್ಟುಕೊಂಡು ಮತ್ತೆ ಮುಚ್ಚಿಕೊಂಡು ಅದು ತನ್ನ ಕಾರ್ಯವನ್ನು ಶಿಸ್ತಿನಿಂದ ಪಾಲಿಸಿತ್ತು. "ಸಲಾಮ್ ವಾಲೈಕುಮ್" ಎಂದ ಆತ ಹಲ್ಲು ಗಿಂಜಿ ನಗುತ್ತಾ ಸ್ವಾಗತಿಸಿದ. ಹಿಂದೆ ನಾನು ನೋಡಿದ ನಮ್ಮ ಕಂಪನಿಯ ಗೆಸ್ಟ್ ಹೌಸ್ ನ ಹೊರಗೆ ಕಾವಲಿದ್ದವರಂತಹುದೇ ಉಡುಪು ಈತನದು. ಅದೇ ರೀತಿಯ ಬಂದೂಕು ಈತನ ಕೈಯಲ್ಲಿ. ಕೈಯಲ್ಲಿ ಅಂತಹ ಆಯುಧವನ್ನಿಡಿದವನ ಮೊಗದಲ್ಲಿನ ಆ ನಗು ನನಗೆ ಕಸಿವಿಸಿ ಎನಿಸಿತ್ತು. ಬಹುಶಹ ಆ ಕ್ಷಣ ಅವನ ನಗು ಮತ್ತು ಬಂದೂಕಿನ ಕೂಡುವಿಕೆ ಶಾಂತಿ ಮತ್ತು ಹಿಂಸೆ ತಬ್ಬಿಕೊಂಡಂತೆ ನನಗೆ ಅನಿಸಿತ್ತೇನೋ! ಎದೆ ಸೆಟೆಸಿ ಗತ್ತಿನಿಂದ ನಿಂತ ಆ ಕಾವಲುಗಾರರೇ ಸರಿಯೆನಿತ್ತೂ ಕೂಡ.

"ಮಾರ್ಕೆಟ್ ಗೆ ಹೋಗೋಣವೆಂದು ಇದ್ಯಾವ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ ನನ್ನನ್ನ? ಇಝೆತ್ ಝೈಮಿ ಕಾರಿನಲ್ಲೇ ಉಳಿಯುತ್ತೇನೆಂಬುದರ ಮರ್ಮವೇನು? ನನ್ನನ್ನು ಅಪಹರಿಸಲೋಸುಗವೇನಾದರೂ ಸಂಚು ನಡೆಯುತ್ತಿದೆಯೇ? ಛೇ.. ಸಾಧ್ಯವಿರಲಿಕ್ಕಿಲ್ಲ. ಏಕೆಂದರೆ ಗಾಝ್ಮೆಂಡ್ ನನಗೆ ಬಹು ಚೆನ್ನಾಗಿ ಗೊತ್ತು, ಗಾಝ್ಮೆಂಡ್ ನಿಗೆ ಮೊಹಮ್ಮದ್ ಚೆನ್ನಾಗಿ ಗೊತ್ತು ಹಾಗೂ ಮೊಹಮ್ಮದ್ ನಿಗೆ ಈ ಜಾಗ. ನೋಡೇ ಬಿಡೋಣ ಏನಾಗುತ್ತೆ.." ಸ್ವಗತಿಸಿಕೊಳ್ಳುತ್ತಿದ್ದೆ ಭಂಡ ಧೈರ್ಯದೊಂದಿಗೆ.
ನನ್ನ ಅಭಿಯಂತರ ಬುದ್ಧಿ ಆ ಜಾಗವನ್ನು ಅಳೆಯಲೆತ್ನಿಸಿತ್ತು. ಸಾವಿರ, ಸಾವಿರದಿನ್ನೂರು ಚದರ ಮೀಟರ್ ವಿಸ್ತೀರ್ಣದ ಪ್ರದೇಶವಿರಬಹುದು. ಎಲ್ಲಾ ದಿಕ್ಕಿಗೂ ಸುತ್ತುವರೆದ ಬಲು ಎತ್ತರದ ಕಾಂಪೌಂಡ್ ಗೋಡೆ. ಒಂದು ಮೂಲೆಯಲ್ಲಿ ಉಕ್ಕಿನ ಹಾಳೆಯ ಹೊದಿಕೆಯಡಿ ಮಲಗಿದ್ದ ಉಗ್ರಾಣವಿತ್ತು. ಅದರ ಪಕ್ಕದಲ್ಲಿ ಸ್ಟೋರೇಜ್ ಕಂಟೈನರ್ ಗಳನ್ನು ಒಂದರ ತಲೆಯೊಂದರ ಮೇಲೊಂದರಂತೆ ಜೋಡಿಸಲಾಗಿತ್ತು. ಎಲೆಕ್ಟ್ರಿಕ್ ಕೇಬಲ್ ಡ್ರಮ್ ಗಳು ಆ ವಿಶಾಲವಾದ ಬಯಲಿನ ಬಹುಪಾಲು ಜಾಗವನ್ನು ಆಕ್ರಮಿಸಿಕೊಂಡಿದ್ದವು. ಎದುರಿಗೆ ಆಧುನಿಕ ಶೈಲಿಯಲ್ಲಿ ಕಟ್ಟಲಾಗಿದ್ದ ಒಂದು ಸಾಧಾರಣ ಗಾತ್ರದ ಬಂಗಲೆ. ಬಂಗಲೆಯ ಮುಂದುಗಡೆ ನಾಲ್ಕಾರು ಕುರ್ಚಿ, ಮೇಜುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಮೇಜಿನ ಮೇಲೆ ಒಂದಷ್ಟು ಖರ್ಜೂರ, ಬೂಂದಿ ಖಾರದಂತಿದ್ದ ತಿಂಡಿ, ಬತ್ತಾಸು, ಸಕ್ಕರೆಯ ದಪ್ಪ ಚೂರುಗಳನ್ನು ತಟ್ಟೆಗಳಲ್ಲಿಟ್ಟು ಸಿಂಗರಿಸಿದ್ದರು. ಬಂಗಲೆಯ ಪಕ್ಕದಲ್ಲೊಂದು ನೀರಿನ ಬೋರ್ ವೆಲ್ ಇತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಆ ರೀತಿಯ ಬೋರ್ ವೆಲ್ ನೋಡಿದ್ದೆ. ಆ ಕಾವಲುಗಾರ ಬೋರಿನ ನೀರನ್ನು ಹಿಡಿದು ಕುಡಿಯುತ್ತಿದ್ದ. ಬಹುಶಹ ಅದೇ ಅವರ ನೀರಿನ ಮೂಲವಿರಬಹುದು ಅನಿಸಿತ್ತು. ನಾವೆಲ್ಲರೂ ಕುರ್ಚಿಗಳ ಮೇಲೆ ಆಸಿನರಾದೆವು. ಸುಮಾರು ಅರವತ್ತರ ಪ್ರಾಯದ ಹೆಣ್ಣೊಂದು ಹರಿವಾಣದಲ್ಲಿ ಚಹಾ ಹೊತ್ತು ತಂದಿಟ್ಟಳು. ಆಶ್ಚರ್ಯವೆಂದರೆ ಆಕೆ ಸಲ್ವಾರ್ ಕಮೀಜ್ ನಲ್ಲಿದ್ದಳು. ನಮ್ಮನ್ನು ಕನಿಷ್ಟ ಕತ್ತೆತ್ತು ನೋಡುವ ಉಮೇದೂ ಆಕೆಗಿರಲಿಲ್ಲವೇನೋ.. ಹಾಗೇ ಒಳನಡೆಯಿತು ಆ ಹೆಂಗಸು. ಅಲ್ಲಿ ಎಲ್ಲರೂ ಮೌನ. ಗಾಢ ನಿಶ್ಯಬ್ಧ. ಏಕೆಂದು ತಿಳಿಯುತ್ತಿಲ್ಲ. ನಾ ಮೊಹಮ್ಮದ್ ಮುಖವನ್ನು ನೋಡಿದೆ. ನನ್ನನ್ನು ಸಮಾಧಾನಿಸಲೇನೋ ಎಂಬಂತೆ ಆತ ಕತ್ತನ್ನಾಡಿಸಿ ನಕ್ಕ. ಕೆಲ ಕ್ಷಣಗಳು ಚಹಾ ಹೀರುವಿಕೆಯ ಬಾಯ್ಚಪ್ಪರಿಕೆ ಶಬ್ದದಿಂದ ತುಂಬಿ ಹೋಗಿತ್ತು.

ಮಂಗೋಲಿಯನ್ ಮುಖದವನೊಬ್ಬ ಉಗ್ರಾಣದೆಡೆಯಿಂದ ನಮ್ಮ ಬಳಿ ತುಸು ವೇಗವಾಗಿ ನಡೆದು ಬಂದು ಎಲ್ಲರಿಗೂ ಸ್ವಾಗತ ಕೋರಿ ಕೈ ಕುಲುಕಿದ. ಹೆಸರು ’ಝೆಮರ್ ಅಬ್ದುಲ್ಲಾ’ ಎಂದು ಪರಿಚಯಿಸಿಕೊಂಡ. ಇವನೇ ಇದೆಲ್ಲದರ ಮಾಲೀಕನೆಂಬುದು ಗೊತ್ತಾಗಿತ್ತು. ಈತನ ವಿಶೇಷವೆಂದರೆ ನಮ್ಮ ಹಾಗೆಯೇ ಉಡುಪನ್ನು ಧರಿಸಿದ್ದದ್ದು ಮತ್ತು ಸರಾಗವಾಗಿ ಉರ್ದು ಮಾತನಾಡುತ್ತಿದ್ದದ್ದು. ನನ್ನನ್ನು ಭಾರತೀಯನೆಂದು ಬಲು ಬೇಗ ಗುರುತಿಸಿದ್ದ ಆತ ಭಾರತದಲ್ಲಿನ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಶುರುವಿಟ್ಟುಕೊಂಡ. ನಲವತ್ತರ ಪ್ರಾಯದವನೆನಿಸುತ್ತಿತ್ತು. ವ್ಯವಹಾರಲೋಸುಗವಾಗಿ ಸುಮಾರು ಹತ್ತಕ್ಕೂ ಹೆಚ್ಚು ಬಾರಿ ಭಾರತಕ್ಕೆ ಭೇಟಿಯಿತ್ತಿದ್ದಾನಂತೆ. ಮುಂಬೈ, ದೆಹಲಿ ಮತ್ತು ಸೂರತ್ ನಗರಗಳಿಗೆ ಹೆಚ್ಚಿನ ಬಾರಿ ಬಂದು ಹೋಗಿರುವುದಂತೆ. ಇತ್ತೀಚೆಗಷ್ಟೇ ತನ್ನ ತಂದೆಯ ಹೃದಯ ಚಿಕಿತ್ಸೆಗೆ ದೆಹಲಿಗೆ ಬಂದಿದ್ದನಂತೆ. ಅಲ್ಲಿನ ಶ್ರೀಮಂತರಲ್ಲಿ ಇವನೂ ಒಬ್ಬನಿರಬಹುದು ಎಂದುಕೊಂಡೆ. ಆತನ ಮಾತುಗಳನ್ನು ಕೇಳುತ್ತಾ ನಾನೊಂದು ಅಜ್ಞಾತ ಸ್ಥಳಕ್ಕೆ ಬಂದಿರುವೆನೆಂಬ ಭಾವನೆಯೇ ದೂರವಾಗುತ್ತಲಿತ್ತು. ಬಲು ಆಕರ್ಷಕ ರೂಪು ಮತ್ತು ಮಾತು ಆತನದು. ಎಷ್ಟಾದರೂ ವ್ಯಾಪಾರಸ್ಥನಲ್ಲವೇ?

ನನಗೆ ಬೇಕಾಗಿದ್ದ ಸಾಮನು ಸರಂಜಾಮುಗಳೆಲ್ಲಾ ಆ ಉಗ್ರಾಣದಲ್ಲಿದ್ದವು. ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗರು ಉತ್ಸಾಹದಿಂದ ನನಗೆ ನೆರವಾಗುತ್ತಿದ್ದರು. ಬಹುತೇಕ ಎಲ್ಲರಿಗೂ ಸ್ವಲ್ಪ ಉರ್ದು ಬರುತ್ತಿತ್ತು. ಅಗತ್ಯವಿದ್ದ ಎಲ್ಲಾ ಸಾಮಾನುಗಳು ಒಂದೆಡೆಯೇ ಸಿಕ್ಕ ಸಂತೋಷ ಒಂದೆಡೆಯಾದರೆ, ಬಹುತೇಕವು ಚೈನೀ ನಿರ್ಮಿತವಾದವುಗಳು. ಕಂದಹಾರ್ ಕ್ಯಾಂಪ್ ನಲ್ಲಿದ್ದ ಅಮೆರಿಕೆಯ ಸೈನಿಕ ಎಂಜಿನಿಯರುಗಳು ಚೈನೀ ಮಾಲುಗಳನ್ನು ಎಡಗೈಯಲ್ಲಿಯೂ ಹಿಡಿಯುತ್ತಿರಲಿಲ್ಲ. ಅದೊಂದು ಪೀಕಲಾಟವೇ ಸರಿ. "ನಿಮ್ಮಲ್ಲಿ ಅಮೆರಿಕಾ ನಿರ್ಮಿತ ವಸ್ತುಗಳು ಇದೆಯೆಂದು ಕೇಳಿ ಇಲ್ಲಿ ಬಂದೆವು ಆದರೆ ಇದೆಲ್ಲಾ ಚೈನೀ ಮಾಲುಗಳು.." ರಾಗವೆಳೆದೆ. "ಈ ಬಿಳಿಯರೆಲ್ಲಾ ಇದನ್ನೇ ತಗೋಳ್ಳೊದು ಸಾರ್, ನೀವೇನ್ ಯೋಚ್ನೆ ಮಾಡ್ಬೇಡಿ. ಕಣ್ಮುಚ್ಕೊಂಡು ತಗೊಂಡು ಹೋಗಿ, ಅಷ್ಟಕ್ಕೂ ಇಲ್ಲಿ ಬಿಟ್ಟರೆ ಇಡೀ ಅಫ್ಘಾನಿಸ್ತಾನದಲ್ಲಿ ಎಲ್ಲಿಯೂ ಈ ನಮೂನೆಯ ವಸ್ತುಗಳು ದೊರೆಯುವುದಿಲ್ಲ" ಝೆಮರ್ ನನ್ನನ್ನು ಪುಸಲಾಯಿಸಹತ್ತಿದ. ಮೊಹಮ್ಮದ್ ಕೂಡ ಆತನ ಪ್ರತೀ ಮಾತಿಗೂ ’ಹೂಂ’ ಎಂದು ತಾಳ ಹಾಕುತ್ತಿದ್ದ. "ನಿಮ್ಮ ಗ್ರಾಹಕ ಲೈಸೆನ್ಸ್, ವಿತರಣೆಗಾರರ ವಿವರಗಳು, ಕ್ರೆಡೆನ್ಶಿಯಲ್ಸ್ ಇತ್ಯಾದಿ ಏನಾದರೂ ಇದೆಯೇ?" ಎಂದು ಪ್ರಶ್ನಿಸಿದ ನನ್ನನ್ನು ಮೇಲಿನಿಂದ ಕೆಳಗೆ ನೋಡಿ "ಅದೊಂದೂ ನಮ್ಮಲ್ಲಿ ಇಲ್ಲಾ ಸಾರ್, ದುಡ್ಡೂ ಕೊಟ್ಟರೆ ಮಾಲು ಅಷ್ಟೇ" ಎಂದ ಅವನ ಮಾತಿನ ಧಾಟಿಗೆ ನಿರುತ್ತರನಾಗಿದ್ದೆ. ಅವ ಕೊಟ್ಟ ಬೆಲೆಯ ನಕಲು ರಸೀದಿ ನೋಡಿ ನಾ ದಂಗಾಗಿ ಹೋದೆ. ಅಂತರ್ರಾಷ್ಟ್ರೀಯ ಮಾರುಕಟ್ಟೆಯ ನಿಗದಿ ಬೆಲೆಗಿಂತ ಆರು ಪಟ್ಟು ಹೆಚ್ಚಿನದಿತ್ತು ಆ ಬೆಲೆಗಳು. ಅದೂ ಚೈನೀ ಮಾಲಿಗೆ! ಅತೀ ಶೀಘ್ರವಾಗಿ ದುಡ್ಡನ್ನು ಮಾಡಬಯಸುವವರು ಇಲ್ಲಿಗೆ ಬರಬೇಕು ನೋಡಿ. ಅಮೆರಿಕಾ ಹಾಗೂ ಈ ನ್ಯಾಟೊ ಪಡೆ ಅದೆಷ್ಟು ಬಿಲಿಯನ್ ಹಣ ಇಲ್ಲಿ ತಂದು ಸುರಿಯುತ್ತಿದ್ದಾರೋ ಗೊತ್ತಿಲ್ಲ. ಒಂದು ವೇಳೆ ಅದೇ ಹಣವನ್ನು ಈ ದೇಶ ನಿರ್ಮಿಸುವಲ್ಲಿ ತೊಡಗಿಸಿದ್ದೇ ಆದರೆ ಯಾವ ಅಭಿವೃದ್ದಿ ಹೊಂದಿದ ದೇಶಕ್ಕಿಂತಲೂ ಕಡಿಮೆ ಇಲ್ಲದಂತೆ ಮಾಡಬಹುದು ಎಂಬುದರಲ್ಲಿ ಸಂಶಯವಿಲ್ಲ. "ಇಷ್ಟೊಂದು ಬೆಲೆ ಏಕೆ?" ಮುಖ ಗಂಟಿಕ್ಕಿಕೊಂಡೇ ಕೇಳಿದೆ. "ಕಳೆದ ವಾರ ಕರಾಚಿಯಿಂದ ಜಲಾಲಾಬಾದ್ ಮಾರ್ಗವಾಗಿ ಕಾಬುಲ್ ಗೆ ಬರಬೇಕಿದ್ದ ನಮ್ಮ ಗೂಡ್ಸ್ ಕಂಟೈನರ್ ಅನ್ನು ಪಾಕಿಸ್ತಾನದ ಬಾರ್ಡರ್ ನಲ್ಲಿ ಹೊಡೆದು ಉರುಳಿಸಿಬಿಟ್ರು. ಮಿಲಿಯನ್ ಡಾಲರ್ ನಷ್ಟ ಆಯ್ತು. ಯಾರನ್ನ ಕೇಳೋದು? ಸಾರ್.. ಇಲ್ಲಿನ ವ್ಯವಹಾರ ನಿಮ್ಮ ದೇಶದ ಹಾಗಲ್ಲ" ಎಂದ ಝೈಮರ್ ನ ಉತ್ತರಕ್ಕೆ ನಾ ಏನು ಹೇಳಬೇಕೆಂದು ತೋಚದೆ ಸುಮ್ಮನಾದೆ.

ತಕ್ಷಣ ನನ್ನ ಮೇಲಧಿಕಾರಿಯೊಡನೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದೆಂದು ತೀರ್ಮಾನಿಸಿದೆ. ಆದರೆ ನನ್ನ ಬಳಿ ಇದ್ದ ಮೊಬೈಲ್ ಫೋನ್ ನಲ್ಲಿ ಜರ್ಮನಿಯಲ್ಲಿದ್ದ ಆತನನ್ನು ಸಂಪರ್ಕಿಸಲು ಕಷ್ಟವಾಗುತ್ತಿತ್ತು. ನನ್ನ ಸಮಸ್ಯೆ ಅರಿತವನಂತೆ ’ಝೈಮರ್’ ತನ್ನ ಕಿಸೆಯಿಂದೊಂದು ಭಾರವಾದ ವಾಕಿ-ಟಾಕಿ ತರಹದ ಫೋನ್ ಒಂದನ್ನು ತೆಗೆದು ನನ್ನ ಕೈಗಿತ್ತು ಇದರಲ್ಲಿ ಪ್ರಯತ್ನಿಸಿ ಎಂದ. "ಅರೆ.. ಇದು ಸೆಟಲೈಟ್ ಫೋನ್!" ಎಂದು ಉದ್ಗರಿಸಿದೆ. ಹೌದೆಂದು ಆತ ತಲೆಯಾಡಿಸಿದ. ಬಹುಪಾಲು ಉಗ್ರಗಾಮಿಗಳು ಇಲ್ಲವೇ ಮಿಲಿಟರಿ ಪಡೆಗಳು ಬಳಸುವ ವಿದ್ಯುನ್ಮಾನ ಸಾಧನ ಈತನ ಬಳಿಯಲ್ಲಿದ್ದದ್ದು ನನಗೆ ಹೇಳಲಾರದ ಆಶ್ಚರ್ಯವನ್ನುಂಟು ಮಾಡಿತ್ತು. ಮೇಲಧಿಕಾರಿ ಅಲ್ಲಿ ಸಿಕ್ಕದ್ದನ್ನು ತೆಗೆದುಕೋ ಪರವಾಗಿಲ್ಲ, ಸದ್ಯಕ್ಕೆ ಬೇರಾವ ಮಾರ್ಗವಿಲ್ಲವೆಂದ. ಝೈಮರ್ ನಿಗೆ ಅಗತ್ಯವಿದ್ದ ಸರಕಿನ ಪಟ್ಟಿಯನ್ನು ಕೊಟ್ಟು, ಎಲ್ಲವನ್ನು ನಮ್ಮ ಗೆಸ್ಟ್ ಹೌಸ್ ಗೆ ಸಾಗಿಸಿರೆಂದು ಹೇಳಿ ಹೊರಡಲನುವಾದೆ. ಆಗ ಮಧ್ಯಾಹ್ನ ಒಂದು ಗಂಟೆ. ಹೊಟ್ಟೆ ತಾಳ ಹಾಕಲಾರಂಭಿಸಿತ್ತು. ನನ್ನ ಮನಸ್ಸನ್ನ ಓದಿದನೋ ಏನೋ ಗೊತ್ತಿಲ್ಲ "ಅಪರೂಪಕ್ಕೆ ಬಂದಿರುವ ನಮ್ಮ ಅತಿಥಿ ಊಟ ಮಾಡಿಕೊಂಡು ಹೋಗಬೇಕು. ನಿಮಗಾಗಿ ರುಚಿಯಾದ ಖಾದ್ಯಗಳು ತಯಾರಿವೆ" ಎಂದ ಝೈಮರ್. ಬಹುಶಹ ನಾವು ಬರುವ ವಿಚಾರ ಇವರಿಗೆ ಈ ಮೊದಲೇ ತಿಳಿದಿತ್ತೇನೋ. "ನಿಮ್ಮ ಊಟ...." ನಾ ರಾಗವೆಳೆದೆ. "ಕೋಳಿ, ಕುರಿಯ ಮಾಂಸ ಮಾತ್ರ ಮಾಡಿಸಿದ್ದೇವೆ. ನೀವು ಹೆದರಬೇಕಾದ್ದಿಲ್ಲ" ಎಂದು ಸಂತೈಸಿದ ನಂತರ ಬಂಗಲೆಯ ಒಳಗೆ ನಾವೆಲ್ಲವೂ ನಡೆದೆವು. ನೆಲದ ಮೇಲಿನ ಕೆಂಪು ಹಾಸಿನ ಮೇಲೆ ಅಗಲವಾದ ಹಿತ್ತಾಳೆಯ ಹರಿವಾಣದಲ್ಲಿ ಹತ್ತು ಜನರಿಗಾಗುವಷ್ಟು ಅರಿಶಿನದ ಅನ್ನ, ಸುಟ್ಟ ಕೋಳಿ ಮತ್ತು ಹುರಿದ ಕುರಿ ಮಾಂಸವನ್ನು ಹರವಲಾಗಿತ್ತು. ಎಲ್ಲರೂ ಒಂದೇ ತಟ್ಟೆಯಲ್ಲಿ ಉಣ್ಣಬೇಕೆಂದು ಝೈಮರ್ ನ ಒತ್ತಾಯಪೂರ್ವ ಆಗ್ರಹ. ದುಬೈನ ಪಾಕಿಸ್ತಾನಿ ಹೋಟೆಲ್ ಗಳಲ್ಲಿ ಸಿಗುವ ಬಿರಿಯಾನಿಯಂತಹುದೇ ರುಚಿ! ಹೊಟ್ಟೆ ಬಿರಿಯುವಷ್ಟು ಇಳಿಸಿದೆ. ಗಾಝ್ಮೆಂಡ್ ನಾಚಿಕೆ ಪಟ್ಟುಕೊಂಡೇ ನನಗಿಂತ ಸ್ವಲ್ಪ ಹೆಚ್ಚೇ ಇಳಿಸಿದ. ಅಲ್ಲಿನ ಆ ಜನರೊಂದಿಗೆ ಊಟದಲ್ಲಿ ಪೈಪೋಟಿ ನೀಡಲು ಯಾರಿಂದಲೂ ಸಾಧ್ಯವಿಲ್ಲವೇನೋ ಎನ್ನಿಸುತ್ತಿತ್ತು ಅವರು ತಿನ್ನುತ್ತಿದ್ದ ಪರಿ. ಪ್ರತಿಯೊಬ್ಬರೂ ಒಂದೊಂದು ಕೋಳಿಯನ್ನು ಪೂರ ತಿಂದು ಮುಗಿಸುತ್ತಿದ್ದರು ಅದೂ ಅಷ್ಟೊಂದು ಅನ್ನದ ಜೊತೆಗೆ. ಮೊಹಮ್ಮದ್ ಮಾತ್ರ ಏನೂ ತಿನ್ನದೆ ಪಕ್ಕದಲ್ಲೇ ಕುಳಿತು ನಮ್ಮೊಂದಿಗೆ ಹರಟುತ್ತಿದ್ದ. ಏಕೆಂದು ಕೇಳಿದರೆ ’ರೋಜಾ’ ಎನ್ನುತ್ತಿದ್ದ. ಆಗ ರಮದಾನ್ ಸಮಯ ಅಲ್ಲದಿದ್ದರೂ ಅವ ಹಜ್ ಗೆ ಹೋಗಿ ಬಂದಾಗಿನಿಂದ ಹೀಗೆ ಕಠಿಣ ಉಪವಾಸವನ್ನು ಮಾಡುತ್ತಿದ್ದಾನೆ ಎಂದು ಝೈಮರ್ ನನಗೆ ತಿಳಿಸಿದ. ಅದಲ್ಲದೇ ಅವನ ಹೆಸರು ’ಹಾಜಿ ಮೊಹಮ್ಮದ್ ’ಆಗಲು ಕಾರಣವೂ ಹಜ್ ಯಾತ್ರೆಯೇ ಎನ್ನುವುದು ಅವರ ಮಾತಿನಿಂದ ವೇದ್ಯವಾಗಿತ್ತು. ಎಷ್ಟಾದರೂ ಧರ್ಮಬೀರುಗಳ ನಾಡಲ್ಲವೇ?

ಈ ಅಪರೂಪದ ಭೇಟಿಯ ನೆನಪಿಗಾಗಿ ನನಗೆ ನನ್ನ ಕೆಲಸದಲ್ಲಿ ತುಂಬಾನೆ ಉಪಯುಕ್ತವಾಗುವ ಒಂದು ಪುಸ್ತಕವನ್ನ ಉಡುಗೊರೆಯಾಗಿ ಕೊಟ್ಟ ಝೈಮರ್ ಬಲು ಆತ್ಮೀಯತೆಯಿಂದ ನಮ್ಮನ್ನು ಬೀಳ್ಕೊಟ್ಟ. ಗೇಟಿನ ಆಚೆಬಂದ ನಾವು ಮತ್ತದೇ ಇಕ್ಕಟ್ಟಾದ ನಿರ್ಜನ ಪ್ರದೇಶದಲ್ಲಿ ಬಿರುಸಿನ ಹೆಜ್ಜೆಗಳನ್ನ ಹಾಕತೊಡಗಿದೆವು. ಈಗ ನನಗೆ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕು ನಿರಾಳನಾಗಿದ್ದರೂ ಇಝೆತ್ ಝೈಮಿ ನಡೆದುಕೊಂಡ ರೀತಿಗೆ ವಿವರಣೆ ಇಲ್ಲದಾಗಿತ್ತು. ಕಾರನ್ನು ನಿಲ್ಲಿಸಿದ್ದ ಸ್ಥಳಕ್ಕೆ ಬಂದೆವು. ಕಾರು ಆ ಜಾಗದಲ್ಲಿ ಇರಲಿಲ್ಲ ಜೊತೆಗೆ ಇಝೆತ್ ಕೂಡ. ಮೊಹಮ್ಮದ್ ಮತ್ತು ಗಾಝ್ಮೆಂಡ್ ಮುಖದಲ್ಲಿ ಬೆವರಿನ ಪದರು ಏರ್ಪಡುವಂತಿತ್ತು. ಗಾಝ್ಮೆಂಡ್ ಮೊಬೈಲ್ ಫೋನೆತ್ತಿಕೊಂಡು ಕಿರುಚಾಡಲಾರಂಭಿಸಿದ. ಏನು ನಡೆಯುತ್ತಿದೆ ಎಂಬುದು ನನಗೆ ಊಹಿಸಲೂ ಆಗುತ್ತಿರಲಿಲ್ಲ. ಅತ್ತ ಕಡೆಯಿಂದ ಇಝೈತ್ ನ ಧ್ವನಿ ಮೆಲ್ಲನೆ ನನಗೆ ಕೇಳಿಸುತ್ತಿತ್ತು. ಫೋನನ್ನು ಕಿಸೆಯಲ್ಲಿ ತುರುಕಿ "ಇಝೆತ್ ಬರ್ತಾ ಇದಾನೆ" ಎಂದಷ್ಟೇ ಹೇಳಿ ಗೋಡೆಯೊರಗಿದ ಗಾಝ್ಮೆಂಡ್. ಕೆಲ ಕ್ಷಣಗಳಲ್ಲೇ ಕಾರು ಅಲ್ಲಿಗೆ ಬಂದು ನಿಂತಿತ್ತು. ಇಝೆತ್ ಹಿಂದೆ ಬಂದು ಕುಳಿತ. ಮೊಹಮ್ಮದ್ ಚಾಲಕನ ಆಸನದಲ್ಲಿ ಆಸೀನನಾದ. ಎಲ್ಲರೂ ಅವರವರ ಸ್ಥಳ ಅಲಂಕರಿಸಿದೆವು. ಕಾರು ವೇಗ ಪಡೆದುಕೊಂಡು ಸಾಗುತ್ತಿತ್ತು. ಆ ಇಬ್ಬರು ಯೂರೋಪಿಯನ್ನರು ತುಸು ಜೋರಾಗಿಯೇ ಮಾತಿನ ವಿನಿಮಯಕ್ಕಿಳಿದಿದ್ದರು.

ಎಲ್ಲವೂ ತನಗೆ ಗೊತ್ತು ಎಂಬತ್ತಿತ್ತು ಮೊಹಮ್ಮದ್ ನ ಮುಖ ಚರ್ಯೆ. "ಅವನು ನಮ್ಮೊಡನೆ ಏಕೆ ಬರಲಿಲ್ಲ? ಕಾರನ್ನು ಚಲಾಯಿಸುತ್ತಾ ಎಲ್ಲಿ ಹೋಗಿದ್ದ?" ಇಝೈತ್ ನ ಹೆಸರನ್ನೆತ್ತದೆ ಮೊಹಮ್ಮದ್ ಗೆ ನಮ್ಮ ಗುಪ್ತ ಭಾಷಾ ವಿನಿಮಯ ವಿದಿಯಂತೆ ಪ್ರಶ್ನಿಸಿದೆ. "ನಾವು ಒಳಗೆ ಹೋಗಿ ಊಟ ಮಾಡ್ಕೊಂಡು ಬಂದ್ವಲ್ಲಾ..? ಹಿಂದಿನ ತಿಂಗಳು ಅಲ್ಲೇ ಅವನ ಅಪಹರಣವಾಗಿತ್ತು. ಕಾವಲುಗಾರರೇ ಬಂದೂಕು ತೋರಿ ಅಪಹರಿಸಿ ಬಲು ದೊಡ್ಡ ಮೊತ್ತ ಕಿತ್ತಿದ್ದರು. ಇವನ ಅದೃಷ್ಟ ಬಿಟ್ಟಿದ್ದಾರೆ. ಸಾಮಾನ್ಯವಾಗಿ ಅಪಹರಣಕಾರರಿಗೆ ಹಣ ಸಂದಾಯವಾದರೂ ತಮ್ಮ ಗೌಪ್ಯತೆಯನ್ನ ನಿಭಾಯಿಸುವ ಸಲುವಾಗಿ ಕೊಂದೇ ಬಿಡುತ್ತಾರೆ. ಅವತ್ತಿನಿಂದ ಇವ ಹೊರಗೇ ಬಂದಿರಲಿಲ್ಲ.. ಪಾಪ ಬಿಳಿಯ" ಎಂದ. ಇದನ್ನು ಕೇಳಿ ನನ್ನೆದೆಯ ಬಡಿತ ಹೆಚ್ಚಾಗಿತ್ತು. ಅಂತಹ ಸ್ಥಳಕ್ಕೆ ನಾ ಹೋಗಿ ಬಂದೆನೇ? ಎಂದು ನನ್ನನ್ನು ನಾನೇ ಎಷ್ಟು ಸಾರಿ ಪ್ರಶ್ನಿಸಿಕೊಂಡೆನೋ ತಿಳಿಯದು. "ಝೈಮರ್ ಸುಮ್ಮನೇ ಇದ್ದನೇ ಆಗ?" ಮರು ಪ್ರಶ್ನಿಸಿದೆ. "ನನಗೆ ಅವನ ಮೇಲೆಯೇ ಅನುಮಾನ, ಹೇಗೆಲ್ಲಾ ಮಾಡಿಯೇ ಇಷ್ಟೊಂದು ಹಣ ಸಂಪಾದಿಸಿದ್ದಾನೆ. ಕಳ್ಳ ಭಡವ" ಎಂದ ಆ ಕ್ಷಣ ನನಗೆ ಮಾತು ಹೊರಬರಲಿಲ್ಲ. ನನ್ನೊಡನೆ ಝೈಮರ್ ನಡೆದುಕೊಂಡ ರೀತಿ ಎಷ್ಟು ಅಪ್ಯಾಯಮಾನವಾಗಿತ್ತು. ಆದರೆ ಮೊಹಮ್ಮದ್ ನ ಈ ಮಾತು? ಗೊಂದಲಮಯನಾಗಿದ್ದೆ. ಮನುಷ್ಯ ಸಂಬಂಧಗಳು ಅದೆಷ್ಟು ಬೇಗ ಹಲವು ಆಯಾಮಗಳನ್ನ ಪಡೆಯುತ್ತಾ ಸಾಗುತ್ತವೆ ಎಂಬ ನೈಜ ಅನುಭವ ನನಗಂದಾಗಿತ್ತು. "ಅದು ಸರೀ, ಆತ ಕಾರನ್ನು ತೆಗೆದುಕೊಂಡು ಎಲ್ಲಿಗೆ ಹೋಗಿದ್ದ?" ನನಗೆ ಸುಮ್ಮನಿರಲಾಗದೇ ಪ್ರಶ್ನಿಸುತ್ತಲೇ ಇದ್ದೆ. "ಕಾರಿನಲ್ಲಿ ಒಬ್ಬನೇ ಕುಳಿತುಕೊಳ್ಳುವುದೂ ಸಾಧುವಲ್ಲ ಹಾಗೂ ಸುರಕ್ಷತೆಯೂ ಅಲ್ಲ. ವಾಹನದಲ್ಲಿ ಕೂತು ಹೊರಗೆ ಸುತ್ತಾಡುತ್ತಿದ್ದರೆ ಬಹುಪಾಲು ಕ್ಷೇಮ. ಅದನ್ನೇ ಆತ ಮಾಡಿದ್ದಾನೆ ಅಷ್ಟೇ.. ಇನ್ಯಾವುದೇ ವಿಶೇಷತೆ ಅದರಲ್ಲಿಲ್ಲ" ಮೊಹಮ್ಮದ್ ನ ಉತ್ತರ ಸ್ಪಷ್ಟವಾಗಿತ್ತು. ಎಂತಹ ವ್ಯೂಹಕ್ಕೆ ಬಂದು ಸುಲಭವಾಗಿ ಹಿಂತಿರುಗುತ್ತಿದ್ದೆನಲ್ಲಾ ಎಂಬ ಭಾವ ನನ್ನನ್ನು ನಿರಾಳನನ್ನಾಗಿಸಿತ್ತು.

ಕಾರು ನಗರದ ಹೊರವಲಯಕ್ಕೆ ಬಂದು ಹಳ್ಳ ತಗ್ಗಿನೊಡನೆ ಮತ್ತೊಮ್ಮೆ ಸರಸಕ್ಕೆ ಬಿದ್ದಿತ್ತು. ನ್ಯಾಟೊ ಮಿಲಿಟರಿ ಪಡೆಯ ಭಾರೀ ಬಂಕರ್ ಗಳೆರೆಡು ಮುಖ್ಯ ರಸ್ತೆಯಲ್ಲಿ ಭಾರೀ ಶಬ್ದಗಳೊಡನೆ ನಮ್ಮ ಕಾರಿನ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದವು. ಸ್ಥಳೀಯ ಪೋಲಿಸರು ಮಿಕ್ಕೆಲ್ಲಾ ವಾಹನಗಳಿಗೆ ಜಾಗ ಬಿಡಿರೆಂದು ಆಗ್ರಹಿಸುತ್ತಿದ್ದರು. ಬಂಕರ್ ನ ಮೇಲೆ ಕುಳಿತಿದ್ದ ಇಬ್ಬರು ಬಿಳಿ ತೊಗಲಿನ ಸೈನಿಕರು ಬೃಹತ್ ಮಶಿನ್ ಗನ್ ಗಳನ್ನು ಗುರಿಯನ್ನಿಡುವಂತೆ ಹಿಡಿದಿದ್ದರು. ಆ ಗನ್ ಗಳಿಗೆ ಸಿಕ್ಕಿಸಿದ್ದ ಗುಂಡುಗಳ ಸರ ನನಗೆ ದೀಪಾವಳಿಯ ಆನೆ ಪಠಾಕಿಯ ಸರವನ್ನು ನೆನಪಿಸುತ್ತಿತ್ತು. ಈ ನಾಟಕೀಯತೆಯ ದೃಶ್ಯವನ್ನು ದಾಟಿ ಮುಂದೆ ಸಾಗುತ್ತಿದ್ದೆವು.  ನಾಳೆ ನಾನು ಮತ್ತೆ ಕಂದಹಾರ್ ಏರ್ ಬೇಸ್ ಗೆ ಹೋಗಬೇಕಿದೆ, ಅದೂ ಆ ನ್ಯಾಟೊ ಮಿಲಿಟರಿ ವಿಮಾನದಲ್ಲಿ ಎಂದು ನೆನೆದ ನನಗೆ ತಲೆ ಸುತ್ತುವಂತೆ ಭಾಸವಾಗಹತ್ತಿತು...

(ಮುಂದುವರೆಯುವುದು....)


ನನ್ನೆಲ್ಲಾ ಅನುಭವ ಲೇಖನಗಳು ಇಲ್ಲಿ ಲಭ್ಯ...  http://manjanloka.blogspot.com/

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಮ೦ಜುನಾಥ್ ರೇ, ನಮಸ್ಕಾರ. ಮು೦ದಿನ ಭಾಗವನ್ನು ಆದಷ್ಟು ಬೇಗ ನಿಮ್ಮಿ೦ದ ನಿರೀಕ್ಷಿಸಬಹುದಲ್ಲ? ಅನುಭವ ಕಥನ ಮನೆ ಸೂರೆಗೊ೦ಡಿದೆ. ನಮಸ್ಕಾರ, ನನ್ನಿ.

ಸಕತ್ ರೋಮಾಂಚಕ ಅನುಭವ ಕಣ್ರೀ ಮಂಜು, ಕೇವಲ ೫೦ ರೂ, ಜೇಬಿನಲ್ಲಿಟ್ಟುಕೊಂಡು ಮನೆಯಿಂದಾಚೆ ಬಂದು ಇಂದು ಯಶಸ್ಸಿನ ಸಿಹಿ ಬುತ್ತಿ ಉಣ್ಣುತ್ತಿರುವ ನಾನು ಆಗಾಗ ನನ್ನ ಸ್ನೇಹಿತರ, ಬಂಧು ಬಾಂಧವರ ಜೊತೆ ಹೇಳುವುದುಂಟು, " ಈ ಮಂಜುನಾಥನಿಗೆ ಆ ಮಂಜುನಾಥ ಇದ್ದಾನೆ " ಅಂತ! ನಿಮ್ಮ ಬಗ್ಗೆಯೂ ನಾನು ಹೀಗೇ ಹೇಳಬಹುದೇ?? " ಕುಣಿಗಲ್ ಮಂಜುನಾಥನಿಗೆ ಧರ್ಮಸ್ಥಳದ ಮಂಜುನಾಥನಿದ್ದಾನೆ, ಹೋದಲ್ಲೆಲ್ಲಾ ತಲೆ ಕಾಯ್ದು ಕಾಪಾಡಲು" !!

ಚೆನ್ನಾಗಿದೆ ಮಂಜುನಾಥ್. ಏನೇ ಅನ್ನಿ, ಆಫ್ಘಾನಿಸ್ತಾನಕ್ಕೆ ಹೋಗಿ ಸುರಕ್ಷಿತವಾಗಿ ಮರಳಿ ಬಂದ್ರಲ್ಲ, ಅಲ್ಲಿನ ಅನುಭವಗಳೊಂದಿಗೆ. ತಾವು ಸಸ್ಯಾಹಾರಿ ಲಿಂಗಾಯತ ಎಂದು ಕೊಂಡಿದ್ದೆ, ಕುರಿ ಕೋಳಿ ಪ್ರಿಯರು ಅಂತ ಈಗ ತಿಳಿಯಿತು. ಮುಂದಿನ ಕಂತಿನ ನಿರೀಕ್ಷೆಯಲ್ಲಿ.

ಅನುಭವ ಮತ್ತು ನಿರೂಪಣೆ ಚೆನ್ನಾಗಿದೆ! ವಿವರವಾಗಿ ಬರೆಯುತ್ತಾ ಇರಿ. ಎಲ್ಲ ಸೇರಿ ಒಂದು ಹೊತ್ತಗೆ ಹೊರತರಬಹುದು.

ಮಂಜುನಾಥ್.. ನಿಮ್ಮ ಅನುಭವಗಳನ್ನು ನಾವು ಅನುಭವಿಸುವಂತೆ ನಿರೂಪಿಸಿದ್ದಿರಾ:)..ಓದುಗರನ್ನು ಹಿಡಿದಿಡುವ ನಿಮ್ಮ ನಿರೂಪಣಾಕಲೆ ಖುಷಿಕೊಟ್ಟಿತು. ಧನ್ಯವಾದಗಳು..