ನಾಗಚಂದ್ರನ ಪರಮೋಚ್ಛ ಕಲ್ಪನೆಯ 'ಸರಸ್ವತೀ'

To prevent automated spam submissions leave this field empty.

‘ಅಭಿನವಪಂಪ’ನೆಂದೇ ಖ್ಯಾತನಾಗಿರುವ ನಾಗಚಂದ್ರನು ಸರಸ್ವತಿಯ ವಿಷಯದಲ್ಲಿಯೂ ಅಭಿನವಪಂಪನೇ ಆಗಿರುವುದು, ಅವನ ಎರಡೂ ಕಾವ್ಯಗಳಲ್ಲಿ ಪ್ರಕಟಗೊಂಡಿರುವ ಸರಸ್ವತೀ ದರ್ಶನದಿಂದ ವ್ಯಕ್ತವಾಗುತ್ತದೆ. ‘ಮಲ್ಲಿನಾಥಪುರಾಣ’ ಮತ್ತು ‘ರಾಮಚಂದ್ರಚರಿತಪುರಾಣ’ (ಪಂಪರಾಮಾಯಣ) ಈತನ ಕೃತಿಗಳು. “ನಾಗಚಂದ್ರನು ‘ಮಲ್ಲಿನಾಥಪುರಾಣ’ದಲ್ಲಿ ತನ್ನ (ಸರಸ್ವತಿ) ದರ್ಶನದ ಪ್ರಥಮದರ್ಶನ ಮಾಡಿಸಿ ಅದರ ಪರಿಣಿತಸ್ವರೂಪವನ್ನು ‘ಪಂಪರಾಮಾಯಣ’ದಲ್ಲಿ ತೋರಿದ್ದಾನೆ. ‘ಮಲ್ಲಿನಾಥಪುರಾಣ’ದಲ್ಲಿ ಬರುವ ಸರಸ್ವತೀ ಸ್ತುತಿ ಹೀಗಿದೆ.


ಪದವಿನ್ಯಾಸವಿಲಾಸಮಂಗವಿಭವಂ ಚೆಲ್ವಾದ ದೃಷ್ಟಿಪ್ರಸಾ


ದದೊಳೊಂದಾದ ನಯಂ ಮೃದೂಕ್ತಿ ವನಿತಾಸಾಮಾನ್ಯವಲ್ತೆಂಬ ಕುಂ


ದದ ವರ‍್ಣಂ ನಿಜವೆಂಬ ರೂಪೆಸೆಯೆ ನಾನಾಭಂಗಿಯಂ ಬೇಱೆ ತಾ


ಳ್ದಿ ವಾಗ್ದೇವತೆ ಮಾೞ್ಕೆ ಮತ್ಕೃತಿಗೆ ಲೋಕಾಶ್ಚರ‍್ಯಚಾತುರ‍್ಯಮಂ||


ಪದಗಳ ವಿನ್ಯಾಸ, ವಿಲಾಸ, ಅಂಗವೈಭವ, ಚೆಲುವನ್ನು ಹೆಚ್ಚಿಸುವ ನಯ-ನಾಜೂಕು, ಮೃದುವಾದ ಉಕ್ತಿ, ವನಿತೆಯರಿಗೆ ಸಾಮಾನ್ಯವಾಗಿಯೇ ಇರುವ ವರ್ಣಕ್ಕಿಂತಲೂ ಹೆಚ್ಚು ತೇಜಸ್ಸುಳ್ಳ, ಆದರೆ ಕುಂದದ ನಿಜವಾದ ಸೌಂದರ್ಯವನ್ನು ವಾಗ್ದೇವತೆ ಪಡೆದಿದ್ದಾಳೆ. ವರ್ಣ ಎಂದರೆ ಅಕ್ಷರ ಎಂಬ ಅರ್ಥವೂ ಇದೆ. ಕಾವ್ಯ ಕವಿಸೃಷ್ಟಿಯಾದರೂ ಅದೂ ಪೂರ್ಣ ಸಾಕಾರಗೊಳ್ಳುವುದು ಅಕ್ಷರರೂಪದಲ್ಲಿಯೆ. ಇವೆಲ್ಲವುಗಳನ್ನು ಒಳಗೊಂಡ ಕಾವ್ಯದ ದೃಷ್ಟಿಯೇ ಸರಸ್ವತಿಯ ಮುಖಲಕ್ಷಣ. ‘ನಾನಾಭಂಗಿಯಂ ಬೇಱೆ ತಾಳ್ದಿ’ ಎಂಬಲ್ಲಿ ಸರಸ್ವತಿಯ ವ್ಯಾಪಕತೆ ಪ್ರಕಟವಾಗಿದೆ. ‘ಸರ್ವಭಾಷಾಸರಸ್ವತಿ’ ವಿವಿಧಪ್ರಕಾರಗಳನ್ನು ತಾಳಿ ಪ್ರಕಟವಾಗುವ ಚಿತ್ರ, ನಾಟ್ಯಸರಸ್ವತಿಯನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ‘ಮಲ್ಲಿನಾಥಪುರಾಣ’ದ ಕೊನೆಯ ಪದ್ಯ ಹೀಗಿದೆ.


ಸುಕೃತಿಪ್ರೀತಿಲತಾಸಮುತ್ಕಳಿಕೆ ವಿದ್ವನ್ಮಂಡಳೀರತ್ನಕಂ


ಠಿಕೆ ಧರ್ಮಾಮೃತಮೇಘಮಾಳಿಕೆ ವಚಶ್ರೀನರ್ತಕೀ ನೃತ್ಯವೇ


ದಿಕೆ ಸಾಹಿತ್ಯಸರೋಜಕರ್ಣಿಕೆ ಯಶಶ್ಯ್ರೀಕೇಕರಾಳೋಕ ಚಂ


ದ್ರಿಕೆ ನಿಲ್ಕೀಕೃತಿ ಕಲ್ಪಕೋಟಿವರೆಗಂ ಭದ್ರಂ ಶುಭಂ ಮಂಗಳಂ||


ಪುಣ್ಯವಂತರಾದ ರಸಿಕರ ಪ್ರೀತಿಯ ಬಳ್ಳಿಗೆ ಬಿಟ್ಟ ಮೊಗ್ಗೆ, ವಿದ್ವಾಂಸರ ಮಂಡಳಿಯ ಕೊರಳಲ್ಲಿಯ ರತ್ನಹಾರ, ಧರ್ಮವೆಂಬ ಅಮೃತದ ಮಳೆಗರೆಯುವ ಮೇಘಮಾಲೆ, ಮಾತಿನ ಲಕ್ಷ್ಮಿಯೆಂಬ ನರ್ತಕಿ ಕುಣಿಯುವ ನೃತ್ಯವೇದಿಕೆ, ಸಾಹಿತ್ಯವೆಂಬ ಕಮಲದ ಬೀಜಕೋಶ, ಯಶೋಲಕ್ಷ್ಮಿಯ ಕುಡಿಗಣ್ಣಿನ ಬೆಳದಿಂಗಳು ಆಗಿರುವ ಈ ಕೃತಿ ಕಲ್ಪಕೋಟಿಯವರೆಗೆ ನಿಲ್ಲಲಿ. ಭದ್ರಂ ಶುಭಂ ಮಂಗಳಂ. ತನ್ನ ಕಾವ್ಯವನ್ನು ತಾನೇ ಸ್ತುತಿಸಿಕೊಳ್ಳುತ್ತಿರುವ ನಾಗವರ್ಮನ ಈ ಪದ್ಯ, ಸ್ವಕಾವ್ಯಸ್ತುತಿ ಮಾತ್ರವಾಗಿರದೇ, ಯಾವುದೇ ಒಂದು ಒಳ್ಳೆಯ ಕಾವ್ಯದ ಹಿಂದಿನ ಮಹೋದ್ದೇಶವನ್ನು ನಿರೂಪಿಸುತ್ತದೆ. ಇಲ್ಲಿ ನಮಗೆ ಮುಖ್ಯವಾಗಿರುವುದು ‘ವಚಶ್ರೀನರ್ತಕೀನೃತ್ಯವೇದಿಕೆ’ ಎಂಬ ವಿಶೇಷಣ. ಒಂದು ಒಳ್ಳೆಯ ಕಾವ್ಯದ ಹುಟ್ಟಿಗೆ ಒಳ್ಳೆಯ ವಾಕ್ ಹಾಗೂ ಒಳ್ಳೆಯ ಭಾಷೆ ಬಹಳ ಮುಖ್ಯ. ಲಯಬದ್ಧವಾದ ಪದಗಳ ವಿಲಾಸವು ಕಾವ್ಯದ ಓದಿಗೆ ಅನುಕೂಲವನ್ನು ಒದಗಿಸುತ್ತದೆ. ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ. ಒಳ್ಳೆಯ ಮಾತೂ ಸಹ ಒಂದು ಸಂಪತ್ತು. ಆದರೆ ಧನಸಂಪತ್ತಿನಂತೆ ನಾಶವಾಗುವುದಿಲ್ಲ. ನಾಗವರ್ಮನು ಧನಸಂಪತ್ತಿನಂತೆ ನಾಶವಾಗದ ಮಾತಿಗೆ ಅಧಿದೇವತೆಯಾದ ಸರಸ್ವತಿಯನ್ನು ವಚಶ್ರೀ ಅಂದರೆ ಮಾತಿನ ಲಕ್ಷ್ಮಿ ಎಂದು ಕರೆದಿದ್ದಾನೆ. ‘ತನ್ನ ಕಾವ್ಯವು ವಚಶ್ರೀ ಅಂದರೆ ಮಾತಿನ ಲಕ್ಷ್ಮಿಯಾದ ಸರಸ್ವತಿಯು ನರ್ತನ ಮಾಡುವ ನೃತ್ಯವೇದಿಕೆ’ ಎಂದು ಹೇಳಿರುವುದು ವಿನೂತನವಾಗಿದೆ.


ಪರಿಣಿತ ಕವೀಂದ್ರ ವದನಾ


ಜಿರದೊಳ್ ಮೃದುಪದ ವಿಲಾಸ ವಿನ್ಯಾಸಾಲಂ


ಕರಣಂ ರಂಜಿಸೆ ನರ್ತಿಪ


ಸರಸ್ವತೀಲಾಸ್ಯ ಭೇದಮಂ ಜಡನಱಯಂ||


ಮೃದುವಾದ ಪದಗಳ ವಿಲಾಸ ವಿನ್ಯಾಸದಿಂ ಆಲಂಕೃತಳಾಗಿರುವ ಸರಸ್ವತಿಯು ಪರಿಣಿತರಾದ ಕವಿಗಳ ಮೊಗದಲ್ಲಿ ಲಾಸ್ಯವಾಡುತ್ತಿರುತ್ತಾಳೆ; ಆದರೆ ಅದನ್ನು ಜಡರು ಅರಿಂiiಲಾಗುವುದಿಲ್ಲ. ಸರಸ್ವತಿಯ ನರ್ತನಕ್ಕೆ ತನ್ನ ಕಾವ್ಯವನ್ನೇ ವೇದಿಕೆಯನ್ನಾಗಿಸಿರುವ ನಾಗಚಂದ್ರನ ಈ ಕಲ್ಪನೆಯೂ ವಿನೂತನವಾಗಿಯೇ ಇದೆ. ಬ್ರಹ್ಮನ ಮುಖಕಮಲದಲ್ಲಿ ವಾಸವಾಗಿರುವ ಸರಸ್ವತಿಯು ತಮ್ಮ ಮುಖದಲ್ಲಿ ಬಂದು ನೆಲಸಲಿ ಎಂಬ ಕಲ್ಪನೆಗಿಂತ, ‘ಮೃದುಪದವಿಲಾಸವಿನ್ಯಾಸಾಲಂಕರಣ’ದಿಂದ ಪರಿಣಿತ ಕವಿಗಳ ಮೊಗದಲ್ಲಿ ಲಾಸ್ಯವಾಡಲಿ ಎಂಬ ಪರಿಕಲ್ಪನೆ ಹೊಸದಾಗಿಯೂ, ಅರ್ಥಪೂರ್ಣವಾಗಿಯೂ ಕಾಣಿಸುತ್ತದೆ.


ನಾಗಚಂದ್ರನ ಸರಸ್ವತಿಯ ದರ್ಶನ ಆತನ ‘ಪಂಪರಾಮಾಯಣ’ದಲ್ಲೂ ಮುಂದುವರೆದಿದೆ. ಆ ಕೃತಿಯ ಆರಂಭದ ಪ್ರಾರ್ಥನಾಪದ್ಯದಲ್ಲಿಯೇ ‘ವಿದ್ಯಾನಟೀನಾಟ್ಯವೇದೀಕಲ್ಪಂ ಮುಖಚಂದ್ರಬಿಂಬಂ’ ಎಂಬ ವಿವರಣೆಯಿದೆ.


ಪರಬ್ರಹ್ಮ ಶರೀರಪುಷ್ಟಿ ಜನತಾಂತರ್ದೃಷ್ಟಿ ಕೈವಲ್ಯಬೋ


ಧರಮಾ ಮೌಕ್ತಿಕಹಾರಯಷ್ಟಿ ಕವಿತಾವಲ್ಲೀ ಸುಧಾವೃಷ್ಟಿ ಸ


ರ್ವರಸೋತ್ಪಾದ ನವೀನಸೃಷ್ಟಿ ಬುಧಹರ್ಷಾಕೃಷ್ಟಿ ಸರ್ವಾಂಗಸುಂ


ದರಿ ವಿದ್ಯಾನಟಿನಾಟಕಂ ನಲಿಗೆ ಮತ್ಕಾವ್ಯಸ್ಥಲೀರಂಗದೊಳ್||


ಈ ಪದ್ಯ ‘ಸರಸ್ವತಿಗೆ ತೊಡಿಸಿದ ರತ್ನಕಿರೀಟ’ ಎನ್ನಬಹುದು. ‘ಮಲ್ಲಿನಾಥಪುರಾಣ’ವನ್ನು ವಚಶ್ರೀ ನರ್ತಕಿಯ ನರ್ತನಕ್ಕೆ ನೃತ್ಯವೇದಿಕೆಯನ್ನಾಗಿ ಮಾಡಿದ್ದ ನಾಗಚಂದ್ರ, ‘ಪಂಪರಾಮಾಯಣ’ದಲ್ಲಿ ಇನ್ನೂ ಮುಂದುವರೆದು, ‘ಸರ್ವಾಂಗಸುಂದರಿಯಾದ ವಾಗ್ದೇವತೆ ಎಂಬ ವಿದ್ಯಾನಟಿಯ ನಾಟಕ ತನ್ನ ಕಾವ್ಯ’ ಎಂದು ಹೇಳಿ ಕಾವ್ಯಸರಸ್ವತಿಗೆ ರತ್ನಕಿರೀಟವನ್ನು ತೊಡಿಸಿದ್ದಾನೆ. ಈ ಪದ್ಯದ ಸರಸ್ವತಿಯ ದರ್ಶನದ ಬಗ್ಗೆ ಕನ್ನಡದ ಇಬ್ಬರು ಹಿರಿಯ ಕವಿಗಳಾದ, ದ.ರಾ.ಬೇಂದ್ರೆ ಮತ್ತು ರಂ.ಶ್ರೀ.ಮುಗಳಿ ವಿಸ್ತಾರವಾಗಿ ಚರ್ಚಿಸಿದ್ದಾರೆ. ಸಮಗ್ರವಾಗಿ ಪದ್ಯದ ದರ್ಶನಾಂಶವನ್ನು ವ್ಯಾಖ್ಯಾನಿದ್ದಾರೆ. ಅವರಿಬ್ಬರ ದರ್ಶನಮೀಮಾಂಸೆಯ ವಿವರಗಳನ್ನು ಕೆಳಗಿನಂತೆ ಸಂಗ್ರಹಿಸಲಾಗಿದೆ.


ರಂ.ಶ್ರೀ.ಮುಗಳಿಯವರು ‘ಮಲ್ಲಿನಾಥಪುರಾಣದ ವಚಶ್ರೀನರ್ತಕೀನೃತ್ಯವೇದಿಕೆ ಎಂಬಲ್ಲಿ ವಿಶಿಷ್ಟಕೃತಿಯೊಂದನ್ನು ಮೆಚ್ಚಿದ ಮಾತು ವಿಸ್ತರಗೊಂಡು ‘ವಿದ್ಯಾನಟಿನಾಟಕ’ದ ಸಮಗ್ರರೂಪವಾಗಿ ಇಲ್ಲಿ (ಪಂಪರಾಮಾಯಣ) ಅವತಾರ ತಾಳಿದೆ. ಇಡಿಯ ಪದ್ಯವು ನಾಗಚಂದ್ರನು ಪಡೆದ ಸರಸ್ವತಿಯ ಭವ್ಯದರ್ಶನವನ್ನು ಸಮಗ್ರವಾಗಿ ನಿರೂಪಿಸುತ್ತದೆ. ವಿದ್ಯಾನಟಿನಾಟಕ ಎಂದರೆ ಸರಸ್ವತಿ ಎಂಬ ನಟಿಯ ನೃತ್ಯನಾಟಕ.’ ಎನ್ನುತ್ತಾರೆ. ಅವರು ಮುಂದುವರೆದು ಆರು ಹಂತಗಳಲ್ಲಿ ಪದ್ಯವನ್ನು ವಿಶ್ಲೇಷಿಸಿದ್ದಾರೆ • ‘ಪರಬ್ರಹ್ಮ ಶರೀರಪುಷ್ಟಿ’ - ಪರಮಜಿನನ ಶರೀರಕ್ಕೆ, ಸರಸ್ವತಿಯಿಂದ ದೊರೆಯುವ ಆನಂದದ ಅನ್ನ, ರಸದ ಅಮೃತ ಪುಷ್ಟಿಯನ್ನು ಒದಗಿಸುತ್ತದೆ. ಈ ಜಗತ್ತು ಅಥವಾ ಸೃಷ್ಟಿಯೇ ಪರಮಾತ್ಮನ ಶರೀರ. ಸರಸ್ವತಿಯು ಆನಂದದ ಆಹಾರದಿಂದ ಈ ಸೃಷ್ಟಿಯನ್ನು ಪೋಷಿಸುತ್ತಾಳೆ. ‘ಪ್ರಜಾಪತಿಯು ವಾಕ್ಕಿನಿಂದಲೇ ಶಕ್ತಿಯನ್ನು ತೃಪ್ತಿಯನ್ನು ಪಡೆಯುತ್ತಾನೆ’ ಎಂಬುದು ವೈದಿಕಮತದ ನಂಬುಗೆಯೂ ಆಗಿದೆ.

 • ‘ಜನತಾಂತರ್ದೃಷ್ಟಿ’ - ಜನಸಾಮಾನ್ಯನ ಒಳಗಣ್ಣು. ಹೊರಗಣ್ಣಿನಿಂದ ನೋಡಿದರೆ ಕಾಣದ ಕಾವ್ಯಸತ್ಯ ಮತ್ತು ಸೌಂದರ್ಯ ಒಳಗಣ್ಣಿಗೆ ಕಾಣುತ್ತದೆ. ‘ಜನತೆಯ ಅಂತರ್ದೃಷ್ಟಿ ಎಂದರೆ ಸರಸ್ವತಿ.’ ಆದರೆ ‘ಮುಕ್ತರಿಗೆ ಮಾತ್ರ ಅಂತರ್ದೃಷ್ಟಿ, ಅವರಿಗೇ ಸರಸ್ವತಿಯು ಪ್ರಸನ್ನವಾಗುವವಳು.’

 • ‘ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ’ - ಕೇವಲಜ್ಞಾನವೆಂಬ ಲಕ್ಷ್ಮಿಯ ಕೊರಳಿಗೆ ಮುತ್ತಿನಹಾರದಂತೆ ಸರಸ್ವತಿಯು ಇದ್ದಾಳೆ. ಮುಕ್ತಾವಸ್ಥೆಯಲ್ಲಿ ಪಡೆಯುವ ಜ್ಞಾನಕ್ಕೆ ಸರಸ್ವತಿಯು ಒಂದು ಅಲಂಕಾರ. ಜ್ಞಾನವು ಹೆಚ್ಚುತ್ತಾ ಹೋದಂತೆ ಆನಂದವು ಅದರೊಡನೆ ಸೇರಿಕೊಂಡು ಶೋಭೆಯನ್ನು ಹೆಚ್ಚಿಸುತ್ತದೆ. ಕೈವಲ್ಯಬೋಧಲಕ್ಷ್ಮಿ ತನ್ನಷ್ಟಕ್ಕೆ ತಾನು ಸುಂದರಿಯಾದರೂ, ಸರಸ್ವತಿಯೆಂಬ ಮುತ್ತಿನಹಾರದ ತೊಡುಗೆಯಿಂದ ಮಾತ್ರ ಅವಳ ಸೌಂದಂiiಕ್ಕೆ ಪರಿಪೂರ್ಣತೆ ಲಭಿಸುತ್ತದೆ.

 • ‘ಕವಿತಾವಲ್ಲೀ ಸುಧಾವೃಷ್ಟಿ’ - ಕವಿತೆ ಎಂಬ ಬಳ್ಳಿಗೆ ಅಮೃತದ ಮಳೆಗರೆಯುವವಳು ಸರಸ್ವತಿ. ವಸ್ತು ವಿಷಯ ಪ್ರತಿಭೆ ಎಲ್ಲಾ ಇದ್ದರೂ, ಸರಸ್ವತಿಯ ಸುಧಾವೃಷ್ಟಿ ಇಲ್ಲದಿದ್ದರೆ ಕವಿತೆ ಎಂಬ ಬಳ್ಳಿ ಬಾಡಿಹೋಗುತ್ತದೆ. ಒಂದು ಪಕ್ಷ ಅದು ಉಳಿದರೂ ಅದರ ಹೂವುಗಳಿಗೆ ಸುವಾಸನೆಯಿರುವುದಿಲ್ಲ. ಸರಸ್ವತಿಯ ಕೃಪೆಯಿದ್ದರಷ್ಟೇ ಕಾವ್ಯ ಅಮರವಾಗುವುದು.

 • ‘ಸರ್ವರಸೋತ್ಪಾದ ನವೀನ ಸೃಷ್ಟಿ’ - ಸರಸ್ವತಿಯು ಸರ್ವರಸಗಳಿಂದ ಕೂಡಿದ ನವೀನಸೃಷ್ಟಿಯನ್ನೇ ಬೆಳಕಿಗೆ ತರುವವಳು. ಜೀವನದ ಸರ್ವವಿಧ ಚಿತ್ರಣ, ಸಮಗ್ರದರ್ಶನ, ಆಳ-ಅಗಲಗಳ ನಿರೂಪಣ ಸರ್ವರಸೋತ್ಪಾದದಿಂದ ಆಗುತ್ತದೆ. ಅವುಗಳನ್ನೆಲ್ಲ ಒಟ್ಟುಗೂಡಿಸಿ ಕವಿಯಾದವನು ನವೀನಸೃಷ್ಟಿಯನ್ನು ನಿರ್ಮಿಸುತ್ತಾನೆ. ಪ್ರತಿ ಕವಿಗೂ ಅದು ನವನವೀನವಾಗಿಯೇ ಇರುತ್ತದೆ.

 • ‘ಬುಧಹರ್ಷಾಕೃಷ್ಟಿ’ - ಬಲ್ಲವರ, ಸಹೃದಯರ ಹರ್ಷವನ್ನು ಆಕರ್ಷಿಸುವ ಶಕ್ತಿಯಾಗಿರುವವಳು ಸರಸ್ವತಿ. ಕಾವ್ಯ ಒಳ್ಳೆಯವರನ್ನಷ್ಟೇ ಆಕರ್ಷಿಸುವುದಿಲ್ಲ. ಆದರೆ ಕಾವ್ಯದಿಂದ ಆಕರ್ಷಿತರಾದವರೆಲ್ಲಾ ಒಳ್ಳೆಯವರಾಗುತ್ತಾರೆ, ಸಹೃದಯರಾಗುತ್ತಾರೆ. ‘ಸಮಸ್ತಚೆಲುವನ್ನು ಹೊಂದಿರುವ ಸರ್ವಾಂಗಸುಂದರಿಯಾದ ವಿದ್ಯಾನಟಿಯ ನಾಟಕವು ತನ್ನ ಕಾವ್ಯವೆಂಬ ರಂಗಸ್ಥಳದಲ್ಲಿ ನಡೆಯಲಿ’ ಎಂಬುದು ನಾಗಚಂದ್ರನ ಆಶಯ.

ದ.ರಾ.ಬೇಂದ್ರೆಯವರು ಈ ಪದ್ಯದ ದರ್ಶನವನ್ನು ಗ್ರಹಿಸಿರುವ, ತನ್ಮೂಲಕ ಸರಸ್ವತಿಗೆ ಸುವರ್ಣಕಿರೀಟವನ್ನು ತೊಡಿಸಿರುವ ರೀತಿ ಕೆಳಗಿನಂತಿದೆ.  1. ಈ ಸೃಷ್ಟಿಯೆಂಬ ಕೃತಿಯನ್ನು ರಚಿಸುವಲ್ಲಿ ವಿದ್ಯೆಯೇ ಒಳಗಿಂದ ಪೋಷಣೆ ಕೊಡುವವಳು.

 2. ಆಕೃತಿಯ ರಸರಹಸ್ಯದ ಅರಿಕೆಯುಂಟಾಗುವಂತೆ ಜನತೆಯಲ್ಲಿ ಅಂತರ್ದೃಷ್ಟಿಯಾಗುವಳು.

 3. ತಾನೇ ತಾನಾದ ತನ್ಮಯತೆಯಲ್ಲಿ ಬೋಧರೂಪವಾಗುವವಳು.

 4. ಬ್ರಹ್ಮಪ್ರಕೃತಿಗೆ ಪ್ರತಿಬಿಂಬವಾದ ಕಲಾಸೀಮೆಯಾದ ಕಾವ್ಯಕೃತಿಗಳ ವಿವಿಧರೂಪ ತಳೆವಳು.

 5. ನವೋನವರಸಸೃಷ್ಟಿಯಾಗುವಳು.

 6. ಬಲ್ಲವರಿಗೂ ವಲ್ಲಭೆಯಂತೆ ಸೋಲಿಸುವಳು.

 7. ಅಂಗಾಂಗದಲ್ಲಿ ಸುಂದರಿಯಾಗಿರುವಳು.

 ಇಂತು ಈ ಸಪ್ತಭಂಗಿ ನಯದಲ್ಲಿ ನಯವಾಗಿ ನೃತ್ಯವಾಡುವ ವಿದ್ಯಾನಟಿಯು ಕವಿಗಳ ಉಪಾಸನಾದೇವತೆಯಾಗಿರುವಳು.


‘ಮಲ್ಲಿನಾಥಪುರಾಣ’ದಲ್ಲಿ ‘ಪರಿಣಿತ ಕವಿಗಳ ಮುಖದಲ್ಲಿ ಲಾಸ್ಯವಾಡುವ ಮೃದುಪದವಿಲಾಸವಿನ್ಯಾಸಗಳಿಂದ ಆಲಂಕೃತಗೊಂಡ ಸರಸ್ವತಿಯು ಲಾಸ್ಯವಾಡುವುದನ್ನು ಜಡರು ಅರಿಯಲಾರರು’ ಎಂದಿದ್ದ ನಾಗಚಂದ್ರನೇ ‘ಜನತಾಂತರ್ದೃಷ್ಟಿ’ಯನ್ನು ಸರಸ್ವತಿಗೆ ಸಮೀಕರಿಸಿರುವುದು ಆತನ ಸರಸ್ವತಿಯ ಭವ್ಯದರ್ಶನಕ್ಕೆ ಸಾಕ್ಷಿಯಾಗಿದೆ. ಸರಸ್ವತಿದರ್ಶನದ ವಿಚಾರವೈಭವದಲ್ಲಿ ಪಂಪನಿಗಿಂತ ನಾಗಚಂದ್ರ ಒಂದು ಹೆಜ್ಜೆ ಮುಂದೆಯೇ ಇದ್ದಾನೆ; ಉಳಿದೆಲ್ಲಾ ಕವಿಗಳಿಗಿಂತ ಹಲವಾರು ಹೆಜ್ಜೆ ಮುಂದಿದ್ದಾನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸರಸ್ವತೀ ದರ್ಶನದ ವಿಚಾರವೈಭವದಲ್ಲಿ ನಾಗಚಂದ್ರ (ಅಭಿನವಪಂಪ) ಮೊದಲಸಾಲಿನಲ್ಲಿ ನಿಲ್ಲುತ್ತಾನೆ ನಿಜ. ಆ ಸರಸ್ವತಿಯ ಪ್ರಥಮದರ್ಶನ ನಮಗಾಗುವುದು ಕವಿರಾಜಮಾರ್ಗದಲ್ಲಿ. ಶ್ರೀವಿಶದವರ್ಣೆ ಮಧುರಾ ರಾವೋಚಿತ ಚತುರ ರುಚಿರ ಪದರಚನೆ ಚಿರಂ ದೇವೀ ಸರಸ್ವತಿ ಹಂಸೀ ಭಾವದೆ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ ಇದೊಂದು ಸಕ್ಕತ್ ಡಬಲ್ ಮೀನಿಂಗ್ ಇರೋ ಪದ್ಯ. ಒಂದು ನೇರವಾಗಿ ಸರಸ್ವತಿಗೆ ಆರೋಪಿಸಿದ್ದು, ಇನ್ನೊಂದು ಬರಹಕ್ಕೆ ಹೇಳಿದ್ದು. ’ಮಂಗಳಕರವಾದ ಬಣ್ಣವುಳ್ಳವಳು, ಬಲು ಚೆನ್ನಾದ ನಡೆಯುಳ್ಳವಳೂ ಆದ ಸರಸ್ವತಿಯ ನಗುವಿನ ಭಾವ ಮನಮಂದಿರದಲ್ಲಿ ನೆಲೆಗೊಳ್ಳಲಿ’ ಅನ್ನೋದು ಒಂದರ್ಥವಾದರೆ ಮತ್ತೊಂದು ’ಸ್ಫುಟವಾದ ಅಕ್ಷರಗಳಿಂದಾದ ಮಧುರವೂ ಅತ್ಯಂತ ಸೂಕ್ತವೂ ಸಹ್ಯವೂ ಆದ ಪದಗಳ ರಚನೆಯು ಸುಂದರ ಪುಸ್ತಕವಾಗಿ ನಮ್ಮ ಮನವೆಂಬ ಮಾನಸದಲ್ಲಿ ಹಂಸಭಾದಂತೆ (ಕಾಕಭಾವದಂತೆ ಅಲ್ಲ) ನೆಲೆಗೊಳ್ಳುತ್ತದೆ’. ಬಹುಶಃ ಹಂಸಾನಂದಿಯವರು ಇದಕ್ಕೆ ಚೆನ್ನಾದ ಅರ್ಥವಿವರಣೆ ನೀಡಬಹುದೆಂದು ಆಶಿಸೋಣ.

ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ವಿಚಾರದ ಅಧ್ಯಯನ ಅಲಂಕಾರಶಾಸ್ತ್ರಗ್ರಂಥವಾದ ‘ಕವಿರಾಜಮಾರ್ಗ’ದಿಂದ ಪ್ರಾರಂಭವಾಗುತ್ತದೆ. ದಂಡಿಯ ‘ಕಾವ್ಯಾದರ್ಶ’ ಸಂಸ್ಕೃತ ಭಾಷೆಯಲ್ಲಿರುವ ಅಲಂಕಾರ ಶಾಸ್ತ್ರಗ್ರಂಥ. ಕವಿರಾಜಮಾರ್ಗಕಾರನು ‘ಕಾವ್ಯಾದರ್ಶ’ವನ್ನು ಕನ್ನಡ ಕಾವ್ಯ ಸಂದರ್ಭಗಳಿಗೆ ಅನುಗುಣವಾಗಿ ಅನುವಾದ ಮಾಡಿದ್ದಾನೆ. ಇದು ಅನುವಾದ ಗ್ರಂಥವಾದರೂ ಒಂದು ಸ್ವತಂತ್ರ ಕೃತಿಯೆಂಬಂತೆ ರಚನೆಯಾಗಿರುವುದಕ್ಕೆ ಸಾಕಷ್ಟು ಆಧಾರಗಳಿವೆ. ಇಂತಹ ಒಂದು ಆಧಾರ ಸರಸ್ವತಿಯ ಪ್ರಾರ್ಥನೆಯ ರೂಪದಲ್ಲಿಯೇ ದೊರೆಯುತ್ತದೆ. ಚತುರ್ಮುಖ ಮುಖಾಂಭೋಜ ವನಹಂಸವಧೂರ್ಮಮ| ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ|| ಇದು ‘ಕಾವ್ಯಾದರ್ಶ’ದಲ್ಲಿರುವ ಸರಸ್ವತಿಯ ಪರವಾದ ಶ್ಲೋಕ. ಅದನ್ನು ಶ್ರೀವಿಜಯನು, ಶ್ರೀ ವಿಶದವರ್ಣೆ ಮಧುರಾ ರಾವೋಚಿತೆ ಚತುರರುಚಿರಪದರಚನೆ ಚಿರಂ| ದೇವಿ ಸರಸ್ವತಿ ಹಂಸೀ ಭಾವದೆ ನೆಲೆಗೊಳ್ಗೆ ಕೂರ್ತ್ತು ಮನ್ಮಾನಸದೊಳ್|| ಎಂದು ಅನುವಾದಿಸಿದ್ದಾನೆ. ಇದನ್ನು ಅನುವಾದ ಎನ್ನುವುದಕ್ಕಿಂತ ರೂಪಾಂತರ ಎನ್ನುವುದೇ ಹೆಚ್ಚು ಸಮಂಜಸ. ‘ಚತುರ್ಮುಖ ಮುಖಾಂಭೋಜ ವನಹಂಸವಧೂರ್ಮಮ ಮಾನಸೇ ರಮತಾಂ’ ಎಂಬುದು ‘ಹಂಸೀಭಾವದೆ ನೆಲೆಗೊಳ್ಗೆ ಕೂರ್ತ್ತು ಮನ್ಮಾನಸದೊಳ್’ ಎಂದು ಅನುವಾದವಾಗಿದೆ. ಸರಸ್ವತಿಯು ಬ್ರಹ್ಮನ ಮುಖವಾಸಿನಿ ಎಂಬ ವೈದಿಕ ಕಲ್ಪನೆ ಜೈನಮತಕ್ಕೆ ಅನುಗುಣವಾಗಿಲ್ಲದಿರುವುದು ಇದಕ್ಕೆ ಕಾರಣ. ಶ್ರೀವಿಜಯನು ತನ್ನ ಸಂಪ್ರದಾಯಕ್ಕೆ ಅನುಗುಣವಾಗಿ ‘ಸರ್ವಶುಕ್ಲಾ’ ಎಂಬುದನ್ನು ಉಳಿಸಿಕೊಂಡು ಸರಸ್ವತಿಯನ್ನು ‘ವಿಶದವರ್ಣೆ’ಯಾಗಿಸಿದ್ದಾನೆ. ಜೈನಪರಂಪರೆಯಲ್ಲಿ ಸರಸ್ವತಿಯು ‘ಪರಮಜಿನೇಂದ್ರನ ವಾಣಿ’ಯೇ ಹೊರತು, ಜಿನಮುಖದಲ್ಲಿ ಮಾತ್ರ ನೆಲೆಸಿರುವವಳಲ್ಲ. ಆದರೆ ಆಕೆ ವೈದಿಕ ಸಂಪ್ರದಾಯದಂತೆಯೇ ಶುಭ್ರವರ್ಣೆ. ಸರಸ್ವತಿಯು ವಾಗ್ದೇವತೆ, ಆಕೆಯ ವಾಕ್ ಮಧುರವಾಗಿಯೂ ಔಚಿತ್ಯಪೂರ್ಣವಾಗಿಯೂ ಇರುತ್ತದೆ ಎಂಬುದನ್ನು ಶ್ರೀವಿಜಯ ‘ಮಧುರಾರಾವೋಚಿತೆ’ ಮತ್ತು ‘ಚತುರರುಚಿರಪದರಚನೆ’ ಎಂಬ ಎರಡi ವಿಶೇಷಣಗಳನ್ನು ಬಳಸಿ ಸಾಧಿಸಿದ್ದಾನೆ. ಕಾವ್ಯದಲ್ಲಿ ಮಧುರವಾದ ಧ್ವನಿ, ಚತುರತೆಯಿಂದ ಕೂಡಿದ ಸುಂದರ ಪದಗಳ ಮಹತ್ವವನ್ನು ಮನಗಂಡಿರುವ ಕವಿಯು, ಅಂತಹ ಸಂಪತ್ತಿಯನ್ನು ದಯಪಾಲಿಸುವ ಸರಸ್ವತಿಯನ್ನು ಸ್ತುತಿಸುತ್ತಾನೆ. ವಿಶದವರ್ಣೆಯೂ, ವಾಗ್ದೇವತೆಯೂ ಆದ ಸರಸ್ವತಿಯು ಹಂಸೀಭಾವದಿಂದ ತನ್ನ ಮಾನಸದಲ್ಲಿ ನೆಲಸಲಿ ಎಂಬುದು ಕವಿಯ ಆಶಯ. ‘ಹಂಸೀಭಾವ’ ಎಂಬ ಪರಿಕಲ್ಪನೆ ಸರಸ್ವತಿಯ ವಾಹನ ಹಂಸವನ್ನೂ ಪ್ರತಿನಿಧಿಸುತ್ತದೆ. ಹಂಸವು ಸರೋವರದಲ್ಲಿ ನೆಲೆಸಿರುತ್ತದೆ. ಇಲ್ಲಿ ಕವಿಯ ಮಾನಸಸರೋವರದಲ್ಲಿ ನೆಲೆಸಲಿ ಎಂಬುದು ಕವಿಯ ಕೋರಿಕೆ. ಮೂರನೇ ಪರಿಚ್ಛೇದ ‘ಅರ್ತ್ಥಾಲಂಕಾರ ಪ್ರಕರಣಂ’ ಕೊನೆಯಲ್ಲಿ ‘ಪರಮ ಸರಸ್ವತೀ ತೀರ್ತ್ಥಾವತಾರ ನೃಪತುಂಗದೇವಾ.....’ ಎಂಬ ವಾಕ್ಯವಿದೆ; ಹೆಚ್ಚಿನ ವಿವರಗಳಿಲ್ಲ. ಆದರೆ ನೃಪತುಂಗನನ್ನು ಸರಸ್ವತೀ ತೀರ್ಥದ ಅಂದರೆ ಸರಸ್ವತೀ ನದಿಯ ಅವತಾರವೆಂದು ಕರೆದಿರುವುದು ವಿಶೇಷವಾಗಿದೆ. ‘ಒಟ್ಟಿನಲ್ಲಿ ಕವಿರಾಜಮಾರ್ಗಕಾರನು ತನ್ನ ಸರಸ್ವತಿಯನ್ನು ಪದರಚನೆಯ ನಿರ್ದೋಷತೆ-ನಿರ್ಮಲತೆ-ಪ್ರಸನ್ನತೆ, ಮಾಧುರ್ಯ ಮತ್ತು ಸೌಷ್ಠವದಲ್ಲಿ ಕಂಡಿದ್ದಾನೆ. ಮಾತೇ ಸರಸ್ವತಿಯ ಪೀಠ, ಮಾತಿನ ಮೇಲ್ಮೆಯಿಂದಲೇ ಅವಳ ಸಾನ್ನಿಧ್ಯದ ಮತ್ತು ಅನುಗ್ರಹದ ಅರಿವನ್ನು ಪಡೆಯಬಹುದು ಎಂಬ ಸೂಚನೆ ಅವನ ಮಾತುಗಳಿಂದ ದೊರೆಯುತ್ತದೆ.’ ಶ್ರೀವಿಜಯನ ಪ್ರಕಾರ ಸರಸ್ವತಿ, ವಾಗ್ದೇವತೆ ಮತ್ತು ಕಾವ್ಯದ ಅಧಿದೇವತೆ. ಅವಳ ಅನುಗ್ರಹದಿಂದ ಮಾತ್ರವೇ ಕಾವ್ಯಕ್ಕೆ ಅಗತ್ಯವಾದ ಪರಿಕರಗಳನ್ನು ಹೊಂದಲು ಸಾಧ್ಯ.

ಹೌದುರೀ, ಹಂಸಾನಂದಿಯವರೇ, ಮಂಜುನಾಥರು ವಿಶದವರ್ಣೆಯನ್ನು ವಿಶದವಾಗಿಯೇ ಅರುಹಿದ್ದಾರೆ. ನಾನು ಮುದ್ದಣನನ್ನು ಓದಿಲ್ಲ ಆದರೆ ಶ್ಲೇಷಾಲಂಕಾರಗಳ ಪ್ರಕಾರ ಹರಿಗೆ ನಾನಾರ್ಥಗಳಿವೆಯೆಂದು ತಿಳಿದಿತ್ತು. ಹಂಚಿಕೊಂಡಿದ್ಧಕ್ಕೆ ಧನ್ಯವಾದಗಳು.

ಸರಸ್ವತಿಯ ಬಣ್ಣದ ವರ್ಣನೆಯೊಂದಿಗೆ ಹೋಲಿಸುವಾಗ "ಶಬ್ದಜನಿಯಿಸುಗುಂ ಧವಳವರ್ಣಮಕ್ಷರರೂಪಂ" ಅನ್ನುವ ಕೇಶೀರಾಜನ ಮಾತು ಇಲ್ಲಿ ಗಮನಾರ್ಹ. ಧ್ವನಿಯೇ ಬಿಳಿಯ ಬಣ್ಣದ್ದು ಅನ್ನೋದು ಜೈನನಾದ ಕೇಶೀರಾಜನ ಅಭಿಮತ. ................. ತನು ವಾದ್ಯಂ ನಾಲಗೆ ವಾ ದನದಂಡಂ ಕರ್ತೃವಾತ್ಮನವನ ಮನೋವೃ ತ್ತಿನಿಮಿತ್ತಮಾಗಿ ಶಬ್ದಂ ಜನಿಯಿಸುಗುಂ ಧವಳವರ್ಣಮಕ್ಷರರೂಪಂ..........ಕೇಶೀರಾಜ