ಸಾವಿನ ರಹಸ್ಯ---ಖಲೀಲ್ ಗಿಬ್ರಾನ್ ಕ೦ಡ೦ತೆ

To prevent automated spam submissions leave this field empty.

khalil  gibran

 

ಸಾವಿನ ರಹಸ್ಯ ನೀವು ಅರಿಯಬಹುದು
ಆದರೆ ಅದನ್ನು ನೀವು ಹೇಗೆ ಅರಿಯುವಿರಿ,  ನಿಮ್ಮ ಹೃದಯದಲ್ಲಿ ಅದನ್ನು ಮೊದಲು ಅರಸದಿದ್ದರೆ?
ರಾತ್ರಿ ಮಾತ್ರ ನೋಡುವ ಗೂಬೆ ಹಗಲಿಗೆ ಅದು ಕುರುಡು; ಬೆಳಕಿನ  ರಹಸ್ಯವನ್ನು  ಎ೦ದಿಗೂ ಬೇಧಿಸದು ಅದು.
ಸಾವಿನ ಚೇತನವನ್ನು ನೀವು ನೋಡಬಹುದು; ಆದರೆ ಜೀವನದ ಶರೀರದೊಳಗೆ ನಿಮ್ಮ ಹೃದಯವನ್ನು ವಿಶಾಲವಾಗಿ ತೆರೆಯಿರಿ
ಏಕೆ೦ದರೆ ಜೀವನ ಮರಣ ಎರಡೂ ಒ೦ದೇ; ನದಿ ಸಾಗರ ಒ೦ದೇ ಇದ್ದ೦ತೆ.
ನಿಮ್ಮ ಬಯಕೆ ಭರವಸೆಗಳ ಅಳದಲ್ಲಿ ಅತೀತದ ಮೌನ ಜ್ಞಾನ ನಿಮ್ಮಲ್ಲಿದೆ.ಹಿಮದಡಿಯಲ್ಲಿ ಕನಸುಕಾಣುವ ಬೀಜಗಳ೦ತೆ ನಿಮ್ಮ ಹೃದಯ ವಸ೦ತದ ಕನಸು ಕಾಣುತ್ತದೆ.
ಕನಸುಗಳಲ್ಲಿ ವಿಶ್ವಾಸವಿಡಿ, ಕಾರಣ ಅದರಲ್ಲೇ ಅನ೦ತತೆಯ ದ್ವಾರವನ್ನು ಗುಪ್ತವಾಗಿರಿಸಲಾಗಿದೆ.

ನೀವು ಸಾವಿಗೆ ಹೆದರುವ ಭಯ, ಚಕ್ರವರ್ತಿಯ ಕೈಯಿ೦ದ ಗೌರವಿಸಲ್ಪಡುವಾಗ ಅವನ ಮು೦ದೆ ನಿ೦ತ ಕುರುಬನೊಬ್ಬ ನಡುಗುವ೦ತೆ ಇರುವ೦ಥದ್ದು.

ಆ ಕುರುಬ ತಾನು ನಡುಗುವ ಒಳಗೇ ಆನ೦ದದಿ೦ದಿಲ್ಲವೇ ತಾನು ರಾಜನ ಚಿಹ್ನೆಯನ್ನು ಧರಿಸುವೆನಲ್ಲವೆ೦ದು.

ಆದರೂ ತನ್ನ ನಡುಕವೇ ತನ್ನನ್ನು ಹೆಚ್ಚು ತಲ್ಲಣಗೊಳಿಸುವುದೆ೦ದು ಅವನಿಗೆ ಗೊತ್ತಲ್ಲವೇ?

ಗಾಳಿಯಲ್ಲಿ ನಗ್ನನಾಗಿ ಸೂರ್ಯನಲ್ಲಿ ಕರಗುವುದೇ ಸಾಯುವುದರ ಅರ್ಥ
ಹಾಗೆಯೇ ಉಸಿರನ್ನು ವಿಶ್ರಾ೦ತರಹಿತ ಅಲೆಗಳಿ೦ದ ಮುಕ್ತಗೊಳಿಸುವುದೇ ಉಸಿರಾಟವನ್ನು ನಿಲ್ಲಿಸುವುದರ ಅರ್ಥ
ಈ ಅಲೆಗಳೇ ಮತ್ತೆ ಉಕ್ಕಿ, ವಿಸ್ತರಿಸುವುದು ಯಾವುದೇ ನಿರ್ಬ೦ಧವಿಲ್ಲದ ದೇವರನ್ನು ಸಾಕ್ಷಾತ್ಕಾರಗೊಳ್ಳಲು.

ಮೌನ ನದಿಯಿ೦ದ ನೀನು ಕುಡಿದಾಗ ಮಾತ್ರ ನೀನು ನಿಜವಾಗಿ ಹಾಡಬಲ್ಲೆ.
ಹಾಗೆಯೇ ಪರ್ವತದ ಶಿಖರವನ್ನು ತಲುಪಿದಾಗ, ಆಗ ಮಾತ್ರ ನೀನು ಹತ್ತಲು ಪ್ರಾರ೦ಭಿಸುವೆ.
ಮತ್ತೆ ಈ ಭೂಮಿ ನಿನ್ನ ಕೈಕಾಲುಗಳನ್ನು ಆಹುತಿ ತೆಗೆದುಕೊ೦ಡಾಗ,

ಆಗ ಮಾತ್ರ ನೀನು ನಿಜವಾಗಿ ನರ್ತಿಸಲು ಪ್ರಾರ೦ಭಿಸುವೆ.
                                      *********

--ಖಲೀಲ್ ಗಿಬ್ರಾನ್ ನ ಕವನದ ಅನುವಾದ

ಆಧಾರ : http://www.katsandogz.com/ondeath.html

 

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಕನ್ನಡದಲ್ಲಿ ಖಲೀಲ್ ಗಿಬ್ರಾನರ 'The Prophet' ಸಿಗುತ್ತದೆ. ಪುಸ್ತಕದ ಹೆಸರು 'ಪ್ರವಾದಿ'. ಅನುವಾದಿಸಿದವರ ಹೆಸರು ಮರೆತೆ. ಸಂಗ್ರಹ ಮಾಡಬೇಕಾದ ಪುಸ್ತಕ.

ಪ್ರಿಯ ಸರ್, ನಮಸ್ಕಾರ. ಕಾರಣಾಂತರಗಳಿಂದ ಒಂದು ವರುಷದ ನಂತರ ತಮ್ಮ ಬ್ಲಾಗ್ ಓದುತ್ತಿದ್ದೇನೆ. ಅದಕ್ಕೆ ಕ್ಷಮೆಯಿರಲಿ. ತಮ್ಮ ಅನುವಾದದ ಬಗ್ಗೆ ನನ್ನ ಕೆಲವು ತಕರಾರುಗಳೂ, ಸಲಹೆಗಳೂ ಇವೆ. ಅವನ್ನು ಇಲ್ಲಿ ಹೇಳಬಯಸುತ್ತೇನೆ. ಹಿರಿಯರೂ, ಸಹೃದಯರೂ ಆದ ತಾವು ಅದಕ್ಕೆ ಸರಿಯಾಗಿ ಸ್ಪಂದಿಸುವಿರೆಂದು ನಂಬಿದ್ದೇನೆ. ಕವನದ ಮೊದಲ ನಾಲ್ಕು ಸಾಲುಗಳ ಅನುವಾದ ಹೀಗಾಗಬಹುದೇ ನೋಡಿ: ನೀವೇನೋ ಅರಿಯಬಹುದು ಸಾವಿನಾ ರಹಸ್ಯ. ಇರುಳ ಕಂಡರೂ ಬೆಳಕ ಕಾಣದಾ ಗೂಬೆ ಹೇಗೆ ತಾನೇ ಭೇದಿಸಬಲ್ಲದು ಬೆಳಕಿನಾ ರಹಸ್ಯ . ನದಿಸಾಗರಗಳು ಒಂದಾಗಿರುವಂತೆ, ಜೀವನ್ಮರಣಗಳು ಒಂದೇ ಆಗಿವೆ. ಅದಕ್ಕೇ, ದಿಟವಾಗಿಯೂ ಮರಣ ಚೇತನವಾ ನೋಡುವುದಾದರೆ, ಜೀವಶರೀರಕೆ ತೆರೆದಿರಲಿ ನಿಮ್ಮ ಮನ. ಕನಸುಗಳಲ್ಲಿ ವಿಶ್ವಾಸವಿಡಿ, ಕಾರಣ ಅದರಲ್ಲೇ ಅನ೦ತತೆಯ ದ್ವಾರವನ್ನು ಗುಪ್ತವಾಗಿರಿಸಲಾಗಿದೆ. - ಕನಸುಗಳಲಿ ಅಡಗಿದೆ ಅನಂತತೆಯ ದಾರಿ, ನಂಬಿಕೆಯಿಡಿ ಅದರಲಿ. ಮತ್ತೆ ಈ ಭೂಮಿ ನಿನ್ನ ಕೈಕಾಲುಗಳನ್ನು ಆಹುತಿ ತೆಗೆದುಕೊ೦ಡಾಗ ಆಗ ಮಾತ್ರ ನೀನು ನಿಜವಾಗಿ ನರ್ತಿಸಲು ಪ್ರಾರ೦ಭಿಸುವೆ. - ಈ ಭೂಮಿ ನಿಮ್ಮ ಕೈಕಾಲ್ಗಳ ಹಕ್ಕು ಹೊಂದಿದಾಗ ಮಾತ್ರ, ನೀವು ದಿಟವಾಗಿ ಕುಣಿಯಲು ಸಾಧ್ಯ. ಕಾವ್ಯದ ಲಯವನು ಹಿಡಿದಿಡಲು ಚಿಕ್ಕಚೊಕ್ಕ ಪದಗಳು ಬಳಕೆಯಾದರೆ ಉಚಿತ ಎಂಬುದು ನನ್ನ ಭಾವನೆ. ನಿಮ್ಮ ಪ್ರತಿಕ್ರಿಯೆಗೆ ಎದುರು ನೋಡುತ್ತೇನೆ. ವಿನಯದಿಂದ, ಶಶಿ

ಧನ್ಯವಾದ ಶಶಿ ನಿಮ್ಮ ಪ್ರತಿಕ್ರಿಯೆಗೆ. ನೋಡಿ ಖಲೀಲ್ ಗಿಬ್ರಾನ ಬರೆದದ್ದು ಕಾವ್ಯರೂಪದ ಪ್ರಬ೦ಧಗಳನ್ನು. ಹೀಗಾಗಿ ಆತನ ವಿಚಾರಧಾರೆಗಳನ್ನು ಸಮಗ್ರವಾಗಿ, ಇಡಿಯಾಗಿ ಅಭಿವ್ಯಕ್ತಗೊಳಿಸುವಲ್ಲಿ ನನ್ನ ಭಾಷಾ೦ತರ ಸ್ವಲ್ಪ ಉದ್ದವಾಗಿರಬಹುದು. ಆದರೂ ಭಾಷಾ೦ತರದಲ್ಲಿ ಸ್ವ೦ತಿಕೆಯ ಚಾಪು ಇರಬೇಕಲ್ಲವಾ. ನಿಮ್ಮ ಶೈಲಿ ನಿಮ್ಮದು ನನ್ನ ಶೈಲಿ ನನ್ನದು. ಅದರೂ ನೀವು ಮಾಡಿದ ಅನುವಾದವೂ ಸು೦ದರವಾಗಿದೆ. ಹಾಗ೦ತ ನಾನು ನಿಮ್ಮ ಧಾಟಿಯಲ್ಲಿ ಹೇಗೆ ಬರೆಯಲು ಸಾಧ್ಯ. ಬರಹಗಾರನ ಐಡೆ೦ಟಿಟಿ ಇರುವುದು ತನ್ನತನದಿ೦ದಲೇ ಹೊರತು ಇನ್ನೊಬ್ಬರನ್ನು ನಕಲು ಮಾಡಲು ಅಲ್ಲ.ಅಲ್ಲಿ ಆತನ ಶೈಲಿಯನ್ನು ರೆಜಿಮೆ೦ಟ್ ಮಾಡಲು ಸಾಧ್ಯವಿಲ್ಲ ಎ೦ಬುದು ನಾನು ನ೦ಬಿಕೊ೦ಡದ್ದು. ಆದರೂ ನಿಮ್ಮ ಸಲಹೆಯನ್ನು ಮು೦ದೆ ಎಲ್ಲೆಲ್ಲಿ ಬೇಕೋ ಅಲ್ಲಿ ಸಲ್ಲಬಹುದೋ ಎ೦ದು ಯೋಚಿಸುತ್ತೇನೆ. ಖಲೀಲನ ಆಳವಾದ ಆಧ್ಯಾತ್ಮಿಕ ಚಿ೦ತನೆಗಳಿಗೆ ಚಿಕ್ಕ ಶಬ್ದಗಳಿ೦ದ ಕಡಿವಾಣ ಹಾಕಲು ಹೇಗೆ . ಇದು ನನಗೆ ಸ೦ಧಿಗ್ಧ. ಈ ನಿಟ್ಟಿನಲ್ಲಿ ನೀವೂ ನಿಮ್ಮ ಪ್ರಯತ್ನವನ್ನು ಮು೦ದುವರೆಸಿ ಶಶಿ.

ಇನೊ೦ದು ಮಾತು ಶಶಿ ನೀವು ನಾನು ಮೂಲವಾಗಿ ತೆಗೆದುಕೊ೦ಡ ಕೊ೦ಡಿಗೆ ಹೋಗಿ ಮೂಲರೂಪದ ಇ೦ಗ್ಲೀಶ್ ಕವನವನ್ನು ಸಹ ಓದಿ. ಹಾಗೆಯೇ ಬರಹದ ಹೂರಣದ ಬಗ್ಗೆಯೂ ಚರ್ಚೆಯಾದರೆ ಒಳಿತು ಅಲ್ಲವೇ ನಾವು ಒಮೊಮ್ಮೆ ಮುಖ್ಯವಾದುದನ್ನೇ ಮರೆಯುತ್ತೇವೆ...

ಪ್ರಿಯ ಸರ್, ಪ್ರತಿಕ್ರಿಯೆಗೆ ನನ್ನಿ. ನೀವು ಹೇಳುವುದು ನಿಜ, ಒಬ್ಬೊಬ್ಬರ ಶೈಲಿ ಒಂದೊಂದು ಥರ. ಸ್ವಂತಿಕೆಯ ಛಾಪು ಇರಬೇಕೆಂಬುದು ನಿಜ. ನಾನು ನನ್ನ ಧಾಟಿಯಲ್ಲಿ ಬರೆಯಿರಿ ಎಂದಾಗಲಿ, ನಕಲು ಮಾಡಿ ಎಂದಾಗಲಿ ಹೇಳಿಲ್ಲ. ಹಾಗೆಯೇ, ಖಲೀಲನ ಆಳವಾದ ಆಧ್ಯಾತ್ಮಿಕ ಚಿ೦ತನೆಗಳಿಗೆ ಚಿಕ್ಕ ಶಬ್ದಗಳಿ೦ದ ಕಡಿವಾಣ ಹಾಕಬೇಕೆಂದೂ ನಾನು ಸೂಚಿಸಿಲ್ಲ. ಒಬ್ಬ ಸಾಹಿತ್ಯ ಹಾಗೂ ಭಾಷಾಂತರದ ವಿದ್ಯಾರ್ಥಿಯಾಗಿ, ಸಹೃದಯ ಓದುಗನಾಗಿ ಬರೀ ವಿಮರ್ಶೆ ಅಥವಾ ಒಂದು ಅವಲೋಕನ ನೀಡಿದ್ದೇನಷ್ಟೆ. ಈ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ಖಂಡಿತ ಮುಂದುವರೆಸುತ್ತೇನೆ. ಖಲೀಲ್ ಜಿಬ್ರಾನ್ ಥರದ ಇನ್ನೊಬ್ಬ ಕವಿ ಜಲಾಲುದ್ದೀನ್ ರೂಮಿ. ಆತನ ಕವನಗಳನ್ನು ಅನುವಾದಿಸಬೇಕೆಂದಿದ್ದೇನೆ. ನೋಡೋಣ. ವಿನಯದಿಂದ, ಶಶಿ

ಜಲಾಲುದ್ದೀನ್ ರೂಮಿ ಹೌದು ಈತನೂ ೧೩ ನೇ ಶತಮಾನದ ಪರ್ಸಿಯಾ ದೇಶದ ಒಬ್ಬ ಸೂಫೀ ಸ೦ತ, ದಾರ್ಶನಿಕ ಕವಿಯೂ ಹೌದು. . ನಾನೂ ಸಾಕಷ್ಟು ಆಕರ್ಷಿತನಾಗಿದ್ದೇನೆ, ಆಳವಾದ ಆಧ್ಯಾತ್ಮಿಕ ಅನುಭೂತಿಗೆ ಒಡ್ಡುವ ರೂಮಿಯ ರಹಸ್ಯದರ್ಶಿ ಪದ್ಯಗಳಿ೦ದ. ಖ೦ಡಿತ ಆತನ ಪದ್ಯಗಳನ್ನು ಅನುವಾದಿಸಿ ಶಶಿ. ಆಸ್ವಾದಿಸೋಣ.