ಹೀಗೊಂದು 'Brisk Walk' ಪ್ರಸಂಗ

To prevent automated spam submissions leave this field empty.
ಮಟ ಮಟ ಸಂಜೆ ಹಾಗೇ ವಾಕಿಂಗ್’ಗೆ ಹೊರಟಿದ್ದೆ ... 
ಮೊದಲ ಮಾತಲ್ಲೇ ಎಡವಟ್ಟು ಅಂತೀರಾ ? ನೀವೇ ಹೇಳಿ ... 
ಹಬೆಯುಕ್ತ ಭೂಮಿಯ ಮೇಲ್ಮೈನ ಗಾಳಿ ಸೇವನೆ ಮಾಡುತ್ತ, ಮಧ್ಯಾನ್ನವೆಲ್ಲ ಬಿಸಿಲಿಗೆ ಮೈ ಒಡ್ಡಿರುವ ಕಾಂಕ್ರೀಟು ಬಿಲ್ಡಿಂಗುಗಳು ಬಿಸಿ ಸ್ವೀಕರಿಸುತ್ತ, ಅಗಾಧವಾದ ಶಬ್ದ ಮಾಲಿನ್ಯವನ್ನು ಕಿವಿಗಳಲ್ಲಿ ತುಂಬಿಕೊಂಡು, ಪ್ರತಿ ಗಾಡಿ ಹೊರ ಚೆಲ್ಲುವ ಕಪ್ಪನೆಯ ಹೊಗೆಯನ್ನು ಕುಡಿಯುತ್ತ, ಹೆಜ್ಜೆ ಹೆಜ್ಜೆಗೂ ಆಟೋ ಮತ್ತು ಇನ್ನಿತರ ಗಾಡಿಯವರ ಬಾಯಲ್ಲಿ ಅಡ್ಡ ಬಂದದ್ದಕ್ಕೆ ಉಗಿಸಿಕೊಳ್ಳುತ್ತ ... ವಾಕಿಂಗ್ ಹೊರಟಿದ್ದೆ ಅಂತೆಲ್ಲ ಸತ್ಯ ಹೇಳಹೊರಟರೆ, ದಿನಾ ಇದ್ದಿದ್ದೇ ಗೋಳು ಇದರ ಮೇಲೆ ನಿನ್ನದೇನಯ್ಯಾ ಗೋಳು ಅನ್ನೋಲ್ವೇ ಜನ? 
ಅದರ ಬದಲಿಗೆ, ತಂಪಾದ ಗಾಳಿಯಲ್ಲಿ, ರೇಷ್ಮೆಯುಕ್ತವಾದ ತಲೆಗೂದಲನ್ನು ಹಾರಿಸುತ್ತ, ಹಕ್ಕಿಗಳ ಚಿಲಿ-ಪಿಲಿ ಆಲಿಸುತ್ತ, ಹಿಂಬದಿಯಲ್ಲಿ ಧುಮ್ಮಿಕ್ಕೋ ಜಲಪಾತದ ಹೊರಾಂಗಣದಲ್ಲಿ, ಬಿಳೀ ಹೊಗೆಯ ಮಧ್ಯದಿಂದ ಹೊರಬರುತ್ತ, ಜಗದ ಪರಿವಿಲ್ಲದೆ ನೆಮ್ಮದಿಯಾಗಿ ವಾಕಿಂಗ್ ಹೊರಟಿದ್ದೆ ಎಂದು ಅಸಂಬದ್ದವಾಗಿ ರೀಲ್ ಬಿಟ್ಟರೂ ಕೇಳಲು ಏನೋ ಖುಷಿ. 
ಹೋಗಲಿ ಬಿಡಿ ... ಡಿಫರೆಂಟಾಗಿ ಹೇಳೋಣ ಅಂತಿದೀ... ಆದರೆ ಸಿಂಪಲ್ ಆಗಿ ಹೇಳುತ್ತೇನೆ ... ನಾನು ವಾಕಿಂಗ್ ಹೊರಟಿದ್ದೆ. 
ದಿನವೂ ಬರೀ ತಿನ್ನೋದೇ ಆದರೆ ಹೇಗೆ? ದೇಹಕ್ಕೆ ವ್ಯಾಯಾಮವೂ ಬೇಡವೇ ಎಂಬೋ ಉದ್ದೇಶದಿಂದ ಕಳೆದ ಗಣೇಶ ಚತುರ್ಥಿಯ ನಂತರ ದಿನವೂ ಬಸ್ಕಿ ಹೊಡೆಯಬೇಂದು ಅಂದುಕೊಂಡೆ. ಬಸ್ಕಿ ಹೊಡೆಯುವುದರಿಂದ ಬುದ್ದಿವಂತಿಕೆಯೂ ಹೆಚ್ಚುತ್ತದೆ (ಇದ್ದೋರಿಗೆ) ಅಲ್ಲದೇ ಸೊಂಟದ ಸುತ್ತಲೂ ಸೇರಿರುವ ಕೊಬ್ಬೂ ಇಳಿದು ಸ್ಲಿಮ್ ಆಗಬಹುದು ಎಂಬ ಸದುದ್ದೇಶದಿಂದ ಆರಂಭ ಮಾಡಿದೆ. ಎರಡು ದಿನ ಚೆನ್ನಾಗಿ ನೆಡೆಯಿತು. ನಂತರ ತೊಡೆಯ ಮಾಂಸಖಂಡಗಳು ನೋಯಲು ಆರಂಭವಾಗಿ, ಬಸ್ಕಿ ಕಾರ್ಯಕ್ರಮವನ್ನು ನಿಲ್ಲಿಸಿ, ವರ್ಷಕ್ಕೊಮ್ಮೆ ಭಾದ್ರಪದ ಶುಕ್ಲದ ಚೌತಿಯ ದಿನ, ಅದೂ ೨೧ ಬಾರಿ ಮಾತ್ರ, ಎಂದು ನನಗೆ ನಾನೇ ನಿಯಮ ಹಾಕಿಕೊಂಡಿದ್ದೇನೆ.
ಸಲ್ಮಾನ್ ಖಾನ್’ನಂತೆ ಬಾಹುಗಳು ಪುಷ್ಟಿಯಾಗಿಸಿಕೊಳ್ಳಲು ಡಂಬಲ್ಸ್’ನಿಂದ ಶುರು ಮಾಡೋಣ ಎಂದು ಅದನ್ನೂ ಕೊಂಡು ತಂದೆ. ಎರಡು ದಿನ ಮಾಡಿದ ಮೇಲೆ ಊಟ ಮಾಡಲೂ ಕೈ ಎತ್ತಲು ಆಗಲಿಲ್ಲ. ಅಲ್ಲದೇ, ಇನ್ನೊಂದು ದಿನ ಏನಾಯ್ತು ಅಂದ್ರೆ ಡಂಬಲ್ಸ್ ಹಿಡಿದ ಕೈ ಯಾಕೋ ಜೋಮು ಹಿಡಿದಂತಾಗಿ ಡಂಬಲ್ ನನಗೆ ಅರಿವಿಲ್ಲದೆ ಕೈ ಜಾರಿತ್ತು. ಜಾರಿದ್ದು ಕೈಗೆ ಅರಿವಾಗಲಿಲ್ಲ ಆದರೆ ಕೆಳಗೆ ಬಿದ್ದ ಮೇಲೆ ಖಂಡಿತ ಅರಿವಾಯಿತು... ಯಾಕೆಂದರೆ ಅದು ನನ್ನ ಕಾಲ ಮೇಲೆ ಮೊದಲು ಬಿತ್ತಲ್ಲ, ಅದಕ್ಕೆ ! ಇನ್ಮುಂದೆ ರಬ್ಬರ್’ದೋ ಅಥವಾ ಪ್ಲಾಸ್ಟಿಕ್’ದೋ ಡಂಬಲ್ಸ್ ಕೊಳ್ಳಬೇಕು !!
ಇವೆಲ್ಲ ಯಾವುದೂ ಬೇಡ ಅಂತ ಸಿಂಪಲ್ಲಾಗಿ ವಾಕಿಂಗ್ ಮಾಡುತ್ತಿದ್ದೇನೆ ಈಗ. ಇದೇನೂ ಕಷ್ಟವಿಲ್ಲ ಮತ್ತು ಬಾಧಕವಲ್ಲ ಅನ್ನೋದು ಗ್ಯಾರಂಟಿ.
ಹೊರಟ ಹತ್ತು ನಿಮಿಷ ಬಿರುಸು ನಡಿಗೆ ಮಾಡಿದ್ದರಿಂದ ಏದುಸಿರು ಬಂದಂತಾಗಿ ನಂತರ ಮೆಲ್ಲಗೆ ನೆಡೆಯಲು ಆರಂಭಿಸಿದೆ. ಎದುರಿಗೆ ಪರಮೇಶಿಯ ತಾತ ಸಿಕ್ಕರು. ಹಿರಿಯರು, ಹಾಗೇ ಹೋಗಲಿಕ್ಕೆ ಆಗುತ್ತದೆಯೇ? ಅವರಿಗೆ ಡಯಾಬಿಟಿಸ್, ಮಂಡಿ ನೋವು, ಎಲ್ಲ ಇರುವುದು ತಿಳಿದೂ ಯಥಾ ಪ್ರಕಾರ "ಹೇಗಿದ್ದೀರಾ? ಆರೋಗ್ಯವೇ?" ಎಂದೆ.......
ನೋಡಪ್ಪಾ "ಸೀನು, ವಯಸ್ಸು ಎಪ್ಪತ್ತು ದಾಟಿದ ಮೇಲೆ, ಹೇಗಿದ್ದೀರಾ ಅನ್ನಬಾರದು ... ಯಾಕಿದ್ದೀರಾ ಅನ್ನಬೇಕು" ಅಂತ ನಕ್ಕರು. ನಾನೂ ಸುಮ್ಮನೆ ನಕ್ಕೆ. ಆಮೇಲೆ ಅವರು "ಏನು? ವಾಕಿಂಗ್ ಹೊರಟಿರೋ ಹಾಗಿದೆ. ಅಲ್ಲಿಂದ ಬರ್ತಾ ಧಡ ಧಡ ಅಂತ ಬರ್ತಿದ್ದೆ. ಆಮೇಲೇಕೆ ಬಲೂನಿಂದ ಗಾಳಿ ಹೋದ ತರಹ ಆದೆಯೆಲ್ಲ. ತಿಂದ ಅನ್ನ ಕರಗಲು ಒಡಾಡೋದು. ಅದಾದ ಮೇಲೆ ಅರಗಿ ಹೋಯ್ತಲ್ಲ ಅಂತ ಮತ್ತೆ ತಿನ್ನೋದು. ಚೆನ್ನಾಗಿ ಹಂದಿ ತರಹ ತಿಂದು ಟಿ.ವಿ. ಮುಂದೆ ಕೂಡೋದು. ಇನ್ನು ದೇಹ ಕರಗೂ ಅಂದರೆ ಹೇಗೆ ಕರಗುತ್ತೆ?" ನಾನು ಏನೂ ಹೇಳಲಿಲ್ಲ. ಅಲ್ಲ, ನನಗೆ ಏನು ಹೇಳಲೂ ಆಗಲಿಲ್ಲ. ಮುಖಕ್ಕೆ ಹೊಡೆದ ಹಾಗೆ ಹೇಳಿದ ಮೇಲೆ, ಇನ್ನೇನು ಹೇಳಲು ಸಾಧ್ಯ. ಉಗುಳು ನುಂಗಿದೆ. ಅದಕ್ಕೂ ಭಯ. ನನ್ನ ಉಗುಳು ನಾನು ನುಂಗಿದರೆ ಅದಕ್ಕೂ ಅವರ ಕೈಲಿ ಎಲ್ಲಿ ಉಗಿಸಿಕೊಳ್ಳಬೇಕೋ ಅಂತ.
ಅವರು ಮುಂದುವರೆಸಿದರು "ನಮ್ಮ ಕಡೆ ಒಬ್ಬ ಇದ್ದಾನೆ. ಅವನೂ ನಿನ್ನ ಹಾಗೇನೇ. ಸಂಜೆ ಆದರೆ ಹುಚ್ಚು ಹಿಡಿದವರ ತರಹ ಬೇಗ ಬೇಗ ಎಲ್ಲಿಗೋ ನೆಡೆದುಕೊಂಡು ಹೋಗ್ತಾನೆ. ಮೊನ್ನೆ ಸಿಕ್ಕಿದ್ದ. ನಾನು ಹೇಳಿದೆ ’ತುಂಬಾ ಅರ್ಜಂಟ್ ಆಗಿದ್ರೆ ನಮ್ಮ ಮನೆ ಬಚ್ಚಲು ಮನೆ ಉಪಯೋಗಿಸೂ ಅಂತ’. ಅದಕ್ಕೆ ಅವನು ’ಇದಕ್ಕೆ Brisk Walk ಅಂತ ಕರೀತಾರೆ. ಇದೆಲ್ಲ ನಿಮಗೆಲ್ಲಿ ಗೊತ್ತಾಗುತ್ತೆ ಅಂದ. ನೋಡಿದ್ಯಾ ಹೆಂಗಿದೆ. ಮೊಮ್ಮಗ ತಾತನಿಗೆ ಸೀನೋದು ಹೇಳಿಕೊಟ್ಟನಂತೆ. ಏನಂತೀಯಾ?’. 
ಅನ್ನೋದೇನ್ರೀ? ಇನ್ಮುಂದೆ ನನಗೆ Brisk Walk ಮಾಡಬೇಕೋ ಬೇಡವೋ ಅಂತ ಅನ್ನಿಸ್ತಿದೆ. ವಾಕಿಂಗ್ ಮಾಡಿದರೆ ನೆಮ್ಮದಿ ಅಂತ ನಾನು ಅಂದುಕೊಂಡಿದ್ದೆ. ಈಗ ನೋಡಿದರೆ ಇವರು ಅದಕ್ಕಿರೋ ಮರ್ಯಾದೆ ತೆಗೀತಿದ್ದಾರೆ.
"ನೋಡು ಸೀನು, ಯಾರಾದರೂ ನಿನ್ನ ಮುಂದೆ, ನಮ್ಮ ಕಾಲದಲ್ಲಿ ನಿನ್ನ ವಯಸ್ಸಿನಲ್ಲಿ ದಿನಕ್ಕೆ ಹತ್ತು ಮೈಲು ದಿನವೂ ನೆಡೆತಿದ್ದೆ ಅಂತ ಹೇಳಿದರೆ, ನೀನು ಒಳ್ಳೇ ಪೆದ್ದು ಪೆದ್ದಾಗಿ ಕೇಳಿಸಿಕೊಂಡು ನಿಲ್ಲಬೇಡ. ಅಲ್ಲ, ಈಗಿನಂತೆ ಆಗಿನ ಕಾಲದಲ್ಲಿ ಗಾಡಿಗಳಿದ್ದವೇನು? ಇದ್ದರೂ, ತೊಗೊಳ್ಳೋ ಶಕ್ತಿ ಬೇಕಲ್ಲ? ನೆಡೆಯದೆ ಬೇರೆ ದಾರಿ ಇರಲಿಲ್ಲ. ಅದಕ್ಕೇ ನೆಡೀತಿದ್ರೂ ಅನ್ನೋ ಸತ್ಯ ತಿಳ್ಕೋ. ಈಗೇನು ಬಿಡು, ಬೀದಿಯಲ್ಲಿ ಹೋಗೋ ದಾಸಯ್ಯನ ಹತ್ತಿರಾನೂ ಕನಿಷ್ಟ ಅಂದರೆ ಹೋಂಡಾನೋ ಬೋಂಡಾನೋ ಇರುತ್ತೆ. ಗಾಡಿಯಲ್ಲೇ ಬೀದಿ ಬಸವರ ಹಾಗೇ ತಿರುಗೋ ಮಂದಿಗೆ ನಡಿಗೇನೇ ಮರೆತುಹೋಗಿದೆ. ಏನಂತೀಯಾ?". 
ಎಲ್ಲ ಇವರೇ ಹೇಳಿದ ಮೇಲೆ, ನಾನು ಅನ್ನೋದೇನ್ರೀ? ನಡು ಬೀದಿಯಲ್ಲಿ ನಿಲ್ಲಿಸಿ ಆರತಿ ತಟ್ಟೆ ಇಲ್ಲದೆ ಮಂಗಳಾರತಿ ಮಾಡ್ತಾ ಇದ್ದಾರೆ. ಹಳೇ ಕಾಲದವರು ಏನೇ ಹೇಳಿದರೂ ಕೋಡಂಗಿ ತರಹ ತಲೆ ತೂಗೋ ಸ್ವಭಾವ ನನ್ನದು. ಅದು ಇವರಿಗೆ ಹೇಗೆ ತಿಳೀತು? ಅಲ್ಲದೇ ನನ್ನ ಹತ್ತಿರ ಹೋಂಡಾನೂ ಇರೋದ್ರಿಂದ ಇವರ ಕಣ್ಣಲ್ಲಿ ನಾನೊಬ್ಬ ದಾಸಯ್ಯ. ವಿಷಯ ಏನಪ್ಪಾ ಅಂದರೆ ನನ್ನ ಹತ್ತಿರ ಹೋಂಡಾ ಇರೋದು ಅವರಿಗೆ ಗೊತ್ತು !
ತಾತ ಮುಂದುವರೆಸಿದರು "ಸರಿ, ದಿನಕ್ಕೆ ಎಷ್ಟು ಹೊತ್ತು ನೆಡೆಯೋದು? ಏನು ಒಂದು ಅರ್ಧ ಘಂಟೆ ನೆಡೆದರೆ ಹೆಚ್ಚು ಅಂತೀನಿ ನಾನು. ಈಗಿನವರಿಗೆ ಆಗೋದೇ ಅಷ್ಟು. ಎಲ್ಲ, ಟುಸ್ ಪಟಾಕಿಗಳು. ಜೊತೆಗೆ ನಾನು ಹೇಳೋ ಮಾತನ್ನು ಕೇಳ್ತಾ ಆಗಲೇ ಹತ್ತು ನಿಮಿಷ ಕಳೆದು ಹೋಯ್ತು. ಅದಕ್ಕೂ ಮುಂಚೆ ಒಂದು ಐದು ನಿಮಿಷ ಏನೋ ಧಡ ಧಡ ಮಾಡ್ದಿ. ಇನ್ನೊಂದು ಕಾಲು ಘಂಟೆ ಹಂಗೂ ಹಿಂಗೂ ಓಡಾಡಿ ಆ ಸೋಂಬೇರಿ ಸೋಫಾದ ಮೇಲೆ ಕುಳಿತು ಬಿಟ್ರೆ ಗೆದ್ದಂಗೆ, ಅಲ್ವೇನಯ್ಯ? ನಮ್ಮ ಪರಮೇಶೀನೂ ನಿನ್ನ ಹಾಗೇ."
ಶಾಲಿನಲ್ಲಿ ಸುತ್ತಿಕೊಂಡು ಹೊಡೆಯೋದು ಅಂದರೆ ಇದೇ. ಇವರು ಯಾವ ವಿಷಯದಲ್ಲಿ ನಾನೂ ಪರಮೇಶೀನೂ ಒಂದು ಅಂದರು ಅನ್ನೋದೇ ಅರ್ಥ ಆಗ್ತಿಲ್ಲ. ಕೇಳಲೋ ಬೇಡವೋ ಗೊತ್ತಾಗ್ತಿಲ್ಲ. ಕೇಳಿಯೇ ಬಿಟ್ಟೆ.
ಅವರು ಅದಕ್ಕೆ "ಯಾರು ಏನು ಹೇಳಿದರೆ ಆ ಮಾತು ನಿಜ ಅಂತ ನಂಬೋದು. ಹೋಗ್ಲಿ ಮಾಡೋ ಕೆಲ್ಸ ಸರಿಯಾಗಿ ಮಾಡ್ತಾನಾ ಅದೂ ಇಲ್ಲ. ಯಾರೋ ಹೇಳಿದರು ಅಂತ ಇನ್ಮೇಲೆ ಬಸ್ಕಿ ಹೊಡೀತೀನಿ ಬುದ್ದೀನೂ ಬರುತ್ತೆ ಅಂದ. ಹುಟ್ಟಿದಾಗಿನಿಂದ ಬರದ ಬುದ್ದಿ ಈಗ ಬಾ ಅಂದರೆ ಎಲ್ಲಿಂದ ಬರುತ್ತೆ? ಎರಡು ದಿನ ಆ ಅವತಾರ ಮಾಡಿದ ಆಮೇಲೆ ಬಿಟ್ಟ. ಆಮೇಲೇನೋ ಪೈಲ್ವಾನರ ಥರ ಆಗಬೇಕು ಅಂತ ಎಂಥದ್ದೊ ತಂದ. ಏನೋ ಹೆಸರು ಹೇಳ್ದ ’ಪಿಂಪಲ್ಸ್’ ಅಂತನೋ ಏನೋ. ಅದೂ ಎರಡು ದಿನ. ನಿಲ್ಲಿಸಿದ. ಅಲ್ಲಾ, ಈ ವಿಷಯದಲ್ಲೆಲ್ಲಾ ನೀನು ಪರಮೇಶಿ ತರಹ ಅಂತ ಹೇಳಲಿಲ್ಲ. ನಾನು ಹೇಳಿದ್ದು, ಅವನೂ ಈ ನಡುವೆ ವಾಕಿಂಗ್ ಅಂತ ಹಾರಾಡ್ತಾ ಇದ್ದಾನೆ ಅಂತ ಅಷ್ಟೇ"
ಸದ್ಯ ಬದುಕಿದೆ ಅಂದುಕೊಳ್ಳೋ ಅಷ್ಟರಲ್ಲಿ ಅವರು ಮತ್ತೆ "ದಿನಕ್ಕೊಂದು ಅವತರಾ ಮಾಡ್ತೀನಿ ಅಂತ ಹೇಳ್ತೀಯೆಲ್ಲ ಇದಕ್ಕೆಲ್ಲ ನಿನಗೆ ಯಾರು ಗುರುಗಳು ಅಂತ ಮೊನ್ನೆ ಕೇಳಿದೆ. ನನ್ನ ಕ್ಲೋಸ್ ಫ್ರೆಂಡೂ ಅಂದ. ಅದು ಯಾರು ಅಂತ ನಿನಗೇನಾದ್ರೂ ಗೊತ್ತೇನಯ್ಯಾ?" ಅಂದರು.
ಕೈಕಾಲಿಗೆ ಅದೇನು ಶಕ್ತಿ ಬಂತೋ ಏನೋ Brisk Walk ಮಾಡಲು ಶುರು ಮಾಡಿಯೇ ಬಿಟ್ಟೆ. ತಾತ ಏನೋ ಗೊಣಗಾಡ್ತಾ ಇದ್ದರು ಕೇಳಿಸಲಿಲ್ಲ. ವಾಕಿಂಗ್ ಉತ್ತಮ. Brisk Walk ಇನ್ನೂ ಉತ್ತಮ, ಕನಿಷ್ಟ ಪರಮೇಶಿಯ ತಾತನಂಥವರಿಂದ ತಪ್ಪಿಸಿಕೊಳ್ಳಲು ಇಂದೇ ಶುರು ಮಾಡಿ 'Brisk Walk'.
{ವಿದ್ಯಾರಣ್ಯ ಕನ್ನಡ ಕೂಟ - ಸಂಗಮದ’ ಉಗಾದಿ ಸಂಚಿಕೆಯಲ್ಲಿ ಪ್ರಕಟವಾಗಿತ್ತು}

ಮಟ ಮಟ ಸಂಜೆ ಹಾಗೇ ವಾಕಿಂಗ್’ಗೆ ಹೊರಟಿದ್ದೆ ...

ಮೊದಲ ಮಾತಲ್ಲೇ ಎಡವಟ್ಟು ಅಂತೀರಾ ? ನೀವೇ ಹೇಳಿ ... 

ಹಬೆಯುಕ್ತ ಭೂಮಿಯ ಮೇಲ್ಮೈನ ಗಾಳಿ ಸೇವನೆ ಮಾಡುತ್ತ, ಮಧ್ಯಾನ್ನವೆಲ್ಲ ಬಿಸಿಲಿಗೆ ಮೈ ಒಡ್ಡಿರುವ ಕಾಂಕ್ರೀಟು ಬಿಲ್ಡಿಂಗುಗಳು ಬಿಸಿ ಸ್ವೀಕರಿಸುತ್ತ, ಅಗಾಧವಾದ ಶಬ್ದ ಮಾಲಿನ್ಯವನ್ನು ಕಿವಿಗಳಲ್ಲಿ ತುಂಬಿಕೊಂಡು, ಪ್ರತಿ ಗಾಡಿ ಹೊರ ಚೆಲ್ಲುವ ಕಪ್ಪನೆಯ ಹೊಗೆಯನ್ನು ಕುಡಿಯುತ್ತ, ಹೆಜ್ಜೆ ಹೆಜ್ಜೆಗೂ ಆಟೋ ಮತ್ತು ಇನ್ನಿತರ ಗಾಡಿಯವರ ಬಾಯಲ್ಲಿ ಅಡ್ಡ ಬಂದದ್ದಕ್ಕೆ ಉಗಿಸಿಕೊಳ್ಳುತ್ತ ... ವಾಕಿಂಗ್ ಹೊರಟಿದ್ದೆ ಅಂತೆಲ್ಲ ಸತ್ಯ ಹೇಳಹೊರಟರೆ, ದಿನಾ ಇದ್ದಿದ್ದೇ, ಇದರ ಮೇಲೆ ನಿನ್ನದೇನಯ್ಯಾ ಗೋಳು ಅನ್ನೋಲ್ವೇ ಜನ? 

ಅದರ ಬದಲಿಗೆ, ತಂಪಾದ ಗಾಳಿಯಲ್ಲಿ, ರೇಷ್ಮೆಯುಕ್ತವಾದ ತಲೆಗೂದಲನ್ನು ಹಾರಿಸುತ್ತ, ಹಕ್ಕಿಗಳ ಚಿಲಿ-ಪಿಲಿ ಆಲಿಸುತ್ತ, ಹಿಂಬದಿಯಲ್ಲಿ ಧುಮ್ಮಿಕ್ಕೋ ಜಲಪಾತದ ಹೊರಾಂಗಣದಲ್ಲಿ, ಬಿಳೀ ಹೊಗೆಯ ಮಧ್ಯದಿಂದ ಹೊರಬರುತ್ತ, ಜಗದ ಪರಿವಿಲ್ಲದೆ ನೆಮ್ಮದಿಯಾಗಿ ವಾಕಿಂಗ್ ಹೊರಟಿದ್ದೆ ಎಂದು ಅಸಂಬದ್ದವಾಗಿ ರೀಲ್ ಬಿಟ್ಟರೂ ಕೇಳಲು ಏನೋ ಖುಷಿ. 

ಹೋಗಲಿ ಬಿಡಿ ... ಡಿಫರೆಂಟಾಗಿ ಹೇಳೋಣ ಅಂತಿದ್ದೇ... ಆದರೆ ಸಿಂಪಲ್ ಆಗಿ ಹೇಳುತ್ತೇನೆ ... ನಾನು ವಾಕಿಂಗ್ ಹೊರಟಿದ್ದೆ. 

ದಿನವೂ ಬರೀ ತಿನ್ನೋದೇ ಆದರೆ ಹೇಗೆ? ದೇಹಕ್ಕೆ ವ್ಯಾಯಾಮವೂ ಬೇಡವೇ ಎಂಬೋ ಉದ್ದೇಶದಿಂದ ಕಳೆದ ಗಣೇಶ ಚತುರ್ಥಿಯ ನಂತರ ದಿನವೂ ಬಸ್ಕಿ ಹೊಡೆಯಬೇಂದು ಅಂದುಕೊಂಡೆ. ಬಸ್ಕಿ ಹೊಡೆಯುವುದರಿಂದ ಬುದ್ದಿವಂತಿಕೆಯೂ ಹೆಚ್ಚುತ್ತದೆ (ಇದ್ದೋರಿಗೆ) ಅಲ್ಲದೇ ಸೊಂಟದ ಸುತ್ತಲೂ ಸೇರಿರುವ ಕೊಬ್ಬೂ ಇಳಿದು ಸ್ಲಿಮ್ ಆಗಬಹುದು ಎಂಬ ಸದುದ್ದೇಶದಿಂದ ಆರಂಭ ಮಾಡಿದೆ. ಎರಡು ದಿನ ಚೆನ್ನಾಗಿ ನೆಡೆಯಿತು.

ನಂತರ ತೊಡೆಯ ಮಾಂಸಖಂಡಗಳು ನೋಯಲು ಆರಂಭವಾಗಿ, ಬಸ್ಕಿ ಕಾರ್ಯಕ್ರಮವನ್ನು ನಿಲ್ಲಿಸಿ, ವರ್ಷಕ್ಕೊಮ್ಮೆ ಭಾದ್ರಪದ ಶುಕ್ಲದ ಚೌತಿಯ ದಿನ, ಅದೂ ೨೧ ಬಾರಿ ಮಾತ್ರ, ಎಂದು ನನಗೆ ನಾನೇ ನಿಯಮ ಹಾಕಿಕೊಂಡಿದ್ದೇನೆ.

ಸಲ್ಮಾನ್ ಖಾನ್’ನಂತೆ ಬಾಹುಗಳು ಪುಷ್ಟಿಯಾಗಿಸಿಕೊಳ್ಳಲು ಡಂಬಲ್ಸ್’ನಿಂದ ಶುರು ಮಾಡೋಣ ಎಂದು ಅದನ್ನೂ ಕೊಂಡು ತಂದೆ. ಎರಡು ದಿನ ಮಾಡಿದ ಮೇಲೆ ಊಟ ಮಾಡಲೂ ಕೈ ಎತ್ತಲು ಆಗಲಿಲ್ಲ. ಅಲ್ಲದೇ, ಇನ್ನೊಂದು ದಿನ ಏನಾಯ್ತು ಅಂದ್ರೆ ಡಂಬಲ್ಸ್ ಹಿಡಿದ ಕೈ ಯಾಕೋ ಜೋಮು ಹಿಡಿದಂತಾಗಿ ಡಂಬಲ್ ನನಗೆ ಅರಿವಿಲ್ಲದೆ ಕೈ ಜಾರಿತ್ತು. ಜಾರಿದ್ದು ಕೈಗೆ ಅರಿವಾಗಲಿಲ್ಲ ಆದರೆ ಕೆಳಗೆ ಬಿದ್ದ ಮೇಲೆ ಖಂಡಿತ ಅರಿವಾಯಿತು... ಯಾಕೆಂದರೆ ಅದು ನನ್ನ ಕಾಲ ಮೇಲೆ ಮೊದಲು ಬಿತ್ತಲ್ಲ, ಅದಕ್ಕೆ ! ಇನ್ಮುಂದೆ ರಬ್ಬರ್’ದೋ ಅಥವಾ ಪ್ಲಾಸ್ಟಿಕ್’ದೋ ಡಂಬಲ್ಸ್ ಕೊಳ್ಳಬೇಕು !!

ಇವೆಲ್ಲ ಯಾವುದೂ ಬೇಡ ಅಂತ ಸಿಂಪಲ್ಲಾಗಿ ವಾಕಿಂಗ್ ಮಾಡುತ್ತಿದ್ದೇನೆ ಈಗ. ಇದೇನೂ ಕಷ್ಟವಿಲ್ಲ ಮತ್ತು ಬಾಧಕವಲ್ಲ ಅನ್ನೋದು ಗ್ಯಾರಂಟಿ.

ಹೊರಟ ಹತ್ತು ನಿಮಿಷ ಬಿರುಸು ನಡಿಗೆ ಮಾಡಿದ್ದರಿಂದ ಏದುಸಿರು ಬಂದಂತಾಗಿ ನಂತರ ಮೆಲ್ಲಗೆ ನೆಡೆಯಲು ಆರಂಭಿಸಿದೆ. ಎದುರಿಗೆ ಪರಮೇಶಿಯ ತಾತ ಸಿಕ್ಕರು. ಹಿರಿಯರು, ಹಾಗೇ ಹೋಗಲಿಕ್ಕೆ ಆಗುತ್ತದೆಯೇ? ಅವರಿಗೆ ಡಯಾಬಿಟಿಸ್, ಮಂಡಿ ನೋವು, ಎಲ್ಲ ಇರುವುದು ತಿಳಿದೂ ಯಥಾ ಪ್ರಕಾರ "ಹೇಗಿದ್ದೀರಾ? ಆರೋಗ್ಯವೇ?" ಎಂದೆ.......

ನೋಡಪ್ಪಾ "ಸೀನು, ವಯಸ್ಸು ಎಪ್ಪತ್ತು ದಾಟಿದ ಮೇಲೆ, ಹೇಗಿದ್ದೀರಾ ಅನ್ನಬಾರದು ... ಯಾಕಿದ್ದೀರಾ ಅನ್ನಬೇಕು" ಅಂತ ನಕ್ಕರು. ನಾನೂ ಸುಮ್ಮನೆ ನಕ್ಕೆ. ಆಮೇಲೆ ಅವರು "ಏನು? ವಾಕಿಂಗ್ ಹೊರಟಿರೋ ಹಾಗಿದೆ. ಅಲ್ಲಿಂದ ಬರ್ತಾ ಧಡ ಧಡ ಅಂತ ಬರ್ತಿದ್ದೆ. ಆಮೇಲೇಕೆ ಬಲೂನಿಂದ ಗಾಳಿ ಹೋದ ತರಹ ಆದೆಯೆಲ್ಲ. ತಿಂದ ಅನ್ನ ಕರಗಲು ಒಡಾಡೋದು. ಅದಾದ ಮೇಲೆ ಅರಗಿ ಹೋಯ್ತಲ್ಲ ಅಂತ ಮತ್ತೆ ತಿನ್ನೋದು. ಚೆನ್ನಾಗಿ ಹಂದಿ ತರಹ ತಿಂದು ಟಿ.ವಿ. ಮುಂದೆ ಕೂಡೋದು. ಇನ್ನು ದೇಹ ಕರಗೂ ಅಂದರೆ ಹೇಗೆ ಕರಗುತ್ತೆ?" ನಾನು ಏನೂ ಹೇಳಲಿಲ್ಲ. ಅಲ್ಲ, ನನಗೆ ಏನು ಹೇಳಲೂ ಆಗಲಿಲ್ಲ. ಮುಖಕ್ಕೆ ಹೊಡೆದ ಹಾಗೆ ಹೇಳಿದ ಮೇಲೆ, ಇನ್ನೇನು ಹೇಳಲು ಸಾಧ್ಯ. ಉಗುಳು ನುಂಗಿದೆ. ಅದಕ್ಕೂ ಭಯ. ನನ್ನ ಉಗುಳು ನಾನು ನುಂಗಿದರೆ ಅದಕ್ಕೂ ಅವರ ಕೈಲಿ ಎಲ್ಲಿ ಉಗಿಸಿಕೊಳ್ಳಬೇಕೋ ಅಂತ.

ಅವರು ಮುಂದುವರೆಸಿದರು "ನಮ್ಮ ಕಡೆ ಒಬ್ಬ ಇದ್ದಾನೆ. ಅವನೂ ನಿನ್ನ ಹಾಗೇನೇ. ಸಂಜೆ ಆದರೆ ಹುಚ್ಚು ಹಿಡಿದವರ ತರಹ ಬೇಗ ಬೇಗ ಎಲ್ಲಿಗೋ ನೆಡೆದುಕೊಂಡು ಹೋಗ್ತಾನೆ. ಮೊನ್ನೆ ಸಿಕ್ಕಿದ್ದ. ನಾನು ಹೇಳಿದೆ ’ತುಂಬಾ ಅರ್ಜಂಟ್ ಆಗಿದ್ರೆ ನಮ್ಮ ಮನೆ ಬಚ್ಚಲು ಮನೆ ಉಪಯೋಗಿಸೂ ಅಂತ’. ಅದಕ್ಕೆ ಅವನು ’ಇದಕ್ಕೆ Brisk Walk ಅಂತ ಕರೀತಾರೆ. ಇದೆಲ್ಲ ನಿಮಗೆಲ್ಲಿ ಗೊತ್ತಾಗುತ್ತೆ ಅಂದ. ನೋಡಿದ್ಯಾ ಹೆಂಗಿದೆ. ಮೊಮ್ಮಗ ತಾತನಿಗೆ ಸೀನೋದು ಹೇಳಿಕೊಟ್ಟನಂತೆ. ಏನಂತೀಯಾ?’. 

ಅನ್ನೋದೇನ್ರೀ? ಇನ್ಮುಂದೆ ನನಗೆ Brisk Walk ಮಾಡಬೇಕೋ ಬೇಡವೋ ಅಂತ ಅನ್ನಿಸ್ತಿದೆ. ವಾಕಿಂಗ್ ಮಾಡಿದರೆ ನೆಮ್ಮದಿ ಅಂತ ನಾನು ಅಂದುಕೊಂಡಿದ್ದೆ. ಈಗ ನೋಡಿದರೆ ಇವರು ಅದಕ್ಕಿರೋ ಮರ್ಯಾದೆ ತೆಗೀತಿದ್ದಾರೆ.

"ನೋಡು ಸೀನು, ಯಾರಾದರೂ ನಿನ್ನ ಮುಂದೆ, ನಮ್ಮ ಕಾಲದಲ್ಲಿ ನಿನ್ನ ವಯಸ್ಸಿನಲ್ಲಿ ದಿನಕ್ಕೆ ಹತ್ತು ಮೈಲು ದಿನವೂ ನೆಡೆತಿದ್ದೆ ಅಂತ ಹೇಳಿದರೆ, ನೀನು ಒಳ್ಳೇ ಪೆದ್ದು ಪೆದ್ದಾಗಿ ಕೇಳಿಸಿಕೊಂಡು ನಿಲ್ಲಬೇಡ. ಅಲ್ಲ, ಈಗಿನಂತೆ ಆಗಿನ ಕಾಲದಲ್ಲಿ ಗಾಡಿಗಳಿದ್ದವೇನು? ಇದ್ದರೂ, ತೊಗೊಳ್ಳೋ ಶಕ್ತಿ ಬೇಕಲ್ಲ? ನೆಡೆಯದೆ ಬೇರೆ ದಾರಿ ಇರಲಿಲ್ಲ. ಅದಕ್ಕೇ ನೆಡೀತಿದ್ರೂ ಅನ್ನೋ ಸತ್ಯ ತಿಳ್ಕೋ. ಈಗೇನು ಬಿಡು, ಬೀದಿಯಲ್ಲಿ ಹೋಗೋ ದಾಸಯ್ಯನ ಹತ್ತಿರಾನೂ ಕನಿಷ್ಟ ಅಂದರೆ ಹೋಂಡಾನೋ ಬೋಂಡಾನೋ ಇರುತ್ತೆ. ಗಾಡಿಯಲ್ಲೇ ಬೀದಿ ಬಸವರ ಹಾಗೇ ತಿರುಗೋ ಮಂದಿಗೆ ನಡಿಗೇನೇ ಮರೆತುಹೋಗಿದೆ. ಏನಂತೀಯಾ?". 

ಎಲ್ಲ ಇವರೇ ಹೇಳಿದ ಮೇಲೆ, ನಾನು ಅನ್ನೋದೇನ್ರೀ? ನಡು ಬೀದಿಯಲ್ಲಿ ನಿಲ್ಲಿಸಿ ಆರತಿ ತಟ್ಟೆ ಇಲ್ಲದೆ ಮಂಗಳಾರತಿ ಮಾಡ್ತಾ ಇದ್ದಾರೆ. ಹಳೇ ಕಾಲದವರು ಏನೇ ಹೇಳಿದರೂ ಕೋಡಂಗಿ ತರಹ ತಲೆ ತೂಗೋ ಸ್ವಭಾವ ನನ್ನದು. ಅದು ಇವರಿಗೆ ಹೇಗೆ ತಿಳೀತು? ಅಲ್ಲದೇ ನನ್ನ ಹತ್ತಿರ ಹೋಂಡಾನೂ ಇರೋದ್ರಿಂದ ಇವರ ಕಣ್ಣಲ್ಲಿ ನಾನೊಬ್ಬ ದಾಸಯ್ಯ. ವಿಷಯ ಏನಪ್ಪಾ ಅಂದರೆ ನನ್ನ ಹತ್ತಿರ ಹೋಂಡಾ ಇರೋದು ಅವರಿಗೆ ಗೊತ್ತು !

ತಾತ ಮುಂದುವರೆಸಿದರು "ಸರಿ, ದಿನಕ್ಕೆ ಎಷ್ಟು ಹೊತ್ತು ನೆಡೆಯೋದು? ಏನು ಒಂದು ಅರ್ಧ ಘಂಟೆ ನೆಡೆದರೆ ಹೆಚ್ಚು ಅಂತೀನಿ ನಾನು. ಈಗಿನವರಿಗೆ ಆಗೋದೇ ಅಷ್ಟು. ಎಲ್ಲ, ಟುಸ್ ಪಟಾಕಿಗಳು. ಜೊತೆಗೆ ನಾನು ಹೇಳೋ ಮಾತನ್ನು ಕೇಳ್ತಾ ಆಗಲೇ ಹತ್ತು ನಿಮಿಷ ಕಳೆದು ಹೋಯ್ತು. ಅದಕ್ಕೂ ಮುಂಚೆ ಒಂದು ಐದು ನಿಮಿಷ ಏನೋ ಧಡ ಧಡ ಮಾಡ್ದಿ. ಇನ್ನೊಂದು ಕಾಲು ಘಂಟೆ ಹಂಗೂ ಹಿಂಗೂ ಓಡಾಡಿ ಆ ಸೋಂಬೇರಿ ಸೋಫಾದ ಮೇಲೆ ಕುಳಿತು ಬಿಟ್ರೆ ಗೆದ್ದಂಗೆ, ಅಲ್ವೇನಯ್ಯ? ನಮ್ಮ ಪರಮೇಶೀನೂ ನಿನ್ನ ಹಾಗೇ."

ಶಾಲಿನಲ್ಲಿ ಸುತ್ತಿಕೊಂಡು ಹೊಡೆಯೋದು ಅಂದರೆ ಇದೇ. ಇವರು ಯಾವ ವಿಷಯದಲ್ಲಿ ನಾನೂ ಪರಮೇಶೀನೂ ಒಂದು ಅಂದರು ಅನ್ನೋದೇ ಅರ್ಥ ಆಗ್ತಿಲ್ಲ. ಕೇಳಲೋ ಬೇಡವೋ ಗೊತ್ತಾಗ್ತಿಲ್ಲ. ಕೇಳಿಯೇ ಬಿಟ್ಟೆ.

ಅವರು ಅದಕ್ಕೆ "ಯಾರು ಏನು ಹೇಳಿದರೆ ಆ ಮಾತು ನಿಜ ಅಂತ ನಂಬೋದು. ಹೋಗ್ಲಿ ಮಾಡೋ ಕೆಲ್ಸ ಸರಿಯಾಗಿ ಮಾಡ್ತಾನಾ ಅದೂ ಇಲ್ಲ. ಯಾರೋ ಹೇಳಿದರು ಅಂತ ಇನ್ಮೇಲೆ ಬಸ್ಕಿ ಹೊಡೀತೀನಿ ಬುದ್ದೀನೂ ಬರುತ್ತೆ ಅಂದ. ಹುಟ್ಟಿದಾಗಿನಿಂದ ಬರದ ಬುದ್ದಿ ಈಗ ಬಾ ಅಂದರೆ ಎಲ್ಲಿಂದ ಬರುತ್ತೆ? ಎರಡು ದಿನ ಆ ಅವತಾರ ಮಾಡಿದ ಆಮೇಲೆ ಬಿಟ್ಟ. ಆಮೇಲೇನೋ ಪೈಲ್ವಾನರ ಥರ ಆಗಬೇಕು ಅಂತ ಎಂಥದ್ದೊ ತಂದ. ಏನೋ ಹೆಸರು ಹೇಳ್ದ ’ಪಿಂಪಲ್ಸ್’ ಅಂತನೋ ಏನೋ. ಅದೂ ಎರಡು ದಿನ. ನಿಲ್ಲಿಸಿದ. ಅಲ್ಲಾ, ಈ ವಿಷಯದಲ್ಲೆಲ್ಲಾ ನೀನು ಪರಮೇಶಿ ತರಹ ಅಂತ ಹೇಳಲಿಲ್ಲ. ನಾನು ಹೇಳಿದ್ದು, ಅವನೂ ಈ ನಡುವೆ ವಾಕಿಂಗ್ ಅಂತ ಹಾರಾಡ್ತಾ ಇದ್ದಾನೆ ಅಂತ ಅಷ್ಟೇ"

ಸದ್ಯ ಬದುಕಿದೆ ಅಂದುಕೊಳ್ಳೋ ಅಷ್ಟರಲ್ಲಿ ಅವರು ಮತ್ತೆ "ದಿನಕ್ಕೊಂದು ಅವತರಾ ಮಾಡ್ತೀನಿ ಅಂತ ಹೇಳ್ತೀಯೆಲ್ಲ ಇದಕ್ಕೆಲ್ಲ ನಿನಗೆ ಯಾರು ಗುರುಗಳು ಅಂತ ಮೊನ್ನೆ ಕೇಳಿದೆ. ನನ್ನ ಕ್ಲೋಸ್ ಫ್ರೆಂಡೂ ಅಂದ. ಅದು ಯಾರು ಅಂತ ನಿನಗೇನಾದ್ರೂ ಗೊತ್ತೇನಯ್ಯಾ?" ಅಂದರು.

ಕೈಕಾಲಿಗೆ ಅದೇನು ಶಕ್ತಿ ಬಂತೋ ಏನೋ Brisk Walk ಮಾಡಲು ಶುರು ಮಾಡಿಯೇ ಬಿಟ್ಟೆ. ತಾತ ಏನೋ ಗೊಣಗಾಡ್ತಾ ಇದ್ದರು ಕೇಳಿಸಲಿಲ್ಲ. ವಾಕಿಂಗ್ ಉತ್ತಮ. Brisk Walk ಇನ್ನೂ ಉತ್ತಮ, ಕನಿಷ್ಟ ಪರಮೇಶಿಯ ತಾತನಂಥವರಿಂದ ತಪ್ಪಿಸಿಕೊಳ್ಳಲು ಇಂದೇ ಶುರು ಮಾಡಿ 'Brisk Walk'.

{ವಿದ್ಯಾರಣ್ಯ ಕನ್ನಡ ಕೂಟ - ಸಂಗಮದ’ ಉಗಾದಿ ಸಂಚಿಕೆಯಲ್ಲಿ ಪ್ರಕಟವಾಗಿತ್ತು}

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಲೇಖನ ಸೂಪರ್ ನನ್ನದೊಂದು ಜೋಕ್ ರೋಗಿ : ಡಾಕ್ಟ್ರೆ ಡಯಾಬಿಟೀಸ್ ಬಂದಿದೆ ಏನ್ ಮಾಡ್ಲಿ? ವೈದ್ಯ : ದಿನನಿತ್ಯ ಸುಮಾರು 5ಕಿ.ಮೀ ನಡೀರಿ ಒಂದು ತಿಂಗಳ ನಂತರ ರೋಗಿ ವೈದ್ಯರಿಗೆ ಪೋನಾಯಿಸಿದ ರೋಗಿ : ಡಾಕ್ಟ್ರೆ ನೀವು ಹೇಳಿದಂತೆ ದಿನಾ 5ಕಿ.ಮೀ ವಾಕ್ ಮಾಡೀದೀನಿ ವೈದ್ಯ : ಆಸ್ಪತ್ರೆಗೆ ಬನ್ನಿ ಚೆಕ್ ಮಾಡೋಣ ರೋಗಿ : ಹಾಗಾದರೆ ನಾನು ಈಗ ಬೆಂಗಳೂರಿಗೆ ಬಸ್ಸಿನಲ್ಲೇ ಬರಬೇಕು ವೈದ್ಯ : ಯಾಕೆ? ಎಲ್ಲಿದ್ದೀರಿ? ರೋಗಿ : ನೀವು ಹೇಳಿದ ದಿನದಿಂದ 5ಕಿ.ಮೀನಂತೆ ವಾಕ್ ಮಾಡ್ತಾ ಬಂದೆ. ಈಗ ತಿಪಟೂರಿನಲ್ಲಿ ಇದ್ದೀನಿ ಡಾಕ್ಟ್ರೆ.

ಚಿಕ್ಕು, ವೆಂಕಟೇಶ್ ಪ್ರತಿಕ್ರಿಯೆಗೆ ಧನ್ಯವಾದಗಳು ಸುರೇಶ್, ಜೋಕ್ ಚೆನ್ನಾಗಿದೆ ನಾವಡರೇ, ಧನ್ಯವಾದಗಳು .... ನಗುವುದು ಬ್ರಿಸ್ಕ್ ವಾಕ್’ನಷ್ಟೇ ಒಳ್ಳೆಯದು ...

ಸೂಪರ್ ಅಗಿದೆ ಲೇಖನ. ಸತ್ಯ ಕಹಿ ಅಂತಾರೆ. ಆದರೆ ನೀವು ನಮ್ಮ ಯುವಜನರ ವ್ಯಾಯಾಮದ trend ಬಗ್ಗೆ ಸಿಹಿಯಾಗಿ ಸತ್ಯ ಹೇಳಿದ್ದೀರಿ :)

ಭಲ್ಲೆಯವರೆ, brisk walk ಪ್ರಸಂಗ ಚೆನ್ನಾಗಿದೆ. ಬೆಳಬೆಳಗ್ಗೆನೇ ಬ್ರಿಸ್ಕ್ ವಾಕ್ ಮಾಡಿ ಯಾಕೆ ಸುಸ್ತು ಮಾಡಿಕೊಳ್ಳುವುದು. ಹೊಂಡ ವಾಕ್ ಮಾಡಿ. ತಮ್ಮ ಹೊಂಡದಲ್ಲಿ ಒಂದು ರೌಂಡ್ ಪಾರ್ಕ್ ಸುತ್ತಿ, ದೂರದ ಹೋಟೆಲಲ್ಲಿ ಬೋಂಡಾ+ಕಾಫಿ ಕುಡಿದು (ಮನೆಯವರಿಗೆ ಸಂಶಯ ಬರದಿರಲು ಚಿತ್ರಾನ್ನ/ಉಪ್ಪಿಟ್ಟಿಗೂ ಸ್ವಲ್ಪ ಸ್ಥಳ ಉಳಿಸಿ)ಮನೆಗೆ ಮರಳಿ. ಹೆಲ್ಮೆಟ್ ಇರುವುದರಿಂದ ಪರ್ಮೇಶಿ ತಾತನ ಭಯ ಬೇಡ. -ಗಣೇಶ.