ಚಿಂತನ ಇಲ್ಲದ ನನ್ನ ’ಚಿಂತನ’!

To prevent automated spam submissions leave this field empty.

  ಎಂದಿನಂತೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ನನಗೊಂದು ಅಂಚೆ ಲಕೋಟೆ ಬಂತು. ಎಂದಿನಂತೆ ಅದು ’ಚಿಂತನ’ ಕಾರ್ಯಕ್ರಮದ ಧ್ವನಿಗ್ರಹಣಕ್ಕೆ ಆಹ್ವಾನ ಎಂಬುದನ್ನರಿತ ನಾನು ಎಂದಿನಂತೆ ಆ ಲಕೋಟೆಯನ್ನು ಹಾಗೇ ಎತ್ತಿ ಬದಿಗಿಟ್ಟೆ.
  ಕೆಲವು ದಿನಗಳ ನಂತರ ಲಕೋಟೆ ತೆರೆದು ಒಪ್ಪಿಗೆ ಪತ್ರ ರವಾನಿಸಿ ಪೂರ್ವಯೋಜಿತ ಪ್ರವಾಸಕ್ಕೆ ಹೊರಟೆ. ಪ್ರವಾಸದಿಂದ ಹಿಂತಿರುಗಿ ಗಣಕಯಂತ್ರದೆದುರು ಕುಳಿತವನು ಲೇಖನ, ಮಿಂಚಂಚೆ, ಸಂಗೀತಶ್ರವಣ, ಹೀಗೆ ಯಂತ್ರಮಂತ್ರಮುಗ್ಧನಾಗಿ ಒಂದು ದಿನ ಕಳೆದೆ. ಮರುದಿನವೇ ’ಚಿಂತನ’ದ ಧ್ವನಿಗ್ರಹಣ.
  ಧ್ವನಿಗ್ರಹಣದ ದಿನ ಬೆಳಗಾಯಿತು. ಇನ್ನು ನಾಲ್ಕು ಗಂಟೆಗಳೊಳಗೆ ಬೆಂಮನಸಾ ಬಸ್ಸು ಹತ್ತಿರಬೇಕು ನಾನು. ಆಕಾಶವಾಣಿ ಕೇಂದ್ರಕ್ಕೆ ಹೋಗಿ ಸ್ವಂತ ಆಯ್ಕೆಯ ಮೂರು ವಿಷಯಗಳ ಬಗ್ಗೆ ತಲಾ ನಾಲ್ಕು ನಿಮಿಷ ಮಾತನಾಡಬೇಕು. ನಾನಿನ್ನೂ ವಿಷಯಗಳ ಆಯ್ಕೆಯನ್ನೇ ಮಾಡಿಕೊಂಡಿರಲಿಲ್ಲ.(!)
  ಅಜಮಾಸು ನೂರಕ್ಕೆ ಹತ್ತಿರ ಇಂಥ ರೇಡಿಯೋ ಕಾರ್ಯಕ್ರಮಗಳನ್ನು ಕೊಟ್ಟಿರುವುದರಿಂದ ನನಗೆ ನನ್ನ ಬಗ್ಗೆ ಅತಿಯಾದ ಆತ್ಮವಿಶ್ವಾಸ. ಚಿಂತನ ಮಾಡದೆಯೇ ಚಿಂತನ ಕಾರ್ಯಕ್ರಮ ನೀಡಬಲ್ಲೆನೆಂಬ ಹುಚ್ಚು ಧೈರ್ಯ.(!)
  ಇದೇ ಧೈರ್ಯ ನನ್ನನ್ನು ಧ್ವನಿಗ್ರಹಣದ ದಿನ ಬೆಳಗ್ಗೆಯೂ ಗಣಕಯಂತ್ರದೆದುರು ಕುಳ್ಳಿರಿಸಿತು. ಪ್ರಾತಃದಿನಚರಿ ಪೂರೈಸಿ ಗಣಕಯಂತ್ರದೆದುರು ಕೂತವನು ಮುವ್ವತ್ತೆಂಟು ಮಿಂಚಂಚೆ ತೆರೆದೋದಿ, ಆ ಪೈಕಿ ಹದಿನೈದು ಮಿಂಚಂಚೆ ಕೊಂಡೊಯ್ದ ಕಡೆ ಹೋಗಿ ಆ ಎಲ್ಲ ಕಿರುಬರಹಗಳನ್ನೂ ಓದಿ, ಸಂಪದಿಗ ಮಿತ್ರ ಸೈಯದ್ ಅಬ್ದುಲ್ ಲತೀಫ್ ಅವರನ್ನೂ ಒಳಗೊಂಡಂತೆ ನಾಲ್ವರ ಜಿಜ್ಞಾಸು ಮಿಂಚಂಚೆಗಳಿಗೆ ಉತ್ತರ ನೀಡಿ ಯಂತ್ರಬಿಟ್ಟೇಳುವಷ್ಟರಲ್ಲಿ ಯಂತ್ರದೆದುರೇ ಒಂದೂವರೆ ಗಂಟೆ ಕಾಲ ವ್ಯಯವಾಗಿಹೋಗಿತ್ತು. ಆಕಾಶವಾಣಿ ಕೇಂದ್ರದೆಡೆಗೆ ಬಸ್ಸೇರಲು ಇನ್ನು ಒಂದೂವರೆ ಗಂಟೆ ಸಮಯ ಮಾತ್ರ ಉಳಿದಿತ್ತು. ’ಚಿಂತನ’ದ ಬಗ್ಗೆ ನನ್ನಲ್ಲಿನ್ನೂ ಯಾವ ಚಿಂತನ-ಮಂಥನವೂ ಆರಂಭವಾಗಿರಲಿಲ್ಲ.(!)
  ಮೂರು ಹಾಳೆ, (ಒಂದು) ಲೇಖನಿ ಹಿಡಿದು ಕುಳಿತೆ. ಸರಸರನೆ, (ಶರವೇಗದಲ್ಲಿ), ತೋಚಿದ್ದನ್ನು ಗೀಚತೊಡಗಿದೆ. ’ಛಿ!ಂತನ’ದ ಎರಡು ದಿಢೀರ್ ದೋಸೆಗಳು ತಯಾರಾದವು! ಮೂರನೆಯ ದೋಸೆಗೆ ಹಿಟ್ಟು ಹೊಯ್ಯಬೇಕೆನ್ನುವಷ್ಟರಲ್ಲಿ  ಆಕಾಶವಾಣಿ ಕೇಂದ್ರದಿಂದ ದೂರವಾಣಿ ಕರೆ ಬಂತು. ’ಚಿಂತನ’ಕ್ಕೆ ನನ್ನನ್ನು ಆಹ್ವಾನಿಸಿದ್ದ ನೂತನ್ ಕದಂ ಮೇಡಂ ಮಾತನಾಡಿ ಧ್ವನಿಗ್ರಹಣದ ಬಗ್ಗೆ ಜ್ಞಾಪಿಸಿದರು. ಇನ್ನು ಒಂದೂಕಾಲು ಗಂಟೆಯೊಳಗೆ ಅವರೆದುರಿರುವುದಾಗಿ ಮಾತುಕೊಟ್ಟು ಮೂರನೆಯ ದೋಸೆಯ ತಯಾರಿಯಲ್ಲಿ ತೊಡಗಿದೆ.
  ಒಟ್ಟು ಒಂದೂವರೆ ಗಂಟೆ ಸಮಯದೊಳಗೆ ಮೂರು ’ಚಿಂತನ’(ಹಸಿಬಿಸಿ ದೋಸೆ)ಗಳನ್ನು ತಯಾರಿಸಿ, ಬೆಂಮನಸಾ ಬಸ್ಸು, ಆಟೋ, ಹೀಗೆ ಒಟ್ಟು ನಲವತ್ತು ನಿಮಿಷ ಪ್ರಯಾಣಿಸಿ, ಸಮಯಕ್ಕೆ ಸರಿಯಾಗಿ ನೂತನ್ ಮೇಡಂ ಎದುರು ಏದುಸಿರುಬಿಡುತ್ತ ನಿಂತಿದ್ದೆ.
  ***
  ನಿನ್ನೆ ಧ್ವನಿಗ್ರಹಣ ಆಗಿದೆ. ಇದೇ ತಿಂಗಳ ಒಂಬತ್ತು, ಹತ್ತೊಂಬತ್ತು ಮತ್ತು ಇಪ್ಪತ್ತೊಂಬತ್ತನೇ ದಿನಾಂಕಗಳಂದು ಬೆಳಗ್ಗೆ ಆರೂವರೆಯಿಂದ - ಒಂದು ದಿನಕ್ಕೆ ಒಂದರಂತೆ - ತಲಾ ಐದು ನಿಮಿಷಗಳ ಅವಧಿಯ, ನನ್ನ ಒಟ್ಟು ಮೂರು ’ಚಿಂತನ’ ಕಾರ್ಯಕ್ರಮಗಳು ಆಕಾಶವಾಣಿಯ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗಲಿವೆ. ಅನುಕ್ರಮವಾಗಿ, ’ಆಸೆಗೊಂದು ಮಿತಿ’, ’ಮೊಬೈಲ್ ಮಾತು’, ’ಕ್ರೀಡಾ ಮನೋಭಾವ’ ಇವು ಮೂರು ’ಚಿಂತನ’ದ ವಿಷಯಗಳು.
  ರೇಡಿಯೋ ಉಳ್ಳ ಮತ್ತು ಬೆಂಗಳೂರು ಕೇಂದ್ರದ ಲಭ್ಯತೆ (FM ಅಲ್ಲ; Medium Wave, 612 KHz, 490.2 meters) ಇರುವ ಸಂಪದಿಗ ಮಿತ್ರರು ದಯೆಯಿಟ್ಟು ನನ್ನ ಈ ಮೂರು "ಚಿಂತನರಹಿತ ’ಚಿಂತನ’ ಕಾರ್ಯಕ್ರಮ"ಗಳನ್ನು ಕೇಳಿ ನನಗೊಂದಿಷ್ಟು ಬುದ್ಧಿ ಹೇಳಿ.
  ಹ್ಞಾ! ನನ್ನ ಕರ್ಣಕಠೋರ ಕಂಠ ಆಲಿಸಿರದ ಮಿತ್ರರಿಗೆ ಈ ಅರವತ್ತರವನ ಅದಿರುವ (ಆದರೂ ಕಠೋರವಾದ) ಕಂಠ ಆಲಿಸುವ ದೌರ್ಭಾಗ್ಯ! ಈ ಮಿತ್ರನಿಗೋಸ್ಕರ ಆಲಿಸಿ; ಸಹಿಸಿಕೊಳ್ಳಿ.  

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಸ್ತೆ ಆನಂದರಾಮ ಶಾಸ್ತ್ರಿಯವರೆ. ಆಕಾಶವಾಣಿ ಕಾರ್ಯಕ್ರಮ ಕೇಳುವ ಅವಕಾಶ ಇಲ್ಲದ (ನನ್ನಂತಹ)ವರಿಗೆ ನಿಮ್ಮ ಚಿಂತನ ಹೇಗಾದರೂ ಮಾಡಿ ಕೇಳಿಸಿ :)

ನಮಸ್ಕಾರ ನಾನೂ ದಿನಾಂಕ ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನ ಆರಂಭಿಸಿದ್ದೇನೆ. ಅ ಸಮಯದಲ್ಲಿ ಬಿಡುವು ಮಾಡಿಕೊಳ್ಳಲು ನೀವು (ಕಾರ್ಯ ಕ್ರಮ ನಡೆಸಿಕೊಡ ಬೇಕಾದವರು) ಮಾಡಿಕೊಳ್ಳದಿದ್ದ 'ಪೂರ್ವ ಸಿದ್ಧತೆ'ಗಳನ್ನು ನಾನು ನಿಮ್ಮ ಚಿಂತನವನ್ನು ಕೇಳಲು ಮಾಡಿಕೊಳ್ಳುತ್ತಿದ್ದೇನೆ :) ಹಾಗೂ ಕಾತರದಿಂದ ಕಾಯುತ್ತಿದ್ದೇನೆ. ಅಂಬಿಕಾ

ಹಂಸಾನಂದಿ ಅವರೇ, ನಿಮ್ಮ ’ಸುಭಾಷಿತಾರ್ಥ’ಗಳೆದುರು ನನ್ನ ’ನಿಶ್ಚಿಂತನ’(!) ಅಂಥ ಸತ್ತ್ವಯುತವೇನಲ್ಲ. ಕೇಳದಿದ್ದರೆ ನಿಮಗೇನೂ ನಷ್ಟವಿಲ್ಲ ಬಿಡಿ. ಆ.ಸು.ಹೆಗ್ಡೆ ಅವರೇ, ನನ್ನೀ ಮುಂಗಾರಿನಲ್ಲಿ ಮಳೆಯೇ ಇಲ್ಲ; ಗಾಳಿಯೇ ಎಲ್ಲ! ಆದ್ದರಿಂದ ಹೆಚ್ಚಿನ ನಿರೀಕ್ಷೆ ಬೇಡ. ರಾಜೇಶ್ವರಿ ಅವರೇ, ಕವಿನಾಗರಾಜ ಅವರೇ, ಧನ್ಯವಾದಗಳು. ಅಂಬಿಕಾ ಅವರೇ, ಸದಾ ಪುಸ್ತಕಗಳ ಮಧ್ಯೆ ಇದ್ದು ಹಲವು ವಿಷಯ ತಿಳಿದುಕೊಂಡಿರುವ ನಿಮ್ಮ ಮಸ್ತಕಕ್ಕೆ ನನ್ನ ರೇಡಿಯೋ ಮಾತು ವಿಶೇಷವೆನಿಸದು. ನಿಮ್ಮೆಲ್ಲರ ವಿಶ್ವಾಸಕ್ಕೆ ನಾನು ಋಣಿ.

ಎರಡು ಬಗೆಯ ನಿರೀಕ್ಷೆಗಳಿವೆ... ಮುಂಗಾರು ಮಳೆಯಲ್ಲಿ ನೆನೆಯ ಬಯಸುವವರಿಗೆ ಸ್ವಾಗತಾರ್ಹ... ಮುಂಗಾರು ಮಳೆಯಿಂದಾಗುವ (ಕಡಲಿನ) ಕೊರೆತದಿಂದ ಭಯಪಡುವವರಿಗೆ .... :)

ಮೊದ್ಮಣಿ ಅವರೇ, ಮೆಚ್ಚುಗೆಯ ನುಡಿಗಾಗಿ ಧನ್ಯವಾದ. rennie606 ಪ್ರಸಾದ್ ಅವರೇ, ಇದುವರೆಗೆ ಪ್ರಸಾರಗೊಂಡ ನನ್ನೆಲ್ಲ ’ಚಿಂತನ’ಗಳನ್ನೂ mp3 ಮೂಲಕ ಒದಗಿಸಲು ಪ್ರಯತ್ನಿಸುತ್ತೇನೆ. ಉತ್ತಮ ಸಲಹೆಗಾಗಿ ಮತ್ತು ತುಡಿತಭರಿತ ಅಭಿಮಾನಕ್ಕಾಗಿ ಧನ್ಯವಾದ.

ಆಹಾ 'ಚಿಂತನ'- ಎಷ್ಟೋ ವರ್ಷಗಳ ಹಿಂದೆ ಈ ಕಾರ್ಯಕ್ರಮ ಕೇಳಿದ್ದು . ಮತ್ತೆ ಕೇಳಲು ಅವಕಾಶವಾಗುತ್ತದೆಯೇ? ಶಾಸ್ತ್ರಿಗಳೇ, ನೀವು 'ಚಿಂತನಕ್ಕಾಗಿ' ಚಿಂತಿಸದಿದ್ದರೂ, ಚಿಂತನೆಯ ವಿಷಯಗಳ ಬಗ್ಗೆ ಸಾಕಷ್ಟು 'ಮಂಥನ' ನಡೆಸಿಯೇ ಇರುತ್ತೀರ. ಆ ಮಥನದಿಂದ ಆಕಾಶವಾಣಿಯಲ್ಲಿ ಹರಿದು ಬಂದ ಚಿಂತನಾಮೃತ ಅಂತರ್ಜಾಲದಲ್ಲೂ ಗಂಗೆಯಂತೆ ಧುಮ್ಮಿಕ್ಕಿ ಬರುವುದೆಂದು ಚಾತಕ ಪಕ್ಷಿಯಂತೆ ಕಾದು ಕುಳಿತಿರುವೆವು. ಈಚೆಗೆ ಬೆಂಗಳೂರಿಗೆ ಬಂದರೆ, ಯಾರ ಮನೆಯಲ್ಲೂ ಒಳ್ಳೆಯ ರೇಡಿಯೋ ಇಲ್ಲ. ನಮ್ಮ ಮಾವನವರ transister ರೇಡಿಯೋಗೆ ಸುದ್ದಿ ಬಿತ್ತರಿಸುವ ಬದಲು ತನ್ನ ಕೋಪ, ತಾಪ, ಸಂತಾಪಗಳ ಬಿತ್ತರಿಕೆ ಬಗ್ಗೆಯೇ ಹೆಚ್ಚು ಕಾಳಜಿ. ಬ್ಯಾಟರಿ ವೀಕು, ಸ್ಟೇಷನ್ ದೂರ, receiver ಸರಿ ಇಲ್ಲ, ಒಂದೊಂದಲ್ಲ ದೂರಿನ ಪಟ್ಟಿ. ಅವರು ಕೇಳುವಾಗ ಮಾತ್ರ ಬೆಂಗಳೂರಿನಲ್ಲಿ ಆರ್. ಕೆ. ಶ್ರೀಕಂಠನ್ ಅವರಿಂದ ಹಿಡಿದು ರಾತ್ರಿ ದೆಹಲಿಯಲ್ಲಿ ಹಾಡುವ ನನಗೆ ಗೊತ್ತಿಲ್ಲದ ತಮಿಳು ಸಂಗೀತಕಾರನವರೆಗೂ, ಎಲ್ಲರಿಗೂ ಗಂಟಲು ಶುದ್ಧವಾಗಿಯೇ ಇರತ್ತೆ. ಸಂಸ್ಕೃತ ವಾರ್ತೆ, ಚಿಂತನ, ವಂದೇ ಮಾತರಂ, ಇವೆಲ್ಲ ಕೇಳಿ ಸವಿಯೋಣ ಎಂದರೆ ಆಗಲೇ ಇಲ್ಲ. ಗೊಗ್ಗರಿಸಿ ಮುಗ್ಗರಿಸಿ ಮುಷ್ಕರ ಹೂಡಿತು ಆ transister. ಹೋಗಲಿ ಅಂತ ಇಲ್ಲಿಂದ ರೇಡಿಯೋ ಹೊತ್ತು ತಂದರೆ, ಬೆಂಗಳೂರಿಗೆ ಬಂದ ವಲಸಿಗರಂತೆ ಅದು ಯಾಕೋ ಕನ್ನಡ ಉಲಿಯಲೇ ಇಲ್ಲ :( ನೀವು ಮಾತ್ರ ನಿರಾಸೆಗೊಳಿಸಬೇಡಿ! ಅಭಿನವ ಭಗೀರಥರಾಗಿ!! ಎಂಪಿತ್ರೀ ಝಳಪಿಸಿ!!! ಧನ್ಯವಾದ, ಶಾಮಲ