ಸಕಾಲಿಕವಾಗಿ ದೊರೆತ ‘ಮಾನವೀಯ’ ಹಸ್ತ; ಬದುಕಿದ ‘ಹನುಮಾನ್’!

To prevent automated spam submissions leave this field empty.

ಆಯತಪ್ಪಿ ನೆಲಕ್ಕೊರಗಿದ ಹನುಮಾನ್  ಲಂಗೂರ್ ಗೆ ಚಿಕಿತ್ಸೆ ನೀಡುತ್ತಿರುವ ಡಾ. ಅನಿಲ್  ಪಾಟೀಲ್.

 

ಧಾರವಾಡಕ್ಕೆ ಮಂಗಗಳ ಲಗ್ಗೆ ಹೊಸದೇನಲ್ಲ. ಕಪ್ಪು ಹಾಗೂ ಕೆಂಪು ಮೂತಿಯ ‘ವಾನರರ’ ಸೈನ್ಯ ಕಂಡು ‘ನರರು’ ದಿಕ್ಕಾಪಾಲಾಗಿ ಓಡುವ ಸ್ಥಿತಿ ನಿರ್ಮಾಣಗೊಂಡಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಕಪ್ಪು ಹಾಗೂ ಕೆಂಪು ಮೂತಿಯ ವಾನರರ ಸೈನ್ಯ ಬಹುತೇಕ ಮನೆಗಳಿಗೆಲ್ಲ ನುಗ್ಗಿ ದಾಂಧಲೆ ಎಬ್ಬಿಸಿವೆ. ಮನೆಯ ಆವರಣದಲ್ಲಿರುವ ಚಿಕ್ಕು, ಪೇರಲ, ಹಲಸು ಹಾಗೂ ಹೂವಿನ ಗಿಡಗಳು, ಮಹಡಿಯ ಮೇಲೆ ಒಣಗಿಸಲು ಹಾಕಿರುವ ಒಣ ಖೊಬ್ಬರಿ, ಸಂಡಿಗೆ.. ನರರಿಗೆ ಸೇರಿದ ವಸ್ತುಗಳನ್ನು ಎಗರಿಸಿ ತಮ್ಮ ಹಕ್ಕು ಸಾಧಿಸುತ್ತಿವೆ. ಈ ವಾನರರ ಕೈಗೆ ಸುಲಭದಲ್ಲಿ ಮನೆಯ ಒಳಗಡೆಯ ಹಣ್ಣು, ಗಜ್ಜರಿ, ಸೌತೆಕಾಯಿ, ಬ್ರೆಡ್ ಮುಂತಾದವು ದಕ್ಕಿದರೆ, ಕೆಲ ವಸ್ತುಗಳಿಗೆ ಹೊಂಚು ಹಾಕಿ ಕಾಯುತ್ತ ಕಿಟಕಿ ಇಲ್ಲವೇ ಬಾಗಿಲುಗಳ ಮೂಲಕ ಮನೆಯ ಒಳಗೆ ನುಗ್ಗಿ ಜನರನ್ನು ಹೆದರಿಸಿ ಅಧಿಕಾರದಿಂದ ಹೊತ್ತೊಯ್ದು ಹಂಚಿಕೊಂಡು ತಿನ್ನುತ್ತಿವೆ!

ಇವುಗಳ ಉಪಟಳ ತಾಳಲಾರದೇ ಕೆಲವರು ಮದ್ದು ಹಾಗು ಪಟಾಕಿಗಳನ್ನು ಸಿಡಿಸಿ ಓಡಿಸಲು ವ್ಯರ್ಥ ಪ್ರಯತ್ನ ಕೈಗೊಂಡಿದ್ದಾರೆ. ಸಪ್ಪಳಕ್ಕೆ ಬೆದರಿದ ಮಂಗಗಳು ದಿಕ್ಕಾಪಾಲಾಗಿ ಓಡುವ ಸಂದರ್ಭದಲ್ಲಿ ಹಲವಾರು ಮನೆಗಳ ಹೆಂಚುಗಳು ಜಖಂಗೊಂಡಿದ್ದು, ಅಲ್ಯುಮಿನಿಯಂ ಕೇಬಲ್ ಛತ್ರಿಗಳು, ಹಲವಾರು ಮನೆಗಳ ಟಿ.ವಿ ಆಂಟೇನಾಗಳು, ಮನೆಯ ಮುಂದೆ ನಿಲುಗಡೆ ಮಾಡಲಾಗಿದ್ದ ಕಾರಿನ ಟಾಪ್ ದಾಳಿಗೆ ಸಿಲುಕಿ ಅಪ್ಪಚ್ಚಿಯಾಗಿವೆ. ಎರಡು ಗಂಡು ಮಂಗಗಳ ಮಧ್ಯದ ಅಧಿಕಾರ ಕಿತ್ತಾಟದಲ್ಲಿ ಧಾವಂತಕ್ಕೆ ಬಿದ್ದ ಹೆಣ್ಣು ಮಂಗವೊಂದು ಕಟ್ಟಡದ ಮೇಲಿಂದ ನೆಗೆಯುವಾಗ ಆಯತಪ್ಪಿ ವಿದ್ಯುತ್ ತಂತಿ ಸ್ಪರ್ಷಿಸಿ ಮಾರಣಾಂತಿಕವಾಗಿ ಗಾಯಗೊಂಡು ನೆಲಕ್ಕುರುಳಿತು. ಈ ಘಟನೆ ನಡೆದಿದ್ದು ಎರಡು ದಿನಗಳ ಕೆಳಗೆ. ಹನುಮಾನ್ ಲಂಗೂರ್ ಜಾತಿಗೆ ಸೇರಿದ ಹೆಣ್ಣು ಮಂಗ ಇನ್ನೇನು ಸತ್ತೇ ಹೋಯಿತು ಎನ್ನುವಷ್ಟರಲ್ಲಿ ಗುಟುಕು ಜೀವ ಹಿಡಿದದ್ದು ಸುತ್ತ ನೆರೆದವರ ಗಮನಕ್ಕೆ ಬಂತು. ಕಟ್ಟಡ ಕಾಮಗಾರಿಯಲ್ಲಿ ನಿರತರಾಗಿದ್ದ ಕಾರ್ಮಿಕರು ಬಿಂದಿಗೆ ನೀರಿನೊಂದಿಗೆ ಸ್ಥಳಕ್ಕೆ ಓಡಿದರು. ಮಂಗನ ಪರಿಸ್ಥಿತಿ ನೋಡಿ ಮಮ್ಮಲಮರುಗಿ ‘ಪಾಪ ಹನುಮಂತನಿಗೆ ಹೀಗಾಗಬಾರದಾಗಿತ್ತು..’ಎಂದು ನೊಂದುಕೊಂಡರು. ಅವರಲ್ಲಿ ಒಬ್ಬ ಕರಡಿಗುಡ್ಡದಿಂದ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಅಗ್ರಿಕಲ್ಚರ್ ಕಾಲೇಜಿನ ದನದ ದವಾಖಾನೆಗೆ ಹೊತ್ತೊಯ್ದರೆ ಬದುಕುಳಿಯಬಹುದು ಎಂದು ಸಲಹೆ ನೀಡಿದ.

 

ಹೊತ್ತು ತಂದ ಮಾನವೀಯ ಅಂತ:ಕರಣದ ಜನರ ಸಹಕಾರದಲ್ಲಿ ಲಂಗೂರ್ ಗೆ ಚಿಕಿತ್ಸೆ ನೀಡುತ್ತಿರುವ ಡಾ. ಅನಿಲ್ ಪಾಟೀಲ.

 

 

ಈ ಪುಕ್ಕಟ್ಟೆ ಸಲಹೆ ಅಲ್ಲಿದ್ದ ಕೆಲವರಿಗೆ ಅಮೂಲ್ಯವಾಗಿ ಕಂಡಿತು. ಕೂಡಲೇ ರಿಕ್ಷಾವೊಂದರಲ್ಲಿ ಅದನ್ನು ಎತ್ತಿಹಾಕಿಕೊಂಡು ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯಕ್ಕೆ ಭರದಿಂದ ಹೋದರು. ಆಪತ್ಪಾಂಧವ ಡಾ. ಅನಿಲ್ ಪಾಟೀಲ ಆಸ್ಪತ್ರೆಯಲ್ಲಿಯೇ ಕರ್ತವ್ಯನಿರತರಾಗಿದ್ದರು. ಗಾಯಗೊಂಡ ಹನುಮಾನ್ ಲಂಗೂರ್ ಹೊತ್ತೊಯ್ದವರ ವಿವರಣೆ ಕೇಳಿದ ಡಾ. ಅನಿಲ್ ಮಾನವರ ವೈದ್ಯರಂತೆ ಯಾವುದೇ ಅಪ್ಲಿಕೇಶನ್ ತುಂಬಿಕೊಡಲು ಹೇಳದೆ ಚಿಕಿತ್ಸೆ ನೀಡಲು ಅಣಿಯಾದರು. ಹೊತ್ತು ತಂದವರೇ ಅವರಿಗೆ ಸಹಾಯಕರಾದರು. ಎಲ್ಲರ ಉದ್ದೇಶವೂ ಒಂದೇ ಆಗಿತ್ತು.. ಪಾಪ ಆ ಮೂಕ ಪ್ರಾಣಿ ಬದುಕಬೇಕು. ಡಾ. ಅನಿಲ್ ಕೂಡಲೇ ಬಸವಳಿದಿದ್ದ ಮಂಗಕ್ಕೆ ಗ್ಲುಕೋಸ್ ಸಲೈನ್ ಹಚ್ಚಿ ಬಾಲಕನೋರ್ವನ ಕೈಗೆ ಬಾಟಲಿ ನೀಡಿ, ಟೇಬಲ್ ಮೇಲೇರಿ ಹಿಡಿದು ನಿಲ್ಲುವಂತೆ ಸೂಚಿಸಿದರು. ಉಳಿದ ಮೂವರಿಗೆ ಮಂಗನ ಕೈ-ಕಾಲುಗಳನ್ನು ಹಿಡಿಯಲು ಹೇಳಿದರು. ಪ್ರಯಾಸ ಪಟ್ಟು, ಪ್ರಜ್ಞೆ ತಪ್ಪಿಸಿ ಮುರಿದ ಮುಂಗಾಲಿಗೆ ಬ್ಯಾಂಡೇಜ್ ಹಾಕಿದರು. ಮುರಿದ ಬಾಲಕ್ಕೆ ಪಟ್ಟಿ ಕಟ್ಟಿ ಆರೈಕೆ ಮಾಡಿದರು. ಗಾಯ ನಂಜಾಗದಂತೆ ಕೆಲ ಚುಚ್ಚುಮದ್ದುಗಳನ್ನು ನೀಡಿದರು. ಅರ್ಧ ಬಾಟಲಿ ಗ್ಲುಕೋಸ್ ದೇಹದೊಳಕ್ಕೆ ಹೋಗುತ್ತಿದ್ದಂತೆ ‘ವೈದ್ಯ ನಾರಾಯಣ’ ಡಾ. ಅನಿಲ್ ಪಾಟೀಲ್ ಮಂಗಕ್ಕೆ ಪ್ರಜ್ಞೆ ಮರುಕಳಿಸುವ ಇಂಜೆಕ್ಷನ್ ನೀಡಿದರು. ಮಂಗ ಸುಧಾರಿಸಿಕೊಳ್ಳುವ ಹೊತ್ತಿಗೆ ಆಸ್ಪತ್ರೆಯ ಬೋನಿನೊಳಗೆ ಮಂಗವನ್ನು ಸಾಗಿಸಲಾಗಿತ್ತು.

 

ಇಂದಿಗೆ ಮಂಗ ಆರೋಗ್ಯಪೂರ್ಣವಾಗಿದ್ದು ತಾನೇ ಸ್ವತ: ಆಹಾರ ಸೇವಿಸುವಂತಾಗಿದೆ. ಆದರೆ ಮುರಿದ ಮುಂಗಾಲು ಮಾತ್ರ ಬಾಧಿಸುತ್ತಿದೆ. ವೈದ್ಯರ ಆರೈಕೆ ಮುಂದುವರೆದಿದೆ.  

 

ಶುಷ್ರೂಷೆ ನೀಡಿದ ಮೇಲೆ ಹನುಮಾನ್ ಲಂಗೂರ್ ತುಸು ಚೇತರಿಸಿಕೊಂಡಾಗ.

 

ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಈ ಕಾನನದ ಮಂಗಗಳು ಈ ಭಾಗದ ಸತತ ೪ ವರ್ಷದ ಬರಗಾಲದಿಂದ ತತ್ತರಿಸಿದ್ದು, ಕಾಡುಗಳಲ್ಲಿ ಕುಡಿಯಲು ನೀರು ಹಾಗು ಗಿಡಗಂಟಿಯಲ್ಲಿ ಯಾವುದೇ ಹಣ್ಣು ಸಿಗದ ಕಾರಣ ಹತಾಶಗೊಂಡು ಸಮೀಪದ ದಾಂಡೇಲಿ ಕಾಡಿನಿಂದ ಊರುಗಳಿಗೆ ತಮ್ಮ ಕುಟುಂಬ ಸಮೇತ ವಲಸೆ ಬಂದಿವೆ ಎನ್ನಲಾಗಿದೆ. ಲಂಗೂರ್ ಮಂಗಗಳಲ್ಲಿ ೧೫ ಪ್ರಜಾತಿಗಳಿದ್ದು, ಗಂಡು ಮಂಗ ೫೧ ರಿಂದ ೭೧ ಸೆಂ.ಮೀ ಉದ್ದದ ವರೆಗೆ ಬೆಳೆಯಬಲ್ಲದು. ಅಂದಾಜು ತೂಕ ೧೬ ರಿಂದ ೧೮ ಕಿಲೋ ತೂಗಬಹುದು. ಆದರೆ ಹೆಣ್ಣು ಮಂಗಗಳು ಗಾತ್ರದಲ್ಲಿ ಚಿಕ್ಕವು..೪೦ ರಿಂದ ೬೮ ಸೆಂ.ಮೀ ವರೆಗೆ ಬೆಳೆಯಬಲ್ಲವು; ತೂಕ ೧೧ ಕೆ.ಜಿ. ವರೆಗೆ ಇರುತ್ತದೆ. ಸಾಮಾನ್ಯವಾಗಿ ಚಿಗುರಿದ ಎಲೆ, ಹೂವು, ಹಣ್ಣು ಮತ್ತು ಕಾಯಿಪಲ್ಲೆಗಳ ಮೇಲೆ ಇವು ಉದರಂಭರಣ ಮಾಡುತ್ತವೆ. ಬೇಸಿಗೆ, ಮಳೆ ಹಾಗೂ ಛಳಿಗಾಲದಲ್ಲಿ ಯಥಾ ಲಭ್ಯತೆ ತಥಾ ಆಹಾರ ಹುಡುಕಿ ಬದುಕುತ್ತವೆ. ಕೆಲವೊಮ್ಮೆ ಮಣ್ಣು ಮತ್ತು ಕಲ್ಲನ್ನು ಸಹ ತಿಂದು ಜೀರ್ಣಿಸಿಕೊಂಡ ಉದಾಹರಣೆಗಳಿವೆ!

ನಿದ್ರಿಸುವಾಗ ಮಾತ್ರ ಗಿಡಗಳ ಆಶ್ರಯ ಪಡೆಯುವ ಹನುಮಾನ್ ಲಂಗೂರ್, ಉಳಿದಂತೆ ನೆಲದ ಮೇಲೆಯೇ ಹೆಚ್ಚು ಹೊತ್ತು ಕಳೆಯುತ್ತವೆ. ಸುಮಾರು ೧೧ ರಿಂದ ೬೦ರಷ್ಟು ಮಂಗಗಳ ಟೋಳಿಯಲ್ಲಿ ಇವು ಬದುಕುತ್ತವೆ. ಪ್ರಾಬಲ್ಯ ಸಾಧಿಸಿದ ಗಂಡು ಮಂಗವೊಂದು ಇಡೀ ಟೋಳಿಯನ್ನು ಮುನ್ನಡೆಸುತ್ತದೆ. ಆದರೆ ಬಲಿಷ್ಠ ಗಂಡು ಮಂಗ ಒಂದು ಟೋಳಿಯನ್ನು ಮುನ್ನಡೆಸುವುದು ಕೇವಲ ೧೮ ತಿಂಗಳಿಗೆ ಮಾತ್ರ! ಅಷ್ಟರಲ್ಲಿ ಸಾಧ್ಯವಾದಷ್ಟು ಟೋಳಿಯ ಹೆಣ್ಣು ಮಂಗಗಳಿಗೆ ಅದು ಗರ್ಭದಾನ ಮಾಡುತ್ತದೆ. ನಂತರ ಟೋಳಿ ತೊರೆದು ಮತ್ತೊಂದು ತಂಡ ರಚಿಸಲು ಅಣಿಯಾಗುತ್ತದೆ. ದುರ್ದೈವವೆಂದರೆ ಹೊಸದಾಗಿ ಟೋಳಿಯನ್ನು ಮುನ್ನಡೆಸಲು ಬರುವ ‘ಅಲ್ಫಾ’ ಗಂಡು ಮಂಗ ಆ ಟೋಳಿಯ ಎಲ್ಲ ಮರಿ ಮಂಗಗಳನ್ನು ಬೆನ್ನಟ್ಟಿ, ಕಚ್ಚಿ ಗಾಯಗೊಳಿಸಿ ಕೊಲ್ಲುತ್ತದೆ. ಕಾರಣ ಮರಿಗಳು ತಾಯಿಯನ್ನು ಅಪ್ಪಿಕೊಂಡಿರುವವರೆಗೆ. ಅದು ಮೊಲೆಯೂಡಿಸುತ್ತಿರುವವರೆಗೆ ಅದು ಗಂಡು ಮಂಗದೊಂದಿಗೆ ಮಿಲನಕ್ಕೆ ಅಣಿಯಾಗುವುದಿಲ್ಲ.  

 

ಪ್ರಜ್ಞೆ ಮರುಕಳಿಸುವ ವೇಳೆ ಎತ್ತಿ ಬೋನಿಗೆ ಸಾಗಿಸಲು ನೆರವಾಗುತ್ತಿರುವ ಮಾನವೀಯ ಆಂತ:ಕರಣದ ಜನ.

 

ಸಾಮಾನ್ಯವಾಗಿ ಹೆಣ್ಣು ಲಂಗೂರ್ ಮಂಗಗಳು ೩ ರಿಂದ ೪ ವರ್ಷದ ಅವಧಿಗೆ ಪ್ರೌಢಾವಸ್ಥೆ ತಲುಪುತ್ತವೆ. ಆದರೆ ಮಿಲನಕ್ಕೆ ಅಣಿಯಾಗುವುದು ೬ ರಿಂದ ೭ ವರ್ಷಗಳ ವಯೋಮಾನ ತಲುಪಿದ ಮೇಲೆ. ವರ್ಷದ ೧೯೦ ರಿಂದ ೨೧೦ ದಿನಗಳು ಹೆಣ್ಣು ಮಂಗಗಳು ಗರ್ಭಧರಿಸಲು ಸನ್ನದ್ಧವಾಗಿರುವುದು ವಿಶೇಷ. ಪ್ರತಿ ಸೂಲಿಗೆ ಒಂದು, ಕೆಲವೊಮ್ಮೆ ಎರಡು ಮರಿಗಳಿಗೂ ಜನ್ಮ ನೀಡಿದ ಉದಾಹರಣೆಗಳಿವೆ. ೨೦ ವರ್ಷಗಳ ವರೆಗೆ ಕಾಡಿನಲ್ಲಿ ಇವು ಬದುಕಬಲ್ಲವು. ೨೫ ವರ್ಷಗಳ ವರೆಗೆ ಹನುಮಾನ್ ಲಂಗೂರ್ ಬದುಕಿದ ದಾಖಲೆ ಇದ್ದರೂ, ಹಿಡಿದು ಸಾಕಿದಲ್ಲಿ ೧೫ ರಿಂದ ೨೫ ವರ್ಷಗಳ ವರೆಗೆ ಬದುಕಬಲ್ಲವು.

ಅವುಗಳ ಮೂಲಭೂತ ಅವಶ್ಯಕತೆಗಳನ್ನು ಸಹ ಕಸಿದು, ನೈಸರ್ಗಿಕವಾಗಿ ಲಭ್ಯವಿದ್ದ ಎಲ್ಲ ಸೌಕರ್ಯಗಳನ್ನು ಹಾಳುಗೆಡವಿ, ದೈವತ್ವದ ಕವಚ ತೊಡಿಸಿದ ನಾವು ಈಗ ಆಶ್ರಯ ಬಯಸಿ ನಾಡಿಗೆ ಲಗ್ಗೆ ಇಡುತ್ತಿರುವ ಮೂಕ ಜೀವಿಗೆ ಮಾನವೀಯತೆಯ ನೆಲೆಯಲ್ಲಿ ನಾವೆಲ್ಲ ಸಹಾಯ ಹಸ್ತ ಚಾಚಬೇಕಿದೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮ್ಮ ಧಾರ್ವಾಡ್ ಮಂಗ್ಯಾ ಉಳ್ಸಿದ ಪಾಟೀಲರಿಗೆ ಅನಂತ ಧನ್ಯವಾದ.. ಧಾರ್ವಾಡ್ ಮಂಗ್ಯಾ ಮಾಡೋ ಕೆಲ್ಸಾ ಒಂದ ಎರಡ.. ಒಂದು ಸರ್ತೆ ಸಾಲ್ಯಾಗ ಡಬ್ಬಿ ತಿನ್ಲಿಕ್ಕೆ ಅಂತ ಓಡಿಶ್ಕೊಂಡು ಬಂದು ನನ್ನ ಗೆಳ್ಯಾನ ಅಂಗಿ ಚಡ್ಡಿ ಹರ್ದಿದ್ದ್ವು.. ಮಾವಿನ ಹಣ್ಣು ಹರೀಲಿಕ್ಕೆ ಹೋದ್ರ ಮ್ಯಾಲೆ ಕುತ್ತು ಗುರ್ರ್ ಅಂತ ಅಂತಿದ್ವು.. ಹಂಚ್ ಒಡೆದು,ಸಂಡಿಗಿ ತೂರಾಡಿ ಹೋಗೋವು..ಆವಾಗ ಮಂಗ್ಯಾ ಅಂದ್ರ ಸಿಟ್ಟೂ ಇತ್ತು..ಹೆದರ್ಕೀನೂ ಇತ್ತು.. ಆದರೂ ನಮ್ಮ ಹಣಮಪ್ಪನ ಕಡೆಯವ್ರಲ್ಲಾ..ಅದಕ್ಕ ಸುಮ್ನ ಇರ್ತಿದ್ವಿ.. ಪಾಪ ಯಾರಿಗೂ ಸುಮ್ಮ ಸುಮ್ಮನ ಏನೂ ತ್ರಾಸ್ ಕೊಡ್ತಿರ್ಲಿಲ್ಲ ಅವು.. ನಿಮ್ಮ ಲೇಖನದ್ಲೇ ಇವೂ ಎಲ್ಲಾ ನೆನಪಿಗೆ ಬಂದುವು.. ಧನ್ಯವಾದ ಹರ್ಷ..

ಪಿ.ಯು.ಸಿ ಮುಗಿಸಿದ ನಂತರ ಪಶುವೈದ್ಯನಾಗಬೇಕು ಎಂದು ಭಾರೀ ಆಸೆಯಿತ್ತು ನನಗೆ ಹರ್ಷ ಸರ್, ಆದ್ರೆ ಏನು ಮಾಡುವುದು ನಾನು ಪಿ.ಯು.ಸಿ ಮುಗಿಸಿದ ವರ್ಷ ಬಿ.ವಿ.ಎಸ್ಸಿ.ಗೆ ಕನಿಷ್ಠ 94% ಬೇಕಿತ್ತು ಸಾಮಾನ್ಯವರ್ಗದ ವಿದ್ಯಾರ್ಥಿಗೆ.. ನನಗೆ ಅಷ್ಟು ಅಂಕಗಳು ಬರಲಿಲ್ಲ.. :( ಹೀಗಾಗಿ ನನ್ನ ಆಸೆ ನೆರವೇರಲಿಲ್ಲ :( :( ನಿಮ್ಮ ಲೇಖನಗಳನ್ನು ಓದುತ್ತಾ ಇದ್ರೆ, ಅಯ್ಯೋ ಇನ್ನೊಂದು ಸ್ವಲ್ಪ ಜಾಸ್ತಿ ಅಂಕ ಬಂದಿದ್ದರೆ ನಾನೂ ಈ ರೀತಿ ಪಶುವೈದ್ಯನಾಗಬಹುದಿತ್ತಲ್ಲಾ ಅನ್ನಿಸ್ತಾ ಇದೆ. ಆಪದ್ಭಾಂಧವ ಡಾ. ಅನಿಲ್ ಪಾಟೀಲ್ ಅವರಿಗೂ, ಮೂಕಜೀವಿಯೊಂದನ್ನು ಬದುಕಿಸಿದ ಎಲ್ಲಾ ಸಜ್ಜನರಿಗೂ, ಲೇಖನ ಬರೆದ ನಿಮಗೂ ಅಭಿನಂದನೆಗಳು.. :-)

ನಿಮ್ಮ ಮೃಗಗಳ ಮೇಲಿನ ಪ್ರೀತಿ ತುಂಬಾ ಇಷ್ಟವಾಯಿತುರೀ. ಒಳ್ಳೆ ಕೆಲಸ ಹೀಗೆ ಮುಂದುವರಿಸಿರೀ.. ಸಚಿತ್ರ ಲೇಖನ ಕೊಡಿತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳುರೀ. -ಅಶ್ವಿನಿ