ಅರಬ್ಬರ ನಾಡಿನಲ್ಲಿ....೫.... ದುಬೈನಲ್ಲಿ ಪಾಕಿಸ್ತಾನೀಯರು!

To prevent automated spam submissions leave this field empty.

ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ’ಪಾಕಿಸ್ತಾನ" ಎಂದರೆ ಕಿವಿ ನಿಮಿರುತ್ತದೆ, ಕೆಲವರಿಗೆ ರಕ್ತ ಕುದಿಯುತ್ತದೆ, ರಾಜಕಾರಣಿಗಳ ಭಾಷಣದಲ್ಲಿ ಭಾವಾವೇಶ ಹೆಚ್ಚಾಗುತ್ತದೆ.  ಹಿರಿ, ಕಿರಿ, ಮರಿ ಪುಢಾರಿಗಳೆಲ್ಲ ದೊಡ್ಡ ಹೀರೋಗಳಂತೆ ಫೋಸು ಕೊಡುತ್ತಾ ಆ ದೇಶದ ವಿರುದ್ಧ ಮಾತಾಡುತ್ತಾರೆ.  ಅಕ್ಷರಧಾಮ, ಪಾರ್ಲಿಮೆಂಟ್ ಮೇಲಿನ ದಾಳಿ, ಮುಂಬೈ ಹತ್ಯಾಕಾಂಡ ಮನದಲ್ಲಿ ಸುಳಿದು ಹೋಗುತ್ತವೆ, ಕಾಶ್ಮೀರದಲ್ಲಿ ನಿತ್ಯ ನಡೆಯುತ್ತಿರುವ ನರಮೇಧದಿಂದ ನೊಂದ ಮನ ಅವರಿಗೆ ತಕ್ಕ ಪಾಠ ಕಲಿಸಬೇಕು ಅನ್ನುತ್ತದೆ.  ಆದರೆ "ಭಯೋತ್ಪಾದಕ ರಾಷ್ಟ್ರ" ಎಂದು ಬಿಂಬಿತವಾಗಿರುವ  ಅದೇ ಪಾಕಿಸ್ತಾನದ ಜನತೆ ಸಂಯುಕ್ತ ಅರಬ್ ರಾಷ್ಟ್ರದಂತಹ ವಿದೇಶಿ ಕೆಲಸಗಾರರನ್ನೇ ಹೆಚ್ಚಾಗಿ ಅವಲಂಬಿಸಿರುವ ದೇಶಗಳಲ್ಲಿ ಇತರೆ ರಾಷ್ಟ್ರಗಳ ಜನತೆಯೊಂದಿಗೆ ಹೇಗೆ ಬಾಳುತ್ತಾರೆ ಎನ್ನುವುದು ಕುತೂಹಲಕಾರಿ ವಿಷಯ.

ನಾನಿರುವ ಸಂಯುಕ್ತ ಅರಬ್ ರಾಷ್ಟ್ರದ ಉದ್ಧಗಲಕ್ಕೂ ಸಂಚರಿಸುವ ಕೆಲಸ ನನ್ನದು, ಹಾಗೆ ಕಾರ್ಯನಿಮಿತ್ತ ಸಂಚರಿಸುವಾಗ ಬಗೆಬಗೆಯ ಜನರನ್ನು ಭೇಟಿಯಾಗುವ, ಅವರೊಡನೆ ಮುಕ್ತವಾಗಿ ಬೆರೆಯುವ ಅವಕಾಶ ನನಗೆ ಸಿಕ್ಕಿದೆ.  ಇದರಿಂದ ನನಗೆ ತಿಳಿಯದ ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯವಾಗಿದೆ.  ಸುಮಾರು ೭೫ ವಿವಿಧ ರಾಷ್ಟ್ರಗಳ ಜನತೆ ಇಂದು ಸಂಯುಕ್ತ ಅರಬ್ ರಾಷ್ಟ್ರದ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಬಹು ಮುಖ್ಯ ಕಂಪನಿಗಳಿಗೆಲ್ಲ ಭದ್ರತೆ ಒದಗಿಸುತ್ತಿರುವ ನಮ್ಮ ಸಂಸ್ಥೆಯ ಸುಮಾರು ೪ ಸಾವಿರ ಕೆಲಸಗಾರರಲ್ಲಿ  ೫೦೦ಕ್ಕಿಂತ ಹೆಚ್ಚು ಜನ ಪಾಕಿಸ್ತಾನೀಯರು!  ಶಿಸ್ತು, ಸಂಯಮದ ವಿಚಾರಕ್ಕೆ ಬಂದರೆ ಅಪ್ಪಟ ಸೈನಿಕನಂತೆ, ಕೆಲಸದ ವಿಚಾರಕ್ಕೆ ಬಂದರೆ ಇವರು ಕಷ್ಟ ಸಹಿಷ್ಣುಗಳು, ಎಷ್ಟೇ ಕಷ್ಟವಾದರೂ ತಮಗೆ ವಹಿಸಿದ ಕೆಲಸವನ್ನು ಮಾಡಿ ಮುಗಿಸಿಯೇ ತೀರುತ್ತಾರೆ, ಅರ್ಧಕ್ಕೆ ಎಂದೂ ಕೈ ಬಿಡುವುದಿಲ್ಲ.  ಇವರ ಆಂಗ್ಲ ಭಾಷಾ ಪ್ರಾವೀಣ್ಯತೆ ಎಂಥವರನ್ನೂ ಬೆರಗುಗೊಳಿಸುತ್ತದೆ, ಮದರಸಾಗಳಲ್ಲಿ ಇವರು ಓದಿದ ಅರಬ್ಬಿ ಭಾಷೆಯನ್ನೇ ಇಲ್ಲಿನ ಆಡುಭಾಷೆಯ ಜೊತೆ ಸೇರಿಸಿ ಸಾಕಷ್ಟು ಸರಾಗವಾಗಿ ಅರಬ್ಬಿ ಮಾತಾಡುತ್ತಾರೆ.  

ಇಲ್ಲಿನ ಸುಂದರ ಹವಾನಿಯಂತ್ರಿತ ಟ್ಯಾಕ್ಸಿಗಳ ಚಾಲಕರಲ್ಲಿ ಬಹುತೇಕರು ಪಾಕಿಸ್ತಾನೀಯರು.  ತಮ್ಮ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿರುವವನು ಭಾರತೀಯನೆಂದು ಅರಿವಾದರೆ ಅವರೇ ಮಾತಿಗೆ ಎಳೆಯುತ್ತಾರೆ, ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿಯವರ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಾರೆ.  ಕ್ರಿಕೆಟ್ಟನ್ನು ನಮ್ಮಷ್ಟೇ ಪ್ರೀತಿಸುವ ಇವರಿಗೆ ನಮ್ಮ ಸಚಿನ್ ಆರಾಧ್ಯ ದೈವ!!  ನಮಗೆ ಕಿಶೋರ್ ಕುಮಾರನ ಯಾವ ಹಾಡು ಇಷ್ಟವೆಂದು ಕೇಳಿ ಅದನ್ನೇ ಚಾಲೂ ಮಾಡುತ್ತಾರೆ.  ಜಿಯಾ ಉಲ್ ಹಕ್, ಬೇನಜೀರ್ ಭುಟ್ಟೋ, ಪರ್ವೇಜ್ ಮುಶ್ರಫ್ ಮುಂತಾದ ನಾಯಕರು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಪಾಕಿಸ್ತಾನ ಸೊರಗಿತು, ಭಾರತದ ವಿರೋಧಿಯಾಯಿತು ಎನ್ನುತ್ತಾರೆ, ದೊಡ್ಡಣ್ಣ ಅಮೇರಿಕಾವನ್ನು ಕಡುವಾಗಿ ಟೀಕಿಸುತ್ತಾರೆ.  ತಣ್ನಗಿನ ನೀರು ಅಥವಾ ತಂಪು ಪಾನೀಯ ಕುಡಿಯುವಿರಾ ಎಂದು ಉಪಚರಿಸುತ್ತಾರೆ.  ನಮಗೆ ಗೊತ್ತಿಲ್ಲದ ನಗರದ ಸೊಂದಿ ಗೊಂದಿಗಳಲ್ಲಿರುವ ವಿಳಾಸಕ್ಕೆ ಯಾವುದೇ ತೊಂದರೆಯಿಲ್ಲದೆ ಕ್ಷೇಮವಾಗಿ ತಲುಪಿಸುತ್ತಾರೆ.  ಅವರ ಪ್ರತಿಯೊಂದು ನಡೆ ನುಡಿಯಲ್ಲಿ "ತಾನು ಭಾರತ ವಿರೋಧಿಯಲ್ಲ, ಬದಲಾಗಿ ಸ್ನೇಹಿತ" ಎಂದು ತೋರಿಸುವ ತುಡಿತ ಎದ್ದು ಕಾಣುತ್ತಿರುತ್ತದೆ.  

ಒಬ್ಬ ಸಾಮಾನ್ಯ ಪಾಕಿಸ್ತಾನಿ ಇಲ್ಲಿನ ಭಾರತೀಯರ ಜೊತೆ ಸ್ನೇಹಿತನಾಗಿರಲು ಅನವರತ ಯತ್ನಿಸುತ್ತಾನೆ.  ನಮ್ಮಲ್ಲಿ ಕೆಲಸ ಮಾಡುವ ಅದೆಷ್ಟೋ ಮಂದಿ ರಜಕ್ಕೆಂದು ಊರಿಗೆ ಹೋಗಿ ಬರುವಾಗ ಅಲ್ಲಿಂದ ಏನಾದರೊಂದನ್ನು ತಂದು ಎಲ್ಲರೊಡನೆ ಹಂಚಿಕೊಂಡು ತಿನ್ನುತ್ತಾರೆ.  ಸಾಕಷ್ಟು ಬಾರಿ ಪಾಕಿಸ್ತಾನದ ಸಿಹಿ ತಿಂಡಿಗಳನ್ನು ತಿನ್ನುವ ಅವಕಾಶ ನನಗೂ ಸಿಕ್ಕಿದೆ.  ಒಬ್ಬ ಪಾಕಿಸ್ತಾನಿ ಹುಡುಗನಂತೂ ಎಷ್ಟು ಬೇಡವೆಂದರೂ ಬಿಡದೆ ಲಾಹೋರಿನಿಂದ ನನಗಾಗಿ ಒಂದು ಜೊತೆ ಶೂಗಳನ್ನು ಕೊಂಡು ತಂದು ಅವನ್ನು ಧರಿಸುವವರೆಗೂ ಬಿಡಲಿಲ್ಲ!  ಇಷ್ಟೆಲ್ಲ ಪ್ರೀತಿ, ಸ್ನೇಹ ತೋರುವ ಇವರ ಮುಂದೆ ಭಯೋತ್ಪಾದನೆಯ ವಿಚಾರ ಬಂದಾಗ ವಿಷಣ್ಣವದನರಾಗುತ್ತಾರೆ, ತಲೆ ತಗ್ಗಿಸಿ ತಪ್ಪಿತಸ್ಥ ಭಾವನೆಯಿಂದ ನಿಲ್ಲುತ್ತಾರೆ.  ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಸಾರ್, ಇದೆಲ್ಲ ನಮ್ಮ ಆಡಳಿತಗಾರರು ಮಾಡುತ್ತಿರುವ ಷಡ್ಯಂತ್ರ ಅನ್ನುತ್ತಾ ತಮ್ಮ ಅಸಹಾಯಕತೆಯನ್ನು ತೋರುತ್ತಾರೆ.  ದುಬೈನ ಕನ್ನಡ ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ಒಂದು ಆಶ್ಚರ್ಯಕರ ಸಂಗತಿ ನೋಡಲು ಸಿಕ್ಕಿತು, ಅದೇನೆಂದರೆ ಜೆ.ಎಸ್.ಎಸ್.ಶಾಲೆಯ ಶಿಕ್ಷಕರಾದ ಈರಣ್ಣ ಮೂಲಿಮನಿಯವರು ರಚಿಸಿದ ಕನ್ನಡ ನಾಡ ಗೀತೆಗಳು ಹಾಗೂ ಇತರ ಕನ್ನಡ ಗೀತೆಗಳಿಗೆ ತಬಲಾದ ಜೊತೆ ಹಾರ್ಮೋನಿಯಂ ಸಾಥ್ ನೀಡಿದವನು ಒಬ್ಬ ಪಾಕಿಸ್ತಾನಿ ಯುವಕ.  ಕನ್ನಡ ಬರದ ಪಾಕಿಸ್ತಾನಿಯಾದರೂ ಪ್ರತಿ ದಿನ ಇವರ ಜೊತೆಯಲ್ಲಿ ತಾಲೀಮು ನಡೆಸಿ ಕನ್ನಡ ಗೀತೆಗಳಿಗೆ ಹಾರ್ಮೋನಿಯಂ ನುಡಿಸಿದ್ದ ಅವನನ್ನು ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ತುಂಬು ಹೃದಯದಿಂದ ಶ್ಲಾಘಿಸಿದ್ದರು.

ಸದಾ ಸ್ನೇಹಿತರಾಗಿರಲು ಬಯಸುವ ಇವರದು ಒಂದು ರೀತಿಯ ಕಥೆಯಾದರೆ ಮತ್ತೊಂದು ರೀತಿಯ ಜನರೂ ಇಲ್ಲಿದ್ದಾರೆ.  ಕರಾಚಿ, ಲಾಹೋರ್, ಇಸ್ಲಾಮಾಬಾದ್ ಹಾಗೂ ಪಂಜಾಬ್ ಪ್ರಾಂತಗಳ ಜನರು ಸ್ನೇಹಮಯಿಗಳು ಹಾಗೂ ಭಾರತೀಯರ ಜೊತೆ ಸ್ನೇಹ ಬೆಳೆಸಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಬಯಸುತ್ತಾರೆ.  ಆದರೆ ಉತ್ತರ ಪಾಕಿಸ್ತಾನದ ವಾಜಿರಿಸ್ತಾನ ಹಾಗೂ ಆಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಠಾಣ್ ಹಾಗೂ ಪಶ್ತೂನ್ ಪಂಗಡಗಳ ಜನರು ಸ್ವಲ್ಪ ಒರಟರಂತೆ ವರ್ತಿಸುತ್ತಾರೆ, ಇವರು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ,  ಉದ್ಧನೆಯ ಗಡ್ಡ ಬಿಟ್ಟು ತೀಕ್ಷ್ಣವಾದ ನೋಟದಿಂದ ಎಲ್ಲರನ್ನೂ ಕಣ್ಣಲ್ಲೇ ತಿವಿಯುವಂತೆ ನೋಡುವ ಇವರು ತಮ್ಮ ವಿಚಿತ್ರ ನಡವಳಿಕೆಯಿಂದಲೇ ನಿಜಕ್ಕೂ ಆತಂಕವಾದಿಗಳೇ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತಾರೆ.  ಇವರ ವಿದ್ಯಾಭ್ಯಾಸದ ಮಟ್ಟ ತೀರಾ ಕಡಿಮೆಯೇ ಅಥವಾ ಇಲ್ಲವೇ ಇಲ್ಲ ಅನ್ನಬಹುದು, ಭಾರ ಎತ್ತುವ, ಬಹು ದೊಡ್ಡ ಟ್ರಕ್ ಮತ್ತಿತರ ವಾಹನಗಳನ್ನು ಓಡಿಸುವ ಇವರು ಅಶಿಸ್ತು, ಅಡ್ಡಾದಿಡ್ಡಿ ಚಾಲನೆಗೆ ಹೆಸರಾಗಿದ್ದಾರೆ,  ಇಲ್ಲಿನ ರಸ್ತೆಗಳಲ್ಲಿ ನಡೆಯುವ ಬಹುತೇಕ ಮಾರಣಾಂತಿಕ ಅಪಘಾತಗಳಲ್ಲಿ ಇವರ ಪಾತ್ರ ಬಹು ದೊಡ್ಡದು.  ಆದರೆ ತಾವಾಗಿ ಯಾರಿಗೂ ತೊಂದರೆ ಕೊಡುವುದಿಲ್ಲ.

ಒಬ್ಬ ಸಾಮಾನ್ಯ ಪಾಕಿಸ್ತಾನಿ ನಾಗರಿಕನಿಗೆ ಭಾರತದೊಡನೆ ಯಾವುದೇ ಗೊಡವೆ ಬೇಕಿಲ್ಲ, ಬದಲಾಗಿ ಅವರು ಭಾರತೀಯರ ಜೊತೆ ಸ್ನೇಹವನ್ನು, ಉತ್ತಮ ಬಾಂಧವ್ಯವನ್ನು ಬಯಸುತ್ತಾರೆ.  ಇದನ್ನು ಅಲ್ಲಿನ ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕಿದೆ, ಕುಮ್ಮಕ್ಕು ಕೊಟ್ಟು ತೆರೆಮರೆಯಲ್ಲಿದ್ದುಕೊಂಡೆ ಆಟ ಆಡಿಸುತ್ತಿರುವ ದೊಡ್ಡಣ್ಣ ಅಮೇರಿಕಾ ತನ್ನ ಕುಟಿಲ ಕಾರ್ಯತಂತ್ರವನ್ನು ನಿಲ್ಲಿಸಬೇಕಿದೆ.  ಭಾರತ ಉಪಖಂಡದಲ್ಲಿ ಶಾಂತಿ ನೆಲೆಸುವಲ್ಲಿ ಇದು ಅತ್ಯಂತ ಜರೂರಾಗಿ ಆಗಬೇಕಿದೆ.  ಆದರೆ ಒಬಾಮಾಗೆ ಇದು ಅರ್ಥವಾಗುವುದೇ?  ಇದು ಯಕ್ಷ ಪ್ರಶ್ನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಂಜಣ್ಣ ನವರೇ ಚೆನ್ನಾಗಿದೆ ಮೂಡಿ ಬರುತ್ತಿದೆ ಲೇಖನ ಸರಣಿ.. ಭದ್ರತೆಗೆ ಪಾಕಿಸ್ತಾನಿಯರನ್ನು ನೇಮಕ ಮಾಡಿದ್ದಾರೆ ಎಂದರೆ ದುಬೈ ಜನತೆಯ ನಂಬಿಕೆ ಮೆಚ್ಚಲೇ ಬೇಕು !! ಕಾರಣ ಏನೇ ಇರಲಿ ,ಪಾಕಿ ಗಳು ತಾವು ಎಷ್ಟೇ ಒಳ್ಳೆಯವರು ಅಂತ ತೋರಿಸಿಕೊಟ್ರೂ.. ದ್ವೇಷ ಇಲ್ಲದಿದ್ರೂ ಅವರ ಬಗ್ಗೆ ಮನದಲ್ಲಿ ಒಂದು ಘಟ್ಟಿಯಾದ ಅನುಮಾನ,ಅಳಕು ಇದ್ದೆ ಇರುತ್ತದೆ.ಅಷ್ಟು ಘಾಸಿ ಮಾಡಿ ಬಿಟ್ಟಿದ್ದಾರೆ. ಸರ್ಪ: ಶ್ಯಾಮಿತಿ ಮಂತ್ರೆನ ದುರ್ಜನೋ ನೈವ ಶ್ಯಾಮತಿ (ಬರೆಯುವುದರಲ್ಲಿ ತಪ್ಪಿದ್ದರೆ ತಿದ್ದಿ) ಸರ್ಪವನ್ನು ಮಂತ್ರಗಳಿಂದ ಶಾಂತವಾಗಿಸಬಹುದು ಇಲ್ಲ ಅದರ ವಿಷ ತೆಗೆಯಬಹುದು,,ಆದರೆ ದುರ್ಜನರು ಎಂದಿಗೂ ದುರ್ಜನರೆ.ಅವರನ್ನು ನಂಬಲಸಾಧ್ಯ. ಇದು ಪಾಕಿಗಳ ವಿಷಯಕ್ಕೆ ಸತ್ಯವೇ.. ಕನ್ನಡ ಹಾಡುಗಳಿಗೆ ಹಾರ್ಮೋನಿಯಂ ಸಾಥ್ ಕೊಟ್ಟ ಪಾಕಿ ನಾಗರಿಕನ ಬಗ್ಗೆ ಓದಿ ಖುಷಿಯಾಯಿತು..

ಮೆಚ್ಚುಗೆಗೆ ವಂದನೆಗಳು ಶ್ರೀಕಾಂತರೆ, ದುಬೈನಲ್ಲಿ ಪಾಕಿಸ್ತಾನಿಗಳನ್ನು ಮೆಚ್ಚಲು ಅವರ ಶಿಸ್ತು, ಕಾರ್ಯತತ್ಪರತೆ, ಭಾಷಾ ಕೌಶಲ್ಯ ಮತ್ತು ಅವರು ಮುಸ್ಲಿಮರೆಂಬ ಕಾರಣಗಳಿವೆ. ಅಲ್ಲಿನ ಆತಂಕವಾದಿಗಳು ನಮಗೆ ಘಾಸಿ ಮಾಡಿದ್ದಾರೆ, ಆದರೆ ಸಾಮಾನ್ಯ ನಾಗರಿಕರಲ್ಲ ಎನ್ನುವುದು ದುಬೈನಲ್ಲಿನ ಪಾಕಿಸ್ತಾನೀಯರನ್ನು ನೋಡಿದರೆ ವೇದ್ಯವಾಗುತ್ತದೆ.

ಮಂಜುರವರೇ, ಉತ್ತಮವಾದ ಲೇಖನಗಳನ್ನು ಬರೆಯುವುದನ್ನು ಮುಂದುವರೆಸಿದ್ದೀರಾ, ಅಭಿನಂದನೆಗಳು!! ಈ ಹಿಂದೆ ಭಾರತೀಯ ಕ್ರಿಕೆಟ್ ತಂಡ ಪಾಕ್ ಪ್ರವಾಸ ಮಾಡುತ್ತಿದ್ದಾಗ ನಮ್ಮ ಕ್ರೀಡಾ ವರದಿಗಾರರು ಸ್ಪೋರ್ಟ್ಸ್ ಸ್ಟಾರ್ ಮುಂತಾದ ಆಂಗ್ಲ ಮಾಧ್ಯಮಗಳಲ್ಲಿ ವರದಿ ಮಾಡುತ್ತಿದ್ದುದನ್ನು ಓದುತ್ತಿದ್ದೆ. ಇವರೆಲ್ಲರ ಅನುಭವವೂ ನಿಮ್ಮ ಅನುಭವಗಳಂತೆಯೇ ಸಿಹಿಯಾದವುಗಳೇ ಆಗಿರುತ್ತಿದ್ದವು. ಭಾರತೀಯರಂತೆಯೇ ಅವರಿಗೂ ಕ್ರಿಕೆಟ್, ಬಾಲಿವುಡ್, ಹಾಗೂ ರಾಜಕೀಯದ ಹುಚ್ಚು. ಎಲ್ಲರಿಗಿಂತಲೂ ಲಾಹೋರ್ ನಗರದವರು ಹೆಚ್ಚು ಸಹೃದಯಿಗಳು ಎಂಬುದಾಗಿ ಓದಿರುವ ನೆನಪು.

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು. ಲಾಹೋರ್ ಒಂದೇ ಅಲ್ಲ, ಕರಾಚಿ, ಇಸ್ಲಾಮಾಬಾದ್, ಪಂಜಾಬ್ ಪ್ರಾಂತದ ಹೈದರಾಬಾದ್ ಕಡೆಯವರೂ ಸಹ ವಿದ್ಯಾವಂತರೂ, ಸಹೃದಯರೂ, ಸ್ನೇಹಶೀಲರೂ, ಭಾರತೀಯರ ಬಗ್ಗೆ ಗೌರವಾದರಗಳನ್ನುಳ್ಳವರೂ ಆಗಿದ್ದಾರೆಂಬುದು ದುಬೈನಲ್ಲಿ ನನ್ನ ಅನುಭವಕ್ಕೆ ಬಂದ ವಿಚಾರ.

ತುಂಬಾ ಒಳ್ಳೆ ಲೇಖನ , ತಮ್ಮ ಅನುಭವದಲ್ಲಿ ಕಂಡ ಒಳ್ಳೆ ಪಾಕಿಸ್ತಾನೀಯರನ್ನು ಪರಿಚಯ ಮಾಡಿದ್ದಿಕೆ. ಅವರು ಆ ರೀತಿ ಇರಲು ಕೆಲವು ಕಾರಣಗಳು ಇವೆಯಂದು ನನ್ನ ಭಾವನೆ, ನನ್ನ ತಿಳುವಳಿಕೆ ತಪ್ಪಿದ್ದರೆ ಕ್ಷಮಿಸಿ . - ಹೊರದೇಶದಲ್ಲಿ ಭಾರತದ ಬಗ್ಗೆ ಅವರು ಪ್ರಚೋದನಕಾರಿ ಭಾಷಣ ಕೇಳಲಾರರು - ಅವರನ್ನು brainwash ಮಾಡುವ ಮುಲ್ಲಾಗಳು ಆದೇಶದಲ್ಲಿ ಇಲ್ಲ. - ಮುಖ್ಯ ವಾಗಿ ಅ ದೇಶ ಗಳಲ್ಲಿ "ಶರಿಯಾ" ಕಾನೂನು ಇದೆ , ಯಾರು ಬಲ ಬಿಚ್ಚುವುದಿಲ್ಲ . ಗುಣಕ್ಕೆ ಮತ್ಸರ ವಿಲ್ಲ , ಆದರು .......ನೀವೇನೇ ಹೇಳಿ ಸರ್ ಅ ಬಡ್ಡಿಮಗನ್ ದೇಶ ಇರೋವರ್ಗೂ ನಮ್ಮ ಬೆಳೆವಣಿಗೆ ತೊಂದರೆ. ಎಸ್ಟೋ ಪಾಕಿಸ್ತಾನೀಯರು ನಮ್ಮ ದೇಶದ ಹೆಸರಲ್ಲಿ ಹೋಟೆಲ್ , ದಿನಿಸಿ ಅಂಗಡಿ ಇತ್ತುಕೊಂಡಿರ್ತಾರೆ UK , US ನಲ್ಲಿ , ನಾನೇ ಎಸ್ಟೋ ಸಲಿ ಯಾಮಾರಿ ಸಾಮನ್ ತೊಗೊಳದೆ ಬಂದಿದೀನಿ . ಒಟ್ಟಿನಲ್ಲಿ ನಿಮ್ಮ ಜ್ಯೋತೆ ಅವರು ಚನ್ನಗಿದ್ರೆ ಅಷ್ಟು ಸಾಕು :).

ಭಾಷಾಪ್ರಿಯರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ಈ ಪಾಕಿಸ್ತಾನೀಯರು ದುಬೈನಲ್ಲಿ ನನ್ನೊಂದಿಗೆ ಮಾತ್ರವಲ್ಲ, ಇತರರೊಂದಿಗೂ ಸ್ನೇಹದಿಂದಿರುತ್ತಾರೆ. ನೀವು ಹೇಳಿದಂತೆ ಕಾನೂನಿನ ಭಯವೂ ಇರಬಹುದು. ಅಲ್ಲದೆ ಅಲ್ಲಿ ಬ್ರೈನ್ ವಾಷ್ ಮಾಡುವ ಮುಲ್ಲಾಗಳೂ ಇಲ್ಲ ಅನ್ನುವುದೂ ಸರಿ. ಆದರೆ ನನಗೆ ಅನ್ನಿಸಿದ್ದು ಒಬ್ಬ ಸಾಮಾನ್ಯ ನಾಗರಿಕನಿಗೆ ಭಾರತದ ವಿರುದ್ಧ ಯಾವ ಮತ್ಸರವೂ ಇಲ್ಲ, ನಡೆಯುತ್ತಿರುವ ನಾಟಕವೆಲ್ಲ "ದೊಡ್ಡಣ್ಣ ಅಮೆರಿಕಾ ಕೃಪಾ ಪೋಷಿತ ನಾಟಕ ಮಂಡಳಿ"ಯಿಂದ. ೧೯೪೭ಕ್ಕಿಂತ ಮುಂಚೆ ಆ ದೇಶ ಎಲ್ಲಿತ್ತು, ಅಖಂಡ ಭಾರತ ಮಾತ್ರವೇ ಇತ್ತಲ್ಲವೆ?

ಮಂಜು ಅವರೇ ತುಂಬಾ ಚೆನ್ನಾಗಿ ಮೂಡಿ ಬರುತ್ತಲಿದೆ. ನೀವಂದುದು ನಿಜ ಸಾಮಾನ್ಯರಿಗೆ ನಾಳೆಯ ಚಿಂತೆಯೇ ಪ್ರಬಲವಾಗಿರುವಾಗ ಬೇರೆ ಚಿಂತೆ ಏಕಿರುತ್ತೆ ಹೇಳಿ. ಅದೇನಿದ್ದರೂ ತಿಂದುಂಡು ದೇಶ ಹಾಳು ಮಾಡುವ ದ್ರೋಹಿಗಳಿಗೇ. ಧನ್ಯವಾದಗಳು

ಹೌದು ಗೋಪಿನಾಥರೆ, ಸಾಮಾನ್ಯ ನಾಗರಿಕರಿಗೆ ತಮ್ಮ ತುತ್ತಿನ ಚೀಲ ತುಂಬುವುದೇ ದೊಡ್ಡ ಚಿಂತೆಯಾಗಿರುವಾಗ ಇನ್ನು ಭಾರತೀಯರೊಡನೆ ಯುದ್ಧಕ್ಕೆಲ್ಲಿ ಸಮಯವಿದೆ?<<<<ಅದೇನಿದ್ದರೂ ತಿಂದುಂಡು ದೇಶ ಹಾಳು ಮಾಡುವ ದ್ರೋಹಿಗಳಿಗೇ>>>>ಸತ್ಯವಾದ ಮಾತು.

ಅರಬ್ ದೇಶದ ನಿಮ್ಮ ಬದುಕಿನ ಅನುಭವಗಳು ಚೆನ್ನಾಗಿ ಮೂಡಿ ಬರುತ್ತಿವೆ. ಪಾಕಿಸ್ತಾನದ ಜನ ಭಾರತದ ಜನರೊಂದಿಗೆ ಅಷ್ಟು ಸ್ನೇಹ ಭಾವದಿಂದ ಇರುವುದು ನಿಜಕ್ಕೂ ಸಂತೋಷ ಪಡುವ ವಿಷಯ.

ಮಂಜುನಾಥರೆ ಪಾಕಿಸ್ತಾನದವರು ಎಂದರೆ ಎಲ್ಲರೂ ಕೆಟ್ಟವರು ಎನ್ನುವುದು ನನ್ನ ಭಾವನೆಯಾಗಿತ್ತು. ಆದರೆ ನಿಮ್ಮ ಲೇಖನ ಸುಳ್ಳು ಎಂದು ಪ್ರತಿಪಾದಿಸಿತು. ಧನ್ಯವಾದಗಳು. ಉತ್ತಮ ಲೇಖನ

ಲೇಖನ ಬಹಳ ಚನ್ನಾಗಿದೆ.ನಿಮ್ಮ ಬರವಣಿಗೆ ಹೀಗೆ ಸಾಗುತ್ತಿರಲಿ ಹಾಗು ನಮಗೆ ಅರಬ್ಬನಾಡಿನ ಕುತೂಹಲಕರ ಮಾಹಿತಿಗಳು ಸಿಗುತ್ತಿರಲಿ.

ಮೆಚ್ಚುಗೆಯ ನುಡಿಗಳಿಗೆ ವಂದನೆಗಳು ನಾಡಿಗರೆ, ಪಾಕಿಸ್ತಾನೀಯರೆಲ್ಲರೂ ಕೆಟ್ಟವರಲ್ಲ, ಅವರಲ್ಲಿಯೂ ಉದಾತ್ತ ವ್ಯಕ್ತಿತ್ವವುಳ್ಳವರಿದ್ದಾರೆಂಬುದು ದುಬೈಗೆ ಹೋದ ನಂತರ ನನ್ನ ಅನುಭವಕ್ಕೆ ಬಂದಿದೆ.

ಮಂಜಣ್ಣ.. ನಾನು ಏನು ಬರೆಯಬೇಕು ಎಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಿದ್ದೇನೋ ಅದೆಲ್ಲಾ ನೀವು ಬರೆದು ಮುಗಿಸಿಯಾಗಿದೆ. ಚೆನ್ನಾಗಿ ಬರೆದಿದ್ದೀರಿ. ಮಂಜುನಾಥ್ ಕುಣಿಗಲ್ ದುಬಾಯಿ