ಅಂಚೆ ಪುರಾಣ

To prevent automated spam submissions leave this field empty.

ಅಂಚೆ ಪುರಾಣ - 1


ಮೊದಲಿಗೆ.. . .


     ನಾನು ಅಂಚೆ ಕಛೇರಿಯಲ್ಲಿ ಒಂದು ವರ್ಷ ಮತ್ತು ಕಂದಾಯ ಇಲಾಖೆಯಲ್ಲಿ 36 ವರ್ಷಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು ಇನ್ನೂ ಎರಡು ವರ್ಷಗಳ ಸೇವಾವದಿ ಇರುವಂತೆಯೇ ಸ್ವ ಇಚ್ಛಾ ನಿವೃತ್ತಿ ಪಡೆದುಕೊಂಡೆ. ಜೈಲಿನಲ್ಲಿ ಖೈದಿಯಾಗಿಯೂ ಇದ್ದ ನಾನು (ಯಾವುದೇ ಭ್ರಷ್ಟಾಚಾರ ಅಥವಾ ಸಮಾಜ ದ್ರೋಹಿ ಕೆಲಸ ಮಾಡಿ ಅಲ್ಲ, ಕಾಲಕ್ರಮದಲ್ಲಿ ವಿವರಿಸುವೆ) ಜೈಲಿನ ಸೂಪರಿಂಟೆಂಡೆಂಟ್ ಆಗಿಯೂ, ತಾಲ್ಲೂಕಿನ ಮ್ಯಾಜಿಸ್ತ್ರೇಟ್ ಆಗಿಯೂ ಕೆಲಸ ಮಾಡುವ ಅವಕಾಶ ದೇವರು ಕರುಣಿಸಿದ್ದು ನನ್ನ ಸೌಭಾಗ್ಯ ಮತ್ತು ವಿಶೇಷವೇ ಸರಿ. ಸೇವಾಕಾಲದಲ್ಲಿ ನನ್ನ ಮನಸ್ಸಿನ ಭಿತ್ತಿಯಲ್ಲಿ ಉಳಿದುಕೊಂಡಿರುವ ಕೆಲವು ನೆನಪುಗಳು ಮತ್ತು ಘಟನೆಗಳನ್ನು ಸಂಪದ ಮಿತ್ರರೊಂದಿಗೆ ಹಂಚಿಕೊಳ್ಳುವ ಇಚ್ಛೆಯಿಂದ ಈ ಬರಹ ಪ್ರಾರಂಭಿಸಿರುವೆ. ಸ್ವಾಗತಿಸಲು ನಮ್ರ ವಿನಂತಿ. ಅಂಚೆ ಪುರಾಣದೊಂದಿಗೆ ಅನುಭವ ಕಥನ ಪ್ರಾರಂಭಿಸುವೆ.


 


'ನಾನು ದೊಡ್ಡವನಾದ ಮೇಲೆ ಪೋಸ್ಟ್ ಕಾರ್ಡು ಮಾರುತ್ತೇನೆ'


 


     ಇದು ನಾನು ಸಣ್ಣವನಿದ್ದಾಗ ಯಾರಾದರೂ 'ದೊಡ್ಡವನಾದ ಮೇಲೆ ಏನು ಮಾಡುತ್ತೀಯಾ?' ಎಂದು ಕೇಳಿದರೆ ನಾನು ಕೊಡುತ್ತಿದ್ದ ಉತ್ತರ. ಆಗೆಲ್ಲಾ ಪೋಸ್ಟ್ ಕಾರ್ಡುಗಳು ಬಹಳವಾಗಿ ಬಳಕೆಯಾಗುತ್ತಿದ್ದ ಕಾಲ. ಈಗಿನಂತೆ ಫೋನು ಸಾಮಾನ್ಯ ಬಳಕೆಯಲ್ಲಿರಲಿಲ್ಲ. ಅಂಚೆ ಕಛೇರಿಗಳಲ್ಲಿ ಫೋನು ಇದ್ದರೂ ದೂರದೂರಿಗೆ ಫೋನು ಮಾಡಿ ಮಾತನಾಡಲು ಬುಕ್ ಮಾಡಿ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಕಾಯಬೇಕಿತ್ತು. ಯಾರಿಗೆ ಫೋನು ಮಾಡಲಾಗುತ್ತಿತ್ತೋ ಅವರನ್ನು ಆ ಊರಿನ ಅಂಚೆ ನೌಕರ ಹೋಗಿ ಕರೆದುಕೊಂಡು ಬಂದ ನಂತರವಷ್ಟೇ ಅಲ್ಲಿಂದ ಬರುವ ಕರೆಗಾಗಿ ಕಾಯುತ್ತಾ ಕುಳಿತುಕೊಳ್ಳಬೇಕಿತ್ತು. ಆಗೆಲ್ಲಾ ಎರಡು ಪೈಸೆಗೆ ಒಂದು ಕಾರ್ಡು ಸಿಗುತ್ತಿತ್ತು. ಪ್ರತಿ ಮನೆಯಲ್ಲಿ ಕಾರ್ಡುಗಳ ಕಟ್ಟೇ ಇರುತ್ತಿತ್ತು. ಮುಗಿದಂತೆಲ್ಲಾ 20-30 ಕಾರ್ಡುಗಳನ್ನು ಒಟ್ಟಿಗೇ ತರಿಸಿಡುತ್ತಿದ್ದರು. ಕಾರ್ಡುಗಳನ್ನು ತರಲು ನಾನು ಅಂಚೆ ಕಛೇರಿಗೆ ಹೋದಾಗಲೆಲ್ಲಾ 'ಕಾರ್ಡು ಮಾರಿದರೆ ತುಂಬಾ ಹಣ ಬರುತ್ತೆ. ಅದರಿಂದ ಒಂದು ಚೀಲದ ತುಂಬಾ ಪೆಪ್ಪರಮೆಂಟು, ಕಂಬರಕಟ್ಟು (ಕೊಬ್ಬರಿ, ಬೆಲ್ಲ ಉಪಯೋಗಿಸಿ ಮಾಡಲಾಗುತ್ತಿದ್ದ ಅಂಟಿನ ಉಂಡೆಗಳು) ಚಾಕೊಲೇಟುಗಳನ್ನು ತಂದಿಟ್ಟುಕೊಳ್ಳಬಹುದು' ಎಂದೆಲ್ಲಾ ಅಂದುಕೊಳ್ಳುತ್ತಿದ್ದೆ. ಮನೆಗೆ ಬಂದ ಕಾರ್ಡುಗಳನ್ನು ಪೋಣಿಸಿ ಒಂದು ತೊಲೆಗೆ ನೇತು ಹಾಕಿ ಇಡುತ್ತಿದ್ದರು. ಎಷ್ಟೋ ವರ್ಷಗಳ ವರೆಗೆ ಕಾರ್ಡುಗಳನ್ನು ಇಟ್ಟಿರುತ್ತಿದ್ದರು. ನಾನು ಹುಟ್ಟಿದ್ದ ಸಂದರ್ಭದಲ್ಲಿ ಮಗುವಿಗೆ 'ನಾಗರಾಜ ಎಂದು ಹೆಸರಿಡಿ' ಎಂದು ನನ್ನ ತಂದೆಗೆ ನನ್ನ ತಾಯಿಯ ಅಣ್ಣ ದಿ. ಶ್ರೀನಿವಾಸಮೂರ್ತಿಯವರು ಬರೆದಿದ್ದ ಕಾಗದವನ್ನು ನನಗೆ ಓದಲು, ಬರೆಯಲು ಬಂದ ನಂತರ ನಾನೇ ಓದಿದ್ದ ನೆನಪು ನನಗೆ ಈಗಲೂ ಇದೆ. ದೊಡ್ಡವನಾದ ಮೇಲೆ ನಾನು ಪೋಸ್ಟ್ ಕಾರ್ಡು ಮಾರದಿದ್ದರೂ ಹಾಸನದ ಅಂಚೆ ಕಛೇರಿಯಲ್ಲಿ ಒಂದು ವರ್ಷ ಗುಮಾಸ್ತನಾಗಿ ಕೆಲಸ ಮಾಡುವುದರೊಂದಿಗೆ ನನ್ನ ವೃತ್ತಿಜೀವನ ಪ್ರಾರಂಭವಾಯಿತು!


 


     ನಾನು ಹಾಸನದ ಕಾಲೇಜಿನಲ್ಲಿ 1971ರಲ್ಲಿ ಅಂತಿಮ ಬಿ.ಎಸ್.ಸಿ.ಯಲ್ಲಿ ಓದುತ್ತಿದ್ದಾಗ ಪತ್ರಿಕೆಯಲ್ಲಿ ಬಂದ ಪ್ರಕಟಣೆ ನೋಡಿ ಅಂಚೆ ಗುಮಾಸ್ತರ ಹುದ್ದೆಗೆ ಅರ್ಜಿ ಹಾಕಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ತೆಗೆದ ಅಂಕಗಳನ್ನು ಆಧರಿಸಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು.ಪಿ.ಯು.ಸಿ. ಓದಿದ್ದರೆ ಶೇ. 5 ಅಂಕ ಹೆಚ್ಚಿಗೆ ಕೊಡುತ್ತಿದ್ದರು. ನನಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 73.4 ಅಂಕ ಬಂದಿದ್ದು ಪಿ.ಯು.ಸಿ.ಯದು ಸೇರಿ ಶೇ. 78.4 ಆಗಿತ್ತು. ಆ ಕಾಲದಲ್ಲಿ ರಾಂಕು ವಿದ್ಯಾರ್ಥಿಗಳಿಗೂ ಶೇ. 80-85 ಕ್ಕಿಂತ ಹೆಚ್ಚಿಗೆ ಅಂಕಗಳನ್ನು ಕೊಡುತ್ತಿರಲಿಲ್ಲ. ನಾನು ಚಿತ್ರದುರ್ಗದ ಮುನಿಸಿಪಲ್ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿದ್ದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರಿಂದ ಪುರಸಭೆಯಲ್ಲಿ ನನಗೆ ಹಾರ ಹಾಕಿ ಸನ್ಮಾನಿಸಿ 50 ರೂ. ಬಹುಮಾನ ಕೊಟ್ಟಿದ್ದರು. ಡಿಗ್ರಿ ಓದಿದ ನಂತರ ಕೆಲಸ ಹುಡುಕಲು ಪ್ರಾರಂಭಿಸಿ ಚಿಕ್ಕಮಗಳೂರಿನ ಒಂದು ಖಾಸಗಿ ಟ್ಯುಟೋರಿಯಲ್ ನಲ್ಲಿ ಟ್ಯೂಟರ್ ಆಗಿ ಸೇರಲು ಮಾತನಾಡಿಕೊಂಡು ಬಂದಿದ್ದೆ. ಸಂಬಳ ಎಷ್ಟು ಅವರೂ ಹೇಳಲಿಲ್ಲ, ನಾನೂ ಕೇಳಿರಲಿಲ್ಲ. ಆಗ ನರಸಿಂಹರಾಜಪುರದಲ್ಲಿ ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಯವರಿಗೆ ವಿಷಯ ತಿಳಿಸುವ ಸಲುವಾಗಿ ಪತ್ರ ಬರೆಯಲು ಕಾರ್ಡು ಕೊಳ್ಳಲು ಚಿಕ್ಕಮಗಳೂರಿನ ಅಂಚೆ ಕಛೇರಿಗೆ ಹೋದಾಗ ಅಲ್ಲಿನ ಸೂಚನಾ ಫಲಕದಲ್ಲಿ ಅಂಚೆ ಗುಮಾಸ್ತರಾಗಿ ನೇಮಕವಾದವರ ಪಟ್ಟಿ ಇತ್ತು. ನೋಡಿದರೆ ನನ್ನ ಹೆಸರೂ ಅದರಲ್ಲಿತ್ತು. ಖುಷಿಯಿಂದ ಪೋಸ್ಟ್ ಮಾಸ್ಟರರನ್ನು ಕೇಳಿದರೆ,'ಆಗತಾನೇ ಪಟ್ಟಿ ಬಂದಿತ್ತೆಂದೂ, ವಾರದ ಒಳಗೆ ನೇಮಕಾತಿ ಆದೇಶ ಬರುತ್ತದೆಂದೂ' ತಿಳಿಸಿದರು. ಟ್ಯೂಟರ್ ಕೆಲಸಕ್ಕೆ ಹೋಗದೆ ನರಸಿಂಹರಾಜಪುರಕ್ಕೇ ಹೋದೆ. ನಿರೀಕ್ಷಿಸಿದಂತೆ ಒಂದು ವಾರದ ಒಳಗೇ ನೇಮಕಾತಿ ಆದೇಶವೂ ಬಂತು. ಮೂರು ತಿಂಗಳು ಮೈಸೂರಿನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಹಾಸನದ ಪ್ರಧಾನ ಅಂಚೆ ಕಛೇರಿಗೆ ಗುಮಾಸ್ತನಾಗಿ ಬಂದೆ.


 


ಮುಂದುವರೆಯಲಿದೆ. . . . .

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಜಕ್ಕು ಒಳ್ಳೆಯ ಅನುಭವ..ಹೌದು ಆಗೆಲ್ಲ ಪತ್ರಗಳನ್ನು ವರ್ಶಗಟ್ಟಳೆ ಇಡುತ್ತಿದ್ದರು..ನಾವು ಸಹ ದೊಡ್ಡವರಾದ ಮೇಲೆ..ಹಳೆಯ ಪತ್ರಗಳನ್ನು ಓದಿದ ನೆನಪು..ಸುಂದರ ಅನುಭವಗಳು..ಇಂದಿನ ಯಾವುದೆ ಜೀವನ ಶೈಲಿ ಅದಕ್ಕೆ ಸಮನಾಗುವುದಿಲ್ಲ....ಹೀಗೆ ಮುಂದುವರೆಸಿ..ಆಸಕ್ತಿದಾಯಕವಾಗಿದೆ..

ನಾಗರಾಜ್, ನಿಮ್ಮ ಲೇಖನ ಹಲವು ವರ್ಷಗಳ ಹಿಂದೆ ಕರೆದುಕೊಂಡು ಹೋಯಿತು. ಟ್ರಂಕಾಲ್ ಬುಕ್ ಮಾಡುತ್ತಿದ್ದುದು ಈಗಲೂ ನೆನಪಿದೆ. ಕಾರ್ಡ್ಗಳನ್ನು ತಂತಿಗೆ ನೇತುಹಾಕುತ್ತಿದ್ದು, ಆಗ 15ಪೈಸೆಗೆ ಒಂದು ಕಾರ್ಡು. ಅದನ್ನು ಓದುವುದೇ ಒಂದು ಕುತೂಹಲಕರ ಸಂಗತಿ. ನಿಮ್ಮ ಅನುಭವ ಚೆನ್ನಾಗಿದೆ. ಬೇಗ ಮುಂದುವರೆಸಿ. ಧನ್ಯವಾದಗಳು

ಹೌದು ಸುರೇಶ್. ಕಾರ್ಡುಗಳ ನೆನಪು ನಮ್ಮನ್ನು ಹಿಂದಿನ ಕಾಲಘಟ್ಟಕ್ಕೆ ಒಯ್ಯುತ್ತದೆ. ಮೆಚ್ಚಿದ್ದಕ್ಕೆ ಧನ್ಯವಾದ.

ಧನ್ಯವಾದ ಮಾಲತಿಯವರೇ. ಹಿಂದಿನ ಅಂಚೆ ಕಾರ್ಡುಗಳ ಬಗ್ಗೆ ಹೇಳಬಹುದಾದ ಸಂಗತಿಗಳು ಬಹಳ.

ಆತ್ಮೀಯ ಹೌದು ಸರ್ ನಮ್ಮ ಮನೆಯಲ್ಲೂ ಹಳೇ ಇನ್ ಲ್ಯಾ೦ಡ್ ಲೆಟರ್ ಗಳು ಪೋಸ್ಟ್ ಕಾರ್ಡ್ ಗಳು ಇನ್ನೂ ಇವೆ. ನನ್ನ ಉಪನಯನ ನಿಶ್ಚಯವಾದಾಗ ಧಿಡೀರ್ ಅ೦ತ ನಮ್ಮ ದೊಡ್ಡಪ್ಪನ ಮಗಳಿಗೆ ಮದುವೆ ನಿಶ್ಚಯವಾಯ್ತು. ಒ೦ದೇ ಮನೆಯಲ್ಲಿ ಎರಡು ನಾ೦ದಿ ಇಡುವ ಹಾಗಿಲ್ಲ ಅ೦ತ ನನ್ನ ಉಪನಯನ ಕಾರ್ಯಕ್ರವನ್ನ ಕೈಬಿಡುವ೦ತೆ ದೊಡ್ಡಪ್ಪ ಬರೆದ ಪತ್ರ , ಹೀಗೇ ಹಲವಾರು ಪತ್ರಗಳು ನನ್ನ ಕಡತದಲ್ಲಿದೆ. ಶುಭ ವಿಚಾರದ ಸಲುವಾಗಿ ಪತ್ರದ ಅ೦ಚುಗಳಿಗೆ ಅರಿಶಿಣ ಕು೦ಕುಮ ಹಚ್ಚಿ ಕಳುಹಿಸುತ್ತಿದ್ದ ಪತ್ರಗಳು ಅಶುಭಗಳಿಗೆ ಕಪ್ಪು ಮಸಿ ಹಚ್ಚಿ ಕಳುಹಿಸುತ್ತಿದ್ದ ಪತ್ರಗಳು ಹೀಗೇ ಹಲವಾರು ಪತ್ರಗಳು ಎರಡು ಪೈಸೆ ಪತ್ರಗಳನ್ನು ನಾನು ನೋಡಿಲ್ಲ ನಾ ನೋಡುವ ವೇಳೆಗೆ ಹದಿನೈದು ಪೈಸೆಯಾಗಿತ್ತು. ಚಿಕ್ಕ೦ದಿನಲ್ಲಿ ಹೊಸದಾಗಿ ಪರಿಚಯವಾದ ನನ್ನ ಬ೦ಧು ಒಬ್ಬರಿಗೆ ಸರಿಸುಮಾರು ತಿ೦ಗಳಿಗೆ ಹತ್ತರಿ೦ದ ಹನ್ನೆರಡು ಪತ್ರಗಳು ಬರೆಯುತ್ತಿದೆವು.ಅದು ಅವರಿಗೆ ತಲುಪುವ ಮೊದಲೇ ಇನ್ನೊ೦ದು ಅವರ ಕೈ ಸೇರುತ್ತಿತ್ತು. ನ೦ತರದ ದಿನಗಳಲ್ಲಿ ಫೋನ್ ಗಳು ಬ೦ದವು ಪತ್ರ ನಿ೦ತು ಹೋಯ್ತು .ನಾನು ಈಗಲೂ ಅಪ್ಪನಿಗೆ ಪತ್ರ ಬರೆ ಯುತ್ತಿರುತ್ತೇನೆ. ಪತ್ರ ಬರೆಯುವಾಗ ಆಚೆಗಿನ ವ್ಯಕ್ತಿ ಕಣ್ಮು೦ದೆ ಬ೦ದು ನಿಲ್ಲುತ್ತಾನೆ.ಫೋನಿನೊಳಗೆ ನಾಚಿಕೆ ಹುಸಿಗೋಪ ಎಲ್ಲವೂ ಕೇಳುತ್ತೆ (ಕಾಣುವುದಿಲ್ಲ) ಆದರೆ ಪತ್ರದಲ್ಲಿ ಅದು ಅಕ್ಷರವಾಗಿರುತ್ತೆ. ಬರೆದ ಪ್ರತಿಯೊ೦ದು ಪತ್ರವೂ ಸಾಹಿತ್ಯ ಬರಹದ೦ತೆ ಕಾಣುತ್ತೆ. ಇವೆಲ್ಲವನ್ನೂ ನೆನಪಿಸಿದ್ದಕ್ಕೆ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ಹರಿ

ಹಳೆಯ ನೆನಪು...ಮನೆಗೆ ಬಂದ ಪತ್ರಗಳನ್ನೆಲ್ಲ ಅಪ್ಪ ಎಲ್ಲೆಲ್ಲೋ ಬಿಸಾಡುತ್ತಿದ್ದರೆಂದು ಮೂಲೆಯಲ್ಲೊಂದು ಮೊಳೆ ಹೊಡೆದು, ತಂತಿ ನೇತುಹಾಕಿ ಅದಕ್ಕೆ ಸಿಕ್ಕಿಸುತ್ತಿದ್ದೆ. ಈಗ ಪತ್ರಗಳೂ ಇಲ್ಲ, ತಂತಿಗೆ ಚುಚ್ಚುವ ಪ್ರಮೇಯವೂ ಇಲ್ಲ. ಆದರೆ ಇನ್ನೂ ಮೂಲೆಯಲ್ಲಿ ತಂತಿ ಹಾಗೇ ಇದೆ, ಅದರ ಸುತ್ತ ಜೇಡ ಬಲೆ ಕಟ್ಟಿದೆ... ಅಂಚೆ ಪತ್ರಗಳ ಬಗ್ಗೆ ನೆನಪಿಸಿದ್ದಕ್ಕೆ ಧನ್ಯವಾದಗಳು :)

ಕವಿ ನಾಗರಾಜರೆ, ಈ ವಯೋಮಾನದವರು ಮರೆತಿರುವ ಒ೦ದು ಅತ್ಯಮೂಲ್ಯ ವಿಚಾರವನ್ನು ನೆನಪಿಸಿದ್ದೀರಿ. ಕೆಲವು ಅತ್ಯಮೂಲ್ಯ "ಇನ್ ಲ್ಯಾ೦ಡ್ ಲೆಟರ್"ಗಳನ್ನು, ಸುಮಾರು ೨೫ ವರ್ಷಕ್ಕೂ ಹೆಚ್ಚು ಹಳೆಯವು, ಇ೦ದಿಗೂ ನಾನು ಜೋಪಾನ ಮಾಡಿಟ್ಟಿದ್ದೇನೆ. ಆ ಕಾಗದಗಳಲ್ಲಿರುವ ಪದಗಳನ್ನು ಓದಿಯೇ ಅನುಭವಿಸಬೇಕು, ವರ್ಣಿಸಲು ಈಗ ಪದಗಳೇ ಸಿಗುವುದಿಲ್ಲ. ತ೦ತ್ರಜ್ಞಾನದ ನಾಗಾಲೋಟದಲ್ಲಿ ನಾವು ಅದೇನೇನನ್ನೋ ಕಳೆದುಕೊ೦ಡಿದ್ದೇವೆ, ಅದರಲ್ಲಿ ಈ ಅ೦ಚೆಯೂ ಒ೦ದು.

ಹಳೆಯ ಪತ್ರಗಳನ್ನು ಇನ್ನೂ ಜೋಪಾನವಾಗಿ ಇಟ್ಟಿರುವ ನಿಮ್ಮನ್ನು ಅಭಿನಂದಿಸುವೆ.ಮೆಚ್ಚಿದ್ದಕ್ಕೆ ಧನ್ಯವಾದ, ಮಂಜುರವರೇ.

ಆಕಾಶವಾಣಿಗೆ ಪತ್ರ ಬರೆಯಲು,ನಾನೂ ಡಜನ್ ಗಟ್ಟಲೆ cardಗಳನ್ನು ಕೊಳ್ಳುತ್ತಿದ್ದೆ.

ನಿಮ್ಮೀ ಲೇಖನ ಓದಿದೊಡನೆ ನಂಗೆ ನೆನಪಾಗಿದ್ದು ನಾ ನನ್ನ ಮನೆಯಿಂದ ಬಹುದೂರವಿರುವ ಪುತ್ತೂರಿನಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ಮನೆಯವರೆಗೆ ಬರೆಯುತ್ತಿದ್ದ ಇನ್ಲ್ಯಾಂಡ್ ಪತ್ರಗಳು. ಊರಿಗೆ ಹೋದಾಗ ಹುಡುಕುವೆ. ಚೆನ್ನಾಗಿದೆ ಮುಂದುವರಿಸಿ ಸರ್.

:-) ನಿಮ್ಮನ್ನು ಪ್ರೇರಿಸಲು ಲೇಖನ ಸಫಲವಾಗಿದ್ದಕ್ಕೆ ಸಂತಸವಾಯಿತು.

ಈಗಾಗಲೇ ಮರೆತು ಹೋಗುತ್ತಿರುವ ಹಳೆಯ ಜನರ ಸ೦ಗಾತಿಯ ಬಗ್ಗೆ ನೆನಪು ಮಾಡಿಕೊಟ್ಟಿರುವುದಕ್ಕೆ ಧನ್ಯವಾದಗಳು. ನಿಮ್ಮ ಲೇಖನ ಓದುತ್ತಿದ್ದ೦ತೆ ಸ್ವಲ್ಪ ದಿನದ ಹಿ೦ದೆ ಹೆಗ್ಡೆಯವರು ಬರೆದ “ ನಿಮ್ಮಲ್ಲಿ ಯಾರಿಗಾದರೂ ಇದ್ದರೆ ಪತ್ರ ಬರೆಯುವಾಸೆ“ ಕವನದ ನೆನಪಾಯ್ತು. ಎರಡೂ ಒ೦ದೇ ವಿಚಾರ- ಒ೦ದೇ ಲಹರಿ- ಭಿನ್ನ ನಿರೂಪಣೆ. ಸೊಗಸಾಗಿದೆ. ನ್ಮಮಸ್ಕಾರಗಳು.