ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋ.

To prevent automated spam submissions leave this field empty.

 


ಪ.ಗೋ. ಎಂದೇ ಪ್ರಸಿದ್ಧರಾಗಿದ್ದ ಪದ್ಯಾಣ ಗೋಪಾಲಕೃಷ್ಣ ಅವರು ನಾಡುಕಂಡ ಧೀಮಂತ ಪತ್ರಕರ್ತರಲ್ಲಿ ಒಬ್ಬರು. ಬೆಂಗಳೂರಿನಂಥ  ಪಟ್ಟಣದಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಂಡು ಮಂಗಳೂರಲ್ಲಿ ವ್ಯಕ್ತಿತ್ವವನ್ನು ಅರಳಿಸಿಕೊಂಡವರು. ಮಾತಿನಲ್ಲಿ ಮೊನಚಿದ್ದರೂ ಹೃದಯವಂತಿಕೆಗೇನೂ ಕೊರತೆ ಇರಲಿಲ್ಲ. 


1990ರ ದಶಕದಲ್ಲಿ ಬೆಂಗಳೂರಿನಿಂದ ಪ್ರಕಟನೆಯಾಗುತ್ತಿದ್ದ  ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಮಂಗಳೂರು ಪ್ರತಿನಿಧಿಯಾಗಿದ್ದ ಶ್ರೀ.ಜಿ.ಎನ್.ಮೋಹನ್ ಅವರು  ಮಂಗಳೂರಿನ ಪತ್ರಕರ್ತರಿಬ್ಬರ ಬಗ್ಗೆ  2009 ನೇ ಇಸವಿಯಲ್ಲಿ ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದು ಈ ರೀತಿಯಲ್ಲಿ. 


ಮಂಗಳೂರಿನಲ್ಲಿ ಒಂದು ಜೋಡಿ ಇತ್ತು. ‘ದಿ ಹಿಂದು’ವಿನ ನರಸಿಂಹರಾಯರು ಹಾಗು ಟೈಮ್ಸ್ ಆಪ್ ಇಂಡಿಯಾದ ಪದ್ಯಾಣ ಗೋಪಾಲಕೃಷ್ಣ ಅವರು. ಪ್ರೆಸ್ ಕಾನ್ಫರೆನ್ಸ್ ನಲ್ಲಿ ಈ ಇಬ್ಬರನ್ನು ಕಂಡರೆ ರಾಜಕಾರಣಿಗಳಿಗೆ ನಾಲಿಗೆಯೇ ಹೊರಳುತ್ತಿರಲಿಲ್ಲ. ‘ಕವರ್ ಜರ್ನಲಿಸಂ’ಗೆ ನಾಂದಿ ಹಾಕಿದ ಸ್ಟ್ರಿಂಗರ್ ಗಳನ್ನು ಬಗಲಲ್ಲಿಟ್ಟುಕೊಂಡೇ ಇವರು ಪತ್ರಿಕೋದ್ಯಮದ ಘನತೆಯನ್ನು ಉಳಿಸಿದರು. ಎಳೆಯ ಪತ್ರಕರ್ತರಿಗೆ ಅ ಆ  ಇ ಈ ಕಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರಂತೂ ಇಬ್ಬರೂ ಹುಲಿಗಳೇ. ಇವರಿಬ್ಬರೂ ಇದ್ದಾರೆ ಎಂದರೆ ಪತ್ರಿಕಾ ಗೋಷ್ಠಿ ನಡೆಸುವವರಿಗೂ ಆತಂಕ. ಏಕೆಂದರೆ ಸುಳ್ಳು ಮಾತನಾಡುವಂತಿಲ್ಲ. ತಪ್ಪು ಅಂಕಿ ಸಂಖ್ಯೆ ಮುಂದಿಡುವಂತಿಲ್ಲ. ತಿಂಡಿ ಕಾಫಿ ಸಹಾ ಮುಟ್ಟುವುದಿಲ್ಲ. ಗಿಫ್ಟ್ ತೆಗೆದುಕೊಳ್ಳುವ ಮಾತೇ ಇಲ್ಲ. ದಕ್ಷಿಣ ಕನ್ನಡ ಕಂಡ ಇಬ್ಬರು ನಿಜಕ್ಕೂ ಮಹನೀಯ ಪತ್ರಕರ್ತರು ಇವರು.  ‘ಪಾಕೀಟು ಪತ್ರಿಕೋದ್ಯಮ’ ದ ಜನಪ್ರಿಯವಾಗಿದ್ದ ದಿನಗಳಲ್ಲಿ ಪತ್ರಕರ್ತರ ನೀತಿ ಸಂಹಿತೆ ಉಳಿಯಲು ತಮ್ಮದೇ ಉದಾಹರಣೆಯ ಮೂಲಕ ಹೋರಾಟ ನಡೆಸಿದವರು . 


ಈ ಜೋಡಿಯ ನಿಷ್ಟುರವಾದಿ, ಯಾರ ಮುಲಾಜಿಗೂ ಒಳಗಾಗದ ಕಿರಿಯ ಪತ್ರಕರ್ತ  ಪ.ಗೋಪಾಲಕೃಷ್ಣ . 


ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ  ಹಿರಿಯ ನಾಯಕರು,  ರಾಜಕಾರಣಿಗಳ ಸಂಪರ್ಕವಿದ್ದರೂ  ಹಾಗೂ ಕರಾವಳಿ ಕರ್ನಾಟಕ ಮೂಲದ ನಾಡಿನ ಮುಖ್ಯಮಂತ್ರಿಯಾಗಿ  ಆಯ್ಕೆಗೊಂಡ ಇಬ್ಬರನ್ನು ವೈಯಕ್ತಿಕವಾಗಿ ಪರಿಚಯವಿದ್ದರೂ ಯಾರ ಬಳಿಯೂ ಸಹಾಯಕ್ಕಾಗಿ ಹಸ್ತ ಚಾಚಿದವರಲ್ಲ ಪ.ಗೋ. 


ಇಂಗ್ಲೀಷ್ ದಿನಪತ್ರಿಕೆ ಇಂಡಿಯನ್ ಎಕ್ಷ್ ಪ್ರೆಸ್ ಮತ್ತು  ಟೈಮ್ಸ್ ಆಪ್ ಇಂಡಿಯಾದ  ವರದಿಗಾರರಾಗಿದ್ದರೂ ಕನ್ನಡ ಭಾಷಾ ಪ್ರೇಮಿ ಪ. ಗೋ. ಅವರು ತಮ್ಮ   ಹಸ್ತಾಕ್ಷರವನ್ನು ಕನ್ನಡದಲ್ಲಿಯೇ ಮಾಡುತಿದ್ದರು.  ಈಗ ರಾಷ್ಟ್ರೀಕರಣಗೊಂಡಿರುವ ಬ್ಯಾಂಕ್ ಒಂದರ  ಮಂಗಳೂರಿನ ಶಾಖೆಯ ಮ್ಯಾನೇಜರ್ ಒಬ್ಬರು  ಅಂದಿನ 1960ರ ದಶಕದಲ್ಲಿ ಇಂಗ್ಲಿಷ್ ನಲ್ಲಿ ಸಹಿ ಮಾಡಿದರೆ ಮಾತ್ರ ತಮ್ಮ ಬ್ಯಾಂಕ್ ನಲ್ಲಿ   ವ್ಯವಹಾರ  ಮಾಡಬಹುದು  ಅಂತ ಹೇಳಿದಕ್ಕೆ ಪ್ರತಿಭಟಿಸಿ ಆ  ಬ್ಯಾಂಕ್ ನಲ್ಲಿದ್ದ ತಮ್ಮ ಖಾತೆಯನ್ನು ತಕ್ಷಣ  ಮುಚ್ಚಿದರು.  ರಾಷ್ಟ್ರಕವಿ ಶ್ರೀ. ಮಂಜೇಶ್ವರ ಗೋವಿಂದ ಪೈ ಅವರಂತೆ ಕಾಸರಗೋಡು ಕನ್ನಡ ನಾಡಿಗೆ ಸೇರಬೇಕು ಎಂದು ಹಂಬಲಿಸಿದ್ದ ಪ.ಗೋ. ರವರು ಅಂದಿನ ಕೇರಳ ರಾಜ್ಯದ ಕಣ್ಣಾನೂರು ಜಿಲ್ಲೆಯ ತಾಲೂಕಾಗಿದ್ದ  ಕಾಸರಗೋಡಿನಲ್ಲಿದ ತಮ್ಮ ಮಿತ್ರರು, ಸಂಬಂಧಿಕರಿಗೆ ಪತ್ರ ಬರೆಯುವಾಗ ವಿಳಾಸದಲ್ಲಿ ಕೇರಳ ರಾಜ್ಯದ ಉಲ್ಲೇಖ ಮಾಡದೆ   ಕಾಸರಗೋಡು (ದಕ್ಷಿಣ ರೈಲ್ವೆ ) ಎಂದು ಬರೆಯುತಿದ್ದರು.   


ವರದಿಗಳು ನಿಷ್ಪಕ್ಷಪಾತವಾಗಿರಬೇಕು ಎನ್ನುವ ದೋರಣೆ ಪ.ಗೋ. ಅವರದ್ದು. ಅವರ ವರದಿಗಳು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಪರ ಅಥವಾ ವಿರೋದವಾಗಿ ಇರುತಿರಲ್ಲಿಲ್ಲ . ಆದರೆ ಪ.ಗೋ. ಅವರು  1950ರ ದಶಕದಲ್ಲಿ ಕಮ್ಯುನಿಸ್ಟ್ ಪಕ್ಷದ ‘ಕೆಂಪು ಕಾರ್ಡ್’ ಹೊಂದಿದ್ದ ಸದಸ್ಯರಾಗಿದ್ದರು ಎಂದು ಅವರ ಕುಟುಂಬದವರಿಗೂ ತಿಳಿದ್ದದ್ದು 1998ರಲ್ಲಿ , ಪ.ಗೋ.ರವರು ದಿವಂಗತರಾದ ಬಳಿಕ. 


ಮೊದಲಿನ ಮಂಗಳೂರು ನಗರದ ಹೊರವಲಯದ ಗ್ರಾಮ “ಲೋವರ್ ಮರೋಳಿ”ಯಲ್ಲಿ 1979 ನೇ ಇಸವಿಯಲ್ಲಿ ನಲ್ಲಿ ನೀರಿನ ಸವಲತ್ತು ಹೊಂದಲು ಪತ್ರಕರ್ತರಾಗಿ ಪ.ಗೋ. ಅವರು ಮಾಡಿದ ಸಹಾಯಗಳನ್ನು ಲೋವರ್ ಮರೋಳಿಯ ಹಿರಿಯರು ಇಂದಿಗೂ ಪ್ರತೀ ಬೇಸಗೆ ಕಾಲದಲ್ಲಿ  ಸ್ಮರಿಸುತ್ತಾರೆ. 


ಪದ್ಯಾಣ ಎಂದೊಡನೆ ತಕ್ಷಣ ನೆನಪಿಗೆ ಬರುವುದು ಯಕ್ಷಗಾನ . ಮೈಸೂರಿನ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಯಕ್ಷಗಾನ ಪ್ರದರ್ಶನದ ನೆಡೆದ್ದದ್ದು  1955 ನೇ ಇಸವಿಯಲ್ಲಿ ಪ.ಗೋ. ಅವರ ನೇತ್ರತ್ವದಲ್ಲಿ . 1955ರಲ್ಲಿ ಅಂದಿನ ರಷ್ಯಾ ದೇಶದ ಪ್ರಧಾನಿ ಮಾರ್ಷಲ್ ಬುಲ್ಗಾನಿನ್ ಮತ್ತು ಕಾಮ್ರೇಡ್ ಕ್ರುಶ್ನೇವ್  ಅವರ ತಂಡದ ಮೈಸೂರು ರಾಜ್ಯದ  ಬೇಟಿಯ ಸಂದರ್ಭದಲ್ಲಿ ಬೆಂಗಳೂರಿನ ಲಾಲ್ ಭಾಗ್ ನ ಗಾಜಿನ ಮನೆಯಲ್ಲಿ ಕರಾವಳಿ ಕರ್ನಾಟಕದ ಗಂಡುಗಲೆ ಯಕ್ಷಗಾನದ ‘ದಕ್ಷ ಯಜ್ಞ’ ಪ್ರಸಂಗದ ಪ್ರದರ್ಶನ ಆಯೋಜಿಸಿ ಕನ್ನಡ ನಾಡಿನ ರಾಜಧಾನಿ ಬೆಂಗಳೂರು ನಗರದಲ್ಲಿ  ಮೊದಲ ಬಾರಿಗೆ ಯಕ್ಷಗಾನದ ಕೇಳಿ ಬಡಿದವರು ಎಂದು ಗುರುತಿಸಿ ಕೊಂಡವರು ಪ.ಗೋ. 


ಪ.ಗೋ. ಅವರ ಪತ್ರಿಕೋದ್ಯಮ ಕಿರಿಯರಿಗೆ ಆದರ್ಶ. ನಡೆ- ನುಡಿ ಬರವಣಿಗೆಯ ಶೈಲಿ ಅದು ಪ.ಗೋ. ವಿಶೇಷತೆ.  ನಾಡು ಕಂಡ ಈ ಧೀಮಂತ ಪತ್ರಕರ್ತರನ್ನು ಸರ್ಕಾರಗಳು ಗುರುತಿಸದಿದ್ದರೂ  ಜನರು  ಮಾತ್ರ  ಎಂದಿಗೂ ಮರೆಯಲಾರರು. ಅಂಥ ಹೆಜ್ಜೆಗುರುತುಗಳನ್ನು ಪ.ಗೋ.ಬಿಟ್ಟು ಹೋಗಿದ್ದಾರೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು