ಜೇನು ಕುರುಬರ ‘ಮುಚ್ಚ ಬೇಟೆ’; ನನ್ನ ಕಾಡಿದ ಅಪರಾಧಿ ಪ್ರಜ್ಞೆ.

To prevent automated spam submissions leave this field empty.

ನನಗೇನಾದರೂ ತಿನ್ನಲು ಕೊಡುವಿರಾ? ಎಂದು ಬೇಡುವಂತಿದೆ ಹನುಮಾನ್ ಲಂಗೂರ್ ಮುಖದ ಈ ಭಾವ. ಚಿತ್ರ: ಮಿಂಚು ಚೈತನ್ಯ ಷರೀಫ್.

 

‘ಮುಸುವಗಳ ಬೇಟೆ’ - ಈ ಬಗ್ಗೆ ಕೇಳಿದ್ದೀರಾ?

 

ನನಗೆ ಇತ್ತೀಚೆಗೆ  ಈ ‘ಮುಸುವ ಬೇಟೆ’ ನೋಡುವ ‘ದೌರ್- ಭಾಗ್ಯ’ ಸಿಕ್ಕಿತ್ತು. ಈ ಬೇಟೆ ನಡೆಸುವವರು ನಮ್ಮ ಉತ್ತರ ಕರ್ನಾಟಕದ ಹಕ್ಕಿ-ಪಿಕ್ಕಿಗಳು, ಹರಿಣಶಿಕಾರಿಗಳು, ಗೋಸಾವಿಗಳು ಅಥವಾ ಚಿಕ್ಕಲಿಗ್ಯಾರು ಎಂದು ಭಾವಿಸಿದ್ದೆ; ಆದರೆ ಅವರು ‘ಜೇನು ಕುರುಬರು’.

 

ದಯವಿಟ್ಟು ನಾನು ಯಾರಿಂದ ಈ ಮಾಹಿತಿ ಪಡೆದೆ?, ಎಲ್ಲಿ ನೋಡಿದೆ?, ಹೇಗೆ ಸಧ್ಯವಾಯಿತು? ಎಂಬೆಲ್ಲ ಪತ್ರಿಕೋದ್ಯಮದ 5- W's and 1-H ಗಳಿಗೆ ನಾನು ಇಲ್ಲಿ ಉತ್ತರಿಸಲಾರೆ. ಅಷ್ಟರಮಟ್ಟಿಗೆ ನಾನು ಪರಾವಲಂಬಿ! ಕೇವಲ ಅನುಭವ ಮಾತ್ರ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಅದು ‘ಎಕ್ಸಕ್ಲೂಸಿವ್’ ಸಂಪದಿಗರಾಗಿ!

 

ನಾವು ಇತ್ತೀಚೆಗೆ ಚಾರಣ ಕೈಗೊಂಡಿದ್ದೆವು. ಹೀಗೆ ಹರಟುತ್ತ, ಕಾಡಿನಲ್ಲಿ ‘ಕಂಪಾಸ್’ ಝಳಪಿಸುತ್ತ ಕಾಲೆಳೆಯುತ್ತ, ಆಗಾಗ ನೀರು ಹೀರುತ್ತ ಹೊರಟಿದ್ದೆವು. ಕಾಡಿನ ಮಧ್ಯೆ ಹಠಾತ್ ಒಂದು ‘ಟೋಳಿ’ ಕಾಣಿಸಿತು. ಅನುಮಾನಾಸ್ಪದವಾಗಿದ್ದ ಅವರ ಚಲನವಲನಗಳು ನಮಗೆ ನಿಗೂಢವಾಗಿ ಕಂಡಿತು. ಅವರು ಬೇಟೆಗಾರರು ಎಂಬ ಸಂಶಯ ನಮ್ಮಲ್ಲಿ ಮೊಳಕೆ ಒಡೆಯದಂತೆ ಜಾಗ್ರತೆ ವಹಿಸಿದಂತಿತ್ತು. ನಮ್ಮಂತೆ ಕಾಡು ನೋಡಲು ಬಾರದೇ, ಅರಣ್ಯ ಉತ್ಪನ್ನ ಸಂಗ್ರಹಿಸಿ, ಮರಾಟ ಮಾಡಿ ಬಂದ ಉತ್ಪನ್ನದಲ್ಲಿ ಬದುಕುತ್ತಿರುವಂತೆ ನಮಗೆ ನಂಬಿಸಿದರು. ‘ಪಾಪ ಬಡವರು’ ಎಂದು ನಾವು ಅನುಕಂಪ ತೋರಿಸುವಂತೆ ಅವರ ನಡಾವಳಿ!

 

 

ನಾನೂ ನಿಮ್ಮವನೇ ಎನ್ನುತ್ತಿದೆಯೇ ಈ ಮುಸುವ? ಕಾದು ನೋಡಬೇಕು. ಚಿತ್ರ: ಮಿಂಚು ಚೈತನ್ಯ ಷರೀಫ್.

 

ಸುಮಾರು ಒಂದು ಮೈಲಿ ದೂರ ಕ್ರಮಿಸಿರಬೇಕು..ಕಪ್ಪು ಮೂತಿಯ ಮುಸುವಗಳ ಒಂದು ಗುಂಪು ಅತ್ಯಂತ ಭಯಂಕರವಾಗಿ ಕಿರುಚಾಡುತ್ತ, ಇಡಿ ಗಿಡದ ತುಂಬೆಲ್ಲ ಎಗರಾಡುತ್ತ ಸಂಭವನೀಯ ಅಪಾಯದ ಮುನ್ಸೂಚನೆ ನೀಡುತ್ತಿರುವಂತೆ ಪ್ರತಿಭಟಿಸಿದವು. ಬಹಶ: ಅವುಗಳ ಮನೆಯಲ್ಲಿ ನಮ್ಮ ಇರುವಿಕೆ ಸಹನವಾಗಲಿಲ್ಲವೇನೋ? ಹೀಗಂದುಕೊಳ್ಳುತ್ತಿರುವಾಗಲೇ ಟೋಳಿಯ ನಾಯಕ ಗಂಡು ಮುಸ್ಯಾ ಅತ್ಯಂತ ಸಿಟ್ಟಿಗೆ ಬಂದು ಟೊಂಗೆಗಳನ್ನು ಕಿತ್ತೆಸೆದ. ತನ್ನ ಕುಟುಂಬ ಕಾಪಾಡುವ ಹೊಣೆ ಆತ ಹೊತ್ತಿದ್ದ. ಕೂಡಲೇ ಎಲ್ಲ ಹೆಣ್ಣು ಮುಸುವಗಳು ತಮ್ಮ ಮರಿಗಳೊಂದಿಗೆ ಹತ್ತಾರು ಗಿಡಗಳಷ್ಟು ದೂರ ಕ್ರಮಿಸಿ ಕುತೂಹಲದಿಂದ ನಮ್ಮನ್ನು ಬೆರಗುಗಣ್ಣಿನಿಂದ ನೋಡುತ್ತ ತುಸು ವಿಶ್ರಮಿಸಿದವು. ಆದರೆ ಗಂಡು ಮಾತ್ರ ಕೇಕೆ ಹಾಕಿದಂತೆ ‘ಘೂಮ್.ಘೂಮ್’ ಎಂದು ಕೂಗುತ್ತ ಎಲ್ಲರನ್ನು ಎಚ್ಚರಿಸುವ ಧಾಟಿ ತನ್ನದಾಗಿಸಿಕೊಂಡಿದ್ದ.

 

ನಮಗೆ ಮಂಗಗಳ ಈ ವಿಚಿತ್ರ ನಡವಳಿಕೆ ಒಂಥರಾ ಖಷಿ ಹುಟ್ಟಿಸಿತು. ‘ನಾವೇ ಈ ಕಾಡಿನ ರಾಜರು’ ಎಂಬ ಅಹಮಿಕೆ ಸುಳಿದು ಹೋಯಿತು. ಆದರೆ ನಮ್ಮೊಟ್ಟಿಗಿದ್ದ ಜೇನು ಕುರುಬರ ಹಿರಿಯಾಳು..‘ನಾವು ಅವ್ನ ಕೊಂದು ತಿಂತೇವೆ ಸ್ವಾಮೇರೋ..ಹಂಗಾಗಿ ನಮ್ಮ ಮೈ ವಾಸ್ನೆ ಹಿಡ್ದು ಹಂಗಾಡ್ತವೆ’ ಎಂದ. ದಂಗಾಗುವ ಸರದಿ ನಮ್ಮದು. ನಾನು ಚಕಿತನಾಗಿ ಆ ಹಿರಿಯನನ್ನು ಮಾತಿಗೆಳೆದೆ. ‘ಅಲ್ಲ..ನೀವು ಅಧೆಂಗೆ ಹಿಡಿತೀರಿ?’. ‘ತಡೀರಿ ಬುಧ್ಯೋರು..ನಾವು ಹಿಡ್ದೇ ತೋರಿಸ್ತೀವಿ’ ಅಂದ. ಅಯ್ಯೋ ಇದೊಳ್ಳೆ ಫಜೀತಿಗಿಟ್ಟುಕೊಂಡೆ ಅಂದುಕೊಂಡೆ. ನಾನು ಅಂದಿದ್ದನ್ನೇ ಆತ ಪಣವಾಗಿ ಸ್ವೀಕರಿಸಿದನೇ? ಎಂದು ನನಗೆ ಗುಮಾನಿಯಾಯಿತು.

 

ಅಸಲಿಗೆ ಅವರು ಬಂದಿದ್ದು ಮುಸುವ ಬೇಟೆಗೆ..ಅವರ ಭಾಸೆಯಲ್ಲಿ ಹೇಳಬೇಕು ಎಂದರೆ ‘ಮುಚ್ಚ ಬ್ಯಾಟಿ’ ಮಾಡಲು!  

 

ತಿಂಡಿ ನೀಡಿದ ಮೇಲೂ ಹೊಟ್ಟೆಬಾಕ ಹನುಮಾನ್ ಲಂಗೂರ್ ಮತ್ತೂ ಕೊಡಿ ಎನ್ನುತ್ತಿದೆ! ಚಿತ್ರ: ಮಿಂಚು ಚೈತನ್ಯ ಷರೀಫ್.

 

ನಿಂತು ನೋಡುವುದೋ? ಅಥವಾ ಅವರನ್ನು ಹಾಗೆ ಮಾಡದಂತೆ ತಡೆಯುವುದೋ? ಇಲ್ಲ ‘ಫಾರೆಸ್ಟ್’ ನವರ ಹೆದರಿಕೆ ಹಾಕುವುದೋ? ‘ದೇವರು ಅದು’ ಎಂದು ನಂಬಿಕೆ, ಆಚರಣೆಗಳ ಹೆಸರಿನಲ್ಲಿ ಹೆದರಿಸುವುದೋ? ಏನೆಲ್ಲ ವಿಚಾರಗಳು ನನ್ನ ತಲೆಯಲ್ಲಿ ಹುಳ ಎಬ್ಬಿಸಿದ್ದವು. ಹಿರಿಯ ಮಿತ್ರ ಹೇಳಿದ..‘ತಡಿಯೋ ಅವರ ಕೌಶಲ ತಿಳಿದುಕೊಳ್ಳೋಣ; ನೀವು ಮುಂದುವರಿಸಿಪ್ಪಾ’ ಅಂದು ಬಿಟ್ಟ. ಇವನಿಂದ ಹಸಿರು ನಶಾನೆ ಸಿಕ್ಕಿದ್ದೇ ತಡ ಜೇನು ಕುರುಬರ ಚರ್ಮದ ಚೀಲ ಬ್ರಹ್ಮಾಂಡವನ್ನೇ ತೋರಿಸಿತು. ಬೇಟೆಯ ಎಲ್ಲ ಉಪಕರಣಗಳು ಅದರಲ್ಲಿದ್ದವು. ಆದರೆ ‘ಫೋಟೋ ಕ್ಲಿಕ್ಕಿಸುವಂತಿಲ್ಲ’ ಎಂಬುದು ಅವರ ಆಗ್ರಹದ ವಿನಂತಿ.

 

ಉಪಾಯ ನನಗೆ ಹೊಳೆಯಲಿಲ್ಲ; ಆದರೆ ಇದು ಸಮಂಜಸ ಕಾರಣವಲ್ಲ. ನನಗೂ ಎಲ್ಲೋ ಮನದ ಒಂದು ಮೂಲೆಯಲ್ಲಿ ಅವರ  ಬೇಟೆಯ ಕಲೆ ಒರೆಗೆ ಹಚ್ಚಬೇಕು ಎಂಬ ಹುಚ್ಚು ತುಡಿತವಿತ್ತು ಎನಿಸುತ್ತದೆ. ಹಾಗಾಗಿ ಇತರರಂತೆ ನಾನೂ ಜೇನು ಕುರುಬರ ಗುಂಪಿನ ಹಿರಿಯನ ಹಿಂಬಾಲಕನಂತಾಗಿ ಬಿಟ್ಟೆ! ‘ಹೋಗ್ರಿ..ಸ್ವಾಮೇರು ಆ ದೊಡ್ಡ ಗಿಡದ ಬುಡತಾವ್ ಮುಚ್ಚಕೊಳ್ಳಿ’ ಅಂದ ಆ ಮಹಾನುಭಾವ. ಅವರ ಹಿಂಬಾಲಕ ಪಡೆಯಲ್ಲಿದ್ದ ಇಬ್ಬರು ಹುಡುಗರು ತಮ್ಮ ಹೆಗಲಿಗಿದ್ದ ಚರ್ಮದ ಚೀಲ ನೆಲಕ್ಕಿಳಿಸಿ, ಬೇಟೆಯ ವಿಶೇಷ ಆಯುಧಗಳನ್ನು ಹರವಿಟ್ಟರು. ಇನ್ನಿಬ್ಬರು ಯುವಕರು ಸರಸರನೇ ಮಂಗನಂತೆ ಮರವೇರಿ ಬಲೆ ಸಿಕ್ಕಿಸಿದರು. ಟಿಸಿಲು ಕೊಂಬೆಗಳನ್ನು ಆಯ್ದು ನಾಲ್ಕೂ ಮೂಲೆಗಳಿಗೆ ಭದ್ರವಾಗಿ ಬಲೆ ಬಿಗಿದು ಇಳಿದು ಬಂದರು.

 

ನನಗೆ ಇದೆಲ್ಲ ತಮಾಶೆಯಾಗಿ ಕಂಡಿತು. ಜಾಣ ಮಂಗಗಳು; ಅದರಲ್ಲೂ ನಮ್ಮ ಪೂರ್ವಜರು ಅಷ್ಟು ಸಲೀಸಾಗಿ ಇಡೀ ಕಾಡು ಬಿಟ್ಟು ಓಡೋಡಿ ಬಂದು ಈ ಬಲೆಗೆ ಬೀಳುತ್ತವೆ ಎಂದರೆ ಮೂರ್ಖ ಕಲ್ಪನೆಯೇ ಸೈ! ಎಂದು ಮನದಲ್ಲಿ ಲೆಕ್ಕಹಾಕಿ ನಕ್ಕೆ. ನಾಲ್ಕಾರು ಜನ ನಮ್ಮನ್ನೆಲ್ಲ ಅಲ್ಲಿಯೇ ಬಿಟ್ಟು ತೆವಳುತ್ತ ಆ ಹತ್ತಾರು ಮಂಗಗಳು ಏರಿ ಕುಳಿತ ಮರದ ಬಳಿ ಸಾಗಿದರು. ಅತ್ತ ಮಂಗಗಳ ಗಲಾಟೆ, ಕಿರುಚಾಟ ಮುಗಿಲು ಮುಟ್ಟಿತ್ತು. ದಿಢೀರ್ ಎದ್ದು ನಿಂತವರೇ ಒಬ್ಬ ಮರವೇರಲು ಶುರುಮಾಡಿದ; ಮತ್ತೊಬ್ಬ ಕೆಳಗೆ ನಿಂತು ಮಂಗಗಳ ಭಾಷೆಯಲ್ಲಿ ಮಾತನಾಡುತ್ತಿರುವಂತೆ ವಿಚಿತ್ರವಾಗಿ ಸದ್ದು ಮಾಡಲಾರಂಭಿಸಿದ. ಉಳಿದಿಬ್ಬರು ಗಿಡದ ಆಚೆ ಬದಿಗೆ ಹೋಗಿ ನಿಂತು ‘ಚಾಟರ ಬಿಲ್ಲು’ ಅರ್ಥಾತ್ ‘ಗುಲೇಲ್’ ಅಂದ್ರೆ ಟಿಸಿಲೊಡೆದ ಗಿಡದ ಪುಟ್ಟ ಟೊಂಗೆಗೆ ಎರಡು ತುದಿಯಿಂದ ರಬ್ಬರ್ ಬಿಗಿದು, ಮಧ್ಯೆ ಗೋಲಿ ಗುಂಡದಷ್ಟು ಕಲ್ಲು ಕೂಡುವಷ್ಟು ಕಾಣಿ ಇರುವ ಬೇಟೆಯ ಅಸ್ತ್ರ ಹಿಡಿದು, ಬೆಂಕಿಯಲ್ಲಿ ಸುಟ್ಟ ಮಣ್ಣಿನ ಗುಂಡಗಳನ್ನು ಹಾಕಿ ಗುರಿ ಇಟ್ಟು ಮಂಗಗಳಿಗೆ ಹೊಡೆಯಲಾರಂಭಿಸಿದರು. ಆ ಮಂಗಗಳ ಟೋಳಿ ನಮ್ಮತ್ತ ಬರುವಂತೆ ಜಾಗ್ರತೆ ವಹಿಸಿ ಹಾಗೆ ಮಾಡುತ್ತಿದ್ದರು.

 

ಕೆಲವು ಗಿಡದಿಂದ ಗಿಡಕ್ಕೆ ಹಾರಿದರೆ; ಮತ್ತು ಕೆಲವು ಗಿಡದ ತುತ್ತ ತುದಿಗೆ, ಕಾಣಿಸದಂತೆ ಟೊಂಗೆಗೆ ಮರೆಯಾಗಿ ಅವಿತಿಟ್ಟುಕೊಳ್ಳುತ್ತಿದ್ದವು. ಆದರೆ ಗಿಡ ಹತ್ತಿದವ ಅವುಗಳನ್ನು ಅಲ್ಲಿಂದ ಓಡಿಸುತ್ತಿದ್ದ. ಹಾಗೂ ಹೀಗೂ ನನ್ನ ಪ್ರಾರ್ಥನೆ ಫಲಿಸದೇ ಒಂದು ಮಂಗಕ್ಕೆ ಇವರ ಗುರಿ ತಾಗಿತು. ಸುಟ್ಟ ಮಣ್ಣಿನ ಗೋಲಿ ಬಲವಾಗಿ ಆ ಮಂಗದ ಕೈಗೆ ತಾಗಿತು. ನೋವಿನಿಂದ ಅರಚಿ ಕೊಂಬೆಗೆ ಜಿಗಿಯಲು ಯತ್ನಿಸಿ ಹಿಡಿದುಕೊಳ್ಳಲಾಗದೇ ಆಯತಪ್ಪಿ ಒಂದೆರೆಡು ಟೊಂಗೆಗಳಿಗೆ ಬಡಿಸಿಕೊಂಡು ಮತ್ತಷ್ಟು ಘಾಸಿಗೊಂಡು ಜೋತು ಬಿದ್ದಿತು. ಹರಸಾಹಸ ಪಟ್ಟು ಈ ಜೇನುಕುರುಬರು ಅದನ್ನು ಗುಂಪಿನಿಂದ ಪ್ರತ್ಯೇಕಿಸಿ ಬಲೆ ಕಟ್ಟಿದ ಗಿಡಗಳ ಮಧ್ಯೆ ತರುವಲ್ಲಿ ಯಶಸ್ವಿಯಾದರು. ನಾಲ್ಕೂ ದಿಕ್ಕುಗಳಿಂದ ಅಸಡ್ಡೆಯ ಚಕ್ರವ್ಯೂಹದಲ್ಲಿ ಸಿಲುಕಿದ್ದ ಈ ಅರೆಹೊಟ್ಟೆ ಅಭಿಮನ್ಯುಗಳು ಮಂಗವನ್ನು ಚಕ್ರವ್ಯೂಹದಲ್ಲಿ ನೂಕಿ, ಚಾಟರ ಬಿಲ್ಲಿನಿಂದ ಒಂದೇ ಸವನೆ ಗುಂಡುಗಳ ಮಳೆಗರೆಯಲಾರಂಭಿಸಿದರು. ಕೆಲವನ್ನು ತಪ್ಪಿಸಿಕೊಂಡು; ಮತ್ತೆ ಕೆಲ ಗೋಲಿಯಿಂದ ಪೆಟ್ಟು ತಿಂದ ಮಂಗ ಬಲೆಗೆ ಜಾರಿ ಬಿತ್ತು. ಕೂಡಲೇ ಅದನ್ನು ಹಗ್ಗದ ಮೂಲಕ ಮೇಲೆತ್ತಿ ಬಂಧಿಸಲಾಯಿತು. ಕೆಳಕ್ಕಿಳಿಸಿ ದೂರದಿಂದಲೇ ಪೂಜೆ ಮಾಡಿ, ಹರಿತವಾದ ಭರ್ಚಿಯಿಂದ ಇರಿದು ಕೊಲ್ಲಲಾಯಿತು. ಪಾಪ ಬಡಪ್ರಾಣಿಯ ರಕ್ತ ಒಣಗಿ ಚೆಲ್ಲಿದ್ದ ಗಿಡದ ಎಲೆಗಳ ಮೇಲೆ ತೊಟ್ಟಿಕ್ಕಿ, ಹನಿ ಹನಿಯಾಗಿ ಭೂಮಿಗೆ ತರ್ಪಣವೀಯುತ್ತಿದ್ದ ದೃಷ್ಯ ನಮ್ಮ ಕರುಳು ಹಿಚುಕಿತ್ತು. 

 

ಅಂತೂ ಮಾನವನ ದುರಾಸೆಗೆ, ಮೂರ್ಖತನಕ್ಕೆ ಅಮಾಯಕ, ಮೂಕ ಲಂಗೂರ್ ಬಲಿಯಾಯಿತು. ಚಿತ್ರ: ಮಿಂಚು ಚೈತನ್ಯ ಷರೀಫ್.

 

ಲಗುಬಗೆಯಿಂದ ಮಂಗದ ಜೀವ ತೆಗೆದ ಈ ಜನ, ಅಂತಿಮವಾಗಿ ನಮಸ್ಕರಿಸಿ ಚರ್ಮ ಸುಲಿದು ಗಿಡವೊಂದಕ್ಕೆ ನೇತು ಹಾಕಿದರು. ಮಾಂಸ ಬೇರ್ಪಡಿಸಿ ಪಾತ್ರೆಯೊಂದರಲ್ಲಿ ಹಾಕಿ ಕುದಿಸಲು ನಿಂತರು. ಸಾಕಷ್ಟು ಉರುವಲು ಸುಟ್ಟು, ಅಂತಿಮವಾಗಿ ತಮ್ಮಲ್ಲಿದ್ದ ವಿವಿಧ ಪೊಟ್ಟಣಗಳಿಂದ ರುಚಿಗೆ ಬೇಕಾಗುವ ಮಸಾಲೆ ಸಾಮಾನು ಅದಕ್ಕೆ ಸುರಿದರು. ಹತ್ತಕ್ಕೂ ಹೆಚ್ಚು ಜನರಿದ್ದ ಆ ಟೋಳಿಯಲ್ಲಿ ಮಾಂಸ ಬೇಯುವ ವರೆಗೆ ಕಾಯುವ ತಾಳ್ಮೆ ಇದ್ದಂತೆ ನನಗೆ ಕಾಣಲಿಲ್ಲ. ಕಟ್ಟಿಗೆಯನ್ನೇ ಸೌಟು ಮಾಡಿ, ಕುದಿಯುತ್ತಿದ್ದ ಮಾಂಸ ತಿರುಗಿಸುವ ನೆಪದಲ್ಲಿ ಎಲ್ಲರೂ ಚೂರು ರುಚಿ ನೋಡಿ; ಕುದಿಯುವ ವೇಳೆಗೆ ಅರ್ಧದಷ್ಟು ಹಸಿಯಾದುದನ್ನೇ ಪರೀಕ್ಷೆಯ ಹೆಸರಿನಲ್ಲಿ ಹೊಟ್ಟೆಗೆ ಇಳಿಸಿದ್ದರು! ಒಂದು ಹಂತದಲ್ಲಿ ಹೆಚ್ಚು ಬಾರಿ ಸೌಟು ತಿರುವಿದವನಿಗೂ ಕಡಿಮೆ ಬಾರಿ ಸೌಟು ತಿರುವಿದವನಿಗೂ ಜಗಳ ಬಂದು ಕೈಕೈ ಮೀಲಾಯಿಸುವ ಹಂತಕ್ಕೂ ಹೋದರು. ನಾವೆಲ್ಲ ಮೂಕ ಪ್ರೇಕ್ಷಕರಾಗಿ ಶಾಕ್ ಟ್ರೀಟಮೆಂಟ್ ನಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದೆವು.

 

ನಮಗೂ ‘ಟೇಶ್ಟ್’ ನೋಡುವಂತೆ ಹಿರಿಯ ‘ನಳ’ನೊಬ್ಬ ಕರೆದ. ದೂರದಿಂದಲೇ ನಾನು ಕೈಮುಗಿದು ಅವನನ್ನು ಮನಸಾ ಶಪಿಸಿದೆ. ಗುಂಪಿನ ಮುಖಂಡ ನನ್ನ ಬಳಿಗೆ ಬಂದು ‘ಕಪಿಯ ಸುಲಿದ ಚರ್ಮ ಬೇಕೆ?’ ಎಂದ. ಬೇಡವೆಂದು ನಯವಾಗಿ ತಿರಸ್ಕರಿಸಿದೆ. ‘ಮುಚ್ಚ ಬೇಟೆ ಚರ್ಮ ಯಾರಿಗ್ ಬೇಕ್ರೋ’ ಎಂದು ಏರಿದ ಧ್ವನಿಯಲ್ಲಿ, ಹರಾಜು ಹಾಕುವವನಂತೆ ಕೇಳಿದ. ಒಬ್ಬ ಎದ್ದು ಬಂದು ಐದು ರೂಪಾಯಿ ಪಾವಲಿ ನೀಡಿ ಅದನ್ನು ಪಡೆದ. ಅವರು ಬಾರಿಸುವ ಸಾಂಪ್ರದಾಯಿಕ ವಾದ್ಯಕ್ಕೆ ಅದನ್ನು ತೊಡಿಸುವುದಾಗಿ, ಇನ್ನೊಂದು ಬಾಜು ಚೀಲ ಹೆಣೆದುಕೊಳ್ಳುವುದಾಗಿ ಹೇಳಿದ.  ಕ್ಷಣದಲ್ಲಿ ಅಡುಗೆ ಮಾಡಿದ ಜಾಗೆ ಯಾರೂ ಗುರುತಿಸಬಾರದು ಎಂಬಂತೆ ಮಣ್ಣು ಮುಚ್ಚಿ, ಎಲೆಗಳನ್ನು ಹರಡಿ ಕುರುಹುಗಳೇ ಕಾಣ್ದಂತೆ ಮಾಡಿದರು. ಹೀಗೆ ಮತ್ತೆಷ್ಟು ಕಡೆ ಮಾಡಿದ್ದಾರೋ ನಾ ಕಾಣೆ?

 

‘ಸಾಕು ನೇಡೀರೋ..’ ಎಂದು ನನ್ನೊಟ್ಟಿಗೆ ಇದ್ದವರಿಗೆ ಹೇಳಿದೆ. ಬೇಟೆ ಆರಂಭವಾಗುವಾಗ ನೋಡಬೇಕು ಎಂಬ ಕುತೂಹಲ ನಮ್ಮಲ್ಲಿ ಮನೆ ಮಾಡಿತ್ತು. ಮುಸುವನ ಸಾವಿನೊಂದಿಗೆ ಅಂತ್ಯಗೊಂಡಾಗ ನಾವು ಈ ಘಟನೆಯ ಭಾಗವಾಗಬಾರದಿತ್ತು ಎಂದಿತು  ಭಾರವಾಗಿದ್ದ ಮನಸ್ಸು. ಎರಡಕ್ಕೂ ನಾನು ಸಾಕ್ಷಿ ಎಂಬುದು ಸತ್ಯ; ಸೋಜಿಗ. ಅಪರಾಧಿ ಪ್ರಜ್ಞೆ ಈಗ ನನ್ನನ್ನು ಕಾಡುತ್ತಿದೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹರ್ಷವರ್ಧನ್ ಅವರೇ, ಪಾಪ ಮುಸವಗಳು! ನಿಮ್ಮ ಕಣ್ಣ ಎದುರು ನಡೆದಿದ್ದು ಒಂದು ಬೇಟೆ. ಇಂಥವು ಎಷ್ಟು ನಡೆಯುತ್ತಿವೆಯೋ ಅನುದಿನ :( ಶಾಮಲ

ಆತ್ಮೀಯ ಶಾಮಲ ಅವರೆ, ನಮ್ಮ ಭಾಗದಲ್ಲಿ ಜಾನಪದರ ಒಂದು ಪ್ರಚಲಿತ ಮಾತಿದೆ. ‘ಕಣ್ ಮರಿ..ಮಣ್ ಮರಿ’; ಅರ್ಥ..ಕಣ್ಣಿಗೆ ಬೀಳದೇ ಹೋದದ್ದು, ಸತ್ತ ಮೇಲೆ ಕಂಡದ್ದು ಎರಡೂ ಒಂದೇ! ಎಂಬ ಮಾತು. ನಾನು ಆ ಘಟನೆಯ ಭಾಗ ಆಕಸ್ಮಿಕವಾಗಿ ಆಗಿ ಹೋದೆ. ಆದರೆ ಜೇನುಕುರುಬರ ಬದುಕಿನ ಹೊಸ ಅಧ್ಯಾಯ ಅರಿತು ಕೊಂಡಂತಾಯಿತು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದ.

ಕೆವಿನ್ ಕಾರ್ಟರ್ ಲೆವೆಲಿನಲ್ಲಿ ಇದು ಇಲ್ಲ ಬಿಡಿ. ಅದನ್ನು ನಿಜ ನೋಡಿದವವನ ಮನಸ್ಥಿತಿ ಹೇಗಿರಬಹುದು ಎಂದು ಊಹಿಸಲೂ ಆಗುವುದಿಲ್ಲ. ಡಿಪ್ರೆಶನ್ ಬರುವಂಥದ್ದೆ.

ಆತ್ಮೀಯ ವಿಕ್ರಾದಿತ್ಯಾ, ತಮ್ಮ ಹಾ(ರಿ)ರೈಕೆ ಯಂತೆ ನನಗೂ ಪುಲಿಟ್ಜರ್ ಸಿಕ್ಕರೆ ಕೇವಿನ್ ಕಾರ್ಟರ್ ನಂತೆ ನಾನು ಮಾಡಬಹುದೇನೋ? ಅಸಾಧ್ಯವೇನಲ್ಲ..ಕಾದು ನೋಡೋಣ. ಪ್ರತಿಕ್ರಿಯೆಗೆ ಧನ್ಯವಾದ.

ಛೆ ಪಾಪ..ಅವು..ಅದ್ರು ನೀವು ತಡಿಬೋದಿತ್ತೇನೊ ಅನ್ನುಸ್ತು..ಆದ್ರು ಇವತ್ತಲ್ಲ ನಾಳೆ..ಅದೆ ಕಥೆಅದುನ್ನ ಯಾರಿಂದ ತಡಿಯೊಕ್ಕಾಗುತ್ತೆ..ನೀವು ಗಟ್ಟಿ ಕಣ್ರಿ..ನೆನುಸ್ಕೊಂಡ್ರೆ ಭಯ ಆಗುತ್ತೆ..ನೀವು ವಿವರಿಸಿದ ಭೇಟೆಯನ್ನ..

ಸು.ಶ್ರೀ ಮಾಲತಿ ಅವರೆ, ನಾನು ತಡೆಯ ಹೋಗಿದ್ದರೆ ಅವರ ಬದುಕಿನ ಅನೇಕ ನಿಗೂಢಗಳು ಅನಾವರಣಗೊಳ್ಳುತ್ತಿರಲಿಲ್ಲ. ಮೇಲಾಗಿ ನಾನು ಸಹ ಅವರ ಕೌಶಲ್ಯ ತಿಳಿಯಲು ಸಾಥ್ ಕೊಟ್ಟಂತಾಯಿತು. ನನ್ನ ಕಣ್ಣ ಮುಂದೆ ನಡೆದ ಘಟನೆ ತಡೆಯಬಹುದಾಗಿತ್ತು ಅನ್ನುವುದಂತೂ ಸತ್ಯ. ಪ್ರತಿಕ್ರಿಯೆಗೆ ಧನ್ಯವಾದ.

ಹರ್ಷವರ್ಧನರೆ, ಶಕ್ತಿಶಾಲಿಯು ಬಲಹೀನರನ್ನು ಕೊ೦ದು ಬದುಕುವ ಜಗದ ನಿಯಮಕ್ಕೆ ನೀವು ಸಾಕ್ಷಿಯಾದಿರಿ ಅಷ್ಟೆ! ಆದರೂ ಮ೦ಗಗಳನ್ನು ಕೊ೦ದು ತಿನ್ನುವ ಜೇನುಕುರುಬರ ಹವ್ಯಾಸ ಆಘಾತಕಾರಿ.

ಸರ್, ಇದೊಂದು ಮೋಜಿನ ಹವ್ಯಾಸ ಅವರಿಗೆ. ನಮ್ಮಂತೆ ಮೊಬೈಲ್, ಡಿಶ್ ಟಿ.ವಿ., ವಿಡಿಯೋಗೇಮ್ ಯಾವುದೂ ಇಲ್ಲ ಅವರಿಗೆ. ಹಾಗಾಗಿ ಬೇಟೆಯನ್ನೇ ಮನೋರಂಜನೆಯಾಗಿ ಸ್ವೀಕರಿಸಿದ್ದಾರೆ. ಮೇಲಾಗಿ ಇದು ಅವರ ಬದುಕಿನ ಭಾಗ. ಸಂಪ್ರದಾಯದ ಅವಿಭಾಜ್ಯ ಅಂಗ. ನೀವು ನಂಬಿ..ಆ ಗುಂಪಿನಲ್ಲಿ ಕೆಲವರು ಗಂಡು ಮಂಗನಂತೆ ಕೂಗಿ ಹೆಣ್ಣು ಮಂಗಗಳ ಚಿತ್ತಾಕರ್ಷಣೆ ಮಾಡಿ, ತಾವು ನಿಂತ ಸ್ಥಳದ ವರೆಗೆ ಅವು ಬರುವಂತೆ ಮಾಡುತ್ತಿದ್ದುದು ನನಗೆ ವಿಶೇಷ ಜ್ಞಾನವಾಗಿ ಕಂಡಿತು. ನಮಗೆ ಆಘಾತಕಾರಿಯಾಗಿ ಕಾಣುವುದು, ಇತರರಿಗೆ ಸಹಜವಾಗಿ ಕಾಣಿಸುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ನಮ್ಮ ಭಾಗದಲ್ಲಿ ಶಿಳ್ಳೆಕ್ಯಾತ ಜನಾಂಗಕ್ಕೆ ಸೇರಿದವರು ಸಾಕಿದ ಬೆಕ್ಕುಗಳನ್ನು ಹೊತ್ತೊಯ್ದು ತಿನ್ನುತ್ತಾರೆ ಎಂದು ನನ್ನ ಅಜ್ಜಿ ಹೇಳುತ್ತಿದ್ದುದು ನನ್ನ ಗಮನಿಕ್ಕಿದೆ. ಹೆದರಿ ನಾನು ಸಾಕಿದ ಬೆಕ್ಕಿಗೆ ಹಗ್ಗ ಕಟ್ಟಿ ಮಂಚಕ್ಕೆ ಗಂಟು ಹಾಕಿದ್ದು ನೆನೆಪಿದೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದ.

ಮುಸುವಗಳನ್ನು ತಿನ್ನುವವರು ಇದ್ದಾರೆಂದು ಗೊತ್ತಿತ್ತು. ಆದರೆ ಅವನ್ನೂ ತಿನ್ನುತ್ತಾರಲ್ಲಾ ಎಂದು ಜಿಗುಪ್ಸೆಯೂ ಆಗುತ್ತಿತ್ತು.

ಸರ್, ಕೊಪ್ಪಳದ ಬಳಿ ಒಬ್ಬ ರಾಮಪ್ಪ ಅಂತ ಇದ್ದಾರೆ. ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ವೃದ್ಧನಾತ. ಹೊಲಗಳಲ್ಲಿ ಬೆಳೆ ಬಂದ ಅಥವಾ ಬಿತ್ತಿದ ಸಂದರ್ಭದಲ್ಲಿ ಇಲಿಗಳ ಉಪಟಳ ಹೆಚ್ಚಾದರೆ ಈ ‘ಇಲಿ ರಾಮಪ್ಪ’ನಿಗೆ ಬುಲಾವ್ ಬರುತ್ತದೆ. ಉಪಟಳ ಹೆಚ್ಚಾದ ಹೊಲದಲ್ಲಿ ವಾಸ್ತವ್ಯ ಹೂಡಿ, ರಾಮಪ್ಪ ಪ್ರತಿಯೊಂದು ಬಿಲವನ್ನೂ ಜಾಲಾಡಿ, ಅವು ಸಂಗ್ರಹಿಸಿದ ಕಾಳಿನ ಕಣಜ ಸೂರು ಮಾಡುತ್ತಾನೆ. ಈ ಹಂತದಲ್ಲಿ ಕೈಗೆ ಸಿಕ್ಕ ಇಲಿಗಳನ್ನು ಅನಾಯಾಸವಾಗಿ ಕೊಂದು ಕಟ್ಟಿಗೆಗೆ ಕಟ್ಟುತ್ತಾನೆ. ರಾತ್ರಿಯ ವೇಳೆ ಈ ಇಲಿಗಳನ್ನೇ ಕುದಿಸಿ, ಸಾಂಬಾರು ಮಾಡಿಕೊಂಡು ಹೆಕ್ಕಿತಂದ ಕಾಳುಗಳನ್ನು ಬೇಯಿಸಿ ಅದರೊಂದಿಗೆ ಊಟಮಾಡುತ್ತಾನೆ! ನೀವು ನಂಬಿ ಆತ ಇಲ್ಲಿಯವರೆಗೂ ದವಾಖಾನೆ ಮುಖ ನೋಡಿಲ್ಲ. ಹೀಗೂ ಉಂಟಲ್ಲ! ಇದನ್ನು ಮೌಢ್ಯ, ಮೂರ್ಖತನ, ಅಜಾಡ್ಯ, ಮಾನಸಿಕ ಅಸ್ವಸ್ಥತೆ, ಸಂಪ್ರದಾಯದ ಹೆಸರಿನಲ್ಲಿ ಶೋಷಣೆ, ಅನಕ್ಷರತೆ, ಬಡತನ ಏನು ಬೇಕಾದರೂ ಕರೆಯಿರಿ; ಆತ ಮಾತ್ರ -‘ಇಲಿ-ಹೆಗ್ಗಣ ರಾಮಪ್ಪ’! ಅವರ ತಂದೆಯೂ ಇದೆ ಕಸುಬು ಮಾಡುತ್ತಿದ್ದರು!

ಆತ್ಮೀಯ ಪಾಲಚಂದ್ರ, ಸಮಾಜದ ಮುಖ್ಯವಾಹಿನಿಗೆ ಅವರನ್ನು ಸೇರಿಸಬೇಕಾದ ನಾಗರಿಕ ಸಮಾಜ ಮತ್ತು ಆ ಸಮಾಜದ ಪ್ರತಿನಿಧಿಗಳು ವ್ಯವಸ್ಥಿತವಾಗಿ ಹೀಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ನನ್ನದು. ಕಾಡಿನಲ್ಲಿಯೇ ಹುಟ್ಟಿ, ಕಾಡಿನಲ್ಲಿಯೇ ಬೆಳೆದು, ಕಾಡಿನ ಉತ್ಪನ್ನಗಳ ಮೇಲೆಯೇ ಅವಲಂಬಿಸಿ ಬದುಕು ನೂಕಿ, ವನಸುಮದೊಳಗೆ ಮಣ್ಣಾಗುವ ಈ ಕಾಡಿನ ಕುಸುಮಗಳ ಆಚಾರ-ವಿಚಾರ, ಸಂಪ್ರದಾಯಗಳನ್ನು ನಾವು ಗುರುತಿಸಿ, ಅವರ ಮನಗೆಲ್ಲಬೇಕಿದೆ. ಅವರ ಪುನರ್ವಸತಿಗೆ ಪ್ರಾಮಾಣಿಕ ಪ್ರಯತ್ನಗಳು ಈ ನಾಡಿನ ಆಡಳಿತ ಸೂತ್ರ ಹಿಡಿದವರಿಂದ ಆಗಬೇಕಿದೆ. ಪರಿಹಾರಾತ್ಮಕವಾಗಿ ಸಮಸ್ಯೆಯನ್ನು ಅರ್ಥೈಸಿಕೊಂಡರೆ ‘ಲಾಜಿಕಲ್ ಎಂಡ್’ ತಲುಪಲು ಸಾಧ್ಯ..ಇಲ್ಲದೇ ಹೋದರೆ ಇದೊಂದು ಹೊಸ ‘ನಕ್ಸಲ್’ ಸಮಸ್ಯೆಯಂತೆ ರಿಪೇರಿಯಾಗದ ಸಮಸ್ಯೆಯಾಗಿ, ಅನೇಕ ರಾಬಿನ್ ಹುಡ್ ಗಳು ಹುಟ್ಟಬಹುದು! ದೂರು ದಾಖಲಿಸಿದರೆ ನನ್ನೊಟ್ಟಿಗೆ ಅವರಿಗೂ ಶಿಕ್ಷೆಯಾಗಬೇಕು ಅಷ್ಟೇ. ನಾನು ಅವರ ‘ಐಡೆಂಟಿಟಿ’ ಬಿಟ್ಟುಕೊಡಲಾರೆ. ಕ್ಷಮಿಸಿ.

ಹರ್ಷವರ್ಧನ್ ಅವರೇ, ಸಮಾಧಾನ ಮಾಡಿಕೊಳ್ಳಿ. ಅಪರಾಧಿ ಪ್ರಜ್ಞೆ ಪಡಬೇಡಿ. ಅಲ್ಲಿ ಏನು ಮಾಡೊಕೂ ಆಗೊದಿಲ್ಲ.. ಕಾಡಲ್ಲಿ ಕಾಡು ಜನರನ್ನು ಎದುರು ಹಾಕಿಕೊಳ್ಳಲೂ ಸಾಧ್ಯವಿಲ್ಲ. ಅಥವಾ ನಮ್ಮ ಹಿತೋಪದೇಶಗಳಿಗೂ ಅವರು ಕಿವಿಗೊಡೊಲ್ಲ.ನೀವು ಹೋದ ಮೇಲಾದರೂ ಅವರು ಕೊ೦ದು ತಿನ್ನುತ್ತಿದ್ದರು. ಯಾರೆ ನಿಮ್ಮ ಜಾಗದಲ್ಲಿದ್ದರೂ ಮೂಕಪ್ರೇಕ್ಷಕರಾಗಬೇಕಾಗುತಿತ್ತು. ನಿಮ್ಮ ಅನುಭವ ಲೇಖನ ಓದುವಾಗ ಆ ಘಟನೆ ನನ್ನ ಕಣ್ಣೆದುರೇ ನಡೆದಿರುವ೦ತೆ ಭಾಸವಾಗುತ್ತಿತ್ತು. ಬಹಳ ಚೆನ್ನಾಗಿ ಬರೆದಿದ್ದೀರ..ನನ್ನಿ.