ವಿಶೇಷ ಯಕ್ಷಗಾನ ಪ್ರಸಂಗ

To prevent automated spam submissions leave this field empty.

ನಮ್ಮ ಹಳ್ಳೀಲಿ ಗಣಪತಿ ಮಡಗಿದ್ವಿ. ಸ್ಯಾನೆ ಡೆಕೋರೇಷನ್. ಎಲ್ಲೆಂದ್ರೆ ಅಲ್ಲಿ ಲೈಟಿಂಗ್ಸ್. ಹೂವು. ದೊಡ್ಡ ಗಣಪತಿ ಇಟ್ಟಿದ್ವಿ. ಗಣಪತಿ ತರೋಬೇಕಾದ್ರೆ ಸುಬ್ಬ ಸಿಕ್ಕಾಕೊಂಡು ಒದ್ದಾಡ್ತಿದ್ದ. ಹೊರಗೆ ಎಳದ್ರೆ ಮಗ ಗಣಪತಿ ಕಾಲು ಸಮೇತ ಬಂದಿದ್ದ. ಆಮ್ಯಾಕೆ ಮಣ್ಣು ಹಾಕಿ ಮೆತ್ತಿದ್ವಿ. ಪಟಾಕಿಗೆ ಅಂತಾ ಪೆಸೆಲ್ ಸವಂಡ್ ಮಾಡ್ಸಿದ್ವಿ. ಇಲ್ಲಿ ಹೊಡದ್ರೆ ಪಕ್ಕದ ಊರಗೆ ಕೇಳೋದು. ಸುಬ್ಬ ಎರಡು ಬಾಂಬ್ ಜೋಡಿಸಿ ಹಚ್ಚಿದ್ದ. ಒಂದು ಢಮ್ ಅಂತು. ಇನ್ನೊಂದು ಢಮ್ ಅನ್ಲೇ ಇಲ್ಲ. ಗೌಡಪ್ಪನ ಕಾಲು ಕೆಳಗೆ ಬಂದು ಢಮ್ ಅಂದಿತ್ತು. ಸಿಂಗಾರ ಮಾಡ್ಕಂಡ್ ಬಂದಿದ್ದ ಗೌಡಪ್ಪ ಭಿಕ್ಷಕರು ತರಾ ಆಗಿದ್ದ. ಪಂಚೆ ಹರಿದು ಮುಖ ಕಪ್ಪಾಗಿತ್ತು. ಬಾಯಿ ಬುಟ್ರೆ ಪಟಾಕಿ ಹೊಗೆ ಬರೋದು. ಪೆಂಡಾಲ್ ನಾಗೆ ಮಗಂದು ಎಲ್ಲಿ ಮುಟ್ಟಿದ್ರೂ ಕರೆಂಟ್ ಹೊಡೆಯೋದು. ಎಲ್ಲಾ ಕಡೆ ಬೋರ್ಡ್. "ಯಾರೂ ಕಂಬ ಮುಟ್ಟಬೇಡಿ. ನಿಮ್ಮ ಜೀವಕ್ಕೆ ನಾವು ಜವಾಬ್ದಾರರಲ್ಲ" ಅಂತಾ. ಪೊಲೀಸಪ್ಪ ಸ್ಟೈಲಾಗಿ ಕಂಬ ಹಿಡ್ಕೊಂತಿದ್ದಾಗೆನೇ ಏಏಏಏಏಏಏಏನ್ರಲಾ ಇದು. ಅಂತಿದ್ದಾಗೆನೇ 108ರಲ್ಲಿ ಆಸ್ಪತ್ರೆಗೆ ಹಾಕಿದ್ವಿ. ಲೈಟ್ ಹಾಕಿದ್ದ ಪರಮೇಸಿ ಮಾತ್ರ ಮಾಯ ಆಗಿದ್ದ.

ಕಾರ್ಯಕ್ರಮಕ್ಕೆ ಅಂತಾ ಒಂದು 50ಸಾವಿರ ವಸೂಲಿ ಆಗಿತ್ತು. ಅದ್ರಾಗೆ ಎಣ್ಣೆಗೆ 20ಸಾವಿರ ಖರ್ಚಾಗಿತ್ತು. ಸರಿ ಆರ್ಕೆಸ್ಟ್ರಾ ಮಡಗವಾ ಅಂದಾ ಸುಬ್ಬ. ಬೇಡ ಕನ್ಲಾ ಅದೇನೋ ಯಕ್ಷಗಾನ ಅಂತೆ ಅದನ್ನ ಮಾಡ್ಸವಾ ಅಂದ ಗೌಡಪ್ಪ. ಗೌಡ್ರೆ ತೆಂಕುತಿಟ್ಟೋ ಅಥವಾ ಬಡಗುತಿಟ್ಟೋ ಅಂದೆ. ಇವೇನ್ ಏನ್ಲಾ ಹಿಟ್ಟು ಅಂತಾವ್ನೆ ಅಂದ. ಸರಿ ಮಂಗಳೂರು ಕಡೆ ಯಕ್ಷಗಾನಕ್ಕೆ ದುಡ್ಡು ಕೊಟ್ಟು ಬುಕ್ ಮಾಡಿದ್ದು ಆಯ್ತು. ಓಯ್ ಯಾವತ್ತು ಯಕ್ಷಗಾನ. ನಮಗೆ ತಿನ್ನಲಿಕ್ಕೆ, ಹೋಗಲಿಕ್ಕೆ ಎಲ್ಲಾ ಸರಿ ಉಂಟಲ್ಲೋ ಅಂದ ಮ್ಯಾನೇಜರ್. ತಿನ್ನಲಿಕ್ಕೆ ಮನೆ ಉಂಟು ಹೋಗಲಿಕ್ಕೆ ಬಯಲು ಉಂಟು, ಎಲ್ಲಾ ಸರಿ ಐತೆ ಬಾರ್ಲಾ ಅಂದ ಗೌಡಪ್ಪ. ಸರಿ ಯಕ್ಷಗಾನ ದಿನ ಬಂದೇ ಹೋಯ್ತು.

ಎಲ್ಲಾ ಸಂಜೇಕೆ ಬಂದು ಡ್ರೆಸ್ ಮಾಡ್ಕಂತಾ ಇದ್ರು. ಗೌಡಪ್ಪನ ಕೆಟ್ಟ ಚಾಳಿ ಎಲ್ಲಿ ಹೋಯ್ತದೆ. ಹೋದ. ಗಂಡು ಮಕ್ಕಳು ಹೆಂಗಸರು ಡ್ರೆಸ್ ಹಾಕ್ಕೊಂಡು ಬೀಡಿ ಹೊಡಿತಾ ಕೂತಿದ್ವು. ಲೇ ಕೋಮಲಾ ಏನ್ಲಾ ಇದು. ಹೆಣ್ಣು ಐಕ್ಳು ಬೀಡಿ ಹೊಡಿತಾವೆ ಅಂದ. ಆಹಾ ಗೌಡ ಗುಂಡಿಗೆ ಬಿದ್ದ. ಹೂಂ ಗೌಡ್ರೆ ಅಲ್ಲೆಲ್ಲಾ ಅಂಗೆಯಾ. ಲೇ ಇವಳೇನ್ಲಾ ಗಂಡಸರು ಶೌಚಾಲಯಕ್ಕೆ ಹೋಯ್ತಾವ್ಳೆ. ಅದ್ರಾಗೆ ಒಬ್ಬ ಬೆಳ್ಳಗೆ ಕುಳ್ಳಗೆ ಇದ್ದ. ಗೌಡ ಫುಲ್  ಅವನ ಹಿಂದೆಯೇ ಬಿದ್ದಿದ್ದ. ಏನಮ್ಮಿ ಮದುವೆ ಆಗಯ್ತಾ. ಯಾವ ಊರು ಎಲ್ಲಾ ವಿಚಾರಿಸ್ತಾ ಇದ್ದ. ಅಟ್ಟೊತ್ತಿಗೆ ಯಾವನೋ ರಾಕ್ಷಸನ ವೇಸದೋನು ಬರ್ತಿದ್ದಾಗೆನೇ ಗೌಡಪ್ಪ ಓಡಿ ಹೋಗಿದ್ದ. ಯಾಕ್ ಗೌಡ್ರೆ. ಲೇ ನಮ್ಮೂರು ಮಾರಿ ಜಾತ್ರೆಗೆ ಎಮ್ಮೆ ಕಡಿಯೋನು ಇದ್ದಂಗೆ ಇದಾನಲ್ಲಾ ಅಂದ.

ಹೆಣ್ಣು ವೇಸ ಹಾಕಿದ್ದ ಗಂಡಸು ಆಗಲೇ ಗೌಡಪ್ಪನ ಪಟಾಯಿಸ್ತ ಇದ್ದ. ಸಿಗರೇಟು, ಎಣ್ಣೆ ಎಲ್ಲಾದಕ್ಕೂ ಕಾಸು ಕಸ್ಕೊಂಡಿದ್ದ. ಸರಿ ಪ್ರಸಂಗ ಸುರುವಾಯ್ತು. ಏಏಏಏಏಏಏಏಏಏಏ ಅಂತಿದ್ದಾಗೆನೇ ನಮ್ಮೂರು ಐಕ್ಳು ಸ್ಟೇಜ್ ಬಿಟ್ಟು ಒಂದು ಫರ್ಲಾಂಗ್ ದೂರದಾಗೆ ಕುಂತಿದ್ವು. ಏನ್ಲಾ ಅವರು ಮಾತಡೋದು. ಅದು ಅವರ ಭಾಸೆ ಬಿಡಿ. ನೆಲದ ಮ್ಯಾಕೆ ಕೂತ್ಕೊಂಡು ತಿರುಗಬೇಕು ಎರಡು ದಪ ರಾಕ್ಷಸ ಬಿದ್ದ. ಯಾಕಲಾ. ಏ ಅದೂ ಶಾಲೆದು ಬೆಂಚು. ಮಳೆ ಇತ್ತು ಸುಬ್ಬಂಗೆ ತೆಗಿಯಲೇ ಅಂದ್ರೆ ತೆಗಿದಿಲ್ಲಾ ಗೌಡ್ರೆ. ಬಾಯನಾಗೆ ರಕ್ತ ಬರ್ತಾ ಇತ್ತು. ಗೊತ್ತಾಗಲಿಲ್ಲ. ಯಾಕೇಂದ್ರೆ ತುಟೀಗೆ ಕೆಂಪು ಬಣ್ಣ ಹಚ್ಚಿದ್ದ. ಬಾಯಿ ಬಿಟ್ಟಾಗಲೇ ರಕ್ತ ಅಂತಾ ಗೊತ್ತಾಗಿದ್ದು. ಲೇ ಸುಬ್ಬ. ಇಗೋ ಇಲ್ಲಿ ಎಂದು ಬಾಯಿಗೆ ಅರಿಸಿನ ತುರುಕಿದ್ದ. ಏ ಥು.

ಅಟ್ಟೊತ್ತಿಗೆ ಗೌಡಪ್ಪನ ಪೀಸ್ ಸ್ಟೇಜ್ ಗೆ ಬಂತು ಆಹಾ ನೋಡಲಾ ಹುಡುಗಿಯಾ ಅಂದಾ ಗೌಡಪ್ಪ. ಹೆಣ್ಣು ವೇಸದ ಗಂಡು ಡೈಲಾಗ್ ಹೊಡೆದು ಒಳಗೆ ಹೋಯ್ತು. ಗೌಡಪ್ಪ ಆಗಲೇ ಡ್ರೆಸ್ಸಿಂಗ್ ರೂಮ್ನಾಗೆ ಇದ್ದ. ಬಂದೋನೆ. ಹೋಗಣಾ ನಡೀರಲಾ. ಯಾಕ್ರೀ ಗೌಡ್ರೆ. ನಡೀರಲ್ಲಾ ಅಂದ್ ಮ್ಯಾಕೆ ಹೋಗಬೇಕು ಅಟೆಯಾ. ಸರಿ ಹೊಂಟ್ವಿ. ಅಲ್ಲಾ ಕನ್ಲಾ ನಾನು ಹುಡುಗಿ ಅಂತಾ ಹೋಗಿದ್ರೆ ಎಂತಾ ಗತಿ ಆಯ್ತಿತ್ತಲಾ. ಯಾಕ್ರೀ. ಒಳಗೆ ಹೋಗ್ತಿದ್ದಂಗೆನೇ ಓಡಿ ಹೋಗಿ ತಬ್ಗಂಡೆ. ಏನೋ ಠಳ್. ಅಂತು ನನ್ ಎದ್ಯಾಗೆ ಗಾಜಿನ ಚೂರು. ಏನ್ಲಾ ಇದು. ಅಂದಿದ್ದಕ್ಕೆ ನಿಮ್ಮಂತೋರು ಹಿಂಗೆ ಮಾಡ್ತೀರಾ ಅಂತಾ ಗೊತ್ತು. ಅದಕ್ಕೆ ಮೆನೆಯಿಂದ ಬರ್ನಾಗಿದ್ದು 100ಕ್ಯಾಂಡಲ್ ಬಲ್ಬನ್ನು ಇಟ್ಟುಕೊಂಡಿರುತ್ತೇವೆ. ಅಂದಾ. ಅಯ್ಯೋ ನಿನ್ ಮನೆ ಕಾಯೋಗ ಅಂತಾ ನೋಡ್ತೀನಿ. ಬನೀನ್ ಎಲ್ಲಾ ರಕ್ತ ಕನ್ಲಾ. ಲೇ ಸುಬ್ಬ ಇಗೋ ಇಲ್ಲಿ ಅಂದು ಗೌಡಪ್ಪನ ಎದೆಗೆ ಒಂದು 100ಗ್ರಾಂ ಅರಿಸಿನ ಬಳ್ದ. ಲೇ ಬಡ್ಡೆ ಹೈದ ಡ್ರೆಸ್ ತೆಗೆದು ಚೆಡ್ಡಿ ಮೇಲೆ ಕೂತಾಗೆ ಕನ್ಲಾ ಅವನು ಗಂಡಸು ಅಂತಾ ಗೊತ್ತಾಗಿದ್ದು. ಇಲ್ಲಾಂದ್ರೆ ಅವನ ಹೆಸರಿಗೆ ಅರ್ಧ ಎಕರೆ ತೋಟ ಬರೀತಿದ್ದೆ ಕನ್ಲಾ. ಇವಾಗ ಯಕ್ಸಗಾನ ಅಂದರೆ ಸಾಕು ಗೌಡಪ್ಪ ಬೇಡ ಬೇಡ ಬೇಡ ಬೇಡ ಬೇಡ ಅಂತಾನೆ. ಆರ್ಕೆಸ್ಟ್ರಾ ಕರ್ಸಲ್ರಾ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆದ್ರೂ ಗೌಡ್ರು ಬಗ್ಗೆ ಹೆಮ್ಮೆ ಇದೆ ಬಿಡ್ರಿ.. ಎಷ್ಟೆಲ್ಲಾ ಹೊಸ ಪ್ರಯೋಗ ಮಾಡಿಸ್ತಾ ಇದಾರೆ ನಿಮ್ಮೂರಲ್ಲಿ.. ಅಂದಹಾಗೇ ಹೊಸ ಕೃಷಿ ಪ್ರಯೋಗ ಏನೂ ನಡೆಸ್ತಾ ಇಲ್ವ?

ನಮ್ಮ ಗೌಡಪ್ಪ ಹೊಸ್ದಾಗಿ ಬಿತ್ತನೆ ಕಾರ್ಯ ಸುರು ಮಾಡವ್ನೆ ಅದರ ಬಗ್ಗೆ ಸದ್ಯದಲ್ಲೇ ಬರೆಯುತ್ತೇನೆ. ಪಾಲಚಂದ್ರರೆ ಪ್ರತಿಕ್ರಿಯೆಗಾಗಿ ಧನ್ಯವಾದಗಳು.