ನಮ್ಮ ಪೂರ್ವಜರಾದ ಮಂಗಗಳಲ್ಲೂ ಚಾಲ್ತಿಯಲ್ಲಿದೆ ‘ಇನ್ಫೆಂಟಿಸೈಡ್’!

To prevent automated spam submissions leave this field empty.

ಗಾಯಗೊಂಡು ಮೃತಪಟ್ಟ ಹನುಮಾನ್ ಲಂಗೂರ್ ಮರಿಯ ಶವ. ಪ್ರೊ. ಕಲ್ಲೂರ್ ಅಂತಿಮ ಕ್ಷಣದ ಪರೀಕ್ಷೆಯಲ್ಲಿ ತೊಡಗಿರುವುದು. ಕ್ಲಿಕ್ಕಿಸಿದವರು: ಮಿಂಚು ಚೈತನ್ಯ ಷರೀಫ್.

 

ಇಂದು ಬೆಳಿಗ್ಗೆ ‘ಧಡೂತಿ ಮುಸುವ’ ಆಟಾಟೋಪ ನಡೆಸಿ, ಧಾರವಾಡದಲ್ಲಿರುವ ಮಂಜುನಾಥಪುರ ನಿವಾಸಿಗಳ ನಿದ್ದೆ ಎಗರಿಸಿದ. ಬಹುತೇಕ ಮನೆಗಳು ಕಾಂಕ್ರೀಟ್ ಕಟ್ಟಡಗಳಾದರೂ, ಪಕ್ಕದಲ್ಲಿರುವ ಲಕ್ಷ್ಮಿಸಿಂಗನ ಕೇರಿಯಲ್ಲಿ ಎಲ್ಲ ಮನೆಗಳು ಕಪ್ಪು ಮತ್ತು ಮಂಗಳೂರು ಹೆಂಚಿನವು. ಹಾಗಾಗಿ ಅವರು ಹೆಂಚುಗಳನ್ನು ರಕ್ಷಿಸಿಕೊಳ್ಳಲು ತಮಟೆ, ತಗಡಿನ ಡಬ್ಬಿ ಬಾರಿಸಿ ಘನಾಂಧಾರಿ  ಮಂಗಗಳನ್ನು ಓಡಿಸಿದ್ದರಿಂದ ನಮ್ಮ ಭಾಗದ ‘ಡಿಶ್ ಎಂಟೆನಾ’ಗಳನ್ನು ಹುರಿದು ಮುಕ್ಕಲು ‘ಹೆಬಗ ಮುಸುವ’ ಹವಣಿಸಿದಂತಿತ್ತು!

 

ಇದು ನಮ್ಮ ಭಾಗದ ಜನರಿಗೆ ಹೊಸತೇನಲ್ಲ. ಆದರೆ ಇಂದು ಬೆಳಿಗ್ಗೆ ಅವುಗಳ ಹಾರಾಟ, ಗುಂಪಿನಲ್ಲಿ ಆಂತರಿಕ ಕಚ್ಚಾಟ, ಮರಿ ಮಂಗಗಳ ಆರ್ತನಾದ ಸಹಿಸಲು ಅಸಾಧ್ಯವಾಗಿತ್ತು. ನಾನು ಸ್ಕೂಟರ್ ಏರಿ ರಾಮೂ ಗೋಸಾವಿಯನ್ನು ಕರೆತರಲು ಹೋದೆ. ರಾತ್ರಿ ಕಂಠಪೂರ್ತಿ ಕುಡಿದ ‘ಕಂಟ್ರಿ ಸರಾಯಿ’ ಅವನನ್ನು ಸಂಪೂರ್ಣ ಆವರಿಸಿತ್ತು. ಮನೆಯ ಮುಂದಿನ ಜಗುಲಿಯ ಮೇಲೆ ಬಿದ್ದುಕೊಂಡಿದ್ದ. ನಾನು ಬಂದದ್ದು ನೋಡಿ ಆತನ ಹೆಂಡತಿ ಸಕ್ಕೂಬಾಯಿ ‘ನಮೋಣಕರ ಭಾಷೆ’ (ಗುಜರಾತಿ, ಹಿಂದಿ, ಕನ್ನಡ  ಹಾಗೂ ಉರ್ದು ಮಿಶ್ರಿತ) ಬಳಸಿ ‘ಬೈದಂತೆ’ ಏನೋ ಹೇಳಿದಳು. ಗೋಸಾವಿ ರಾಮಣ್ಣ ಕೂಡಲೇ ಎದ್ದು ನಿಂತು, ನನಗೊಂದು ಸೆಲ್ಯೂಟ್ ಹೊಡೆದ. ನಾನು ಆತನನ್ನು ಕರೆತರಲು ಬಂದ, ವಿಷಯವೇನೆಂಬುದನ್ನು ಸ್ಥೂಲವಾಗಿ ಹೇಳಿದೆ.

 

ಕೂಡಲೇ ಸ್ಕೂಟರ್ ಹಿಂದೆ ಜಿಗಿದು ಕುಳಿತ. ಮನೆ ಹತ್ತಿರ ಬರುತ್ತಿದ್ದಂತೆ ‘ಸ್ವಾಮೇರ..ಇದು ಹೊನಗ್ಯಾನ ಫಿರ್ತಿ’ ಎಂದ. ‘ಹಾಗೆಂದರೇನೋ?’ ಎಂದೆ. ಅವನ ಮಾತುಗಳ ಸಾರಾಂಶ ಹೀಗಿದೆ: ಮಂಗಗಳ ಗುಂಪಿಗೆ ಒಬ್ಬನೇ ನಾಯಕ. ಎಲ್ಲರ ಮೇಲೂ ಆತನ ಹತೋಟಿ/ ಹಕ್ಕು ಸಾಧನೆ. ಪರಮೋಚ್ಚ ಅಧಿಕಾರ ಅವನಿಗೆ ಮುಡಿಪು. ಆ ಟೋಳಿಯ ಎಲ್ಲ ಹೆಣ್ಣು ಮಂಗಗಳು ಈ ಬಲಶಾಲಿ ಗಂಡು ಮಂಗಕ್ಕೆ ಮೀಸಲು. ಗುಂಪಿನ ಉಳಿದ ಗಂಡು ಮಕ್ಕಳು ಈ ಮಂಗದ ಪಾರುಪಥ್ಯ ಒಪ್ಪಿ ತಗ್ಗಿಕೊಂಡಿರಬೇಕು; ಇಲ್ಲವೇ ಟೋಳಿ ತ್ಯಜಿಸಿ ಹೋಗಬೇಕು ಇದು ಅಲಿಖಿತ ಕಾಯ್ದೆ.  ಗಂಡು ಮುಸುವ ಶಕ್ತಿ ಕುಂದಿ, ಮುದಿಯಾದರೆ ನಾಯಕನ ಪೀಠ ತ್ಯಜಿಸಬೇಕು. ಇಲ್ಲದಿದ್ದರೆ ವೀರೋಚಿತ ಹೋರಾಟ ನಡೆಸಿ ಗುಂಪು ಕಬಳಿಸಲು ಬಂದ ಗಂಡು ಮಂಗವನ್ನು ಹಿಮ್ಮೆಟ್ಟಿಸಬೇಕು ಅಥವಾ ಪ್ರಾಣಾರ್ಪಣೆ ಗೈಯ್ಯಬೇಕು.

 

ತಾಯಿ ಮತ್ತು ಮಂಗ ಆತಂಕದ ಕ್ಷಣಗಳನ್ನು ಎದುರಿಸುತ್ತ. ಕ್ಲಿಕ್ಕಿಸಿದವರು: ಮಿಂಚು ಚೈತನ್ಯ ಷರೀಫ್.

 

ಎಷ್ಟೊ ಸಮಯದಲ್ಲಿ ಹೊಸದಾಗಿ ಗುಂಪು ಸೇರಿ ಪಾರುಪತ್ಯ ಸಾಧಿಸಲು ಬಂದ ಬಲಶಾಲಿ ಗಂಡು ಮಂಗದ ಹೊಡೆತಕ್ಕೆ ಸಿಲುಕಿ, ಮುದಿ ಮಂಗ ಅಂಗಊನವಾಗಿ, ಗುಂಪಿನಿಂದ ಪ್ರತ್ಯೇಕಿಸಲ್ಪಟ್ಟು, ಉಪವಾಸ ವ್ರತ ಆಚರಿಸಿ ಮರಣಹೊಂದುತ್ತದೆ. ಈ ಹೋರಾಟದಲ್ಲಿ ಟೋಳಿಯ ಇತರ ಸದಸ್ಯರು ನಿರ್ಲಿಪ್ತರು. ಯುವ ಗಂಡು ಮಂಗಕ್ಕೆ ಗುಂಪಿನ ನಾಯಕ ಸೋತರೆ ಇಡೀ ತಂಡ ಹೊಸ ನಾಯಕನಿಗೆ ಶರಣಾಗುತ್ತದೆ.

 

ಈ ಬಲಿಷ್ಠ ಮಂಗದ ಮೊದಲ ಕೆಲಸವೆಂದರೆ ಇಡೀ ತಂಡದ ಮೇಲೆ ತನ್ನ ಅಧಿಪತ್ಯ ನೆಲೆಗೊಳಿಸುವುದು. ಎಲ್ಲ ಹೆಣ್ಣು ಮಂಗಗಳಿಗೂ ಗರ್ಭದಾನ ಮಾಡುವ ಅಧಿಕಾರ ಇವನಿಗೆ ಪ್ರಾಪ್ತವಾಗುತ್ತದೆ. ಯಾವುದೇ ಪ್ರತಿರೋಧ ತೋರದೇ ಎಲ್ಲ ಹೆಣ್ಣು ಮಂಗಗಳು ಈ ನೂತನ ಪತಿರಾಯನಿಗೆ ಶರಣು ಎನ್ನುತ್ತವೆ! ಆದರೆ, ಹಿಂದಿನ ನಾಯಕನ ಸಂತತಿ ಉಳಿದು, ಬೆಳೆಯುವುದು ಈ ನಾಯಕನಿಗೆ ಬೇಕಿಲ್ಲ. ಹಾಗಾಗಿ ರಾಜಾರೋಷವಾಗಿ ಅವುಗಳನ್ನು ಬೆನ್ನಟ್ಟಿ ಹಿಡಿದು, ಕಚ್ಚಿ ಕೊಲ್ಲುವುದು. ಹೆಣ್ಣು ಮಂಗಗಳು ಅಸಹಾಯಕವಾಗಿ ಈ ಸ್ಥಿತಿ ನೋಡುತ್ತ ಮರುಕ ಪಡುತ್ತವೆ; ಆದರೆ, ಎದುರಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಕಂಗಾಲಾಗಿ, ವಿಚಲಿತಗೊಂಡು ಕಿರುಚಾಡುತ್ತ ತಾಯಿಯ ಕರುಳಿನ ಸಂಕಟ ವ್ಯಕ್ತಪಡಿಸುತ್ತವೆ. ನಾವು ನೋಡಿದ ಈ ಹಾರಾಟ ಈ ಕಾರಣಕ್ಕಾಗಿಯೇ.

 

ಈ ಪರಿಯ ‘ಶಿಶು ಹತ್ಯೆ’ ಅರ್ಥಾತ್ ‘ಇನ್ಫೆಂಟಿಸೈಡ್’ ಮಂಗಗಳ ಪ್ರಜಾತಿಯಲ್ಲಿ ಸಾಮಾನ್ಯ ಎನ್ನುತ್ತಾರೆ ತಜ್ಞರು. ಕಾರಣ ‘ಬಲಾಚ ಪ್ರಥ್ವಿ’. ಅರ್ಥಾತ್, ಬಲಶಾಲಿಗಳು ಮಾತ್ರ ಈ ಜಗತ್ತಿನಲ್ಲಿ ಬದುಕಲು ಹಕ್ಕುಳ್ಳವರು; ದುರ್ಬಲರಿಗೆ ಮರಣವೇ ಗತಿ. ಹಾಗಾಗಿ ವೀರ್ಯವತ್, ಬಲಾಢ್ಯ ಸಂತತಿಯನ್ನು ನೂತನ ನಾಯಕ ಬಯಸುತ್ತಾನೆ ಹೊರತು ಹಳೆಯ ನಾಯಕನ ‘ದುರ್ಬಲ ಪೀಳಿಗೆ’ ಆತನಿಗೆ ಸಹ್ಯವಾಗುವುದಿಲ್ಲ. ಹಾಗಾಗಿ ಎಳೆ ಮರಿಗಳನ್ನು ನಿರ್ದಾಕ್ಷಿಣ್ಯವಾಗಿ ಎಳೆದಾಡಿ ಅದು ಕೊಲ್ಲುತ್ತದೆ. ಕಾಡಿನ ನಿಯಮಗಳಂತೆ ನಿಸರ್ಗವೂ ಈ ನಡಾವಳಿಯನ್ನು ಪುರಸ್ಕರಿಸುತ್ತದೆ ಎಂಬುದು ಸೋಜಿಗ!

 

ಬದುಕಿನ ನಿರಂತರ ಹೋರಾಟದಲ್ಲಿ ತನ್ನನ್ನು ಏಕಾಂಗಿಯಾಗಿ ಕಾಣುತ್ತಿರುವ ಮರಿ ಕಪಿರಾಯ. ಕ್ಲಿಕ್ಕಿಸಿದವರು: ಮಿಂಚು ಚೈತನ್ಯ ಷರೀಫ್.

 

ಈ ಮಧ್ಯೆ ಗುಂಪು ತ್ಯಜಿಸಿ ಹೋದ ಅಥವಾ ಸೋಲೊಪ್ಪಿ ಟೋಳಿ ತ್ಯಜಿಸಿದ ನಾಯಕ ಮಂಗನಿಂದ ಗರ್ಭವತಿಯಾದ ಹೆಣ್ಣು ಮಂಗ ಸದ್ಯದಲ್ಲಿಯೇ ಹುಟ್ಟಲಿರುವ ತನ್ನ ಮರಿಗೂ ಈ ಗತಿಯಾಗಬಾರದು ಎಂದು ನೂತನ ನಾಯಕನಲ್ಲಿ ಅನುರಕ್ತವಾದಂತೆ ನಟಿಸಿ, ಹುಟ್ಟಲಿರುವ ಮಗುವಿಗೆ ಆತನೇ ತಂದೆ ಎಂದು ನಂಬಿಸುವ ಕೆಲಸ ಮಾಡುತ್ತದೆ. ಅತಿ ವಿನಯದಿಂದ ಗಂಡು ಮಂಗದ ಚಿತ್ತ ಚೋರಿ ಮಾಡುವ ಗರ್ಭವತಿ ಮಂಗ, ನೂತನ ನಾಯಕನನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.

 

ಅತ್ಯಂತ ನಿರ್ದಾಕ್ಷಿಣ್ಯವಾದ ಕಾಡಿನ ನ್ಯಾಯ ಪರಿಪಾಲನೆಯಲ್ಲಿ ತಾಯಿ ಮಂಗದ ಪ್ರೀತಿ ಹೇಗೋ ಉಳಿದು, ಕ್ರೌರ್ಯವನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ಪರಿ ಬಹಶ: ನಮ್ಮ  ಜ್ಞಾನ ಕ್ಷಿತಿಜದ ಎಲ್ಲೆಗಳನ್ನು ಮೀರಿದ್ದು ಎಂದು ನನಗನಿಸುತ್ತದೆ.

*****

ಅರಿಕೆ: ಈ ಮೇಲಿನ ಚಿತ್ರಗಳನ್ನು ಕೆಲ ವಿಶೇಷ ಸಂದರ್ಭಗಳಲ್ಲಿ ಮಿತ್ರ ಮಿಂಚು ಚೈತನ್ಯ ಷರೀಫ್ ಕ್ಲಿಕ್ಕಿಸಿದ್ದಾರೆ. ಪ್ರಾಸಂಗಿಕವಾಗಿ ಇಲ್ಲಿ ಬಳಸಿದ್ದೇನೆ. ಇವು ಇಂದು ಕ್ಲಿಕ್ಕಿಸಿದ ಛಾಯಾಚಿತ್ರಗಳಲ್ಲ.

 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<<<<<<<<<<ಮಂಗಗಳ ಗುಂಪಿಗೆ ಒಬ್ಬನೇ ನಾಯಕ. ..................................................................................................................................................................................... ಅಥವಾ ಪ್ರಾಣಾರ್ಪಣೆ ಗೈಯ್ಯಬೇಕು.>>>>>>>>>>>> ಹರ್ಷ ಅವರೇ ಜಬ್ಬರದಸ್ತ್ ಲೇಖನ + "ಚಿತ್ರ" ನಿಮ್ಮ ಸ್ನೇಹಿತರಿಗೂ ವಂದನೆ ತಿಳಿಸಿ

ಶೀಲವ೦ತರೇ, ಪ್ರಕೃತಿ ವೈಶಿಷ್ಟ್ಯವೇ ಅದು. ಉತ್ತಮ ನಿರೂಪಣೆ. ಸ೦ಧರ್ಭೋಚಿತವಾಗಿ ಚಿತ್ರಗಳನ್ನು ಬಳಸಿದ್ದೀರಿ. ಧನ್ಯವಾದಗಳು.

ಹರ್ಷವರ್ಧನ.. ಎಂದಿನಂತೆ ಮತ್ತೊಂದು ಮಾಹಿತಿಪೂರ್ಣ ಲೇಖನ. ನಮ್ಮೂರಲ್ಲಿರುವ ನಮ್ಮ ಮನೆಯ ಹತ್ತಿರ ಪ್ರತಿದಿನ ಕನಿಷ್ಟ 25-30 ಮಂಗಗಳು ಬರುತ್ತವೆ. ಕಪ್ಪು ಮುಖದ ಮಂಗಗಳು ಬೆನ್ನಟ್ಟಿ ಹೊಡೆದಾಡುವುದನ್ನು ನೋಡಿದ್ದೇನೆ (ಸಣ್ಣ ಮರಿಗಳನ್ನು ಕೊಂದಿದ್ದು ನೋಡಿಲ್ಲ) ಆದರೆ ಕೆಂಪು ಮುಖದ ಮಂಗಗಳಲ್ಲಿ ಈ ತರಹದ ಹೊಡೆದಾಟ ನಾನು ನೋಡಿಲ್ಲ. ಬಹು ಬುದ್ಧಿವಂತ ಕೆಂಪು ಮುಖದ ಮಂಗಗಳ ಕುಟುಂಬ ಜೀವನ ಕಪ್ಪದಕ್ಕಿಂತ ವಿಭಿನ್ನ ಅನಿಸಿದೆ ನನಗೆ. ಕಾರಣವೇನಾದರೂ ಗೊತ್ತಿದೆಯಾ ನಿಮಗೆ?